ಜಯಲಕ್ಷ್ಮಿ ಪಾಟೀಲ್ ಅಂಕಣ – ಆ ಅನುಮಾನ ನನ್ನನ್ನು ಘಾಸಿಗೊಳಿಸಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

30

“ನಿನಗ ಗಂಡು ನೋಡಬೇಕು ಅನಕೊಂಡೀವಿ. ಎಂಥಾ ಗಂಡ ಬೇಕು ಹೇಳು ನಿನಗ. ಅಂಥೋರ್ನ ನೋಡ್ತೀವಿ.”
ನೀರು ಕುಡಿಯಲೆಂದು ಅಡುಗೆ ಮನೆಗೆ ಬಂದ ನನ್ನನ್ನು, ಒರಳಲ್ಲಿ ಹಾರೆಯಿಂದ ಶೇಂಗಾ ಚಟ್ನಿಯನ್ನು ಕುಟ್ಟುತ್ತಿದ್ದ ಅವ್ವ ಒಮ್ಮೆಲೇ ಕೇಳಿದಾಗ ಕಕ್ಕಾಬಿಕ್ಕಿಯಾಗಿದ್ದೆ.,
“ಹೋಗಬೇ ನಾ ಲಗ್ನಾ ಆಗೂದಿಲ್ಲ” ಎಂದೆ.
“ಅಲ್ಲ, ಸುಮ್ನ ಕೇಳಾಕತ್ತಿಲ್ಲ ನಿನ್ನ. ನಿನಗ ಖರೇನ ಗಂಡ್ ನೋಡಾಕ ಚಾಲೂ ಮಾಡಬೇಕಂತ ಅನಕೊಂಡೀವಿ. ಅದಕ್ಕ ಕೇಳಾಕತ್ತೀನಿ”
ಇಂಥಾ ಸೂಕ್ಷ್ಮ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ಕೇಳಿದ ಅವ್ವನ ಬಗ್ಗೆ ಅಭಿಮಾನ ಉಕ್ಕಿತು. “ನನಗ ಛಂದ, ಶ್ರೀಮಂತ ಗಂಡನ ಬೇಕು ಅಂತೇನಿಲ್ಲಬೇ. ಬಡವರಾದ್ರೂ ಅಡ್ಡಿಯಿಲ್ಲ ಚಟ ಇರಬಾರ್ದು, ಒಳ್ಳೇಂವ ಇರಬೇಕು ಅಷ್ಟ” ಎಂದೆ ಏನೋ ಮಹಾ, ಅವ್ವ ನನ್ನನ್ನೀಗ ಹೀಗೆ ಕೇಳ್ತಾಳೆ ಸೊ ಹೀಗೇ ಹೇಳಬೇಕು ಎಂದು ಮೊದಲೇ ನಿರ್ಧರಿಸಿದ್ದೆ ಎಂಬಂತೆ. ಅಯಾಚಿತವಾಗಿ ನನ್ನ ಬಾಯಿಂದ ಆ ಮಾತು ಬಂದಿತ್ತು ಮತ್ತು ನನಗದರ ಬಗ್ಗೆ ಗೊಂದಲವಿರಲಿಲ್ಲ ಅನ್ನುವುದೂ ಅಷ್ಟೇ ಸತ್ಯ. ಆ ಕ್ಷಣ ಹೊಳೆದ ನನ್ನ ತಾಯಿಯ ಕಣ್ಣಲ್ಲಿನ ತೃಪ್ತಿ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
ಅವ್ವ ನನ್ನನ್ನು ಹಾಗೆ ಕೇಳಿದಾಗ ಆಗಷ್ಟೇ ಸೆಕೆಂಡ್ ಪಿಯೂಸಿ ರಿಸಲ್ಟ್ ಬಂದು ವಾರವಾಗಿತ್ತು. ಈಗ ವರಾನ್ವೇಷಣೆಗೆ ತೊಡಗಿದರೆ ನನ್ನ ಡಿಗ್ರಿ ಮುಗಿಯುವುದರೊಳಗೆ ಗಂಡು ಸಿಗಬಹುದು ಎನ್ನುವುದು ಅವರ ದೂರದ ಆಲೋಚನೆಯಾಗಿತ್ತು. ಮದುವೆ ಅನ್ನುವುದು ಡಿಗ್ರಿಗಿಂತ ಮುಖ್ಯವಾಗಿದ್ದ, ಆದರೆ ಹೆಣ್ಣಿಗೂ ಹೆಚ್ಚಿನ ವಿದ್ಯಾಭ್ಯಾಸ ಅಗತ್ಯವಿದೆ ಎಂದು ಬಹಳಷ್ಟು ಜನರಿಗೆ ತಾಜಾ ತಾಜಾ ಮನವರಿಕೆಯಾಗುತ್ತಿದ್ದ ಕಾಲವದು. ಅದರಲ್ಲೂ ಹಳ್ಳಿಯಲ್ಲಿರುವ ಅಥವಾ ಹಳ್ಳಿಯ ಹಿನ್ನೆಲೆಯಿಂದ ನಗರಕ್ಕೆ ಬಂದ ಬಹುತೇಕರಲ್ಲಿ, ಮಗಳು ಹತ್ತನೇ ತರಗತಿಯವರೆಗೆ ಓದಿ ಗಂಡನ ಪತ್ರ ಓದಲು ಬಂದರೆ ಸಾಕು, ನೌಕರಿಯಲ್ಲಿದ್ದ ವರ ಸಿಗುತ್ತಾನೆ, ಮಗಳು ಹೊಲ ತ್ವಾಟಪಟ್ಟಿ ಎನ್ನುತ್ತಾ ಬಿಸಿಲಲ್ಲಿ ಬಾಡದೇ ಸುಖವಾಗಿರುತ್ತಾಳೆ ಎನ್ನುವ ಆಲೋಚನೆಯೇ ಹೆಣ್ಣಿನ ವಿದ್ಯಾಭ್ಯಾಸದ ಹಿಂದಿನ ಉದ್ದೇಶವಾಗಿತ್ತು. ಅಂಥವರಿಗೆಲ್ಲ ಮಗಳು ಡಿಗ್ರಿ ಮಾಡಿದರೆ ಇನ್ನೂ ಉನ್ನತ ಹುದ್ದೆಯಲ್ಲಿರುವ ಹುಡುಗ ಮಗಳ ಕೈಹಿಡಿಯಬಹುದು ಅವಳು ಇನ್ನೂ ಸುಖವಾಗಿರುತ್ತಾಳೆ ಎನ್ನುವ ಆಸೆಯೇ ಓದಿಸಲು ಪ್ರೇರೇಪಿಸುತ್ತಿತ್ತೇ ವಿನಹ, ಆಕೆಯ ವ್ಯಕ್ತಿತ್ವ, ಔದ್ಯೋಗಿಕ ಔನತ್ಯ, ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಯೋಚಿಸುತ್ತಿರಲಿಲ್ಲ. ನನ್ನ ತಂದೆ ತಾಯಿ ಈ ವಿಷಯದಲ್ಲಿ ನಮ್ಮ ವ್ಯಕ್ತಿತ್ವ ಔನತ್ಯದ ಬಗ್ಗೆ ಯೋಚಿಸಿಯೇ ನನ್ನನ್ನು ಇಂಜಿನಿಯರಿಂಗ್, ತಂಗಿಯನ್ನು ವೈದ್ಯಕೀಯ ಓದಲು ಕಳಿಸಿದ್ದರಾದರೂ, ಅದಕ್ಕೂ ಮುಖ್ಯ ಮದುವೆ ಎನ್ನುವ ಕಾನ್ಸೆಪ್ಟ್ ನಿಂದ ಅವರೂ ಸಂಪೂರ್ಣ ಮುಕ್ತರಾಗಿರಲಿಲ್ಲ. ಬದಲಾವಣೆ ಎನ್ನುವುದು ಚಿಟಿಕೆ ಹೊಡೆದಂತೆ ತಕ್ಷಣಕ್ಕೆ ಆಗುವುದಲ್ಲವಲ್ಲ.
ಹೀಗಾಗಿ ಈಗಿನ ಬಹುತೇಕರಂತೆ ಹುಡುಗಿ ಸಂಪೂರ್ಣ ವಿದ್ಯಾಭ್ಯಾಸ ಮುಗಿಸಿ, ತನ್ನ ಕಾಲ ಮೇಲೆ ನಿಂತ ನಂತರ ಮದುವೆ ವಿಚಾರ ಎನ್ನುವ ನಿರಾಳತೆ ಇರಲಿಲ್ಲ ಆಗಿನವರಿಗೆ. ನಮಗೂ ಮನೆಯಲ್ಲಿ ನಮ್ಮ ಮದುವೆ ಕುರಿತು ಮಾತು ಬಂದರೆ ಅದು ಅಸಹಜ ಅನಿಸುತ್ತಿರಲಿಲ್ಲ. ಆಗೆಲ್ಲ ನಾಚಿಕೊಳ್ಳುವುದು ಕಡ್ಡಾಯ ಎಂಬಂತೆ ನಾಚಿ ಮುಖ ಕೆಂಪು ಮಾಡಿಕೊಂಡು, ಕಿವಿಗಳನ್ನು ಅಲ್ಲಿಯೇ ಬಿಟ್ಟು ಜಾಗ ಖಾಲಿ ಮಾಡುತ್ತಿದ್ದೆವು. ಹಿರಿಯರೆಲ್ಲ ಅದನ್ನು ಕಂಡು ಖುಷಿಯಿಂದ ನಗುವಾಗ ಒಂಥರಾ ಸಂಭ್ರಮಗೊಳ್ಳುತ್ತಿತ್ತು ಮನಸ್ಸು. ವಿನಾಕಾರಣ ಹಾಗೆ ಲಜ್ಜೆಗೊಳ್ಳುತ್ತಿದ್ದ ನನ್ನ ಅಮಾಯಕತೆಯನ್ನು ಈಗ ನೆನೆದರೆ ನಗು ಬರುತ್ತದೆ. ಅವ್ವ ನನ್ನನ್ನು ಹಾಗೆ ಕೇಳಿದಾಗ, “ಇಲ್ಲಬೇ, ಓದು ಮುಗಿಯೂಮಟ ನಾ ಮದವಿ ಆಗಂಗಿಲ್ಲ, ನನಗ ಈಗ ಮದವಿ ಬ್ಯಾಡ” ಎಂದು ಖಡಕ್ಕಾಗಿ ಹೇಳಬೇಕು ಅನ್ನುವ ವಿಚಾರ ಹತ್ತಿರವೂ ಸುಳಿಯಲಿಲ್ಲ ಎನ್ನುವುದು ನಾನೆಂಥಾ ಸಾಮಾನ್ಯ ಹುಡುಗಿಯಾಗಿದ್ದೆ ಎನ್ನುವುದನ್ನು ಸಾಬೀತುಪಡಿಸುತ್ತದೆ. ಮನಸ್ಥಿತಿ ವಯಕ್ತಿಕ. ಆದರೆ ಅದರಲ್ಲಾಗುವ ಮಾರ್ಪಾಟು ನಮ್ಮನ್ನು ಬೆಳೆಸಬೇಕೇ ವಿನ: ಕುಬ್ಜರನ್ನಾಗಿಸಬಾರದು ಎನ್ನುವುದು ನನ್ನ ಬದುಕಿನ ಅನುಭವ.

ನನ್ನನ್ನು ಇಂಜಿನಿಯರ್ ಓದಿಸಲು ಅಪ್ಪ ಅವ್ವ ನಿರ್ಧರಿಸಿ ಅಡ್ಮಿಷನ್ ಮಾಡಿಸಿದ್ದನ್ನು ತಿಳಿದು ನಿಂಬಾಳದಿಂದ ನಮ್ಮ ಮುತ್ತ್ಯಾ ಅಪ್ಪನಿಗೆ ತಿಳಿ ಹೇಳಲೆಂದೇ ಬಂದಿದ್ದರೋ ಏನೋ. ಆಗ ನನಗೆ ಸತತ ಜ್ವರ ಬೇರೆ ಬರ್ತಿತ್ತಲ್ಲ, ಹಾಗಾಗಿ ಕೋಣೆಯಲ್ಲಿ ನಾನು ನೆಲಕ್ಕೆ ಜಮಖಾನ ಹಾಕಿಕೊಂಡು ಮಲಗಿದ್ದೆ. ಅದು ಮದ್ಯಾಹ್ನದ ಹೊತ್ತು. ಅಪ್ಪಾ ಅಲ್ಲೇ ಮಂಚದ ಮೇಲೆ ಅಡ್ಡಾಗಿದ್ದರು. ಅಜ್ಜ ಊಟ ಮುಗಿಸಿ ಒಳಗೆ ಬಂದವರು, ಹೊಲ, ಲಾಗೋಡಿ ಅದೂ ಇದೂ ಮಾತಾಡುತ್ತಾ, ನಾನು ನಿದ್ದೆ ಮಾಡುತ್ತಿರುವೆ ಎಂದಕೊಂಡಿದ್ದರು ಅನಿಸುತ್ತೆ,
“ಪಪ್ಪಿನ್ನ ಇಂಜಿನಿಯರಿಂಗಿಗೆ ಯಾಕ ಹಾಕಿದಿ? ಬರೇ ಗಂಡು ಹುಡುಗೂರು ಇರು ಜಾಗ ಅದು. ನಾಳೆ ಏನರ ಹೆಚ್ಚುಕಮ್ಮಿ ಆದ್ರ ನಾ ಉರ್ಲು ಹಾಕ್ಕೋಬೇಕು. ಮನಿತನದ ಮರ್ಯಾದಿ ಮಣ್ಣ ಪಾಲಾಕ್ಕತಿ. ನನಗ ಅಂತಾದ್ದೆಲ್ಲ ತಡಕೊಳ್ಳೋ ಶಕ್ತಿ ಇಲ್ಲ. ಡಿಗ್ರಿ ಮಾಡ್ಸು ಬ್ಯಾಡ ಅನ್ನಂಗಿಲ್ಲ ನಾ. ಆದ್ರ ಇಂಜಿನಿಯರಿಂಗ್ ಬ್ಯಾಡ, ಸುಮ್ಮನ ಬಿಎ ಇಲ್ಲಾ ಬಿಎಸ್ಸಿ ಮಾಡ್ಸು.” ಅಂದ್ರು.
ಆಗ ಅಪ್ಪಾ, “ಎಂಥಾ ಮಾತ ಆಡ್ತಿ ಯಪ್ಪಾ ನೀನು. ಅಲ್ಲಿ ಮಕ್ಕೊಂಡಾಳ ನೋಡು, ಅಕಿನ್ನ ನೋಡಿದ್ರ ನಿನಗ ನನ್ನ ಮಗಳು ಹಾದಿ ತಪ್ಪತಾಳ ಅಂತ ಅನಸ್ತಯಿತೇನು? ಅಂತಾವೆಲ್ಲಾ ಮಾತಾಡಬ್ಯಾಡ, ಅಕಿ ಇಂಜಿನಿಯರಿಂಗ್ ಓದ್ಲಿ” ಎಂದರು. ಗೋಡೆಗೆ ಮುಖ ಮಾಡಿ, ಕಣ್ಣು ಮುಚ್ಚಿ ಮಲಗಿದ್ದ ನನ್ನ ಕಣ್ಣಿಂದ ಹನಿ ಎರಡು ಜಾರಿದವು. ನಿಜ ಹೇಳ್ತೀನಿ ಆ ಹೊತ್ತಲ್ಲಿ ನನ್ನ ತಂದೆಯ ಬಗ್ಗೆ ಅದೆಂಥಾ ಅಭಿಮಾನ ಉಕ್ಕಿತ್ತೆಂದರೆ ಯಾವತ್ತೂ ಅಪ್ಪ ಅವ್ವ ತಲೆ ತಗ್ಗಿಸುವಂತೆ ನಡೆದುಕೊಳ್ಳಬಾರದು ಎನ್ನುವ ಎಚ್ಚರ ಹುಟ್ಟಿತ್ತು ನನ್ನಲ್ಲಿ. ತಂದೆ ತಾಯಿಯರ ಅಂಥಾ ನಂಬುವಿಕೆ ಮಕ್ಕಳ ಮಾನಸಿಕ ಹದಕ್ಕೆ ಬಲವಾದ ಆಸರೆ. ಅನುಮಾನ ಸ್ಥೈರ್ಯವನ್ನೆ ಅಲುಗಿಸಿ ಕಂಗಲಾಗಿಸಿಬಿಡುತ್ತದೆ.

ಹಿರಿಯರೇನೋ ಆಗಿನಿಂದಲೇ ನನಗೆ ಹುಡುಗನನ್ನು ಹುಡುಕಲು ಯೋಚಿಸಿದರಾದರೂ ನನ್ನ ಕ್ಷಯರೋಗದಿಂದಾಗಿ ಅದು ಮುಂದೂಡಲ್ಪಟ್ಟು, ನಾನು ಗುಣಮುಖಳಾಗಿ ಮತ್ತೆ ಕಾಲೇಜಿಗೆ ಹೋಗತೊಡಗಿದ ಮೇಲೆ ವರಾನ್ವೇಷಣೆಗೆ ಮುಂದಾದರು. ಅಚ್ಚರಿ ಎಂಬಂತೆ ಆ ಮೊದಲು ಮದುವೆ ಕುರಿತು ಮಾತನಾಡಿದಾಗಲೆಲ್ಲ ನಾಚಿಕೊಳ್ಳುತ್ತಿದ್ದ ನಾನು, ನನ್ನ ನೋಡಲೆಂದು ಗಂಡಿನ ಕಡೆಯವರು ಬಂದಾಗ ನಿರ್ಭಾವುಕಳಾಗಿರುತ್ತಿದ್ದೆ. ಬಂದವರೆದುರು ಹೋಗಿ ಕುಳಿತುಕೊಳ್ಳುವುದು ನನ್ನ ಕರ್ತವ್ಯ ಅಷ್ಟೇ ಎಂಬಂತೆ ಹೋಗಿ ಕೂರುತ್ತಿದ್ದೆ, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆ. ಕೆಲವೊಮ್ಮೆ ಬಂದವರೆಲ್ಲರ ಕಾಲಿಗೆ ನಮಸ್ಕರಿಸಲು ಅಹಂಕಾರ ಅಡ್ಡ ಬರುತ್ತಿತ್ತು! ಆದರೆ ನನ್ನ ತಂದೆ ತಾಯಿಗೆ ಬಂದವರೆದುರು ಅವಮಾನವಾಗಬಾರದು ಅನ್ನುವ ಕಾರಣಕ್ಕಾಗಿ ನಮಸ್ಕರಿಸುತ್ತಿದ್ದೆ. ಆ ಅಹಂಕಾರದ ಕುರಿತು, ಎಂಥಾ ಪೊಳ್ಳುತನವಿತ್ತು ನನ್ನಲ್ಲಿ ಎಂದು ಈಗ ಅನಿಸುತ್ತದೆ. ಯಾವುದರ ಕುರಿತು ಆ ಅಹಂಕಾರ? ಏನು ಕಡಿದು ಗುಡ್ಡೆ ಹಾಕಿದ್ದೆ ನಾನು?! ಏನೂ ಇಲ್ಲ! ಮನಸು ವಿಚಿತ್ರ, ಅದರ ವ್ಯಾಪಾರವೇ ಅರ್ಥವಾಗುವುದಿಲ್ಲ ಕೆಲವೊಮ್ಮೆ.
ಕಾಲೇಜಿನಲ್ಲಿ ನಮ್ಮದೊಂದು ಗುಂಪಿತ್ತು. ಆ ಗುಂಪಲ್ಲಿ ಅದು ಹೇಗೋ 3-4 ಜನ ನಮ್ಮ ಸಿನೀಯರ್ ಹುಡುಗರೂ, ಕಾಮರ್ಸ್ ಹುಡುಗರೂ ಸೇರಿದ್ದರು. ಏನನ್ನೂ ಮುಚ್ಚಿಡದೇ ಮನೆಯಲ್ಲಿ ಎಲ್ಲವನ್ನೂ ಹೇಳುತ್ತಿದ್ದೆನಾದ್ದರಿಂದ ನಮ್ಮ ಗುಂಪಿನ ಜನರೆಲ್ಲರ ಹೆಸರೂ ಮನೆಯವರಿಗೆ ಗೊತ್ತಿತ್ತು. ಅದರಲ್ಲೂ ಸುಹಾಸಿನಿ, ವಾಣಿ, ಪದ್ಮಾ ಮತ್ತು ಡಿಂಪಿ ಮತ್ತೊಂದಿಬ್ಬರು ಗೆಳತಿಯರು ಗೆಳೆಯರು ಆಗಾಗ ನಮ್ಮನೆಗೆ ಬರುತ್ತಿದ್ದರು. ಹಾಗೆ ಎಲ್ಲರೂ ಒಟ್ಟಿಗೆ ಬಂದಾಗ ಅಡುಗೆ ಮನೆಯಲ್ಲಿ ಏನಿದೆಯೋ ಅದನ್ನೆಲ್ಲ ತಿಂದು ಖಾಲಿ ಮಾಡುತ್ತಿದ್ದೆವು. ಅದೇ ಇರಬೇಕು ಇದೇ ಬೇಕು ಎಂದು ಯಾರಿಗೂ ಇರಲಿಲ್ಲವಾಗಿ ರೊಟ್ಟಿ ಬುಟ್ಟಿ, ಪಲ್ಯದ ಬೋಗೋಣಿ, ಕಾರಬ್ಯಾಳಿ ಗುಂಡಗಿ ಎಲ್ಲಾ ಬಸಿದುಕೊಂಡು ಅವುಗಳ ತಳ ಕಾಣಿಸಿ ಕಾಲೇಜಿಗೆ ಹೊರಡುತ್ತಿದ್ದೆವು.
ಅಂದೊಮ್ಮೆ ನಮ್ಮ ಗುಂಪು ಬಗಲಿ ರಾಜಾರ ಹೊಲಕ್ಕೆ ಸೀತನಿ (ಇನ್ನೂ ಒಣಗಿ ಗಟ್ಟಿಯಾಗಿರದ, ಹಾಲು ತುಂಬಿದ ಬಿಳಿ ಜೋಳಕ್ಕೆ ಸೀತನಿ ಎನ್ನುತ್ತಾರೆ. ಕೆಲವರು ಬೆಳಸಿ ಅಂತಲೂ ಕರೆಯುತ್ತಾರೆ) ತಿನ್ನಲು ಹೋಗುವುದೆಂದು ನಿರ್ಧರಿಸಿ, ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆದೆವು. ಸಹಜವಾಗಿಯೇ ನಮ್ಮ ಹೊರತಾಗಿ ಮತ್ತೆ ಯಾರೆಲ್ಲ ಬರುತ್ತಿದ್ದಾರೆ ಎಂದು ಅವ್ವ ಕೇಳಿದಾಗ, ರಾಜಾನ ಅಕ್ಕ ಒಬ್ಬ್ರು ನಮ್ಜೊತೆ ಬರುತ್ತಿರುವ ವಿಚಾರ ತಿಳಿಸಿದ್ದೆ. ನಮ್ಮೆದುರು ಹೇಳಿಕೊಳ್ಳಲಾಗದ ಅವ್ವನ ಆತಂಕ ಅದರಿಂದ ಕಮ್ಮಿ ಆಗಿತ್ತೇನೋ. ಆದರೆ ನನ್ನ ದುರ್ವಿಧಿಗೆ ಯಾರೇನು ಮಾಡಲಾದೀತು? ರಾಜಾನ ಅಕ್ಕ ಕೊನೆ ಘಳಿಗೆಯಲ್ಲಿ ಬರುವುದನ್ನು ರದ್ದು ಮಾಡಿಬಿಟ್ಟಳು. ನಾವೆಲ್ಲ ತುಂಬಾ ಉತ್ಸುಕರಾಗಿದ್ದೆವಾದ್ದರಿಂದ ಅದೇನು ಅಂಥಾ ದೊಡ್ಡ ವಿಷಯವೆನಿಸದೇ ಹೊರಟುಬಿಟ್ಟೆವು. ಹೊಲದಲ್ಲಿ ಅದಾಗಲೇ ಆಳುಮಗನೊಬ್ಬ ತೆನೆಗಳನ್ನು ಮುರಿದಿಟ್ಟುಕೊಂಡು, ಬೆಲ್ಲ, ಶೇಂಗಾದ ಚಟ್ನಿ, ನಿಂಬಿ ಹಣ್ಣಿನೊಂದಿಗೆ ನಾವು ಬಂದ ಕೂಡಲೇ ಸುಟ್ಟುಕೊಡಲು ತಯಾರಾಗಿ ಕುಳಿತಿದ್ದ. ಸೀತನಿ ತಿಂದು ಹರಟುತ್ತಾ ಹೊಲದಲ್ಲೆಲ್ಲ ಓಡಾಡಿ ಖುಷಿಯಿಂದ ಮನೆಗೆ ಬಂದರೆ ರೊಟ್ಟಿ ಮಾಡುತ್ತಾ ಒಲೆಯ ಮುಂದೆ ಕುಳಿತಿದ್ದ ಅವ್ವ ಜ್ವಾಲಾಮುಖಿಯಾಗಿದ್ದಳು! ಮನೆ ವಿಚಿತ್ರ ಗಾಂಭಿರ್ಯದಿಂದ ಧುಮುಗುಡುತ್ತಿತ್ತು. ಯಾಕೆ ಏನೆಂದು ಕೇಳಿದರೆ ಯಾರೂ ಏನೂ ಹೇಳುತ್ತಿಲ್ಲ. ನಾನೇನೋ ಮಾಡಬಾರದ ತಪ್ಪು ಮಾಡಿ ಬಂದಿರುವೆ ಎನ್ನುವಂತೆ. ತಾಳಲಾಗದೇ ಅವ್ವನೆದುರು ನಿಂತು, “ಯಾಕ ಬೇ ಹಿಂಗ ಸಿಟ್ಟಿಗೆದ್ದಿ? ನಾ ಏನ್ ತಪ್ಪ್ ಮಾಡೀನಿ ಹೇಳು?” ಸಿಡಿಮಿಡಿಗೊಳ್ಳುತ್ತಾ ಕೇಳಿದೆ.
“ಯಾಕ್ ಅಂತ ನನ್ನ ಕೇಳ್ತೀಯಾ? ನನ್ನ ಮಕ್ಕಳು ಸುಳ್ಳು ಮಾತಾಡಂಗಿಲ್ಲಾ ಅಂತ ಅನ್ಕೊಂಡಿದ್ದೆ ಇಷ್ಟ ದಿನ. ಈಗ ನಾಕ್ ಮಂದಿ ಎದುರು ತಲಿ ತಗ್ಗಸೂವಂಗ ಮಾಡಿಬಿಟ್ಟಿ ನಮ್ಮನ್ನ ನೀನು”
ನನ್ನ ಜಂಘಾಬಲವೇ ಉಡುಗಿದಂತಾಯ್ತು ಅವ್ವನ ಈ ಮಾತು ಕೇಳಿ! ನಾ ಎಲ್ಲಿ ಯಾವಾಗ ಸುಳ್ಳು ಹೇಳಿದೆ ತಿಳಿಯಲಿಲ್ಲ. ಅದನ್ನೇ ಅವ್ವನ ಹತ್ತಿರ ಕೇಳಿದೆ.
“ರಾಜಾರ ಅಕ್ಕ ನಿಮ್ಮ ಜೊತಿ ಬರಾಕತ್ತ್ಯಾಳ ಅಂತ ಯಾಕ ಸುಳ್ಳು ಹೇಳ್ದಿ ನೀ ನನಗ? ನನ್ನ ಕೈ ಮುಟ್ಟಿ ಹೇಳು ಬಂದಿದ್ಲ ಇಲ್ಲಾ ಅಕಿ ನಿಮ್ಮ ಜೊತಿಗೆ?”
ಶಾಕ್ ನನಗೆ! ಅಲ್ಲಿಂದ ನೇರ ನಮ್ಮ ಮನೆಗೆ ಬಂದವಳು ನಾನೊಬ್ಬಳೇ. ರಾಜಾರ ಅಕ್ಕ ಬರದಿದ್ದ ವಿಚಾರ ನಮ್ಮವ್ವಗ ಅಷ್ಟು ಜಲ್ದಿ ನನಗಿಂತ ಮೊದಲೇ ಮನೆಗೆ ಬಂದು ಹೇಳಿದವರಾದರೂ ಯಾರು?!
“ಹೌದು, ಲಾಸ್ಟ್ ಮೂಮೆಂಟಿಗೆ ಅಕಿ ನಾ ಬರಂಗಿಲ್ಲ ವಲ್ಲ್ಯಾ ಅಂದ್ಲು, ನಾವು ಉಳ್ದೋರೆಲ್ಲಾ ಹೋಗಿ ಬಂದ್ವಿ. ಅದಕ್ಕ್ಯಾಕ ಸಿಟ್ಟಿಗೆದ್ದಿ?” ಎನ್ನುತ್ತಾ ಅಂದು ಬಂದಿದ್ದ ಹುಡುಗ ಹುಡುಗಿಯರೆಲ್ಲರ ಹೆಸರು ಹೇಳಿದೆ. ಅವ್ವ ಅದನ್ನು ಕೇಳಿ ಸಮಾಧಾನಗೊಂಡಳಾದರೂ ನನ್ನ ಹೆಸರು, ತಮ್ಮ ಮನೆತನದ ಹೆಸರು ಹಾಳಾಯ್ತು ಅನ್ನುವ ಕಳವಳದಲ್ಲೇ ಇದ್ದಳು. ಅವ್ವ ಶಾಂತವಾಗಿದ್ದು ಅರಿವಿಗೆ ಬಂದು ಕೇಳಿದೆ.

“ಅವ್ರಕ್ಕಾ ಬಂದಿಲ್ಲಂತ ನಿನಗ್ಯಾರು ಹೇಳಿದ್ರು ಬೇ ಯವ್ವಾ?”
“ಎದ್ರಿನ ಮನಿ ಪಾಂಡು, ಜಗು(ನನ್ನ ದೊಡ್ಡ ತಮ್ಮ)ನ ಮುಂದ ಹೇಳಿದನಂತ. ಕಾಲೇಜು ತುಂಬಾ ಇದ ಸುದ್ದಿ ಆಗೇತಿ, ಇಂಥಿಂಥವ್ರೆಲ್ಲಾ ಅಲ್ಲಿ ಸೀತನಿ ತಿನ್ನೂ ನೆವದಾಗ ಮೋಜ್ ಮಾಡಾಕ ಹೋಗ್ಯಾರ ಅಂತ. ಜಗು ಮಾರಿ ಸಣ್ಣದು ಮಾಡ್ಕೊಂಡು ಬಂದು ಹೇಳಿದ. ನನಗ ದಿಕ್ಕತಪ್ಪಿಧಂಗ ಆತು” ಅಂದಳು ಅವ್ವ. ದನಿಯಲ್ಲಿ ನನ್ನನ್ನು ಅನುಮಾನಿಸಿದ್ದರ ಬಗ್ಗೆ ಸಣ್ಣದೊಂದು ಪಶ್ಚಾತಾಪವೂ ಇತ್ತು.

ಪಡಸಾಲಿಯಿಂದ ತಲಬಾಗಿಲಿಗೆ ಹೋದವಳೇ, ಎದುರುಮನೆಯ ಆ ಪಾಂಡುವನ್ನು ಕೂಗಿ ಕರೆದೆ. ತಾನೇನೋ ಅಬಲೆ ಹುಡುಗಿಯಾದ ನನ್ನನ್ನು ರಕ್ಷಿಸಲೆಂದು ಮುಂದಾದವನಂತೆ ಮುಖ ಮಾಡಿಕೊಂಡು ಬಂದ ಅವನನ್ನು ತರಾಟೆಗೆ ತೆಗೆದುಕೊಂಡೆ. ಮೊದಮೊದಲು ತಾನಂದಿದ್ದೇ ಸರಿ ಎಂಬಂತಾಡತೊಡಗಿದ್ದವನು ಸತ್ಯದ ಎದುರಿಗೆ, ಬಾಲ ಬುಡವಿಲ್ಲದ ಅವನ ಗಾಳಿಮಾತುಗಳು ಸೋತು, ಹೋಗ್ಲಿಬಿಡು, ಮರ್ತುಬಿಡು ಎಂಬಂಥಾ ರಾಜಿ ಮಾತುಗಳನ್ನಾಡುತ್ತಾ ಅಲ್ಲಿಂದ ನಿಧಾನವಾಗಿ ಕಾಲ್ಕಿತ್ತ.

ಅವನು ಹೊತ್ತು ತಂದು ಹಾಕಿದ್ದ ಈ ಗಾಳಿಮಾತಿನ ಪ್ರಭಾವ ಎಷ್ಟಿತ್ತೆಂದರೆ, ಅಂದೊಮ್ಮೆ ಅಪರೂಪಕ್ಕೆ ನಮ್ಮ ಕಾಲೇಜ್ ಕ್ಯಾಂಪಸ್ಸಿನಲ್ಲಿ ಮಾರಾಟಕ್ಕೆ ಬಂದಿದ್ದ ಸೂಜಿಮಲ್ಲಿಗೆಯನ್ನು, ಆಸೆ ಪಟ್ಟು ಒಂದು ಮೊಳ ಕೊಂಡು ಅಲ್ಲೇ ಮುಡಿದುಕೊಂಡಿದ್ದೆ. ಮಲ್ಲಿಗೆ ಎಂದರೆ ನನಗೆ ಬಲು ಇಷ್ಟ. ಮನೆಗೆ ಬಂದ ಮೇಲೆ ಮುಡಿಯಲ್ಲಿದ್ದ ಮಲ್ಲಿಗೆ ಕಂಡು ಅವ್ವ ಬಿರುಸಾಗಿ ಕೇಳಿದ್ದಳು, “ಎಲ್ಲಿದದು ಹೂವ?”

ಅವ್ವ ಕೇಳಿದ ಧಾಟಿಗೆ ಅವಮಾನವಾದಂತೆನಿಸಿ ಅಳು ಬಂತು. ತುಟಿಕಚ್ಚಿ ಅಳು ತಡೆದುಕೊಂಡು ಒಂದೂ ಮಾತಾಡದೆ ತಲೆಯಲ್ಲಿನ ಮಾಲೆ ತೆಗೆದು ನೆಲಕ್ಕೆ ಬಿಸುಟು ಒಳಗೆ ಹೋದೆ. ನಾನು ನೊಂದಿರುವುದು ಕಂಡು ತಾನು ಹಾಗೆ ಅನುಮಾನಿಸಬಾರದಿತ್ತು ಅನಿಸಿ ಅವ್ವ ‘ನಾ ಹಂಗ್ ಕೇಳಿಲ್ಲ…” ಎನ್ನುತ್ತಾ ತಳಮಳಿಸುತ್ತಿರುವುದು ಅರಿವಿಗೆ ಬರುತ್ತಿತ್ತಾದ್ದರೂ ಆ ಅನುಮಾನ ನನ್ನನ್ನು ಘಾಸಿಗೊಳಿಸಿತ್ತು. ನಂತರ ಮತ್ತೆಂದೂ ಅವ್ವ ನನ್ನನ್ನು ಅನುಮಾನದಿಂದ ನೋಡಲಿಲ್ಲ. ಆದರೆ ಈ ಜಗತ್ತು ಅನೇಕ ಬಾರಿ ನನ್ನನ್ನು ಯಾವ ಯಾವುದೋ ಕಾರಣವನ್ನಿಟ್ಟುಕೊಂಡು ಅಂಥ ಅನುಮಾನದ ಕಣ್ಣಿನಿಂದ ನೋಡಿ ಮತ್ತೆ ಮತ್ತೆ ಘಾಸಿಗೊಳಿಸಿದೆ. ಅದು ಅವರ ಅನುಮಾನವಷ್ಟೆ, ಅದಕ್ಕೆ ಹೊಣೆ ನಾನಲ್ಲ ಎನ್ನುವ ನನ್ನೊಳಗಿನ ಎಚ್ಚರ ಕನಲಿದಷ್ಟೇ ತೀವ್ರವಾಗಿ ನಾನು ಮತ್ತೆ ಕೊನರುವಂತೆ ಮಾಡಿದೆ.

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

May 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ahalya Ballal

    ಬಹಳ ದಿನಗಳ ನಂತರ ಮತ್ತೆ ಈ ಅಂಕಣವನ್ನು ಓದುತ್ತಿರುವೆ. ನಿಮ್ಮ ಪಾರದರ್ಶಕತೆ ಆಕರ್ಷಕ ಗುಣ, ಜೆಪಿ.

    ಸಣ್ಣ ಸಣ್ಣ ವಿವರಗಳನ್ನೂ ಅದೆಷ್ಟು ಆಸಕ್ತಿ ಮೂಡಿಸುವಂತೆ ಬರೆಯುತ್ತೀರಿ.
    ಉಳಿದ ಭಾಗಗಳನ್ನು ಓದಬೇಕು

    ಪ್ರತಿಕ್ರಿಯೆ
  2. akshata

    ಮಕ್ಕಳು ದಾರಿ ತಪ್ಪಬಾರದು ಅನ್ನೋದಕ್ಕೆ parents ಅಲರ್ಟ್ ಇರ್ತಾರೆ. ಅಲರ್ಟ್ ಇರೋದಕ್ಕೆ ಅನುಮಾನ ಪಡ್ತಾರೆ. ಅವ್ರ ಜಾಗದಲ್ಲಿ ಅವ್ರು ಸರಿ. ಆದ್ರೆ ಆ ಅನುಮಾನ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರತ್ತೆ ಅನ್ನೋದು ಈಗ ನಾನು ಕಲಿತಾ ಇರೋ ಪಾಠ. ಹಾಗಾದ್ರೆ ಅಲರ್ಟ್ ಇರೋದೂ ಬೇಡ್ವಾ? ಅನ್ಸಿತ್ತು. ಅಲರ್ಟ್ ಇರ್ಬೇಕು ಆದ್ರೆ ಮಕ್ಕಳಿಗೆ ಗೊತ್ತಾಗದ ಹಾಗೆ ಅನ್ನೋದು ಅದಕ್ಕಿರೋ ಉತ್ತರ. ಒಟ್ಟಿನಲ್ಲಿ ಈಗಿನ ಮಕ್ಕಳಿಗೆ parenting ಕಷ್ಟ. ನಾವು ಮಾಡಿದ್ದೆಲ್ಲ ನೆನಪಿರಲ್ಲ. ನಾವು ಅಪ್ಪಿ ತಪ್ಪಿ ತಪ್ಪಿದ್ದು ನೆನಪಿರತ್ತೆ. ಅದೇ ದೊಡ್ಡ ಇಶ್ಯೂ ಆಗತ್ತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: