ಪಿ ಪಿ ಉಪಾಧ್ಯ ಸರಣಿ ಕಥೆ 23 – ಅವನೊಳಗಿದ್ದ ರೈತ ಮಾತ್ರ ಪದೇ ಪದೇ ಜಾಗೃತನಾಗುತ್ತಿದ್ದ..

ಪಿ ಪಿ ಉಪಾಧ್ಯ

23

ಅವನೊಳಗಿದ್ದ ರೈತ ಮಾತ್ರ ಪದೇ ಪದೇ ಜಾಗೃತನಾಗುತ್ತಿದ್ದ..

ಅದೇ ಅನಂತ ಎಲ್ಲರ ನಿರೀಕ್ಷೆಯನ್ನೂ ಮೀರಿ ಪಿಯುಸಿಯಲ್ಲಿ ಒಳ್ಳೆಯ ಮಾರ್ಕುಗಳನ್ನು ಗಳಿಸಿದ. ಮನೆಯವರ ಹಣ ಮತ್ತು ವಶೀಲಿಯ ಅಗತ್ಯವಿಲ್ಲದೆಯೇ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾನೇ  ಹೋಗಿ ಅಡ್ಮಿಶನ್ ಮಾಡಿಸಿಕೊಂಡೂ ಬಂದ. ಹಾಗೆ ಬಂದವನು ಅಮ್ಮನೊಡನೆ ಮಾತ್ರ ಆ ಬಗ್ಗೆ ಹೇಳಿಕೊಂಡ. ಮತ್ತೆ ಹಾಸ್ಟೆಲಿನಲ್ಲೇ ಇರುವುದಾಗಿ ಹೇಳಿ ಒಂದು ಸಂಜೆ ಮನೆಯಿಂದ ಹೊರಟೇ ಬಿಟ್ಟ.

ಆಗಲೂ ಆದಿಗೆ ಹೇಳಿದ್ದು ಅಮ್ಮನೇ. ಅದೂ ಕಣ್ಣೀರು ಸುರಿಸುತ್ತ ಹೇಳಿದ ಆಕೆಯನ್ನು ಆದಿಯೇ ಸಮಾಧಾನಪಡಿಸಬೇಕಾಯ್ತು. ತಮ್ಮ ತಾನಾಗಿಯೇ ಹೇಳಿರದಿದ್ದರೂ ಆದಿಗೆ ಎಲ್ಲ ವಿಚಾರ ತಿಳಿದಿತ್ತು. ಶಾಲೆಯವರು ಅಂತಹ ಮಾರ್ಕು ತೆಗೆದ ಅನಂತನನ್ನು ಅಭಿನಂದಿಸಿದ್ದು, ಆ ಸಮಾರಂಭದಲ್ಲಿ ಅವನನ್ನು ಹೊಗಳುತ್ತ ಜೊತೆಯಲ್ಲಿ ತಮ್ಮಪ್ಪನ ಹೆಸರನ್ನು ಹೇಳುತ್ತ ಅಂತಹ ದಾನಿಗಳ ಮಗನಾಗಿ ಅನಂತ ಅವರ ಹೆಸರನ್ನು ಉಳಿಸಿದ್ದಷ್ಟೇ ಅಲ್ಲ ಬೆಳೆಸಿದ ಕೂಡಾ.

ಅಲ್ಲಿ ಒಬ್ಬ ಮಗ ಅಪ್ಪನ ಒಳ್ಳೆಯತನವನ್ನೇ ಮುಂದುವರಿಸಿಕೊಂಡು ಹೋದರೆ ಇಲ್ಲಿ ಇನ್ನೊಬ್ಬ ರಾಜ್ಯ ಮಟ್ಟದಲ್ಲಿಯೇ ಹೆಸರುಗಳಿಸುವಷ್ಟು ಮಾರ್ಕುಗಳನ್ನು ತೆಗೆದಿದ್ದಾನೆ. ತಂದೆ ತಾಯಿಗಳಿಗೆ ಸಂತೋಷವಾಗಲು ಇದಕ್ಕಿಂತ ಹೆಚ್ಚಿನದೇನು ಬೇಕು ಎಂದು ಹೇಳುತ್ತ ಕಣ್ಣೀರು ಒರೆಸಿಕೊಂಡದ್ದು ಎಲ್ಲ ತಿಳಿದಿತ್ತು. ನಂತರ ಅವನು ಇಂಜಿನಿಯರಿಂಗ್ ಕಾಲೇಜಿಗೆ ಹೋಗಿ ಬಂದದ್ದೂ ತಿಳಿದಿತ್ತು. ತಮ್ಮ ಅವನಾಗಿಯೇ ಹೇಳಲಿಲ್ಲ. ಇವನಾಗಿ ಕೇಳಲಿಲ್ಲ. ಆದರೆ ಅಮ್ಮನ ಮೂಲಕ ಅವನಿಗೆ ಬೇಕಾದ ದುಡ್ಡಿನ ವ್ಯವಸ್ಥೆಯನ್ನು ಮಾಡಿದ್ದೂ ಆದಿಯೇ . ಆದರೆ ಅಮ್ಮನಿಗೆ ಹೇಳಿದ್ದ `ಅವನಿಗೆ ಎಲ್ಲಿಯಾದರೂ ಬಾಯಿ ತಪ್ಪಿ ಹೇಳಿಬಿಡಬೇಡ.

ನಾನು ಹಣದ ವ್ಯವಸ್ಥೆ ಮಾಡಿದ್ದೆಂದು. ನೀನೇ ಕೊಟ್ಟರೆ ಕೇಳಲಿಕ್ಕಿಲ್ಲ ಅವನು. ಒಂದು ವೇಳೆ ಕೇಳಿದರೆ ನಿನ್ನದೇ ಎಂದು ಹೇಳು’ ಎಂದು. ಕಮಲಮ್ಮನ ಅದೃಷ್ಟ. ಎಷ್ಟು ಬೇಕೆಂದು ತಾಯಿಯನ್ನು ಕೇಳಿ ಕೊಟ್ಟ ಹಣವನ್ನು ತೆಗೆದುಕೊಂಡು ಜೇಬಿಗಿಳಿಸುತ್ತಿದ್ದವ ಅದು ಎಲ್ಲಿಯದೆಂದು ಯಾವತ್ತೂ ಕೇಳಲಿಲ್ಲ.  

ಅನಂತ ಎಂಜಿನಿಯರಿಂಗಿಗೆಂದು ಅತ್ತ ಹೋದ ಮೇಲೆ ದಿನಾ ಕಮಲಮ್ಮನಿಗೆ ಅಳುವುದೇ ಕೆಲಸ. ಆದಿಯೊಡನೆ ಮಾತನಾಡುವಾಗಲೆಲ್ಲ ಅಳು ಒತ್ತೊತ್ತಿ ಬರುತ್ತಿತ್ತು. `ಅಲ್ಲ ಯಾಕಾದರೂ ಅನಂತನಿಗೆ ಇಂತಹ ಬುದ್ಧಿ ಬಂತೋ..’ ಎಂದು ಕಣ್ಣೊರೆಸಿಕೊಂಡರೆ ಆದಿ `ಅಲ್ಲ ಅಮ್ಮ ಯಾಕೆ ಅಳುತ್ತೀಯ.. ಅನಂತ ನೋಡು ಇಲ್ಲಿನ ಶಾಲೆಯಲ್ಲಿ ಹೆಸರು ಗಳಿಸಿದ ಹಾಗೆಯೇ ಅಲ್ಲಿಯೂ ಮಾಡುತ್ತಾನೆ ನೋಡು. ಮುಂದೆ ಅಲ್ಲಿಗೇ ನಿಲ್ಲಿಸುತ್ತಾನೆ ಎಂದುಕೊಂಡಿದ್ದೀಯ.. ಅಮೆರಿಕಾಕ್ಕೋ ಇಂಗ್ಲೆಂಡಿಗೋ ಹೋದರೂ ಹೋದಾನು. ಅಂತಹುದರಲ್ಲಿ ನೀನು ಖುಶಿ ಪಡುವುದನ್ನು ಬಿಟ್ಟು ಕಣ್ಣೀರು ಹಾಕಿದರೆ..’

