
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
36
ಮುಸ್ಲೀಂರ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ದೃಶ್ಯಗಳನ್ನು ಚಿತ್ರೀಕರಿಸುವ ಸವಾಲುಗಳು ನಮ್ಮ ಮುಂದೆ ಇತ್ತು. ಅದರಲ್ಲಿ ನಮಾಜ್ ಮಾಡುವುದು, ಮಸೀದಿ, ಕೌಟುಂಬಿಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಜಮಾತ್‌ನ ಸಭೆ ಇವೆಲ್ಲದರ ನಿಖರವಾದ ಚಿತ್ರೀಕರಣ ಆಗಬೇಕಿತ್ತು.
ಪಾತುಮ್ಮನ ಮನೆಯನ್ನು ಸಿದ್ಧಮಾಡಲಿಕ್ಕೆ ಅಕ್ಕಪಕ್ಕದ ಮನೆಯವರೇ ಮುತುವರ್ಜಿ ತೆಗೆದುಕೊಂಡಿದ್ದರಿಂದ ನಮಗೆ ಆ ಮನೆಯ ವಾತಾವರಣ ಸೃಷ್ಟಿಸುವಲ್ಲಿ ಕಷ್ಟವಾಗಲಿಲ್ಲ. ನಮಾಜು ಮಾಡುವ ಕ್ರಮಗಳನ್ನು ಅಲೀಮಮ್ಮ, ಹಸೀನಮ್ಮನ ಅತ್ತೆ ಎಲ್ಲರೂ ಸೇರಿ ಹೇಳಿಕೊಟ್ಟರು. ವಯೋಸಹಜ ಕಾರಣಕ್ಕೆ ಅವರ ಅಭ್ಯಾಸಗಳನ್ನು ತದ್ವತ್ತಾಗಿ ಜಯಶ್ರೀಯವರು ಮಾಡಲಿಲ್ಲ ಅಂತ ನಮಗೆ ಆಗ ಅನ್ನಿಸಿದರೂ ನಂತರ ತೆರೆಯ ಮೇಲೆ ನೋಡಿದಾಗ ಚೆನ್ನಾಗೇ ಕಾಣುತ್ತಿತ್ತು.
ಮನೆಯ ಒಳಗಿನ ದೃಶ್ಯಗಳು ನಮ್ಮ ಹಿಡಿತದಲ್ಲೇ ಇದ್ದವು. ಹಾಗಾಗಿ ಅವೆಲ್ಲಾ ಸವಾಲಿನದ್ದಾಗಿರಲಿಲ್ಲ. ನಿಜವಾದ ಸವಾಲು ನಮಗೆ ಎದುರಾಗಿದ್ದು ಮಸೀದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವಾಗ. ಜನರು ಪ್ರಾರ್ಥನೆಗಾಗಿ ಬರುವ ಜಾಗವನ್ನು ಮರುಸೃಷ್ಟಿ ಮಾಡುವುದು ಸುಲಭದ ಸಂಗತಿಯಲ್ಲ. ಹೀಗಾಗಿ ಜಿತೇಂದ್ರ ಅವರ ಪರಿಚಯದವರ ಕಡೆಯಿಂದ ಕೆಮ್ಮಣ್ಣು ಊಡೆಯ ಮಸೀದಿಯ ಹೊರಭಾಗವನ್ನು ಶೂಟ್ ಮಾಡಲಿಕ್ಕೆ ಮಾತಾಡಿದ್ದೆವು. ಆದರೆ ಅದು ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಮಸೀದಿ ಜಾಗವನ್ನು ಖಾಲಿ ಶೂಟ್ ಮಾಡಿಕೊಂಡು ಆಮೇಲೆ ಏನೋ ಸರ್ಕಸ್ ಮಾಡಿದೆವು. ಎಲ್ಲರೂ ನಮಾಜಿಗಾಗಿ ಹೋಗುವ ದೃಶ್ಯವನ್ನು ಅವರಿಗೆ ಗೊತ್ತಿಲ್ಲದ ಹಾಗೆ ಚಿತ್ರೀಕರಿಸಬೇಕಾಯಿತು.
ನಮಾಜಿನ ನಂತರ ಜಮಾತಿನ ಸಭೆಯನ್ನು ಸೇರುವುದು, ಅಲ್ಲಿ ಮೌಲ್ವಿ ಖ್ವಾಜಿಯವರ ಸಂಭಾಷಣೆಯಲ್ಲಿ ಷರೀಯತ್‌ನಲ್ಲಿ ಮೂರು ಸಲ ಒಮ್ಮೆಗೇ ತಲ್ಲಾಖ್ ಹೇಳುವ ಕ್ರಮವಿಲ್ಲ. ಹಾಗೆ ಮಾಡಿದರೆ ಅದು ಸಾಧುವಲ್ಲ. ಇದೆಲ್ಲವನ್ನೂ ಬರಿಯಲಿಕ್ಕೆ ನಾವು ಕಷ್ಟ ಪಟ್ಟೆವು. ಯಾಕೆಂದರೆ ಮುಸಲ್ಮಾನ ಪಂಡಿತರು ನಮಗೆ ಗೊತ್ತಿರಲಿಲ್ಲ. ಮತ್ತೆ ಮತ್ತೆ ಸ್ನೇಹಿತರನ್ನು, ಬೋಳುವಾರರನ್ನು, ಕುರ್‌ಆನ್‌ನಲ್ಲಿ ಬರುವ ಕಾನೂನುಗಳನ್ನು ಕುರಿತಾದ ಪುಸ್ತಕಗಳನ್ನು, ಹೆಣ್ಣಿನ ಹಕ್ಕುಗಳನ್ನು ಕುರಿತಾದಂತೆ ಎದ್ದ ಕೆಲ ವಿವಾದಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ತ್ರಿವಳಿ ತಲ್ಲಾಖ್ ಬಗ್ಗೆ ಕೋರ್ಟ್ನ ನಿಲುವುಗಳನ್ನು ಗಮನಿಸಿದೆವು.

ನಿಜಕ್ಕೂ ನಾವು ತೆಗೆದುಕೊಂಡ ವಿಷಯ ಎಷ್ಟು ಪ್ರಚಲಿತದಲ್ಲಿತ್ತೆಂದರೆ ನಮ್ಮ ಸಂಭಾಷಣೆಯನ್ನು ಚರ್ಚೆಯಲ್ಲೇ ಬೆಳೆಸಿದ್ದೂ ಇದೆ. ನಮಗೆ ಆಗಲೇ ಗೊತ್ತಾಗಿದ್ದು ಕುರಾಅನ್ ಹೆಣ್ಣುಮಕ್ಕಳ ಬಗ್ಗೆ ತುಂಬಾ ಉದಾರವಾಗಿಯೂ ನಡೆದುಕೊಂಡಿದೆ ಎನ್ನುವುದು. ಅವಳಿಗೆ ಗಂಡನ ಜೊತೆ ಸಂಸಾರ ಸುಗಮವಲ್ಲ ಎನ್ನಿಸಿದರೆ ಖುಲಾ ಕೇಳುವ ಸ್ವಾತಂತ್ರ್ಯವೂ ಇದೆ. ಆದರೆ ಸಾಮಾಜಿಕವಾಗಿ ಇಂಥಾ ಹಕ್ಕುಗಳನ್ನು ಹೆಣ್ಣುಮಕ್ಕಳಿಗೆ ತಿಳಿಯದೇ ಇರುವ ಹಾಗೆ ನೋಡಿಕೊಳ್ಳಲಾಗಿದೆ, ಮತ್ತು ಹಾಗೆ ಖುಲಾ ಕೇಳಿದವರಿಗೆ ಸಾಮಾಜಿಕವಾಗಿ ಮನ್ನಣೆ ಸಿಗದ ಹಾಗೆ ನೋಡಿಕೊಳ್ಳಲಾಗಿದೆ ಎನ್ನುವುದು ಸತ್ಯ.
ಕುರ್ ಆನ್ ಪ್ರಕಾರ ತಲ್ಲಾಖ್ ಎನ್ನುವುದು ಒಟ್ಟಿಗೆ ಬಾಳಲಿಕ್ಕೆ ಇರುವ ಅವಕಾಶವೇ ಹೊರತು ಬಿಟ್ಟುಹೋಗಲಿಕ್ಕಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹೆಣ್ಣಿನ ಘನತೆಯನ್ನು ಎತ್ತಿ ಹಿಡಿಯುವ ಇಂಥಾ ಅನೇಕ ಸಂಗತಿಗಳು ಇವೆ. ಇದರೊಂದಿಗೆ ತಲ್ಲಾಖ್ ಕೊಟ್ಟವನಿಗೆ ಮತ್ತೆ ಅದೇ ಹೆಂಡತಿಯ ಜೊತೆ ಬಾಳುವೆ ಬೇಕೆಂದ ಪಕ್ಷದಲ್ಲಿ ಆಕೆ ಇನ್ನೊಬ್ಬನನ್ನು ವಿವಾಹವಾಗಿ ಆತನೊಡನೆ ಬಾಳಲಾರದೆ ಆತನಿಂದ ತಲಾಖ್ ಪಡೆದು ಬಂದವಳಾಗಿರಬೇಕು. ಅಥವಾ ಮೊದಲಿನ ಗಂಡನನ್ನು ಪುನರ್ ವಿವಾಹವಾಗಲು ಒಂದು ರಾತ್ರಿಗೆ ಓರ್ವನನ್ನು ವಿವಾಹವಾಗಬೇಕೆಂಬ ನಿಯಮವನ್ನು ಕುರ್‌ಆನ್ ಎಲ್ಲೂ ವಿಧಿಸಿಲ್ಲ. ಇದೇ ಅಲ್ಲದೆ ಕುರ್‌ಆನ್‌ನಲ್ಲಿ ಬರೀ ಹೆಣ್ಣು ಮಕ್ಕಳೇ ಹುಟ್ಟಿದ್ದಕ್ಕೆ ತಲ್ಲಾಖ್ ಹೇಳಬಹುದು ಎನ್ನುವುದೂ ಇಲ್ಲ. ಇದೆಲ್ಲಾ ಅನುಕೂಲ ಸಿಂಧುಗಳಾದ ಗಂಡಸರು ತಮ್ಮ ಸೌಕರ್ಯಕ್ಕಾಗಿ ಕೈಗೊಂಡ ಉಪಾಯಗಳು ಎನ್ನುವುದು ಗಮನಿಸಬೇಕಾದ ಸಂಗತಿ.
ವ್ಯವಸ್ಥೆಯೊಂದಿಗೆ ಸಂಘರ್ಷಕ್ಕಿಳಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಆದರೆ ವ್ಯವಸ್ಥೆಯನ್ನು ಬದಲಿಸಲಿಕ್ಕೆ ಇರುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ಅದನ್ನು ಜನರ ಹತ್ತಿರಕ್ಕೆ ಕರೆದೊಯ್ಯಲಿಕ್ಕೆ ಏನು ಮಾಡಬೇಕು ಎನ್ನುವುದನ್ನು ಯೋಚಿಸಬೇಕು. ಎರಡೆ ದಾರಿಗಳು ನಮ್ಮ ಮುಂದಿರುವುದು ಎನ್ನುವುದನ್ನು ಯೋಚಿಸತೊಡಗಿದೆವು. ಬುದ್ಧಿ ಮುಖ್ಯವಾದ ಪರಿಣಾಮ ಆ ಭಾಗದ ಸಂಭಾಷಣೆ ಸ್ವಲ್ಪ ಗ್ರಾಂಥಿಕವೇ ಆಯಿತು. ಇರಲಿ ಎಂದುಕೊಂಡೆವು.
ನಮ್ಮ ಮಾತುಗಳಲ್ಲಿ ಯಾವುದೇ ಗೊಂದಲಗಳೂ ಇರಬಾರದು ಎನ್ನುವುದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಜಮಾತಿನ ಅಧ್ಯಕ್ಷನ ಹತ್ತಿರ ಏಕಪಕ್ಷೀಯವಾಗಿ ಒಮ್ಮೆಗೇ ಮೂರು ತಲ್ಲಾಖ್ ನೀಡುವುದನ್ನು ಭಾರತೀಯ ಮುಸ್ಲೀಂ ಮಹಿಳೆಯರು ತೀವ್ರವಾಗಿ ವಿರೋಧಿಸುವುದಿಲ್ಲವೋ ಅಲ್ಲಿಯ ವರೆಗೆ ಮಹಿಳೆಯರು ಅನ್ಯಾಯವಾಗಿ ಇಂಥ ವಿಧಿಗಳಿಗೆ ಬಲಿಯಾಗುತ್ತಿರುತ್ತಾರೆ. ಸರಕಾರಕ್ಕಾಗಲೀ, ಕಾನೂನು ವ್ಯವಸ್ಥೆಗಾಗಲೀ ನಮ್ಮ ಹೆಣ್ಣು ಮಕ್ಕಳಿಗೆ ನಿಖಾ, ತಲ್ಲಾಖ್, ಮಕ್ಕಳ ಜೀವನಾಂಶದ ನೀಡುವ ಬಗ್ಗೆ ಕುರ್ ಆನ್‌ನ ಆಧಾರದ ಮೇಲೆಯೇ ಮುಸ್ಲೀಂ ಪರ್ಸನಲ್ ಲಾ ಅನ್ನು ಪುನರ್ ನಿರ್ಮಿಸಲು ಯಾಕೆ ಸಾಧ್ಯವಾಗದು?’ ಎನ್ನುವ ಪ್ರಶ್ನೆಗಳನ್ನು ಕೇಳಿಸಿದೆವು. ಅದು ಪರಿಹಾರದ ಮಾರ್ಗ ಕೂಡ ಎಂದು ನಮಗೆ ಅನ್ನಿಸಿತ್ತು.
ಸಬಲೀಕರಣದ ಉತ್ತರಗಳು ಎಲ್ಲಿಯಾದರು ಸಿಕ್ಕಲಿ, ಸಿಗುತ್ತದೆ ಎನ್ನುವುದೇ ದೊಡ್ಡ ಸಮಾಧಾನವಾಗಿತ್ತು. ಜಮಾತಿನ ಮನೆಗಾಗಿ ಮಂಗಳೂರಿನ ಯಶವಂತ ಕಾಮತ್ ಅವರ ಮನೆಯನ್ನು ಮಾತಾಡಿ ಬಂದಿದ್ದೆವು. ಹಸೀನಾ ಚಿತ್ರಕ್ಕಾಗಿ ಅಲ್ಲಿ ಚಿತ್ರೀಕರಣವನ್ನು ಕಾಸರವಳ್ಳಿ ಸರ್ ಮಾಡಿದ್ದರಂತೆ. ಹಾಗೆ ಪರಿಚಯವಿದ್ದರಿಂದ ಪಂಚಾಕ್ಷರಿಗೆ ಅವರನ್ನು ಕನ್ವಿನ್ಸ್ ಮಾಡುವುದು ಸುಲಭವಾಯ್ತು. ಆದರೆ ಅಲ್ಲೊಂದು ಜಮಾತಿನ ಮೀಟಿಂಗ್ ನಡೆಯುತ್ತೆ ಅನ್ನುವುದನ್ನು ಅವರಿಗೆ ಹೇಳಲಿಲ್ಲ.
ನನಗೆ ಪ್ರತಿ ಸಲ ಪಂಚಾಕ್ಷರಿ ಯಾಕೆ ಹೀಗೆ ಮುಚ್ಚು ಮರೆ ಮಾಡುತ್ತಾರೆ ಎನ್ನುವುದು ಗೊತ್ತಾಗಲಿಲ್ಲ. ಅವರಿಗೂ ಇಂಥಾ ವಿಷಯಗಳನ್ನು ಡೀಲ್ ಮಾಡುವಾಗ ಗೊಂದಲವಿದ್ದಿರಬೇಕು ಎನ್ನಿಸುತ್ತೆ. ಮತ್ತು ನಮ್ಮ ಕಥೆಯನ್ನು ಬಿಟ್ಟುಕೊಡಬಾರದು ಎನ್ನುವುದೂ ಇದ್ದಿರಬಹುದು. ಅವರ ಈ ನಿಲುವಿನಿಂದ ಸುಮಾರು ಕಡೆ ತೊಂದರೆಯಾಗಿತ್ತು. ಇಲ್ಲೂ ಹೀಗೇ ಆಯಿತು. ನಿಗದಿತ ದಿನದಂದು ಬರುತ್ತಿದ್ದೇವೆ ಎಂದು ನೆನಪಿಸಲು ಚಂದ್ರಹಾಸ ಉಲ್ಲಳರು ಯಶವಂತ ಕಾಮತ್ ಅವರಿಗೆ ಫೋನ್ ಮಾಡಿದ್ದಾರೆ. ಅವರಿಂದ ವಿಷಯ ತಿಳಿದುಕೊಂಡ ಕಾಮತ್ ಮನೆಯವರು,ಇದಕ್ಕಾದರೆ ನಾವು ಕೊಡುವುದಿಲ್ಲ’ ಎಂದು ನೇರವಾಗಿ ಹೇಳಲಿಲ್ಲ. ಆದರೆ ನಮ್ಮ ಮನೆಯಲ್ಲಿ ಏನೋ ಸಮಸ್ಯೆ, ಈಗ ಚಿತ್ರೀಕರಣಕ್ಕೆ ಕೊಡಲಿಕ್ಕೆ ಆಗುವುದಿಲ್ಲ’ ಎಂದು ಕೈತೊಳೆದುಕೊಂಡಿದ್ದಾರೆ.
ಇನ್ನೊಂದು ದಿನಕ್ಕಾದರೂ ಕೊಡಿ’ ಎಂದರೆ ಇಲ್ಲ’ ಎಂದುಬಿಟ್ಟಿದ್ದಾರೆ. ನಂತರ ಚಂದ್ರಹಾಸರು ಸುಮಾರು ಮನೆಗಳನ್ನು ಹುಡುಕಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಯಾವುದೂ ಆಗಲಿಲ್ಲ. ಕಡೆಗೆ ತಮ್ಮ ಮನೆಯನ್ನೇ ಜಮಾತಿನ ಸಭೆಗಾಗಿ ಬಿಟ್ಟುಕೊಟ್ಟರು. ಜಮಾತಿನ ಸಭೆ ನಡೆಯುವಾಗಲೇ ಕೃತಕ ಮಳೆಗಾಗಿ ನಾನು ಫೈರ್ ಇಂಜಿನ್‌ನ ಜೊತೆ ಯುದ್ಧಮುಗಿದ ನಿರಾಳದಲ್ಲಿ ಉಲ್ಲಾಳಕ್ಕೆ ಬಂದದ್ದು. (ಸೂಚನೆ: ನೋಟ್ ಬ್ಯಾನಿನ ಎಪಿಸೋಡಿನಲ್ಲಿ ಪ್ರಸ್ತಾಪಿಸಿರುತ್ತೇನೆ) ಇನ್ನೆರಡು ದಿನದ ಶೂಟಿಂಗ್ ಬಾಕಿ ಇತ್ತು. ಫೈರ್ ಇಂಜಿನ್ ಗಾಡಿ ಬಂದು ನಿಂತುಬಿಟ್ಟಿದೆ. ಜನ ಮಾತ್ರ ಒಬ್ಬರೂ ಇಲ್ಲ.
ಇಪ್ಪತ್ತನಾಲ್ಕು ಗಂಟೆಗಳ ಕಾಲ ನಮಗೆ ಕಾಲಾವಕಾಶ. ಅಷ್ಟರಲ್ಲಿ ಚಿತ್ರೀಕರಣ ಮುಗಿಯಬೇಕು. ಇಲ್ಲದಿದ್ದರೆ ಮತ್ತೆ ಹಣ ತುಂಬ ಬೇಕಿತ್ತು ನಮ್ಮ ಇವತ್ತಿನ ಸಂದರ್ಭಕ್ಕೆ ಅದು ಸಾಧ್ಯವಿರಲಿಲ್ಲ. ಹೀಗಾಗಿ ನನ್ನಲ್ಲಿ ಕೂಡ ಆತಂಕ ಮನೆ ಮಾಡಿತ್ತು. ಅಲ್ಲಿ ಬೆಳಗ್ಗೆ ಶುರುವಾದ ದೃಶ್ಯ ಮುಗಿದಿದ್ದೇ ತಡವಾಗಿ ಆದ್ದರಿಂದ ಪಂಚಾಕ್ಷರಿಗೂ ಬೇರೆ ದಾರಿ ಇರಲಿಲ್ಲ. ಪುನೀತ ಮತ್ತು ಪುಟ್ಟರಾಜು ಪಾತುಮ್ಮಳ ಮನೆಯ ಲೊಕೇಷನ್‌ಗೆ ಬಂದರು.
ಫೈರ್ ಇಂಜಿನ್‌ನವರು ಟ್ಯಾಂಕರ್‌ನಲ್ಲಿ ನೀರನ್ನು ತುಂಬಿಸಿಕೊಂಡು ಬಂದಿದ್ದರು. ಆದರೆ ಅದು ಸಾಲುವುದಿಲ್ಲವಾದ್ದರಿಂದ ಹೊರಗಿನಿಂದ ಟ್ಯಾಂಕರ್‌ನ ವ್ಯವಸ್ಥೆ ಆಗ ಬೇಕಿತ್ತು. ಲೋಕಲ್ ಜನರ ಜೊತೆ ಮಾತಾಡಿಕೊಂಡು ತಯಾರಿ ನಡೆಸಿಕೊಂಡೆವು. ಫೈರ್ ಇಂಜಿನ್ ಜೊತೆ ಬಂದವರಿಗೆ ಕಾಫಿ, ತಿಂಡಿ ಕೊಡಿಸಿ, ಶೂಟಿಂಗ್ ಮುಗಿಸಿ ಬರುವ ನಮ್ಮ ಟೀಂಗಾಗಿ ಕಾಯುತ್ತಾ ಕುಳಿತೆವು. ಅಷ್ಟು ದಿನಗಳಲ್ಲಿ ತುಂಬಾ ರಿಲ್ಯಾಕ್ಸ್ ಆಗಿ ಕುಳಿತದ್ದು ಆಗಲೇ ಇರಬೇಕು. ಸಮುದ್ರದ ತಡೆಗೋಡೆಯನ್ನು ದಾಟಿ, ಕೆಳಗಿಳಿದು ನೀರಬಳಿ ಕುಳಿತೆವು. ನಾನೂ ಹಾಡುಗಳನ್ನು ಹೇಳುತ್ತಿದ್ದೆ. ಸಮುದ್ರದ ತೆರೆಯ ಶಬ್ದದಲ್ಲಿ ಯಾರ ಮಾತು ಯಾರಿಗೂ ಕೇಳುತ್ತಿರಲಿಲ್ಲ. ಒಳಗಿನ ಹುಕಿಗಾಗಿ ಮಾತ್ರ ಹಾಡುತ್ತಿದ್ದೆ.

ನಾವು ಮಾತ್ರ ಓಡಾಡುತ್ತಿದ್ದನ್ನು ಗಮನಿಸಿದ ಅಲೀಮಮ್ಮ,ಯಾರೂ ಇಲ್ಲದೆ ಇವರು ಮಾತ್ರ ಯಾಕೆ ಹೀಗೆ ಓಡಾಡುತ್ತಿದ್ದಾರೆ? ಶೂಟಿಂಗ್ ಇಲ್ಲವೋ’ ಎಂದುಕೊಂಡು ನಮ್ಮ ಬಳಿ ಬಂದರು. ಇಲ್ಲ ಬರುವವರಿದ್ದಾರೆ’ ಎಂದ ನನ್ನ ಮಾತಿಗೆ,ಬಂದಾಗ ನಿಮಗೆ ಕೆಲಸ ಜಾಸ್ತಿಯಾಗಿಬಿಡುತ್ತಲ್ವಾ?’ ಎಂದು ಮಾತಿಗಿಳಿದರು. ಮಾತು ಶೂಟಿಂಗ್ ಮುಗಿಸಿ ಇನ್ನೇನು ಹೊರಡುವ ದಿನ ಹತ್ತಿರ ಬರುತ್ತಿದೆ ಎನ್ನುವ ವಿಷಯಕ್ಕೆ ತಿರುಗಿದಾಗ, ಅಯ್ಯೋ ನೀವು ಹೊರಟೇ ಬಿಡುತ್ತೀರಾ?’ ಎಂದು ಆಕೆ ಉದ್ಗಾರ ತೆಗೆದರು.ನನಗೆ ಬೀಡಿಕಟ್ಟುವುದನ್ನು ಹೇಳಿಕೊಟ್ಟುಬಿಡಿ ನಾನಿಲ್ಲೇ ಇದ್ದುಬಿಡುತ್ತೇನೆ ಎಂದೆ ನಗುತ್ತಾ. ನೀವಿರುತ್ತೀರಾ ಎಂದರೆ ನಾನು ಏನು ಬೇಕಾದರೂ ಕಲಿಸಿಕೊಡುತ್ತೇನೆ’ ಎಂದರು ಅಲೀಮಮ್ಮ.ನಾನು ಹೋಗಲಿಕ್ಕೆ ಇಲ್ಲಿಗೆ ಬಂದವಳು. ಕೆಲಸ ಮುಗಿದ ಮೇಲೆ ಇಲ್ಲಿ ನಾನು ಹೇಗಿರಲಿಕ್ಕೆ ಆಗುತ್ತೆ? ನನಗೂ ನಿಮ್ಮನ್ನೆಲ್ಲಾ ಬಿಟ್ಟು ಹೋಗಲಿಕ್ಕೆ ನೋವಾಗುತ್ತೆ’ ಎಂದೆ. ಹೋಗುವುದು ಎನ್ನುವ ಮಾತು ಎಷ್ಟು ಬೇಜಾರಾಗಿ ಕೇಳುತ್ತೆ ಅಲ್ಲವಾ?’ ಎಂದರು ಆಕೆ. ಇಬ್ಬರ ಮಾತಿನಲ್ಲಿ ಗಾಢವಾಗುತ್ತಿದ್ದ ಆಪ್ತತೆ. ಅಲೀಮಮ್ಮನಿಗೆ ಏನೋ ಹೇಳಲಿಕ್ಕಿತ್ತು, ಅವರ ಕಣ್ಣುಗಳಲ್ಲಿ ತೀವ್ರವಾದ ಹೊಳಪು. ಇದ್ದಕ್ಕಿದ್ದ ಹಾಗೆ ನನ್ನ ಕೈಗಳನ್ನು ಹಿಡಿದುಕೊಂಡು,ನೀವು ನಮ್ಮ ಜಾತಿಯಲ್ಲಿ ಹುಟ್ಟಬೇಕಿತ್ತು’ ಎಂದುಬಿಟ್ಟರು. ಆ ಮಾತುಗಳನ್ನು ಕೇಳಿ ಕ್ಷಣಕಾಲ ದಿಗ್ಘ್ರಾಂತಳಾದೆ. ದಿಕ್ಕು ತೋಚಲಿಲ್ಲ. ಅಲೀಮಮ್ಮ ತಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿಯಾಗಿತ್ತು. ಅವರ ಮನಸ್ಸಿನ ಭಾರ ನನ್ನ ಮನಸ್ಸಿಗೆ ವರ್ಗಾವಣೆಯಾಗಿತ್ತು.
ಇಂಥಾದ್ದೊಂದು ಕ್ಷಣ ನನ್ನ ಜೀವನದಲ್ಲಿ ಬರುತ್ತೆ ಎಂದುಕೊಳ್ಳಲಿಕ್ಕೆ ಸಾಧ್ಯವೇ ಇರಲಿಲ್ಲ. ನನ್ನ ಕಣ್ಣಲ್ಲಿ ಆಯಾಚಿತವಾಗಿ ನೀರು ಬಂದಿತ್ತು. ಅವರ ಕೈಗಳನ್ನು ಹಿಡಿದು, ಅಲೀಮಮ್ಮ ಈಗಲೂ ನಾನು ನಿಮ್ಮವಳೇ’ ಎಂದಿದ್ದೆ. ಭೂಮಿ, ಆಕಾಶ, ನೀರು ಕೊನೆಗೆ ಆಡುತ್ತಿದ್ದ ಉಸಿರೂ ಭಾರವೇ. ಕಳಕೊಳ್ಳುವ ನೋವು ಕೂಡಿಕೊಳ್ಳುವ ಸುಖವನ್ನು ಇಲ್ಲವಾಗಿಸುತ್ತದೆ. ಅಲೀಮಮ್ಮನಿಗೆ ನಾನು ಯಾರೆಂದು ಸರಿಯಾಗಿ ಗೊತ್ತಿಲ್ಲ. ಆದರೆ ತನ್ನ ಧರ್ಮದವಳಲ್ಲವೆಂದು ಸ್ಪಷ್ಟವಾಗಿ ಗೊತ್ತಿದೆ. ಆದರೂ ನನ್ನನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕು ಅನ್ನಿಸಿತ್ತಲ್ಲ! ಅದು ದಿವ್ಯತೆಯದ್ದು.
ಹುಟ್ಟಬೇಕಿತ್ತು ಎನ್ನುವುದು ಆಕೆಯ ಇಚ್ಚೆಯೇ ಆಗಿದ್ದರೆ ನಾನು ಅವರ ಧರ್ಮದವಳೇ. ಮನುಷ್ಯತ್ವಕ್ಕೆ ಮಾತು ಯಾವತ್ತೂ ಭಾರವೇ. ಪ್ರೀತಿ ಯಾವತ್ತೂ ಹಗುರವೇ. ಆದರೂ ಅಲೀಮಮ್ಮನ ಮನಸ್ಸನ್ನು ಹಗುರಗೊಳಿಸಬೇಕಿತ್ತು ನಾನೂ ಹಗುರಾಗಬೇಕಿತ್ತು.ಅಲೀಮಮ್ಮ ನನ್ನ ಬಗ್ಗೆ ಒಂದು ಕಥೆ ಕಟ್ಟಿಬಿಡಿ, ನಿಮ್ಮಕಥೆಯಲ್ಲಿ ನಾನು ಶಾಶ್ವತವಾಗಿ ಇದ್ದುಬಿಡುತ್ತೇನೆ’ ಎಂದೆ. `ನಿಮಗೆ ನಾನು ಹೇಳುವುದು ಕತೆಯ ಹಾಗೆ ಅನ್ನಿಸಿದ್ದಾ? ಎಂದು ತುಸುಕೋಪ, ತುಸು ನಗುವಿನ ಜೊತೆ ಹೇಳಿದಾಗ ನಾನು ಜೋರಾಗಿ ನಕ್ಕೆ.
। ಇನ್ನು ಮುಂದಿನ ವಾರಕ್ಕೆ ।






0 Comments