ಪಿ ಚಂದ್ರಿಕಾ ಅಂಕಣ – ಕೆಮ್ಮಣ್ಣು ಹೂಡೆಯ ಶಾಂಭವಿನದಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

20


ಉಡುಪಿಯ ಕೆಮ್ಮಣ್ಣು ಹೂಡೆಯಲ್ಲಿ ಶಾಂಭವಿನದಿ ಸಮುದ್ರವನ್ನು ಸೇರುತ್ತದೆ. ಆ ಜಾಗ ನಿಜಕ್ಕೂ ರೋಮಾಂಚನವನ್ನು ಉಂಟುಮಾಡುತ್ತದೆ. ಶೂಟಿಂಗ್ ಜಾಗವನ್ನು ಆಯ್ಕೆಮಾಡಲು ನೋಡಲಿಕ್ಕೆ ಹೋದಾಗ ಇದೇ ಕೆಮ್ಮಣ್ಣು ಹೂಡೆಗೆ ಪಂಚಾಕ್ಷರಿಯೇ ಕರೆದುಕೊಂಡು ಹೋಗಿದ್ದರು. ಗಿರೀಶ್ ಕಾಸರವಳ್ಳಿ ಅವರ ಜೊತೆ ಕೆಲಸ ಮಾಡಿದ್ದ ಅವರಿಗೆ ಆ ಜಾಗವೆಲ್ಲಾ ಚಿರಪರಿಚಿತ. ಶಾಂಭವಿನದಿ ಒಂದು ಕಡೆ ಇನ್ನೊಂದು ಕಡೆ ಸಮುದ್ರ. ಎರಡು ಸೇರುವ ಜಾಗದಿಂದ ಸ್ವಲ್ಪ ದೂರಕ್ಕೆ ಗುಲಾಬಿ ಟಾಕೀಸಿನ ಸೆಟ್ ಹಾಕಿದ್ದನ್ನು ತೋರಿಸಿ ವಿವರಿಸಿದ್ದರು.

ಒಂದೆಡೆ ವಿಶಾಲವಾದ ಸಮುದ್ರ ಇನ್ನೊಂದೆಡೆ ರಭಸವಾಗಿ ಸಮುದ್ರವನ್ನು ಸೇರಲು ಬರುತ್ತಿದ್ದ ಶಾಂಭವಿ ನದಿ (ಸಮುದ್ರ ಮತ್ತು ನದಿ ಸೇರುವ ಜಾಗವನ್ನು ಅಳಿವೆ ಬಾಗಿಲು ಎನ್ನುತ್ತಾರೆ) ಸಾಲಾಗಿದ್ದ ಬಂಡೆಗಳಿಗೆ ಬಡೆದು, ಅಲೆಗಳ ಜೊತೆ ಪೈಪೋಟಿಗಿಳಿದು ನೀರನ್ನು ಬಹುದೂರದವರೆಗೂ ಎರಚುತ್ತಿತ್ತು. ಅಲ್ಲಿ ಆಟಆಡುವ ಹುಡುಗರು ಸಂಭ್ರಮದಲ್ಲಿ ಕೂಗುತ್ತಿದ್ದರು.

ನದಿಯ ನೀರು ಸಮುದ್ರವನ್ನು ಸೇರುವಲ್ಲಿ ಒಂದು ರಭಸವಿತ್ತು- ಅಸಕ್ಮಾತ್ ಆಗಿ ಯಾರಾದರೂ ಸಿಕ್ಕರೆ ಕೊಚ್ಚಿಹೋಗುವಷ್ಟು. ಸಮುದ್ರದ ದಡ ಬರೀ ಮರಳಾದರೆ, ನದಿಯ ದಡದಲ್ಲಿ ಗಿಡ ಗಂಟಿಗಳು ಸೊಂಪಾಗಿದ್ದವು. ಕೆಲ ಮರಗಳು ಬಾಗಿದ್ದವು ಅವುಗಳ ಮೇಲೆ ಹುಡುಗರು ಗುಂಪುಗುಂಪಾಗಿ ಕುಳಿತು ಉಯ್ಯಾಲೆಯಾಡುತ್ತಿದ್ದರು. ಸಂಜೆಯ ಕೆಂಪು ಸಮುದ್ರದ ಮೇಲೆ ಬಿದ್ದು ದಂಡೆಯನ್ನೆಲ್ಲಾ ಕೆಂಪಾಗಿಸಿತ್ತು.

ಸಮುದ್ರದ ದಡದಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ದೊಡ್ದವರು ಚಿಕ್ಕವರು ಏನನ್ನೋ ಹುಡುಕುತ್ತಿದ್ದರು. ಸಮುದ್ರದ ಅಲೆ ಒಮ್ಮೆ ಬಂದು ಹೋದರೆ ಹುಡುಗರು ಹೋ ಎಂದು ಓಡುತ್ತಿದ್ದರು. ಅಲೆ ತಂದೆರಚಿದ ಕಪ್ಪೆಚಿಪ್ಪನ್ನು ಆಯ್ದು ತಮ್ಮ ತಮ್ಮ ಕವರಿಗೆ ತುಂಬಿಸಿಕೊಳ್ಳುತ್ತಿದ್ದರು. ಇದ್ಯಾವ ಆಟ ಎಂದು ನಾವು ಆ ಹುಡುಗರನ್ನು ಏನನ್ನು ಆಯುತ್ತಿದ್ದೀರಿ’ ಎಂದು ಕೇಳಿದೆವು. ಮಳಿ ಎಂದು ಹೇಳಿ, ಮತ್ತೆ ಹಿಂದೆಸರಿದ ಅಲೆಯನ್ನನುಸರಿಸಿ ಹುಡುಗರು ಓಡತೊಡಗಿದರು. ದೃಶ್ಯವಾಗಿ ಅದು ತುಂಬಾ ಇಂಟರೆಸ್ಟಿಂಗ್ ಎನ್ನಿಸತೊಡಗಿತು. ಕೇಳೋಣವೆಂದರೆ ಚಂದ್ರಹಾಸರಿಗೆ ಪರಿಚಯದವರು ಸಿಕ್ಕು ದೀರ್ಘವಾದ ಮಾತುಕತೆಯಲ್ಲಿ ತೊಡಗಿದ್ದರು.

ಮಳಿ ಎಂದರೆ ಏನು? ಅದನ್ನ ಏನು ಮಾಡುತ್ತಾರೆ? ಎಂದೆಲ್ಲಾ ಯೋಚಿಸಿದೆವೇ ಹೊರತು ನಮಗಂತೂ ಏನೂ ಗೊತ್ತಿರಲಿಲ್ಲ. ನಮ್ಮ ಹತ್ತಿರವೇ ಅಲ್ಲೆ ಕಲ್ಲುಬಂಡೆಯ ಮೇಲೆ ಒಬ್ಬ ಹೆಂಗಸು ಕೂತು ಹುಡುಗರ ಸಂಭ್ರಮ ನೋಡುತ್ತಿದ್ದಳು. ಅವಳನ್ನು ನೋಡಿದರೆ ಪಕ್ಕಾ ಲೋಕಲ್ ಬ್ಯಾರೀ ಹೆಂಗಸು ಎಂದು ಗೊತ್ತಾಗುತ್ತಿತ್ತು. ನಾನು ಆಕೆಯನ್ನು ಮಾತಾಡಿಸತೊಡಗಿದೆ. ಶಾಂಭವೀನದಿಯ ತಟದಲ್ಲಿ ಆಕೆಯ ತಂದೆಯ ಮನೆಯಿತ್ತು. ಅದು ನವೆಂಬರ್ ತಿಂಗಳು, ರಜಾ ದಿನಗಳೆಂದು ಮಕ್ಕಳ ಜೊತೆ ತವರಿಗೆ ಬಂದಿದ್ದಳು.

ಮಕ್ಕಳಿಗೆ ಇದೆಲ್ಲಾ ಗಂಡನ ಮನೆಯಲ್ಲಿ ಸಿಗುವುದಿಲ್ಲ ಆದ್ದರಿಂದ ಅವು ಖುಷಿಯಿಂದ ಆಡುತ್ತಿದ್ದವು. ಇವತ್ತು ಅವು ಆರಿಸಿ ತಂದ ಮಳಿಯಿಂದ ಪದಾರ್ಥ ಮಾಡಿಕೊಟ್ಟರೆ ಖುಷಿ ಪಡ್ತಾರೆ’ ಎಂದೆಲ್ಲಾ ಹೇಳಿದಳು. ಇದರಲ್ಲಿ ಪದಾರ್ಥ ಹೇಗೆ ಮಾಡುತ್ತೀರಿ?’ ಎಂದೆ. ಹೊರಗಿನ ಚಿಪ್ಪು ತುಂಬಾ ಗಟ್ಟಿ. ಅದಕ್ಕೆ ಚೆನ್ನಾಗಿ ತೊಳೆದು ನೀರಲ್ಲಿ ಕುದಿಸುತ್ತೇವೆ, ಚಿಪ್ಪು ಬಾಯಿ ಬಿಟ್ಟುಕೊಳ್ಳುತ್ತದೆ. ಇಲ್ಲದಿದ್ದರೆ ಮೆಟ್ಟುಗತ್ತಿಯಿಂದ ಸೀಳಿ ತೆಗೆಯಬೇಕು. ಪದಾರ್ಥ ಮಾತ್ರ ಅದ್ಭುತವಾಗಿರುತ್ತೆ. ಇದೊಂದಿದ್ದರೆ ಯಾವ ತರಕಾರಿಯೂ ಬೇಡ ಮೀನೂ ಬೇಡ ಅಂಥಾ ರುಚಿ’ ಎಂದಳು. ನಿಮಗೆಷ್ಟು ಮಕ್ಕಳು?’ ಎಂದೆ. ಇಬ್ಬರು. ಓ ಅಲ್ಲಿ ಆಡುತ್ತಿದ್ದಾರೆ ನೋಡಿ ಅವರೇ’ ಎಂದಳು. ಅಷ್ಟು ಜನ ಮಕ್ಕಳಲ್ಲಿ ಯಾರೆಂದು ನೋಡುವುದು? ಮಳಿಗಳ ಹಾಗೆ ಅವನ್ನೂ ಸಮುದ್ರವೆ ತಂದುಬಿಟ್ಟಿದೆಯೇನೋ ಅನ್ನಿಸಿಬಿಟ್ಟಿತ್ತು.

ಎರಡೇ ಮಕ್ಕಳು ಸಾಕಾ?’ ಎಂದೆ. ಈಗೆಲ್ಲಾ ಯಾರು ತುಂಬಾ ಮಕ್ಕಳನ್ನು ಮಾಡಿಕೊಳ್ಳುತ್ತಾರೆ, ಎಲ್ಲಾ ಫ್ಯಾಮಿಲಿ ಪ್ಲಾನಿಂಗು’ ಎಂದಳು ಆಕೆ. ನಿಮ್ಮಲ್ಲಿ ಅದು ತಪ್ಪಲ್ಲವಾ? ಹಾಗೆ ಮಾಡಿಸಿಕೊಳ್ಳುವ ಹಾಗಿಲ್ಲ ಎನ್ನುತ್ತಾರೆ’ ಎಂದೆ ಅಚ್ಚರಿಯಿಂದ. ಅದೆಲ್ಲಾ ಹಳೆ ಜಮಾನ ಕಥೆ, ಈಗೆ ಮಾಡಿಸಿಕೊಳ್ಳಲಿಕ್ಕೆ ಸಮಾ. ಇಲ್ಲದಿದ್ದರೆ ಮಕ್ಕಳನ್ನು ಓದಿಸುವುದು ಹೇಗೆ? ಒಳ್ಳೆಯ ಜೀವನ ಕೊಡಬೇಕೋ ಬೇಡವೋ’ ಎಂದಳು. ನಿಮ್ಮ ಯಜಮಾನರು ಒಪ್ಪಿದರೆ?’ ಎಂದರೆ, ಒಪ್ಪಲಿಕ್ಕೆ ಬೇಕು, ಇದೇನು ನಮ್ಮ ಒಳ್ಳೆಯದಕ್ಕೆ ಮಾತ್ರವೋ? ಅವರಿಗೂ ಲಾಯಕ್ಕಾಗುವುದಲ್ಲಾ! ಈಗೆಲ್ಲ ಹಾಗೆ ಹತ್ತು ಹನ್ನೆರಡು ಮಕ್ಕಳು ಮಾಡಿಕೊಳ್ಳುವುದಿಲ್ಲ ಬಿಡಿ, ಆಗಿನ ಹಾಗೆ ಈಗ ಯುದ್ಧಗಳಿಲ್ಲವಲ್ಲ ಹೆಚ್ಚುಮಕ್ಕಳು ಬೇಕು ಎನ್ನುವುದಕ್ಕೆ’ ಎಂದಳು.

ನೀವು ಹಟ ಹಿಡಿದು ನಿಮ್ಮ ಗಂಡ ತಲ್ಲಾಖ್ ಕೊಟ್ಟುಬಿಟ್ಟರೆ?’ ನನಗೆ ಆತಂಕವಾಗುತ್ತಿತ್ತು. ಅದಕ್ಕೆ ಆಕೆ, ಯಾಕೆ ಕೊಡ್ತಾರೆ? ಹಾಗೆಲ್ಲಾ ಕೊಡಲಿಕ್ಕಾಗಲ್ಲ. ನಾವು ಸರಿಯಾಗಿ ಸಂಸಾರ ನಿಭಾಯಿಸಿದರೆ ಆಯ್ತು. ಈಗ ನಮ್ಮ ಸರೀಯತ್ತು ಮಾತ್ರವಲ್ಲ, ಕೋರ್ಟ್ ಕೂಡಾ ಇದೆ. ಎರಡೂ ನಮ್ಮ ಹೆಣ್ಣುಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಅವರು ಹಾಗೆ ಹೇಳಿದರೆ ನಾವು ಸುಮ್ಮನೆ ಬಿಡ್ತೀವಾ? ಅದೆಲ್ಲಾ ಸುಲಭದ ಮಾತಲ್ಲ ಬಿಡಿ’ ಎಂದಳು. ಅವಳ ದೃಢತೆಯನ್ನು ನೋಡಿ ಅಚ್ಚರಿಯಾಯಿತು. ಬರೀ ಕಥೆಗಳಲ್ಲಿ ನೋಡುವ ಗೋಳಾಡುವ ಪಾತ್ರಗಳಿಗೂ, ನಮ್ಮ ಮಧ್ಯೆ ಎಲ್ಲವನ್ನೂ ಎದುರಿಸುವ ಜೀವಂತವಾದ ಪಾತ್ರಗಳಿಗೂ ಎಂಥಾ ದೊಡ್ಡ ಅಂತರವಿದೆ ಅನ್ನಿಸಿತು.

ಆದರೆ ಶೂಟಿಂಗ್‌ಗಾಗಿ ನಾವು ಈ ಸೀನ್ ಅನ್ನು ಪ್ಲಾನ್ ಮಾಡಿ ನವೆಂಬರ್ ಹೊತ್ತಿಗೆ ಶೂಟ್ ಮಾಡಲಿಕ್ಕೆ ಹೋದರೆ ಅಲ್ಲಿ ಒಂದು ಮಳಿಯೂ ಸಿಗಲಿಲ್ಲ. ಮಕ್ಕಳು ಆಯಲಿಕ್ಕೂ ಬರಲಿಲ್ಲ. ಅದು ಮಳಿಯ ಕಾಲವಲ್ಲ ಎನ್ನುವುದು ಗೊತ್ತಾಯಿತು ಮಳೆಯ ಕಾಲಕೊನೆಯಾಗುವ ಹೊತ್ತಿನಲ್ಲಿ ಸಮುದ್ರ ಈ ಮಳಿಗಳನ್ನು ತನ್ನೊಡಲಿನಿಂದ ತಂದು ನೆಲಕ್ಕೆ ಎರಚುತ್ತದೆ. ಅಕ್ಲದಲ್ಲಿ ಮಳಿ ಎಲ್ಲಿಂದ ಬರುತ್ತೆ ಪ್ರಕೃತಿಯೇ ಹೀಗೆ ಎಲ್ಲವನ್ನೂ ಆಯಾ ಕಾಲದಲ್ಲಿ ಮಾತ್ರ ಒದಗಿಸಿಕೊಡುತ್ತದೆ. ನಮಗೆ ಆಸೆಬುರುಕತನ ಜಾಸ್ತಿ ಅದು ಯಾವಾಗಲೂ ಸಿಗಲಿ ಎಂದು ಬಯಸುತ್ತೇವೆ.

ನಾವು ಅಲ್ಲಿದ್ದ ಹುಡುಗರನ್ನು ಕೇಳಿಕೊಂಡಿದ್ದಕ್ಕೆ ನಾಲ್ಕಾರು ಜನ ಬಂದರೂ ದೃಶ್ಯ ಕುತೂಹಲಕಾರಿ ಅನ್ನಿಸಲಿಲ್ಲ. ಅಲ್ಲಲ್ಲಿ ಕೆಲ ಮಳಿ ಸಿಕ್ಕರೂ ಅದು ಚೆನ್ನಾಗಿರಲಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ಕಾಣಲಿ ಎಂತ ನಾವು ಅದನ್ನೇ ಆಯ್ದುಕೊಂಡೆವು. ಕಡೆಗೆ ಸಂಜೆ ಸೂರ್ಯಾಸ್ತದ ವೇಳೆಗೆ ಪಾತುಮ್ಮ ಮತ್ತು ಅವಳ ಮೊಮ್ಮಗಳು ಮಾತ್ರವೇ ಸಮುದ್ರದ ದಡದಲ್ಲಿ ಮಳಿ ಆಯುವುದನ್ನು ಚಿತ್ರೀಕರಿಸಲಾಯಿತು.

ಶೂಟಿಂಗ್‌ಗೆ ಹೋದಾಗ ಎದುರಾಗುವ ನಿಜವಾದ ಸವಾಲು ಇಂಥಾದ್ದೆ. ನಾವು ಇದೆ ಎಂದು ಹೋದರೆ ಪ್ರಕೃತಿ ತನ್ನೊಡಲನ್ನು ಬರಿದು ಮಾಡಿಕೊಂಡು ಇನ್ನೊಂದೇನನ್ನೋ ತುಂಬಿಕೊಂಡಿರುತ್ತದೆ. ಕಂಡಿದ್ದೆಲ್ಲಾ ಸಿಗುವುದು, ಅಂದುಕೊಂಡ ಹಾಗೆ ಆಗುವುದೆ ನಡೆದರೆ ನಮ್ಮನ್ನು ಹಿಡಿಯುವವರು ಯಾರು? ನಮ್ಮ ಮುಂದಿರುವುದು ದೃಶ್ಯವಾಗಿ ಚೆನ್ನಾಗಿರುತ್ತೆ ಎಂದುಕೊಳ್ಳುವ ಮನಸ್ಸಿಗೆ ಸಮಾಧಾನ ಹೇಳುವುದು ಮಾತ್ರ. ಸಿನಿಮಾಗೂ ನಾವು ಏನೆಲ್ಲಾ ಶಕ್ತಿ ಹಾಕಬಹುದು ಆದರೆ ಮಾಂತ್ರಿಕತೆಯ ಸ್ಪರ್ಷ ಸಿಕ್ಕದೇ ಹೋದರೆ ಏನು ಮಾಡಿದರೂ ಅದನ್ನು ಮೇಲೆತ್ತಲು ಅಸಾಧ್ಯ. ನನಗೆ ಈಗಲೂ ಅನ್ನಿಸುವುದು ಅದಕ್ಕೆ ನವು ಮಾಡುವ ಯಾವುದೇ ಕೆಲಸಕ್ಕಾಅಗಲೀ ಪಂಚಭೂತಗಳ ಬೆಂಬಲ ಬೇಕೇಬೇಕು ಎನ್ನುವುದು.

‍ಲೇಖಕರು Admin

November 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: