ಪಿ ಪಿ ಉಪಾಧ್ಯ ಸರಣಿ ಕಥೆ 54 – ಅನಂತನೇ ಅವಳ ಮುದ್ದಿನ ಮಗು…

ಪಿ ಪಿ ಉಪಾಧ್ಯ

ಅನಂತನ ಬಗ್ಗೆ ವಿಶೇಷ ಸುದ್ದಿ ತಿಳಿದಂದಿನಿಂದ ಅಮ್ಮನ ಮಾತು ಕಡಿಮೆಯಾದದ್ದು ಮಕ್ಕಳಿಬ್ಬರ ಗಮನಕ್ಕೆ ಬಂದಿತ್ತು. ನಿಧಾನವಾಗಿ ಕಡಿಮೆಯಾಗುತ್ತ ಬಂದ ಆಕೆಯ ಮಾತುಗಳು ನಾಲ್ಕೇ ದಿನಗಳಲ್ಲಿ ಪೂರ್ತಿಯಾಗಿ ನಿಂತೇ ಹೋಗುತ್ತದೇನೋ ಎನ್ನುವ ಮಟ್ಟವನ್ನು ಮುಟ್ಟಿತ್ತು. ಗಾಬರಿಗೊಂಡ ಆದಿ ಆಕೆಯನ್ನು ಮಾಮೂಲಿ ಸ್ಥಿತಿಗೆ ತರಬೇಕೆಂದು ಬಹಳ ಪ್ರಯತ್ನ ಪಟ್ಟ.

ಅಂತ್ಯನೂ ಹಾಗೆಯೇ. ಇದೇ ಕಾರಣಕ್ಕಾಗಿ ವಾರಾಂತ್ಯಕ್ಕೆ ತಪ್ಪದೆ ಮನೆಗೆ ಬರಲು ಪ್ರಾರಂಭಿಸಿದ ಅವನು ಸಾಧ್ಯವಾದಷ್ಟರ ಮಟ್ಟಿಗೆ ಮನೆಯಲ್ಲಿದ್ದಷ್ಟು ಹೊತ್ತೂ ಅಮ್ಮನೊಂದಿಗೆ ಮಾತನಾಡುತ್ತಲೇ ಇರಲು ಪ್ರಯತ್ನಿಸಿದ್ದ. ಅಂತ್ಯನನ್ನು ಮಗನೆಂದು ಒಪ್ಪಿ ಪ್ರೀತಿಸಲಿಕ್ಕೆ ತೊಡಗಿದಂದಿನಿಂದ ಅವನ ಒಂದು ಮಾತಿಗೆ ಹತ್ತು ಮಾತುಗಳ ಉತ್ತರ ಕೊಡುತ್ತಿದ್ದ ಅಮ್ಮ ಈಗ ಅವನ ಮಾತುಗಳಿಗೆ ಬರೀ ತಲೆ ಅಲ್ಲಾಡಿಸುತ್ತಿದ್ದಳು ಅಷ್ಟೆ. ಇನ್ನೂ ಕೇಳಿದರೆ ‘ಹೌದು’ ಅಥವಾ ‘ಅಲ್ಲ’ ಎನ್ನುವ ಒಂದೇ ಶಬ್ದದ ಉತ್ತರ. ಮಗ ಎಲ್ಲಾದರೂ ಒತ್ತಾಯ ಮಾಡಿದರೆ ಅಲ್ಲಿಂದ ಎದ್ದು ಹೊರಟು ಬಿಡುತ್ತಾಳೆ.

ಅಣ್ಣ ತಮ್ಮಂದಿರಿಬ್ಬರಿಗೂ ತೀರ ಸಂದಿಗ್ಧಕ್ಕಿಟ್ಟುಕೊಂಡಿತು ಈಗ. ಆದಿಗಂತೂ ತಾನು ಆ ವಿಷಯವನ್ನು ಅಷ್ಟು ತರಾತುರಿಯಿಂದ ಮನೆಯಲ್ಲಿ ಹೇಳುವುದು ಬೇಡವಿತ್ತು ಎಂದು ಪದೇ ಪದೇ ಮನಸ್ಸಿಗೆ ಬರಲಾರಂಭಿಸಿತು. ಅದನ್ನೇ ಅಂತ್ಯನೊಂದಿಗೆ ಹೇಳಿಯೂ ಬಿಟ್ಟ. ಅಂತ್ಯ ಮಾತ್ರ ಅಮ್ಮ ಅದನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾಳೆ ಎಂದು ನಾನೂ ಅಂದುಕೊಂಡಿರಲಿಲ್ಲ ಬಿಡು. ಹಾಗೇನಾದರೂ ಅನ್ನಿಸಿದ್ದರೆ ನೀನು ಆ ವಿಷಯವನ್ನು ಪ್ರಾರಂಭಿಸಿದಾಗ ನಾನೇ ತಡೆದು ಬಿಡುತ್ತಿದ್ದೆ’ ಎಂದ. ಅವರಿಬ್ಬರ ಚಿಂತೆ ಮಾತ್ರ ಒಂದೇ. ‘ಅಮ್ಮನನ್ನು ಹೇಗೆ ಸರಿ ಮಾಡುವುದು’ ಎಂದು. ಹಾಗೆಯೇ ಒಂದು ದಿನ ಆದಿ ವಾರಾಂತ್ಯಕ್ಕೆ ಮನೆಗೆ ಬಂದಿದ್ದ ಅಂತ್ಯನೊಂದಿಗೆ ಮಾತನಾಡುತ್ತಅಲ್ಲ ಅಂತ್ಯ, ಅಮ್ಮನನ್ನು ಧರ್ಮಸ್ಥಳ, ಸುಬ್ರಮಣ್ಯ ಹಾಗೆ ಒಂದೆರಡು ದೇವಸ್ಥಾನಕ್ಕೆ ಕರೆದುಕೊಂಡು ಹೋದರೆ ಏನಾದರೂ ಸಹಾಯ ಆದೀತೇ. ಈ ಮನೆಯ ವಾತಾವರಣದಿಂದ ಒಂದೆರಡು ದಿನಗಳ ಮಟ್ಟಿಗೆ ದೂರವಿದ್ದರೆ ಸ್ವಲ್ಪ ಅನುಕೂಲವಾದೀತೇ ನೋಡೋಣವೇ?

ಸರಿಯೆನ್ನಿಸಿದ ಅಂತ್ಯ ಆಯ್ತು ಎಂದ. ನಾವಿಬ್ಬರೂ ಹೋಗೋಣ. ಜೊತೆಗೆ ಅಪ್ಪನ್ನೂ ಕರೆದುಕೊಳ್ಳುವ ಎಂದು ಮಾತಾಡಿಕೊಂಡವರು ಸುರುವಿಗೆ ಅಪ್ಪನನ್ನು ಕೇಳಿದರು. ಅವರದ್ದೇನೂ ಅಭ್ಯಂತರವಿರಲಿಲ್ಲ. ಅವಳಿಗೆ ಒಳ್ಳೆಯದಾಗುವುದಾದರೆ ಹೋಗೋಣವಂತೆ. ಆದರೆ ಅವಳು ಒಪ್ಪಬೇಕಲ್ಲ’ ಎಂದರು. ಅದು ಆದದ್ದೂ ಹಾಗೆಯೇ. ತಾಯಿಯ ಹತ್ತಿರ ತಮ್ಮ ಯೋಜನೆಯ ಬಗ್ಗೆ ಹೇಳಿದಾಗ ಆಕೆ ಸುತರಾಂ ಒಪ್ಪಲಿಲ್ಲ. ಇಷ್ಟು ದಿಗಳ ಕಾಲ ಬರೀ ಹೌದು ಅಥವಾ ಇಲ್ಲಗಳಿಗೆ ತನ್ನ ಮಾತುಗಳನ್ನು ಮುಗಿಸುತ್ತಿದ್ದ ಆಕೆ ಈಗ ಮಾತ್ರಇಲ್ಲ. ಇನ್ನೇನಿದ್ದರೂ ಈ ಮನೆಯೇ ನನಗೆ. ನಾನು ಎಲ್ಲಿಗೂ ಬರುವುದಿಲ್ಲ..’
‘ಅಮ್ಮ, ದೇವರ ದರ್ಶನದ ಜೊತೆಗೆ ಒಂಚೂರು ಬದಲಾವಣೆಯೂ ಅದ ಹಾಗೆ ಆಗುತ್ತದೆ. ಅಪ್ಪನೂ ಬರುತ್ತೇನೆ ಎಂದಿದ್ದಾರೆ’

‘ನೀವು ಅವರೂ ಹೋಗಿ ಬನ್ನಿ. ನಾನು ಬರಲಾರೆ. ನನಗೇನಾಗಬೇಕಾಗಿದೆ ಇನ್ನು. ಒಂದು ದಿನ ಸಾಯುವುದಷ್ಟೇ. ಅದೂ ಇದೇ ಮನೆಯಲ್ಲಿ’ ಮಾತು ನಿಧಾನವೇ ಆಗಿದ್ದರೂ ಖಚಿತತೆಯಿತ್ತು. ಮೊದಲಿನ ದಿನಗಳಲ್ಲ್ಲಿ ಆಕೆಯ ಮಾತುಗಳಲ್ಲಿ ಮಾಮೂಲಿಯಾಗಿರುತ್ತಿದ್ದ ಉಢಾಫೆಯಿರಲಿಲ್ಲ. ತೀರಾ ಸಾಧಾರಣ ಧ್ವನಿಯಲ್ಲಿನ ಮಾತು. ಕೇಳಿಸಿಕೊಂಡ ಅಣ್ಣ ತಮ್ಮ ಇಬ್ಬರಿಗೂ ಮೂಕರಾಗಿದ್ದರು. ಅನಂತನ ಬಗ್ಗೆ ಆಕೆ ಈ ಪ್ರಮಾಣದ ಭಾವನೆಗಳನ್ನು ಬೆಳೆಸಿಕೊಂಡಿದ್ದಳೆನ್ನುವುದು ಅವರ ಅಂದಾಜಿಗೇ ನಿಲುಕದ ವಿಚಾರ. ಮೊದಲಿನಿಂದಲೂ ಅನಂತನ ಬಗ್ಗೆ ಆಕೆಗೆ ತುಸು ಪ್ರೀತಿ ಹೆಚ್ಚೇ ಎನ್ನುವುದು ಇಬ್ಬರಿಗೂ ತಿಳಿದದ್ದೇ. ಆದಿ ಮೊದಲನೆಯ ಮಗು ಎಂದು ಸುರು ಸುರುವಿಗೆ ತುಸು ಪ್ರೀತಿ ತೋರಿಸುತ್ತಿದ್ದರೂ ಅನಂತ ಹುಟ್ಟಿದ್ದೇ ಅದೆಲ್ಲ ಚಿಕ್ಕವನಿಗೆ ವರ್ಗಾವಣೆಯಾಗಿತ್ತು. ಹಾಗೇ ಮೂರನೆಯದು ಹೆಣ್ಣಾಗಬೇಕೆಂಬ ಆಸೆಯಿಂದಲೇ ಹೆತ್ತಿದ್ದು ಗಂಡಾದಾಗ ಅಂತ್ಯನ ಮೇಲೆ ಪ್ರೀತಿ ಹುಟ್ಟಿಯೇ ಇರಲಿಲ್ಲ.

ಅಂತೂ ಅನಂತನೇ ಅವಳ ಮುದ್ದಿನ ಮಗು. ಮುಂದಿನ ದಿನಗಳಲ್ಲಿ ಅದು ಪ್ರಕಟವಾಗಿಯೇ ಕಾಣಿಸತೊಡಗಿತ್ತು. ಆದಿ ಮೊದಲಿನಿಂದಲೂ ಹಾಗೆಯೇ. ಅದರ ಬಗ್ಗೆಯೆಲ್ಲ ತಲೆ ಕೆಡಿಸಿಕೊಂಡವನೇ ಅಲ್ಲ. ಅಂತ್ಯನಂತೂ ಮನೆಯಲ್ಲಿ ಇರಲೇ ಇಲ್ಲವಲ್ಲ. ವರ್ಷವೆರಡು ಕಳೆದ ಕೂಸಾಗಿದ್ದಾಗಲೇ ಮಾವನ ಮನೆಗೆ ಹೋದವ. ಹಾಗಾಗಿ ಆ ತಾಯಿಯ ಪ್ರೀತಿಯೆಲ್ಲ ನಡುವಿನವನಾದ ಅನಂತನ ಮೇಲೆಯೇ. ಆದರೆ ಅದು ಈ ಪ್ರಮಾಣಕ್ಕೆ ಇದ್ದಿತ್ತೇ. ಅಣ್ಣ ತಮ್ಮ ಇಬ್ಬರಿಗೂ ಮಂಡೆ ಬಿಸಿಯಾಗಿತ್ತು. ಎಲ್ಲಿಯವರೆಗೆಂದರೆ ಯಾರಾದರೂ ವೈದ್ಯರನ್ನು ನೋಡಬೇಕಾದೀತೇ ಎನ್ನುವ ಮಟ್ಟಿಗೆ. ಅದೇ ಆಲೋಚನೆಯನ್ನು ಅಪ್ಪನ ಮುಂದಿಟ್ಟಾಗ ಅವರು ಮಾತ್ರ ಒಪ್ಪಲಿಲ್ಲ. ‘ಸ್ವಲ್ಪ ಸಮಯ ಇರಿ. ಮುಂದೆ ಅದಾಗಿಯೇ ಸರಿಯಾಗುತ್ತದೆ’ ಎಂದು ಇವರನ್ನೇ ಸಮಾಧಾನಿಸಿದರು.

ಆದರೆ ಮುಂದಿನ ದಿನಗಳಲ್ಲಿ ಅದು ಸರಿಯಾಗುವುದು ಹೋಗಲಿ. ಹೆಚ್ಚೇ ಆಗಿತ್ತು. ಆಕೆ ಒಂದು ತೆರನಲ್ಲಿ ಮೌನ ವೃತ ಧರಿಸಿದವರಂತೆ ವರ್ತಿಸಲು ಪ್ರಾರಂಭಿಸಿದ್ದಳು. ಯಾರೊಂದಿಗೂ ಮಾತಿಲ್ಲ. ಮಕ್ಕಳೊಂದಿಗೆ ಬಿಡಿ. ಗಂಡನೊಂದಿಗೂ ಇಲ್ಲ. ಅಡಿಗೆಯವಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತ ಅವಳಿಗೆ ‘ಗಂಡನಿಗೆ ಅದು ಇಷ್ಟ ಇವತ್ತು ಅದನ್ನೇ ಮಾಡು. ಇವತ್ತು ಅಂತ್ಯ ಬರುತ್ತಾನೆ. ಅವನಿಗೋಸ್ಕರ ಇದನ್ನೆಲ್ಲ ಮಾಡು. ಇವತ್ತು ಸೋಮವಾರ ನೀರುಳ್ಳಿ ಬೆಳ್ಳುಳ್ಳಿಗಳನ್ನು ಉಪಯೋಗಿಸ ಬೇಡ’ ಎಂದೆಲ್ಲ ಹೇಳುತ್ತ ತನ್ನ ಯಜಮಾನಿಕೆಯ ಗತ್ತನ್ನು ತುಸುವೂ ಎಗ್ಗಿಲ್ಲದೆ ತೋರಿಸುತ್ತ ಕಾಲ ಕಳೆಯುತ್ತಿದ್ದವಳು ಈಗ ಅಡಿಗೆ ಮನೆಯ ಕಡೆ ತಲೆಯೇ ಹಾಕುತ್ತಿರಲಿಲ್ಲ. ಊಟ ಮಾಡಲಿಕ್ಕೂ ಮಕ್ಕಳು ಇಲ್ಲ ಗಂಡ ಕರೆಯಬೇಕು. ಆಗಲೇ ಹೋಗುವುದು. ಅದೂ ಕಷ್ಟದಲ್ಲಿ.

| ಇನ್ನು ನಾಳೆಗೆ |

‍ಲೇಖಕರು Admin

June 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: