ಪಿ ಪಿ ಉಪಾಧ್ಯ
27
ಮನೆ, ತೋಟ ಬಿಟ್ಟರೆ ತೀರ್ಥಳ್ಳಿಯ ಅಡಿಕೆ ಮಂಡಿ…
ಊರಿಗೆ ಬಂದ ಅಂತ್ಯನಿಗೆ ಅಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳಲು ತುಸು ಕಷ್ಟವೇ ಆಯ್ತು. ಈ ಮೊದಲು ರಜೆಯಲ್ಲಿ ಬರುತ್ತಿದ್ದಾಗಲೂ ಅಷ್ಟೆ. ಮೊದಲೆರಡು ದಿನ ಸಂಭ್ರಮ. ಆದರ. ಮುಂದೆ ಉದಾಸೀನ. ಉಪೇಕ್ಷೆ. ಕೆಲವೊಮ್ಮೆ ಪುಟ್ಟ ಅಂತ್ಯನಿಗೆ ಉಸಿರು ಕಟ್ಟುವ ವಾತಾವರಣ. ಈಗಂತೂ ಖಾಯಂ ಆಗಿ ಇಲ್ಲಿಯೇ ಇರಲಿಕ್ಕೆ ಬಂದಿದ್ದಾನೆ೦ದಾಗ ಇದ್ದದ್ದೂ ಉಪೇಕ್ಷೆ. ತಂದೆ ಮೊದಲಿನಿಂದಲೂ ಅಷ್ಟೆ. ಯಾವತ್ತೂ ಎತ್ತಿ ಮುದ್ದಾಡಿಸಿದವರಲ್ಲ. ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದ ಅಮ್ಮನೂ ಹುಟ್ಟಿದ್ದು ಗಂಡಾದಾಗ ಅಂತಹ ಆದರ ತೋರಿರಲಿಲ್ಲ.
ಬಹುಶಃ ಅಣ್ಣ ಕೇಳಿದ್ದೇ ಸಾಕೆನ್ನಿಸಿ ಹಸು ಕೂಸಾಗಿದ್ದಾಗಲೇ ಸಾಗಹಾಕಿದ್ದಳೇನೋ. ಅಂದು ಎಡವದೆ ನಡೆಯಲೂ ಬರದಿದ್ದ ಮಗುವನ್ನು ಕಳುಹಿಸಿದವಳು ಈಗ ಮೀಸೆ ಮೊಳೆಯತೊಡಗಿದ ಕಾಲದಲ್ಲಿ ಅವ ಬಂದರೂ ಅಂತಹ ಸಂತೋಷವನ್ನೇನೂ ತೋರಿಸಲಿಲ್ಲ. ಅಣ್ಣಂದಿರಿಬ್ಬರೂ ಬಹಳ ಹಿರಿಯರು. ಎರಡನೆಯವನಿಗೂ ಇವನಿಗೂ ಎಂಟು ವರ್ಷಗಳ ಅಂತರವಾದರೆ ಹಿರಿಯವ ಇನ್ನೂ ನಾಲ್ಕು ವರ್ಷಕ್ಕೆ ದೊಡ್ಡವ. ಅಣ್ಣ ತಮ್ಮಂದಿರ ನಡುವೆ ಇರಬೇಕಾದ ಸಹಜ ಬಾಂಧವ್ಯ ಅವರ ನಡುವೆ ಬೆಳೆದಿರಲೇ ಇಲ್ಲ. ವಯಸ್ಸಿನ ಅಂತರ ಒಂದಾದರೆ ಇವ ಮನೆಯಲ್ಲಿ ಇರದೇ ಇದ್ದುದು ಇನ್ನೊಂದು. ಅದೂ ಅಲ್ಲದೇ ಅಲ್ಲಿ ಮಾವ ಮತ್ತು ಅತ್ತೆಯ ಮನೆಯಲ್ಲಿ ಅವರಿಬ್ಬರ ಪ್ರೀತಿ ಮತ್ತು ಕಾಳಜಿಗೆ ಒಬ್ಬನೇ ಹಕ್ಕುದಾರ. ಮನೆಯಲ್ಲಿನ ಚಟುವಟಿಕೆಗಳಿಗೆಲ್ಲ ಇವನೇ ಕೇಂದ್ರ ಬಿಂದು. ಅಂತಹುದರಲ್ಲಿ ಇಲ್ಲಿನ ಈ ಬಿಗಿಯಾದ ವಾತಾವರಣ ಉಸಿರು ಕಟ್ಟುತ್ತಿದೆ ಎನಿಸಿರಲಿಕ್ಕೂ ಸಾಕು.
ಹಾಗೆ ತೀರ ಸಾಕೆನಿಸಿದ ಒಂದು ದಿನ ಅವ ಪುನಃ ಮಾವನೂರಿಗೆ ತಿರುಗಿ ಹೋಗಿ ಬಿಡುತ್ತೇನೆ ಎಂದು ನಿರ್ಧರಿಸಿದ್ದೂ ಇತ್ತು. ಹೊರಟೇ ಬಿಡುತ್ತಲೂ ಇದ್ದ. ಅದನ್ನೇ ಅಮ್ಮನೊಡನೆ ಹೇಳಿ ಅಣ್ಣಂದಿರೊಡನೆಯೂ ಹೇಳಬೇಕೆಂದು ಅವರನ್ನು ಹುಡುಕುತ್ತಿದ್ದಾಗಲೇ ಆದಿಯನ್ನು ಹುಡುಕಿಕೊಂಡು ಬಂದ ಶಾಸ್ತ್ರೀಗಳು ಸಿಕ್ಕಿದ್ದು.

ಆಗಲೇ ಮೂವತ್ತು ಕಳೆದ, ಮದುವೆಯನ್ನೂ ಒಲ್ಲೆ ಎನ್ನುತ್ತಿದ್ದ ಆದಿ ಊರಿನ ಹಲ ಸಾಮಾಜಿಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡದ್ದಷ್ಟೇ ಅಲ್ಲ ಉತ್ಸಾಹದಿಂದ ಭಾಗವಹಿಸುತ್ತಲೂ ಇದ್ದನಲ್ಲ.. ಅದರಲ್ಲಿ ಕೋಟದ ಪೇಟೆಯಲ್ಲಿ ಪ್ರಾರಂಭವಾಗಿ ಸುತ್ತ ಮುತ್ತಲಿನಲ್ಲಿ ಆಗಲೇ ಹೆಸರು ಮಾಡಿದ್ದ ಯಕ್ಷಗಾನ ತರಬೇತಿ ಕೇಂದ್ರವೂ ಒಂದು. ಅದರ ದೈನಂದಿನ ಚಟುವಟಿಕೆಗಳ ಪೂರ್ಣ ಜವಾಬ್ದಾರಿಯನ್ನು ಹೊತ್ತ ಶಾಸ್ತ್ರೀಯವರು ಆಗಾಗ್ಗೆ ಆ ಸಂಸ್ಥೆಯ ಪೋಷಕರಾಗಿದ್ದ ಶಾಮಣ್ಣನವರನ್ನು ನೋಡಲು ಬರುತ್ತಿದ್ದವರು ಆದಿಯೊಡನೆಯೇ ಹೆಚ್ಚು ಮಾತನಾಡುತ್ತಿದ್ದದು. ಶಾಮಣ್ಣನವರಿಗೂ ಅದು ಒಂದು ತೆರನ ನಿರಾಳವೇ.
ಅಂದೂ ಹಾಗೆಯೇ ಶಾಮಣ್ಣನವರನ್ನು ನೋಡಲೆಂದು ಬಂದವರಿಗೆ ಸಿಕ್ಕಿದ್ದು ಆದಿಯೇ. ಅವನೊಂದಿಗೆ ಮಾತನಾಡುತ್ತಿದ್ದಾಗಲೇ ಅಂತ್ಯ ಅವರನ್ನು ಭೇಟಿ ಮಾಡಿದ್ದು. ಆ ಭೇಟಿಯಲ್ಲಿಯೇ ತನ್ನ ಬಗ್ಗೆ ಶಾಸ್ತ್ರೀಗಳಿಗೂ ಆಗಲೇ ತಿಳಿದಿತ್ತು ಎನ್ನುವುದು ಅವನಿಗೆ ಗೊತ್ತಾಗಿದ್ದು. ಮುಖತಃ ನೋಡಲಿಲ್ಲ ಎನ್ನುವುದನ್ನು ಬಿಟ್ಟರೆ ನಿನ್ನ ಬಗ್ಗೆ ಎಲ್ಲ ಗೊತ್ತಿದೆ ನನಗೆ. ನಿನ್ನ ಮಾವನ ಊರಿನಲ್ಲಿ ಮೇಷ್ಟರಾಗಿದಾನಲ್ಲ ನಾರಾಯಣ ಕಾರಂತ. ಅವನೂ ನನ್ನ ದೂರದ ಸಂಬ೦ಧಿ. ಊರಿಗೆ ಬಂದಾಗೆಲ್ಲ ಅಲ್ಲಿನ ಸುದ್ದಿಯನ್ನು ಹೇಳುತ್ತಲೇ ಇರುತ್ತಾನೆ. ಹಾಗೆ ಹೇಳುವಾಗ ನಿನ್ನ ಬಗ್ಗೆಯೂ ಎಲ್ಲ ಹೇಳಿದ್ದಾನೆ…
ಇತ್ತೀಚೆಗಂತೂ ನೀನು ಕೇಳುತ್ತಿದ್ದ ಪ್ರಶ್ನೆಗಳಿಗೆ ತನಗೆ ಉತ್ತರ ಹೇಳಲು ಸಾಧ್ಯವಾಗದ್ದರ ಬಗ್ಗೆಯೂ ಹೇಳಿದ್ದ. ಅವನು ಹೇಳಿದ್ದನ್ನು ಕೇಳಿದರೆ ನಿನಗೆ ಯಕ್ಷಗಾನದ ಬಗ್ಗೆ ತೀರ ಆಸಕ್ತಿಯಿದ್ದ ಹಾಗೆ ಕಾಣುತ್ತದೆ. ನೋಡುವುದು ಮತ್ತು ಆಡುವುದನ್ನು ದಾಟಿಯೂ ನಿನ್ನ ಆಸಕ್ತಿಯ ಹರಹು ವಿಸ್ತಾರವಾಗಿದೆಯೆಂದು ತೋರುತ್ತದೆ. ನಮ್ಮಲ್ಲಿ ಒಮ್ಮೆ ಬಂದು ನೋಡು. ನಿನಗೆ ಬೇಕಾದದ್ದು ಸಿಕ್ಕಿದರೂ ಸಿಗಬಹುದು’ ಊರು ಬಿಡಬೇಕೆಂದು ಹೊರಟ ಅಂತ್ಯನಿಗೆ ಹೊಸದೊಂದು ದಾರಿ ಕಾಣಿಸಿದ್ದೇ ಅವನ ಆಲೋಚನೆಯೇ ತಿರುವು ಪಡೆದಿತ್ತು.
ಆದಿಯೊಡನೆ ಮಾತನಾಡಿ ತಿರುಗಿ ಹೊರಟ ಶಾಸ್ತ್ರೀಗಳೊಂದಿಗೆ ಅಂತ್ಯನೂ ಹೊರಟೇ ಬಿಟ್ಟ. ನಡೆದುಕೊಂಡೇ ಹೋದ ಅವರು ಆ ತರಬೇತಿ ಕೇಂದ್ರ ತಲುಪಲು ಅರ್ಧ ಘಂಟೆಯೇ ತಗುಲಿತ್ತು. ವ್ಯವಸ್ಥಿತವಾದ ಕೇಂದ್ರ. ತರಬೇತಿಯ ಸಲುವಾಗಿ ಎರಡು ಪಡಸಾಲೆಗಳು. ವೇಷ ಭೂಷಣಗಳನ್ನು ಕಟ್ಟಿಕೊಳ್ಳಲು ಪ್ರತಿ ಪಡಸಾಲೆಗೆ ತಗಲಿಕೊಂಡೇ ಇದ್ದ ಎರಡೆರಡು ಗ್ರೀನ್ ರೂಮುಗಳು. ಉತ್ತಮವಾಗಿ ಕಟ್ಟಿಸಿದ್ದ ಲೈಬ್ರರಿ. ಹತ್ತು ಹಲವು ಕಪಾಟುಗಳಲ್ಲಿ ತುಂಬಿಸಿದ್ದ ಪುಸ್ತಕಗಳು.
ಇಡೀ ವಾತಾವರಣವೇ ಚೊಕ್ಕಟ ಮತ್ತು ವ್ಯವಸ್ಥಿತವಾಗಿತ್ತು. ಒಂದು ಪಕ್ಕದಲ್ಲಿ ಸಾಲು ಸಾಲಾಗಿ ಹತ್ತಿಪ್ಪತ್ತು ಕೊಠಡಿಗಳು. ಅವು ಅಲ್ಲೇ ಉಳಿದು ಕಲಿಯುತ್ತೇನೆ ಎನ್ನುವ ಅಭ್ಯರ್ಥಿಗಳಿಗೆ ವಾಸಮಾಡಲು ಎಂದಿದ್ದರು ಶಾಸ್ತ್ರೀಗಳು. ಪಕ್ಕದಲ್ಲೇ ಒಂದು ಅಡಿಗೆ ಮನೆ ಮತ್ತು ಅದಕ್ಕೆ ತಾಗಿಕೊಂಡೇ ಊಟದ ಮನೆ. ನೋಡುತ್ತಿದ್ದಂತೆ ಅಂತ್ಯನಿಗೆ ಅದ್ಭುತವೆನಿಸಿತ್ತು. ಪ್ರತಿಯೊಂದು ಭಾಗವನ್ನು ತೋರಿಸುತ್ತಿದ್ದಂತೆ ಶಾಸ್ತ್ರೀಗಳು ವಿವರಿಸುತ್ತಲೇ ಇದ್ದರು.

ಈಗ ತರಬೇತು ಪಡೆಯುತ್ತಿರುವವರು ನಲುವತ್ತು ಮಂದಿ ಎಂತಲೂ ಅವರಲ್ಲಿ ಮೂವತ್ತು ಜನ ಪರ ಊರಿನಿಂದ ಬಂದು ಈ ಹಾಸ್ಟೆಲಿನಲ್ಲಿಯೇ ಉಳಿದುಕೊಂಡಿರುವವರು ಮತ್ತು ಉಳಿದ ಹತ್ತು ಮಂದಿ ಇದೇ ಸುತ್ತ ಮುತ್ತ ಊರಿನವರು ಬೆಳಿಗ್ಗೆ ಬಂದು ಸಂಜೆ ಹೋಗುವವರು ಎಂದರು. ತಾನೂ ತರಗತಿಗಳನ್ನು ತೆಗೆದುಕೊಳ್ಳುತ್ತೇನಾದರೂ ಬಹಳ ದಿನಗಳಿಂದ ಪೀಡಿಸುತ್ತಿದ್ದ ಮಂಡಿ ನೋವಿನಿಂದಾಗಿ ಕಾಲುಗಳನ್ನು ಬಗ್ಗಿಸಲು ಕಷ್ಟವಾಗುತ್ತದಾದ್ದರಿಂದ ಬರೀ ಹಾಡುಗಾರಿಕೆ ಕುಣಿತ ಮತ್ತು ಚಂಡೆ ಮದ್ದಲೆಗಳ ಬಗ್ಗೆ ಥಿಯರಿಯನ್ನು ಮಾತ್ರ ತಾನು ಹೇಳಿ ಕೊಡುವುದಾಗಿಯೂ ಉಳಿದಂತೆ ನಾಲ್ಕು ಜನ ತರಬೇತುದಾರ ಅಧ್ಯಾಪಕರೂ ಇದ್ದಾರೆ ಅವರೂ ಹಾಸ್ಟೆಲಿನಲ್ಲಿಯೇ ಎರಡು ಕೊಠಡಿಗಳನ್ನು ಹಂಚಿಕೊ೦ಡು ಇದ್ದಾರೆಂದೂ ಹೇಳಿದರು. ಎಲ್ಲ ಹೇಳಿದ ಶಾಸ್ತ್ರೀಗಳು ಏನೋ ನಿಮ್ಮಪ್ಪನ ದಯ ಮತ್ತು ನಿನ್ನಣ್ಣನ ದಾನದಿಂದ ಇಷ್ಟು ನಡೆಯುತ್ತಿದೆ. ಇಲ್ಲಿನ ಖರ್ಚಿನಲ್ಲಿ ಹೆಚ್ಚಿನ ಭಾಗ ಅವರದ್ದೇ’ ಎಂದರು.
ಈ ಕಟ್ಟಡಗಳನ್ನು ಕಟ್ಟಿಸಿದ ಇಡೀ ಜಾಗ ನಿಮ್ಮಪ್ಪಂದೇ. ಕಟ್ಟಡಗಳನ್ನು ಕಟ್ಟಿಸುವಾಗ ಅದಕ್ಕೆ ಹಣ ಕೊಟ್ಟದ್ದೂ ನಿಮ್ಮಪ್ಪನೇ. ಎಲ್ಲೋ ಅಲ್ಪ ಸ್ವಲ್ಪ ಬೇರೆಯವರಿಂದ ವಂತಿಗೆ ಎತ್ತಿದ್ದೇವೆ. ಅದನ್ನೂ ನಿಮ್ಮಪ್ಪನೇ ಕೊಡಬಹುದಿತ್ತು. ಆದರೆ ಆಗ ಆದಿಯೇ ಅಡ್ಡ ಬಂದಿದ್ದ.ಬೇಡ ಶಾಸ್ತ್ರೀಗಳೇ ಎಲ್ಲ ನಾವೇ ಕೊಟ್ಟರೆ ಶಾಲೆ ನಮ್ಮದೇ ಎಂದಾಗುತ್ತದೆ. ಊರಿನವರಿಗೂ ತಮ್ಮದೆನ್ನುವ ಭಾವನೆ ಬರಬೇಕೆಂದಿದ್ದರೆ ಅವರದ್ದೂ ಪಾಲಿರಬೇಕಲ್ಲವೇ… ಇನ್ನುಳಿದ ಹಣ ಅವರಿಂದ ವಸೂಲಿ ಮಾಡುವ ಎಂದು ಅಪ್ಪನೊಂದಿಗೂ ಹೇಳಿದ ಆದಿ ತಾನೇ ಸ್ವತಹ ನಮ್ಮೊಂದಿಗೆ ಬಂದಿದ್ದ ವಂತಿಗೆ ಎತ್ತಲು’ ಎಂದೂ ಹೇಳಿದರು.
ಅಂತ್ಯನಲ್ಲಿ ಅಪ್ಪ ಮತ್ತು ಅಣ್ಣನ ದಾನ ಮಾಡುವ ಬುದ್ಧಿಯ ಬಗ್ಗೆ ಮೆಚ್ಚುಗೆ ಮೂಡುತ್ತ ಬಂದಿತ್ತು. ಆದರೆ ಅದಕ್ಕಿಂತ ಮೊದಲೇ ಆ ಸ್ಥಳದ ಬಗ್ಗೆ ಪ್ರೀತಿ ಹುಟ್ಟಿ ಆಗಿತ್ತು.. ತನಗೆ ತೀರ ಹತ್ತಿರವಾದ ಯಾವುದೋ ಜಾಗಕ್ಕೆ ಬಂದಿದ್ದೇನೆ ಅನ್ನಿಸತೊಡಗಿತು. ಆ ಜಾಗ ಬೀಸಿದ ಮೋಡಿಯಲ್ಲಿ ಅವನ ಮಾವನ ಮನೆಗೆ ಹೋಗಬೇಕೆನ್ನುವ ಆಸೆ ಹುದುಗಿಯೇ ಹೋಗಿತ್ತು ಮತ್ತು ಶಾಸ್ತ್ರೀಗಳೊಡನೆ `ನಾನು ಇಲ್ಲೇ ಇದ್ದು ಬಿಟ್ಟರೆ ಹೇಗೆ’ ಎಂದು ಕೇಳಿಯೇ ಬಿಟ್ಟ.
|ಇನ್ನು ನಾಳೆಗೆ |






0 Comments