ಪಿ ಪಿ ಉಪಾಧ್ಯ
ಆ ಭಾನುವಾರ ಮನೆಗೆ ಹೋದವ ಅದೇ ವಿಷಯದ ಬಗ್ಗೆ ಮಾತನಾಡಿದ. ಅಮ್ಮನ ಕಣ್ಣು ಹನಿಗೂಡಿದ್ದೂ ಕಂಡ. ಹೆತ್ತ ಕರುಳು. ಎಷ್ಟೇ ಸಿಟ್ಟಿದ್ದರೂ ಮಗನನ್ನು ಮರೆಯಲಾದೀತೇ. ಅಂದು ಅಮೆರಿಕಕ್ಕೆ ಹೋಗುತ್ತೇನೆಂಬ ಸುದ್ದಿ ಹೇಳಲು ಬಂದು ಗಡಿಬಿಡಿಯಲ್ಲಿಯೇ ವಾಪಾಸು ಹೋದವನಿಂದ ಮತ್ತೆ ಸುದ್ದಿಯೇ ಇರಲಿಲ್ಲ. `ಅಮ್ಮ ಅನಂತ ಅಮೆರಿಕಕ್ಕೆ ಹೋಗಿ ಆಯಿತಂತೆ’ ಎಂದು ಪೇಪರಿನಲ್ಲಿ ಅವನ ಕಾಲೇಜಿನವರು ಕೊಟ್ಟ ಶುಭ ಕೋರುವ ಸಂದೇಶವನ್ನು ಕಂಡು ಆದಿ ಹೇಳಿದ್ದು ಮತ್ತೆ ಹೈಸ್ಕೂಲಿನ ಮೇಷ್ಟ್ರುಗಳು ಅದೇ ಪೇಪರುಗಳನ್ನು ಹಿಡಿದುಕೊಂಡು ಮನೆಗೆ ಬಂದು ಸಿಹಿ ತಿಂದುಕೊ೦ಡು ಹೋದದ್ದು ಅಷ್ಟೆ. ಮುಂದೆ ಎಲ್ಲಾದರೊಮ್ಮೆ ಆದಿಯೇ ಅಮ್ಮ ಬಡಿಸಿದ ಊಟ ಮಾಡುತ್ತ `ಅಲ್ಲ ಅಮ್ಮ ಕೆಸುವಿನ ಪತ್ರೊಡೆಯೆಂದರೆ ನಮ್ಮ ಅನಂತನಿಗೆ ಪ್ರಾಣ ಅಲ್ಲವಾ’ ಎಂದು ನೆನಪು ಮಾಡಿಕೊಡುತ್ತಿದ್ದುದು.
`ಅಲ್ಲ ಮಗಾ.. ಹೋಗಿ ಎಷ್ಟು ದಿನಗಳಾದುವು.. ಒಂದು ಫೋನ್ ಮಾಡುವುದು ಬಿಡು.. ಕಾಗದ ಬರೆಯಲಿಕ್ಕೂ ಆಗಲಿಲ್ಲವೇ..’
`ಅಲ್ಲ ಅಮ್ಮ ಅಲ್ಲೆಲ್ಲ ಇಲ್ಲಿನ ಕಾಲೇಜುಗಳಂತಲ್ಲ.. ಕಲಿಯುವುದರ ನಡುವೆ ಪುರುಸೊತ್ತು ಮಾಡಿಕೊಳ್ಳುವುದೇ ಕಷ್ಟವಂತೆ… ಅದು ಬೇರೆ ನಮ್ಮ ಅನಂತ ಕಲಿಯುವುದರಲ್ಲಿ ಯಾವಾಗಲೂ ಮುಂದೆ. ಅಂಥವನಿಗೆ ಅದಕ್ಕೆಲ್ಲ ಎಲ್ಲಿ ಪುರುಸೊತ್ತು ಸಿಗಬೇಕು ಹೇಳು..’
ಆ ತಾಯಿ ಮುಖ ತಿರುಗಿಸಿ ಕಣ್ಣೊರೆಸಿಕೊಳ್ಳುತ್ತಿದ್ದಳು. ಅನಂತನಿ೦ದ ಸುದ್ದಿಯಿಲ್ಲ ಎನ್ನುವುದು ಒಂದಾದರೆ ಅವನಿಂದ ಅಷ್ಟು ತಿರಸ್ಕಾರಕ್ಕೊಳಗಾಗಿಯೂ ಇನ್ನೂ ಆದಿ ಅವನ ಬಗ್ಗೆ ಅದೇ ಪ್ರೀತಿ ಇಟ್ಟುಕೊಂಡಿದ್ದಾನಲ್ಲ ಎನ್ನುವುದು ಇನ್ನೊಂದು.
ಈಗ ಅಂತ್ಯ ಅದನ್ನೇ ಪುನಃ ಎತ್ತಿದ್ದಾನೆ. ತನ್ನ ಅಮೇರಿಕಾ ಪ್ರವಾಸದ ವೇಳೆ ಅನಂತನಿರುವ ಊರಿನ ಹತ್ತಿರದ ಊರಿನಲ್ಲಿಯೇ ತಮ್ಮ ಕಾರ್ಯಕ್ರಮ ಇರುವುದರಿಂದ ತಾನು ಏನಾದರೂ ಮಾಡಿ ಅವನನ್ನು ಭೇಟಿ ಮಾಡಿಕೊಂಡು ಬರುತ್ತೇನೆ ಎಂದ.

`ಮಗು ಹಾಗೆ ಹೋಗುವುದಾದರೆ ಒಂದಿಷ್ಟು ಚಕ್ಕುಲಿ ಕೋಡುಬಳೆ ಮಾಡಿಕೊಡುತ್ತೇನೆ ತೆಗೆದುಕೊಂಡು ಹೋಗಿ ಅವನಿಗೆ ಕೊಡು. ಇಲ್ಲಿ ಮಂಗಳೂರಿನಲ್ಲಿ ಇರುವಾಗ ಪ್ರತಿ ಬಾರಿ ಬಂದವನೂ ಬರಿದೇ ವಾಪಾಸು ಹೋದದ್ದೇ ಇಲ್ಲ. ಡಬ್ಬ ತುಂಬ ತುಂಬಿಸಿಕೊ೦ಡೇ ಹೋಗುತ್ತಿದ್ದ’
`ಅಮ್ಮ ಅಮೇರಿಕಕ್ಕೆ ಹೋಗುವುದು ಮಂಗಳೂರಿಗೆ ಹೋದಷ್ಟು ಸುಲಭವಲ್ಲ. ಹಾಗೆಲ್ಲ ನಿನ್ನ ಕೋಡುಬಳೆ ಚಕ್ಕುಲಿಗಳನ್ನು ತೆಗೆದುಕೊಂಡು ಹೋಗಲು ಬಿಡುವುದೂ ಇಲ್ಲ. ಅದು ಬೇರೆ ವಿಮಾನದಲ್ಲಿ ಹೋಗುವವರಿಗೆ ಒಬ್ಬೊಬ್ಬರಿಗೇ ಇಂತಿಷ್ಟೇ ತೂಕದ ಹೊರೆಯನ್ನು ತೆಗೆದುಕೊಂಡು ಹೋಗಬಹುದು ಎಂದಿದೆ. ಇವರ ಬಟ್ಟೆ ಬರೆ ವೇಷ ಭೂಷಣಗಳದ್ದೇ ಸಾಕಷ್ಟು ಹೊರೆಯಿರುತ್ತದೆ. ಅದರ ಜೊತೆಗೆ ನೀನು ಕೊಡುವುದೆಲ್ಲ ಹೇಗೆ ತೆಗೆದುಕೊಂಡು ಹೋಗುವುದು..’ ಎಂದ ಆದಿ.
ಆದಿ ಊರಲ್ಲೇ ಇದ್ದು ಏನೆಲ್ಲ ತಿಳಿದುಕೊಂಡಿದ್ದಾನಲ್ಲ ಎಂದು ಅಂತ್ಯ ಅಂದುಕೊ೦ಡ. ಅಮ್ಮ ಹೇಳಿದೊಡನೆಯೇ ಅವನಿಗೂ ಅನ್ನಿಸಿದ್ದಿತ್ತು ಅವಳು ಹೇಳಿದ್ದನ್ನು ತೆಗೆದುಕೊಂಡು ಹೋದರೂ ಹೋಗಬಹುದೇನೋ ಎಂದು. ಆದರೆ ಆದಿಯ ಮಾತು ಕೇಳಿ ಪರಿಸ್ಥಿತಿ ಅರ್ಥವಾಗಿತ್ತು. ಅಮ್ಮನೂ `ಇಷ್ಟೆಲ್ಲ ರಗಳೆ ಇದೆಯಾ ಮಗಾ..’ ಎಂದು ರಾಗವೆಳೆಯುತ್ತ ತನ್ನ ಆಲೋಚನೆಯನ್ನು ಅಲ್ಲಿಗೇ ಬಿಟ್ಟಳು. ಅಂತ್ಯನಾದರೂ ಅಣ್ಣನನ್ನು ನೋಡಿಕೊಂಡು ಬರುತ್ತಾನಲ್ಲ ಎನ್ನುವುದೇ ಸಮಾಧಾನ ಆ ತಾಯಿಗೆ..
`ಮಗೂ ಕೇಳು ಅವನನ್ನು. ಅಪ್ಪ ಅಮ್ಮನನ್ನು ಮರೆತೇ ಬಿಟ್ಟೆಯಾ ಎಂದು… ಒಂದು ಕಾಗದವನ್ನಾದರೂ ಬರೆಯಲು ಹೇಳು.’ ಅಂತ್ಯನೊ೦ದಿಗೆ ಇಷ್ಟು ಹೇಳಿ ಮುಂದೆ ತನ್ನೊಂದಿಗೇ ಹೇಳಿಕೊಳ್ಳುವವಳಂತೆ `ಅಲ್ಲ ಇಲ್ಲಿದ್ದಾಗಲೂ ಎಲ್ಲಿ ಪ್ರೀತಿ ಇಟ್ಟುಕೊಂಡಿದ್ದ ಅವನು. ದಿನ ಬೆಳಗಾದರೆ ಈ ಅಣ್ಣನೊಂದಿಗೆ ಜಗಳವಾಡುವುದೇ ಆಗಿತ್ತು ಅವನ ಕೆಲಸ. ಅಂತಹುದರಲ್ಲಿ ದೇಶವನ್ನೇ ಬಿಟ್ಟು ಹೋದ ಮೇಲೆಯೂ ಅವನಲ್ಲಿ ಎಲ್ಲಿ ಉಳಿದೀತು ನಮ್ಮೆಲ್ಲರ ಬಗ್ಗೆ ಪ್ರೀತಿ’ ಎಂದಳು. ಕೇಳಿಸಿಕೊಂಡ ಆದಿಗೆ ಸಂಕಟ.
ಆದರೂ ಆದಿ ಹೇಳಿದ `ನೋಡು ಅಂತ್ಯ. ಹೇಗಾದರೂ ವಿಷಯ ತಿಳಿದುಕೊಂಡು ಅವನೇ ನಿಮ್ಮ ಕಾರ್ಯಕ್ರಮಕ್ಕೆ ಬಂದರೆ ಆಯ್ತಲ್ಲ. ಇಲ್ಲದಿದ್ದರೆ ನೀನಾದರೂ ಪರುಸೊತ್ತು ಮಾಡಿಕೊಂಡು ಹೋಗಿ ನೋಡಿಕೊಂಡು ಬಾ. ಅಮ್ಮ, ಅಪ್ಪ ತುಂಬಾ ಕೇಳುತ್ತಿದ್ದಾರೆ ಎಂದು ಹೇಳು. ನನ್ನ ಬಗ್ಗೆ ಏನೂ ಹೇಳಲು ಹೋಗಬೇಡ. ಇದ್ದದ್ದೂ ಸಿಟ್ಟು ಮಾಡಿಕೊಂಡಾನು’ ಎಂದು. ಅಂತ್ಯನಿಗೆ ಅಣ್ಣ ಒಳಗಿಟ್ಟುಕೊಂಡ ಸಂಕಟವನ್ನು ನೋಡಿ ನೋವು. ಆದರೆ ಅನಂತ ಹಾಗಿನವನೇ. ಇದೆಲ್ಲ ಒಂದೂ ಅರ್ಥವಾಗುವುದಿಲ್ಲ ಅವನಿಗೆ. ಅರ್ಥವಾದರೂ ಬದಲಾಗುವಂಥವನಲ್ಲ. ಆದಿಗೆ ನೋವುಂಟಾಗುತ್ತದೆಯೆ೦ದಾದರೆ ಅದನ್ನೇ ಇನ್ನೂ ಹೆಚ್ಚು ಮಾಡಿಯಾನು.
ಮಾತನಾಡುತ್ತ ಅಮ್ಮ ಬಡಿಸಿದ್ದನ್ನು ಊಟ ಮಾಡಿಕೊಂಡು ತರಬೇತಿ ಕೇಂದ್ರಕ್ಕೆ ಮರಳಿದ ಅಂತ್ಯ.
ಹಗಲೆಲ್ಲ ತರಬೇತಿ. ಜೊತೆ ಜೊತೆಯಲ್ಲೇ ಬಟ್ಟೆ ಬರೆಗಳ ಪ್ಯಾಕಿಂಗ್. ಅವರವರ ಪಾತ್ರಕ್ಕೆ ಬೇಕಾದ ವೇಷ ಭೂಷಣಗಳನ್ನೂ ಹೊಂದಿಸಿಕೊಳ್ಳಬೇಕು. ಮೊದಲೇ ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರು ಶಾಸ್ತ್ರೀಗಳು ಮತ್ತು ಪ್ರೊಫೆಸರರು. ಒಬ್ಬೊಬ್ಬರು ಇಂತಿಷ್ಟೇ ತೂಕದ ಲಗೇಜನ್ನು ತೆಗೆದುಕೊಂಡು ಹೋಗಬಹುದು ಎಂದು. ಅದು ಅವರ ವೇಷ ಭೂಷಣಗಳ ಸಾಮಗ್ರಿಯ ತೂಕವನ್ನೂ ಸೇರಿ. ಅನುಕೂಲಕ್ಕೆಂದು ಒಂದು ತೂಕ ನೋಡುವ ಯಂತ್ರವನ್ನೂ ತಂದಿಟ್ಟುಕೊ೦ಡಿದ್ದರು. ಅದೂ ಆದಿಯ ಆಲೋಚನೆಯೇ. ಅವರೆಲ್ಲ ಪ್ಯಾಕಿಂಗ್ ಮಾಡಲು ಪ್ರಾರಂಭಿಸುತ್ತಿದ್ದಾರೆ೦ದಾದ ಕೂಡಲೇ ಎಲ್ಲಿಂದಲೋ ಒಂದು ತೂಕದ ಯಂತ್ರವನ್ನು ಕೇಂದ್ರಕ್ಕೆ ತಂದು ಕೊಟ್ಟಿದ್ದ. `ನೋಡಿ ನೀವು ಹೊರುವಷ್ಟು ಹೊರೆಯನ್ನು ವಿಮಾನದಲ್ಲಿ ಬಿಡುವುದಿಲ್ಲ. ಒಬ್ಬೊಬ್ಬರಿಗೆ ಕೈಯ್ಯಲ್ಲಿ ಹಿಡಿದು ಕೊಳ್ಳುವ ಚೀಲವಲ್ಲದೆ ಬರೀ ಇಪ್ಪತ್ತು ಕೇಜಿಯಷ್ಟು ಮಾತ್ರ ತೆಗೆದುಕೊಂಡು ಹೋಗಲು ಬಿಡುತ್ತಾರೆ. ಅದಕ್ಕೇ ನೋಡಿಕೊಂಡು ಪ್ಯಾಕ್ ಮಾಡಿಕೊಳ್ಳಿ ಎಂದು ಈ ಮೆಶೀನು’ ಎಂದಿದ್ದ ಅಲ್ಲಿಯೂ ಅಣ್ಣನ ಮುಂದಾಲೋಚನೆ ನೋಡಿ ಅಂತ್ಯ ಸಂಭ್ರಮ ಪಟ್ಟಿದ್ದ.
ಇದೆಲ್ಲ ನಿರ್ಧಾರವಾಗುತ್ತಿದ್ದಂತೆಯೇ ಊರಿನ ಕೆಲವರು ಸೇರಿ ತಮ್ಮವರೇ ಆದ ಹುಡುಗರು ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಅದೂ ತಮ್ಮೂರ ಕಲೆಯನ್ನು ಅಲ್ಲಿಯೂ ಪ್ರದರ್ಶಿಸಲಿಕ್ಕಿದ್ದಾರೆ. ಅಂದ ಮೇಲೆ ಅವರನ್ನು ಬೀಳ್ಕೊಡುವ ಸಲುವಾಗಿ ಒಂದು ಸಮಾರಂಭವನ್ನು ಏರ್ಪಡಿಸುವುದು ಬೇಡವೇ ಎಂದು ತಮ್ಮಲ್ಲೇ ಮಾತನಾಡಿಕೊಂಡು ಒಂದು ಚಿಕ್ಕ ಸಮಾರಂಭವನ್ನು ಏರ್ಪಡಿಸುವುದೆಂದು ನಿರ್ಧರಿಸಿದರು. ಆ ಬಗ್ಗೆ ಮುಂದಾಳತ್ವ ವಹಿಸಿದವರಲ್ಲಿ ತಂಡದಲ್ಲಿದ್ದ ಕೆಲವು ಮಕ್ಕಳ ಸಂಬ೦ಧಿಕರೂ ಇದ್ದರು. ಕೆಲವರ ತಂದೆ ತಾಯಂದಿರೂ. ಸಂಬ೦ಧಕ್ಕಿ೦ತ ಹೆಚ್ಚು ಅವರಿಗೆ ಯಕ್ಷಗಾನದ ಬಗ್ಗೆ ಇದ್ದ ಪ್ರೀತಿ. ಹಾಗೆಂದು ಅವರೆಲ್ಲ ಕಲೆಯಲ್ಲಿ ಪ್ರವೀಣರೆಂದೇನೂ ಅಲ್ಲ. ಆದರೆ ರಾತ್ರಿಯಿಡೀ ನಡೆಯುವ ಬಯಲಾಟ ನೋಡುತ್ತಿರುವಾಗ ಬೆಳಗಿನ ಜಾವದ ಮಂಪರಿನಲ್ಲೂ ವೇಷದಾರಿಯೊಬ್ಬ ತಪ್ಪು ಹೆಜ್ಜೆ ಹಾಕಿದರೆ ಕೂಡಲೇ ಕಂಡು ಹಿಡಿದಾರು ಅಥವಾ ಭಾಗವತರು ರಾಗ ಬದಲಿಸಿದರೂ ಕಂಡು ಹಿಡಿದಾರು. ಅಂಥವರ `ಯಕ್ಷಗಾನವೆಂದರೆ ತಮ್ಮದೇ’ ಎನ್ನುವ ಯಜಮಾನಿಕೆಯ ಭಾವವೂ ಇದ್ದಿರಬಹುದು. ಅಂತೂ ತಮ್ಮೂರ ತಂಡ ಹೊರದೇಶಕ್ಕೆ ಹೋಗುತ್ತಿದೆಯೆಂದಾಗ ತಾವು ಆ ಸಂಭ್ರಮದಲ್ಲಿ ಪಾಲ್ಗೊಳ್ಳದಿದ್ದರೆ ಸರಿಯಾಗದು ಎಂದು ಅನಿಸಿದ್ದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡರು.

ಹೊರಡುವ ದಿನ ಟ್ರೈನು ಹಿಡಿಯಲು ತಂಡದವರು ಸಂಜೆ ಮೂರಕ್ಕೇ ಊರು ಬಿಡಬೇಕು ಎನ್ನುವುದು ಗೊತ್ತಾದಾಗ ತಮ್ಮ ಕಾರ್ಯಕ್ರಮವನ್ನು ಆ ದಿನವಂತೂ ಇಟ್ಟುಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ ಎನ್ನಿಸಿದ್ದರಿಂದ ಮುನ್ನಾದಿನವೇ ಏರ್ಪಡಿಸುವುದೆಂದೂ ನಿರ್ಧರಿಸಿದರು.
ಆ ಬಗ್ಗೆ ಶಾಸ್ತ್ರೀಗಳನ್ನು ಭೇಟಿ ಮಾಡಿ ಎರಡು ದಿನ ಮುಂದಾಗಿಯೇ ಮಾತನಾಡಿದಾಗ ‘ಇದೆಲ್ಲ ಯಾಕೆ ಈಗ.. ತರಬೇತಿ ಅದೂ ಇದೂ ಎಂದು ಎಲ್ಲರೂ ಗಡಿಬಿಡಿಯಲ್ಲಿದ್ದೇವೆ’ ಎಂದರೂ ಊರ ಜನರ ಬಯಕೆಯನ್ನು ಒಂದೇ ಏಟಿಗೆ ತಳ್ಳಿಹಾಕುವ ಹಾಗೂ ಇಲ್ಲ ಎನ್ನುವುದು ಅವರಿಗೂ ಗೊತ್ತಿತ್ತು. ಅದೂ ಅವರು `ಯಕ್ಷಗಾನದಂತಹ ನಮ್ಮೂರ ಕಲೆಯನ್ನು ವಿದೇಶಕ್ಕೆ ಕೊಂಡೊಯ್ಯುತ್ತಿರುವ ನಿಮ್ಮನ್ನು ಹಾಗೆಯೇ ಬಿಡುವುದೇ’ ಎಂದು ಕೇಳಿದಾಗಂತೂ ನಿರುತ್ತರರಾಗಿದ್ದರು. ಒಳಗೊಳಗೇ ತಮ್ಮ ಸಾಧನೆಯನ್ನು ಊರವರು ಈಗಲಾದರೂ ಗುರುತಿಸಿದರಲ್ಲ ಎನ್ನುವ ಸಮಾಧಾನವೂ ಇರಬಹುದು. ಆದರೂ ತಮ್ಮ ಈ ಸಾಹಸದಲ್ಲಿ ಬೆನ್ನಿಗೆ ನಿಂತು ಎಲ್ಲ ಸಹಾಯ ಮಾಡುತ್ತಿದ್ದ ಆದಿಯನ್ನೊಂದು ಮಾತು ಕೇಳಬೇಕೆನಿಸಿತು. ಹಾಗೆಯೇ ಹೇಳಿದರು ಕೂಡ. `ಇಲ್ಲ ಸ್ವಾಮೀ.. ಆದಿಯವರನ್ನು ಕೇಳಿಯೇ ನಿಮ್ಮ ಹತ್ತಿರ ಬಂದದ್ದು. ಅವರೇ ನಿಮ್ಮ ಹತ್ತಿರ ಕಳುಹಿಸಿದ್ದು’ ಎಂದರು ಬಂದವರು. ಅಷ್ಟರಲ್ಲಿ ಅಲ್ಲಿಯೇ ಇದ್ದ ಆದಿಯೂ ಅವರನ್ನು ಸೇರಿಕೊಂಡ ಮತ್ತು `ಅಂತಹ ದೊಡ್ಡ ಕಾರ್ಯಕ್ರಮವೇನೂ ಬೇಡ. ಇಲ್ಲೇ ಕೇಂದ್ರದ ಆವರಣದಲ್ಲಿಯೇ ಒಂದರ್ಧ ಗಂಟೆಯಲ್ಲಿ ಮುಗಿಸೋಣ’ ಎಂದರೆ ಅದಕ್ಕೂ ಸೈ ಎಂದರು.
ಅಂತೂ ಹೊರಡುವ ಮುನ್ನಾ ದಿನ ಸಂಜೆ ಒಂದು ಕಾರ್ಯಕ್ರಮ. ಊರ ಗಣ್ಯರನ್ನು ಕರೆಸಿ ತಂಡವನ್ನು ಹರಸಿ ಬೀಳ್ಕೊಡುವ ಕಾರ್ಯಕ್ರಮ.
ಸಂಜೆ ಆರು ಗಂಟೆಗೆ ಸುರುವಾದ ಕಾರ್ಯಕ್ರಮದಲ್ಲಿ ಊರಿನ ನಾಲ್ಕೈದು ಮಂದಿ ಗಣ್ಯರನ್ನು ಕರೆಸಿದ್ದರು. ಟೌನ್ ಪಂಚಾಯಿತಿ ಛೆರ್ಮನ್, ಮಾಜೀ ಎಮ್ಮೆಲ್ಲೆಗಳನ್ನೊಳಗೊಂಡು ಊರ ಸಹಕಾರೀ ಬ್ಯಾಂಕಿನ ಚೇರ್ಮನ್ನರೂ ಸೇರಿದಂತೆ ಗಣ್ಯರೆಲ್ಲ ಸೇರಿದ್ದರು. ಎಲ್ಲರದ್ದೂ ಒಂದೇ ಮಾತು ತಮ್ಮೂರಿಗೆ ಸಂದ ಮರ್ಯಾದೆ. ತಮ್ಮೂರ ಜನಪದ ಕಲೆಯೊಂದನ್ನು ವಿದೇಶಕ್ಕೆ ಕೊಂಡೊಯ್ಯುವ ಅವಕಾಶ. ಇದೆಲ್ಲದಕ್ಕೆ ಶಾಸ್ತ್ರೀಗಳ ಅವಿರತ ಶ್ರಮವೇ ಕಾರಣ ಎಂದರು. ಶುಭ ಹಾರೈಕೆಗಳಿಗೆ ಉತ್ತರವಾಗಿ ವಿದ್ಯಾರ್ಥಿಗಳ ಪರವಾಗಿ ಅಂತ್ಯ ಉತ್ತರಿಸುವುದೆಂದು ಶಾಸ್ತ್ರೀಗಳೇ ಹೇಳಿದ್ದರು. ಅಂತ್ಯ ಮಾತನಾಡುತ್ತ ತನ್ನ ಸ್ಪಷ್ಟ ಭಾಷೆಯಲ್ಲಿ ಊರವರ ಅಭಿಮಾನಕ್ಕೆ ವಂದಿಸುತ್ತ ಶಾಸ್ತ್ರೀಗಳ ಪ್ರೋತ್ಸಾಹವನ್ನು ಹೃದಯತುಂಬಿ ನೆನೆದ. ಗಣೇಶ ಪ್ರೊಫೆಸರರ ಉತ್ತೇಜನ ಮತ್ತು ಸಹಕಾರವನ್ನು ಮನಃಪೂರ್ವಕವಾಗಿ ಸ್ಮರಿಸಿದ ಅವ ಮಾತು ಮುಗಿಸುವ ಮುನ್ನ ಅಣ್ಣ ಆದಿಯ ಪ್ರಯತ್ನ, ನಾಲ್ಕುದಿನಗಳಿಂದ ತಮ್ಮ ಜೊತೆಯಲ್ಲಿಯೇ ಇದ್ದು ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಾ ಇದ್ದುದನ್ನು ಹೇಳಿ ಬಹುಶಃ ಅವನೊಬ್ಬನಿಲ್ಲದಿದ್ದರೆ ತಮ್ಮ ಈ ಕೆಲಸ ಇಷ್ಟು ಸುಲಭವಾಗಿ ಆಗುತ್ತಲೇ ಇರಲಿಲ್ಲ’ ಎಂದ.
ಶಾಸ್ತ್ರೀಗಳು ಎಷ್ಟು ಹೇಳಿದರೂ ಸ್ಟೇಜಿನ ಮೇಲೆ ಬಂದು ಕೂರಲು ಒಪ್ಪದ ಆದಿ ಅಲ್ಲೇ ಸಭೆಯ ಹಿಂಭಾಗದಲ್ಲಿ ಸುತ್ತುತ್ತ ಇದ್ದವ ಎರಡು ಬಾರಿಯಾದರೂ ಕಣ್ಣೊರೆಸಿಕೊಂಡ. ಕೊನೆಯಲ್ಲಿ ಮಾತನಾಡಿದ ಶಾಸ್ತ್ರೀಗಳೂ ಆದಿಯ ಬಗ್ಗೆ ಅದೇ ಮಾತುಗಳನ್ನು ಹೇಳಿದರು.
|ಇನ್ನು ನಾಳೆಗೆ |






0 Comments