ಪಿ ಪಿ ಉಪಾಧ್ಯ
28
ಅಂತ್ಯನ ಬದುಕು ಯಕ್ಷಗಾನದತ್ತ ಬದಲಾಯ್ತು.
ಶಾಸ್ತ್ರೀ ಗಳಿಗೆ ಒಂದು ತೆರನ ಅಯೋಮಯ. ಇರಿ ಎಂದು ಹೇಳಲು ಅಂತಹ ಸಿರಿವಂತರ ಮನೆಯ ಮಗನನ್ನು ಇಲ್ಲಿ ಇರಲು ತಾನು ಹೇಗೆ ಒಪ್ಪಿಗೆ ಕೊಡುವುದು ಎನ್ನುವುದು ಒಂದಾದರೆ ಇದು ಅವರದೇ ಸಂಸ್ಥೆ. ಅಲ್ಲಿ ಇರಲಾಗದು ಎಂದು ಅವರ ಮಗನಿಗೇ ಹೇಳಲು ನಾನು ಯಾರು ಎನ್ನುವುದು ಇನ್ನೊಂದು. ಅವರು ಆ ದ್ವಂದ್ವದಲ್ಲಿ ಇರುವಾಗಲೇ ಅಂತ್ಯ ಶಾಸ್ತ್ರೀಗಳೇ.. ನನಗೂ ಯಕ್ಷಗಾನವನ್ನೇ ಮುಂದೆ ಕಲಿಯಬೇಕೆಂದು ಆಸೆ. ಇಲ್ಲಿ ಎಲ್ಲ ಅನುಕೂಲತೆಗಳೂ ಇವೆಯಲ್ಲ. ನನಗೆ ಒಳ್ಳೆಯದಾಗುತ್ತದೆ' ಆಗಲೇ ನಿರ್ಧಾರ ಮಾಡಿದವನಂತೆ ಹೇಳಿದ.
ಶಾಸ್ತ್ರೀಗಳು ಒಂದು ಕ್ಷಣ ಏನು ಮಾತನಾಡುವುದು ಎಂದು ತಿಳಿಯದೇ ಸುಮ್ಮನಾಗಿದ್ದರೂ ಅಂತಹ ಪರಿಸ್ಥಿತಿ ಬಂದರೆ ಅಂತ್ಯನಿಗೆಂದೇ ಒಂದು ಕೋಣೆಯನ್ನು ಬಿಡಬೇಕು. ಹಾಗಾದರೆ ಯಾವ ರೂಮನ್ನು ಕೊಡುವುದು ಎಂದೆಲ್ಲ ಲೆಕ್ಕ ಹಾಕಲಿಕ್ಕೇ ತೊಡಗಿದ್ದರು. ಅಷ್ಟರಲ್ಲಿ ಪುನಃ ಅಂತ್ಯನೇ ಹೇಳಿದ.ನಮ್ಮ ಮನೆಯಲ್ಲಿ ಏನು ಹೇಳುತ್ತಾರೋ ಎಂದು ಆಲೋಚಿಸುತ್ತಿದ್ದೀರಾ ಶಾಸ್ತ್ರೀಗಳೇ… ಅದನ್ನು ನನಗೆ ಬಿಡಿ’. ಆಗಲೇ ತಾನು ತಿರುಗಿ ಮಾವನ ಮನೆಗೆ ಹೋಗುತ್ತೇನೆಂದು ಹೇಳಿದಾಗ ಯಾವುದೇ ವಿರೋಧವನ್ನು ವ್ಯಕ್ತಪಡಿಸದ ಅಮ್ಮ ಮತ್ತು ಅಲ್ಲೆಲ್ಲೋ ನಿಂತು ತಾನು ಅಮ್ಮನೊಂದಿಗೆ ಮಾತನಾಡುತ್ತಿದ್ದುದನ್ನು ಕೇಳಿಯೂ ಉತ್ತರ ಕೊಡದಿದ್ದ ಅಪ್ಪ ನೆನಪಾಗಿದ್ದರು ಅವನಿಗೆ. ಅಣ್ಯಂದಿರದ್ದಂತೂ ಏನೂ ಪ್ರತಿಕ್ರಿಯೆಯೇ ಇರಲಿಕ್ಕಿಲ್ಲ ಎಂದುಕೊಂಡ ಅವ ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ ಅಷ್ಟೆ .
ಆದರೆ ಈ ಹದಿನಾರು ಹದಿನೇಳರ ಹುಡುಗನ ಮಾತನ್ನು ಹೇಗೆ ಒಪ್ಪಿಬಿಡುವುದು. ಶಾಲೆಗೆ ಬೇರೆ ಹುಡುಗರನ್ನು ತೆಗೆದುಕೊಳ್ಳುವಾಗಲೂ ಅವರವರ ಅಪ್ಪನೋ ಅಮ್ಮನೋ ಬಂದು ಸೇರಿಸಿ ಹೋಗಬೇಕು. ಹಾಗಿರುವಾಗ ಈಗ ತಮ್ಮ ಯಜಮಾನರ ಮಗನನ್ನೇ ಸೀದಾ ಹೇಗೆ ತೆಗೆದುಕೊಳ್ಳುವುದು ಎನ್ನುವುದು ಅವರ ದ್ವಂದ್ವ.
ಅವರ ಅನುಮಾನವನ್ನು ಗಮನಿಸಿಯೋ ಎನ್ನುವಂತೆ ಆಯ್ತು ಶಾಸ್ತ್ರೀ ಗಳೇ.. ನಾನು ಮನೆಗೆ ಹೋಗಿ ಅವರೆಲ್ಲರ ಅನುಮತಿ ಪಡೆದೇ ಬರುತ್ತೇನೆ' ಎಂದ ಅಂತ್ಯ ತಿರುಗಿ ನೋಡದೆಯೇ ನಡೆದಿದ್ದ. ನಡೆಯುವ ದಾರಿಯುದ್ದಕ್ಕೂ ಅವನ ಮನಸ್ಸಿನಲ್ಲಿ ಯಕ್ಷಗಾನದ್ದೇ ಗುಂಗು ಮತ್ತು ತಾನು ಅದೇ ಕೇಂದ್ರದಲ್ಲಿ ಹೆಸರು ಮಾಡಿದ ಕನಸು. ತಿರುಗಿ ಮನೆಗೆ ಬಂದವ ತನ್ನ ಹೊಸ ನಿರ್ಧಾರವನ್ನು ಮನೆಯವರೆಲ್ಲರಿಗೂ ಕೇಳುವಂತೆ ಹೇಳಿದಾಗ ಅಂತಹ ಪ್ರತಿಕ್ರಿಯೆಯೇನೂ ಬಂದಿರಲಿಲ್ಲ. ಅಮ್ಮ ಸುಮ್ಮನಿದ್ದಳು.
ಬಹುಶಃ ಬೆಳಿಗ್ಗೆಯೇ ಅವನು ಹೊರಟದ್ದನ್ನು ಕಂಡು ತೀರ್ಥಳ್ಳಿಯ ಬಸ್ಸನ್ನು ಹತ್ತಿಯೇಬಿಟ್ಟಿದ್ದಾನೆಂದು ಎಣಿಸಿದ್ದಳೋ ಏನೋ. ಈಗ ತಿರುಗಿ ಮನೆಯಲ್ಲಿ ಪ್ರತ್ಯಕ್ಷನಾದವನನ್ನು ಕಂಡು ಏನು ಹೇಳಬೇಕೆಂದು ತಿಳಿಯದೆ ಸುಮ್ಮನಾಗಿರಬೇಕು. ಅಪ್ಪ ಮಾಮೂಲಿ ಮೂಕ. ಆದಿ ಮಾತ್ರಅಲ್ಲ ಅಂತ್ಯ.. ಇನ್ನೂ ಮುಂದೆ ಓದುವುದು ಬೇಡವಾ.. ನಾನೋ ಯಾರು ಹೇಳಿದ್ದನ್ನೂ ಕೇಳದೇ ಇಲ್ಲದೆ ಎಸ್‌ಎಸ್‌ಎಲ್‌ಸಿಗೇ ನಿಲ್ಲಿಸಿದೆ. ಬಿಡು ನನಗದೇ ಸಾಕು. ಅನಂತ ನೋಡು ಇಂಜಿನಿಯರಿಂಗ್ ಮುಗಿಸುತ್ತಿದ್ದಾನೆ. ಇನ್ನು ಮುಂದೆಯೂ ಕಲಿಯಬೇಕೆಂದು ಆಲೋಚಿಸುತ್ತಿದ್ದಾನೆ. ಎಡೆದರೆ ಫಾರಿನ್‌ಗೂ ಹೋಗುತ್ತಾನಂತೆ. ನೀನು ಒಂದು ಮೆಡಿಕಲ್ ಮಾಡಿದ್ದರೆ ಚನ್ನಾಗಿತ್ತು. ಅದು ಹೋಗಲಿ ಕಾಲೇಜು ಮೆಟ್ಟಲಾದರೂ ಹತ್ತುವುದು ಬೇಡವೇ
ಆ ಅಣ್ಣನ ಹತ್ತಿರ ಮಾತನಾಡಿ ಅಭ್ಯಾಸವೇ ಇಲ್ಲ ಅಂತ್ಯನಿಗೆ. ರಜೆಗೆ ಊರಿಗೆ ಬಂದಾಗ ಅನಂತಣ್ಣನೂ ರಜೆಯಿದ್ದು ಊರಿಗೆ ಬಂದಿದ್ದರೆ ಅವನೊಂದಿಗೆ ಮಾತ್ರ ಇವನ ಮಾತು ಒಡನಾಟ. ಅದೂ ಒಂದೋ ಎರಡೋ ದಿನ. ಮತ್ತೆಲ್ಲ ಸುಮ್ಮನೆ ಒಬ್ಬನೇ ಗದ್ದೆಯ ಅಂಚಿನಲ್ಲಿ, ಗುಡ್ಡೆಯ ಮೇಲಿನ ಗಾಳಿ ಮರಗಳ ಹಾಡಿಯಲ್ಲಿ, ಅದೂ ಇಲ್ಲದಿದ್ದರೆ ಆ ಹಾಡಿ ಅಂತ್ಯವಾಗಿ ಸಮುದ್ರ ಸುರುವಾಗುವ ಆ ಸಮುದ್ರದ ಅಂಚಿನ ಬಿಳೀ ಮರಳ ರಾಶಿಯ ಮೇಲೆ ತಿರುಗಾಡುವುದು ಮತ್ತು ತನ್ನ ಕನಸಿನ ಗೋಪುರಗಳನ್ನು ಕಟ್ಟುವುದು.
ಆ ಗೋಪುರಗಳಲ್ಲಿ ಎಂದೂ ಶ್ರೀಮಂತ ಬದುಕಿನ ಕನಸು ಇರುತ್ತಿರಲಿಲ್ಲ. ಬದಲಿಗೆ ಮಾವನ ಮನೆಯಲ್ಲಿದ್ದುಕೊಂಡು ಆ ಮೇಷ್ಟ್ರು ಆಡಿಸಿದ ಯಕ್ಷಗಾನ ಪ್ರಸಂಗಗಳಲ್ಲಿ ತಾನು ಕುಣಿದ ಪಾತ್ರಗಳಿರುತ್ತಿದ್ದುವು. ತನ್ನ ಕುಣಿತದಲ್ಲಿ ಮೇಷ್ಟ್ರು ಗಮನಿಸಿದರೂ ಹೇಳದ ತಾನು ಮಾಡಿದ ತಪ್ಪುಗಳಿರುತ್ತಿದ್ದವು. ತಾಳ ತಪ್ಪದೆ ಹೆಜ್ಜೆ ಹಾಕಿದ ತನ್ನ ದಿಗಿಣದ ಬಗ್ಗೆ ಮೇಷ್ಟ್ರು ಹೇಳಿದ ಮೆಚ್ಚುಗೆಯ ಮಾತುಗಳಿರುತ್ತಿದ್ದುವು. ಮೇಷ್ಟ್ರು ಸಹ ಉತ್ತರಿಸಲಾಗದಿದ್ದ ತನ್ನ ಪ್ರಶ್ನೆಗಳಿರುತ್ತಿದ್ದುವು.
ಅಂತಹ ಅಂತ್ಯನಿಗೆ ಈಗ ಏಕಾ ಏಕಿ ದೊಡ್ಡಣ್ಣ ಮೆಡಿಕಲ್ಲಿಗೆ ಹೋಗು. ಕನಿಷ್ಠ ಕಾಲೇಜಿಗಾದರೂ ಹೋಗು ಎಂದರೆ? ಹಿಂದೆ ಯಾರೂ ಎಂದೂ ಈ ಬಗ್ಗೆ ಏನೂ ಹೇಳಿರಲಿಲ್ಲ. ಮಾತನಾಡಿರಲಿಲ್ಲ. ಅನಂತಣ್ಣ ತಾನು ಎಂಜಿನಿಯರಿಂಗಿಗೆ ಓದುತ್ತಿದ್ದರೂ ಈ ತಮ್ಮನ ಮುಂದಿನ ಓದಿನ ಬಗ್ಗೆ ಕೇಳಿರಲಿಲ್ಲ. ಬಹುಶಃ ಮಾವ ಆಸೆಯಿಂದ ಕರೆದುಕೊಂಡು ಹೋದಂದೇ ತಾನು ಇವರೆಲ್ಲರಿಗೆ ದೂರವಾಗಿಯೇ ಬಿಟ್ಟೆನೇನೋ ಎನ್ನಿಸುತ್ತಿತ್ತು. ಈಗಲೂ ಹಾಗೆಯೇ ಅನ್ನಿಸಿತು.
ಬೇಡ ಅಣ್ಣ. ಬಹುಶಃ ನನ್ನ ದಾರಿ ಬೇರೆ. ನಾನು ಇವತ್ತು ವಾಪಾಸು ತೀರ್ಥಳ್ಳಿಗೆ ಹೊರಟವನಿಗೆ ಅಕಸ್ಮಾತ್ತಾಗಿ ಶಾಸ್ತ್ರೀಗಳು ಅದೂ ನಿನ್ನನ್ನು ಹುಡುಕಿಕೊಂಡು ಬಂದವರು ಸಿಕ್ಕಿದರು. ಅವರೊಂದಿಗೇ ನಾನೂ ಯಕ್ಷಗಾನ ಕೇಂದ್ರಕ್ಕೆ ಹೋದೆ. ಎಂತಹ ಜಾಗ.. ಎಂತಹ ಅನುಕೂಲತೆ.
ನಮ್ಮ ಮನೆಯವರಿಂದಲೇ ನಡೆಯುತ್ತಿರುವ ಸಂಸ್ಥೆ. ನಾನು ಅಲ್ಲೇ ಇರಬೇಕೆಂದು ಮನಸು ಮಾಡಿದೆ. ಆದರೆ ಶಾಸ್ತ್ರೀಗಳೇ ಹಿಂದೆ ಮುಂದೆ ನೋಡಿದರು. ನಾನೇ ನಿಮ್ಮೆಲ್ಲರಿಗೆ ಹೇಳಿ ಹೋಗುವ ಎಂದು ಬಂದೆ. ಶಾಸ್ತ್ರೀಗಳಿಗೆ ನೀವೂ ಒಂದು ಮಾತು ಹೇಳಿಬಿಡಿ' ಆದಿಗೆ ಆಶ್ಚರ್ಯ. ತಮ್ಮನ ಮಾತಿನಲ್ಲಿದ್ದ ವಯಸ್ಸಿಗೆ ಮೀರಿದ ಪ್ರೌಢಿಮೆ ನೋಡಿ. ಮಾತಿನಲ್ಲಿನ ಖಚಿತತೆ ನೋಡಿ. ಅದರ ಹಿಂದಿನ ನಿರ್ಧಾರ ನೋಡಿ. ಇವ ತಪ್ಪು ಹೆಜ್ಜೆಯಿಡುತ್ತ ಮಾವನ ತೊಡೆಯೇರಿ ಕುಳಿತು ಹಾಗೆಯೇ ಅವನ ಹೆಗಲೇರಿ ಊರು ಬಿಟ್ಟ ಅಂತ್ಯನಲ್ಲ. ಅಪ್ಪ ಅಮ್ಮ ಅಣ್ಣಂದಿರನ್ನು ಬಿಟ್ಟು ದೂರದ ಊರಿನಲ್ಲಿ ಬೆಳೆದ ಅವನಲ್ಲಿ ವಯಸ್ಸಿಗೆ ಮೀರಿದ ತಿಳುವಳಿಕೆಯಿದೆ. ತನ್ನ ಮುಂದಿನ ಬದುಕಿನ ಬಗ್ಗೆ ಖಚಿತ ಅಭಿಪ್ರಾಯವಿದೆ. ಅಂದ ಮೇಲೆ ತಾನು ಇನ್ನೇನಾದರೂ ಹೇಳಿ ಅವನನ್ನು ಬೇರೆ ದಾರಿ ಹಿಡಿಸುವ ನಿಷ್ಫಲ ಪ್ರಯತ್ನ ಮಾಡುವುದಕ್ಕಿಂತ ಅವನ ದಾರಿಯಲ್ಲೇ ಅವನನ್ನು ಹೋಗಲು ಬಿಡುವುದೇ ಒಳ್ಳೆಯದೆನಿಸಿತ್ತು. ಸರಿ ನಿನ್ನಿಷ್ಟದಂತೆಯೆ ಆಗಲಿ. ಶಾಸ್ತ್ರೀಗಳಿಗೆ ನಾನು ಹೇಳುತ್ತೇನೆ. ನೀನು ಅಲ್ಲಿಯೇ ಇರುವಿಯಂತೆ’ ಎಂದ.
ಅಂದಿನಿಂದ ಅಂತ್ಯನ ಬದುಕು ತೀರ್ಥಳ್ಳಿಯ ಹತ್ತಿರದ ಆ ಹಳ್ಳಿಯಿಂದ ಅವನ ಹುಟ್ಟೂರಿನ ಹತ್ತಿರದ ಈ ಯಕ್ಷಗಾನದ ತರಬೇತಿ ಕೇಂದ್ರಕ್ಕೆ ಬದಲಾಯ್ತು. ಅಂತ್ಯ ಎಂದಾದರೊಂದು ದಿನ ತನ್ನ ಮನಸ್ಸನ್ನು ಬದಲಾಯಿಸಿ ಇಲ್ಲಿಗೇ ಬಂದಾನು. ದಿನಾ ಬೆಳಿಗ್ಗೆ ಸಂಜೆ ಬಸ್ಸಿನಲ್ಲಿ ತಿರುಗಾಡುತ್ತ ಆಗಷ್ಟೇ ತೀರ್ಥಳ್ಳಿಯಲ್ಲಿ ಪ್ರಾರಂಭವಾಗಿದ್ದ ಕಾಲೇಜಿಗೆ ಹೋಗಿ ಬಂದು ಮಾಡಿಯಾನು.
ವರ್ಷವೆರಡು ವರ್ಷದೊಳಗೆ ಅವನಿಗೇ ಒಂದು ಮೋಟರು ಸೈಕಲನ್ನು ಕೊಡಿಸಿ ಅವನಷ್ಟಕ್ಕೇ ಖುಶಿಯಿಂದ ತಿರುಗುವಂತೆ ಮಾಡುವ ಎಂದೆಲ್ಲ ಆಸೆಯ ಯೋಜನೆಗಳನ್ನು ಹಾಕಿಕೊಂಡಿದ್ದ ಅವನ ಅತ್ತೆ ಮಾವಂದಿರಿಗಂತೂ ಇದನ್ನು ಕೇಳಿ ತೀರದ ನಿರಾಸೆಯಾಗಿತ್ತು. ಖುಷಿ ಪಟ್ಟವರೆಂದರೆ ಆ ಮಾವನ ತಮ್ಮ ಮತ್ತು ತಮ್ಮನ ಹೆಂಡತಿ ಮಾತ್ರ.
|ಇನ್ನು ನಾಳೆಗೆ |






0 Comments