ಪಿ ಪಿ ಉಪಾಧ್ಯ
31
ಅಂತ್ಯನ ಸ್ಪೆಷಾಲಿಟಿಯೂ ತನ್ನಿಂದ ತಾನೇ ಕಾಣಿಸತೊಡಗಿತ್ತು…
ಯಾರು ಯಾರ ಮೂಲಕವೋ ಇವೆಲ್ಲ ತಿಳಿದು ಬಂದಾಗ ಆದಿ ತಾನೇ ಶಾಸ್ತ್ರೀಗಳನ್ನು ಭೇಟಿ ಮಾಡಿ `ಯಾಕೆ ಶಾಸ್ತ್ರಿಗಳೇ.. ಹಣಕ್ಕಾಗಿ ಊರೆಲ್ಲ ಸುತ್ತುತ್ತಿದ್ದೀರಿ. ನಮ್ಮಪ್ಪನನ್ನೊಂದು ಮಾತು ಕೇಳಿದ್ದರೆ ಆಗುತ್ತಿರಲಿಲ್ಲವೇ’
`ಅಲ್ಲ ಆದಿ ಎಷ್ಟೆಂದು ಒಬ್ಬರಿಗೇ ತೊಂದರೆ ಕೊಡುವುದು. ಸರಕಾರದ್ದೂ ಪಾಲು ಇರಲಿ ಎಂದು ಅಲ್ಲಿಗೆ ಹೋಗಿದ್ದೆ. ಬಿಡು ಅಲ್ಲಿ ಅದೇ ಮಾಮೂಲಿ ಉತ್ತರ. ಈಗ ಆಗಲಿಲ್ಲ ಮುಂದಿನ ಬಜೆಟ್ಟಿಗೆ ನೋಡುವ ಎಂದು. ಲಲಿತ ಕಲಾ ವಿಭಾಗದಲ್ಲಿ ಕೇಳಿದರಂತೂ `ನೀವು ಸ್ವಲ್ಪ ಏನಾದರೂ ಸಾಧಿಸಿ ತೋರಿಸಿ. ಮತ್ತೆ ನೋಡುವ. ಎನ್ನುವ ಉತ್ತರ. ಸಾಕಾಗಿ ಹೋಯ್ತು ಮಾರಾಯ. ಇನ್ನು ಊರಿನಲ್ಲಿಯೇ ಒಂದು ಹತ್ತಿಪ್ಪತ್ತು ಜನರ ಹತ್ತಿರ ವಂತಿಗೆ ಎತ್ತುವುದು’
`ಅದೇನೂ ಬೇಡ ಸದ್ಯಕ್ಕೆ. ಈಗ ಕೆಲಸ ಪ್ರಾರಂಭಿಸಲು ಎಷ್ಟು ಬೇಕಾಗಬಹುದು’
`ಒಂದೆರಡು ಲಕ್ಷವಾದರೂ ಬೇಕಾದೀತು’
ಆದಿ ಅಂದೇ ಸಂಜೆ ಅಪ್ಪನ ಹತ್ತಿರ ಕೇಳಿ ಆ ಹಣದ ವ್ಯವಸ್ಥೆ ಮಾಡಿದ್ದ. ಇದನ್ನಂತೂ ಆದಿ ಅಮ್ಮನಿದ್ದಾಗಲೇ ಅಪ್ಪನೆದುರಿಗೆ ಮಂಡಿಸಿ ಒಪ್ಪಿಗೆ ಪಡೆದದ್ದು. ದೊಡ್ಡಸ್ತಿಕೆಯ ಮರ್ಜಿ ಇನ್ನೂ ಪೂರ್ತಿಯಾಗಿ ಬಿಟ್ಟಿರದ ಕಮಲಮ್ಮನೂ ಇದಕ್ಕೆಲ್ಲ ಅಡ್ಡ ಬರುತ್ತಿರಲಿಲ್ಲ. ಅದರಲ್ಲೂ ಮಗನ ಮುಂದಾಳ್ತನವೆಂದರೆ ಆಕೆಗೆ ಇದ್ದದ್ದೂ ಉತ್ಸಾಹ. ಹಾಗಾಗಿ ಯಾವುದೇ ತಕರಾರಿಲ್ಲದೆ ಆ ಯೋಜನೆಯೂ ಮಂಜೂರಾಗಿತ್ತು. ಇದನ್ನೆಲ್ಲ ಗಮನಿಸುತ್ತಿದ್ದ ಶಾಸ್ತಿçಗಳು ಆ ಯೋಜನೆಯ ಬಗ್ಗೆ ಇದ್ದ ತನ್ನೆಲ್ಲ ಪ್ರೀತಿಯ ಹೊರತಾಗಿಯೂ ಶಾಮಣ್ಣನವರ ಅಥವಾ ಅವರ ತಂದೆಯ ಹೆಸರನ್ನು ಆ ಸಂಸ್ಥೆಗಿಡಬೇಕೆನ್ನುವ ತೀವ್ರ ಬಯಕೆ ತನ್ನ ಮನಸ್ಸಿಗೆ ಬರುತ್ತಿದ್ದದನ್ನು ಅವರೆದುರಿಗೆ ಪುನಃ ಪುನಃ ಹೇಳಿಕೊಂಡಿದ್ದರು.
ಆದರೆ ಆ ಸಲಹೆಗೆ ಮಾತ್ರ ಇಬ್ಬರೂ ಸುತರಾಂ ಒಪ್ಪಿರಲಿಲ್ಲ. ಆದಿ ‘ಒಂದು ವೇಳೆ ಹಾಗೇನಾದರೂ ಹೆಸರಿಟ್ಟರೆ ಬೇರೆಯವರಿಗೆ ಅದು ನಮ್ಮದೇ ಸಂಸ್ಥೆ ಎನ್ನುವ ಭಾವನೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಕೂಡದು. ಒಂದು ತರಬೇತಿ ಸಂಸ್ಥೆ ಯಾವುದೇ ವ್ಯಕ್ತಿಯ ಹೆಸರನ್ನು ಒಳಗೊಳ್ಳಬಾರದು. ಹಾಗಾದರೆ ಅದರ ವ್ಯಾಪ್ತಿಗೆ ಮಿತಿ ಹೇರಿದಂತಾಗುತ್ತದೆ. ಹಾಗಾಗಿ ನಿಮ್ಮ ಮನಸ್ಸಿನಲ್ಲಿ ಮೊದಲು ಏನಿತ್ತೋ ಅದನ್ನೇ ಇಟ್ಟುಬಿಡಿ’ ಎಂದಿದ್ದ ಎಲ್ಲವನ್ನೂ ಕೇಳಿದ ಶಾಮಣ್ಣನವರೂ ಮಗ ಅಂದುದಕ್ಕೆ ತಲೆ ಅಲ್ಲಾಡಿಸಿದ್ದರು. ಶಾಸ್ತ್ರೀಗಳಿಗಂತೂ ಆಶ್ಚರ್ಯ. ಪ್ರಪಂಚದಲ್ಲಿ ಇಂತಹವರೂ ಇದ್ದಾರೆಯೇ ಎಂದು.

ಈಗ ಅದೇ ಕೇಂದ್ರದಲ್ಲಿ ಅವರ ಮಗನೇ ಕಲಿಯಲು ಬಂದದ್ದು ಶಾಸ್ತ್ರೀಗಳಿಗೆ ಸಂತೋಷ. ತುಸುವಾದರೂ ಋಣ ಸಂದಾಯ ಮಾಡುವಂತಾಯಿತಲ್ಲ ಎನ್ನುವ ಕೃತಾರ್ಥ ಭಾವನೆ. ಅದೇ ಕೃತಜ್ಞತೆಯ ಭಾರವೇ ಅಂತ್ಯನನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುವಂತೆ ಮಾಡಿದ್ದು. ಸಾಮಾನ್ಯವಾಗಿ ಶ್ರೀಮಂತಿಕೆಯ ದೊಡ್ಡಸ್ತನಕ್ಕೆ ಸೊಪ್ಪು ಹಾಕದ ಶಾಸ್ತ್ರೀಗಳು ಇಲ್ಲಿ ಶಾಮಣ್ಣ ಮತ್ತು ಅವರ ಹಿರೀ ಮಗನ ವೈಯಕ್ತಿಕ ಒಳ್ಳೇತನ ಮತ್ತು ಔದಾರ್ಯಕ್ಕೆ ಮಣಿದಿದ್ದರು. ಬಹಳಷ್ಟು ಅರೆ ಬರೆ ಶ್ರೀಮಂತರು ತಮ್ಮ ಮಕ್ಕಳನ್ನು ಅಲ್ಲಿ ಕಲಿಯಲು ಬಿಡುವಾಗ ಶಾಸ್ತ್ರೀಗಳೊಂದಿಗೆ ಹೇಳಿದ್ದಿದೆ. ತಮ್ಮ ದೊಡ್ಡಸ್ತಿಕೆಯ ಗತ್ತಿನಲ್ಲಿ `ನೋಡಿ ನಮ್ಮ ಹುಡುಗ ಅನುಕೂಲತೆಯಲ್ಲಿ ಬೆಳೆದವನು.
ನಿಮ್ಮ ಈ ಸರಳತನ ಸ್ವಲ್ಪ ಕಷ್ಟವಾಗಬಹುದು. ಅವನಿಗಾಗಿಯೇ ಒಂದು ಬೇರೆ ರೂಮಿನ ವ್ಯವಸ್ಥೆಯನ್ನು ಮಾಡಿ. ಛಾರ್ಜು ಎಷ್ಟಾದರೂ ಪರವಾಯಿಲ್ಲ’ ಎಂದದ್ದಿದೆ. ಅವರನ್ನೆಲ್ಲ ನಯವಾಗಿಯೇ ಸವರಿ ಬಿಟ್ಟಿದ್ದರು ಶಾಸ್ತ್ರೀಗಳು. ಆದರೆ ಅಂತ್ಯ ತಾನಿಲ್ಲಿಗೆ ಸೇರುತ್ತೇನೆಂದಾಗ ಅವರೇ ಸ್ವತಹ ನಿಂತು ಒಂದು ಕೋಣೆಯನ್ನು ತೆರವು ಮಾಡಿಸಿ ಅವನನ್ನು ಅಲ್ಲಿ ಉಳಿಯಲು ಹೇಳಿದರು. ಆ ಉಳಿದ ಅಭ್ಯರ್ಥಿಗಳಿಗೆ ಹೋಲಿಸಿದರೆ ವಯಸ್ಸಿನಲ್ಲಿ ಇನ್ನೂ ಚಿಕ್ಕವನಿದ್ದ ಅಂತ್ಯ ತನಗೆ ಸಿಕ್ಕ ಸೌಲಭ್ಯದಿಂದ ಸಂತೋಷಗೊಂಡರೂ `ಬೇಡ ಶಾಸ್ತ್ರೀಗಳೇ.. ನಾನೂ ಎಲ್ಲರ ಹಾಗೆಯೇ ಇರುತ್ತೇನೆ’ ಎಂದಿದ್ದ.
`ಅದು ಸಾಧ್ಯವೇ ಇಲ್ಲ. ಈ ಕೇಂದ್ರ ನನ್ನ ಕನಸಿನ ಕೂಸು ನಿಜ. ಆದರೆ ಇದರ ಹುಟ್ಟು ಬೆಳವಣಿಗೆಯೆಲ್ಲ ನಿಮ್ಮಪ್ಪ ಮತ್ತು ನಿಮ್ಮಣ್ಣನ ದಯೆ. ಹಾಗಿರುವಾಗ ಆ ಮಾನವ ರೂಪದ ದೇವರುಗಳ ಋಣ ತೀರಿಸಲು ಇದೊಂದು ಚಿಕ್ಕ ಅವಕಾಶ. ಹಾಗಾಗಿ ನೀನು ನಮಗೆ ಸ್ಪೆಷಲ್ಲೇ…’ ಅಂತ್ಯನಿಗೆ ಅರಿವೇ ಇಲ್ಲದಿದ್ದ ಅಪ್ಪನ ಮತ್ತು ಅಣ್ಣನ ಇನ್ನೊಂದು ಮುಖ ತುಸು ತುಸುವಾಗಿ ತೆರೆದುಕೊಳ್ಳಹತ್ತಿತ್ತು.
ಅಲ್ಲಿನ ವಾಸ್ತವ್ಯದ ಪ್ರಾರಂಭದಲ್ಲೇ ಅಂತ್ಯನ ಸ್ಪೆಷಾಲಿಟಿಯೂ ತನ್ನಿಂದ ತಾನೇ ಕಾಣಿಸತೊಡಗಿತ್ತು. ಕಲಿಯುವುದರಲ್ಲಿ ಎಲ್ಲರಂತೆ ಒಂದೇ ವಿಷಯವನ್ನು ಹಿಡಿದುಕೊಂಡು ಕುಳಿತು ಕೊಳ್ಳುತ್ತಿರಲಿಲ್ಲ ಅವನು. ಎಲ್ಲದರಲ್ಲೂ ಸಮಾನ ಆಸಕ್ತಿ. ಉಳಿದವರು ದಂಗು ಬಡಿಯುವಷ್ಟು ಶೀಘ್ರ ವಿಷಯದ ಮನನ. ಬರೇ ಮ್ಯಾಟ್ರಿಕ್ ಓದಿದ ಹುಡುಗನೊಬ್ಬ ಇಷ್ಟು ಸಮರ್ಥನಿರುವುದು ಸಾಧ್ಯವೇ ಎಂದು ಉಳಿದವರು ಆಶ್ಚರ್ಯ ಪಡುವಷ್ಟು. ಶಾಸ್ತ್ರೀಗಳನ್ನು ಬಿಟ್ಟು ಕಲಿಸಲು ಬರುವ ಉಳಿದ ತರಬೇತುದಾರರೂ ಆಶ್ಚರ್ಯ ಪಟ್ಟಿದ್ದರು. ತಮ್ಮ ಸರ್ವೀಸಿನಲ್ಲೇ ಇಂತಹ ಮೇಧಾವಿಯೊಬ್ಬನನ್ನು ಕಂಡದ್ದಿಲ್ಲ ಎನ್ನುತ್ತ ಅವರಷ್ಟಕ್ಕೇ ಮಾತನಾಡಿಕೊಳ್ಳುವಾಗ `ಅಲ್ಲ ಇಂತಹ ಬುದ್ಧಿವಂತನೊಬ್ಬ ಮುಂದೆ ಓದಿ ಡಾಕ್ಟರೋ ಎಂಜಿನಿಯರೋ ಆಗುವುದು ಬಿಟ್ಟು ಈ ಯಕ್ಷಗಾನ ಕಲಿಯಲು ಬಂದಿದ್ದಾನಲ್ಲ’ ಎಂದೂ ಆಡಿಕೊಳ್ಳುತ್ತಿದ್ದರು.
ಆದರೆ ಅಂತ್ಯ ತನ್ನ ಭವಿಷ್ಯವನ್ನು ನಿರ್ಧರಿಸಿ ಆಗಿತ್ತು. ಯಕ್ಷಗಾನದ ಆಳ ಅಗಲಗಳನ್ನು ಕಲಿತು ಅರ್ಥಮಾಡಿಕೊಳ್ಳಬೇಕೆನ್ನುವ ತನ್ನ ಆಸೆಯನ್ನು ಮೂರ್ತರೂಪಗೊಳಿಸಲು ಇದಕ್ಕಿಂತ ಬೇರೆ ಅವಕಾಶ ಸಿಗಲಿಕ್ಕಿಲ್ಲ ಎಂದುಕೊಂಡು ಪೂರ್ತಿಯಾಗಿ ಅದರಲ್ಲೇ ಮುಳುಗಲು ಹವಣಿಸುತ್ತಿದ್ದ.
ಮೊದಲೆಲ್ಲ ಅಪರೂಪಕ್ಕೊಮ್ಮೆ ಅದೂ ಶಾಸ್ತ್ರೀಗಳ ಒತ್ತಾಯದ ಮೇರೆಗೆ ಕೇಂದ್ರಕ್ಕೆ ಬರುತ್ತಿದ್ದ ಆದಿ ಈಗ ತಮ್ಮ ಅಲ್ಲಿಗೆ ಸೇರಿದ ಮೇಲೆ ತನ್ನ ಭೇಟಿಯನ್ನು ಅಧಿಕಗೊಳಿಸಿದ್ದ. ಮತ್ತು ಹಾಗೆ ಬಂದಾಗಲೆಲ್ಲ ಒಂದು ಹತ್ತು ನಿಮಿಷ ತಮ್ಮನೊಂದಿಗೆ ಕುಳಿತು ಮಾತನಾಡಬೇಕೆಂದರೂ ಸಾಧ್ಯವಾಗುತ್ತಿರಲಿಲ್ಲ. ಎರಡು ಮಾತನಾಡಿ ಮುಗಿಸುವುದರೊಳಗೇ ಅಂತ್ಯ ಅಲ್ಲೆಲ್ಲೋ ನಡೆಯುತ್ತಿದ್ದ ತರಗತಿಗೋ ಇಲ್ಲ ಅಭ್ಯರ್ಥಿಗಳ ನಡುವೆ ನಡೆಯುತ್ತಿದ್ದ ಚರ್ಚಾಗೋಷ್ಟಿಗೋ ಹೋಗಬೇಕೆಂದು ಎದ್ದು ಬಿಡುತ್ತಿದ್ದ.
ಅವನೊಡನೆ ತುಂಬ ಮಾತನಾಡಬೇಕು. ತನ್ನ ಅನುಭವವನ್ನು ಅವನೊಡನೆ ಹಂಚಿಕೊಂಡು ತಮ್ಮ ಮಟ್ಟಿಗೆ ಬಹಳಷ್ಟು ತಿಳಿದಿರದ ತಮ್ಮನ ಘಟ್ಟದ ಮೇಲಿನ ಬದುಕಿನ ಬಗ್ಗೆಯೂ ಕೇಳಬೇಕು ಎನ್ನುವ ಆಸೆಯೊಂದಿಗೆ ಬಂದ ಆದಿಗೆ ನಿರಾಸೆಯೇ. ಅನಂತನಂತೂ ಓದು ಓದು ಎಂದು ದೂರ ಹೋದವನು ದೂರಾಗಿಯೇ ಬಿಟ್ಟ. ಈಗಲೂ ರಜೆಗೆಂದು ಬಂದರೆ ಎರಡೋ ಮೂರೋ ದಿನ. ಆ ದಿನಗಳಲ್ಲೂ ಮನೆಯಲ್ಲಿರುವುದು ತುಂಬ ಕಡಿಮೆ. ಹಳೆಯ ಸ್ನೇಹಿತರನ್ನೋ ಅಥವಾ ಇವನಂತೆಯೇ ಊರಿಗೆ ಬಂದ ಹೊಸ ಸ್ನೇಹಿತರನ್ನೋ ಹುಡುಕಿಕೊಂಡು ಹೋಗುತ್ತಿದ್ದ. ಮತ್ತೆ ಅದೆಲ್ಲ ಕಳೆದ ಮೇಲೆ ಇನ್ನಾದರೂ ಸ್ವಲ್ಪ ಕುಳಿತು ಮಾತನಾಡುವ ಎಂದು ಹೊರಟರೆ `ತಡವಾಯ್ತು.. ನನಗೆ ಹೋಗಬೇಕು’ ಎಂದು ಹೊರಟೇ ಬಿಡುತ್ತಿದ್ದ. ಅಂತೂ ಕುಳಿತು ಮಾತನಾಡುವ ವ್ಯವಧಾನವೇ ಇರುತ್ತಿರಲಿಲ್ಲ.
ಎಲ್ಲಿಯಾದರೂ ಊಟದ ಹೊತ್ತಿನಲ್ಲೋ ತಿಂಡಿಯ ಹೊತ್ತಿನಲ್ಲೋ ಮೇಲೆ ಬಿದ್ದು ಆದಿಯೇ ಮಾತನಾಡಿಸಿಕೊಂಡು ಹೋದರೂ `ಹೌದು .. ಇಲ್ಲ..’ ಎನ್ನುವ ಚುಟುಕು ಉತ್ತರ. ಅದರಲ್ಲೂ ಬಿಂಕ. ಆದಿಗೆ ಅದು ಅರ್ಥವಾಗದ್ದೇನಲ್ಲ. ಆದರೆ ತಮ್ಮನಲ್ಲವೇ ಎನ್ನುವ ಮಮಕಾರ. ಹುಟ್ಟಿದಂದಿನಿಂದ ಅವನ ಹೈಸ್ಕೂಲು ಮುಗಿಯುವವರೆಗೆ ಒಟ್ಟಿಗೇ ಇದ್ದೆವಲ್ಲ ಎನ್ನುವ ಸಲಿಗೆ. ಆದರೆ ಅದ್ಯಾವುದನ್ನೂ ಲೆಕ್ಕಕ್ಕೆ ತೆಗದುಕೊಳ್ಳಲು ಬಯಸದ ಅನಂತನದು ಬೇರೆಯೇ ಪ್ರಪಂಚ. ಈ ಹಳ್ಳಿಯ ಗಾಳಿ ಕುಡಿದು ಇಲ್ಲಿಯ ನೀರನ್ನೇ ಸೇವಿಸುತ್ತ ಈ ಅನಾಗರೀಕತೆಯನ್ನೇ ಬದುಕೆಂದು ಜೀವನ ಸಾಗಿಸುವವರೊಂದಿಗೆ ಏನು ಮಾತು ಎನ್ನುವ ಉಪೇಕ್ಷೆ.
ಆದಿ ಮೊದ ಮೊದಲು ಅವನ ಅಲಕ್ಷ್ಯ ತನ್ನ ಗಮನಕ್ಕೇ ಬರಲಿಲ್ಲವೇನೋ ಎನ್ನುವಂತೆ ತಾನಾಗಿಯೇ ಮಾತಾಡಿಸುತ್ತಿದ್ದ. ಆದರೆ ಬರಬರುತ್ತ ತಮ್ಮನ ದೊಡ್ಡಸ್ತಿಕೆ ತೀವ್ರವಾದಾಗ ಅದೂ ಸುತ್ತ ಮುತ್ತ ಯಾರಿದ್ದಾರೆ ಯಾರಿಲ್ಲ ಎನ್ನುವುದನ್ನೂ ಗಣನೆಗೆ ತೆಗೆದುಕೊಳ್ಳದೇ ಅಣ್ಣನನ್ನು ಹೀಯಾಳಿಸತೊಡಗಿದಾಗ ಅವನನ್ನು ಕೆದಕಿ ಮಾತಾಡಿಸುವುದನ್ನು ನಿಲ್ಲಿಸಿದ್ದ. ಆದರೆ ಪ್ರತಿ ಸಲ ಊರಿಗೆ ಬಂದು ತಿರುಗಿ ಹೋಗುವಾಗ ಸಾಮಾನ್ಯವಾಗಿ ಅವನು ತೆಗೆದುಕೊಂಡು ಹೋಗುತ್ತಿದ್ದ ದುಡ್ಡು ಮಾತ್ರ ತಪ್ಪದೇ ಅಮ್ಮನ ಮೂಲಕ ಅವನನ್ನು ತಲುಪುವ ವ್ಯವಸ್ಥೆ ಮಾಡುತ್ತಿದ್ದ.
ಈಗ ಅಂತ್ಯನೂ ಹಾಗೆಯೇ ಆಗುತ್ತಾನೇನೋ ಎನ್ನುವ ಹೆದರಿಕೆ. ಅದು ಬೇರೆ ಇವನೊಂದಿಗೆ ಅನಂತನೊಡನಿದ್ದಂತೆ ಮೊದಲಿನಿಂದ ಬಳಕೆಯೂ ಇಲ್ಲ. ಮಾತಾಡ ಹೊರಟರೆ ಹೆಚ್ಚು ಮಾತಿಲ್ಲದೇ ಎದ್ದು ಹೋಗುತ್ತಿದ್ದ. ಅನಂತನಂತೆ ಹೀಯಾಳಿಕೆಯ ಮಾತನ್ನಾಡುತ್ತಿರಲಿಲ್ಲ ನಿಜ. ಆದರೆ ಅಣ್ಣ ತಮ್ಮನ ನಡುವೆ ಇರಬೇಕಾದ ಸಲಿಗೆ ಇರಲಿಲ್ಲ. ಆದಿಗೆ ನೋವಾಗುತ್ತಿತ್ತು. ಶಾಸ್ತ್ರೀಗಳ ಹತ್ತಿರ ಹೇಳಿಕೊಳ್ಳುತ್ತಿದ್ದ. ಅಣ್ಣ ತಮ್ಮನ ನಡುವೆ ತಾನು ಮಾತನಾಡುವುದು ಸರಿಯಾಗುತ್ತದೋ ಇಲ್ಲವೋ ಎನ್ನುವ ಅನುಮಾನವಿದ್ದರೂ ಪದೇ ಪದೇ ಆದಿ ಅವರೊಂದಿಗೆ ಅಲವತ್ತುಕೊಂಡಾಗ ಅವರೇ ಹೇಳಿದ್ದರು `ಅಲ್ಲ ಆದಿ. ಅಂತ್ಯನ ಪ್ರವರ್ತಿಯೇ ಹಾಗೆ ಎಂದು ಕಾಣುತ್ತದೆ.
ನಮ್ಮಲ್ಲಿಯೂ ಯಾರೊಡನೆಯೂ ಅವನು ಬೇಕಾದ್ದಕ್ಕಿಂತ ಹೆಚ್ಚು ಮಾತನಾಡುವುದಿಲ್ಲ. ಅವನಾಯಿತು. ಅವನ ತರಬೇತಾಯಿತು. ಉಳಿದಂತೆ ಲೈಬ್ರರಿಗೆ ಹೋಗಿ ಓದುತ್ತ ಕುಳಿತುಕೊಳ್ಳುತ್ತಾನೆ. ಅವನ ರೂಮಿನಲ್ಲಿಯೂ ಅಷ್ಟೆ. ಲೈಬ್ರೆರಿಯಲ್ಲಿ ಇಷ್ಟರವರೆಗೆ ಯಾರೂ ತೆರೆದು ಸಹ ನೋಡದಿದ್ದಂತಹ ಪುಸ್ತಕಗಳನ್ನು ತೆಗದುಕೊಂಡು ಹೋಗಿ ರಾಶಿ ಹಾಕಿಕೊಂಡಿದ್ದಾನೆ. ಬೇರೆ ಯಾರೂ ಆ ಪುಸ್ತಕಗಳನ್ನು ಮುಟ್ಟಿ ನೋಡುವ ಇಚ್ಛೆಯನ್ನೂ ವ್ಯಕ್ತಪಡಿಸುವುದಿಲ್ಲವಾದ್ದರಿಂದ ನಾನೂ ಸುಮ್ಮನಿದ್ದೇನೆ ಅವನಾದರೂ ಓದಲಿ ಎಂದು’
ಶಾಸ್ತ್ರೀಗಳ ಉತ್ತರದಿಂದ ಆದಿಗೆ ಸಮಾಧಾನವಾಗುವ ಬದಲು ಚಿಂತೆಯೇ ಆಗಿತ್ತು. ಅನಂತ ತನ್ನ ಸುತ್ತಲಿನ ಸಮಾಜದಲ್ಲಿ ತೀರ ಆಳವಾಗಿ ಸೇರಿಕೊಂಡು ತನ್ನವರನ್ನೇ ತಿರಸ್ಕರಿಸುವಷ್ಟು ಮುಂದೆ ಹೋಗಿದ್ದಾನೆ. ಅದೇ ಇಲ್ಲಿ ಅಂತ್ಯ ಸಮಾಜದಿಂದಲೇ ವಿಮುಖನಾಗಿ ಸುತ್ತಲಿದ್ದವರ ಬಗ್ಗೆ ನಿರ್ಲಿಪ್ತತೆ ಬೆಳೆಸಿಕೊಳ್ಳುತ್ತಿದ್ದಾನೆ.
ಆದಿಯ ಲೆಕ್ಕದಲ್ಲಿ ಎರಡೂ ಒಳ್ಳೆಯದಲ್ಲ. ಅವನ ಮಟ್ಟಿಗೆ ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಬದುಕುವುದೇ ಜೀವನ. ಅಂತಹ ಜೀವನದಲ್ಲಿಯೇ ಏನಾದರೂ ಹೆಚ್ಚಿನದನ್ನು ಮಾಡಿದರೆ ಅದೇ ಸಾಧನೆ. ಅದು ಬಿಟ್ಟು ಸಮಾಜದಿಂದ ಹೊರಗೆ ನಿಂತು ಅದೇನೋ ಸಾಧನೆ ಮಾಡುತ್ತೇನೆ ಎಂದು ಹೊರಟವರ ಬಗ್ಗೆ ಅವನಿಗೆ ಯಾವಾಗಲೂ ಅಷ್ಟಕ್ಕಷ್ಟೆ. ಅಂತಹ ಆದಿಗೆ ಈಗ ಅಂತ್ಯನೂ ಆ ದಾರಿ ಹಿಡಿಯುತ್ತಿದ್ದಾನೆಂದರೆ ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವೇ ಆಗಿತ್ತು.
|ಇನ್ನು ನಾಳೆಗೆ |






0 Comments