`ಅವ ಕಲಿಯಲಿ ನನಗೆ ಸಂತೋಷವೇ.. ಆದರೆ ನಿನ್ನ ಮೇಲೆ ದ್ವೇಷ ಯಾಕೆ.. ಇಲ್ಲಿ ಕತ್ತೆಯ ಹಾಗೆ ದುಡಿದು ದುಡ್ಡು ಕಳಿಸುವುದು ನೀನು. ಅದಕ್ಕಾದರೂ ಒಂದು ಮಾತು ಬೇಡ..’
`ಇರಲಿ ಬಿಡಮ್ಮ. ಕಲಿತುಕೊಳ್ಳುತ್ತಾನೆ..’ಎಂದು ಸಮಾಧಾನದ ಮಾತಾಡಿದರೂ ಆಚೆ ಹೋಗಿ ತಾನೂ ಕಣ್ಣೊರೆಸಿಕೊಳ್ಳುತ್ತಾನೆ. `ಯಾಕೆ ಅನಂತ ಈ ತೆರ ಮಾಡುತಿದ್ದಾನೆ..’ ಅರ್ಥವಾಗುತ್ತಿರಲಿಲ್ಲ ಅವನಿಗೂ.

ಆದಿ ತನ್ನ ಬುದ್ಧಿಗೆಟಕುವ ಮಟ್ಟಿಗೆ ಆಲೋಚಿಸುತ್ತಿದ್ದ. ಒಬ್ಬರನ್ನೊಬ್ಬರು ದ್ವೇಷಿಸಲು ಏನಾದರೂ ಕಾರಣ ಬೇಕು. ಅದೂ ಸ್ವಂತ ಅಣ್ಣನನ್ನೇ ದ್ವೇಷಿಸಲು ಬಲವಾದ ಕಾರಣವೇ ಇರಬೇಕು. ಎಷ್ಟು ತಲೆ ಕೆರೆದುಕೊಂಡರೂ ಅವನಿಗೆ ಅಂತಹ ಏನು ಕಾರಣವೂ ಹೊಳೆಯಲಿಲ್ಲ. ಆದರೆ ಅಮ್ಮನ ಮೂಲಕ ಅವನಿಗೆ ಕಾಲ ಕಾಲಕ್ಕೆ ಬೇಕಾಗುವ ಹಣವನ್ನು ಕಳುಹಿಸುವುದನ್ನು ಮಾತ್ರ ತಪ್ಪಿಸಲಿಲ್ಲ. ಬೇಕಾದ್ದಕ್ಕಿಂತ ಹೆಚ್ಚೇ ಕೊಡುತ್ತಿದ್ದ.

ಆದಿ ಸಮಾಜ ಸೇವೆಯ ಕಾರ್ಯಗಳಲ್ಲಿ ತನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗಲೂ ಅವನೊಳಗಿದ್ದ ರೈತ ಮಾತ್ರ ಪದೇ ಪದೇ ಜಾಗೃತನಾಗುತ್ತಿದ್ದ. ಹಾಗೆ ಜಾಗೃತನಾದಾಗಲೆಲ್ಲ ಅವನು ಹೊಸ ಹೊಸ ಸಾಹಸಕ್ಕೆ ಎಳಸುತ್ತಿದ್ದ. ಈ ಬಾರಿಯ ಅವನ ಬಯಕೆ ಗರಿಗೆದರಿದ್ದು ಊರೆಲ್ಲ ಮಾತನಾಡುತ್ತಿದ್ದ ವೆನಿಲ್ಲಾ ಕೃಷಿಯ ಬಗ್ಗೆ ಕೇಳಿದಾಗ. ಯೋಚನೆ ಬಂದ ಮೇಲೆ ತಡಬಡವಿಲ್ಲ. ಕೂಡಲೇ ಕಾರ್ಯಪ್ರವರ್ತನಾಗಿಯೇ ಬಿಟ್ಟ.

ಒಂದೊಮ್ಮೆ ಬೂದುಗುಂಬಳ ಬೆಳೆಸಿ ಚನ್ನಾಗಿ ಬೆಳೆ ಬಂದೂ ಮಾರುಕಟ್ಟೆಯಿಲ್ಲದೆ ಕೈ ಸುಟ್ಟುಕೊಳ್ಳುವಂತೆ ಮಾಡಿದ ಅವೇ ಗದ್ದೆಗಳೇ ಇದಕ್ಕೂ. ಈಗ ಮಳೆಗಾಲದಲ್ಲಿ ನೀರು ತುಂಬಿ ಸಾಧ್ಯವಿದ್ದ ಒಂದೇ ಒಂದು ಬೆಳೆಯನ್ನೂ ಮಾಡಲು ಬಿಡದಿದ್ದ ಆ ಅರಾಲು ಗದ್ದೆಗಳನ್ನೇ ಮುಚ್ಚಿಸಿ ಎಕ್ರೆಗಟ್ಟಲೆ ಜಾಗದಲ್ಲಿ ವೆನಿಲ್ಲಾ ಬಳ್ಳಿಗಳನ್ನು ನೆಡಿಸುವ ಯೋಜನೆ ಹಾಕಿದ. ವೆನಿಲ್ಲಾ ಬೀಜ ಕೇಜಿ ಒಂದಕ್ಕೆ ಸಾವಿರ ಎರಡು ಸಾವಿರ ಎಂದು ನಾಲಿಗೆ ಹೊರಳಿದಷ್ಟು ದರ ಹೇಳುತ್ತಿದ್ದ ಕಾಲ. `ಒಳ್ಳೆಯ ಬೀಜಗಳಿಗೆ ಮೂರು ಸಾವಿರದ ವರೆಗೂ ಉಂಟಂತೆ’ ಎಂದವರು `ಅದು ಹೋಗಲಿ ಹಸಿ ಕೋಡುಗಳಿಗೇ ಕಿಲೋಗೆ ಇನ್ನೂರರಿಂದ ಮುನ್ನೂರು ರೂಪಾಯಿಯಂತೆ’ ಎಂದೂ ಆಡಿಕೊಳ್ಳುತ್ತಿದ್ದರು.

ವೆನಿಲ್ಲಾ ಕೋಡುಗಳು ಮರದಲ್ಲಿ ಬೆಳೆಯುತ್ತವೆಯೋ ಇಲ್ಲ ನೆಲದ ಕೆಳಗಡೆ ಬೆಳೆಯುತ್ತವೆಯೋ ಎಂದು ಗೊತ್ತಿಲ್ಲದವರೂ ಸಹ ಅದರ ರೇಟಿನ ಬಗ್ಗೆ ಹೇಳಿಕೊಂಡು ಬಾಯಿ ನೀರು ಸುರಿಸಿದ್ದೇ ಸುರಿಸಿದ್ದು. ಅಂತಹದರಲ್ಲಿ ಆಧುನಿಕ ರೈತರೆನಿಸಿಕೊಂಡವರ ಸಾಲಿಗೆ ಸೇರಿದ ಆದಿ ಆ ಕೆಲಸಕ್ಕೆ ಮುಂದಾಗದಿರುತ್ತಾನೆಯೇ.

|ಇನ್ನು ನಾಳೆಗೆ |

‍ಲೇಖಕರು Admin

May 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: