ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಕ್ರಾಂತಿಯ ಮನೆಯಲ್ಲಿ ಪರಿಮಳದ ಬೀಜ.

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

20

ʻಮತ್ತೆ ಮೊಲ ಹಿಡಿಯಲಿಲ್ಲವೇನೇʼ ಕೇಳಬೇಕು ಅಂದುಕೊಂಡೆ ನಿಜ, ಕೇಳಲಿಲ್ಲ. ಮೊಲದ ಪ್ರಸ್ತಾಪ ಮಾಡಲಿಕ್ಕೂ ಮನಸ್ಸಾಗದೆ, ಊಟ ಮಾಡು ಎಂದು ಬಲವಂತ ಮಾಡಿದ ಮಾತಂಗಿಗೆ, ʻಸಂಜೆ ಊರಿಗೆ ಹೊರಡುವ ಯೋಚನೆಯಲ್ಲಿದ್ದೇನೆ. ಅತ್ತೆ ನನಗಾಗಿ ಊಟಕ್ಕೆ ಕಾಯಬಹುದುʼ ಎಂದೆ. ಅವಳ ಮಗನನ್ನು ಕರೆದು, ʻಅತ್ತೆಯನ್ನು ಬಿಟ್ಟು ಬಾʼ ಎಂದು ಭಾರವಾದ ಮನಸ್ಸಿನಿಂದಲೇ ಕಳಿಸಿದಳು. ಅವಳು ನನ್ನನ್ನು ಅತ್ತೆ ಎಂದು ಪರಿಚಯಿಸಿದರೂ ಹುಡುಗ ಆಂಟಿ ಎಂದ. ಓದಿದವನಲ್ಲವೇ? ನನ್ನ ಕರೆದೊಯ್ಯುತ್ತಿದ್ದ ಟೂವೀಲ್ಹರ್ ಚೆನ್ನಾಗೆ ಇತ್ತು, ʻಹೊಸದಾ?ʼ ಎಂದೆ. ಹುಡುಗ ಹುಂ ಎಂದ. ಹೆಸರೇನು? ಏನು ಮಾಡ್ತ ಇದೀಯ? ಎಲ್ಲ ಮಾತುಗಳು ದಾರಿಯುದ್ದಕ್ಕೂ ನಡೆದೇ ಇತ್ತು. ಅಮ್ಮ, ಅಜ್ಜಿ, ಹರಿ, ಗಿರಿ ಎಲ್ಲರೂ ನೆನಪಾದರು. ಯಾರಿಗೂ ಊರಿನ ನಂಟು ಉಳಿದೇ ಇಲ್ಲ. ಮಾತಿನ ಮಧ್ಯೆ ಸ್ವಾಮಪಣ್ಣನ ಸಾವಿನ ಸುದ್ದಿ ಕೂಡಾ ಪ್ರಸ್ತಾಪವಾಗಿ ಸಮಾಧಾನವಾಗಿತ್ತು. ಮಾತಿನ ಹಿಂದೇ ವಿಷಾದವೂ ತೇಲಿತು, ಸತ್ತಿದ್ದು ಅವನು, ಅವನ ವಾರಸುದಾರರು ಇದ್ದೇ ಇರುತ್ತಾರೆ – ಎಲ್ಲ ಕಡೆಯಲ್ಲೂ. ʻಯಾರ ಸಾವೂ ಯಾವುದಕ್ಕೂ ಉತ್ತರವಲ್ಲ. ನಮ್ಮ ಅನುಭವದಿಂದ ಪಾಠ ಕಲಿತುಕೊಳ್ಳಬೇಕೇ ಹೊರತು ಯಾವುದರಿಂದಲೂ ದೂರ ಹೋಗುವುದು ಅರ್ಥಹೀನವಾದ್ದು. ಎಲ್ಲವೂ ಇರುತ್ತದೆ, ಎದುರಿಸುವ ಕಿಚ್ಚು ಕೂಡಾ. ಎಲ್ಲವನ್ನೂ ಸಮಾನ ಎಂದು ನೋಡಿಬಿಟ್ಟರೆ, ಮನುಷ್ಯ ಎಲ್ಲದರಿಂದ ಮುಕ್ತನಾಗಿಬಿಡುತ್ತಾನೆ. ಇಲ್ಲೇ ಇರಬೇಕು, ಇದರ ಜೊತೆಯೇ ಹೋರಾಟ ಮಾಡಬೇಕು. ಅದನ್ನ ಬಿಟ್ಟರೆ ನಮಗೆ ಯಾವ ದಾರಿಯೂ ಇಲ್ಲ. ಇನ್ನೂ ನೀನು ನೋಡಬೇಕಾದ್ದು ಎದುರಿಸಬೇಕಾದ್ದು ಬೇಕಾದಷ್ಟಿದೆʼ, ಎಂದು ತನ್ನ ಅನುಭವವನ್ನು ಸಮಾಜದ ಅಸಮಾನತೆಯ ನೋವನ್ನು, ಅವಮಾನದ ಏರನ್ನು ಸತೀಶ ವಿವರಿಸುತ್ತಿದ್ದರೆ ನನ್ನ ಮೈ ಜುಂ ಎನ್ನುತ್ತಿತ್ತು. ಅದನ್ನು ಕೇಳುತ್ತಾ ಕೇಳುತ್ತಾ ಅನುಭವಗಳನ್ನು ನನ್ನದನ್ನಾಗಿಸಿಕೊಂಡು ಹಾಡುಗಳನ್ನು ಭಾವುಕವಾಗಿ ಹಾಡುತ್ತಿದ್ದೆ. ಮೇಲು ಕೇರಿಯ ದರಿದ್ರಾತಿದರಿದ್ರ ಕುಟುಂಬದಲ್ಲಿ ಬಂದ ನನಗೆ ಹಸಿವು ಗೊತ್ತಿತ್ತು, ಜಾತಿನಿಂದನೆ ಗೊತ್ತಿರಲಿಲ್ಲ. ನಾನು ಭಾವುಕಳಾದೆ, ನನಗೆ ಬೇರೆಯದೇ ಜಗತ್ತಿನ ದರ್ಶನ ಮಾಡಿಸುತ್ತಿದ್ದ ಸತೀಶ ತುಂಬಾ ಎತ್ತರದಲ್ಲಿದ್ದ. ಅವನ ಕಣ್ಣುಗಳಲ್ಲಿದ್ದ ದೃಢತೆ, ಆತ್ಮವಿಶ್ವಾಸ ಪ್ರೀತಿಗೂ, ಆಕರ್ಷಣೆಗೂ ಮಧ್ಯೆ ಇದ್ದ ಸಣ್ಣ ಗೆರೆ ಇಲ್ಲವಾಗಿಸಿತ್ತು.

ಮನೆಗೆ ಬರುವ ಹೊತ್ತಿಗೆ ಅತ್ತೆಯ ಅಡುಗೆಯ ಜೊತೆಗೆ ಬೆರೆತ ಇನ್ನೊಂದು ಹಿತವಾದ ಘಮಲು ಮನೆಯ ತುಂಬಾ ಹರಡಿತ್ತು. ಎಷ್ಟೋ ವರ್ಷಗಳಿಂದ ಈ ವಾಸನೆ ನನ್ನ ಜೊತೆಯಲ್ಲೇ ಇದೆ ಅನ್ನಿಸಿಬಿಟ್ಟಿತ್ತು. ಅದು ಕೇದಿಗೆಯದ್ದು. ಜಗುಲಿಗೆ ಒರಗಿದ ಚಿಕ್ಕೋಳಮ್ಮ ತನ್ನ ಕೈಲಿ ಸುತ್ತಿದ್ದ ಬಾಳೆಎಲೆಯಲ್ಲಿ ಕೇದಿಗೆಯ ಹೂವನ್ನು ಮುಂದೊಡ್ಡಿ, ʻಕ್ವಾ ಸತೀಸಪ್ಪಂಗೆ ಇಷ್ಟʼ ಎಂದಳು. ಅವಳು ತಂದಿದ್ದು ಸತೀಶನಿಗೋ ನನಗೋ ಗೊತ್ತಾಗಾಲಿಲ್ಲ. ಆದರೆ ಸತೀಶ ಮಾಡಿದ ನಾಲ್ಕಾರು ಮದುವೆಗಳಲ್ಲೂ ಕೇದಿಗೆಯ ಹೂವು ಇರುತ್ತಿತ್ತು. ಅದನ್ನು ನೋಡಿ ಕಣ್ಣಾಲಿಗಳು ತುಂಬಿ ಬಂದವು. ಕ್ರಾಂತಿಯ ಮನೆಯಲ್ಲಿ ಪರಿಮಳದ ಬೀಜವನ್ನು ನೆಟ್ಟು ಹೋದ, ಯಾವ ನೆನಪುಗಳಿಗೆ ನಾನು ಒಡಲೋ ಗೊತ್ತಿಲ್ಲ. ಆದರೆ ಆದರ್ಶಗಳ ಎದೆಯಲ್ಲಿ ಸಮಾಜದ ಕನಸನ್ನು ಹೊತ್ತೇ ಹೊರಟ ಸತೀಶ ಕನಸೂ, ವಾಸ್ತವ ಎರಡೂ. ಆಶಾ ಓಡಿ ಬಂದಳು, ʻಎಲ್ಲಿ ಹೋಗಿಬಿಟ್ಟಿದ್ದೆ ಅಮ್ಮಾ? ನಾನಿವತ್ತು ಅಜ್ಜಿಯ ಹತ್ತಿರ ಹೊಸ ರೆಸಪಿಯನ್ನು ಕಲಿತುಕೊಂಡೆʼ ಎಂದು ಹೇಳುತ್ತಲೇ ಇದ್ದಳು. ಅದನ್ನ ಕೇಳಿಸ್ಕೊಂಡ ಮಾವ, ʻಇನ್ನು ನಮ್ಮ ಪುಟ್ಟಮ್ಮನಿಗೆ ಮದುವೆ ಮಾಡಿಬಿಡೋದೆʼ ಎಂದರು. ತಾತಾ ಎನ್ನುತ್ತಾ ಕೋಪ ನಟಿಸುತ್ತಾ ಹೊಡೆಯಲು ಹೋದ ಆಶಾಳನ್ನು ಕಂಡು ಹೆದರಿದಂತೆ ನಟಿಸಿದ ಮಾವ, ʻಸರೋಜಾ ನನ್ನ ಕಾಪಾಡೆʼ ಎಂದು ಕೂಗಿದರು. ʻಸಾಕು ನಿಮ್ಮ ತಾತ ಮೊಮ್ಮಗಳ ಕುಶಾಲು. ಸಿಗದೆ ಸಿಗದೆ ಸಿಕ್ಕರೆ ಹೀಗೆʼ ಎಂದು ಅತ್ತೆ ನಕ್ಕರು. ಸಹಾರ ಮೇಲಿನ ಹಠಕ್ಕೆ ಬಿದ್ದು ಇಲ್ಲಿಗೆ ಬರದೇ ಹೋಗಿದ್ದಿದ್ದರೆ ಕಳಕೊಳ್ಳುತ್ತಿದ್ದುದು ನಾನೇ. ಜೀವ ಸಣ್ಣಗೆ ಕಂಪಿಸಿತು.  

ಚಿಕ್ಕೋಳಮ್ಮ ಜಗುಲಿಗೆ ಕುಳಿತು ಅವ್ವಾ ಎಂದು ಕೂಗಿದಳು. ಅತ್ತೆ ನನ್ನ ಕೈಲೇ ತಟ್ಟೆಗೆ ಒಂದಿಷ್ಟು ಮಾಂಸದ ಸಾರು ಅನ್ನ ಹಾಕಿ, ʻಕೊಟ್ಟು ಬಾʼ ಎಂದರು. ಚಿಕ್ಕಿ ಸ್ವಲ್ಪವೂ ಬದಲಾಗಿಲ್ಲ. ಸಣ್ಣಗಿನ ದೇಹ ಜಟೆ ಬಂದು ಕೂದಲನ್ನು ಬಾಚಲಾಗದೆ ಮೇಲಕ್ಕೆ ಕಟ್ಟಿಬಿಟ್ಟಿದ್ದಳು. ನಾಲ್ಕಾರು ಸಲ ಕೂದಲು ತೆಗೆಸಿದರೂ ಹಾಗೆ ಬಂದಿತ್ತು ಎನ್ನುವುದು ಆಕೆಯ ಹೇಳಿಕೆ. ಸತೀಶ ಒಮ್ಮೆ, ʻಹಿತ್ತಲಲ್ಲಿ ಅಲ್ಲ ಚಿಕ್ಕಿ ಇದೆಲ್ಲಾ ಯಾಕೆ ಸುಮ್ಮನೆ ಆ ಮರದ ರಸ ಹಚ್ಚು ಈ ಮರದ ರಸ ಹಚ್ಚು ಅಂತ ಇರೋದನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀಯ?ʼ ಎಂದಿದ್ದನ್ನು ಕೇಳಿಸಿಕೊಂಡಿದ್ದೆ. ಕೇದಿಗೆ ಘಮಲಿಗೋ ಏನೋ ಅವಳು ಕುಡಿದ ವಾಸನೆ ಹೊಡೆದಿರಲಿಲ್ಲ. ಊಟ ಕೊಡುವಾಗ ಸಣ್ಣ ತೇಗಿದ ಧ್ವನಿಯ ಜೊತೆ ಹುಳ್ಳಗಿನ ವಾಸನೆ ಹೊಡೆದಿತ್ತು. ಒಳ ಬಂದವಳೇ, ʻಅತ್ತೆ ಈ ಚಿಕ್ಕಿ ಬದಲಾಗಲೇ ಇಲ್ಲವಲ್ಲʼ ಎಂದೆ. ʻಆ ಭಜನಾ ಮಂಡಳಿಯ ಪಕ್ಕದ ಜಾಗದಲ್ಲಿ ಕಳ್ಳಭಟ್ಟಿ ಇಳಿಸುವುದನ್ನು ಬಿಡುವುದಿಲ್ಲ. ಊರ ಜನ ಭಜನೆಯ ನೆಪದಲ್ಲಿ ಅಲ್ಲಿಗೆ ಹೋಗದೇ ಇರುವವರೂ ಇಲ್ಲ. ಇವಳಿಗೆ ಮೈಮೇಲೆ ದೇವರು ಬರದ ದಿನವಿಲ್ಲ. ಭಜನಾಮಂಡಲಿಯಲ್ಲಿ ಆವೇಶದಿಂದ ತೂಗುವುದೂ ಬಿಟ್ಟಿಲ್ಲ. ಕಳ್ಳಭಟ್ಟಿಯವರು ಇವಳಿಗೆ ದೇವರಿಗೆ ನೈವೇದ್ಯ ಇಟ್ಟಂತೆ ಹೆಂಡವನ್ನೂ ಇಡುತ್ತಾರೆ. ಇವಳಿಗೆ ಎರಡೆರಡು ನಶಾ ಬದಲಾಗುವುದಾದರೂ ಹೇಗೆ?ʼ ಎಂದಿದ್ದರು ಅತ್ತೆ.  ಆಶಾಗೆ ಕುತೂಹಲ ಅನ್ನಿಸಿ, ʻಇದೆಂಥ ಹೆಸರು? ನಾನು ಇದುವರೆಗೂ ಕೇಳೇ ಇರಲಿಲ್ಲʼ ಎಂದಳು. ʻನೀನು ಕೇಳ್ದೆ ಇರೋದು, ನೋಡ್ದೆ ಇರೋದು ಇಲ್ಲಿ ತುಂಬಾ ಇದೆʼ, ಎಂದು ಅತ್ತೆ ವಿವರಿಸುತ್ತಿದ್ದರು.     

ಮನೆಯಲ್ಲಿ ಚಿಕ್ಕವಳಾದ್ದರಿಂದ ಎಲ್ಲರೂ ಮುದ್ದಿಗೆ ಚಿಕ್ಕವಳೇ ಎಂದೂ ಎಂದೂ ೬೦ರ ಇಳಿವಯಸ್ಸಿಗೂ ಸಣ್ಣವರು ದೊಡ್ಡವರಾದಿಯಾಗಿ ಎಲ್ಲರಿಗೂ ಅವಳು ಚಿಕ್ಕವಳೇ. ಅವಳ ಅಪ್ಪ ಈರಪ್ಪಣ್ಣ ಕಳ್ಳಭಟ್ಟಿ ದಂಧೆಯಲ್ಲಿ ಪಳಗಿದವನಾಗಿದ್ದ. ಅವನ ಕೈಲಿ ನಾಕು ಕಾಸು ಓಡಾಡುತ್ತಿದ್ದುದ್ದೆ ಅವನನ್ನು ಊರವರ ಎದುರು ಉಡಾಫೆಯಿಂದ ಮಾತಾಡುವ ಹಾಗೇ ಮಾಡಿದ್ದು. ಅವನ ದೌಲತ್ತನ್ನು ನೋಡಿ ಅರೆರೆರೆ ಎಂದು ಊರ ಜನ ಮೂಗಿನ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರಂತೆ. ಮಗಳನ್ನೂ ದೂರ ಕೊಡಲಾರೆ ಎಂದು ಒಂದೂರಲ್ಲೇ ಹುಡುಗನನ್ನು ಹುಡುಕಿ ಮದುವೆ ಮಾಡಿಬಿಟ್ಟ. ಬೆಟ್ಟಸಾಮಯ್ಯ ಅವನಿಗೆ ತನ್ನ ಮಗಳಿಗೆ ಸರಿಯಾದ ಜೋಡಿ ಅಂತ ಯಾಕನ್ನಿಸಿತೋ ಗೊತ್ತಿಲ್ಲ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಯಾರಾದರೂ ಸತ್ರೆ ಮಾತ್ರ ಅವನದ್ದೇ ಕಾರುಬಾರು. ಯಾರ ಮೇಲಾದರೂ ಕೋಪ ಬಂದರೆ, ʻನಿನ್ನ ದಫನ ಮಾಡೇ, ನಿನ್ನ ಸುಟ್ಟೇ ನಾನು ಸಾಯುವುದುʼ ಎಂದು ಭವಿಷ್ಯ ನುಡಿಯುತ್ತಿದ್ದ. ಸತ್ತ ಜನರೆಲ್ಲಾ ಅವನ ನಾಲಿಗೆಯ ಮೇಲೆ ಇದ್ದಾರೆ ಎಂದು ಊರವರು ಹೆದರುತ್ತಿದ್ದರು. ಅವರ ಕೇರಿಯ ವಾರಿಗೆಯ ಹೆಣ್ಣುಮಕ್ಕಳೆಲ್ಲಾ ಪುರಾಣ ಎನ್ನುವಂತೆ ಈಗಲೂ ಆ ಮದುವೆ ಊಟದ ಸವಿಯನ್ನು ಮಾತಾಡಿದ್ದೇ ಮಾತಾಡಿದ್ದು. ಈಗ ಈರಪ್ಪಣ್ಣನಿಲ್ಲ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ. ಅವನ ಎಲುಬುಗಳಾದರೂ ಇದೆಯೋ ಇಲ್ಲವೋ! ಆ ಮನೆಯ ಜನ ಕೂಡಾ ಈಗ ಆ ದಂಧೆಯನ್ನು ಮಾಡುತ್ತಿಲ್ಲ. ಇಲಿ ಸಿಕ್ಕರೆ ಇಲಿ ಮೊಲ ಸಿಕ್ಕರೆ ಮೊಲ ಕುಡಿತದ ಜೊತೆ ಮಾಂಸದ ಚೂರಿದ್ದರೆ ಸಾಕು. ಕುಡಿದ ಕಳ್ಳಿಗೆ ನ್ಯಾಯ ಒದಗಿಸುವ ಮಾತಾಡುತ್ತಾ ರಾತ್ರಿಗಳನ್ನು ಕಳೆದುಬಿಡುತ್ತಾರೆ ಎಂದಿದ್ದರು ಅತ್ತೆ. ಹೊರನಡೆದ ಆಶಾಳನ್ನು ಕರೆದು, ʻನಿಮ್ಮಪ್ಪ ನನ್ನ ಚಿಕ್ಕಿ ಚಿಕ್ಕಿ ಅನ್ನುತ್ತಿದ್ದ, ನೀನೂ ಹಂಗೆ ಅನ್ನು ಮಗಾʼ ಎನ್ನುತ್ತಿದ್ದಳು ಚಿಕ್ಕೋಳು.

ನಡುವಯಸ್ಸಿನಲ್ಲಿದ್ದಾಗಲೇ ಚಿಕ್ಕೋಳಿಗೆ ಜಟೆ ಬಂದು ಮುನೀಶ್ವರನಿಗೆ ನಡೆಕೊಳ್ಳಲಾರಂಭಿಸಿದಳು. ಏನೋ ಬಂತು ಎಂದು ಜಡೆಗೆ ಪೂಜೆ ಮಾಡಿ ಹರಕೆ ಹೊತ್ತು ತೆಗೆಸಿಕೊಂಡಳು. ʻಬಿಟ್ಟು ಹೋಗಲಿಕ್ಕೆ ಮನಸ್ಸಿಲ್ಲದೆ ಸ್ವಾಮಿ ತಲೆಮೇಲೆ ಭಾರ ಆಗಿ ಕೂತೇಬಿಟ್ಟʼ ಎನ್ನುತ್ತಿದ್ದಳು. ಅವರವರ ನಂಬಿಕೆ, ಇವಳು ತಾನು ಮಾಂಸ ಮುಟ್ಟಲ್ಲ ಅಂತಾಳೆ, ಆದರೆ ಇವಳ ಹುಚ್ಚು ನನಗೆ ಗೊತ್ತಿಲ್ಲವಾ? ಕಾಡು ಇಲಿ ಅಂದ್ರೆ ತುಂಬ ಇಷ್ಟ. ಇಲಿಯ ಬಿಲಕ್ಕೆ ಹೊಗೆಹಾಕಿ ಇನ್ನೊಂದು ಕಡೆಯಿಂದ ಹಿಡಿದು ಕಚಕ್ಕನೆ ಕತ್ತು ಮುರಿದಳೆಂದರೆ ಅವತ್ತಿನ ಭರ್ಜರಿ ಬಾಡೂಟ ತಯಾರಾಯಿತೆಂದೇ. ಅದೇನೆ ಹಾಗೆ ತಿಂತೀ ಅಂದಿದ್ದಕ್ಕೆ, ʻತಿನ್ನಬೇಕು, ಹೊಲಸು ಒಂದೂ ತಿನ್ನದ ಆವು ಎಷ್ಟು ಆರೋಗ್ಯವಾಗಿರುತ್ತೆ ಅಂದ್ರೆ ಅದರ ಮೈನಯಸ್ಸಾಗಿ ಮಿಂಚ್ತಾ ಇರುತ್ತೆ. ನನ್ನ ಆರೋಗ್ಯಾನೂ ಕಾಪಾಡುತ್ತೆ, ಇನ್ನ ರುಚಿಯಂತೂ ಅದ್ಭುತ. ನೀನ್ ಮಾಡಿಕ್ಕೋ ಕೋಳೀಗಿಂತ ಇದು ಒಳ್ಳೇದು. ಸತೀಸಪ್ಪಂಗೂ ತಿನ್ನಿಸು ಸ್ವಲ್ಪ ಮೈಕೈ ತುಂಬಿಕೊಂಡು ಚೆನ್ನಾಗಿರ್ತಾನೆʼ ಅಂತಿದ್ಲು. ʻಮೊದ್ಲು ನೀನು ಸರಿಯಾಗು ಚಿಕ್ಕಿʼ ಎಂದು ಸತೀಶ ಎಷ್ಟು ಸಲ ಹೇಳಿದ್ದನೋ ಎಂದು ಅತ್ತೆ ನೆನಪಿಸಿಕೊಳ್ಳುತ್ತಿದ್ದರೆ, ನನಗೆ ಮೊದಲ ಸಲ ನೋಡಿದಾಗ ಅವಳ ತೆಳ್ಳನೆಯ ದೇಹ, ತಲೆಯಲ್ಲಿ ಜಟೆ ಕಾಣದಂತೆ ಕಟ್ಟಿದ್ದ ಕೆಂಪು ಟವಲ್ಲು ಥೇಟ್ ಬೆಂಕಿಕಡ್ಡಿಯ ಹಾಗೆ ಭಾಸವಾಗಿದ್ದು ಈಗಲೂ ನಗೆ ಉಕ್ಕಿಸಿತ್ತು. ಇಲಿ ತಿಂತಾರಾ ಎಂದು ಆಶಾ ಕೇಳುತ್ತಿದ್ದಳು.

ನೆನಪುಗಳು ಎಷ್ಟು ಹಸಿ, ಅದು ನಮ್ಮ ಮದುವೆಯ ದಿನ, ಇಲ್ಲೇ ಈ ಚಪ್ಪರದ ಅಡಿಯಲ್ಲೇ ಸತೀಶ ನಿಂತಿದ್ದ. ಕಾಟ್ರಿ, ಬೆಟ್ಟಯ್ಯ ಅದೇ ಚಪ್ಪರಕ್ಕೆ ಕಾಡಿನ ಹೂಗಳ ಅಲಂಕಾರ ಮಾಡಿದ್ದರು. ಸತೀಶನ ಕೊರಳಲ್ಲಿ ಹಾರ ಹಾಕಿದ ನಾನು ವಯೋಸಹಜ ನಾಚಿಕೆಯಲ್ಲಿ ತಲೆ ತಗ್ಗಿಸಿದ್ದೆ. ʻನೀನು ಹೋರಾಟಗಾರನ ಹೆಂಡತಿ ತಲೆತಗ್ಗಿಸಿದರೆ ನನಗೆ ಅವಮಾನʼ ಎಂದು ಕಿವಿಯಲ್ಲಿ ಪಿಸಗುಟ್ಟಿದ್ದ. ಸುತ್ತಾ ಇದ್ದವರು, ʻಏನಪ್ಪಾ ಏಕಾಂತಕ್ಕೆ ಕಾಯಲು ಸಾಧ್ಯವಿಲ್ಲವೋ…?ʼ ಎಂದು ತಮಾಷೆ ಮಾಡಿದ್ದರು. ನಾಕು ತೆಂಗಿನಸೋಗೆಯನ್ನು ಏರಿಸಿ ಮಾಡಿದ್ದ ಚಪ್ಪರದ ನಡುವೆ ಸತೀಶನನ್ನು ಮದುವೆಯಾದಾಗ ಅಮ್ಮ ಅಜ್ಜಿ  ಮಾತಾಡಿರಲಿಲ್ಲ. ಜಾತಿಗಳ ಅಂತರನ್ನು ನೋಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ತನ್ನ ಮಗಳಿಗೆ ಇದಕ್ಕಿಂತ ಒಳ್ಳೆಯ ಗಂಡನ್ನು ತರಲಾರೆವು ಎನ್ನುವ ನಿರ್ಧಾರಕ್ಕೆ ಬಂದಿದ್ದರಿಂದಲೋ, ಮದುವೆಗೆ ಖರ್ಚು ಮಾಡಲು ಏನೂ ಇಲ್ಲದಿದ್ದರಿಂದಲೋ ನಮ್ಮ ನಂತರ ಇವಳಿಗೆ ಯಾರು ದಿಕ್ಕು ಎನ್ನುವ ಆತಂಕದಿಂದಲೋ ಏನೋ, ಅವರಿಗೆ ಈಗ ಏನು ನಡೀತಾ ಇದೆ ಅದು ಸರಿ ಅನ್ನಿಸಿತ್ತು.

ಪುಟ್ಟ ಗುಡಿಸಿಲೇ ಎಲ್ಲಾ ಆಸೆಗಳ ಕೇಂದ್ರವಾಯಿತು, ಹೋರಾಟದ ರಂಗವೂ ಕೂಡಾ. ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುತ್ತಾ ಬಂದಿದ್ದ ಸತೀಶ ಮನೆಯ ಮುಂದಿನ ಬಿಸಿಲು ಬಾರದಿರುವಂತೆ ಹಾಕಿದ ಅದೇ ಚಪ್ಪರದಡಿಯಲ್ಲಿ ನಾಕಾರು ಮದುವೆಗಳೂ ಆದವು. ಮಾಡಿದ ಮದುವೆಯ ಕುರುಹು ಸದಾ ಉಳಿಯುವ ಹಾಗೇ ಮಾಧ್ಯಮಗಳಿಗೆ ವರದಿ ಕಳಿಸಿದ. ಹೀಗೆ ಕಳಿಸಿದ ವರದಿಗಳು ಅವತ್ತಿನ ಜನರನ್ನು ಮಾತ್ರವಲ್ಲ ರಾಜಕೀಯವಾಗಿ ಪ್ರಬಲರಾದವರ ಕೋಪಕ್ಕೆ ಗುರಿಯಾಗಿತ್ತು. ನಮ್ಮೂರಲ್ಲಿ ಇಂಥಾ ಮದುವೆಗಳಿಗೆ ಸತೀಶನ ಕುಮ್ಮಕ್ಕು ಇರುವುದರಿಂದ ಅವನನ್ನು ಹೇಗಾದರೂ ಸದೆಬಡಿಯಬೇಕು ಎಂದು ಸ್ವಾಮೀಗೌಡ ಮತ್ತವನ ಕಡೆಯವರು ಮಾತಾಡುತ್ತಿದ್ದುದನ್ನು ಕೇಳಿದವರು ಹೇಳಿದರು ಕೂಡಾ. ಅದರ ಹಿಂದೆ ತಮ್ಮ ವಿರುದ್ಧ ರಾಜಕೀಯವಾಗಿ ಹೋರಾಟ ನಡೆಸಿದ್ದ ಕಹಿ ನೆನಪುಗಳು ಸೇರಿಹೋಗಿದ್ದವು. ʻಅಜ್ಜಿ ಇವರಿಗೆಲ್ಲಾ ಈವನಿಂಗ್ ಸ್ಕೂಲ್ ತೆಗೀಬೇಕು, ಇಲ್ಲಾಂದ್ರೆ ಇದೆಲ್ಲಾ ತಪ್ಪು ಅಂತ ಇವ್ರಿಗೆ ಗೊತ್ತೇ ಆಗಲ್ಲʼ ಎನ್ನುತ್ತಿದ್ದ ಆಶಾಳ ಮಾತು ಕಿವಿದೆರೆಗೆ ಬಿತ್ತು. ಅತ್ತೆಯ ಮುಖದಲ್ಲಿ ಯಾವ ಭಾವ ತೇಲುತ್ತಿತ್ತೋ ನೋಡಲಾಗಲೇ ಇಲ್ಲ.  

ಸತೀಶ ರೊಮ್ಯಾಂಟಿಕ್ ಅಲ್ಲ. ಆದರೆ ಎಲ್ಲಿರುತ್ತಾನೋ ಅಲ್ಲಿಯೇ ತೀವ್ರವಾಗಿರುತ್ತಿದ್ದ. ತೀವ್ರವೆಂದರೆ ಈ ಹೊತ್ತು ನಮ್ಮದಲ್ಲದೆ ಬೇರೆಯವರದ್ದಾಗಲು ಸಾಧ್ಯವೇ ಇಲ್ಲ ಎನ್ನುವಷ್ಟು. ಇರುವ ಹೊತ್ತಿನಲ್ಲೇ ಅತ್ತೆ ಮಾವರ ಜೊತೆ ಕೂಡಾ ಹಾಗೇ ಇರುತ್ತಿದ್ದ. ನನ್ನ ಜೀವನದ ಅತ್ಯಂತ ಮಹತ್ವದ ಗಳಿಗೆಗಳವು. ಕಾಮ ಗಳಿಗೆಯ ಸುಖ, ಅದೇ ಪ್ರೇಮವಾಗುವ ಅನಂತತೆಯತ್ತ ತುಯ್ಯುವುದರ ನಡುವೆಯೇ ಸತೀಶನನ್ನು ಅರ್ಥಮಾಡಿಕೊಳ್ಳತೊಡಗಿದೆ. ನಮ್ಮ ಮದುವೆಗೆ ಸಹಾ ಬರಲಿಲ್ಲ. ಅದು ರಮೇಶನಿಗೆ ಕೊರಗಾಗಿರಲಿಲ್ಲ ನಾನು ಮಾತ್ರ ಅವರು ಬರಬೇಕಿತ್ತಲ್ಲವಾ? ಎಂದಿದ್ದೆ. ʻಅವರು ಬರಲಿ ಎನ್ನುವುದು ನಮ್ಮ ಆಸೆ ಇರಬಹುದು ಆದರೆ ನಮಗಿಂತ ಹೆಚ್ಚಿನ ಜವಾಬ್ದಾರಿ, ಸಮುದಾಯವನ್ನು ಸರಕಾರದ ಜೊತೆ ಸರಿ ತೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಅವರಿಗಿದೆʼ ಎಂದಿದ್ದ. ಇಷ್ಟು ಪ್ರೀತಿ ಅಷ್ಟು ಪ್ರೀತಿ, ಆಕೆಲಸ ಮಾಡು ಈ ಕೆಲಸ ಮಾಡು ಎಂದು ತಮ್ಮ ವಾರಸುದಾರನಂತೆ ಭಾವಿಸುತ್ತಿದ್ದ ಸಹಾ ಬರಲಿಲ್ಲ ಎನ್ನುವ ಆಕ್ಷೇಪಣೆ ನನ್ನೊಳಗೆ ಮನೆ ಮಾಡಿತ್ತು. ಕೆಲ ವಿಷಯಗಳಲ್ಲಿ ಸತೀಶನಷ್ಟು ಉದಾರಿ ನಾನಾಗಿರಲಿಲ್ಲ.

ನನ್ನ ಜೀವನದ ಅತ್ಯಂತ ಸುಂದರ ಕ್ಷಣಗಳವು. ಸುಂದರ ಎಂದರೆ ಅವನು ನನ್ನ ಸೆರಗು ಹಿಡಿದು ಓಡಾಡಿದ ಎಂತಲೋ, ನನ್ನ ತುಟಿಗೆ ತುಟಿ ಸೇರಿಸಿ ಕಾಲ ಕಳೆದ ಅಂತಲೋ ಅಲ್ಲ. ಜೀವನದ ಸಾರ್ಥಕತೆ ಎಂದರೇನೆಂದು ಹೇಳಿಕೊಟ್ಟ ಕ್ಷಣಗಳವು. ಬಿಡುವಿದ್ದಾಗ ನನ್ನ ಕಾಡಿಗೆ ಕರೆದೊಯ್ಯುತ್ತಿದ್ದ. ಇಬ್ಬರೂ ಹರಿವ ತೊರೆಯಲ್ಲಿ ಕಾಲನ್ನು ಇಳಿಬಿಟ್ಟು ಕೂತರೆ ಊಟವನ್ನೂ ಮರೆಯುತ್ತಿದ್ದೆವು. ಅಲ್ಲೆ ಜೊತೆಗೆ ತಂದ ಪುಸ್ತಕವನ್ನು ಓದಿ ಹೇಳುತ್ತಿದ್ದ. ಒಗಚೋ, ಹುಳಿಯೋ, ಸಿಯೋ. ಕಾಯಿಗಳನ್ನು, ಹಣ್ಣುಗಳನ್ನು ಹರಿದು ತರುತ್ತಿದ್ದ ಅವನಿಗೆ ಕಾಡಿನ ಇಂಚಿಂಚು ಪರಿಚಯವಿತ್ತು. ಅವನು ಕಚ್ಚಿ ರುಚಿ ನೋಡಿದ ಕಾಯಿಗಳಿಗೆ ಎಂಥದ್ದೋ ರುಚಿ. ಹತ್ತಿರ ಸರಿದು ಒಬ್ಬರಿಗೊಬ್ಬರು ತಾಕಿ ಕೂತು ಭವಿಷ್ಯದ ಕನಸು ಕಾಣುತ್ತಿದ್ದೆವು. ಈಗಲೂ ಅಚ್ಚರಿಯೆಂದರೆ ಅವತ್ತು ನಾವು ದುಡೀಬೇಕು ದೊಡ್ಡ ಮನೆ ಕಟ್ಟ ಬೇಕು ಮಕ್ಕಳು ಮರಿಗಳಿಗೆ ಆಸ್ತಿ ಕೂಡಿಡಬೇಕು ಎನ್ನುವುದು ಸ್ವಲ್ಪವೂ ಇರಲಿಲ್ಲ. ಬದಲಿಗೆ ಸಮಾನತೆಯ ಕನಸನ್ನು ಹೊತ್ತು ಸಾಗಬೇಕಿರುವ ಭವಿಷ್ಯವದಾಗಿತ್ತು. ನಾನು ತಮಾಷಿಯಾಗಿ, ʻಸತೀಶ ಈ ಹೋರಾಟ ಎಲ್ಲವನ್ನೂ ಬಿಟ್ಟು ಪಟ್ಟಣಕ್ಕೆ ಹೋಗಿ ಎಲ್ಲರಂತೆ ನಾವೂ ದುಡ್ಡು ಮಾಡಿಕೊಂಡು ಬಂದು ಈ ಊರಲ್ಲಿ ಜಮೀನು ತಗೊಂಡು ಎಲ್ಲರೆದುರೂ ಚೆನ್ನಾಗಿ ಬದುಕಬಹುದಲ್ಲʼ ಎಂದಿದ್ದೆ. ʻಜಮೀನು?! ನಿನಗೆ ಮಾರುವವರು ಯಾರು? ಸ್ವಾಮಣಪ್ಪ ಅಂತೂ ಅಲ್ಲವಲ್ಲ, ಮಾತಂಗೀನೋ ರಾಮಯ್ಯನೋ, ಭೀಮಣ್ಣಾನೋ ಮಾರಬೇಕು. ಅವರೆಲ್ಲಾ ಯಾರು ನಮ್ಮ ಅಕ್ಕತಂಗಿಯರು ಅಣ್ಣತಮ್ಮಂದಿರು. ಅವರ ಕಣ್ಣೀರ ಮೇಲೆ ಕಟ್ಟಿಕೊಂಡ ಆಸ್ತಿಯಲ್ಲಿ ನಾವು ನೆಮ್ಮದಿಯಾಗಿ ಇರಬಲ್ಲೆವಾ ಹೇಳು? ಹಾಗೆ ಮಾಡಿದರೆ ಆ ಸ್ವಾಮಣಪ್ಪನಿಗೂ ನಮಗೂ ಏನು ವ್ಯತ್ಯಾಸ?ʼ ಎಂದಿದ್ದ. ನಾನು ಮಾತಿಲ್ಲದವಳಾಗಿದ್ದೆ. ನನ್ನ ತನ್ನ ಎದೆಗೆ ಒರಗಿಸಿಕೊಂಡು ಜಗತ್ತಿನ ಎಲ್ಲರೂ ತಮ್ಮ ಹೆಜ್ಜೆಯ ಜೊತೆ ಎಲ್ಲರೂ ಹೆಜ್ಜೆಹಾಕಲಿ ಎಂದು ಆಶಿಸುವ ದಿನ ದೂರವಿಲ್ಲ ಚೇತೂ. ಒಳಿತನ್ನು ಎದೆಯಲ್ಲಿಟ್ಟುಕೊಂಡ ಜನ ತಾವೇ ದೀಪಗಳಾಗುತ್ತಾರೆ. ಆ ಬೆಳಕನ್ನು ಮನೆಮನೆಗೂ ಮನಮನಕ್ಕೂ ತುಂಬುತ್ತದೆ. ಬಂದಿಖಾನೆಗಳಿಲ್ಲದ, ಕಡೆಗೆ ಝೂಗಳೂ ಇಲ್ಲದ ದಿನಗಳು ಎಷ್ಟು ಚಂದ ಅಲ್ಲವಾ? ನಿಂಗೊತ್ತಾ ನಾಯಕರೇ ಇಲ್ಲದ ಜಗತ್ತು ಎಲ್ಲರೂ ನಾಯಕರಾಗುವ ಹೊತ್ತು ಹೀಗೆ ಎರಡೂ ಬಂದೇ ಬರುತ್ತೆ. ಆ ದಿನವನ್ನು ನೋಡಿದ ತಕ್ಷಣ ನನಗೆ ಸಾವು ಬರಲಿ ಎಂದಿದ್ದ. ನಾನು ಅವನ ಬಾಯನ್ನು ಮುಚ್ಚಿ ಈಗ ಯಾಕೆ ಸಾವಿನ ಮಾತು ನಾವಿಬ್ಬರೂ ಮಾಡುವ ಕೆಲಸ ತುಂಬಾ ಇದೆ ಎಂದಿದ್ದೆ. ಆದರೂ ಅಚ್ಚರಿ ಇಷ್ಟು ಮಾತುಗಳನ್ನು ಇವನು ಎಲ್ಲಿ ಕಲಿತ ಓದಿದ ಪುಸ್ತಕಗಳಿಂದಲೇ? ಹೋರಾಟದ ದಾರಿಯಿಂದಲೇ? ಇವನ ಗುರು ಸಹಾನಿಂದಲೇ? ಯೋಚಿಸುವಾಗಲೇ ದೂರದಲ್ಲಿ ಯಾವುದೋ ಹಕ್ಕಿಯು ಕೂಗಿತು. ಅದನ್ನ ಆಲಿಸಿದ ಸತೀಶ, ʻಚೇತು ಕೇಳಿಸಿಕೋ. ಈಗ ಆ ಕಡೆಯಿಂದ ಇನ್ನೊಂದು ಹಕ್ಕಿ ಕೂಗುತ್ತದೆʼ ಎಂದ. ಅಷ್ಟರಲ್ಲಿ ಇನ್ನೊಂದು ಹಕ್ಕಿ ಇನ್ನೆಲ್ಲಿಂದಲೋ ಕೂಗಿತು. ಇದು ದೂರದಲ್ಲೆಲ್ಲೋ ಇರುವ ಹಕ್ಕಿ ಇನ್ನೊಂದು ಹಕ್ಕಿಗೆ ಕೊಡ್ತಾ ಇರುವ ಮೆಸೇಜ್ ಎಂದ. ನಾನಿಲ್ಲಿದ್ದೀನಿ ನೀನೆಲ್ಲಿದ್ದೀಯಾ ಎಂತಲೇ? ಎಂದೆ. ಆ ಕೂಗು ಎಲ್ಲೋ ಇರುವ ಕಣ್ಣಿಗೆ ಕಾಣದ ತನ್ನಂಥದ್ಡೇ ಇನ್ನೊಂದು ಹಕ್ಕಿಗೆ ಈ ಹಕ್ಕಿ ನಾನಿಲ್ಲಿದ್ದೀನಿ ಎನ್ನುವ ಭರವಸೆ. ಅದೇ ಪ್ರೀತಿ. ನಾವೂ ಹೀಗೆನೇ, ನಾನು ಎಲ್ಲೇ ಇದ್ದರೂ ನಿನಗಾಗಿ ಮೆಸೇಜ್ ಕಳಿಸ್ತಾನೇ ಇರ್ತೀನಿ. ಕಣ್ಣಿಗೆ ಕಾಣದೆ ಇರುವಾಗಲೂ, ಅಗೋಚರವಾದ ನಮ್ಮ ಇರುವಿಕೆಯ ನಡುವೆಯೂ ಬೆಸುಗೆಯಾಗಬಲ್ಲ ಈ ವಿಚಾರಗಳಲ್ಲಿ, ಕನಸುಗಳಲ್ಲಿ ನನ್ನ ಜೊತೆ ನೀನು ನಿನ್ನ ಜೊತೆ ನಾನು ಇದ್ದೇ ಇರುತ್ತೇವೆ ಎಂದಿದ್ದ. ನನ್ನ ಕಣ್ಣಾಲಿಗಳು ತುಂಬಿ ಬಂದಿದ್ದವು.

ಅಂಥಾ ದಿನಗಳು ನಮ್ಮ ಬಳಿ ತುಂಬಾ ಇದ್ದವು ಎಂದಲ್ಲ. ಕಳೆದ ದಿನಗಳಲ್ಲಿ ಮರೆಯಲಾರದಷ್ಟು ಮಧುರವಾದ ಅನುಭೂತಿ ಇತ್ತು. ಸತೀಶ ನನ್ನೊಳಗೆ ವಿಚಾರಗಳನ್ನು ತುಂಬುತ್ತಿದ್ದನೋ ಧೈರ್ಯವನ್ನೋ? ಗೊತ್ತಿಲ್ಲ. ಆದರೆ ನನ್ನ ಜೀವನದ ಸಮೃದ್ಧತೆ ಅವನಿಂದ ಮಾತ್ರ ಹೆಚ್ಚಾಗಿತ್ತು ಎನ್ನುವುದು ಸತ್ಯ. ತನ್ನ ಕೆಲಸದಲ್ಲಿದ್ದ ಅಚಲವಾದ ನಂಬಿಕೆ, ಏನನ್ನೂ ಬಯಸದ, ಬಂದದ್ದನ್ನು ಮಾತ್ರ ತೆಗೆದುಕೊಳ್ಳುವ ನಿರಾಳತೆ, ಬದುಕಿನ ತಿಳಿತನ ಅವನ ತಿಳುವಳಿಕೆಗೆ ಅಪೂರ್ವವಾದ ವಿಸ್ತಾರವನ್ನು ತಂದುಕೊಟ್ಟಿತ್ತು.

ಕಾಡಿಂದ ಒಮ್ಮೆ ಮನೆಗೆ ಬರುವಾಗ ದಾರಿಯಲ್ಲಿ ರಾತ್ರಿ ಹಕ್ಕಿಗಳಿಗಾಗಿ ಬಲೆಯನ್ನು ಕಟ್ಟಿದ್ದರು. ಇದು ಎಲ್ಲಾ ಹಳ್ಳಿಗಳಲ್ಲೂ ಸಾಮಾನ್ಯ. ಆ ಬಲೆಗೆ ಬೀಳುವ ಎಲ್ಲ ಹಕ್ಕಿಗಳನ್ನೂ ತಿನ್ನುತ್ತಾರೆ ಎಂದಲ್ಲ. ತಿನ್ನಲಾಗದ ಒಂದಿಷ್ಟನ್ನು ಹಾಗೇ ಬಿಟ್ಟೂಬಿಡುತ್ತಾರೆ. ಆ ಸತೀಶ ಆ ಬಲೆಯನ್ನು ಕತ್ತರಿಸಿ, ʻಪಾಪ ತಿಳಿಯದೆ ಈ ಬಲೆಗೆ ಬೀಳುವ ಹಕ್ಕಿಗಳು ಬೆಳಗಿನ ತನಕ ಚೀರುತ್ತಲೇ ಇರುತ್ತವೆ. ಪ್ರಾಣಭಯ ಎಲ್ಲರಿಗೂ ಸಮಾನವೇ ಅಲ್ಲವಾ?ʼ ಎಂದಿದ್ದ. ಸತೀಶ ನಾನೂ ಎಲ್ಲವನ್ನೂ ನೋಡುತ್ತಿದ್ದೇನೆ ನನಗೆ ಮಾತ್ರವಲ್ಲ ಜಗತ್ತಿನ ಬಹುಪಾಲು ಜನರಿಗೆ ಇದೆಲ್ಲಾ ಕಾಣೋದೆ ಇಲ್ಲವಲ್ಲ ಯಾಕೆ? ಎಂದಿದ್ದೆ. ಸತೀಶನ ಉತ್ತರ ತುಂಬ ಸರಳವಾಗಿತ್ತು, ಎಲ್ಲರೂ ಸುಮ್ಮನೆ ನೋಡುತ್ತಾರೆ, ಆದರೆ ನಾನು ಹುಡುಕಾಟದಲ್ಲಿದ್ದೇನೆ. ಹುಡುಕುವ ಕಣ್ಣುಗಳಿಗೆ ಎಲ್ಲವೂ ಗೋಚರಿಸುತ್ತದೆ. ಈಗಲೂ ಆ ಮಾತುಗಳು ನನ್ನಲ್ಲಿ ಅನುರಣಿಸುತ್ತಲೇ ಇದೆ.

‍ಲೇಖಕರು avadhi

June 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: