ಪಿ ಪಿ ಉಪಾಧ್ಯ ಸರಣಿ ಕಥೆ 43 – ಶಾಸ್ತ್ರೀಗಳಿಗಂತೂ ಯುದ್ಧವನ್ನೇ ಗೆದ್ದ ಅನುಭವ…

ಪಿ ಪಿ ಉಪಾಧ್ಯ

ತಂಡದವರೆಲ್ಲ ತಮ್ಮ ತಮ್ಮ ವೇಷ ಭೂಷಣಗಳ ಜೊತೆಗೆ ತಮ್ಮ ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳುತ್ತ ತಯಾರಾಗುತ್ತಿದ್ದಂತೆಯೇ ಅಮೇರಿಕದಿಂದ ಫೋನ್ ಬಂದಿತ್ತು. ಅತ್ತ ಕಡೆಯಿಂದ ಮಾತನಾಡುತ್ತಿದ್ದವರು ಇವರನ್ನು ಅಮೆರಿಕೆಗೆ ಕರೆಸಿಕೊಂಡ ಅಲ್ಲಿನ ಕನ್ನಡ ಸಂಘದ ಅಧ್ಯಕ್ಷ. ಶಾಸ್ತ್ರೀಗಳನ್ನು ಸರ್ ಎಂದೇ ಸಂಬೋಧಿಸುತ್ತಿದ್ದವ. ಮಂಗಳೂರಿನಲ್ಲಿ ಪ್ರೊಫೆಸರ್ ಗಣೇಶ್ ಅವರ ಶಿಷ್ಯನಂತೆ. `ಸರ್ ನೀವು ಬರುವಾಗ ಮಕ್ಕಳ ವೇಷ ಭೂಷಣಗಳನ್ನು ಮಾತ್ರ ತಂದರೆ ಸಾಕು. ಮದ್ದಳೆ, ಹಾರ್ಮೋನಿಯಂ ಎಲ್ಲ ನಮ್ಮಲ್ಲೇ ಇವೆ. ಹಾಗೆ ನೋಡಲು ಹೋದರೆ ಸ್ವಲ್ಪ ಸ್ವಲ್ಪ ವೇಷ ಭೂಷಣಗಳೂ ಇವೆ. ಆದರೆ ಯಾವುದೂ ಪೂರ್ತಿಯಾಗಿಲ್ಲ. ನಾವೇ ಕೆಲ ಮಂದಿ ಹವ್ಯಾಸಿಗಳು ಒಟ್ಟು ಮಾಡಿಟ್ಟುಕೊಂಡದ್ದು. ಅದೂ ಎಲ್ಲ ದೊಡ್ಡವರ ಅಳತೆಯದ್ದು. ಹಾಗಾಗಿ ಅಷ್ಟೆ. ಇಲ್ಲವೆಂದಿದ್ದರೆ ಅವನ್ನೂ ಇಲ್ಲಿಯೇ ವ್ಯವಸ್ಥೆ ಮಾಡುತ್ತಿದ್ದೆವು’ ಎಂದರು.

ಶಾಸ್ತ್ರೀಗಳಿಗೆ ದೊಡ್ಡ ತಲೆ ಭಾರ ಇಳಿದ ಹಾಗೆ. ಮದ್ದಲೆ ಮತ್ತು ಹಾರ್ಮೋನಿಯಮ್ಮಿನದೇ ದೊಡ್ಡ ತಲೆ ಬಿಸಿಯಾಗಿತ್ತು. ರೆಕಾರ್ಡ್ ಮಾಡಿದ ಸಿಡಿಯನ್ನು ತೆಗೆದುಕೊಂಡು ಹೋದರೆ ಆಗದೇ ಎಂದು ಅನ್ನಿಸಿದ್ದರೂ ಅದರಿಂದ ಪ್ರಸಂಗಕ್ಕೆ ನೈಜತೆ ಬರದು ಎನ್ನುವ ನೋವು ಕಾಡುತ್ತಲೇ ಇತ್ತು. ಹಾಗಾಗಿ ತೊಂದರೆಯಾದರೂ ಅದನ್ನೆಲ್ಲ ಕಟ್ಟಿಕೊಂಡು ಹೊರಡುವ ಸಿದ್ಧತೆ ಮಾಡಿಕೊಂಡಿದ್ದರು. ಈಗ ಅದರ ಅಗತ್ಯವೇ ಇಲ್ಲ. ತರಬೇಡಿ ಎಂದು ಹೇಳುತ್ತಿದ್ದಾರೆ. ಅದನ್ನೇ ಆದಿಯ ಹತ್ತಿರ ಹೇಳಿದರೆ `ಒಳ್ಳೆಯದೇ ಆಯ್ತಲ್ಲ ಶಾಸ್ತ್ರೀಗಳೇ..’ ಎಂದ.

ಪ್ರಯಾಣದ ದಿನ ಬಂದೇ ಬಿಟ್ಟಿತು. ಮಂಗಳೂರಿನಿ೦ದಲೇ ವಿಮಾನ ಹತ್ತಿ ಪ್ರಯಾಣ ಪ್ರಾರಂಭ ಮಾಡಬಹುದಾಗಿದ್ದರೂ ಅಮೆರಿಕಾದ ಆತಿಥೇಯರಿಗೆ ಖರ್ಚು ಹೆಚ್ಚಾಗುತ್ತದೆಂದು ಮುಂಬೈವರೆಗೆ ಟ್ರೈನಿನಲ್ಲೇ ಹೋಗಿ ಅಲ್ಲಿಂದ ಬೆಳಿಗ್ಗೆ ನಾಲ್ಕರ ಫ್ಲೈಟಿಗೆ ಹೋಗುವುದೆಂದು ತೀರ್ಮಾನಿಸಿದರು. ಪ್ರೊಫೆಸರರು ಬರುತ್ತೇನೆಂದು ಹೇಳಿದವರು `ಅದೇ ಸಮಯಕ್ಕೆ ಯು ಜಿ ಸಿ ಯವರ ಭೇಟಿಯೂ ನಿಗದಿಯಾಗಿದೆ. ಹಿರಿಯ ಪ್ರೊಫೆಸರ್ ಆದ ನಾನು ಇರಲೇ ಬೇಕಾದ ಅನಿವಾರ್ಯತೆಯಿದೆ. ನನ್ನ ತೀವ್ರ ಬಯಕೆಯ ಹೊರತಾಗಿಯೂ ನಾನು ನಿಮ್ಮೊಂದಿಗೆ ಬರುವ ಹಾಗಿಲ್ಲ’ ಎಂದು ಬಹಳ ಬೇಜಾರಿನಿಂದ ಹೇಳಿದ್ದರು. ಶಾಸ್ತ್ರೀಗಳು ಮತ್ತು ಅಂತ್ಯ ಬಹಳ ನೊಂದುಕೊ೦ಡರೂ ಬೇರೆ ದಾರಿಯೇ ಇಲ್ಲವಲ್ಲ ಎಂದು ಸುಮ್ಮನಾದರು.

ಗುಂಪಿನಲ್ಲಿ ಹನ್ನೆರಡು ಜನರಿದ್ದರು. ಆ ಹನ್ನೆರಡು ಜನರೊಂದಿಗೆ ಅವರ ಮನೆಯವರಿಗೂ ಸಂಭ್ರಮ. ಯಾವುದೋ ಯಾವುದೋ ಗುರುತು ಹಿಡಿದುಕೊಂಡು ಬಂದ ಊರಿನವರೂ ತಾವೂ ಈ ಹುಡುಗರಿಗೆ ಸಮೀಪದವರೆಂದು ತೋರಿಸಿಕೊಳ್ಳಲಿಕ್ಕೆ ಸುರು ಮಾಡಿದರು. ಜೊತೆಯಲ್ಲಿಯೇ ಕೈಯ್ಯಲ್ಲಿ ಪೊಟ್ಟಣಗಳು. ಹುಡುಗರಿಗಲ್ಲ. ಅಮೆರಿಕದಲ್ಲಿರುವ ತಮ್ಮ ತಮ್ಮ ಸಂಬ೦ಧಿಕರಿಗೆ. ಕೆಲವರಂತೂ `ಆಗಲೇ ಫೋನ್ ಮಾಡಿ ಹೇಳಿದ್ದೇವೆ ನಿನ್ನ ಕೈಯ್ಯಲ್ಲಿ ಇದನ್ನು ಕಳುಹಿಸುತ್ತೇನೆ ಎಂದು. ನೀನು ಹಿಡಿದುಕೊಂಡು ಹೋದರೆ ಸಾಕು. ನೀವಿರುವಲ್ಲಿಗೇ ಬಂದು ಅವನೇ ತೆಗೆದುಕೊಂಡು ಹೋಗುತ್ತಾನೆ. ಅಲ್ಲೆಲ್ಲ ನೀನು ಅವನನ್ನು ಹುಡುಕಿಕೊಂಡು ಹೋಗುವುದೇನೂ ಬೇಡ.’ ಎಂದರು. ಏನೋ ಇವನ ಮೇಲೆ ಬಹಳ ವಿಶ್ವಾಸವಿದ್ದು ತಾವು ಅವನಿಗೇನೂ ಹೊರೆ ಹೊರಿಸಲು ತಯಾರಿಲ್ಲ ಎಂದು ಹೇಳುವವರಂತೆ. ಅಲ್ಲಿಯೂ ಆದಿಯೇ ಮುಂದಾಗಿದ್ದ. ಹೊರಡಲು ಎರಡು ದಿನವಿರುವಾಗಲೇ ಕೇಂದ್ರಕ್ಕೆ ಬಂದಿದ್ದ ಆದಿ ಅಲ್ಲಿಯೇ ಉಳಿದಿದ್ದ.

ರಾತ್ರಿ ಮಲಗಲು ಮಾತ್ರ ಮನೆಗೆ ಹೋಗುತ್ತಿದ್ದ. ಅವನೇ ಮುಂದೆ ಬಂದು ಉತ್ಸಾಹದಿಂದ ಕೈಯ್ಯಲ್ಲಿ ಪೊಟ್ಟಣಗಳನ್ನು, ಚೀಲಗಳನ್ನು ಹಿಡಿದುಕೊಂಡು ಬಂದವರನ್ನೆಲ್ಲ ಹಾಗೆಯೇ ತಿರುಗಿ ಕಳುಹಿಸಿದ್ದ. ಒಬ್ಬರಂತೂ ಅವರ ಮಗಳು ಅಳಿಯ ಅದ್ಯಾವುದೋ ಪಟ್ಟಣದಲ್ಲಿದ್ದರೆಂತಲೂ ಮಗಳಿಗೆ ಇಲ್ಲಿನ ಮಿಡಿ ಉಪ್ಪಿನ ಕಾಯಿ ಎಂದರೆ ಬಹಳ ಪ್ರೀತಿಯೆಂತಲೂ ಪ್ರತಿ ಬಾರಿ ಫೋನ್ ಮಾಡಿದಾಗಲೂ ಅದೇ ಉಪ್ಪಿನ ಕಾಯಿಯ ಬಗ್ಗೆ ಮಾತನಾಡುತ್ತಿದ್ದಳೆಂದೂ ಹಾಗಾಗಿ ಸ್ವಲ್ಪವೇ ಉಪ್ಪಿನ ಕಾಯಿ ಕಳುಹಿಸುತ್ತಿರುವುದಾಗಿಯೂ ಹೇಳಿದ್ದರು. ಅವರ ಕೈಯ್ಯಲ್ಲಿ ದೊಡ್ಡದೊಂದು ಹೊಲಿದ ಗೋಣಿ ಚೀಲ. ಅದರೊಳಗೆ ಬಂದೋಬಸ್ತಾಗಿ ಕಟ್ಟಿದ್ದ ಉಪ್ಪಿನ ಕಾಯಿ ಜಾಡಿ. ತೂಗಿದರೆ ಸುಮಾರು ಹದಿನೈದು ಕೇಜಿಯಿತ್ತು. ಆದಿ ದೊಡ್ಡದಾಗಿ ನಕ್ಕ. ಹಾಗೆಯೇ ಆ ಗೋಣಿ ಚೀಲದ ಗಂಟನ್ನು ಅವರಿಗೇ ತಿರುಗಿ ಕೊಟ್ಟ. `ಪಾಪ ನಮ್ಮ ಭಾವನ ಹೆಂಡತಿಯ ಅಣ್ಣನ ಮಗ ಅಮೆರಿಕಕ್ಕೆ ಹೋಗುತ್ತಿದ್ದಾನೆಂಬ ಸಂತೋಷದಲ್ಲಿ ಇದನ್ನು ಕಳಹಿಸುವ ಎಂದು ನೋಡಿದೆ. ಬಿಡಿ ನಮಗೆಲ್ಲ ಯಾಕೆ ಯಾರಾದರೂ ಸಹಾಯ ಮಾಡುತ್ತಾರೆ’ ಎನ್ನುತ್ತ ಧುಮುಗುಟ್ಟುತ್ತಲೇ ಹೋಗಿದ್ದರು ಅವರು.

ಕುಂದಾಪುರಕ್ಕೆ ಹೋಗಿ ಮುಂಬೈ ಟ್ರೈನು ಹಿಡಿಯುವುದೆಂದು ನಿರ್ಧಾರವಾಗಿತ್ತು. ಬಾರ್ಕೂರು ಸ್ಟೇಷನ್ನೇ ಹತ್ತಿರವಾಗಿದ್ದರೂ ಅಲ್ಲಿ ಟ್ರೈನು ನಿಲ್ಲುತ್ತಿದ್ದುದು ಎರಡೇ ನಿಮಿಷ. ಇಷ್ಟೆಲ್ಲ ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ಇಷ್ಟು ಜನ ಒಂದೇ ಬೋಗಿಗೆ ಹತ್ತಲು ಕಷ್ಟವಾಗಬಹುದೆಂದು ಆದಿಯೇ ಹೇಳಿದ್ದ. ಶಾಸ್ತ್ರೀಗಳಿಗೂ ಸರಿಯೆನಿಸಿದ್ದರಿಂದ ಒಪ್ಪಿದ್ದರು. ಐದು ಗಂಟೆಯ ಟ್ರೈನು ಹಿಡಿಯಲು ಮೂರುಗಂಟೆಗೇ ಹೊರಡಬೇಕೆಂದಿದ್ದರು.

ಇಡೀ ಗುಂಪು ಊರಿನಿಂದ ಒಂದು ದಿನ ಮುಂಚೆಯೆ ಹೊರಟು ಮುಂಬಯಿ ತಲುಪಿತು. ಟ್ರೈನು ಮುಂಬಯಿ  ತಲುಪುವಾಗ ಮಧ್ಯಾಹ್ನ ಹನ್ನೆರಡು ಗಂಟೆ. ನಾಲ್ಕು ಗಂಟೆ ತಡ. ಅದೆಲ್ಲೋ ಮಧ್ಯ ದಾರಿಯಲ್ಲಿ ಗೂಡ್ಸ್ ರೈಲೊಂದು ಹಳಿತಪ್ಪಿತ್ತಂತೆ. ಇವತ್ತೇ ಹೀಗಾಗಬೇಕೇ ಎನ್ನುತ್ತ ಸಹ ಪ್ರಯಾಣಿಕರೆಲ್ಲ ತಮ್ಮ ಕೆಲಸಗಳಿಗೆ ತಡವಾಯಿತೆಂದು ಗೊಣಗಿಕೊಂಡೇ ಗಡಿಬಿಡಿಯಲ್ಲಿ ಇಳಿದರೆ ಶಾಸ್ತ್ರೀಗಳು ಮತ್ತು ಅವರ ತಂಡದ ಹುಡುಗರು ಅಂತಹ ಅವಸರವೇನೂ ಇಲ್ಲದೆ ನಿಧಾನವಾಗಿ ಇಳಿಯಹತ್ತಿದರು. ದೇಶವೆಲ್ಲ ತಿರುಗಿದ ಗುಂಪೇ ಆದರೂ ಮೊದಲಬಾರಿಗೆ ವಿದೇಶಕ್ಕೆ ಹೊರಟವರು. ಎಲ್ಲರ ಮನಸ್ಸಿನಲ್ಲೂ ಆತಂಕವಿದ್ದೇ ಇತ್ತು. ಆದರೆ ಅವಸರವಿರಲಿಲ್ಲ. ಫ್ಲೈಟ್ ಇರುವುದು ರಾತ್ರಿ ಒಂದು ಘಂಟೆಗೆ. ಅಲ್ಲಿಯ ವರೆಗೆ ಮಾಡುವುದಾದರೂ ಏನು. ಒಬ್ಬರೋ ಇಬ್ಬರೋ ಆಗಿದ್ದರೆ ಅಲ್ಲಿಯೇ ಇದ್ದ ನೆಂಟರ ಮನೆಗೋ ಹಳೆಯ ಗೆಳೆಯರನ್ನು ನೆನಪು ಮಾಡಿಕೊಂಡೋ ಹೋಗಿ ಬರಬಹುದಿತ್ತು. ಆದರೆ ಗುಂಪೇ ಇದೆಯಲ್ಲ. ಮುಂದಾಳತ್ವದ ಜವಾಬ್ದಾರಿಯಿದ್ದ ಶಾಸ್ತ್ರೀಗಳು ಜೊತೆಯವರನ್ನು ಅವರಷ್ಟಕ್ಕೆ ಬಿಟ್ಟು ಹೋಗುವ ಹಾಗಿಲ್ಲ.

ಅಷ್ಟೂ ಜನರದ್ದು ಶೌಚಾಚಾರ, ಸ್ನಾನ ಎಲ್ಲ ಆಗಬೇಕು. ಗೊತ್ತಿಲ್ಲದ ಜಾಗದಲ್ಲಿ ಆ ಹುಡುಗರೆಲ್ಲರನ್ನು ಕಟ್ಟಿಕೊಂಡು ಹೋಟೆಲು ಗೀಟೆಲು ಎಂದು ಹುಡುಕಿಕೊಂಡು ಹೋಗುವುದಕ್ಕಿಂತ ಸ್ಟೇಶನ್ನಿನ ವೈಟಿಂಗ್ ರೂಮಿನಲ್ಲೇ ಎಲ್ಲವನ್ನೂ ಮುಗಿಸುವುದೇ ಕ್ಷೇಮಕರವಾಗಿ ಕಂಡಿತ್ತು ಶಾಸ್ತ್ರೀಗಳಿಗೆ. ಹಾಗೆಯೇ ಮಾಡಿದರು. ಕೊನೆಗೆ ಅಲ್ಲೇ ಕ್ಯಾಂಟೀನಿನಲ್ಲಿ ಕಾಫಿ ತಿಂಡಿ, ಊಟ ಎಲ್ಲ. ಗೋಡೆಗೆ ನೇತು ಹಾಕಿದ್ದ ಟೀವಿ ನೋಡುತ್ತ, ಬರ ಹೋಗುತ್ತಿದ್ದ ಜನರನ್ನು ನೋಡುತ್ತ ತಮ್ಮ ತಮ್ಮಲ್ಲೇ ಮಾತಾಡಿಕೊಂಡು ನಗಾಡಿಕೊಳ್ಳುತ್ತ ಹಾಗೂ ಹೀಗೂ ಸಂಜೆಯ ವರೆಗೆ ಅಲ್ಲಿಯೇ ಕಳೆದರು.

ಎಲ್ಲ ಮುಗಿದ ನಂತರ ಮೊದಲೇ ಟ್ರಾವೆಲ್ ಏಜಂಟ್ ಹೇಳಿದಂತೆ ಮೂರು ಗಂಟೆ ಮೊದಲೇ ಏರ್ ಪೋರ್ಟಿನಲ್ಲಿ ಇರಬೇಕೆಂದು ಬೇಗನೇ ಹೊರಟರು ಮೂರು ಟ್ಯಾಕ್ಸಿ ಮಾಡಿಕೊಂಡು. ಲಗೇಜುಗಳನ್ನು ಅರ್ದ ಢಿಕ್ಕಿಯಲ್ಲಿ ಮತ್ತು ಅರ್ಧ ಮೈಮೇಲೆ ಇಟ್ಟುಕೊಂಡು ಎಲ್ಲ ತೂರಿಕೊಂಡಿದ್ದರು.

ಏರ್ ಪೋರ್ಟಿನಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಎಲ್ಲರಿಗೂ ಬೋರ್ಡಿಂಗ್ ಪಾಸ್ ಸಿಕ್ಕಿದಾಗ ಶಾಸ್ತ್ರೀಗಳಿಗೆ ಸಮಾಧಾನವಾಗಿತ್ತು. ಅದರಲ್ಲೂ ಅವರೆಲ್ಲರ ವೇಷ ಭೂಷಣಗಳ ಪೆಟ್ಟಿಗೆಗಳನ್ನೂ ತಕರಾರಿಲ್ಲದೆ ಒಳ ತೂರಿಸಿಕೊಂಡರೆ೦ದಾಗ ಇದ್ದದ್ದೂ ನಿರಾಳ.

ತಂಡದ ಮಕ್ಕಳಿಗಂತೂ ಎಲ್ಲಿಲ್ಲದ ಉತ್ಸಾಹ. ಮೊದಲ ಬಾರಿಗೆ ಕಾರಿನಲ್ಲಿ ಪ್ರಯಾಣ. ಮುಂಬಯಿ ಪಟ್ಟಣವನ್ನು ಕಾರಿನ ಕಿಟಿಕಿಯ ಸಂದಿನಲ್ಲಿ ಇಣುಕಿ ಇಣುಕಿ ನೋಡಿ ಸಂಭ್ರಮ ಪಟ್ಟವರಿಗೆ ಈಗ ಏರೋಪ್ಲೇನು ಹತ್ತುವ ಅವಕಾಶ. ಕಿಟಿಕಿಯ ಹತ್ತಿರ ಕುಳಿತುಕೊಳ್ಳಲೆಂದು ಆತುರಪಡುತ್ತಿದ್ದ ಅವರನ್ನು ಏರ್ ಹೋಸ್ಟೆಸ್ಸುಗಳು ಬೋರ್ಡಿಂಗ್ ಪಾಸಿನಲ್ಲಿನ ಸೀಟು ನಂಬ್ರ ಪ್ರಕಾರ ಕುಳಿತು ಕೊಳ್ಳಲು ಹೇಳಿದಾಗ ತೆಪ್ಪನೆ ಕುಳಿತಿದ್ದರು. ಆಕೆ ಇಂಗ್ಲೀಷು ಹಿಂದಿ ಬೆರೆಸಿ ಮಾತಾಡುತ್ತಿದ್ದುದನ್ನು ಶಾಸ್ತಿçಗಳು ಕನ್ನಡದಲ್ಲಿ ಹೇಳಿದಾಗಲೇ ಅವರಿಗೆ ಅರ್ಥವಾದದ್ದು.

ಅಂರ‍್ರಾಷ್ಟ್ರೀಯ ಪ್ರಯಾಣದಲ್ಲಿ ವಹಿಸಬೇಕಾದ ಎಚ್ಚರ ಮತ್ತು ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮಗಳ ಬಗ್ಗೆ ಏರ್ ಹೋಸ್ಟೆಸ್ಸುಗಳು ಮಾತುಗಳಲ್ಲಿ ಹೇಳಿ ಮತ್ತೆ ಸಂಜ್ಞೆಗಳಲ್ಲಿ ವಿವರಿಸುವಾಗ ಇವರಲ್ಲಿ ಕೆಲವರಿಗೆ ನಗು. ಆದರೆ ಎಲ್ಲ ಹೊಸತೆಂಬುದರ ಹೆದರಿಕೆಯಿತ್ತಲ್ಲ. ಹಾಗಾಗಿ ಬಾಯಿ ಒತ್ತಿ ಹಿಡಿದುಕೊಂಡು ನಕ್ಕಿದ್ದರು.

ಅಮೆರಿಕೆಯಲ್ಲಿ ಇಳಿಯುವಾಗ ಏನೂ ಸಮಸ್ಯೆಯಾಗಲಿಲ್ಲ. ತಂಡದ ಹೆಚ್ಚಿನ ಸದಸ್ಯರಲ್ಲಿ ಯಾರಿಗೂ ಅಲ್ಲಿನ ಕ್ರಮಗಳ ಬಗ್ಗೆ ಐಡಿಯಾವೇ ಇರಲಿಲ್ಲವಾದುದರಿಂದ ಅಂತಹ ನಿಟ್ಟುಸಿರು ಬಿಡುವ ಪ್ರಸಂಗವೇ ಇರಲಿಲ್ಲ. ಆದರೆ ಶಾಸ್ತ್ರೀಗಳಿಗೆ ಮತ್ತು ಅಂತ್ಯನಿಗೆ ಹಾಗಲ್ಲ. ಪ್ರಯಾಣದ ತಯಾರಿ ಮಾಡುತ್ತಿರುವಾಗಲೇ ಬೇರೆ ಬೇರೆ ಕಡೆಯಿಂದ ವಿಷಯ ಸಂಗ್ರಹ ಮಾಡುವಾಗ ತಾವಾಗಿಯೇ ಸಲಹೆ ಕೊಡಲು ಬಂದವರು ಹೇಳಿದ ಮಾತುಗಳು ಅವರಲ್ಲಿ ದಿಗಿಲು ಹುಟ್ಟಿಸಿದ್ದುವು. ತಾವು ತೆಗೆದುಕೊಂಡು ಹೊರಟಿದ್ದ ವೇಷ ಭೂಷಣಗಳ ಬಗ್ಗೆ ಮುಂಬಯಿನಲ್ಲಿ ಅಲ್ಲವಾದರೂ ಅಮೆರಿಕಾದಲ್ಲಿ ಇಳಿಯುವಾಗ ತೊಂದರೆ ಕೊಟ್ಟಾರು ಎಂದು ಹೆದರಿಸಿದ್ದರು. ಅದು ಬೇರೆ ಇಂಗ್ಲಿಷ್ ಮಾತಾಡಲು ಬರದ ತಂಡದವರು. ಇಂಗ್ಲಿಷ್ ಬಂದವರಿಗೂ ಅಲ್ಲಿನವರ ಭಾಷೆ ಅರ್ಥವಾಗದೆ ಅನರ್ಥವೇ ಆಗಬಹುದು ಎಂದೂ ಹೇಳಿದ್ದರು. ಆದರೆ ಅದೇನೂ ಆಗದೆ ಕಸ್ಟಮ್ಸ್ ಸೇರಿದಂತೆ ಎಲ್ಲ ತಡೆಗಳನ್ನೂ ದಾಟಿ ಸಮಸ್ಯೆಯಿಲ್ಲದೆ ಹೊರಬಂದಾಗ ನಿರಾಳ. ಶಾಸ್ತ್ರೀಗಳಿಗಂತೂ ಯುದ್ಧವನ್ನೇ ಗೆದ್ದ ಅನುಭವ.

ಹನ್ನೆರಡು ಗಂಟೆಗಳ ಕಾಲ ಪ್ಲೇನಿನಲ್ಲಿ ಕುಳಿತು ಅರ್ಧ ನಿದ್ದೆ ಅರೆ ಎಚ್ಚರದಲ್ಲಿ ಅವರು ತೋರಿಸುತ್ತಿದ್ದ ಆ ಅರ್ಥವಾಗದ ಭಾಷೆಯ ಸಿನಿಮಾವನ್ನು ನೋಡುತ್ತ ಪ್ರಯಾಣಿಸಿದ ಹುಡುಗರ ಕಣ್ಣಲ್ಲಿ ಇನ್ನೂ ನಿದ್ದೆಯ ಮಂಪರು. ಶಾಸ್ತ್ರೀಗಳು ಮತ್ತು ಅಂತ್ಯ ಅವರನ್ನೆಲ್ಲ ತಳ್ಳಿಕೊಂಡೇ ಹೊರ ಬಂದಿದ್ದರು. ಅಲ್ಲಿ ಅವರನ್ನು ಅಮೆರಿಕಕ್ಕೆ ಆಹ್ವಾನಿಸಿದ ಮಂದಿಯ ಗುಂಪೇ ಕಾಯುತ್ತಿತ್ತು. ಅವರಲ್ಲಿ ಹೆಚ್ಚಿನವರು ಸುತ್ತ ನಿಂತ ಮಂದಿ ಏನು ತಿಳಿದುಕೊಳ್ಳಬಹುದು ಎನ್ನುವ ಚಿಂತೆಯೇ ಇಲ್ಲದೆ ಶಾಸ್ತ್ರೀಗಳ ಕಾಲು ಮುಟ್ಟಿ ನಮಸ್ಕರಿಸಿದರು. ಅಂತ್ಯ ಮತ್ತು ಇನ್ನುಳಿದವರನ್ನು ಪ್ರೀತಿಯಿಂದ ಆಲಂಗಿಸಿಕೊಳ್ಳ ಹೋದರೆ ಆ ಹುಡುಗರು ನಾಚಿಕೆಯಿಂದ ಕೆಂಪು ಕೆಂಪಾಗಿದ್ದರು.

ಮುಂದೆಲ್ಲ ಆ ಜನರೇ ಇವರ ವ್ಯವಸ್ಥೆಯನ್ನು ನೋಡಿಕೊಂಡರು. ವಿಮಾನ ನಿಲ್ದಾಣಕ್ಕೆ ಬಂದವರಲ್ಲಿ ಒಬ್ಬೊಬ್ಬರೂ ಇಬ್ಬರು ಮೂವರು ಹುಡುಗರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಅವರ ವೇಷ ಭೂಷಣಗಳೆಲ್ಲ ಒಂದೇ ಕಾರಿನಲ್ಲಿ ಶಾಸ್ತ್ರೀಯವರೊಂದಿಗೆ ಹೋದುವು.

ಮುಂದೆಲ್ಲ ಶೋಗೆ ತಯಾರಿ. ಅಲ್ಲಿಗೆ ತಲುಪಿದ ಮಾರನೆ ದಿನ ಅದೇ ಊರಿನಲ್ಲಿ ಪ್ರದರ್ಶನ. ಎರಡು ದಿನ ಕಳೆದು ಎಂಟು ನೂರು ಮೈಲಿ ದೂರದ ಇನ್ನೊಂದು ಊರಿನಲ್ಲಿ ಮತ್ತೆ ಮೂರು ದಿನ ರೆಸ್ಟ್. ವಾರಾಂತ್ಯಕ್ಕೆ ಶನಿವಾರ ಮತ್ತು ಭಾನುವಾರ ಅಲ್ಲಿಂದ ಐನೂರು ಮೈಲಿ ದೂರದ ಮತ್ತೊಂದು ಊರಿನಲ್ಲಿ. ಹೀಗೆ ಆರೆಂಟು ಕಾರ್ಯಕ್ರಮಗಳು. ಎಲ್ಲ ಮುಗಿಯುವಾಗ ಎರಡು ವಾರಗಳೇ ಕಳೆಯುತ್ತವೆ. ಅದರ ನಂತರವೇ ಅವರ ಹಿಂತಿರುಗುವ ಪ್ರಯಾಣಕ್ಕೆ ಟಿಕೆಟ್ ಬುಕ್ ಆಗಿದ್ದು.

ಮಾರನೆಯ ದಿನ ನಡೆಯಬೇಕಿದ್ದ ಶೋಗೆ ತಯಾರಿ ನಡೆಯುತ್ತಿದ್ದಂತೆಯೇ ಅಂತ್ಯ ಅಣ್ಣ ಅನಂತ ಬರುವುದನ್ನೋ ಅಥವಾ ಅವನಿಂದ ಫೋನ್ ಕರೆ ಬರುವುದನ್ನೋ ಕಾಯುತ್ತಿದ್ದ. 

ಊರಿನಿಂದ ಹೊರಡುವಾಗ ಆದಿ ಎರಡೆರಡು ಸಲ ಹೇಳಿದ್ದ. ಮ್ಯಾಪು ನೋಡಿ ಗೂಗಲ್‌ನಲ್ಲಿ ಹುಡುಕಿ `ನೀವು ಅಮೆರಿಕೆಗೆ ಹೋಗಿ ಮೊದಲು ಇಳಿದುಕೊಳ್ಳುವ ಜಾಗಕ್ಕೂ ಅನಂತ ಇರುವ ಊರಿಗೂ ಒಂದು ಐವತ್ತು ಮೈಲಿ ಆಗಬಹುದು. ನಮ್ಮ ಊರಿನಲ್ಲಿ ಅದೊಂದು ದೂರವೇ ಆದರೆ ಅಮೆರಿಕದಂತಹ ದೇಶದಲ್ಲಿ ಅದೊಂದು ದೂರವೇ ಅಲ್ಲ. ಕಾರಿನಲ್ಲಿ ಹೊರಟರೆ ಮುಕ್ಕಾಲು ಗಂಟೆಯ ಪ್ರಯಾಣ. ನಿಮ್ಮ ಕಾರ್ಯ ಕ್ರಮದ ಬಗ್ಗೆ ಅವರೆಲ್ಲರಿಗೂ ಗೊತ್ತು. ಹಾಗಾಗಿ ಖಂಡಿತ ನಿನ್ನನ್ನು ನೋಡಿಕೊಂಡು ಹೋಗಲು ಬಂದೇ ಬರುತ್ತಾನೆ’ ಎಂದಿದ್ದ. ಜೊತೆಯಲ್ಲಿಯೇ ಹೇಳಿದ್ದ. `ಅವನೊಂದಿಗೆ ಮಾತನಾಡುವಾಗ ಅಸಮಾಧಾನವನ್ನೇನೂ ತೋರಿಸಬೇಡ. ವಿಶ್ವಾಸದಿಂದ ಮಾತನಾಡು. ನಾವೆಲ್ಲರೂ ಕೇಳಿದೆವೆಂದು ಹೇಳು. ಹಣದ ಅವಶ್ಯಕತೆಯೇನಾದರೂ ಇದೆಯೇ ಎಂದೂ ಕೇಳು’ ಎಂದು. ಈಗ ಅಂತ್ಯ ಕಾತರದಿಂದ ಕಾಯುತ್ತಿದ್ದಾನೆ. ಶಾಸ್ತ್ರೀಗಳ ಹತ್ತಿರ ಮಾರನೆಯ ದಿನದ ಕಾರ್ಯಕ್ರಮದ ಬಗ್ಗೆ ಚರ್ಚಿಸುವಾಗಲೂ ಹಲ ಬಾರಿ ಹೊರ ಬಾಗಿಲಿನತ್ತ ಕಣ್ಣು ಹಾಯಿಸುತ್ತಲೇ ಇದ್ದ. ಆದರೆ ಅನಂತನ ಸುದ್ದಿಯೇ ಇಲ್ಲ.

ಅಂದು ರಾತ್ರಿಯ ಊಟ ಎಲ್ಲರಿಗೂ ಒಟ್ಟಿಗೆ. ಶಾಸ್ತ್ರೀಗಳು ತಂಗಿದ್ದವರ ಮನೆಯಲ್ಲಿಯೇ. ಉಳಿದವರೆಲ್ಲರೂ ತಮ್ಮ ತಮ್ಮ ಮನೆಯಲ್ಲಿ ಉಳಿದವರನ್ನು ಕರೆದುಕೊಂಡು ಅಲ್ಲಿಗೇ ಬಂದಿದ್ದರು. ಮಾರನೆಯ ದಿನ ಊಟ ಇನ್ನೊಬ್ಬರ ಮನೆಯಲ್ಲಿ. ಶಾಸ್ತ್ರೀಗಳಿಗೆ ಆಗಲೇ ಆಹ್ವಾನ ಕೊಟ್ಟು ಹೋಗಿ ಬಿಟ್ಟಿದ್ದರು. ದಿನದ ಕೆಲಸವೆಲ್ಲ ಮುಗಿಸಿ, ಗುಂಪಿನೊoದಿಗೆ ಕುಳಿತು ಮಾರನೆಯ ದಿನದ ಪ್ರಸಂಗದ ಬಗ್ಗೆ ಇನ್ನೊಮ್ಮೆ ಸ್ಥೂಲವಾಗಿ ಅವಲೋಕಿಸಿ ಎಲ್ಲರೂ ಮಲಗಲಿಕ್ಕೆ ಹೋದರು.

ರಾತ್ರಿ ಮಲಗಿದಾಗ ಅಂತ್ಯನಿಗೆ ಅದೇ ಕನವರಿಕೆ. ಅನಂತ ಬಂದ೦ತೆ. ಅವನೇ ಮಾತಾಡಿದಂತೆ. ತಾನು ಮಾತಾಡುವುದಕ್ಕೆ ಮುನ್ನವೇ ಮಾಯವಾದಂತೆ. ಯಾಕೆ ಬರಲಿಲ್ಲ ಅನಂತಣ್ಣ. ಅಷ್ಟೊಂದು ದ್ವೇಷವೇ. ನಾವೇನು ಮಾಡಿದ್ದೆವು ಅವನಿಗೆ. ಆದಿಯಣ್ಣ ಈಗಲೂ ಅನಂತ ಅನಂತ ಎಂದು ಎಷ್ಟು ಮೆಚ್ಚಿಗೆಯಿಂದ ಮಾತನಾಡುತ್ತಾನೆ. ಅಮ್ಮ ಎಷ್ಟೊಂದು ಸಲ ಅಲವತ್ತುಕೊಂಡಿದ್ದಾಳೆ. ಇವ ವಾರ ವಾರ ಮನೆಗೆ ಹೋದಾಗಲೆಲ್ಲ ಒಮ್ಮೆಯಾದರೂ ಅನಂತನ ವಿಷಯ ತೆಗೆಯದೆ ಅವಳ ಮಾತು ಮುಗಿಯುವುದೇ ಇಲ್ಲ. ಅಂತಹ ಸಂಬ೦ಧಗಳನ್ನೆಲ್ಲ ಯಾಕೆ ಹೀಗೆ ಒದೆಯುತ್ತಿದ್ದಾನೆ ಈ ಅನಂತ… ರಾತ್ರಿಯೆಲ್ಲ ಅದೇ ಚಿಂತೆ.  

|ಇನ್ನು ನಾಳೆಗೆ |

‍ಲೇಖಕರು Admin

June 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: