ಕನ್ನಡದ ಕಟ್ಟಾಳು ಪಾಪು ಪ್ರಪಂಚ ನೆನೆದು…..
ಡಾ. ಸಂಗಮೇಶ ಎಸ್. ಗಣಿ
ಅದು ೨೦೧೩ ರ ಆಗಸ್ಟ್ ತಿಂಗಳು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಕ್ಷೇತ್ರ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗ ಹಾವೇರಿ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಭೇಟಿಕೊಡಬೇಕಿತ್ತು. ಆ ನಿಮಿತ್ತ್ಯ ಆ ಹಳ್ಳಿಗೂ ಭೇಟಿಕೊಟ್ಟಿದ್ದೆವು. ಅದೇ ಹಾವೇರಿ ತಾಲೂಕಿನ ಕುರುಬಗೊಂಡ ಹಳ್ಳಿ. ಪ್ರತಿ ಗ್ರಾಮಕ್ಕೆ ಭೇಟಿಕೊಡುವಂತೆ ಕುರುಬಗೊಂಡ ಹಳ್ಳಿಗೂ ಹೋದಾಗ ಏನೋ ಪುಳಕ. ಸಾರ್ಥಕಭಾವ. ಕಾರಣ ಅದು ಪಾಟೀಲ ಪುಟ್ಟಪ್ಪ ಅವರ ಹುಟ್ಟೂರು.
ಪಂಚಾಯತಿ ಸಿಬ್ಬಂದಿಯೊಬ್ಬರು ಪಾಪು ಅವರ ಮನೆಗೆ ಕರೆದುಕೊಂಡು ಹೋಗಿ ಮನೆಯವರನ್ನೆಲ್ಲ ಪರಿಚಯಿಸಿದಾಗ ವಿಶೇಷವಾದ ಆನಂದ. ಪಾಪು ಅವರ ಸಹೋದರರು, ಕುಟುಂಬದವರು ಬಹಳ ಆತ್ಮೀಯತೆಯಿಂದ ಮನೆಯೊಳಗೆ ಕರೆದು ಕೂರಿಸಿ, ಕುಡಿಯಲು ಪಾನಕ ಕೊಟ್ಟರು. ನಾವು ಬಂದ ವಿಷಯವನ್ನು ಅವರಿಗೆ ಅರುಹಿದೆವು. ಅನಂತರ ಪಾಪು ಅವರ ಬಾಲ್ಯ, ಜೊತೆಗೆ ಅವರು ಹುಟ್ಟಿಬೆಳೆದ ಊರಿನ ನಂಟಿನ ನಲ್ಮೆಯ ನೆನಪುಗಳನ್ನು ಮೆಲಕುಹಾಕುವಾಗ ಪಾಪು ‘ಪ್ರಪಂಚ’ ನನ್ನ ಮನಸ್ಸಿನೊಳಗೇ ಅನಾವರಣಗೊಳ್ಳುತ್ತಲಿತ್ತು. ಒಂದೇಸವನೆ ಅಭಿಮಾನದ ಬುಗ್ಗೆ ಪುಟಿಯುತ್ತಿತ್ತು….
ಆ ಮುಂಚೆಯೂ ಪಾಪು ಅವರನ್ನು ಬೇರೆಬೇರೆ ಕಡೆಗಳಲ್ಲಿ ನಡೆದ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರ ಮಾತಿಗೆ ಕಿವಿಯಾಗಿದ್ದ ನೆನಪು. ಆಗೆಲ್ಲ ಅವರ ಸ್ಮರಣಶಕ್ತಿ ಕಂಡು ಚಕಿತಗೊಂಡಿದ್ದೆನು.
ಅವರು ಮಾತಿಗೆ ಕೂತರೆ ನಾಡಿನ ಹಾಗೂ ದೇಶದ ಚರಿತ್ರೆಯ ಘಟನೆಗಳು ಸುರುಳಿಸುರುಳಿಯಾಗಿ ಬಿಚ್ಚಿಕೊಂಡು ಕೇಳುಗರೆದುರಿಗೆ ದೃಶ್ಯಗಳಾಗಿ ಗೋಚರವಾಗುತ್ತಿದ್ದವು. ಅವರ ಭಾಷಾಬೆಡಗು ಬೆರಗುಗೊಳಿಸುವಂಥದು. ಅವರ ಚಿತ್ರಕಶಕ್ತಿ ಯಾರನ್ನೂ ಮಂತ್ರಮುಗ್ಧರನ್ನಾಗಿಸುವಂಥದು. ಈ ಅರ್ಥದಲ್ಲಿಅವರು ಅಕ್ಷರಶಃ ನಾಡಿನ ಸಾಕ್ಷಿಪ್ರಜ್ಞೆ.
ಈಗ ಅವರು ನಮ್ಮೊಂದಿಗಿಲ್ಲ.
ಅಗಲಿಕೆಯ ನೆಪದಲ್ಲಿ ಪಾಪು ‘ಪ್ರಪಂಚ’ವನ್ನು ಹೊಕ್ಕುಬರುವ ಅಕ್ಷರಯಾತ್ರೆ….

ಕನ್ನಡ ಎಂದರೆ ಪಾಪು, ಪಾಪು ಎಂದರೆ ಕರ್ನಾಟಕ ಅನ್ನುವಷ್ಟು ಅವಿನಾಭಾವ ಬೆಸುಗೆ ಅವರೆಡರ ನಡುವೆ. ಶತಮಾನ ಕಾಲದಿಂದಲೂ ಕರ್ನಾಟಕದ ಸಮಾಜೋ- ರಾಜಕೀಯ ಚರಿತ್ರೆಗೆ ಸಾಕ್ಷಿಪ್ರಜ್ಞೆಯಾಗಿದ್ದ ಪಾಪು ಕರ್ನಾಟಕ ಏಕೀಕರಣಪೂರ್ವ ಮತ್ತು ಏಕೀಕರಣೋತ್ತರ ಕಾಲಘಟ್ಟದ ಗಟ್ಟಿಕೊಂಡಿ. ನಾಡು-ನುಡಿ, ನೆಲ-ಜಲ, ಕಲೆ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಪ್ರಜ್ಞೆಯಾಗಿ ಕನ್ನಡದ ಕಟ್ಟೋಣದಲ್ಲಿ ಸಕ್ರೀಯರಾಗಿ ತೊಡಗಿಕೊಂಡವರವರು. ನಾಡಿನ ಏಕತೆಗೆ ಭಂಗ ಬಂದಾಗ ಸಹಿಸದೇ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸಿದವರು. ಅಖಂಡ ಕರ್ನಾಟಕದ ಸಾಕಾರಕ್ಕೆ ಸದಾ ಹಂಬಲಿಸಿದವರು.
ನಾಡಿನ ಏಳಿಗೆಗೆ ಪ್ರಭುತ್ವವನ್ನು ಸದಾ ಎಚ್ಚರದಲ್ಲಿಟ್ಟು ತಾವೂ ಎಂದಿಗೂ ಎಚ್ಚರ ತಪ್ಪದವರಾಗಿದ್ದುದು ಅವರ ಗಟ್ಟಿತನಕ್ಕೆ ಸಾಕ್ಷಿ.
“ಕನ್ನಡದ ನೆಲದ ಪುಲ್ಲೆನಗೆ ಪಾವನದ ತುಲಸಿ
ಕನ್ನಡದ ನೆಲದ ನೀರ್ವೊಲನೆಗೆ ದೇವನದಿ
ಕನ್ನಡದ ನೆಲದ ಕಲ್ಲನೆಗೆ ಶಾಲಗ್ರಾಮ ಶಿಲೆ”
ಎಂಬ ಸಾಲಿ ರಾಮಚಂದ್ರರಾಯರ ಉಕ್ತಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಲು ಹಗಲಿರುಳು ಶ್ರಮಿಸಿದ ಮಹಾಚೇತನ ಪಾಟೀಲ ಪುಟ್ಟಪ್ಪನವರಿಗೆ
‘ಕನ್ನಡದ ಕಟ್ಟಾಳು’ ಎಂಬ ಅಭಿದಾನ ಅವರ ವ್ಯಕ್ತಿತ್ವದ ಘನಕ್ಕೆ ಕನ್ನಡಿಗರು ಕೊಟ್ಟ ಮನ್ನಣೆ.
ಕರ್ನಾಟಕ, ಕನ್ನಡಿಗ ಕನ್ನಡ ಎಂಬ ತ್ರಿವಳಿಪಾತಳಿಯ ಮೇಲೆ ನಾಡನ್ನು ಸಶಕ್ತವಾಗಿ ಕಟ್ಟಬೇಕೆಂಬ ಕನಸನ್ನು ಕಂಡ ಧೀಮಂತ ಚೇತನ ಅವರು.
‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂಬುದನ್ನು ನಿಜವಾದ ಅರ್ಥದಲ್ಲಿ ಬಾಳಿದ ಪಾಪು ನೇರ, ನಿಷ್ಠುರಿ, ನಿರಾಡಂಬರಿ.
ಕನ್ನಡದ ಕಾವಲು ಸಮಿತಿಯನ್ನು ಕಟ್ಟಿಕೊಂಡು ನಟಸಾರ್ವಭೌಮ ಡಾ. ರಾಜಕುಮಾರರನ್ನು ಧಾರವಾಡಕ್ಕೆ ಕರೆಸಿಕೊಂಡು ಕನ್ನಡ ಏಕೀಕರಣ ಹೋರಾಟಕ್ಕೆ ಸಾಂಸ್ಕೃತಿಕ ಆಯಾಮವನ್ನು ನೀಡಿದ್ದು ಪಾಪು ಅವರ ಹೆಚ್ಚುಗಾರಿಕೆ.
ಧಾರವಾಡ ವಿದ್ಯಾವರ್ಧಕ ಸಂಘವನ್ನು ಐದು ದಶಕಗಳ ಕಾಲ ಮುನ್ನಡೆಸಿದ ಪಾಟೀಲ ಪುಟ್ಟಪ್ಪ ಧಾರವಾಡದ ನೆಲವನ್ನು ಉತ್ತರ ಕರ್ನಾಟಕದ ಶಕ್ತಿಕೇಂದ್ರವನ್ನಾಗಿ, ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಉತ್ತರದ ಬಗ್ಗೆ ಹೆಚ್ಚು ಕಳಕಳಿಯನ್ನು ಪ್ರಕಟಿಸಿದ ಪಾಪು, ಅಖಂಡ ಕರ್ನಾಟಕದ ಅಸ್ತಿತ್ವಕ್ಕೂ ತುಡಿದವರು. ಅದೇಕೊ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಚಟುವಟಿಕೆಗಳನ್ನು ನಾಡಿನಾದ್ಯಂತ ವಿಸ್ತರಿಸುವಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ.
ಪ್ರಪಂಚ, ವಿಶ್ವವಾಣಿ ಪತ್ರಿಕೆಗಳು ಸೇರಿದಂತೆ ಒಂದು ಕಾಲಕ್ಕೆ ಏಳು ಪತ್ರಿಕೆಗಳನ್ನು ಮುನ್ನಡೆಸಿಕೊಂಡು ಬಂದಿದ್ದ ಪಾಪು, ಪತ್ರಿಕಾ ರಂಗಕ್ಕೆ ಸಲ್ಲಿಸಿದ ಸೇವೆ ಅನುಪಮ.
ಮೊನಚು, ವ್ಯಂಗ್ಯ, ನೇರ, ಸರಳ ಭಾಷೆಯನ್ನು ಬಳಸುತ್ತಿದ್ದ ಪಾಪು ವಸ್ತುನಿಷ್ಠತೆಯನ್ನು ಕಂಡು, ಕಾಣಿಸಿದವರು.

ಕನ್ನಡದ ವಿಷಯಕ್ಕೆ ಬಂದಾಗ ಅವರ ಕಾಲಿಗೆ ಎಲ್ಲಿಲ್ಲದ ಕಸುವು. ಮನಸಿಗೆ ಹೊಸ ಕನಸು. ಜನಪ್ರತಿನಿಧಿಗಳ ಪ್ರಗತಿವಿರೋಧಿ ನಿಲುವುಗಳನ್ನು ನೇರವಾಗಿ ಟೀಕಿಸುತ್ತಿದ್ದ ಅವರು ಜನವಿರೋಧಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳದೇ ಬಿಟ್ಟವರಲ್ಲ. ಕೆಲವು ಬಾರಿ ಅವರಲ್ಲಿನ ನಿಷ್ಠುರತೆ ಅವರಿಗೆ ಮುಳುವಾದದ್ದೂ ಉಂಟು. ಅನಂತರ ರಾಜಕೀಯಕ್ಕೂ ಪಾದಬೆಳೆಸಿದ ಪಾಪು ಅಲ್ಲಿ ಗಟ್ಟಿ ನೆಲೆಕಂಡುಕೊಳ್ಳಲಾಗಲಿಲ್ಲ.
ಅಧಿಕಾರ, ಪ್ರತಿಷ್ಠೆಗಾಗಿ ಅವರೆಂದೂ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಡದ ಗಟ್ಟಿಗರು. ಆದರೂ ವಿರೋಧಿಗಳೂ ಪ್ರೀತಿಸಬಹುದಾದ ವಿಶಿಷ್ಟ ವ್ಯಕ್ತಿತ್ವ ಅವರದು.
ನಾಡು- ನುಡಿ, ಸಾಹಿತ್ಯ, ಪತ್ರಿಕಾರಂಗದ ಸೇವೆಗಾಗಿ ನಾಡೋಜ, ಕರ್ನಾಟಕ ವಿವಿಯ ಗೌರವ ಡಾಕ್ಟರೇಟ್ ಪದವಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು ಪಾಪು.
“ಜ್ಞಾನಕ್ಕಿಂತಲೂ ಹೆಚ್ಚಿನ ಪುಣ್ಯವಿಲ್ಲ, ಅಜ್ಞಾನಕ್ಕಿಂತಲೂ ಹೆಚ್ಚಿನ ಪಾಪವಿಲ್ಲ” ಎಂದು ಹೇಳಿದ ಪಾಪು ಸದಾ ಲವಲವಿಕೆಯಿಂದ ಇರುತ್ತಿದ್ದರು. ಪ್ರತಿಕ್ಷಣವೂ ಹೊಸತನಕ್ಕಾಗಿ ಹಂಬಲಿಸುವ ಅವರು, ‘ಬದುಕಲು ಬೇಕು ಬದುಕುವ ಈ ಮಾತು’ ಎಂಬುದನ್ನು ಸ್ವತಃ ಬದುಕಿ ತೋರಿದ ಮಹಾಬೆಳಕು.
ಕನ್ನಡದ ಕಟ್ಟಾಳು, ಒಂಟಿಸಲಗ ಆಗಿದ್ದ ಪಾಪು ಅವರು ನಾಡಿಗಾಗಿ ಇಷ್ಟೆಲ್ಲಾ ಮಾಡಿದರೂ ಶಾಂತವೇರಿ ಗೋಪಾಲಗೌಡ, ಜೆಪಿ, ಪೆರಿಯಾರ್, ರಾಮ ಮನಹೋರ ಲೋಹಿಯಾ ಅವರ ಹೋರಾಟಗಳ ಪ್ರಖರತೆಯಾಗಲಿ, ಹೋರಾಟದ ಮುಂದುಗಾರರನ್ನು ಸೃಷ್ಟಿಸಿ ಅವನ್ನು ಜತನವಾಗಿಟ್ಟುಕೊಳ್ಳುವ, ಹೋರಾಟಗಳ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳುವ ಪ್ರಯತ್ನಗಳೂ ನಡೆಯದಿರುವುದು
ನಿಜಕ್ಕೂ ಆಶ್ಚರ್ಯ. ನಾಡಿಗಾಗಿ ತಮ್ಮನ್ನು ತಾವು ಕಾಯಾವಾಚಾ ಸಮರ್ಪಿಸಿಕೊಂಡಿದ್ದ ಪ್ರಶ್ನಾತೀತ ಪಾಪು ಅವರು ಈ ಪ್ರಶ್ನೆಗಳನ್ನು ಹಾಗೇ ಉಳಿಸಿ ಹೋದರು.
ಕನ್ನಡ ನಾಡು ನುಡಿಗಾಗಿ ಹೋರಾಡುವ ಇಂದಿನ ಕೆಲ ಸಂಘಟನೆಗಳು, ಮುಖಂಡರುಗಳು, ಚಳವಳಿಗಳು ದಿಕ್ಕು ತಪ್ಪುತ್ತಿರುವ ಈ ಹೊತ್ತಲ್ಲಿ ಪಾಪು ಅವರ ಪ್ರಾಮಾಣಿಕತೆ, ನಿಷ್ಠೆ, ನಿಷ್ಠೂರತೆ, ಕನ್ನಡಪ್ರಜ್ಞೆ, ಅಭಿಮಾನ, ಗೌರವ, ಹೋರಾಟಗಳು ಮಾದರಿಯಾದುವು.
ನಾಡು ನುಡಿಗಾಗಿ ತಮ್ಮ ಬದುಕನ್ನೇ ಸವೆಸಿ, ಅದ್ಭುತ ಸ್ಮರಣಶಕ್ತಿಯನ್ನು ಹೊಂದಿದ್ದ ಪಾಪು ಶತಮಾನದ ತಮ್ಮ ಅಪಾರ ಜೀವನಾನುಭವದ ‘ಅನುಭವ ಇರುವಲ್ಲಿ ಅಮೃತತ್ವ’ದ ಸಾರವನ್ನು ಉಣಬಡಿಸಿದ ಮಹಾಚೇತನ.
ಪಾಪು ಕನ್ನಡದ ಪಾಲಿನ ಬಾಪು. ಆ ದಿವ್ಯ ಚೇತನದ ಅಗಲಿಕೆಯಿಂದ ನಾಡಿನಲ್ಲಿ ನಿರ್ವಾತವೊಂದು ಸೃಷ್ಟಿಯಾದಂತಾಗಿದೆ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಭಾವಕೋಶದಲ್ಲಿ ಚಿರಸ್ಥಾಯಿಯಾಗಿ ದ್ದಾರೆ. ಅವರ ಕನ್ನಡಪರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ.






0 Comments