ಪಿ ಚಂದ್ರಿಕಾ ಅಂಕಣ- ಒಂದೊಂದು ಮನೆಯಲ್ಲೂ ಒಂದೊಂದು ಕತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

14

ಮುಲ್ಕಿಯ ಹೊಟೇಲ್ ಸ್ವಾಗತ್- ಪುನರೂರು ಟೂರಿಸ್ಟ್ ಹೋಂ ನಮಗೆ ಆಶ್ರಯ ತಾಣ. ಕಾರಣ ಆ ಹೊಟೇಲ್ನಲ್ಲಿ ಊಟ ಮತ್ತು ವಸತಿ ಎರಡು ತುಂಬಾ ಕಡಿಮೆ ಇತ್ತು. ಮ್ಯಾನೇಜರ್ ತುಂಬಾ ಒಳ್ಳೆಯವರಿದ್ದರು. ‘ನಾನು ಸರ್ ಹತ್ತಿರ ಮಾತಾಡುತ್ತೇನೆ ಬನ್ನಿ’ ಎಂದು ಉದಾರವಾಗಿ ಮಾತಾಡಿದ್ದರು. ನಾವೆಲ್ಲ ಇರಲಿಕ್ಕೆ ಆ ರೂಂಗಳು ಪರವಾಗಿರಲಿಲ್ಲ. ಆದರೆ ದೊಡ್ಡ ಕಲಾವಿದರನ್ನು ಹೇಗೆ ಉಳಿಸುವುದು ಅನುಕೂಲಕರವಾಗಿದ್ದರೂ, ಹಳೆಯ ಕಳೆಯಿಂದ ಸ್ವಲ್ಪ ಬಣ್ಣ ಕುಂದಿತ್ತು. ಮುಖ್ಯ ಪಾತ್ರಧಾರಿಗಳಾದ ಬಿ ಜಯಶ್ರೀ ಮತ್ತು ನಿನಾಸಂ ಅಚ್ಯುತ ಇವರಿಗೆ ಹತ್ತಿರದ ಆದಿತ್ಯ ಇಂಟರ್‌ನ್ಯಾಷನಲ್‌ನಲ್ಲಿ ಲಾಡ್ಜಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಮುಲ್ಕಿಯಿಂದಲೇ ದಿನಾ ಮಂಗಳೂರು, ಉಡುಪಿ ಹೀಗೆ ಓಡಾಡುತ್ತಿದ್ದೆವು. ಹೀಗಲ್ಲದಿದ್ದರೆ ಮತ್ತೆ ಬೇರೆ ವ್ಯವಸ್ಥೆಗೆ ಹೋದರೆ ಹಣಕಾಸಿನ ಹಿಡಿತ ಸಾಧ್ಯವೇ ಆಗುತ್ತಿರಲಿಲ್ಲ. ಇಪ್ಪತ್ತು ದಿನ ಕಳೆಯುವುದರಲ್ಲಿ ಮುಲ್ಕಿ ನಮ್ಮ ಊರಾಗಿಬಿಟ್ಟಿತ್ತು. ಬೆಳಗಿನ ಸೂರ್ಯೋದಯಕ್ಕೆ ವಾಕ್ ಹೊರಟುಬಿಟ್ಟರೆ ಊರು ಸುತ್ತಿ ಮತ್ತೆ ಹೊಟೇಲ್ ತಲುಪುತ್ತಿದ್ದುದು ಎಂಟಕ್ಕೆ. ಸ್ನಾನ, ತಿಂಡಿ ಮುಗಿಸಿ ಒಂಬತ್ತಕ್ಕೆ ಸಿದ್ಧವಾದರೆ ಟಿಟಿ ರೆಡಿ ಇರುತ್ತಿತ್ತು. ಹೀಗಾಗಿ ಎಲ್ಲಿಂದ ಎಲ್ಲಿಗೆ ಓಡಾಟ ಮಾಡಿದರೂ ಮುಕ್ಕಾಲುಗಂಟೆಯ ಒಳಗೆ ನಮ್ಮ ಶೂಟಿಂಗ್ ಸ್ಪಾಟ್  ಸೇರಿಬಿಡುತ್ತಿದ್ದೆವು. ಮಂಗಳೂರಿಗೆ ಹೋಗುವ ಮಧ್ಯದಲ್ಲಿ ಟೋಲ್ ಒಂದಿತ್ತು. ಅಲ್ಲಿ ವಾಹನಗಳು ಜಾಸ್ತಿ ಇದ್ದರೆ ಒಂದು ಗಂಟೆ ಹಿಡಿಯುತ್ತಿತ್ತು.

ಉಡುಪಿಯಿಂದ ಮಂಗಳೂರಿಗೆ ಹೋಗುವಾಗ ಮಧ್ಯದಲ್ಲಿರುವುದೇ ಈ ಮುಲ್ಕಿ. ಮೊದಲ ಬಾರಿ ಜಾಗವನ್ನು ನೋಡಲಿಕ್ಕೆಂದು ಮುಲ್ಕಿಗೆ ಬಂದಾಗ ರಸ್ತೆ ಬದಿಯ ಊರನ್ನು ನೋಡಿ ‘ಇದ್ಯಾವುದಪ್ಪಾ ಈ ಊರು ಅಪ್ಪ ಇಲ್ಲ, ಅಮ್ಮ ಇಲ್ಲ ಅನ್ನುವ ಹಾಗಿದೆ’ ಎಂದುಕೊಂಡಿದ್ದೆ. ಆದರೆ ಒಳಗಿನ ಮುಲ್ಕಿ ಅಂದರೆ ಓಲ್ಡ್ ಮುಲ್ಕಿ ಒಂದು ಅದ್ಭುತ ಜಗತ್ತು. ವಿಶಾಲವಾದ ಮನೆಗಳು ಬಾಳಿಬದುಕಿದ ಮನುಷ್ಯರ ಘನತೆಯನ್ನು ತೋರುವಂತೆ ನಿಂತಿದ್ದವು. ಹಳೆಯ ಊರು ಹೆಚ್ಚು ಬದಲಾವಣೆ ಕಾಣದೆ ತನ್ನ ಗೆಳೆತನವನ್ನೆಲ್ಲಾ ಉಳಿಸಿಕೊಂಡಿತ್ತು. ಬೆಂಗಳೂರಿನ ಅಬ್ಬಬ್ಬಾ ಅಂದ್ರೆ ಮೂವತ್ತು ನಲವತ್ತು ಅಡಿಗಳ ಮನೆಗಳನ್ನೇ ವಿಶಾಲ ಎಂದು ಭಾವಿಸುವ ನನಗೆ, ಇಂಥಾ ಒಂದು ಮನೆಯನ್ನು ಯಾರಾದರೂ ಕೊಟ್ಟರೆ ಸಾಕು ಎನ್ನಿಸುತ್ತಿತ್ತು. ಯಾರಾದರೂ ಕೊಟ್ಟರೆ ಎನ್ನಿಸಿದ್ದೂ ಕೂಡಾ ನಮ್ಮೂರ ಭೂಮಿಯ ಬೆಲೆಯಲ್ಲೆ ಅಳೆದಿದ್ದರಿಂದ ಕೊಳ್ಳಲಾಗುವುದಿಲ್ಲವೇನೋ ಎನ್ನುವ ಭಾವದಿಂದ.

‘ಅಯ್ಯೋ ನೀವು ಹಾಗಂತೀರಿ ಇನ್ನೂ ಎಂಥೆಂಥಾ ಮನೆಗಳಿವೆ ಗೊತ್ತಾ? ಅಲ್ಲಿ ಯಾರೂ ಇಲ್ಲ, ವರ್ಷಕ್ಕೆ ಒಮ್ಮೆ ಯಾರಾದರೂ ಬಂದರೆ ಅಷ್ಟೇ ಆ ಮನೆಗಳ ಪುಣ್ಯ. ಉಳಿದಂತೆ ಯಾರಾದರೂ ನೋಡುವವರಿದ್ದರೆ? ಅದೂ ಮನೆ ನೋಡುವವರು ಇಲ್ಲದಿದ್ದರೆಯಂತೂ ಯಾವ ಯಾವ ಪ್ರಾಣಿಗಳು ಓಡಾಡುತ್ತಿರುತ್ತದೋ ಗೊತ್ತೇ ಆಗುವುದಿಲ್ಲ’ ಎಂದರು ಚಂಚಲಾ. ‘ಅಲ್ಲಾ ಚಂಚಲಾ ಇಂಥಾ ಮನೆಗಳನ್ನು ಬಿಟ್ಟು ಜನ ಎಲ್ಲಿಗೆ ಹೋಗುತ್ತಾರೆ?’ ಎಂದೆ ನೋವಿನಿಂದ. ನನ್ನ ಮಾತಿಗೆ ಅದೆಷ್ಟು ಜನಗಳಿಗೆ ಆಶ್ರಯ ಕೊಟ್ಟಿದ್ದ ಮನೆಗಳು ಒಟ್ಟಿಗೆ ನಿಟ್ಟುಸಿರು ಬಿಟ್ಟಂತೆ ಅನ್ನಿಸಿತ್ತು.

‘ಒಂದೊಂದು ಮನೆಯಲ್ಲೂ ಒಂದೊಂದು ಕತೆ ಇದ್ದಿರಬೇಕು’ ಎಂದೆ. ‘ನಾವೀಗ ಕಥೆ ಹುಡುಕಲಿಕ್ಕೆ ಬಂದಿಲ್ಲ, ಲೊಕೇಷನ್ನು ಅನ್ನೋದನ್ನ ಮರೀತಾ ಇದೀರಾ’ ಎಂದರು ಪಂಚಾಕ್ಷರಿ. ಇದ್ಯಾವ ಪಂಚಪ್ಪಾ ತಮಾಷೆಯಾಗಿ ಹೇಳಿರಬೇಕೇನೋ ಎಂದುಕೊಂಡೆ. ಇಲ್ಲ ಸೀರಿಯಸ್ಸಾಗೆ ಇದ್ದರು. ಒಂಥರಾ ವಿಚಿತ್ರ ಮನುಷ್ಯ ಅನ್ನಿಸಿದ್ದು ನಿಜ. ಕಾಸರವಳ್ಳಿ ಸರ್ ಜೊತೆಗೆ ‘ನಾಯಿ ನೆರಳು’ ಸಿನಿಮಾಗೆ ಕೆಲಸ ಮಾಡಲು ಹೋದಾಗ ಇವರ ಪರಿಚಯ. ನಮ್ಮ ಮನೆಗೆ ಹತ್ತಿರವೇ ಇದ್ದಿದ್ದರಿಂದ ಆಗೀಗ ಮಾತಾಡುವ ಎದುರಾಗುವ ಅವಕಾಶಗಳು ಎದುರಾಗುತ್ತಿತ್ತು. ಹೀಗೆ ಯಾವ ಯಾವ ಕಾರಣಕ್ಕೋ, ಸಿನಿಮಾ ಕಥೆ ಎಂದು ಒಂದಿಷ್ಟು ಬಾರಿ ಸಿಗುತ್ತಿದ್ದೆವು.

ಪಂಚಾಕ್ಷರಿ ಪ್ರತಿಭಾವಂತರು ಜೊತೆಗೆ ಅಷ್ಟೇ ಬುದ್ಧಿವಂತರು. ಪಕ್ಕ ವ್ಯವಹಾರಸ್ಥರು. ಒಬ್ಬರ ಹತ್ತಿರ ವ್ಯವಹಾರ ಕೆಡಿಸಿಕೊಂಡರೆ ಇನ್ನೊಬ್ಬರನ್ನು ಹಿಡಿದು ಕೆಲಸ ಮಾಡಿಸಿಕೊಳ್ಳಬಲ್ಲ ಛಾತಿ ಇರುವವರು. ಇರುವ ಕಥೆಗಳನ್ನು ಜೋಡಿಸುವುದು, ಅದನ್ನು ಬದಲಾಯಿಸುವುದು, ಅದಕ್ಕೆ ಬೇರೆಯದೇ ಬಣ್ಣ ಕೊಡುವುದು ಹೀಗೆ ಎಲ್ಲದರಲ್ಲೂ ನಿಪುಣರು. ಮೇಕಿಂಗ್‌ನ ವಿಷಯಕ್ಕೆ ಬಂದಾಗಲೂ ಅಷ್ಟೇ. ಸಿಕ್ಕಪಟ್ಟೆ ಹುಡುಕಾಡುತ್ತಿದ್ದರು, ಆದರೆ ಸ್ವಲ್ಪ ಹಣದ ವ್ಯವಹಾರದಲ್ಲಿ ಜಿಗುಟು. ಅದಕ್ಕೆ ಅವರ ಹಿಂದಿನ ಅನುಭವವೂ ಕಾರಣವಿರಬಹುದು. ಆದರೆ ಅದು ಒಟ್ಟು ಸಿನಿಮಾದ ಮೇಲೆ ಪರಿಣಾಮ ಬೀರಿಬಿಡುತ್ತೆ ಎನ್ನುವುದು ನನ್ನ ಅನಿಸಿಕೆ. ಇವರು ಅಂತ ಅಲ್ಲ ಇಂಥಾ ಸಿನಿಮಾ ಮಾಡುವ ಎಲ್ಲರೂ ಹೀಗೆ ಯಾಕೆ ಯೋಚಿಸುತ್ತಾರೆ ಎನ್ನುವುದು ಗೊತ್ತು.

ಈ ಸಿನಿಮಾಗಳನ್ನು ನೋಡಲಿಕ್ಕೆ ಜನ ಬರಲ್ಲ. ಇದರಲ್ಲಿ ಎಂಟರ್‌ಟೈನ್‌ಮೆಂಟ್ ಇರಲ್ಲ. ಗೋಳನ್ನು ನೋಡಲಿಕ್ಕೆ, ತಲೆನೋವು ಬರಿಸಿಕೊಳ್ಳಲಿಕ್ಕೆ ನಾವು ಯಾಕೆ ಹೋಗಬೇಕು ಎನ್ನುವುದು ಅವರ ನಿಲುವು. ಆದರೆ ಒಂದು ಸಮಾಜದ ನೈಜಚಿತ್ರಣ, ಜನರ ನೋವು, ಅವರ ಪಡಿಪಾಟಲುಗಳನ್ನು ಹೇಳಲಿಕ್ಕೆ ಯಾರಾದರೂ ಮುಂದೆ ಬರಬೇಕಲ್ಲ. ಸರಕಾರದ ನಿಯಮಗಳಿಂದ ಅವಾರ್ಡುಗಳ ಆಮಿಷದಲ್ಲಿ ಈ ಬಗೆಯ ಸಿನಿಮಾಗಳು ನಿರ್ಬಂಧನೆಗಳನ್ನು ಸ್ವಯಂ ಆಗಿ ಹೇರಿಕೊಂಡು ಸೊರಗಿ ಹೋಗುತ್ತಿರುವುದೂ ನಿಜವೇ. ಎಷ್ಟೋ ಜನ ನಿರ್ಮಾಪಕರು ಅವಾರ್ಡ್ ಸಿನಿಮಾಗಳಿಗಾಗಿ ಹುಟ್ಟಿಕೊಂಡಿದ್ದಾರೆ. ಇದನ್ನು ಮಾಡಿ, ಹಾಕಿದ್ದ ದುಡ್ಡನ್ನು ತೆಗೆದುಕೊಳ್ಳುವುದು ಹೇಗೆಂದು ಅವರಿಗೆ ಗೊತ್ತಿರುತ್ತದೆ. ಇದನ್ನ ತಪ್ಪು ಎಂದೂ ಹೇಳಲಾರೆ. ಯಾಕೆಂದರೆ ಹಣ ಹಾಕಿದ ಮೇಲೆ ಅದು ಬಿಸನೆಸ್ಸೇ. ಆದರೆ ಕಲಾತ್ಮಕ ಸಿನಿಮಾಗಳಾದರೂ ಸಾಹಿತ್ಯದ ಹಾಗೆ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕಿತ್ತು.

ಬರಹಕ್ಕಿಂತ ದೃಶ್ಯ ಮಾಧ್ಯಮ ತುಂಬಾ ಶಕ್ತಿಶಾಲಿಯಾದದ್ದು. ಬೇರೆ ದೇಶಗಳ ಸಿನಿಮಾಗಳನ್ನು ನೋಡಿದಾಗ ಎಷ್ಟು ಅದ್ಭುತವಾಗಿದೆ, ನಮ್ಮವರಿಗೆ ಯಾಕೆ ಆಗಲ್ಲ? ಇಂಥಾ ವಿಷಯಗಳನ್ನು ಯಾಕೆ ಮುಟ್ಟಲ್ಲ? ಎನ್ನುವ ಎಲ್ಲಾ ಪ್ರಶ್ನೆಗಳು ಏಳುತ್ತವೆ. ಭಾರತದ ಸಿನಿಮಾಗಳ ಮೇಲೆ ಸರಕಾರದ ಪರೋಕ್ಷವಾದ ನಿರ್ಬಂಧಗಳು ಇರಬಾರದು. ಹಾಗಿದ್ದಾಗ ಮಾತ್ರ ನಿಜವಾದ ಸಮಸ್ಯೆ ಮತ್ತು ಅದಕ್ಕೆ ಪರಿಹಾರ ಸಿಗಬಹುದು.

ಮುಲ್ಕಿ ಊರೇ ತುಂಬಾ ವಿಚಿತ್ರವಾಗಿತ್ತು. ವಯಸ್ಸಾದವರು ಮಾತ್ರ ತಮ್ಮ ಮನೆ ಎನ್ನುವ ಅಭಿಮಾನಕ್ಕೋ, ತಮ್ಮ ಸಾವು ಈ ಮನೆಯಲ್ಲೇ ಆಗಬೇಕು ಎನ್ನುವ ಹಠಕ್ಕೋ ಬಿದ್ದಂತೆ ಬದುಕುತ್ತಿದ್ದರು. ಖಾಯಿಲೆ ಕಸಾಯಲೆ ಎಲ್ಲಕ್ಕೂ ಗಂಡ ಹೆಂಡತಿಯರೇ ಹೊಣೆ. ಅವರಲ್ಲಿ ಯಾರೊಬ್ಬರು ಇಲ್ಲವಾದರೂ ಅಕ್ಕಪಕ್ಕದ ಇಂಥದ್ದೇ ಮನೆಯವರು ಸಹಾಯ ಮಾಡಬೇಕು. ಅಪರೂಪಕ್ಕೆ ಎಲ್ಲೂ ಹೋಗಲಾರದ, ಹೆಚ್ಚು ಓದದ ಯುವಕರು ಸಂದರ್ಭಾನುಸಾರ ಇಂಥವರಿಗೆ ಸಹಾಯ ಮಾಡುತ್ತಾರೆ. ಅದೂ ದೂರದ ಊರುಗಳಲ್ಲಿ ಅಥವಾ ಅಮೆರಿಕಾದಲ್ಲಿರುವವರು ಕೊಂಚ ಧನ ಸಹಾಯ ಮಾಡಿದ್ದರೆ. ಎಷ್ಟೋ ಮನೆಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಹೋಗಿ, ಮನೆ ಪಾಳುಬಿದ್ದು ಮನೆಯ ಮಧ್ಯದಲ್ಲೆ ಗೋಣಿಮರಗಳು ಬೆಳೆದುಬಿಟ್ಟಿದ್ದವು.

ವಿಜಯಾ ಕಾಲೇಜಿನ ಹಿಂದಿನ ದೇವಸ್ಥಾನದ ಗುಡ್ಡದಲ್ಲಿ ನಿಂತು ನೋಡಿದರೆ ಇಡೀ ಊರು ಹಾಳು ಸುರುವುತ್ತಾ, ಇದೆಂಥಾ ಶಾಪಗ್ರಸ್ತ ಊರು ಅನ್ನಿಸುವಂತಿತ್ತು. ಇಂಥಾ ಊರಲ್ಲಿ ನಮಗೆ ಶೂಟಿಂಗ್‌ಗೆ ಯಾರು ಮನೆ ಕೊಡ್ತಾರೆ? ಎಂದುಕೊಳ್ಳುವಾಗಲೇ, ಅದಕ್ಕಾಗೇ ಮನೆಗಳಿವೆ ಎಂದು ಗೊತ್ತಾಗಿ ಹೋದೆವು. ಮನೆಗಳನ್ನು ಶೂಟಿಂಗ್‌ಗೋಸ್ಕರವೇ ಸಿದ್ಧ ಮಾಡಿದ್ದರು. ಅದಕ್ಕಾಗಿ ಒಂದಿಷ್ಟು ಹಣವನ್ನೂ ನಿಗದಿಪಡಿಸಿದ್ದರು. ಚಂದವಾಗಿದ್ದ ಆ ಮನೆಗಳಲ್ಲಿ ಮನುಷ್ಯರು ಬದುಕುವ ಕುರುಹುಗಳೇ ಇರಲಿಲ್ಲ. ಸಿನಿಮಾದಲ್ಲಿ ಲೈಫ್ ಕಾಣದಿದ್ದರೆ ಅಲ್ಲಿ ಶೂಟ್ ಮಾಡುವುದು ತುಂಬಾ ಕಷ್ಟ. ನಮಗೆ ಮುಖ್ಯ ಬೇಕಾಗಿದ್ದುದ್ದು ಚಿನ್ನ ಬೆಳ್ಳಿ ವ್ಯಾಪಾರಿಯಾಗಿದ್ದ ಶ್ರೀನಿವಾಸಾಚಾರಿಯ ಮನೆ. ಅದು ಎಷ್ಟು ಮನೆಗಳನ್ನು ನೋಡಿದರೂ ಸಿಗಲಿಲ್ಲ.

ಊರು ಸುತ್ತಿ ಕೇರಿ ತಿರುಗಿದರೂ ನಮಗೆ ಬೇಕಾದ ರೀತಿಯ ಮನೆ ಸಿಗಲೇ ಇಲ್ಲ. ಮಂಗಳೂರಿನಲ್ಲಿ ಯಶವಂತ ಕಾಮತರ ಮನೆಯನ್ನು ನೋಡಿದ್ದೆವು. ಹಿಂದೆ ಆ ಮನೆಯಲ್ಲಿ ಕಾಸರವಳ್ಳಿ ಸಾರ್ ‘ಹಸೀನಾ’ ಸಿನಿಮಾಗೆ ಶೂಟಿಂಗ್ ಮಾಡಿದ್ದರು. ಆ ನೆನಪಿನ ಆಧಾರದ ಮೇಲೆ ಹೋಗಿ ಅವರನ್ನು ಮಾತಾಡಿದ್ದೆವು. ಮನೆ ತುಂಬಾ ಚೆನ್ನಾಗಿತ್ತು. ‘ಇನ್ನೇನು ಮಾಡುವುದು? ಅವರು ಹೇಗಿದ್ದರೂ ಒಪ್ಪಿಗೆ ಕೊಟ್ಟಿದ್ದಾರೆ ಅಲ್ಲೇ ಮಾಡುವ’ ಎಂದು ಚರ್ಚೆ ಮಾಡುತ್ತಾ ಕಾರಲ್ಲಿ ಹೊರಟೆವು. ಕಿಟಕಿಯ ಪಕ್ಕದಲ್ಲಿ ಕೂತಿದ್ದ ನಾನು ‘ನಿಲ್ಲಿಸಿ’ ಎಂದೆ. ಅಗಾಧವಾಗಿದ್ದ ಆ ಮನೆ ನನ್ನ ಕಣ್ಣು ತುಂಬಿತ್ತು.         

ಕಾರನ್ನು ಗೇಟಿನ ಪಕ್ಕದಲ್ಲೇ ನಿಲ್ಲಿಸಿ ಒಳಹೋದೆವು. ಮನೆಯ ಮುಂಭಾಗದ ಗೇಟು ದಾಟಿದರೆ ಕಾಡಿನ ಥರದ ದಟ್ಟವಾದ ಮರಗಳು, ಪೊದೆಗಳು ಬೆಳೆದಿದ್ದ ಜಾಗ. ಸ್ವಲ್ಪ ಗುಡ್ಡ ಹತ್ತಿ ಹೋದರೆ ದೊಡ್ಡ ಮನೆ, ವಿಶಾಲವಾದ ಅಂಕಣ, ಮನೆಯ ಪ್ರವೇಶದಲ್ಲೇ ಬೆಂಚ್‌ಕೋರ್ಟ್- ‘ಹಿಂದೆಲ್ಲಾ ನ್ಯಾಯಪಂಚಾಯಿತಿ ಮಾಡುತ್ತಿದ್ದ ಜಾಗ. ಅದನ್ನ ಹೆಣ್ಣುಮಕ್ಕಳು ಪ್ರವೇಶಿಸುವ ಹಾಗಿರಲಿಲ್ಲ. ಆದ್ದರಿಂದ, ಅವರು ಅಲ್ಲಿ ನಡೆಯುವ ಕಲಾಪಗಳನ್ನು ಮನೆಯ ಪಕ್ಕದಲ್ಲೂ ಇಂಥಾದ್ದೇ ಇನ್ನೊಂದು ಸಣ್ಣ ಬೆಂಚ್‌ಕೋರ್ಟ್ನಲ್ಲಿ ಕೂತು ಕೇಳಿಸಿಕೊಳ್ಳಬಹುದಾಗಿತ್ತು. ತೀರ್ಪು ಕೊಡುವ ಯಜಮಾನ ಮಧ್ಯದಲ್ಲಿ ಖುರ್ಚಿ ಹಾಕಿಕೊಂಡು ಕೂಡುತ್ತಿದ್ದರು. ಸುತ್ತಾ ಜನ ಅವರಿಗೆ ದೂರವಾಗಿ ಈ ಗಾರೆಯ ಬೆಂಚಿನ ಮೇಲೆ ಕೂರುತ್ತಿದ್ದರು’ ಎಂದರು ಚಂದ್ರಹಾಸ್.

ಬಾಗಿಲನ್ನು ನಾಲ್ಕಾರು ಬಾರಿ ತಟ್ಟಿದ ಮೇಲೆ ಮನೆಯ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು, ‘ಏನು ಬೇಕು?’ ಎಂದು ಸನ್ನೆಯಲ್ಲೇ ಕೇಳಿದ. ಸುಮಾರು ಮೂವತ್ತರ ವಯಸ್ಸೇ ಇರಬೇಕು. ನೋಡಿದರೆ ಕೆಲಸದವನಿದ್ದ ಹಾಗಿದ್ದ. ‘ಓನರ್ ಇದ್ದಾರಾಪ್ಪಾ?’ ಎಂದೆವು. ‘ಹೊರಗೆ ಹೋಗಿದ್ದಾರೆ, ಏನು ವಿಷಯ?’ ಎಂದ. ಆತನಿಗೆ, ‘ಓನರ್ ಬರಲಿ ಕಾಯುತ್ತೇವೆ’ ಎಂದೆವು. ನಮ್ಮನ್ನೇ ಅನುಮಾನದಿಂದ ನೋಡುತ್ತಾ ಒಳಗೆ ಹೋದ. ಬೆಂಚ್‌ಕೋರ್ಟ್ನಲ್ಲಿ ಕಟ್ಟೆಗೆ ಕೂತು ಓನರ್‌ಗಾಗಿ ಕಾಯುವಾಗ, ಅವರು ಈ ಮನೆಯನ್ನು ಕೊಡಲು ಒಪ್ಪದಿದ್ದರೆ ಎನ್ನುವ ಭಯವೂ ಇತ್ತು. ಕೊಟ್ಟರೆ ಮಾತ್ರ ಆ ಮನೆ ಒಂದು ಪಾತ್ರವೇ ಆಗಿಬಿಡುತ್ತೆ ಎನ್ನುವಷ್ಟು ಆಕರ್ಷಣೆಯನ್ನು ಹುಟ್ಟಿಸುತ್ತಿತ್ತು.

ಮನೆಯ ಯಜಮಾನ, ಗೇಟಿನ ಮುಂದೆ ನಿಂತಿದ್ದ ನಮ್ಮ ಕಾರನ್ನು ಗಮನಿಸುತ್ತಲೇ ಗೇಟನ್ನು ತೆಗೆದು ಒಳಗೆ ಬಂದರು. ನಮ್ಮನ್ನು ನೋಡಿ ‘ಯಾರು ನೀವು?’ ಎಂದೆಲ್ಲಾ ಕೇಳಿದರು. ನಮ್ಮ ಉತ್ತರ ಅವರಿಗೆ ಅಚ್ಚರಿ ಹುಟ್ಟಿಸುವಂತಿತ್ತು. ‘ಸಿನಿಮಾಗೆ ಈ ಮನೆಯೇ?’ ಎಂದರು. ಅಪರಿಚಿತರಾಗಿದ್ದ ನಮ್ಮನ್ನು ನಂಬುವುದು ಹೇಗೆ? ನಾನು, ಚಂಚಲಾ ಜೊತೆಯಲ್ಲಿದ್ದುದ್ದರಿಂದ, ಹೆಣ್ಣುಮಕ್ಕಳಾದ ನಮ್ಮನ್ನು ನಂಬಬಹುದು ಅನ್ನಿಸಿತೇನೋ… ಅವರ ಹೆಸರು ಬೋಳಾ ರಂಗನಾಥರಾವ್. ಸಾದಾ ಸೀದಾ ಮನುಷ್ಯ. ‘ಮನೆ ನೋಡಬಹುದೇ?’ ಎನ್ನುವ ನಮ್ಮ ಪ್ರಶ್ನೆಗೆ ‘ಬನ್ನಿ’ ಎಂದು ಒಳಗೆ ಕರೆದೊಯ್ದರು. 

ಮನೆಯ ಒಳಗೆ ಎಲ್ಲವೂ ವಿಶಾಲ. ವರಾಂಡಾದ ತುಂಬಾ ಗೋಡೆಗೆ ಪೂರ್ವಜರ ಫೋಟೋಗಳು. ದೈವ ಭಕ್ತರು ಎನ್ನುವುದಕ್ಕೆ ದೇವರ ಫೋಟೋಗಳೂ ರಾರಾಜಿಸುತ್ತಿದ್ದವು. ಅಕ್ಕ ಪಕ್ಕದಲ್ಲಿ ಎರಡು ಕೋಣೆಗಳು. ಅದರ ಮೇಲೆ ಬೋಳಾ ಮನೆತನದ ಅಣ್ಣ ತಮ್ಮಂದಿರ ಹೆಸರುಗಳು ಇದ್ದವು. ‘ಇದ್ಯಾಕೆ ಹೀಗೆ ಬೋರ್ಡ್ ಬರೆದಿದ್ದಾರೆ?’ ಎಂದದ್ದಕ್ಕೆ, ‘ಅದು ಅವರವರ ಕೋಣೆ’ ಎಂದಿದ್ದರು ಸಹಜವಾಗಿ. ವರಾಂಡಾದಲ್ಲಿರುವಾಗಲೇ ‘ಯಾರೂ?’ ಎನ್ನುವ ಹೆಣ್ಣು ಧ್ವನಿ ಕೇಳಿತು. ‘ಒಂದು ನಿಮಿಷ’ ಎಂದು ಒಳಗೋಗಿ ಎಲ್ಲವನ್ನೂ ವಿವರಿಸಿ ಮತ್ತೆ ಹೊರಗೆ ಬಂದು ‘ಬನ್ನಿ’ ಎಂದರು.

ವರಾಂಡ ದಾಟಿ ಒಳಹೋದರೆ ವಿಶಾಲವಾದ ಹಾಲ್. ಸುತ್ತಾ ಮತ್ತೆ ರೂಂಗಳು ಹೆಸರಿನ ಬೋರ್ಡ್ ಹಾಕಿಕೊಂಡಿದ್ದವು. ಎರಡು ಕೋಣೆಗಳ ಮಧ್ಯದಲ್ಲಿ ಗೋಡೆಗೆ ಆತುಕೊಂಡಂತೆ ಒಂದು ಹಳೆಯ ಕಾಲದ ಮಂಚ. ಅದರಲ್ಲಿ ಅತ್ಯಂತ ಲಕ್ಷಣವಾಗಿದ್ದ ವಯಸ್ಸಾದ ಮನೆಯ ಯಜಮಾನತಿ ಕುಳಿತಿದ್ದರು. ಅವರ ಹೆಸರು ಪ್ರೇಮಾ. ಸ್ಥೂಲದೇಹಿ, ಬಿಳಿದಾದ ಕೂದಲ ನಡುವೆ ಹಣಕುವ ಕಪ್ಪು ಕೂದಲು, ಹಣೆಯ ದೊಡ್ಡ ಕುಂಕುಮ, ಕಾಟನ್ ಸೀರೆ, ಅದಕ್ಕೆ ತಕ್ಕಂತ ಬ್ಲೌಸ್… ಎಲ್ಲವೂ ಅಚ್ಚುಕಟ್ಟು. ನಾವು ಅವರಿಗೆ ಕೈ ಮುಗಿದೆವು. ಅವರೂ ಪ್ರತಿ ನಮಸ್ಕಾರ ಮಾಡಿದರು. ಅತ್ಯಂತ ಸುಶಿಕ್ಷಿತರು ಎನ್ನುವುದು ಅವರ ಮಾತುಗಳಿಂದ ತಿಳಿಯುತ್ತಿತ್ತು.

ಹಿಂದಿ, ಇಂಗ್ಲಿಷ್‌ಗಳಲ್ಲಿ ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದ ಆಕೆಯ ತಂದೆ ಬಾಂಬೆಯವರು. ಅಲ್ಲಿ ಅವರು ದೊಡ್ದ ಉದ್ಯೋಗದಲ್ಲಿದ್ದವರು. ಸಂಬಂಧ ಎಂದು ಬೋಳಾ ಮನೆತನಕ್ಕೆ ಹೆಣ್ಣನ್ನು ಕೊಟ್ಟಿದ್ದರು. ನಿರಂತರವಾದ ಅವರ ಒಡನಾಟದಲ್ಲಿ, ತವರಿಂದ ತಂದಿದ್ದ ರಾಸುಗಳ ಬಗ್ಗೆ, ವಡವೆಗಳ ಬಗ್ಗೆ, ತಂದೆಯ ಘನತೆಯ ಬಗ್ಗೆ, ಬಾಂಬೆಯಲ್ಲೇ ಉಳಿದಿರುವ ಅಣ್ಣತಮ್ಮಂದಿರ ಬಗ್ಗೆ ಮಕ್ಕಳ ಅಮೆರಿಕಾ ವಾಸದ ಬಗ್ಗೆ ಅವರು ಅತ್ಯಂತ ಅಭಿಮಾನಪೂರ್ವಕವಾಗಿ ಮಾತಾಡಿದ್ದರು.

ಈಚೆಗೆ ಅವರಿಗೆ ಆರೋಗ್ಯದ ಸಮಸ್ಯೆಯಾಗಿ ನಡೆದಾಡುವುದು ಕಷ್ಟಕರವಾಗಿತ್ತು. ಅವರು ಕೂರುತ್ತಿದ್ದ ಜಾಗದ ಎದುರು, ಹಾಲ್‌ನ ಮಧ್ಯಭಾಗದಲ್ಲಿ ದೊಡ್ಡದಾದ ದೇವರ ಕೋಣೆಯೊಂದಿತ್ತು. ಆಗತಾನೆ ಪೂಜೆ ಮಾಡಿದ್ದ ಕುರುಹಾಗಿ ಊದಿನಕಡ್ಡಿ, ಕರ್ಪೂರದ ವಾಸನೆ ಮೂಗಿಗೆ ತಾಕುತ್ತಿತ್ತು. ದೀಪಗಳು ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿದ್ದು ಹಾಲ್‌ನಲ್ಲಿ ಲೈಟ್ ಹಾಕದಿದ್ದರೂ ಬೆಳಕನ್ನು ತುಂಬುತ್ತಿತ್ತು. ಅದಕ್ಕೆ ಆತುಕೊಂಡಂತೆ ಅಡುಗೆ ಮನೆ. ಅದು ಐವತ್ತು ಜನ ಒಟ್ಟಿಗೆ ಊಟ ಮಾಡುವಷ್ಟು ವಿಶಾಲ, ಅಲ್ಲೊಂದು ಪುರಾತನ ಕಾಲದ ದಂತದ ಕೆತ್ತನೆಗಳಿದ್ದ ಟೀಕ್‌ವುಡ್‌ನ ಡೈನಿಂಗ್ ಟೇಬಲ್. ಪಕ್ಕದಲ್ಲಿದ್ದ ಗೂಡುಗಳು ಹಾಗೂ ಎದುರಿದ್ದ ಒಲೆಯಮೇಲಿನ ಜಾಗದಲ್ಲಿ ದೊಡ್ದ ದೊಡ್ಡ ಹಿತ್ತಾಳೆ ಪಾತ್ರೆಗಳನ್ನು ಜೋಡಿಸಿಡಲಾಗಿತ್ತು. ಮೂಲೆಯಲ್ಲಿ ಒಂದು ರಾಶಿ ಸ್ಟೀಲ್ ಪಾತ್ರೆಗಳು ಇದ್ದವು. ಮನೆಯೇ ಒಂದು ಭಾಗವಾದರೆ ಅಡುಗೆ ಮನೆ ಮತ್ತೊಂದು ಭಾಗ ಎನ್ನುವಂತಿತ್ತು. ರಂಗನಾಥರಾವ್ ನಮ್ಮ ಅಚ್ಚರಿಯನ್ನು ಗಮನಿಸಿ ‘ಮನೆಯವರೆಲ್ಲಾ ಸೇರಿದರೆ ಈ ಅಡುಗೆ ಮನೆ ಯಾವುದಕ್ಕೂ ಸಾಲದು, ಅಷ್ಟು ಜನ ಇದ್ದೇವೆ’ ಎಂದರು. ಅಲ್ಲಿಂದ ಹಿತ್ತಲಿಗೆ ಹೋಗಲಿಕ್ಕೆ ದಾರಿಯಿತ್ತು. ಅಲ್ಲಿ ಕೂಡಾ ಒಂದು ಪ್ಯಾಸೇಜ್ ಆದಮೇಲೆ ಮೆಟ್ಟಿಲು ಅದಕ್ಕೆ ಮಳೆ ಬೀಳದಹಾಗೆ ಹಂಚುಗಳನ್ನು ಹೊದಿಸಿದ ಹೊರಚಾಚು. ಇಡೀ ಮನೆ ಕಣ್ಣಿಗೆ ಮನಸ್ಸಿಗೆ ಹಾಯೆನ್ನಿಸುವ ಹಾಗಿತ್ತು.

ಹಾಲಿನಲ್ಲಿ ಒಂದು ತುದಿಯಲ್ಲಿ ಗೋಡೆಗೆ ಆತುಕೊಂಡಂತಿದ್ದ ಮರದ ಮಹಡಿಯ ಮೆಟ್ಟಿಲುಗಳು ಮೇಲಿನ ಕೋಣೆಗಳಿಗೆ ಹೋಗುತ್ತಿತ್ತು. ಮೇಲೆ ಹೋದರೆ ಒಂದು ಪ್ಯಾಸೇಜ್ ಗಾಳಿ ಬೆಳಕಿಗೆ ಅನುಕೂಲವಾಗುವ ಹಾಗೆ ಸಾಲು ಕಿಟಕಿಗಳು. ಅದಕ್ಕೆ ಹಾಕಿದ್ದ ಗಾಜುಗಳು ಜರ್ಮನ್‌ದು, ಎರಡು ಬಣ್ಣಗಳಲ್ಲಿದ್ದ ಕಿಟಕಿಯ ಗಾಜುಗಳು ಅಲ್ಲಲ್ಲಿ ಒಡೆದಿತ್ತು. ‘ಈ ಗಾಜುಗಳು ಸಿಗುವುದಿಲ್ಲ ಅದಕ್ಕೆ ಹಾಗೇ ಬಿಟ್ಟಿದ್ದೇವೆ’ ಎಂದರು ಹೆಮ್ಮೆಯಿಂದ ರಂಗನಾಥರಾವ್. ಮತ್ತಲ್ಲಿ ಗೋಡೆಗಳಿಗೆ ದೇವರ ಪಟಗಳು ಹಾಲಿನ ನೋಟ ಕಾಣುವಂತೆ ಅಟ್ಟಣಿಕೆ. ಮತ್ತಷ್ಟು ಕೋಣೆಗಳು. ಮಾಮೂಲಿ ಮನೆಗಳಿಗಿಂತ ಹತ್ತುಪಟ್ಟು ದೊಡ್ಡದು ಇಷ್ಟು ದೊಡ್ಡ ಮನೆಗೆ ಇಬ್ಬರೇ ಹೇಗಿರುತ್ತಾರೆ ಅನ್ನಿಸಿಬಿಟ್ಟಿತ್ತು.

ಅಂತೂ ನಮಗೆ ಮನೆ ಶೂಟಿಂಗ್‌ಗೆ ಕೊಡುವುದಾಗಿ ಒಪ್ಪಿಗೆಯ ಜೊತೆಗೆ ಕಾಫಿ ಬಿಸ್ಕೆಟ್ ಕೂಡಾ. ‘ಎಷ್ಟು ದಿನ ಮಾಡ್ತೀರ? ಏನು’ ಎಂದೆಲ್ಲಾ ಕೇಳಿಕೊಂಡರು. ಸ್ಥಿತಿವಂತರಾದ ಅವರಿಗೆ ಹಣದ ಅವಶ್ಯಕತೆ ಇರಲಿಲ್ಲ. ಅದರ ಬಗ್ಗೆ ಅವರು ಏನನ್ನೂ ಕೇಳಲಿಲ್ಲ ಕೂಡಾ. ಆದರೆ ಏನು ಮಾಡಬಹುದು ಇವರು ಎನ್ನುವ ಕುತೂಹಲ ಮಾತ್ರ ಇತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: