ಜಿ ಎನ್ ನಾಗರಾಜ್
ಪಾಳೆಯಗಾರಿ ಸಮಾಜ ಮತ್ತು ಮೌಲ್ಯಗಳನ್ನು ದೇವ, ದೇವಿಯರನ್ನು ಅವರ ಜಾತ್ರೆಗಳನ್ನು ಗೌಡ, ಕುಲಕರ್ಣಿಗಳನ್ನು ಅವರ ನ್ಯಾಯ, ಪಂಚಾಯ್ತಿಗಳ ಲೋಕವನ್ನು ಮೆಚ್ಚುವ ಕಂಬಾರರು ಆಧುನಿಕ ಪ್ರಪಂಚದ ಶಾಲೆ, ಪಂಚಾಯ್ತಿ ಪತ್ರಿಕೆಗಳನ್ನು ವಿಡಂಬನೆಗೆ ಗುರಿ ಮಾಡಿದರು. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಇವುಗಳನ್ನು ಟೀಕೆ ಮಾಡುವ ಭೂ ಸುಧಾರಣೆಯ ವಿರೋಧಿಗಳಾದ ಇವರು ಪರಂಪರೆಯ ಆರಾಧಕರು, ಪ್ರತಿಗಾಮಿ ಮನೋಭಾವದವರು ಎಂದು ಟೀಕಿಸಬೇಕೆನ್ನು ವಷ್ಟರಲ್ಲಿಯೇ ಜೋಕುಮಾರಸ್ವಾಮಿ ನಾಟಕ, ಸಂಗೀತ ಸಿನಿಮಾ, ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಗಳ ಮೂಲಕ ಪಾಳೆಯಗಾರಿ ಸಂಸ್ಕೃತಿಯ ಅವನತಿಯ ಮುಖಗಳನ್ನು ಕ್ರೌರ್ಯವನ್ನು ಬಿಚ್ಚಿಟ್ಟರು.
ಕನ್ನಡ ಸಾಹಿತ್ಯಕ್ಕೆ ಎಂಟನೆಯ ಪ್ರಶಸ್ತಿಯಾಗಿ ಡಾ|| ಚಂದ್ರಶೇಖರ ಕಂಬಾರರಿಗೆ 2010ರ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಸಾಹಿತ್ಯಾಸಕ್ತರು ಸಾಮಾನ್ಯ ಜನರು ಹೆಮ್ಮೆಪಡುತ್ತಿದ್ದಾರೆ. ತಮ್ಮ ಸಾಹಿತ್ಯ ಪ್ರತಿಭೆ ಮತ್ತು ಕೌಶಲ್ಯಕ್ಕಾಗಿ ಈ ಪ್ರಶಸ್ತಿ ಪಡೆದ ಕಂಬಾರರಿಗೆ ಅಭಿನಂದನೆಗಳು. ಡಾ|| ಕಂಬಾರರು ಕನ್ನಡ ಸಾಹಿತ್ಯದಲ್ಲಿಯೇ ವಿಶಿಷ್ಠ, ವಿಭಿನ್ನ ಸಾಹಿತಿ. ಜನರಿಂದ ದೂರವಾಗಿ ಶ್ರೇಷ್ಠರಿಗಾಗಿ ಶ್ರೇಷ್ಠರು(?) ಏಕಾಂತದಲ್ಲಿ ಬರೆಯುವ ನವ ಸಾಹಿತಿಗಳ ವೃಂದದಲ್ಲಿ ಮಾದಕ ಸಂಗೀತಕ್ಕೊಗ್ಗುವ ಹಾಡುಗಳನ್ನು ಬರೆದು ಜನಪ್ರಿಯರಾದವರು. ಕವನ, ಕಾವ್ಯ, ನಾಟಕ, ಕಾದಂಬರಿ, ಸಿನಿಮಾ, ನಿರ್ದೇಶನ ಸಂಗೀತ ನಿರ್ದೇಶನ ಮೊದಲಾದ ವೈವಿಧ್ಯಮಯ ಸೃಜನಶೀಲ ಚಟುವಟಿಕೆಗಳಲ್ಲಿ ಯಶಸ್ಸು ಪಡೆದ ಕೆಲವೇ ಅಪರೂಪದ ಸಾಹಿತಿಗಳಲ್ಲೊಬ್ಬರು.
ಜಾನಪದ ಸಾಹಿತ್ಯದ ಲಯ, ಗೇಯತೆ, ಪುರಾಣಗಳನ್ನು ಬಳಸಿ ಆಧುನಿಕ ಪ್ರಪಂಚದ ಸಂಘರ್ಷಗಳನ್ನು ಚಿತ್ರಿಸಿದ ಈ ದೃಷ್ಟಿಯಿಂದಲೂ ವಿಶಿಷ್ಠರಾದವರು. ಕನ್ನಡ ಸಾಹಿತಿಗಳನೇಕರು ಆ ಕಾರಣಕ್ಕಾಗಿಯೇ ಕಂಬಾರರು ಹಿಂದುಳಿದ, ಕೆಳವರ್ಗದ ಪರ ಎಂದು ಹಿಗ್ಗುತ್ತಿದ್ದಾರೆ.
“ಹೇಳತೇನ ಕೇಳ ಗೆಳೆಯ ನಿನಮುಂದ ಕತಿಯೊಂದ
ನನಮುಂದ ಕೂಂಡ್ರ ಹಿಂಗ ತೆರೆದ ಮನಾ” ಎಂದು ಅವರು ಸಾಹಿತ್ಯಕ್ಕೆ ಹೆಜ್ಜೆಯಿರಿಸಿದ ದಿನದಿಂದ ಹೇಳುತ್ತಲೇ ಇದ್ದಾರೆ, ಹಾಡುತ್ತಲೇ ಇದ್ದಾರೆ.
`ಏನ ಹೇಳಲೆವ್ವಾ ಭಾರತಿ,
ಜಗದೊಳಗೆಲ್ಲಾ ಹಬ್ಬೇತವ್ವಾ ನಿನ್ನ ಕೀರುತಿ’ ಎನ್ನುತ್ತಲೇ ಭಾರತದ ಆಧುನಿಕ ರಾಜಕೀಯ ವನ್ನು ಟೀಕೆಗೆ ಗುರಿ ಮಾಡಿದ ಕಂಬಾರರ ವ್ಯಂಗ್ಯದ ಚಾಟಿ ಬಹಳ ಹರಿತವಾದದ್ದು.
ಪಾಳೆಯಗಾರಿ ಸಮಾಜ ಮತ್ತು ಮೌಲ್ಯಗಳನ್ನು ದೇವ, ದೇವಿಯರನ್ನು ಅವರ ಜಾತ್ರೆಗಳನ್ನು ಗೌಡ, ಕುಲಕರ್ಣಿಗಳನ್ನು ಅವರ ನ್ಯಾಯ, ಪಂಚಾಯ್ತಿಗಳ ಲೋಕವನ್ನು ಮೆಚ್ಚುವ ಕಂಬಾರರು ಆಧುನಿಕ ಪ್ರಪಂಚದ ಶಾಲೆ, ಪಂಚಾಯ್ತಿ ಪತ್ರಿಕೆಗಳನ್ನು ವಿಡಂಬನೆಗೆ ಗುರಿ ಮಾಡಿದರು. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಇವುಗಳನ್ನು ಟೀಕೆ ಮಾಡುವ ಭೂ ಸುಧಾರಣೆಯ ವಿರೋಧಿಗಳಾದ ಇವರು ಪರಂಪರೆಯ ಆರಾಧಕರು, ಪ್ರತಿಗಾಮಿ ಮನೋಭಾವದವರು ಎಂದು ಟೀಕಿಸಬೇಕೆನ್ನು ವಷ್ಟರಲ್ಲಿಯೇ ಜೋಕುಮಾರಸ್ವಾಮಿ ನಾಟಕ, ಸಂಗೀತ ಸಿನಿಮಾ, ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಗಳ ಮೂಲಕ ಪಾಳೆಯಗಾರಿ ಸಂಸ್ಕೃತಿಯ ಅವನತಿಯ ಮುಖಗಳನ್ನು ಕ್ರೌರ್ಯವನ್ನು ಬಿಚ್ಚಿಟ್ಟರು. ಹೀಗೆ ಅವರ ಅನೇಕ ಕೃತಿಗಳ ಓದು ಪಾಳೆಯಗಾರಿ ಸಮಾಜದ ರಚನೆ, ಕ್ರಿಯೆ, ಸಂಸ್ಕೃತಿ, ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಸಾಧನ. ಕರ್ನಾಟಕದ ಯಾವ ಇತಿಹಾಸಕಾರರೂ, ಸಮಾಜ ವಿಜ್ಞಾನಿಗಳೂ ಕೂಡ ವಿವರಿಸದ ಒಳನೋಟಗಳು ಕಂಬಾರರ ಕೃತಿಗಳಲ್ಲಿವೆ. ಈಗಿನ ಗದಗ ಜಿಲ್ಲೆಯ ನರಗುಂದದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಲ್ಲಿನ ಪಾಳೇಗಾರಿ ಸಮಾಜದ ವಾಸ್ತವವನ್ನು ಅರ್ಥೈಸಿಕೊಳ್ಳಲು ಕಂಬಾರರ ಕೃತಿಗಳು ಬಹುವಾಗಿ ಸಹಾಯಕವಾದುವು. ಪಾಳೆಯಗಾರಿ ಸಮಾಜದ ಅಡಿಪಾಯವೇ ಭೂಮಿಯ ಒಡೆತನ. ಭೂ ಸುಧಾರಣೆ ಈ ಅಡಿಪಾಯವನ್ನು ಅಲುಗಾಡಿಸಿ ಪಾಳೆಯಗಾರಿ ಸಮಾಜದ ಧಣಿಗಳನ್ನು ಹೊಸಕಿ ಹಾಕುತ್ತದೆ. ಪ್ರಜಾಪ್ರಭುತ್ವ ಕಾನೂನಿನ ಆಡಳಿತ ಈ ವ್ಯವಸ್ಥೆಯನ್ನು ಹಾಸ್ಯಾಸ್ಪದ ಪುರಾತನ ಅವಶೇಷಗಳನ್ನಾಗಿಸುತ್ತದೆ ಎಂಬುದನ್ನು ಚೆನ್ನಾಗಿ ಅರಿತ ಕಂಬಾರರು ತಮ್ಮ ಕೃತಿಗಳಲ್ಲಿ ಈ ಸಂಬಂಧಗಳನ್ನು ಸಶಕ್ತವಾಗಿ ಬಣ್ಣಿಸಿದ್ದಾರೆ. “ಜೋಕುಮಾರಸ್ವಾಮಿ” ನಾಟಕದ ನಾಯಕ ಷಂಡತನಕ್ಕೆ ತುತ್ತಾದ ಭೂ ಒಡೆಯ, ಅವನ ಹೆಂಡತಿ ಗೇಣಿದಾರ ಬಸಣ್ಣನ ಸಂಗ ಮಾಡುವ ಪರಿಸ್ಥಿತಿಗೆ ತುತ್ತಾಗುತ್ತಾಳೆ ಎನ್ನುವಂತೆ ವರ್ಣಿಸಿದ್ದಾರೆ.
ಪಾಳೆಯಗಾರಿ ಭೂ ಸಂಬಂಧ ಗಳಿಗೂ, ಕ್ರಾಂತಿಕಾರಿ ಪ್ರಕ್ರಿಯೆಗೂ ಇರುವ ಅಂತರ್ಸಬಂಧವೂ ಅವರಿಗೆ ಅರಿವಾಗಿದೆ. ಜೈಸಿದ ನಾಯಕ ಇಂತಹ ಅರಿವಿನ ಹಿಮ್ಮುಖದ ಚಲನೆಯ ಫಲ. ಕಂಬಾರರಿಗೆ ಪಾಳೆಯಗಾರಿ ಸಂಬಂಧಗಳು ಉಳಿಯಬೇಕು, ಆ ಸಂಸ್ಕೃತಿ ಬಾಳಬೇಕು ಅದಕ್ಕಾಗಿ ಪಾಳೆಯಗಾರಿಯ ವಿರುದ್ಧ ಹೋರಾಟದಲ್ಲಿ ಒಡಕು ತಂದು ಅದು ಸೋಲುವಂತೆ ಮಾಡುತ್ತಾರೆ.
ಮಾವೋತ್ಸೆ ತುಂಗರ ಬಗ್ಗೆ ಕಂಬಾರರ ದ್ವೇಷ-ಪ್ರೇಮದ ಸಂಬಂಧವೂ ಪಾಳೆಯಗಾರಿ ಸಮಾಜ ಮತ್ತು ಅದರ ವಿರುದ್ಧದ ಕ್ರಾಂತಿಕಾರಿ ಪ್ರಕ್ರಿಯೆಗಳ ಬಗೆಗಿನ ಆಳವಾದ ಅರಿವಿನಫಲ.
`ಮರತೇನೆಂದರ ಮರೆಯಲಿ ಹ್ಯಾಂಗ ಮಾವೋತ್ಸೆತುಂಗ
ಕಣ್ಣೀರಿನ ಹೊಳೆಗಡ್ಡಗಟ್ಟಿದಿ
ಹರಿವ ನೆತ್ತರಕ ಒಡ್ಡಕಟ್ಟಿದೆ’
ಹಹ್ಹಾ `ಬೆಂಕಿಯಾರಿ ಬರಿ ಬೆಳಕುಳಿದಿತ್ತೊ’ ಎಂದು ಅವರ ನಿಧನದ ಬಗ್ಗೆ ಸಂತಾಪಪಡುವ ಕಂಬಾರರೇ
ಮನಷೇರ ಮುರದಿ
ತೇರ ಕಟ್ಟಿದಿ
ಹತ್ತವತಾರದ ಕುದುರಿಯ ಜೋಡಿ
ಹತ್ತಕುದರಿಯ ಹಳದಿದೇವರೋ
ಸ್ವಯಂ ಸೂರ್ಯ ನಾ ಬಂದೇನೆಂದ್ಯೋ ಎಂದು
ಗ್ಲೊಬಿನರ್ಧಕ ಸಾಯೋದ ಕಲಿಸಿ
ಸ್ವಥಾ ಸಾಯೋದಿಕೆ ಬಾರದೆ ಹೋದಿ
ಎಂದೂ ಅಪವಾದ ಹೊರಿಸುತ್ತಾರೆ. ಆ ಮೂಲಕ ಮಾರ್ಕ್ಸ್ ವಾದದ ಬಗ್ಗೆ ಬಂಡವಾಳ ಶಾಹಿ ಪತ್ರಿಕೆಗಳ ಕುತ್ಸಿತ ಟೀಕೆಗಳನ್ನು ಕಾವ್ಯವಾಗಿಸುತ್ತಾರೆ.
ಕಂಬಾರರ ಸಾಹಿತ್ಯದ ಈ ವೈರುಧ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ಲಂಕೇಶರು ಮಾರ್ಕ್ಸ್ ಮತ್ತು ಏಂಗೆಲ್ಸ್ರವರು ಬಾಲ್ಜಾಕ್ ಎಂಬ ಫ್ರೆಂಚ್ ಸಾಹಿತಿಯ ಬಗ್ಗೆ ವ್ಯಕ್ತಪಡಿಸಿದ ಮೆಚ್ಚುಗೆಯನ್ನು ಉಲ್ಲೇಖಿಸುತ್ತಾರೆ. ಬಂಡವಾಳಶಾಹಿ ಸಮಾಜವನ್ನು ಅಪಾರವಾಗಿ ಪ್ರೀತಿಸುವ ಬಾಲ್ಜಾಕ್ ಆ ಪ್ರೀತಿಯ ಕಾರಣವಾಗಿಯೇ ಅದರ ಒಳಸುಳಿಗಳನ್ನು, ಅದರ ಅವನತಿಯನ್ನು ಹತ್ತಿರದಿಂದಲೇ ಅಧ್ಯಯನ ಮಾಡುತ್ತಾರೆ. ಹೀಗಾಗಿ ಅವರ ವೈಯಕ್ತಿಕ ಇಷ್ಟಾ ನಿಷ್ಟಗಳೇನೇ ಇರಲಿ ಅದನ್ನು ಚಿತ್ರಿಸುತ್ತಾರೆ ಎಂಬ ಎಂಗೆಲ್ಸ್ ಅವರ ವಿಶ್ಲೇಷಣೆ ಕಂಬಾರರ ವಿಷಯದಲ್ಲಿಯೂ ಅನ್ವಯವಾಗುತ್ತದೆ ಎನ್ನುತ್ತಾರೆ ಲಂಕೇಶರು.
ಕಂಬಾರರ `ಸಿಂಗಾರೆವ್ವ ಮತ್ತು ಅರಮನೆ’ ಮತ್ತು `ಸಂಗೀತಾ’ ಚಲನಚಿತ್ರ (ನಾಟಕವಾಗಿ ನಾಯಿಕಥೆ) ಈ ಮಾತು ಎಷ್ಟು ಸತ್ಯ ಎಂಬುದನ್ನು ಸಮರ್ಥಿಸುವಂತಿದೆ. ಪಾಳೆಯಗಾರಿ ಸಮಾಜದ ಕ್ರೌರ್ಯವನ್ನು ಆಸ್ತಿ, ವಿವಾಹ ಮತ್ತು ಮಹಿಳೆಯರ ನಡುವಣ ಸಂಬಂಧವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದೆ.
ಹೀಗೆ ಕಂಬಾರರ ಪಾಳೆಯಗಾರಿ ಸಂಸ್ಕೃತಿಯ ಆರಾಧನೆಯನ್ನು ಗುರುತಿಸುತ್ತಲೇ ಅವರು ಆ ಸಮಾಜದ ರಚನೆಯ ಬಗ್ಗೆ ನೀಡುವ ವಿವರಗಳು ಪ್ರಗತಿಪರ ಚಳುವಳಿಗೆ ಅನೇಕ ಒಳನೋಟಗಳನ್ನು ನೀಡಬಲ್ಲವು. ಅವರ ಕೃತಿಗಳ ಓದುಗರ ಅರಿವನ್ನು ಹೆಚ್ಚಿಸಬಲ್ಲವು. ಅವರ ಕಾವ್ಯದ ಗೇಯತೆ, ಲಯಕ್ಕೆ ತಲೆದೂಗಿ ಆನಂದಿಸುವಾಗಲೇ ಮೈ ಮರೆತು ಪಾಳೆಯಗಾರಿ ಮೌಲ್ಯಗಳಿಗೆ ಬಲಿಬೀಳದಂತೆ ಎಚ್ಚರ ವಹಿಸಬೇಕಾಗಿದೆ.
ಲಂಕೇಶರು ಮೊಗಳ್ಳಿ ಗಣೇಶರು ಕಂಬಾರರ ಸಾಹಿತ್ಯದ ಬಗೆಗಿನ ಪ್ರೀತಿಯಿಂದಲೇ ತೊಡಗುವ ನಿಷ್ಠುರ ವಿಮರ್ಶೆಯ ಎಚ್ಚರವನ್ನು ಕನ್ನಡ ವಿಮರ್ಶನ ಲೋಕ ಬಹಳವಾಗಿ ತೋರಿಸುವುದಿಲ್ಲ. ಮತ್ತೊಂದು ಬಹಳ ಮುಖ್ಯವಾದ ವಿಷಯವೆಂದರೆ ಕಂಬಾರರು ಪ್ರಜ್ಞಾಪೂರ್ವಕ ನೆಲೆಯಲ್ಲಿ ಪಾಳೆಯಗಾರಿ ಸಂಸ್ಕೃತಿಯನ್ನು ಮೆಚ್ಚುವವರಾಗಿ ಇಂದಿನ ನವ್ಯೋತ್ತರ ನೆಲೆಯಲ್ಲಿ (ಕಠಣ ಒಠಜಜಡಿಟಿಟ) ದೇಸಿವಾದದ ಸೃಷ್ಠಿಕರ್ತ ರಾಗಿದ್ದಾರೆ. ವಿಜ್ಞಾನ ತಂತ್ರಜ್ಞಾನಗಳ ಬಗ್ಗೆ ಅನೇಕ ಸಾಹಿತಿಗಳಿಗಿರುವ ಅಜ್ಞಾನ, ಭಯ ಆತಂಕಗಳನ್ನು ಅವುಗಳ ವಿರೋಧವನ್ನಾಗಿ ಪರಿವರ್ತಿಸಿ ಸಾಹಿತ್ಯದ ಭಾಗವಾಗಿಸಿದ್ದಾರೆ. ಅವರ ಬಹು ಚರ್ಚಿತ ಕಾವ್ಯ `ಚಕೋರಿ’ ಹಾಗೂ `ಸೂರ್ಯ ಶಿಕಾರಿ’ ಇಂತಹ ಭಯ ಮೂಲದಿಂದ ಹುಟ್ಟಿದ ಕೃತಿಗಳು.
ಇಂತಹ ಸಂದರ್ಭದಲ್ಲಿ ಕಂಬಾರರಿಗೆ ಜ್ಞಾನಪೀಠ ಎನ್ನುವುದು ಅವರ ಕೃತಿಗಳಿಗೆ ಓದುಗರನ್ನು ಹೆಚ್ಚಿಸುವುದರಿಂದ ಪಾಳೆಯಗಾರಿ ಸಮಾಜದ ಅರಿವನ್ನು ಹೆಚ್ಚಿಸುವುದರ ಜೊತೆಗೇ ಪ್ರತಿಗಾಮಿಯಾದ ಪೋಸ್ಟ್ ಮಾಡರ್ನಿಸಂ ವಿಚಾರಗಳನ್ನು ಬೆಳೆಸುವುದಕ್ಕೂ ಸಹಾಯಕವಾಗುತ್ತದೆ. ಅದರಲ್ಲಿಯೂ ಜ್ಞಾನಪೀಠದ ಪ್ರಶಸ್ತಿ ವಿಜೇತರನ್ನು ಅವರಿಗೆ ಚೆನ್ನಾಗಿ ಅರಿವಿರುವ ವಿಷಯಗಳ ಬಗ್ಗೆ ಪ್ರತಿಕ್ರಿಯೆ ಬಯಸುವ ನಮ್ಮ ಮಾಧ್ಯಮ ಪತ್ರಿಕೆಗಳು ಅವರಿಗೆ ಏನೂ ಅರಿವಿರದ ವಿಷಯಗಳ ಬಗ್ಗೆಯೂ ಪ್ರತಿಕ್ರಿಯೆ ಪಡೆದು ಪ್ರಕಟಿಸುವ ಅಪಾಯವನ್ನು ನೋಡುತ್ತಿದ್ದೇವೆ. ಅನೇಕ ಓದುಗರು ಕಂಬಾರರ ಸಾಹಿತ್ಯದ ಗುಣಾಂಶಗಳ ಒಲವನ್ನು ಅವರ ಅಷ್ಟೇನೂ ಅರಿವಿರದ, ಅಥವಾ ಪ್ರತಿಗಾಮಿಯೇ ಆದ ವಿಚಾರಗಳಿಗೂ ಆವಾಹಿಸಿ ಅವುಗಳನ್ನು ಅಪ್ಪಿಕೊಳ್ಳುವ ಅಪಾಯವಿದೆ. ಜ್ಞಾನಪೀಠದಂತಹ ಪ್ರಶಸ್ತಿಗಳನ್ನು ಸ್ಥಾಪಿಸಿದ ಆಳುವ ವರ್ಗಗಳಿಗೆ ಇಂತಹ ಒಳ ಉದ್ದೇಶಗಳೂ ಇರುತ್ತವೆ ಎಂಬುದನ್ನು ಮರೆಯಬಾರದು.







ಕಂಬಾರರ ಕುರಿತ ಈ ವಿಶ್ಲೇಷಣೆ ಸರಿಯಾಗಿದೆ. ಕಂಬಾರರ ಮೇಲಿನ ಪ್ರೀತಿಯಿಂದಲೇ ಅವರ ಬರಹದ ಮಿತಿಗಳನ್ನೂ ಹೇಳಬೇಕಾಗಿದೆ. ಜಿ.ಎನ್. ಎನ್ ಅವರು ಕಂಬಾರರ ಬರಹದ ವೈರುಧ್ಯಗಳನ್ನು ಚೆನ್ನಾಗಿ ಗುರುತಿಸಿದ್ದಾರೆ. ಮೆಚ್ಚುಗೆ ಮಾತುಗಳು ಮಾತ್ರ ವಿಮರ್ಶೆಯಾದ ಈ ಕಾಲದಲ್ಲಿ ಇಂತಹ ಮಾತುಗಳೂ ಹೆಚ್ಚೆಚ್ಚು ಹೊಮ್ಮಬೇಕಾಗಿದೆ.
Tumba olleya vimarsatmak drustikon hondiruv lekhan.
good
ಈ ಮೇಲಿನ ಪ್ರತಿಕ್ರಿಯೆಗಳನ್ನು ಮೂರು ನಾಲ್ಕು ದಿನಗಳ ನಂತರ ನೋಡುತ್ತಿದ್ದೇನೆ.ಇದು ನಾನು ಬಹಳ ಬ್ಯುಸಿಯಾಗಿರುವ ಸೀಸನ್ ಆದ್ದರಿಂದ.ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ವಂದನೆಗಳು.ಕಂಬಾರರ ಅನೇಕ ಕವನಗಳು ಬಾಯಿಪಾಠವಾದ ನನಗೆ ಅವರು ಪಾಳೆಯಗಾರಿ ಸಮಾಜವನ್ನು ಆರಾಧಿಸುವುದರಿಂದಲೇ ಅದರ ಹುಳುಕುಗಳನ್ನು ಚೆನ್ನಾಗಿ ವಿವರಿಸುವಂತೆ ಅವರ ಎಲ್ಲ ಕೃತಿಗಳನ್ನು ಇಷ್ಟಪಟ್ಟು ಹಲವು ಬಾರಿ ಓದುವ ಮೂಲಕ ಅವರ ಚಿಂತನೆಯನ್ನು ಅದರ ಸಮಗ್ರತೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ.ಮುಂದೊಮ್ಮೆ ಅವರ ಎಲ್ಲ ಕೃತಿಗಳ ಅಧ್ಯಯನಾತ್ಮಕವಾದ ಬರಹವನ್ನು ಮಾಡಬೇಕೆಂದಿದೆ.