ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 61- ಅಂತ್ಯನ ಅದ್ದೂರಿ ಪ್ರದರ್ಶನ…

ಪಿ ಪಿ ಉಪಾಧ್ಯ

ಅಂತ್ಯನ ಪುಸ್ತಕಗಳು ಇಂಗ್ಲೀಷನ್ನೂ ಒಳಗೊಂಡ೦ತೆ ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಆ ಎಲ್ಲ ಭಾಷೆಯವರೂ ಇಂತಿಷ್ಟು ಇಂತಿಷ್ಟು ಎಂದು ರಾಯಧನವನ್ನೂ ಕೊಟ್ಟರು. ಆಕ್ಸಫರ್ಡ್ ವರಂತೂ ತುಸು ಹೆಚ್ಚೇ ಎನಿಸುವಷ್ಟು ಕೊಟ್ಟಿದ್ದರು. ಒಟ್ಟಿನಲ್ಲಿ ಅಂತ್ಯ ಕನಸಿನಲ್ಲಿಯೂ ಎಣಿಸದಷ್ಟು ಹಣ. ಅವ ಆ ಪುಸ್ತಕವನ್ನು ಬರೆಯಲು ಪ್ರಾರಂಭಿಸುವಾಗ ಅಥವಾ ಮುಂದುವರಿಸುವಾಗ ಎಂದೂ ಆ ಪುಸ್ತಕ ತನಗೆ ತರಬಹುದಾದ ಹಣದ ಬಗ್ಗೆ ಯೋಚಿಸಿಯೇ ಇರಲಿಲ್ಲ. ಅಷ್ಟೇ ಅಲ್ಲ. ಪುಸ್ತಕವನ್ನು ಮುದ್ರಿಸುವ ಖರ್ಚನ್ನು ತಾನೇ ಭರಿಸಬೇಕಾಗಬಹುದು ಎಂದು ಎಣಿಸಿದ್ದೂ ಇತ್ತು. ಅಂಥವನಿಗೆ ಈಗ ಇದೊಂದು ಶಾಕ್. ಜೊತೆಗೇ ಆ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವುದರ ಚಿಂತೆ.

ಯಾವತ್ತೂ ಹಣವನ್ನು ಮಿತಿ ಮೀರಿ ಖರ್ಚು ಮಾಡಿದವನೇ ಅಲ್ಲ ಅವನು. ಜೊತೆಗೆ ಅವನ ಹೆಚ್ಚಿನ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದುದೆಲ್ಲ ಅಣ್ಣ ಆದಿಯೇ. ಹಾಗಿರುವಾಗ ಈ ಹಣವನ್ನು ಏನು ಮಾಡುವುದು? ಕೊನೆಗೆ ಅಣ್ಣನನ್ನೇ ಕೇಳಿದ. ‘ಈಗ ಸದ್ಯಕ್ಕೆ ಹಾಗೇ ಇರಲಿ ಬಿಡು. ನಿನ್ನದೇ ಏನಾದರೂ ಹೆಚ್ಚಿನ ಖರ್ಚಿಗೆ ಬೇಕಿದ್ದರೆ ಉಪಯೋಗಿಸಿಕೋ. ಉಳಿದದ್ದು ಹಾಗೆಯೇ ಇರಲಿ. ನೋಡೋಣ..’ ಎಂದಿದ್ದ ಆದಿ. ಆದರೂ ಅಂತ್ಯ ಆ ಹಣವನ್ನು ಮುಟ್ಟಲೇ ಇಲ್ಲ. ಅವನ ಬ್ಯಾಂಕ್ ಖಾತೆಯಲ್ಲಿ ಹಾಗೆಯೇ ಉಳಿದು ಬಿಟ್ಟಿತು. ಅಂತ್ಯನ ತಂದೆ ತಾಯಿ ಎಂದೂ ಹಣಕ್ಕಾಗಿ ಮಕ್ಕಳ ಕೈ ನೋಡಿದವರೇ ಅಲ್ಲ.

ಯಕ್ಷಗಾನ ಕೇಂದ್ರದ ಖರ್ಚಿಗೆ ಏನಾದರೂ ಕೊಡೋಣವೆಂದರೆ ಮೊದಲಿನಿಂದಲೂ ಆ ಜವಾಬ್ದಾರಿಯನ್ನು ಹೊತ್ತುಕೊಂಡ ಬಂದಿದ್ದ ಆದಿ ಬಿಡಲೊಲ್ಲ. ಶಾಸ್ತ್ರೀಗಳನ್ನು ಕೇಳಿದರೆ ಅವರೂ ‘ಈಗೀಗ ಕೆಂದ್ರದ ಯಾವ ಖರ್ಚಿನ ಬಗ್ಗೆಯೂ ನಾನು ಗಮನ ಕೊಡುವುದೇ ಇಲ್ಲ. ಸುಮಾರು ಐದು ವರ್ಷಗಳಿಂದ ಆದಿಯೇ ಎಲ್ಲ ನೋಡಿಕೊಳ್ಳುತ್ತಿದ್ದಾನೆ. ನನ್ನ ಕೈಗೆ ಏನಾದರೂ ಬಂದರೂ ಒಂದೋ ಅವನ ಕೈಗೇ ಕೊಟ್ಟು ಬಿಡುತ್ತೇನೆ. ಇಲ್ಲ ಬ್ಯಾಂಕ್‌ಗೆ ಕಟ್ಟಿ ಅವನಿಗೆ ಹೇಳಿ ಬಿಡುತ್ತೇನೆ ಅಷ್ಟೆ. ಹಾಗಾಗಿ ನೀನೇನಾದರೂ ಮಾಡಬೇಕೆಂದಿದ್ದರೆ ಆದಿಯನ್ನೇ ಕೇಳು’ ಎಂದರು. ಆದಿ ಮೊದಲೆ ಹೇಳಿದ್ದನಾದ್ದರಿಂದ ಅಂತ್ಯ ಆ ಬಗ್ಗೆ ಸುಮ್ಮನೇ ಇದ್ದುಬಿಟ್ಟ. ಲಕ್ಷಗಟ್ಟಲೆಯಲ್ಲಿ ಬರುತ್ತಿದ್ದ ಹಣ ಬ್ಯಾಂಕ್ ಖಾತೆಯಲ್ಲಿ ಹಾಗೆಯೇ ಉಳಿದುಬಿಟ್ಟಿತು.

ಯಕ್ಷಗಾನ ಕೇಂದ್ರ ಚನ್ನಾಗಿ ನಡೆಯುತ್ತಿದೆ. ಆದಿ ಮತ್ತು ಅಂತ್ಯನ ಮುತುವರ್ಜಿಯಿಂದಾಗಿ ಖರ್ಚಿನ ಬಗ್ಗೆ ಮತ್ತು ಕೇಂದ್ರದ ಒಳ ಆಡಳಿತದ ಬಗ್ಗೆ ಚಿಂತೆ ಹತ್ತಿಸಿಕೊಳ್ಳುವ ಅಗತ್ಯವೇ ಇಲ್ಲದ ಶಾಸ್ತ್ರೀಗಳು ಇತ್ತೀಚಿನ ದಿನಗಳಲ್ಲಿ ಕೇಂದ್ರದ ಇತರೆ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡು ಹೊಸ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವಲ್ಲಿ, ಹೊಸ ಹೊಸ ಪ್ರಸಂಗಗಳ ಪ್ರಯೋಗ ಮಾಡುವುದರಲ್ಲಿ ಮತ್ತು ಸುತ್ತ ಮುತ್ತ ಊರುಗಳಲ್ಲಿ ಪ್ರದರ್ಶನ ನಡೆಸುವಲ್ಲಿ ತಲ್ಲೀನರಾಗಿ ಬಿಟ್ಟರು. ದಿನದಿಂದ ದಿನಕ್ಕೆ ಅವರ ಕೇಂದ್ರದ ಪ್ರದರ್ಶನಕ್ಕೆ ಬೇಡಿಕೆ ಜಾಸ್ತಿಯಾಗುತ್ತಲೇ ಹೋಗುತ್ತಿತ್ತು.

ಈ ಕೇಂದ್ರದ ಯಶಸ್ಸನ್ನು ಕಂಡು ಸುತ್ತ ಮುತ್ತ ಹಲವು ಊರುಗಳಲ್ಲಿ ಹತ್ತು ಹಲವು ಯಕ್ಷಗಾನ ಕೇಂದ್ರಗಳು ಆಡಂಬರದಿ೦ದ ತಲೆಯೆತ್ತಿ ತರಬೇತಿಯನ್ನು ಪ್ರಾರಂಭಿಸಿ ಅದ್ದೂರಿಯ ಪ್ರದರ್ಶನಗಳನ್ನು ಏರ್ಪಡಿಸಿದರೂ ಶಾಸ್ತ್ರೀಗಳ ಕೇಂದ್ರದ ಪ್ರದರ್ಶನದ ಮಟ್ಟಕ್ಕೆ ಯಾವುದೂ ಬರಲಿಲ್ಲ. ಹಾಗೆಂದು ಪ್ರೇಕ್ಷಕರೇ ಅಭಿಪ್ರಾಯ ಪಟ್ಟದ್ದು ಮಾತ್ರವಲ್ಲ ಪತ್ರಿಕೆಗಳವರೂ ಬರೆದರು. ಅದು ಎಲ್ಲಿಯವರೆಗೆ ಮುಂದುವರಿಯಿತೆ೦ದರೆ ಹೊಸ ಕೇಂದ್ರಗಳವರ ಪ್ರದರ್ಶನ ಖಾಲಿ ಹೊಡೆಯುವಷ್ಟು. ಕೆಲವೊಂದು ಪ್ರದರ್ಶನಗಳಂತೂ ಪ್ರೇಕ್ಷಕರೇ ಇಲ್ಲದೆ ಅಂದಿನ ಪ್ರದರ್ಶನವನ್ನೇ ರದ್ದುಗೊಳಿಸುವಷ್ಟು. ಹಾಗಾದಾಗ ಅಂತಹ ಕೇಂದ್ರಗಳು ಎಷ್ಟು ದಿನ ಉಳಿದಾವು. ಕೆಲವಂತೂ ಪ್ರಾರಂಭವಾದ ವರ್ಷದೊಳಗೇ ಮುಚ್ಚಿಕೊಂಡವು. ಹಾಗೆ ಮುಚ್ಚಿಕೊಂಡ ಕೇಂದ್ರದವರೆಲ್ಲ ಶಾಸ್ತ್ರೀಗಳ ಕೇಂದ್ರದ ಎದುರಾಳಿಗಳೇ ತಾನೇ! ಇವರ ಯಶಸ್ಸಿನಿಂದ ಕಣ್ಣು ಕುಕ್ಕಿಸಿಕೊಂಡವರು ತಾನೇ! ಸುಮ್ಮನಿರುತ್ತಾರೆಯೇ. ಸಾಧ್ಯವಾದಲ್ಲೆಲ್ಲ ಅಡ್ಡ ಕಾಲಿಡಲು ತೊಡಗಿದರು.

ಅಂತಹ ಸಂದರ್ಭದಲ್ಲಿಯೇ ಶಾಸ್ತ್ರೀಗಳ ತಂಡದ ಒಂದು ಪ್ರದರ್ಶನ. ಊರಿನ ಕನ್ನಡ ಸಂಘದವರ ಸಹಾಯಾರ್ಥ. ನೂರಕ್ಕೂ ಹೆಚ್ಚಿನ ಸದಸ್ಯತ್ವ ಹೊಂದಿದ್ದ ಆ ಸಂಘದ ಯುವಕರು ವಾರದ ಹಿಂದಿನಿ೦ದಲೇ ಪ್ರಚಾರ ಮಾಡ ತೊಡಗಿ ಟಿಕೇಟು ಮಾರಾಟವನ್ನೂ ಪ್ರಾರಂಭಿಸಿದರು. ಮನೆ ಮನೆಗೆ ಮತ್ತು ಅಂಗಡಿಯಿ೦ದ ಅಂಗಡಿಗೆ ತಿರುಗಿ ಮಾರಾಟ ಮಾಡುವಾಗ ಎದುರಾಗಿತ್ತು ಸಮಸ್ಯೆ. ಹಿಂದಿನ ವರ್ಷವಷ್ಟೆ ಪ್ರೇಕ್ಷಕರೇ ಇಲ್ಲದೆ ತಮ್ಮ ಪ್ರದರ್ಶನ ಮತ್ತು ಅದರಿಂದಾಗಿಯೇ ತಮ್ಮ ತರಬೇತಿ ಕೇಂದ್ರವನ್ನೂ ಮುಚ್ಚಬೇಕಾಗಿ ಬಂದ ಒಂದು ತಂಡದ ಯಜಮಾನರೇ ಎದುರಾಗಿದ್ದರು.

‘ಏನು ಮಾರಾಟ ಮಾಡುತ್ತೀರಿ’

‘ಯಕ್ಷಗಾನ ಪ್ರದರ್ಶನ ಇಟ್ಟಿದ್ದೇವೆ. ಶಾಸ್ತ್ರೀಗಳ ಕೋಟದ ತರಬೇತಿ ಕೇಂದ್ರದವರಿ೦ದ. ನಮ್ಮ ಸಂಘಕ್ಕೂ ಸ್ವಲ್ಪ ಹಣದ ಅಗತ್ಯವಿದೆ. ಆ ಕೇಂದ್ರದಲ್ಲಿರುವ ನಮ್ಮೂರ ಮಕ್ಕಳಿಗೂ ಒಂದು ಅವಕಾಶ. ಅದಕ್ಕೇ ಟಿಕೇಟು ಮಾರಾಟ ಮಾಡಲು ಬಂದಿದ್ದೇವೆ’

‘ಆ ಕೇಂದ್ರದಲ್ಲಿ ಎಷ್ಟು ಮಂದಿ ನಿಮ್ಮ ಊರಿನವರಿದ್ದಾರೆ?

‘ಗೊತ್ತಿಲ್ಲ… ಹೆಚ್ಚಿನವರು ನಮ್ಮೂರ ಮಕ್ಕಳೇ ಅಲ್ಲವೇ’

`ಅದೇ ತಪ್ಪು. ಏನೂ ತಿಳಿದುಕೊಳ್ಳದೆ ಅವರಿಗೆ ದುಡ್ಡು ಮಾಡಿಕೊಡಲು ಹೊರಟಿದ್ದೀರ. ಅವರ ತಂಡದಲ್ಲಿ ಬಹು ಮಂದಿ ಮಕ್ಕಳು ಬೇರೆ ಊರಿನವರು. ಘಟ್ಟದ ಮೇಲಿನವರೂ ಇದ್ದಾರೆ. ಒಂದಿಬ್ಬರು ಕಾಸರಗೋಡಿನವರೂ ಇದ್ದಾರೆ. ಗೊತ್ತಿದೆಯಾ ನಿಮಗೆ’

‘ಅದೆಲ್ಲ ನಮಗೆ ಗೊತ್ತಿಲ್ಲ. ನಮಗೆ ಬೇಕೂ ಇಲ್ಲ. ನಾವು ಹಮ್ಮಿಕೊಂಡಿರುವ ಸಾಮಾಜಿಕ ಕೆಲಸಗಳಿಗೆ ದುಡ್ಡು ಬೇಕು. ಅದಕ್ಕೆ ಈ ಕಾರ್ಯಕ್ರಮ ಅಷ್ಟೆ’ ಎನ್ನುತ್ತ ಅವರಂದುದನ್ನು ಕಿವಿಯ ಮೇಲೇ ಹಾಕಿಕೊಳ್ಳದೆ ಟಿಕೇಟು ಮಾರಲು ಬಂದವರು ಮುಂದುವರಿಯಲು ನೋಡಿದರೆ ಅವರು ಅಡ್ಡ ಹಾಕಿದ್ದರು.

‘ನಮ್ಮ ಊರಿನಲ್ಲಿ, ಅದೂ ಈ ಕೇರಿಯಲ್ಲಿ ನಿಮಗೆ ಟಿಕೆಟು ಮಾರಲು ಬಿಡಲಾರೆ’ ಎಂದು ಅಡ್ಡಗಟ್ಟಿ ನಿಂತರು. ಅವರ ಜೊತೆ ಅವರದೇ ಚೇಲಾಗಳಿರಬೇಕು. ಒಂದಿಷ್ಟು ಜನ ಸೇರಿಕೊಂಡರು.

ಟಿಕೇಟು ಮಾರಲು ಬಂದ ತಂಡದ ಮುಂದಾಳು – ಅವನು ಕನ್ನಡ ಸಂಘದ ಕಾರ್ಯದರ್ಶಿಯೂ ಹೌದು- ಕೇಳಿದ ‘ನಿಮಗೆ ದ್ವೇಷ ನಮ್ಮ ಮೇಲೋ ಅಥವಾ ಯಕ್ಷಗಾನ ಕೇಂದ್ರದವರ ಮೇಲೋ..’ ಅವನಿಗೆ ಗೊತ್ತಿತ್ತು. ಇವರು ಒಂದು ತಂಡವನ್ನು ಕಟ್ಟಿ ಸೋತು ಹೋದವರು. ಪ್ರದರ್ಶನ ಹೋಗಲಿ ತಿಂಗಳೆರಡು ತಿಂಗಳಲ್ಲಿಯೇ ತಂಡದಲ್ಲಿ ಕೆಲಸಕ್ಕೆಂದು ಬಂದ ಚಂಡೆ ಮದ್ದಲೆ ಬಾರಿಸುವವರಿಗೆ ಮತ್ತು ಭಾಗವತರಿಗೆ ಸಂಬಳ ಕೊಡಲೂ ದುಡ್ಡಿಲ್ಲದೆ ಪರದಾಡಿದವರು ಎಂದು.

`ಅದೆಲ್ಲ ನಿಮಗೆ ಯಾಕೆ. ಈ ಯಕ್ಷಗಾನ ಕಾರ್ಯಕ್ರಮಕ್ಕೆ ಇಲ್ಲ ಟಿಕೇಟು ಮಾರಲು ಬಿಡಲಾರೆವು’ ಪಟ್ಟು ಹಿಡಿದಿದ್ದರು ಅವರು. ಬೇರೆ ದಾರಿಯೇ ಕಾಣದೆ ಕನ್ನಡ ಸಂಘದ ಗುಂಪಿನವರೆಲ್ಲ ಹಾಗೆಯೇ ಹೊರಟುಬಿಟ್ಟರು.

। ಇನ್ನು ನಾಳೆಗೆ ।

‍ಲೇಖಕರು Admin

4 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading