ಪಿ ಪಿ ಉಪಾಧ್ಯ ಸರಣಿ ಕಥೆ 34 – ಆದಿಗೋ ಇನ್ನೊಬ್ಬ ಸಿಕ್ಕಿದ ಸಂಭ್ರಮ…

ಪಿ ಪಿ ಉಪಾಧ್ಯ

34

ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ...

ಆದಿ ಮನೆಗೆ ಬರುವಾಗ ಏನೋ ರಾದ್ಧಾಂತವೇ ನಡೆದ ಹಾಗಿತ್ತು. ಬಾಗಿಲಿಗೆ ಬಂದು ಇನ್ನೇನು ಒಳಗೆ ಕಾಲಿಡಬೇಕು ಎನ್ನುವಾಗ ಒಳಗಿನಿಂದ ಗಲಾಟೆ ಕೇಳಿಸುತ್ತಿತ್ತು. ಒಂದು ಸ್ವರ ಅಮ್ಮನದ್ದು. ಇನ್ನೊಂದು ಅನಂತನದ್ದರ ಹಾಗೆ ಕಂಡಿತ್ತು. ಎಂದೂ ಇಲ್ಲದಂತೆ ಅಮ್ಮ ಗಟ್ಟಿ ಸ್ವರದಲ್ಲಿ ಮಾತನಾಡುತ್ತಿದ್ದಳು. ಅಲ್ಲ ಅಂತಹದ್ದೇನೋ ಮಾಡಿದ್ದಾನೆ ಅವನು. ಯಾಕೆ ಅವನನ್ನು ದ್ವೇಷಿಸುತ್ತೀಯ’ ಅಮ್ಮನ ಧ್ವನಿ. ಏನು ಮಾಡಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ನನಗೆ ಅವನನ್ನು ಕಂಡರೆ ಆಗದು ಅಷ್ಟೆ’ ಅನಂತ ಏರು ಸ್ವರದಲ್ಲಿ ಹೇಳುತ್ತಿದ್ದ.

ಒಂದು ಡಿಗ್ರಿಯನ್ನೂ ಮಾಡಿಕೊಳ್ಳದ ಅವನನ್ನು ನನ್ನ ಅಣ್ಣ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ ನನಗೆ. ಇಲ್ಲಿ ಹಳ್ಳಿಯಲ್ಲಿ ನಾಲ್ಕು ಪುಂಡರನ್ನು ಕಟ್ಟಿಕೊಂಡು ತಾನೇ ದೊಡ್ಡ ಹೀರೋ ಎಂದುಕೊ೦ಡೊಡನೆ ಆಯ್ತೇ.. ನಾಳೆ ನಾನು ದೊಡ್ಡ ಎಂಜಿನಿಯರ್ ಆಗಿ ದೊಡ್ಡ ದೊಡ್ಡವರ ಜೊತೆಗೆಲ್ಲ ಓಡಾಡುವಾಗ ಇವ ಎಲ್ಲಿಯಾದರೂ ತಾನು ನನ್ನ ಅಣ್ಣ ಎಂದುಕೊ೦ಡು ಬಂದರೆ..’ ಅವ ಮಾತನ್ನಿನ್ನೂ ಮುಗಿಸಿರಲಿಲ್ಲ. ಅಮ್ಮ ನಡುವೆಯೇ ಗರ್ಜಿಸಿದ್ದಳು.ಸಾಕು ಬಾಯಿ ಮುಚ್ಚು. ನೀನೆಷ್ಟೇ ದೊಡ್ಡ ಎಂಜಿನಿಯರ್ ಆದರೂ ಅವನ ಮಟ್ಟಕ್ಕೆ ಬೆಳೆಯಲಾರೆ. ಆದಿ ಎಂದರೆ ಒಂದು ಅಪ್ಪಟ ಚಿನ್ನ…’

ಆ ಚಿನ್ನ ನಿನ್ನೊಡನೆಯೇ ಇರಲಿ. ಹೊರಗೆಲ್ಲಿಯೂ ಬಿಡಬೇಡ. ಬಣ್ಣಗೇಡಾದೀತು’. ಅನಂತನ ಧ್ವನಿ ಕರ್ಕಶವಾಗಿತ್ತು. ಆಗಲೇ ಹೊರಟಿದ್ದಿರಬೇಕು ಅನಂತ.ಹಾಳಾಗಿ ಹೋಗು’ ಎನ್ನುತ್ತಿದ್ದ ಅಮ್ಮನ ಶಾಪ ತೆಗೆದುಕೊಂಡು ಹೊರಟವ ಹೆಗಲಿಗೇರಿಸಿದ್ದ ಚೀಲವನ್ನು ಹಾಗೆಯೇ ಹಿಡಿದುಕೊಂಡು ಹೊರಬಂದಿದ್ದ. ಬಾಗಿಲಿನ ಹೊರಗೆ ನಿಂತಿದ್ದ ಆದಿಯತ್ತ ದೃಷ್ಟಿಯನ್ನೂ ಹರಿಸದೆ ಹೊರಟೇ ಹೋಗಿದ್ದ.

ಒಳಬಂದರೆ ಅಮ್ಮ ಮುಸು ಮುಸು ಅಳುತ್ತಿದ್ದಳು. ನಿಧಾನವಾಗಿ ಯಾಕೆ ಅಮ್ಮ ಯಾಕೆ ಅನಂತ ಹಾಗೆಯೇ ಹೊರಟು ಹೋದ...’ ಹೋದರೆ ಹೋಗಲಿ ಬಿಡು. ಅವನ ಹಠ ಅವನಿಗೇ ಹಾಳು’ ಆದಿ ಸುಮ್ಮನೇ ನಿಂತ. ಅಮ್ಮನೇ ಮುಂದುವರಿಸಿದ್ದಳು. ಅದೇನೋ ಕಾಲೇಜಿಗೆ ನಾಲ್ಕು ದಿನ ರಜೆಯೆಂದು ಊರಿಗೆ ಬಂದದ್ದ೦ತೆ. ಏನೋ ಬಸ್ಸು ತಡವಾಗಿ ಇಲ್ಲಿಗೆ ಸಂಜೆಯೇ ಬರಬೇಕಾಗಿದ್ದವ ಬರುವಾಗ ರಾತ್ರಿಯಾಗಿತ್ತು. ನಾವೆಲ್ಲ ಅಲ್ಲಿ ಕಾರ್ಯಕ್ರಮದಲ್ಲಿದ್ದೆವಲ್ಲ. ಇಲ್ಲಿ ಬಂದವನೇ ಅಡಿಗೆಯವಳ ಹತ್ತಿರ ಜಗಳ ಮಾಡಿದ್ದಾನೆ. ಆಡಬಾರದ ಮಾತನ್ನೆಲ್ಲ ಆಡಿದ್ದಾನೆ. ನಾನು ಬಂದೊಡನೆಯೇ ಅಡಿಗೆಯವಳು ಅದನ್ನೆಲ್ಲ ಹೇಳುತ್ತಿದ್ದಂತೆಯೇ ಒಳಗಿನಿಂದ ಬಂದ ಅವ ನನ್ನೊಡನೆಯೇ ಜಗಳ ತೆಗೆದ.

ಇಂದಿನ ನಿಮ್ಮ ಕಾರ್ಯಕ್ರಮದ ಬಗ್ಗೆ ಬಾಯಿಗೆ ಬಂದದ್ದನ್ನೆಲ್ಲ ಹೇಳಿದ. ಬೇಕಿತ್ತಾ ಇವನಿಗೆ ಇದೆಲ್ಲ. ನಾಲ್ಕು ತುಂಟ ಹುಡುಗರನ್ನು ಕಟ್ಟಿಕೊಂಡು ಕೈಯಿಂದ ತಾನೇ ದುಡ್ಡು ಕೊಟ್ಟು ಸನ್ಮಾನ ಮಾಡಿಸಿಕೊಳ್ಳುವ ಇಂಥ ಚಪಲ ಇವನಿಗೆ ಯಾಕೆ. ಊರೆಲ್ಲ ಅದನ್ನೇ ಹೇಳಿಕೊಂಡು ನಗುತ್ತಿದ್ದಾರೆ’ ಎಂದು ನನ್ನೊಡನೆಯೇ ಹೇಳಿದ. ಇವತ್ತಿನ ಕಾರ್ಯಕ್ರಮದಲ್ಲಿ ನಾನೇ ಕಣ್ಣಾರೆ ಕಂಡದ್ದನ್ನು ಹೇಳಿದರೆ ಅದಕ್ಕೂ ಏನೋ ತನ್ನದೇ ಹೇಳಲು ಸುರು ಮಾಡಿದ. ನನಗೂ ಸಿಟ್ಟು ತಡೆಯಲಿಲ್ಲ. ಹೇಳುವಷ್ಟು ಹೇಳಿದೆ. ಕೇಳಲಿಲ್ಲ. ಇನ್ನೇನು ಎರಡು ಬಾರಿಸಿಯೇ ಬಿಡುತ್ತಿದ್ದೆನೋ ಏನೋ. ಅಷ್ಟರಲ್ಲಿ ನೀನು ಬಂದೆ’ ಅಮ್ಮ ಅವಳಷ್ಟಕ್ಕೆ ಎಂಬ೦ತೆ ಹೇಳುತ್ತಲೇ ಹೋಗಿದ್ದಳು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಅಂತ್ಯ ಬಾಗಿಲಿನಲ್ಲಿ ನಿಂತಿದ್ದ. ಎಲ್ಲವನ್ನೂ ಮರೆತ ಆದಿ ಓಡಿದ.ಬಾ ಬಾ ಅಂತ್ಯ’ ಎನ್ನುತ್ತ ಅವನ ಕೈಯ್ಯಲ್ಲಿದ್ದ ಚೀಲವನ್ನು ಎಳೆದುಕೊಂಡೇ ಒಳಗೆ ಕರೆದುಕೊಂಡು ಬಂದ.

ಈಗಷ್ಟೇ ನಡೆದ ಘಟನೆಯ ಆಘಾತದಿಂದ ಹೊರಬರುವ ಮುನ್ನವೇ ಒದಗಿದ ಅಂತ್ಯನ ಆಗಮನದ ಸಂಭ್ರಮ ಕಮಲಮ್ಮನನ್ನು ಮೂಕಳನ್ನಾಗಿಸಿತ್ತು ಮತ್ತು ಹಾಗೆಯೇ ನೋಡುತ್ತಲೇ ನಿಂತರು. ಕಳೆದು ಹೋಗಿದ್ದ ಈ ಮಗ ಸಿಕ್ಕ ಎನ್ನುವ ಸಂತೋಷದಲ್ಲಿ ಆ ಕ್ಷಣಕ್ಕೆ ಅನಂತ ಹಾಗೆಯೇ ಹೊರಟು ಹೋದದ್ದರ ದುಖಃ ಮರೆತಿತ್ತು. ಬಾ ಮಗೂ.. ಬಾ..’ ಎಂದು ಕರೆದ ಆಕೆಯ ಧ್ವನಿಯಲ್ಲಿ ತಾಯಿಯ ಪ್ರೀತಿಯ ತನಿಯೇ ತುಂಬಿತ್ತು. ಇಷ್ಟು ವರ್ಷಗಳ ಕಾಲ ಕಾಣದಿದ್ದ ಮಗ ಎದುರು ಬಂದದ್ದರ ಸಂತೋಷವಿತ್ತು. ತಾಯಿ ಮಗನ ಮಿಲನದ ಸಂತಸವನ್ನು ನೋಡುತ್ತಲೇ ನಿಂತಿದ್ದ ಆದಿ ಸ್ವಲ್ಪ ಹೊತ್ತು ಮೂಕನಾಗಿದ್ದ. ಮತ್ತೆ ಅಂತ್ಯ ಅಲ್ಲಿದ್ದ ನಾಲ್ಕು ದಿನವೂ ಕಮಲಮ್ಮನಿಗೆ ಗಡಿಬಿಡಿಯ ದಿನಗಳು.

ದಿನಕ್ಕೆ ಹತ್ತು ಸಲ ಮಗನಿದ್ದಲ್ಲಿಗೆ ಹೋಗಿ ಮಾತನಾಡಿಸಿ ಕಾಫಿ ಬೇಕೇ, ತಿಂಡಿಗೆ ಏನು ಮಾಡಲಿ, ಊಟ ಎಷ್ಟೊತ್ತಿಗೆ, ಎಂದು ಕೇಳುವುದು. ಅವನು ಮಾತಾಡಲಿ ಬಿಡಲಿ ತನಗೆ ಸರಿ ಕಂಡದ್ದನ್ನು ಅಡಿಗೆಯವಳಿಗೆ ಹೇಳಿ ಮಾಡಿಸುವುದು. ಮತ್ತೆ ಅವ ಊಟ ಮಾಡುವವರೆಗೂ ಪಕ್ಕದಲ್ಲಿಯೇ ಕುಳಿತು ವಿಚಾರಿಸುತ್ತ ಉಪಚಾರ ಮಾಡಿ ಬಡಿಸುವುದು. ಹೆಣ್ಣು ಮಗು ಬೇಕೆಂದು ಆಸೆ ಪಡುತ್ತಿದ್ದ ದಿನಗಳಲ್ಲಿ ಇವ ಹುಟ್ಟಿದಾಗ ಆಗಿದ್ದ ಆ ತೀವ್ರ ಬೇಜಾರು ಎಲ್ಲಿಯೋ ಓಡಿ ಹೋಗಿದೆ. ಈಗ ಅವರೆದುರಿಗೆ ಇದ್ದುದು ತನ್ನದೇ ಕರುಳ ಕುಡಿ. ತನಗೆ ಪುನಃ ಸಿಕ್ಕಿದ ತಾನೇ ಇಷ್ಟು ದಿನ ದೂರ ಮಾಡಿಕೊಂಡ ಮಗ. ಮದುವೆಯಾಗಿ ಕಾಲದ ನಂತರ ಮೊದಲ ಮಗು ಹಟ್ಟಿದಾಗಿನ ಸಂಭ್ರಮ ಆಕೆಗೆ.

ಸ್ವಭಾವತಃ ಅಂತರ್ಮುಖಿಯಾಗಿದ್ದ ಅಂತ್ಯ ಘಟ್ಟದ ಮೇಲಿನ ಅಜ್ಜನ ಮನೆಯಿಂದ ಕರಾವಳಿಯ ತನ್ನ ಮನೆಗೆ ಬಂದ೦ದಿನಿ೦ದ ಇದ್ದದ್ದೂ ಮೌನಿಯಾಗಿದ್ದ. ಈಗ ಅಮ್ಮನ ಈ ಹೊಸ ರೂಪಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವೇ ಆಗಿತ್ತು. ಆದರೂ ಬದುಕಿನ ತುಸು ಹೆಚ್ಚಿನ ಮುಖಗಳನ್ನು ನೋಡಿ ಪುಸ್ತಕಗಳನ್ನೂ ಓದಿ ತನ್ನ ತಿಳಿವಿನ ಹರಹನ್ನು ಹೆಚ್ಚಿಸಿಕೊಂಡದ್ದರಿ೦ದ ಅಂತಹ ಗಲಿಬಿಲಿಯೇನೂ ಆಗಲಿಲ್ಲ. ತೀರಾ ಸ್ವಾಭಾವಿಕವಾಗಿಯೇ ನಡೆದುಕೊಂಡು ಅಮ್ಮನಿಗೂ ಒಂದು ತೆರನ ನಿರಾಳವಾಗುವಂತೆ ಮಾಡಿದ. ಅಂತೂ ನಾಲ್ಕು ದಿನ ಕಳೆದು ಅವ ತರಬೇತಿ ಕೇಂದ್ರಕ್ಕೆ ಮರಳುವಾಗಮಗೂ ಇನ್ನು ಮುಂದೆ ಬರುತ್ತಾ ಇರು. ನಾವ್ಯಾರಾದರೂ ಬಂದು ಕರೆಯಬೇಕೆಂದು ಕಾಯಬೇಡ. ಬೇಕೆಂದಾಗ ಬಂದು ಬಿಡು. ಇದು ನಿನ್ನ ಮನೆಯೇ ಅಲ್ಲವೇ’ ಎಂದು ಹೇಳಿ ಕಳುಹಿಸಿದಳು.

ಅಂತ್ಯನೂ ಹಸನ್ಮುಖಿಯಾಗಿಯೇ ಶಾಲೆಗೆ ಮರಳಿದ. ಆದಿಯೇ ಬೈಕಿನಲ್ಲಿ ಅವನನ್ನು ಬಿಟ್ಟು ಬಂದದ್ದು.

ಮನೆಯಿ೦ದ ಹಿಂತಿರುಗಿ ತರಬೇತಿ ಕೇಂದ್ರಕ್ಕೆ ಮರಳಿದ ಅಂತ್ಯನಲ್ಲಿ ತುಸು ಬದಲಾವಣೆ ಕಾಣಿಸಿತ್ತು. ನಿಧಾನವಾಗಿ ಶಾಸ್ತ್ರೀಗಳ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಲು ತೊಡಗಿದವ ಜೊತೆಯ ವಿದ್ಯಾರ್ಥಿಗಳೊಂದಿಗೂ ಸಮಯ ಕಳೆಯಲು ಹೋಗುತ್ತಿದ್ದ. ಕೇಂದ್ರದ ಸುರುವಿನ ದಿನಗಳಲ್ಲಿ ದೂರದ ಊರಿನಿಂದ ಬಂದ ಅಭ್ಯರ್ಥಿಗಳು ತರಬೇತಿ ಕೇಂದ್ರದ ಪೌಷ್ಟಿಕ ಆಹಾರವನ್ನು ತಿಂದು ಮೂರೇ ತಿಂಗಳಿಗೆ ಬೊಜ್ಜು ಬೆಳೆಸಿಕೊಳ್ಳುವುದನ್ನು ಕಂಡ ಶಾಸ್ತ್ರೀಗಳು ಯಕ್ಷಗಾನ ಕಲಾವಿದನಿಗೆ ಮೈಮಾಟವೂ ಮುಖ್ಯ ಎಂದು ಕೆಲವು ಆಟಗಳನ್ನು ಕಡ್ಡಾಯ ಮಾಡಿದ್ದರು. ಸಂಜೆ ಐದರಿಂದ ಎರಡು ಘಂಟೆಗಳ ಕಾಲ ಕಡ್ಡಾಯವಾಗಿ ಎಲ್ಲರೂ ಆಟದ ಬಯಲಿನಲ್ಲಿ ಕಳೆಯಬೇಕಿತ್ತು ಮತ್ತು ಪ್ರತಿಯೊಬ್ಬನೂ ಸಕ್ರಿಯನಾಗಿ ಪಾಲ್ಗೊಳ್ಳಬೇಕಿತ್ತು. ಕಬಡ್ಡಿಯಿಂದ ಹಿಡಿದು ವಾಲೀ ಬಾಲ್ ಮತ್ತು ಬಾಸ್ಕೆಟ್ ಬಾಲ್ ಜೊತೆಗೆ ಶಟಲ್ ಕಾಕ್ ಮತ್ತು ಟೇಬಲ್ ಟೆನ್ನಿಸ್ಗಳಿಗೂ ಅವಕಾಶ ಕಲ್ಪಿಸಿದ್ದರು. ಅವೆಲ್ಲವೂ ಆದಿಯ ಕೊಡುಗೆಯೇ. ‘ಇಂತಹುದೊ೦ದು ಇದ್ದಿದ್ದರೆ ಆಗುತ್ತಿತ್ತು’ ಎಂದು ಶಾಸ್ತ್ರೀಗಳ ಬಾಯಿಯಿಂದ ಬರುವುದೇ ತಡ. ಮಾರನೆಯ ದಿನವೇ ಅದು ಬಂದು ಬಿಡುತ್ತಿತ್ತು.

ಅಂತರ್ಮುಖಿಯಾಗಿದ್ದ ಅಂತ್ಯ ಅವು ಯಾವುದರಲ್ಲೂ ಪಾಲ್ಗೊಳ್ಳುತ್ತಿರಲಿಲ್ಲವಾದರೂ ಶಾಸ್ತ್ರೀಗಳು ಅವನ ಬಗ್ಗೆ ಮೃದುವಾಗಿಯೇ ಇದ್ದರು. ದಾನಿಗಳ ಮಗ ಎನ್ನುವುದಕ್ಕಿಂತ ಹೆಚ್ಚಾಗಿ ತನ್ನನ್ನು ತಾನೇ ನೋಡಿಕೊಳ್ಳುವ ಸಾಮರ್ಥ್ಯ ಅವನಿಗಿದೆ ಎನ್ನುವ ನಂಬಿಕೆಯಿತ್ತು ಅವರಿಗೆ. ಆದರೆ ಮನೆಗೆ ಹೋಗಿ ಬಂದ ಅಂತ್ಯ ಯಾರ ಒತ್ತಾಯ ಅಥವಾ ಆಹ್ವಾನ ಇಲ್ಲದೆಯೂ ಉಳಿದವರು ಆಟ ಆಡುವಾಗ ಸೇರಿಕೊಳ್ಳಲು ಪ್ರಾರಂಭಿಸಿದ.

ಯಾವಾಗಲೂ ಓದು ಓದು ಎಂದು ಸಮಯ ಕಳೆಯುತ್ತ, ಸಂದರ್ಶಿಸಲು ಬರುತ್ತಿದ್ದ ಪ್ರೊಫೆಸರ ಹತ್ತಿರವೂ ಸರಿಸಮನಂತೆ ಮಾತನಾಡುತ್ತಿದ್ದ ಅಂತ್ಯನನ್ನು ಕಂಡರೆ ಅವರೆಲ್ಲರಿಗೆ ಭಯ ಮಿಶ್ರಿತ ಗೌರವ. ಜೊತೆಗೆ ಈ ಶಾಲೆ ನಡೆಯುತ್ತಿರುವುದೇ ಅವನಪ್ಪ ಈಗಾಗಲೇ ಕೊಟ್ಟ ಮತ್ತು ಇನ್ನೂ ಕೊಡುತ್ತಿರುವ ಹಣದಿಂದ ಎನ್ನುವುದು ಇಲ್ಲ್ಲಿಗೆ ಕಾಲಿಟ್ಟ ಕೂಡಲೇ ಅವರು ಮಾತಾಡಿಕೊಳ್ಳುತ್ತಿದ್ದ ವಿಷಯವಾದ್ದರಿಂದ ಆ ಗೌರವವೂ ಸೇರಿರುತ್ತಿತ್ತು. ಈಗ ಅವನಾಗಿಯೇ ತಮ್ಮೊಂದಿಗೆ ಸೇರುತ್ತಿದ್ದಾನೆ ಮತ್ತು ಆಟವಾಡಲೂ ಬರುತ್ತಿದ್ದಾನೆ ಎಂದಾಗ ಅವರೆಲ್ಲರಿಗೂ ಸಂಭ್ರಮ.

ಮುಂದಿನ ಸಲ ಆದಿ ಮಾಮೂಲಿಯಂತೆ ಶಾಸ್ತ್ರೀಗಳನ್ನು ಭೇಟಿಯಾಗಲು ಬಂದಾಗ ಅವರದ್ದು ಅದೇ ಮಾತು. ಆದಿ, ಅದೇನು ಮೋಡಿ ಮಾಡಿದಿಯೋ ಮಾರಾಯ.. ಮೊನ್ನೆ ಮನೆಗೆ ಹೋಗಿ ಬಂದದ್ದೇ ಅಂತ್ಯನಲ್ಲಿ ಎಂತಹ ಬದಲಾವಣೆ... ನನಗೂ ಎಷ್ಟು ನಿರಾಳ ಎನ್ನುತ್ತೀಯ’ ಎಂದಿದ್ದರು. ಪಾಪ ಹುಡುಗನೊಬ್ಬ ಯಾರೊಡನೆಯೂ ಬೆರೆಯದೆ ಅರೆ ಸನ್ಯಾಸಿಯ ತರ ಬದುಕುತ್ತಿದ್ದುದನ್ನು ನೋಡಿ ಕರುಳು ಕಿವಿಚುತ್ತಿತ್ತು. ಈಗ ಸಮಾಧಾನವಾಯ್ತು ಆದಿ.. ಇನ್ನು ಮುಂದೆ ನೋಡು. ಚಿನ್ನಕ್ಕೆ ಪರಿಮಳ ಬಂದ೦ತೆ. ಅವನ ಆ ಮೇಧಾವಿತನಕ್ಕೆ ಈ ಸರಳ ಸಾಮಾನ್ಯ ಬದುಕು ಸೇರಿದರೆ ಇನ್ನೇನು ಬೇಕು ಹೇಳು..’ ಶಾಸ್ತ್ರೀಗಳು ಹೇಳುತ್ತಿದ್ದುದನ್ನು ಕೇಳುತ್ತಿದ್ದರೆ ಆದಿಗೆ ಎಲ್ಲಿಲ್ಲದ ಪುಲಕ. ಹಾಗೆಯೇ ಅನಂತನ ನೆನಪಾಗಿತ್ತು. ಅವನು ಅಂತ್ಯನಿಗಿ೦ತ ಮೇಧಾವಿ. ಅವನಲ್ಲೂ ಹೀಗೆಯೇ ಸರಳತನ ಮೈ ಗೂಡಿದ್ದಿದ್ದರೆ… ಮನೆ ನಂದನವನವಾಗುತ್ತಿತ್ತು. ಆದರೆ ಎಲ್ಲ ನಾವು ಬಯಸಿದ ಹಾಗೆ ಎಲ್ಲಿ ಆಗುತ್ತದೆ.. ಎಂದುಕೊಳ್ಳುತ್ತಿರುವಾಗ ಏನೋ ಆದಿ.... ನಿಮ್ಮಪ್ಪ ಅಮ್ಮ ಮಾಡಿದ ಪುಣ್ಯ ..’ಹೌದು ಹೌದು’ ಎನ್ನುತ್ತಲೇ ಆದಿ ಅಂತ್ಯನನ್ನು ಹುಡುಕಿಕೊಂಡು ಹೋಗಿದ್ದ.

ಆದಿಗೂ ಆಶ್ಚರ್ಯವಾಗುವಷ್ಟು ಬದಲಾಗಿದ್ದ ಅಂತ್ಯ. ಅಣ್ಣನನ್ನು ನೋಡಿದ್ದೇ ಎಂದೂ ಇಲ್ಲದಂತೆ ಅವನೇ ಹೊರಬಂದು ಒಳಗೆ ಕರೆದ. ಇದ್ದ ಒಂದೇ ಕುರ್ಚಿಯನ್ನು ಅಣ್ಣನಿಗೆ ಬಿಟ್ಟುಕೊಟ್ಟು ತಾನು ಮಂಚದ ಮೇಲೆ ಕುಳಿತ. ಅಮ್ಮನ ಬಗ್ಗೆ ವಿಚಾರಿಸಿದ. ತೀರಾ ಸಂತೋಷಗೊ೦ಡ ಆದಿ ಆಗಲೇ ತೀರ್ಮಾನಿಸಿದ. ಇನ್ನೊಮ್ಮೆ ಬರುವಾಗ ಅಮ್ಮನಿಗೆ ಹೇಳಿ ಏನಾದರೂ ಸ್ಪೆಷಲ್ ತಿಂಡಿ ಮಾಡಿಸಿಕೊಂಡು ತರಬೇಕು ಎಂದು.ಅವನ ಅಭಿಮನ್ಯುವಿನ ಪಾತ್ರದ ಬಗ್ಗೆ ಊರೆಲ್ಲ ಹೊಗಳುತ್ತಿದ್ದುದನ್ನು ಹೇಳಿ ಅಮ್ಮನೂ ಆ ಬಗ್ಗೆ ಮಾತನಾಡಿ ಅಂತಹ ಮಗನನ್ನು ಇಷ್ಟು ದಿನ ದೂರ ಮಾಡಿದೆ’ ಎಂದು ಅತ್ತದ್ದನ್ನೂ ಹೇಳಿದ. ಇನ್ನು ಮೇಲಿಂದ ಪುರುಸೊತ್ತಿದ್ದಾಗಲೆಲ್ಲ ಮನೆಗೆ ಬಾ. ಅಷ್ಟು ಅಗತ್ಯವಿದ್ದರೆ ಹೇಳು. ನಿನಗೇ ಒಂದು ಬೈಕನ್ನೂ ಕೊಡಿಸುತ್ತೇನೆ’ ಎಂದರೆ ನಿಧಾನವಾಗಿ ತಲೆ ಅಡಿ ಹಾಕುತ್ತ ಅಂತ್ಯ ಹೇಳಿದನನಗೆ ಬೈಕ್ ಬಿಡಲು ಬರುವುದಿಲ್ಲ. ಅದು ಹೋಗಲಿ ಎಂದರೆ ಸೈಕಲ್ಲೂ ಬರುವುದಿಲ್ಲ’. ಆಗ ಅವನಿಗೆ ವಯಸ್ಸು ಇಪ್ಪತ್ತೋ ಇಪ್ಪತ್ತೊಂದೋ.

ಆದಿಗೆ ಪಿಚ್ಚೆನಿಸಿತು. ಅದೆಲ್ಲ ಹೋಗಲಿ ಅಂತ್ಯ. ನಾನೇ ಕಲಿಸುತ್ತೇನೆ. ಮನೆಗೆ ಬಾ. ಒಂದೆರಡು ವಾರದಲ್ಲೇ ನಿನ್ನನ್ನು ಎಕ್ಸ್ಪರ್ಟ್ ಮಾಡಿ ಬಿಡುತ್ತೇನೆ’ ಎಂದ. ಬರಿ ಮಾತಿಗೆ ಹೇಳಿದ್ದಲ್ಲ ಆದಿ. ತಿರುಗಿ ಮನೆಗೆ ಹೋಗುವಾಗಲೇ ಸೈಕಲ್ ಅಂಗಡಿಯ ಕಮ್ತೀರ ಹತ್ತಿರ ಒಂದು ಹೊಸಾ ಸೈಕಲನ್ನು ತರಿಸಿಕೊಡಲು ಹೇಳಿದ. ನಾಳೆ ಸಂಜೆಯೊಳಗೆ ಅದು ಮನೆಯಲ್ಲಿರಬೇಕೆಂದೂ ಹೇಳಿದ. ಆದಿ ಹೇಳಿದನೆಂದ ಮೇಲೆ ಕೇಳಬೇಕೇ. ಲಗುಬಗೆಯಿಂದ ಕಾಮತರು ಮಂಗಳೂರಿಗೆ ಆರ್ಡರು ಕಳಿಸಿಯೂ ಆಯ್ತು. ಮತ್ತು ಮಾರನೆಯ ದಿನ ಮಧ್ಯಾಹ್ನದೊಳಗೆ ಬೊಂಬಾಯಿಗೆ ಹೋಗುವ ಸಿಪಿಸಿ ಲಾರಿಯಲ್ಲಿ ಆ ಸೈಕಲ್ಲು ಕಮ್ತೀರ ಅಂಗಡಿಗೆ ತಲುಪುತ್ತ್ತದೆನ್ನುವ ಸಂದೇಶವೂ ಕಮ್ತೀರನ್ನು ತಲುಪಿತು. ಆಗಲೇ ಕಮ್ತೀರು ನೆಮ್ಮದಿಯ ನಿಟ್ಟುಸಿರು ಬಿಟ್ಟದ್ದು. ಮುಂದಿನ ವಾರಾಂತ್ಯಕ್ಕೆ ಅಂತ್ಯ ಮನೆಗೆ ಬಂದ. ತರಬೇತಿ ಕೇಂದ್ರಕ್ಕೆ ಸೇರಿದ ಮೇಲೆ ಇದೇ ಪ್ರಥಮ ಬಾರಿಗೆ ಅಂತ್ಯ ತಾನಾಗಿಯೇ ಮನೆಗೆ ಬಂದದ್ದು. ಅವನನ್ನು ಕಂಡದ್ದೇ ಕಮಲಮ್ಮನಿಗೆ ಸಂಭ್ರಮ. ಭಾವನೆಯ ಆವೇಗದಲ್ಲಿ ಮಾತೇ ಹೊರಡದ ಪರಿಸ್ಥಿತಿ. ಅಂತ್ಯನೇ ಅಮ್ಮನ ಕಾಲಿಗೆರಗಿದ. ಅದೇ ಆ ದಿನ ಯಕ್ಷಗಾನದಲ್ಲಿ ಕಂಡ ಅಭಿಮನ್ಯುವೇ. ಎತ್ತಿ ಎದೆಗವಚಿಕೊಂಡಳು ಆ ತಾಯಿ. ಅಷ್ಟರಲ್ಲಿ ಹೊರಗೆಲ್ಲೋ ಹೋಗಿದ್ದ ಆದಿ ಒಳಗೆ ಕಾಲಿಡುತ್ತಿದ್ದವ ಇದನ್ನು ನೋಡಿ ರೋಮಾಂಚನಗೊ೦ಡಿದ್ದ.

ಮನೆಯಲ್ಲಿದ್ದೆರಡು ದಿನವೂ ವಿಶಾಲವಾಗಿದ್ದ ಮನೆಯಂಗಳದಲ್ಲಿ ಅಂತ್ಯನಿಗೆ ಸೈಕಲ್ಲು ಹೊಡೆಯುವ ತರಬೇತಿ. ಅವನಿಗೆ ಕಲಿಸಲೇಬೇಕೆಂಬ ಆದಿಯ ಹಠವೋ ಅಲ್ಲ ಯಾವುದನ್ನೂ ಕಲಿಯಬೇಕೆಂದು ಹೊರಟ ಮೇಲೆ ತಡಬಡವಿಲ್ಲದೆ ಕಲಿಯುವ ಅಂತ್ಯನ ಛಾತಿಯೋ ಎರಡೇ ದಿನಕ್ಕೆ ಅಂತ್ಯ ಸಾಕಷ್ಟು ತಯಾರಾಗಿದ್ದ. ಸೈಕಲ್ಲಿನ ಬ್ಯಾಲೆನ್ಸ್ ಮತ್ತು ಬ್ರೇಕ್ ಎರಡರ ಐಡಿಯಾ ಬಂದ ಮೇಲೆ ಬೈಕು ಕಷ್ಟವಾಗುವುದಿಲ್ಲ ಎನ್ನುವುದು ಆದಿಯ ವಾದ. ಆದರೆ ಅಂತ್ಯನೇ ಹಿಂಜರಿದಿದ್ದ. ಆದಿ ಒತ್ತಾಯ ಮಾಡಿ ತನ್ನದೇ ಬೈಕಿನ ಮೇಲೆ ಕೂರಿಸಿದರೆ ತುಸುವೇ ಮುಂದೆ ಹೋದ. ಬೀಳುವಂತಾದರೂ ತಾನೇ ಸುಧಾರಿಸಿಕೊಂಡು ಮುನ್ನಡೆದ. ಅದೂ ಮನೆಯಂಗಳದಲ್ಲೇ.

ಮುಂದಿನ ವಾರ ಬಂದಾಗ ರಸ್ತೆಯ ಮೇಲೇ ಓಡಿಸುವ… ಸರಿ… ನಿನಗೆ ಯಾವ ಬೈಕು….’ ಈಗಲೇ ತಮ್ಮನಿಗೆ ಹೊಸತೊಂದು ಬೈಕು ಕೊಡಿಸುವ ಹುಮ್ಮಸ್ಸು. ಬೇಡ ಅಣ್ಣ.. ನಿಧಾನಕ್ಕೆ ನೋಡುವ...’ ಎಂದರೆ ಆದಿ ಬಿಡಲಿಲ್ಲ.ಈಗಲೇ ಹೇಳಿದರೆ ಇನ್ನು ನಮ್ಮ ಕೈಗೆ ಸಿಗುವಾಗ ಇನ್ನೆರೆಡು ವಾರವಾದರೂ ಆದೀತು ಅಷ್ಟರಲ್ಲಿ ನೀನು ಎಕ್ಸಪರ್ಟ್ ಆಗಿರುತ್ತೀಯ’ ಎಂದು ಮನೆಯಿಂದಲೇ ಆಗಲೇ ತಂದಿಟ್ಟುಕೊ೦ಡಿದ್ದ ಪಟ್ಟಣದ ಬೈಕ್ ಏಜನ್ಸಿಯ ನಂಬರಿಗೆ ಫೋನ್ ಮಾಡಿ ಬುಕ್ ಮಾಡಿದವ ಇನ್ನೆರಡು ವಾರಕ್ಕೆ ತಾವು ಡೆಲಿವರಿ ತೆಗೆದುಕೊಳ್ಳಲು ಬರುತ್ತೇವೆ ಎಂದ. ಅಣ್ಣನ ಉತ್ಸಾಹ ಮತ್ತು ಶಿಸ್ತು ಬದ್ಧವಾಗಿ ಕೆಲಸ ಮಾಡುವ ವೈಖರಿ ನೋಡಿ ಅಂತ್ಯ ಸ್ತಂಬೀಭೂತನಾಗಿದ್ದ. ಇದನ್ನೆಲ್ಲ ಮೌನವಾಗಿಯೇ ಗಮನಿಸುತ್ತಿದ್ದ ಕಮಲಮ್ಮನಿಗೆ ಹಿಡಿಸಲಾರದ ಆನಂದ. ಒಬ್ಬ ತಮ್ಮನನ್ನು ಕಳೆದುಕೊಂಡ ನೋವಿನಲ್ಲಿದ್ದ ಆದಿಗೋ ಇನ್ನೊಬ್ಬ ಸಿಕ್ಕಿದ ಸಂಭ್ರಮ. ಅಂತ್ಯನಿಗೂ ತಾನು ಕಳೆದುಕೊಂಡದ್ದು ಏನೆಂದು ತುಸು ತುಸುವಾಗಿ ಅರಿವಾಗ ಹತ್ತಿತು.

ಮತ್ತೆರಡೇ ವಾರಕ್ಕೆ ಹೊಸ ಬೈಕ್ ಬಂತು ಮತ್ತು ಆದಿ ತಾನು ಅಂತ್ಯನೊ೦ದಿಗೆ ಹಿಂದೆ ಕುಳಿತುಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡೂ ಬಂದ. ಮಧ್ಯಾಹ್ನ ಮನೆಯಲ್ಲಿ ಔತಣದ ಊಟ.

| ಇನ್ನು ನಾಳೆಗೆ |

‍ಲೇಖಕರು Admin

June 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: