ಪಿ ಪಿ ಉಪಾಧ್ಯ ಸರಣಿ ಕಥೆ 64- ‘ಅನಂತನೂ ಇದ್ದಿದ್ದರೆ’ ಎನ್ನುವುದೇ ಅವರ ಕೊನೆಯ ಮಾತು!

ಪಿ ಪಿ ಉಪಾಧ್ಯ

ಅಂತ್ಯನಿಗೆ ತನ್ನ ಹಳೆಯ ಪುಸ್ತಕದ ಮುಂದುವರಿದ ಭಾಗವಾಗಿ ಯಕ್ಷಗಾನದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ, ಅದರಲ್ಲಿನ ಕಲೆಗಾರಿಕೆ ಮಾಯವಾಗುತ್ತಿರುವುದು ಮತ್ತು ಹಾಗಾಗಬೇಕಾದುದರ ಅನಿವಾರ್ಯತೆಯ ಬಗ್ಗೆ ಇನ್ನೂ ಒಂದು ಪುಸ್ತಕ ಬರೆಯಬೇಕು ಎಂದು ಎಷ್ಟೋ ಸಲ ಅನ್ನಿಸಿದೆ. ಆದರೆ ಕೇಂದ್ರದ ಪೂರ್ಣ ಜವಾಬ್ದಾರಿ ಬಿದ್ದುದರಿಂದ ಉಂಟಾದ ಸಮಯದ ಅಭಾವದ ಜೊತೆಗೇ ಕೆಲಸವಿಲ್ಲದ ಕಾಲದಲ್ಲೂ ಕೇಂದ್ರದ ಬಗ್ಗೆ ಚಿಂತಿಸಬೇಕಾದ ಅನಿವಾರ್ಯ ವಿಚಾರಗಳ ಒತ್ತಡ ಅವನನ್ನು ತಡೆಯುತ್ತಿವೆ.

ಪ್ರೊಫೆಸರರು ವಾರಕ್ಕೊಮ್ಮೆ ಬರುತ್ತಿದ್ದವರು ಈಗ ವಯಸ್ಸಾದ ಕಾರಣದಿಂದ ತಿಂಗಳಿಗೊ೦ದು ಅಥವಾ ಎರಡು ಬಾರಿ ಬರುತ್ತಾರೆ. ಮತ್ತು ಹಾಗೆ ಬಂದವರು ಶಾಸ್ತ್ರೀಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರಾದರೂ ಅಂತ್ಯನನ್ನು ವಿಚಾರಿಸಿಕೊಳ್ಳುವುದನ್ನೂ ಬಿಡಲಿಲ್ಲ.

ಒಮ್ಮೆ ಹಾಗೆ ಬಂದವರು ಅಂತ್ಯನೊಡನೆ ಮಾತನಾಡುತ್ತ ‘ಇನ್ನೇನಾದರೂ ಬರೆಯುವ ಆಲೋಚನೆ ಇದೆಯಾ’ ಎಂದು ಕೇಳಿದರು. ಅದೇ ಬಹಳ ದಿನಗಳಿಂದ ತನ್ನ ಮನಸ್ಸಿನಲ್ಲಿ ಬಂದು ಅಲ್ಲಿಯೇ ಸುತ್ತುತ್ತಿದ್ದ ವಿಷಯದ ಬಗ್ಗೆ ಹೇಳಿದ. ಕೇಳಿದ ಪ್ರೊಫೆಸರರು ಬಹಳ ಸಂತೋಷ ಪಟ್ಟರು. ‘ನನ್ನಿಂದೇನಾದರೂ ಸಹಾಯ ಬೇಕಾದರೆ ಕೇಳು. ಯಾವಾಗಲೂ ರೆಡಿ ನಾನು’ ಎಂದರು.

ಆದರೆ ಪರಿಸ್ಥಿತಿ ಆ ಯೋಜನೆ ಕಾರ್ಯ ರೂಪಕ್ಕೆ ತರಲು ಅಂತ್ಯನನ್ನು ಬಿಡಲೇ ಇಲ್ಲ. ಪ್ರೊಫೆಸರರು  ಬಂದು ಕೇಳಿ ಹೋದ ಮುಂದಿನ ವಾರವೇ ಮನೆಗೆ ಹೋದರೆ ಅಲ್ಲಿ ಅಪ್ಪ ಹುಷಾರಿಲ್ಲದೆ ಮಲಗಿದ್ದರು. ಮೊದಲೆರಡು ದಿನ ಶಾಪಿಗೆ ಹೋಗಿ ಔಷಧಿ ತಂದು ಕೊಟ್ಟ ಆದಿ ಮೂರನೆಯ ದಿನಕ್ಕೂ ಏನೂ ಗುಣ ಕಾಣದಿದ್ದಾಗ ಡಾಕ್ಟರರನ್ನೇ ಮನೆಗೆ ಕರೆತಂದಿದ್ದ. ಆದರೂ ಏನೂ ಪ್ರಯೋಜನವಾಗಿರಲಿಲ್ಲ. ನೋಡಿದ ಡಾಕ್ಟರರೇ ಹೇಳಿದ್ದರು ‘ವಯಸ್ಸಾಯಿತಲ್ಲವೇ.. ನೋಡಿ ಈ ಔಷಧಿಗಳನ್ನು ಕೊಡುತ್ತಾ ಇರಿ. ಏನಾದರೂ ಗುಣ ಕಂಡರೂ ಕಂಡೀತು’ ಎಂದು ಹೇಳಿ ಹೋಗಿದ್ದರು.

‘ನನಗೆ ಯಾಕೆ ತಿಳಿಸಲಿಲ್ಲ..’ ಎಂದು ಅಂತ್ಯ ಕೇಳಿದ್ದಕ್ಕೆ ‘ನೀನು ಹೇಗೂ ವಾರಾಂತ್ಯಕ್ಕೆ ಬರುತ್ತೀಯಲ್ಲ. ಆಗ ನಿನಗೆ ತಿಳಿದರೆ ಸಾಕು, ಮಧ್ಯದಲ್ಲಿ ನಿನ್ನ ಕೆಲಸಕ್ಕೆ ತೊಂದರೆಯಾಗುವುದು ಬೇಡ ಎಂದೇ ತಿಳಿಸಲಿಲ್ಲ.’ ಎಂದ.

ಅ೦ತ್ಯನನ್ನು ನೋಡಿದ್ದೇ ಮಲಗಿದ್ದ ಶಾಮಣ್ಣನವರು ಏಳಲು ಪ್ರಯತ್ನಿಸಿದ್ದರು. ಪಕ್ಕದಲ್ಲಿಯೇ ಇದ್ದ ಆದಿ ತಡೆದ. ಅಂತ್ಯನೂ ’ಬೇಡ ಬೇಡ ಅಪ್ಪ’ ಎನ್ನುತ್ತ ಹತ್ತಿರಕ್ಕೆ ಓಡಿದ. ಇಬ್ಬರು ಮಕ್ಕಳನ್ನು ಒಟ್ಟಿಗೇ ನೋಡಿದ ಶಾಮಣ್ಣನವರ ಮುಖದಲ್ಲಿ ಒಂದು ತೆರನ ನೆಮ್ಮದಿ ಕಾಣಿಸಿತು. ಆದರೆ ಅದು ಒಂದು ಕ್ಷಣ ಮಾತ್ರ. ಮರು ನಿಮಿಷವೇ ‘ಅನಂತನೂ ಇದ್ದಿದ್ದರೆ.. ‘ ಎಂದು ಅಸ್ಪಷ್ಟ ಧ್ವನಿಯಲ್ಲಿ ಹೇಳುತ್ತ ಕಣ್ಣು ಮುಚ್ಚಿದರು. ಅದು ಅವರ ಕೊನೆಯ ಮಾತು ಎನ್ನುವುದು ಅವರಿಬ್ಬರಿಗೆ ತಿಳಿಯಲು ತುಸು ಹೊತ್ತೇ ಬೇಕಾಯ್ತು. ಒಳಗಿನಿಂದ ಅವರಿಗೆ ಕುಡಿಯಲೆಂದು ಹಾಲು ಹಿಡಿದುಕೊಂಡು ಬಂದ ಕಮಲಮ್ಮ ‘ಆದಿ ಅವರನ್ನು ಕೂಡ್ರಿಸಿ ಸ್ವಲ್ಪ ಹಿಡಿದುಕೋ. ಹಾಲು ಕುಡಿಸುತ್ತೇನೆ’ ಎಂದು ಹೇಳಿದಾಗ ಆದಿ ಅವರನ್ನು ಎಬ್ಬಿಸಲು ಹೋದ. ಆಗಲೇ ಗೊತ್ತಾದದ್ದು ಹಾಲು ಕುಡಿಯಲು ಅಪ್ಪ ಇಲ್ಲ ಎಂಬುದು.

‘ಅನಂತನೂ ಇದ್ದಿದ್ದರೆ’ ಎನ್ನುವುದೇ ಅವರ ಕೊನೆಯ ಮಾತು! ಎರಡು ದಿನ ಮೊದಲಷ್ಟೆ ಬಂದ ಡಾಕ್ಟರು ಹೇಳಿದ ಮಾತು ಕೇಳಿಯೇ ಆದಿಗೆ ಅನುಮಾನ ಬಂದಿತ್ತು. `ನಿಮ್ಮ ಅಪ್ಪ ಇನ್ನು ಹೆಚ್ಚು ದಿನ ಉಳಿಯಲಿಕ್ಕಿಲ್ಲ’ ಎಂದು ಡಾಕ್ಟರರು ಹೇಳಿದ ಮಾತು ಅಮ್ಮನ ಕಿವಿಯ ಮೇಲೆ ಬೀಳದಂತೆ ಜಾಗ್ರತೆ ವಹಿಸಿದ್ದ ಮತ್ತು ಹಾಗೆಯೇ ವಾರಾಂತ್ಯಕ್ಕೆ ಹೇಗೂ ಬರುತ್ತಾನಲ್ಲ ಎಂದು ಅಂತ್ಯನಿಗೂ ಹೇಳಿರಲಿಲ್ಲ. ಆದರೆ ಇಷ್ಟು ಬೇಗನೇ ಸಾವು ಸಂಭವಿಸುತ್ತದೆ೦ದು ಎಣಿಸಿರಲಿಲ್ಲ ಅವ.

ಅಮ್ಮ ಹಾಲಿನ ಪಾತ್ರೆಯನ್ನು ಹಾಗೆಯೇ ಕೈ ಬಿಟ್ಟು ಕುಳಿತುಕೊಂಡಳು. ಅಂತ್ಯನೂ ಅಷ್ಟೆ. ಆದರೆ ಅವನಿಗೂ ಕಳೆದ ವಾರಾಂತ್ಯದಲ್ಲಿ ಬಂದಾಗಲೇ ಸುಳಿವು ಸಿಕ್ಕಿತ್ತು. ಆದಿ ಬಾಯಿ ಬಿಟ್ಟು ಹೇಳದಿದ್ದರೂ ಅಪ್ಪನ ಮರೆವು, ಅವರ ವರ್ತನೆ ಅವನಿಗೆ ಏನನ್ನೋ ಹೇಳಿದ್ದುವು. ಕಳೆದ ವಾರವಿಡೀ ಕೇಂದ್ರದಲ್ಲಿ ಅವನು ಅನಿವಾರ್ಯವಾಗಿ ಇರಲೇಬೇಕಾದ ಕೆಲವು ಚಟುವಟಿಕೆಗಳಲ್ಲದಿರುತ್ತಿದ್ದರೆ ಕಳೆದ ವಾರಾಂತ್ಯಕ್ಕೆ ಬಂದವ ಮನೆಯಲ್ಲಿಯೇ ಉಳಿದು ಬಿಡುತ್ತಿದ್ದ. ಈ ವಾರವಂತೂ ಹಾಗೆ ನಿರ್ಧರಿಸಿಯೇ ಬಂದಿದ್ದ. ಹಾಗೆಂದು ಕೆಂದ್ರಲ್ಲಿ ಹೇಳಿಯೂ ಇದ್ದ. ‘ಅತೀ ತುರ್ತಿನ ವಿಚಾರವಿದ್ದರೆ ನನಗೆ ಫೋನ್ ಮಾಡಿ. ಅಂತಹ ಅಗತ್ಯವಿದ್ದರೆ ನಾನೇ ಬರುತ್ತೇನೆ. ಇಲ್ಲ ಫೋನಿನಲ್ಲಿಯೇ ಮಾತನಾಡುತ್ತೇನೆ’ ಎಂದು ಹೇಳಿಯೇ ಬಂದಿದ್ದ.

ಆದರೆ ಅಪ್ಪ ಇಷ್ಟು ಬೇಗ ಯಾವುದೇ ಸೂಚನೆ ಕೊಡದೆ ಕೊನೆಯುಸಿರೆಳೆಯುತ್ತಾರೆಂದು ಅವರು ಯಾರೂ ನಿರೀಕ್ಷಿಸಿರಲಿಲ್ಲ. ವಯಸ್ಸಾಯ್ತು ನಿಜ. ಎಪ್ಪತ್ತೈದೋ ಎಪ್ಪತ್ತಾರೋ  ದಾಟಿರಬೇಕು. ಆದರೆ ಇತ್ತೀಚಿನವರೆಗೂ ಚಟುವಟಿಕೆಯಿಂದಲೇ ಇದ್ದರಲ್ಲ. ಹಾಗಾಗಿ ಹಿಂದಿನ ವಾರದವರೆಗೆ ಯಾರೂ ಆ ಚಿಂತೆಯಲ್ಲಿಯೇ ಇರಲಿಲ್ಲ. ಕಳೆದ ವಾರದಿಂದ ಒಂದು ತೆರನ ಅನುಮಾನ ಕಾಡಿದ್ದರೂ ಇಷ್ಟು ಬೇಗ ಕೊನೆಯುಸಿರೆಳೆದದ್ದು ಅವರಿಗೆಲ್ಲ ಒಂದು ದೊಡ್ಡ ಆಘಾತವೇ.

ತೀರಾ ಪರಿಣಾಮ ಬೀರಿದ್ದು ಕಮಲಮ್ಮನ ಮೇಲೆ. ಮದುವೆಯಾದ ಹೊಸತರಲ್ಲಿ ತನ್ನ ತವರು ಮನೆಯ ಸಿರಿತನಕ್ಕೆ ಯಾವುದೇ ರೀತಿಯಲ್ಲೂ ಸಮನಾಗಿರದ ಈ ಮನೆಯ ಸ್ಥಿತಿಯನ್ನು ನೋಡಿ ಒಂದು ತೆರನ ತಿರಸ್ಕಾರದ ಭಾವನೆಯನ್ನು ಬೆಳೆಸಿಕೊಂಡು ಬಂದದ್ದೂ ಹೌದು. ಅದೆಲ್ಲ ಆಯಾ ಕಾಲಕ್ಕೆ ಮಾತ್ರ. ಮಕ್ಕಳೆಲ್ಲ ಹುಟ್ಟಿ ಬೆಳೆಯುತ್ತ ಬಂದ೦ತೆ, ಮತ್ತು ತವರಿನ ಸಂಬ೦ಧವೂ ದೂರವಾಗುತ್ತ ಬಂದ೦ತೆ ಆ ಭಾವನೆ ಕಡಿಮೆಯಾಗುತ್ತ ಬಂದಿದ್ದರೂ ಗಂಡನನ್ನು ಹೀಯಾಳಿಸುವ ಸಂದರ್ಭದಲ್ಲೆಲ್ಲ ಅದು ಧುತ್ತೆಂದು ಮರುಕಳಿಸುತ್ತಿತ್ತು. ಅದೇ ಮಾನಸಿಕ ನೆಲೆಯಲ್ಲಿ ಆಕೆ ಗಂಡನ ಮೇಲೆ ದಬ್ಬಾಳಿಕೆ ನಡೆಸಿದ್ದೂ ಹೌದು. ಅಷ್ಟೇ ಅಲ್ಲ. ಹಾಗೆ ದಬ್ಬಾಳಿಕೆ ನಡೆಸುವಾಗ ಅದು ಹೆಂಡತಿಯಾದ ತನ್ನ ಹಕ್ಕು ಎಂದೇ ಭಾವಿಸಿದ್ದಳು ಕೂಡ. ಕೆಲವೊಂದು ವೇಳೆ ಅವರನ್ನು ಕಡೆಗಣಿಸಿ ನಡೆದದ್ದೂ ಇತ್ತು.

ಮಕ್ಕಳು ದೊಡ್ಡವರಾಗುತ್ತ ಬಂದ೦ತೆ ಅವರ ಮುಂದೆ ಗಂಡನನ್ನು ಹೀಯಾಳಿಸಿದ್ದೂ ಇತ್ತು. ಆಗೆಲ್ಲ ಮಕ್ಕಳೇ ‘ಯಾಕಮ್ಮ ಅಪ್ಪನಿಗೆ ಹಾಗನ್ನುತ್ತೀಯ’ ಎನ್ನುತ್ತ ಆಕೆಯ ಬಾಯಿ ಮುಚ್ಚಿಸಿದ್ದೂ ಹೌದು. ಹಾಗೆಂದು ಆಕೆಗೆ ಗಂಡನ ಮೇಲೆ ಪ್ರೀತಿ ಎಂದಿಗೂ ಕಡಿಮೆಯಾಗಿರಲಿಲ್ಲ. ಮದುವೆಯಾದ ಹೊಸತರಲ್ಲಿ ಗಂಡ ಇನ್ನೊಬ್ಬ ಹೆಂಗಸಿನೊ೦ದಿಗೆ ಸಂಬ೦ಧ ಇಟ್ಟುಕೊಂಡಿದ್ದಾನೆ೦ದು ತಿಳಿದಾಗಲೂ ಅದೆಲ್ಲ ದೊಡ್ಡವರ ಮನೆಯಲ್ಲಿ ಸಾಮಾನ್ಯ ಎಂದು ಪರಿಗಣಿಸಿದ್ದಳೇ ಹೊರತು ಗಂಡನ ಮೇಲಿನ ತನ್ನ ಪ್ರೀತಿ ಕಡಿಮೆಯಾಗಲು ಬಿಟ್ಟಿರಲ್ಲಿಲ್ಲ. ಗಂಡ ಮತ್ತು ತನ್ನ ನಡುವಿನ ಸಂಬ೦ಧ ಮುಂದುವರಿಯುವುದರಲ್ಲಿ ಆ ವಿಷಯ ನುಸುಳಲೂ ಬಿಟ್ಟಿರಲಿಲ್ಲ. ಅಂತಹ ಕಮಲಮ್ಮನಿಗೆ ಗಂಡ ಸತ್ತದ್ದು ದೊಡ್ಡ ಶಾಕ್. ಜೊತೆಗೆ ಅಕೆಗೆ ದಿಗ್ಬ್ರಮೆಯಾಗುವಷ್ಟು ಅನಿರೀಕ್ಷಿತವೂ ಆಗಿತ್ತು. ಹಾಗಾಗಿಯೇ ಆಕೆ ಹಾಲಿನ ಚೊಂಬನ್ನು ಹಾಗೆಯೇ ಕೆಳಗೆ ಬಿಟ್ಟು ಮಾತಿಲ್ಲದೆ ಕುಳಿತದ್ದು.

। ಇನ್ನು ನಾಳೆಗೆ ।

‍ಲೇಖಕರು Admin

July 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: