ಪಿ ಲಂಕೇಶ್ ಮತ್ತು ‘ಪೋಲೀಸರಿದ್ದಾರೆ ಎಚ್ಚರಿಕೆ’…

ನಟರಾಜ್ ಹೊನ್ನವಳ್ಳಿ

ನಿನ್ನೆ ರಾತ್ರಿ ಪುಸ್ತಕದ ಮಧ್ಯೆ ಯಾವಾಗಲೋ ಇಟ್ಟಿದ್ದ ಬ್ರೋಷರ್ ಇಪ್ಪತ್ತು ವರ್ಷ ಹಿಂದಕ್ಕೆ ನನ್ನನ್ನು ಕರೆದೊಯ್ದು ಈ ಕೆಳಗಿನ ಬರಹವನ್ನು ನನ್ನಿಂದ ಬರೆಸಿಕೊಂಡಿದೆ. ಇದು ನನ್ನ ವರ್ಶನ್!

ಇವತ್ತಿಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಎರಡು ವರ್ಷ ಪೊಪೆಟ್ ಹೌಸ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಲು ಧಾರವಾಡಕ್ಕೆ ಹೋಗಿದ್ದೆ. ಮಿತ್ರರಾದ ಪ್ರಕಾಶ್ ಗರುಡ ಕಿಳ್ಳೆಕ್ಯಾತರ ಪಾರಂಪರಿಕ ತೊಗಲುಬೊಂಬೆಯ ಆಟವನ್ನು ಆಧುನಿಕವಾಗಿ ಅನುಸಂಧಾನ ಮಾಡುವ ಯೋಜನೆಯನ್ನು ಸಿದ್ಧಪಡಿಸಿದ್ದರು.

ಆ ಯೋಜನೆಗಾಗಿ ಮುಂಬಯಿನ ಅಜಿತ್ ರಾವ್, ಸಾಗರದ ಪೂರ್ಣಿಮ, ಲಕ್ಷ್ಮಿ ಕಬ್ಬೇರಳ್ಳಿ, ರಜನಿ ಗರುಡ, ತಿಪಟೂರಿನ ಅನಿಲಕುಮಾರ, ಸಂಗೀತಗಾರ ನಾಗರಾಜ್… ಹೀಗೆ ವಿವಿಧ ಕಲಾಪ್ರಕಾರಗಳಲ್ಲಿ ಕೆಲಸ ಮಾಡುತ್ತಿದ್ದ ಒಂದು ದೊಡ್ಡ ತಂಡವೇ ಅಲ್ಲಿ ಕೆಲಸ ಮಾಡುತ್ತಿತ್ತು. ಜೊತೆಗೆ ತನ್ನಲ್ಲಿದ್ದ ನೂರಾರು ವರ್ಷದ ಅಪೂರ್ವ ಚಲುವಿನ ತೊಗಲುಬೊಂಬೆಗಳ ಜೊತೆ ಆಟ ಕಟ್ಟಿ, ನಮ್ಮ ಕೆಲಸಕ್ಕೆ ಪಾಠ ಮಾಡುತ್ತಿದ್ದ ಎಡ್ರಾಮನಹಳ್ಳಿ ದೊಡ್ಡಭರಮಪ್ಪ ಕೂಡ ಇದ್ದರು.

ಖ್ಯಾತ ವಿಮರ್ಶಕರಾದ ಕೀರ್ತಿನಾಥ ಕುರ್ತುಕೋಟಿ, ಲಂಕೇಶ್ ಪತ್ರಿಕೆಯ ಬರಹಗಾರ ಮತ್ತು ಕಥೆಗಾರ ಮೋಹನ ನಾಗಮ್ಮನವರ, ಇಂಗ್ಲಿಷ್ ಮೇಷ್ಟ್ರು ಗಿರಡ್ಡಿ ಗೋವಿಂದರಾಯರು, ಮಹತ್ವದ ರಂಗ ನಿರ್ದೇಶಕ ಜಯತೀರ್ಥ ಜೋಷಿ, ಚಿತ್ರಕಲೆಯ ಮಧು ದೇಸಾಯಿ, ಸಿನೇಮಾದ ಬಗ್ಗೆ ಅಪಾರ ತಿಳುವಳಿಕೆಯಿದ್ದ ಸುರೇಶ್ ಕುಲಕರ್ಣಿ- ಇಂಥಾ ಎಲ್ಲರ ಪರಿಚಯ ಮತ್ತು ಆಗಾಗ ಅವರ ಜೊತೆ ನಡೆಯುತ್ತಿದ್ದ ಸಂವಾದ ನನ್ನ ರಂಗಭೂಮಿಯ ಆಲೋಚನೆ, ಓದು ಎಲ್ಲವೂ ಹೆಚ್ಚಿನ ತಿರುವನ್ನು ಪಡೆದುಕೊಳ್ಳತೊಡಗಿತು.

ಮಾಳಮಡ್ಡಿಯ ರಾ ಹಾ ದೇಶಪಾಂಡೆಯವರ ಮನೆ, ಕಾಂಪೌಂಡ್, ಸಂಜೀವ್ ಕುಲಕರ್ಣಿ ಎಲ್ಲರೂ ಮನಸ್ಸಿನಲ್ಲಿ ಬಂದು ಹೋದರು. ಒಂದೆರಡು ಸಾರಿ ಶಂಕರ ಮೊಕಾಶಿ ಪುಣೇಕರರನ್ನು ಕಂಡು ಹತ್ತಾರು ವಾಕ್ಯಗಳನ್ನು ಮಾತನಾಡುವ ಅವಕಾಶ ಮಾಡಿಕೊಟ್ಟ ಧಾರವಾಡ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿದುಬಿಟ್ಟಿದೆ.

ಅಲ್ಲಿ ಮಳೆ ಬಂದರೆ ಸಾಕು ಇಲ್ಲೆಲ್ಲೋ ಬೇಂದ್ರೆಯವರು ಕೊಡೆ ಹಿಡಿದು, ತನ್ನಂತೆಯೇ ಕೊಡೆ ಹಿಡಿದ ನಾಲ್ಕಾರು ಜನರ ಗುಂಪಿಗೆ ತಮ್ಮ ಪದ್ಯ ಓದುತ್ತಿರೋ ಚಿತ್ರ ನನ್ನ ಕಣ್ಣ ಮುಂದೆ ಹಾದುಹೋಗುತ್ತಿತ್ತು! (ಗಿರೀಶ್ ಕಾರ್ನಾಡ್ ಬೇಂದ್ರೆಯವರ ಬಗ್ಗೆ ತೆಗೆದ ಸಾಕ್ಷ್ಯಚಿತ್ರದ ಪ್ರಭಾವ!) ಮನೋಹರ ಗ್ರಂಥಮಾಲಾದ ಅಟ್ಟ ಹತ್ತಿದರೆ ಆ ಮೆಟ್ಟಿಲುಗಳನ್ನು ಯಾರ್ಯಾರು ಹತ್ತಿ ಹೋಗಿರಬಹುದು ಎಂದು ಮನಸ್ಸು ಲೆಕ್ಕಹಾಕುತ್ತಿತ್ತು.

ಆ ಅಟ್ಟದ ಪಡಸಾಲೆಗೆ ಹೋದರೆ ಜಿ. ಬಿ. ಜೋಷಿಯವರು ಕುಳಿತಿದ್ದ ಜಾಗ ಯಾವುದಿರಬಹುದು ಎಂದು ಮನಸ್ಸು ಹುಡುಕುತ್ತಿತ್ತು… ಪುಸ್ತಕಗಳ ವಾಸನೆ… ಎರಡು ಹಗಲು, ಎರಡು ರಾತ್ರಿ ನನ್ನೊಡನೆ ನಿರಂತರವಾಗಿ ಮಾತನಾಡಿದ, ಕನ್ನಡ, ಇಂಗ್ಲಿಷ್ ಸಾಹಿತ್ಯ, ರಂಗಭೂಮಿ, ರಂಗ ಸಂಘಟನೆ ಬಗ್ಗೆ ಅಪಾರ ತಿಳುವಳಿಕೆಯ ಶ್ರೀನಿವಾಸ ತಾವರಗೇರಿಯವರು ನನ್ನಲ್ಲಿ ಅಚ್ಚರಿಯ ಬೆರಗಿನ ಭಾಗವಾಗಿಯೇ ಉಳಿದುಬಿಟ್ಟಿದ್ದಾರೆ. ಬೇಂದ್ರೆ – ಚಂದ್ರಶೇಖರ ಪಾಟೀಲರ ಸಾಹಿತ್ಯ ಜಗಳ ಮಾಡಿದ ರೈಲ್ವೆ ಲೆವೆಲ್ ಕ್ರಾಸ್ ನ್ನು ಕೂಡ ಬಿಡದೆ ಪ್ರಕಾಶ್ ತೋರಿಸಿದ್ದರು.

ಹಿತವಾದ Nostalgia! ಪ್ರಕಾಶ್ ಗರುಡ ಇವರನ್ನೆಲ್ಲ ಭೇಟಿ ಮಾಡಿಸಿರದಿದ್ದರೆ; ಮತ್ತೆಂದೂ ಇವರನ್ನು ನೋಡುವ, ಮಾತನಾಡುವ ದೊಡ್ಡ ಅವಕಾಶವೇ ತಪ್ಪಿಹೋಗುತ್ತಿತ್ತು! ಹಾಗಾಗಿ ಪ್ರಕಾಶ್ ನನ್ನಲ್ಲಿ ಯಾವಾಗಲೂ ಸ್ಥಾಯಿಭಾವ! ಆಧುನಿಕ ಕನ್ನಡ ರಂಗಭೂಮಿಯ ದಂತಕತೆ, ಪ್ರಸಿದ್ಧ ನಟ ನಟರಾಜ್ ಏಣಗಿಯವರ ಒಡನಾಟ ಸಿಕ್ಕಿದ್ದೂ ಕೂಡ ಇಲ್ಲೇ.

ನಾನು ನೀನಾಸಮ್ ರಂಗ ಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಇವರ ಅಭಿನಯದ ಬಗ್ಗೆ ಎಷ್ಟೊಂದು Anecdotesಗಳು! ಹಿಂದೆ ನೀನಾಸಮ್ ತಿರುಗಾಟದ ನಟನಾಗಿ ಧಾರವಾಡಕ್ಕೆ ಹೋದಾಗ ಒಂದೆರಡು ಸಾರಿ ಭೇಟಿಯಾಗಿದ್ದರೂ ಅವರೊಡನೆ ಒಡನಾಡುವ ಸುಖ ಸಿಕ್ಕಿದ್ದು ನಾನು ಇಲ್ಲಿಗೇ ಬಂದಾಗ. ಅವರ ಜೊತೆಗಿನ ಜಗಳ, ಸಂವಾದ, ಮಾತುಕತೆ, ಅವರ ಸಿಟ್ಟು, ಪ್ರೀತಿಯ ಬೈಗುಳ… ಜೊತೆಜೊತೆಗೇ ನಟನೆಯ ಪಾಠ! ಯಾವಾಗಲಾದರೂ ಒಮ್ಮೆ ದುತ್ತೆಂದು ಹಾಜರಾಗುತ್ತಿದ್ದ ಜಯತೀರ್ಥ ಜೋಷಿ! ಇವರು ಮೈಸೂರು ರಂಗಾಯಣಕ್ಕೆ ನಿರ್ದೇಶಿಸಿದ್ದ ಗೋಪಾಲಕೃಷ್ಣ ಅಡಿಗರ ಭೂಮಿಗೀತ ಕನ್ನಡ ರಂಗಭೂಮಿಯ ಅಚ್ಚರಿ! ಮುಖ್ಯವಾದ ರಂಗಕೃತಿಗಳಲ್ಲೊಂದು!

ನಮ್ಮ ಮಾತುಕತೆಗಳಲ್ಲಿ ಬಹುಪಾಲು ಆಕ್ರಮಿಸಿಕೊಳ್ಳುತ್ತಿದ್ದ ವಿಷಯ ರಂಗಭೂಮಿ! ಅದರಲ್ಲೂ ಅಭಿನಯ! ನಾನು, ಪ್ರಕಾಶ್ ಗರುಡ, ಏಣಗಿ, ಜಯತೀರ್ಥ ಜೋಷಿ ಎಲ್ಲರ ಮಾತುಕತೆಯ ಫಲಶೃತಿಯೇ ‘Actors Guild’! ನಟರಾಜ್ ಏಣಗಿ, ಪ್ರಕಾಶ್ ಗರುಡ, ಲಕ್ಷ್ಮಿ ಕಬ್ಬೇರಳ್ಳಿ, ಗಣಪತಿ ಹೆಗಡೆ, ರಜನಿ ಗರುಡ, ನಟರಾಜ್ ಹೊನ್ನವಳ್ಳಿ, ಬಂಡು ಕುಲಕರ್ಣಿ ಮತ್ತು ಪ್ರಮೋದ್ ಶಿಗ್ಗಾಂವ್ ಈ ಗಿಲ್ಡ್ ನ ಪ್ರಾರಂಭದ ಸದಸ್ಯರು. ಇದಕ್ಕಿಂತ ಮುಂಚಿತವಾಗಿ ತಿಪಟೂರಿನಲ್ಲಿ ಪ್ರೊಥಿಯೂ (Professional Theatre Unit) ತನ್ನ ರಂಗಭಾಷೆಯನ್ನು ಆಡುವುದಕ್ಕೆ ವೇದಿಕೆಯನ್ನು ಸಿದ್ಧಪಡಿಸಿಕೊಂಡಿತ್ತು ಎನ್ನುವುದನ್ನು ನಾನು ಇಲ್ಲಿಯೇ ಹೇಳಿಬಿಡಬೇಕು!

ಇಪ್ಪತ್ತು ವರ್ಷದ ಹಿಂದೆ ಧಾರವಾಡದಲ್ಲಿ ಪ್ರಾರಂಭವಾದ ಈ ‘ಕರ್ನಾಟಕ ರಂಗ ನಟರ ಸಮೂಹ’ (Actors Guild)ದ ಬ್ರೋಷರ್ ಗೆ ಒಂದು ಪುಟ್ಟ ನೋಟ್ ಬರೆದಿದ್ದೆ. ಅದು ಈ ಕೆಳಗಿನಂತಿದೆ; ‘ರಂಗನಟರ ಸಮೂಹ’ ದ ಬ್ಯಾಕ್ ಡ್ರಾಪ್*Actors Guild’ ಎನ್ನುವ ಪರಿಭಾಷೆಯಲ್ಲಿ ಈ ಸಮೂಹ ತನ್ನ ‘ಸಾಂಸ್ಕೃತಿಕ ಮಾತುಕತೆ’ಯನ್ನು ಪ್ರಾರಂಭಿಸುತ್ತಿದೆ. ಕಳೆದ ಹತ್ತು- ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ನಟರಾಗಿ, ತಂತ್ರಜ್ಞರಾಗಿ, ಅಭಿನಯ ಶಿಕ್ಷಕರಾಗಿ ಕೆಲಸಮಾಡಿರುವವರು ಒಟ್ಟಿಗೇ ಸೇರಿ ಸೃಷ್ಟಿಸಿಕೊಂಡಿರುವ ಸಂಸ್ಥೆಯೇ ಈ ಸಮೂಹ. ‘ರಂಗಾಭಿನಯ’ ಎನ್ನುವುದೇ ಈ ಸಮೂಹದ ಬ್ಯಾಕ್ ಡ್ರಾಪ್. ಈ ವೃತ್ತಿಯ ಹೊಸ ಅನುಸಂಧಾನ ಮಾರ್ಗದಲ್ಲಿ ನಿರ್ದೇಶಕರು, ತಂತ್ರಜ್ಞರ ಜೊತೆ ಒಂದು ಹೊಸ ಸಂವಾದವನ್ನು ಉದ್ಘಾಟಿಸುವುದರ ಮೂಲಕ ಕ್ರಿಯಾಶೀಲರಾಗುವುದು ಈ ಸಮೂಹದ ಮೂಲ ಉದ್ದೇಶ.

ಈ ಸಂವಾದ ಕೇವಲ ಚರ್ಚೆ, ಮಾತುಕತೆ, ಸಂಕಿರಣಗಳ ರೂಪದಲ್ಲಷ್ಟೇ ಇರದೇ ಪ್ರಯೋಗ ಮುಖಿಯಾಗಿರುತ್ತದೆ. ರಂಗ ನಟನೆಯ ಸಾಧ್ಯತೆಗಳನ್ನೂ, ಅದಕ್ಕೆ ಬೇಕಾದ ಅಂತರಂಗಿಕ ಶಕ್ತಿಯನ್ನು, ಸಾಹಿತ್ಯ, ಕಾವ್ಯ, ಚಿತ್ರಕಲೆ, ನೃತ್ಯ, ಜನಪದ ಆಟ ಪ್ರಕಾರಗಳ ಮೂಲಕ ಪಡೆಯುವುದೂ ಹಾಗೂ ಅದನ್ನು ಆಧುನಿಕ ರಂಗಾಭಿವ್ಯಕ್ತಿಯ ಕ್ರಮವಾಗಿ ಅವಿರ್ಭವಿಸಿಕೊಳ್ಳುವ ಸವಾಲು ಈ ಸಮೂಹದ ಮುಂದಿದೆ. ರಂಗ ನಟನೆಯ ಶಾಸ್ತ್ರೀಯ ಅಧ್ಯಯನ, ಪ್ರಯೋಗ, ಡಾಕ್ಯುಮೆಂಟೇಷನ್ಗಳ ಮೂಲಕ ಸವಾಲನ್ನು ‘ಆ್ಯಕ್ಟರ್ಸ್ ಗಿಲ್ಡ್’ ಸ್ವೀಕರಿಸುತ್ತಿದೆ.

ರಾಜ್ಯದ ಎಲ್ಲ ಕಡೆ ಪ್ರಯೋಗಗಳನ್ನು ಕೊಡುವ ಗುರಿಯೂ ಇದೆ.ಈ ’ಆ್ಯಕ್ಟರ್ಸ್ ಗಿಲ್ಡ್’ ಮೊದಲು ಎಡ್ರಾಮನಹಳ್ಳಿ ದೊಡ್ಡಭರಮಪ್ಪ ಅವರ ತೊಗಲು ಬೊಂಬೆಯಾಟದ ಪ್ರಾತ್ಯಕ್ಷಿತೆ, ನಂತರ ಪೊಪೆಟ್ ಹೌಸ್ ಸಿದ್ಧಪಡಿಸಿದ್ದ ನೆರಳು ಗೊಂಬೆಯಾಟವನ್ನು ಪ್ರದರ್ಶಿಸಲಾಯ್ತು. ಆಗ ಸಮೂಹವು ನಾಟಕವೊಂದನ್ನು ಕೈಗೆತ್ತಿಕೊಳ್ಳುವ ಸಿದ್ಧತೆಯಲ್ಲಿದ್ದಾಗ ತಿಪಟೂರಿನಿಂದ ಕಲ್ಪತರು ಕಾಲೇಜಿನ ಇಂಗ್ಲಿಷ್ ಮೇಸ್ಟ್ರು ಸಿದ್ದಗಂಗಯ್ಯ ಹೊಲತಾಳ್ ಅವರಿಂದ ಪೋನ್ ಬಂತು.

‘99 ಜುಲೈ 31 ಮತ್ತು ಆಗಷ್ಟ್ 1 ಪಿ. ಲಂಕೇಶರ ಮೇಲೆ ಎರಡು ದಿನಗಳ ಕಾಲ ವಿಚಾರ ಸಂಕಿರಣವನ್ನು ತಿಪಟೂರಿನಲ್ಲಿ ಇಟ್ಟುಕೊಂಡಿದ್ದೇವೆ, ನಾನು, ಪ್ರಭುಸ್ವಾಮಿ (ಹೈಸ್ಕೂಲ್ ಮೇಷ್ಟ್ರು) ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿಯೂ, ಕೆ. ಆರ್. ಬಸವರಾಜ್ (ಕಲ್ಪತರು ಕಾಲೇಜಿನಲ್ಲಿ ನನಗೆ ಕನ್ನಡ ಮೇಷ್ಟ್ರಾಗಿದ್ದರು, ಲಂಕೇಶರ ಸಹಪಾಠಿ) ಲಂಕೇಶ್ ರನ್ನು ಕರೆಸುವ ಜವಾಬ್ದಾರಿ ತೆಗೆದುಕೊಂಡು ಈ ಸಂಕಿರಣದ ಜೊತೆ ಇದ್ದಾರೆ.

ನೀವು ಲಂಕೇಶರ ನಾಟಕಗಳನ್ನು ಕುರಿತು ಮಾತನಾಡಿ; ಜೊತೆಗೆ ಲಂಕೇಶರ ನಾಟಕ ಮಾಡಲು ಸಾಧ್ಯವೇ’ ಎಂದು ಕೇಳಿದರು. ಆಗ ಲಂಕೇಶರ ಮೇಲಿನ ಸಂಕಿರಣಕ್ಕೆ ಇನ್ನೂ ಹದಿನೈದು ದಿನವಿತ್ತು. ನಾನು ಸಂತೋಷದಿಂದ ಆಗಲಿ ಎಂದೆ. ಆಗ ’ಆ್ಯಕ್ಟರ್ಸ್ ಗಿಲ್ಡ್’ ಲಂಕೇಶರ ‘ಪೋಲೀಸರಿದ್ದಾರೆ ಎಚ್ಚರಿಕೆ’ ನಾಟಕದ ತಾಲೀಮು ಪ್ರಾರಂಭಿಸಿತು. ನಾನು ಆ ನಾಟಕವನ್ನು ನಿರ್ದೇಶಿಸುವುದು, ನಟರಾಜ್ ಏಣಗಿ ರುದ್ರಮೂರ್ತಿಶಾಸ್ತ್ರಿಯ ಪಾತ್ರ, ಮಿಕ್ಕ ಎರಡು ಪಾತ್ರಗಳನ್ನು ನಾನು ಮತ್ತು ಬಂಡು ಕುಲಕರ್ಣಿ ಮಾಡುವುದು ಎಂದು ತೀರ್ಮಾನವಾಗಿ, ಪ್ರೊಡಕ್ಷನ್ ಜವಾಬ್ದಾರಿಯನ್ನು ಪ್ರಕಾಶ್ ಗರುಡರ ಹೆಗಲಿಗೇರಿಸಿ ತಾಲೀಮು ಪ್ರಾರಂಭಿಸಿದೆವು.

ನನಗೆ ಎರಡೆರಡು ಸಂಭ್ರಮಗಳು! ಒಂದು, ಏಣಗಿ ನಟಿಸುತ್ತಿರುವ ನಾಟಕವನ್ನು ನಾನು ನಿರ್ದೇಶಿಸುತ್ತಿರುವುದು. ಇನ್ನೊಂದು ನನ್ನ ನಾಟಕವನ್ನು ಲಂಕೇಶ್ ನೋಡುತ್ತಾರೆ ಎಂಬ ಭಯ ಮಿಶ್ರಿತ ಸಂಭ್ರಮ.! ನಾಟಕ ಸಿದ್ಧವಾಗಿ ತಿಪಟೂರಿಗೆ ಟ್ರೇನ್ ನಲ್ಲಿ ಹೋಗಿದ್ದು ನೆನಪಿದೆ. ತಿಪಟೂರಿನ ಗುರುಕುಲ ಹಾಸ್ಟಲ್ ನ ಹಾಲ್ ನಲ್ಲಿ ಲಂಕೇಶರ ಮೇಲಿನ ವಿಚಾರ ಸಂಕಿರಣ. ಲಂಕೇಶ್ ಬಂದಿರುವುದೇ ನನ್ನನ್ನೂ ಸೇರಿದಂತೆ ಎಲ್ಲರಿಗೂ ಸಂಭ್ರಮವೋ ಸಂಭ್ರಮ. (89ರಲ್ಲಿ ಪ್ರಗತಿರಂಗದ ಸಭೆಗೆ ಬಂದಿದ್ದರು) ಮೊಗಳ್ಳಿ ಗಣೇಶ್ ಕೂಡ ಬಂದಿದ್ದರು.

ಸಮಾರೋಪದಲ್ಲಿ ಲಂಕೇಶರು ತಾನು ಬರೆವ ಕಥೆ ಕಾವ್ಯ ಕುರಿತು ಬಹಳ ಮುಖ್ಯವಾದ ಮಾತುಗಳನ್ನು ಆಡಿದರು. ನನಗೆ ನಾಟಕದ ಟೆಶ್ಯನ್. ಅವರ ಮಾತುಗಳನ್ನು ರೆಕಾರ್ಡ್ ಮಾಡಲು ಆಗಲಿಲ್ಲವಲ್ಲಾ ಎಂದು ಸಿದ್ಧಲಿಂಗಯ್ಯ ಹೊಲತಾಳ್ ಈಗಲೂ ಹೇಳ್ತಾ ಇರ್ತಾರೆ!

‘ಪೋಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನ ಸುಮಾರಾಗಿ ಸಂಜೆ ಐದಕ್ಕೆ ಪ್ರಾರಂಭವಾಗಿದ್ದು ನೆನಪಿದೆ. ನಾನು ಲಂಕೇಶರ ಬಳಿ ಹೋಗಿ ‘ ಸರ್, ಈಗ ನಿಮ್ಮ ನಾಟಕ ಪೋಲೀಸರಿದ್ದಾರೆ ಎಚ್ಚ್ರರಿಕೆ ಪ್ರದರ್ಶನವಿದೆ, ನೀವು ನೋಡಿ, ಸರ್. ನಟರಾಜ್ ಏಣಗಿ ಮುಖ್ಯ ಪಾತ್ರ ಮಾಡ್ತಾರೆ’ ಅಂದೆ. ಅವರು ‘ಇಲ್ಲ ನಾನು ನನ್ನ ನಾಟಕ ನೋಡಲ್ಲ, ನಟರಾಜ್ ಹುಳಿಯಾರ್, ಕೀರಂ, ಗೋವಿಂದರಾಯರು ನೋಡ್ತಾರೆ. ಏಣಗಿ ಎಲ್ಲಿ ಅಂದ್ರು. ನಾನು ಏಣಗಿಯನ್ನು ಕರೆದೆ. ಅವರಿಬ್ಬರೂ ಮಾತನಾಡಿದರು. ಏಣಗಿಯ ಕಣ್ಣಲ್ಲಿ ಹೊಳಪು ಹೊಡೆಯುತ್ತಿತ್ತು. ಬರ್ತೀನಿ ಎಂದು ರೌಂಡ್ ನೆಕ್ ಬ್ಲ್ಯೂ ಟಿ ಶರ್ಟ್ ಹಾಕಿದ್ದ ಲಂಕೇಶರು ಹೊರಟರು. ನಾನು ಹಿಂದಿಂದ ನೋಡ್ತಾಯಿದ್ದೆ. ಆ ಹಾಲ್ನಲ್ಲೇ ‘ಪೋಲೀಸರಿದ್ದಾರೆ. ಎಚ್ಚರಿಕೆ’ ನಾಟಕ ಆಯ್ತು.

ರಂಗ ಪ್ರದರ್ಶನಕ್ಕೆ ಬೇಕಾದ ವ್ಯವಸ್ಥೆ ಇರಲಿಲ್ಲವಾದರೂ Demonstration ರೀತಿ ಆಯ್ತು. ನನಗೆ ಲಂಕೇಶರ ಸಂಕಿರಣದಲ್ಲಿ ನಾಟಕ ಆಯ್ತಲ್ಲಾ ಎನ್ನುವುದೇ ಸಮಾಧಾನ. ಇದು ಧಾರವಾಡದಲ್ಲಿ ಪ್ರಾರಂಭಿಸಿದ ‘Actors Guild’ ನ ಮೊದಲ ಸಾರ್ವಜನಿಕ ಪ್ರದರ್ಶನ. ಬಹುಷಃ ಇದಕ್ಕಿಂತ ಪೂರ್ವದಲ್ಲಿಯೇ ‘ಪ್ರೊಥಿಯೂ’ನ ಸದಸ್ಯರಿಗೆ ಎಸ್ ರಘುನಂದನ ಮತ್ತು ನಟರಾಜ್ ಏಣಗಿ ನಡೆಸಿಕೊಟ್ಟ ಅಭಿನಯ ಸಿದ್ಧತೆ ಕುರಿತ ಕಾರ್ಯಾಗಾರ ಕೂಡ ಈ ಟಿಪ್ಪಣಿಯನ್ನು ಬರೆಯುತ್ತಿರುವ ಹೊತ್ತಿಗೆ ನೆನಪಿನಲ್ಲಿ ಬಂದುಹೋಯ್ತು. ಈಗ ‘ನವ ವೃತ್ತಿಪರ ರಂಗಕರ್ಮಿಗಳ ವೇದಿಕೆ’ ಮತ್ತು ‘ಯೂತ್ ಆರ್ಟಿಸ್ಟ್ ಗಿಲ್ಡ್’ ರಂಗಭೂಮಿಯ ಜೊತೆ ಹೊಸ ಮಾತುಕತೆ ನಡೆಸಲು ಸಜ್ಜಾಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಇಪ್ಪತ್ತು ವರ್ಷದ ಹಿಂದಿನ ಧಾರವಾಡದ ‘Actors Guild’ ನ ಬ್ರೋಷರ್ ಇಷ್ಟೆಲ್ಲಾ ಬರೆಸಿದೆ!

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: