ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾಚಿಕಟ್ಟಿದ ಪಾಗಾರದಾಚೆ…

Swarna-20150627_002735-150x15011

ಸ್ವರ್ಣ ಎನ್ ಪಿ

ತಮ್ಮ ಬದುಕಿನ ಹಾಡುಗಳನ್ನು ಕೆಲವರು ಗಟ್ಟಿಯಾಗಿ ಹಾಡುವುದೇ ಇಲ್ಲ. ಹಾಡುಗಳೇ ಇಲ್ಲವೆಂದಲ್ಲ , ಎಲ್ಲರ ಬದುಕಿಗೂ ಒಂದು ಹಾಡು ಖಂಡಿತಾ ಇದೆ ಎಂಬ ನಂಬಿಕೆ ನನ್ನದು. ಎಲ್ಲವನ್ನೊಳಗೊಂಡ ಆ ಘನ ನೀಲ ಮೌನ ಕೂಡ ಒಂದು ಭಾವಗೀತೆ. ಎಲ್ಲೋ ಕೆಲವು ಕಿವಿಗಳು ಈ ಹಾಡನ್ನು ಆಲಿಸುತ್ತವೆ.

ಒಂದು ಮನೆಯೇ ಊರಾಗುವ ಹಳ್ಳಿಗಳಲ್ಲಿ ಬದುಕುವ ಹೆಂಗಸರನ್ನು ನೋಡಿ.  ಕಟ್ಟೆ ಮೀಟಿಂಗ್ ಗೊತ್ತಿಲ್ಲದ ಪ್ರಪಂಚ. ಮಹಾನಗರಿಯಲ್ಲಿದ್ದವರಿಗೂ ಕಟ್ಟೆ ಮೀಟಿಂಗ್ ಗೊತ್ತಿಲ್ಲ ಎನ್ನಬೇಡಿ , ಇತ್ತೀಚಿಗೆ ಜೋಗಿಯವರು ಬರೆದಂತೆ ಅಂದಿನ ವಠಾರಗಳೇ ಇಂದಿನ ಅಪಾರ್ಟ್ಮೆಂಟ್ಗಳಾಗಿ ಕಟ್ಟೆ ಮೀಟಿಂಗ್ ಗಳು ಮುಂದುವರೆದಿವೆ. ಇದಕ್ಕೆ ಅಪವಾದಗಳು ಇದ್ದಿರಬಹುದು . ಇದು ನಾ ಕಂಡ ಚಿತ್ರ. ತೋಟದ ಅಂಚಿನ  ಮನೆಯಲ್ಲಿ ಬದುಕುವ ಅವಳಿಗೆ ಮನೆಯವರು , ಮನೆಗೆಲಸ , ತೋಟ , ಕೊಟ್ಟಿಗೆಯಲ್ಲಿನ ದನಕರುಗಳು ಇಷ್ಟು ಬಿಟ್ಟರೆ ಬೇರೆ ಪ್ರಪಂಚಗೊತ್ತಿಲ್ಲ. ಇತ್ತೀಚಿಗೆ ಟಿ.ವಿ. , ಫೋನುಗಳು ಬಂದಮೇಲೆ ಅವಳಿಗೂ ಮಾತು ಬಂದಿರಬಹುದು ಆದರೆ ಅಲ್ಲಿಯವರೆಗೆ ಅವಳಿಗಿದ್ದಿದ್ದು  ಮೌನ ಸಾಮ್ರಾಜ್ಯ ಮಾತ್ರ. ಅವಳು ಮಾತೇ ಆಡುವುದಿಲ್ಲವೆಂದಲ್ಲ ತನ್ನ ಆಸೆಗಳನ್ನು , ಕನಸುಗಳನ್ನು ಮಾತುಗಳಲ್ಲಿ ಪೋಣಿಸಿದ್ದು  ಕಡಿಮೆ. ಮಾತು ಕಡಿಮೆಯಾದಂತೆ ತಾಳ್ಮೆ , ಸಹನೆ ಹೆಚ್ಚುತ್ತಾ ಹೋಗುತ್ತಾ ? ತುಟಿಯನ್ನೂ ಕಚ್ಚದೇ ಎಲ್ಲವನ್ನೂ ನುಂಗುವುದನ್ನು ಮೌನ ಕಲಿಸುತ್ತದಾ ? ಪ್ರತಿಭಟನೆಗೆ ಬೆಲೆ ಇಲ್ಲ , ಅವಕಾಶವಿಲ್ಲವೆಂದು ಆಕೆ ಆ ಮೌನದ ದಾರಿ ಹಿಡಿದಳಾ ? ಮೌನವೇ ತಾನಾದ ಆ ಲೋಕದಲ್ಲಿ ನಿಜಕ್ಕೂ ಅಷ್ಟೊಂದು ಸಮಾಧಾನ ಸಂತಸಗಳಿವೆಯಾ ? ಅವಳ ಉತ್ತರ ನನಗಿನ್ನೂ ಅರ್ಥವಾಗಿಲ್ಲ.

1

ತಂದೆಯ ಏಕಮಾತ್ರ ಮುದ್ದಿನ ಮಗಳವಳು, ಹಳ್ಳಿಯ ಸೀಮೆಯನ್ನು ದಾಟದವಳು. ಕುಂಟೆಬಿಲ್ಲೆ ಆಟ ಮುಗಿವ ಮೊದಲೇ ಮದುವೆಯಾಗಿ , ಲಂಗದಾವಣಿ ತೊಟ್ಟುಕೊಳ್ಳುವ ವಯಸಿನಲ್ಲಿ ಕೆಂಪುಸೀರೆ ಹೊದ್ದಳು. ಆದರೂ ಅದೆಷ್ಟು ಚಂದಗೆ ನಗು ನಗುತ್ತಲೇ ಬದುಕಿದಳೆಂದರೆ ತೀರದ ಧಾರೆಯನ್ನು ಕಂಗಳಲ್ಲಿ ತುಂಬಿದ ನಿಯತಿಗೂ ಕಿಚ್ಚು ಹತ್ತಿರಬೇಕು.  ಮತ್ತೊಬ್ಬಳು ಆದಾಯವನ್ನರುಸುತ್ತಾ ಪೇಟೆಯಿಂದ ಹಳ್ಳಿಗೆ ಹೋದವಳು. ಭಾಷೆ , ವೇಷ ಎಲ್ಲವನ್ನೂ ತನ್ನದಾಗಿಸಿಕೊಂಡು  ಶಾಂತ ಶರಾವತಿಯಾಗಿ ಬದುಕಿದವಳು. ಇನ್ನೊಬ್ಬಳು ಮದುವೆಯಲ್ಲಿ ಹಳ್ಳಿಗೆ ‘ಕೊಡಲ್ಪಟ್ಟವಳು’. ಇನ್ನೊಂದಷ್ಟು ಜನರನ್ನು ಅಷ್ಟು ಹತ್ತಿರದಿಂದ ಕಂಡಿಲ್ಲವಾದರೂ ಅವರ ಹಾಡೂ ಇದಕ್ಕಿಂತ ಭಿನ್ನವೇನಲ್ಲ. ಇವು ದಾಖಲೆಯಾಗದ ಪ್ರತಿಭಟನೆಗಳಾ ಅಥವಾ ನಿರ್ಲಿಪ್ತತೆಯನ್ನು ಮುಟ್ಟಿದ ಮೌನವಾ, ತೀರದ ತಾಳ್ಮೆಯಾ  ? ಅವರವರ ಭಾವಕ್ಕೆ.

ನಾನು ಕಂಡಂತೆ ಇವರೆಲ್ಲರಿಗೂ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಅತೀವವಾದ ಪ್ರೀತಿ ಇದೆ, ಪರಿಸರದೊಡನೆ ಒಂದಾಗಿ ಬದುಕುವುದು ಎಂಬುದರ ಕಾರ್ಯ ರೂಪ ಅವರ ಬದುಕು . ತೋಟದಲ್ಲಿ ಉದುರಿದ ಒಂದು ತೆಂಗಿನ ಗರಿ , ಕಳುವಾದ ಒಂದು ಗೊನೆ ಅಡಿಕೆ, ಕಡಿಮೆ ಕಲಗಚ್ಚು ಕುಡಿದ ಕೊಟ್ಟಿಗೆಯ ಕಾಳಿ..ಎಲ್ಲವೂ ಅವರಿಗೆ ತಿಳಿಯುತ್ತದೆ. ಅಕ್ಷರಶಃ ಇವುಗಳೊಂದಿಗೆ ಅವರು ಬಾಳುತ್ತಿದ್ದರು,ಬಾಳುತ್ತಿದ್ದಾರೆ.ಪ್ರಾಣಿಗಳ ಬಗೆಗಿನ  ವಿಶೇಷವಾದ ಮಮಕಾರಕ್ಕೆ , ಅವು ಇವರ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲವೆಂಬ ನಂಬಿಕೆಯೇ ?  ಮೊನ್ನೆ ಊರಿಗೆ ಹೋದರೆ ‘ಇದರ ಕಣ್ಣು ನೋಡು ಒಂದು ಹಸಿರು , ಒಂದು ನೀಲಿ ‘ ಎಂದು ಇಂಥವಳೇ ಒಬ್ಬಳು  ಅದೆಷ್ಟು ಅಚ್ಚರಿಯಿಂದ ಹೇಳಿದ್ದಳೆಂದರೆ , ಮುಗಿಯದ ಕೆಲಸಗಳ , ಚಿಂತೆಗಳ   ನಡುವೆಯೂ ಬೆಕ್ಕಿನ ಕಣ್ಣನ್ನು ಗಮನಿಸುವಷ್ಟು ವ್ಯವಧಾನ ಈಕೆಗೆ ಎಲ್ಲಿಂದ ಬಂತು ? ಎಂಬುದು ನನಗೆ ಬೆಕ್ಕಿನ ಕಣ್ಣಿಗಿಂತ ಹೆಚ್ಚು ಅಚ್ಚರಿಯನ್ನುಂಟು ಮಾಡಿತ್ತು. ಹಿತ್ತಲಿಗೆ ಹೋದರೆ ಅಲ್ಲೊಂದು ಚಂದನೆಯ ಕರು ಮಲಗಿತ್ತು . ಹಿಂದೆಯೇ ಬಂದ ಅವಳು ನಕ್ಕು ನುಡಿದಿದ್ದಳು , ‘ನೆನ್ನೆ ಹುಟ್ಟಿದೆ ಅಮ್ಮಿ, ಭಾಗ್ಯ ಅಂತ ಹೆಸರಿಡೋಣ ಅಂತಿದಿನಿ .’  ಜನನ ನಿಜಕ್ಕೂ ಸರಸವೇ ! ನಾಯಿ , ಬೆಕ್ಕು, ದನ ಇವುಗಳೊಂದಿಗೆ ಇತ್ತೀಚಿಗೆ ಇವಳ ಲಿಸ್ಟಿಗೆ ಸೇರ್ಪಡೆಯಾದ ಪ್ರಾಣಿ ಅಳಿಲು . ಅದಕ್ಕೊಂದು ಪುಟ್ಟ ಮನೆ ಮಾಡಿ ಅದರೊಂದಿಗೂ ಮಾತನಾಡುತ್ತಾಳೆ . ‘ನಿಜವಾಗ್ಲೂ ಇವಕ್ಕೆ ಮಾತು ಅರ್ಥ ಆಗುತ್ತಾ ?’ ಎಂಬ ಪ್ರಶ್ನೆಗೆ ಅನುಭವವೊಂದನ್ನು ಹೇಳಿದಳು  :  ಮನೆಯ ಹಿಂದಿನ ಪುಟ್ಟ ಗುಡ್ಡದಲ್ಲಿ ಗೇರು ಹಣ್ಣಿನ ಹಲವಾರು ಮರಗಳಿವೆ. ಅಲ್ಲಿಂದ ಹಣ್ಣು ಆಯ್ದು ತಂದು ಬೀಜ ಬೇರೆ ಮಾಡಿ ಕಾರ್ಖಾನೆಗೆ ಕೊಟ್ಟರೆ ಸ್ವಲ್ಪ ಹಣ ದೊರೆಯುತ್ತದೆ . ಆ ಹಣದಲ್ಲಿ  ಸೀರೆಯ  ಮೋಹ ತೀರಿಸಿಕೊಳ್ಳುವ ಕನಸು ಇವಳದ್ದು. ಕೊಟ್ಟಿಗೆಯಲ್ಲಿನ ಇವಳ ಗೆಳತಿ ಭೂದೇವಿ.  ದಿನವೂ ಗುಡ್ಡಕ್ಕೆ ಹೋಗಿ ಮೇಯ್ದು ಬರುವಾಗ ಒಂದಷ್ಟು ಗೇರು ಹಣ್ಣು ತಿಂದು ಬೀಜ ಬಾಯಲ್ಲಿಯೇ ಇಟ್ಟುಕೊಂಡು ಕೊಟ್ಟಿಗೆಗೆ ಬಂದು  ಉಗಿಯುತ್ತಿದ್ದಳಂತೆ.  ಅದನ್ನಿವಳು ಆರಿಸಿ ಒಟ್ಟು ಮಾಡಿ ಕಾರ್ಖಾನೆಗೆ ಕಳಿಸುವುದು . ಒಂದೆರಡು ತಿಂಗಳ  ನಂತರ ಕೆಲವು ದಿನ ಭೂದೇವಿ ಬೀಜ ತಂದಿಲ್ಲ . ಹಾಲು ಕರೆಯುತ್ತಿದ್ದಾಗ ಇವಳು ಸುಮ್ಮನೇ ‘ಏನೇ ಭೂದೇವಿ ಹಣ್ಣು ತಿಂತಾ ಇಲ್ವಾ ? ಬೀಜ ಎಲ್ಲೇ ?’ ಎಂದು ತನ್ನಾಸೆಯನ್ನೂ ಹೇಳಿಕೊಂಡಳಂತೆ. ಮಾರನೆಯ ದಿನ ಭೂದೇವಿಯ ಬಾಯಲ್ಲಿ  ಸುಮಾರು ಕಾಲು ಕೆ.ಜಿ. ಬೀಜ! ಅದೆಷ್ಟು ಹಿಗ್ಗಿನಿಂದ ಹೇಳಿದಳೆಂದರೆ ಹೊಸ ಸೀರೆಯನ್ನು ಕೊಂಡದ್ದಕ್ಕಿಂತಲೂ ಹೆಚ್ಚು ಸಂತಸ ಅವಳ ಮುಖದಲ್ಲಿತ್ತು.

ಬಂಧಗಳಿಗಿಂತ ಭಾವಮುಖ್ಯವೆಂದು ನಾನು ಇಲ್ಲಿರುವ ಯಾವುದೇ ಹೆಂಗಸಿಗೂ ಹೆಸರು ಕೊಟ್ಟಿಲ್ಲ , ಅವರೊಂದಿಗಿನ ನನ್ನ ಸಂಬಂಧವನ್ನೂ ಹೇಳಿಲ್ಲ. ಎಲ್ಲರ ಬದುಕಿನಲ್ಲೂ ಹೀಗೆ ಬದುಕನ್ನು ಚಂದವಾಗಿ ಬದುಕಿದವರಿರುತ್ತಾರೆ. ಇವರೆಲ್ಲರ ನೆನಪನ್ನು ಮತ್ತೆ ತಾಜಾ ಮಾಡಿದ್ದು ಮಿತ್ರಾ ವೆಂಕಟ್ರಾಜ ಅವರ ಕಾದಂಬರಿ  ‘ಪಾಚಿ ಕಟ್ಟಿದ ಪಾಗಾರ’ . ಕಾದಂಬರಿಯಲ್ಲಿ ಸ್ತ್ರೀ ಪಾತ್ರಗಳಷ್ಟೇ ಮುಖ್ಯವಾದ ಪುರುಷಪಾತ್ರಗಳೂ ಇವೆ. ಕಥೆಯೊಂದಿಗೆ ಬೆಳೆಯುವ ಮಾಧವ , ಸೀತಾರಾಮ , ನಾಗರಾಜ ಇವರೆಲ್ಲರೂ ಮನಸಿನಲ್ಲಿ ಉಳಿಯುತ್ತಾರೆ .ಲೇಖಕಿಯೇ ಹೇಳುವಂತೆ ಈ ಕಥೆ ಮಾಧವನೆಂಬ ಪಾತ್ರದ್ದಾದರೂ  ಪಾರ, ಲಕ್ಷ್ಮೀದೇವಿ ಮತ್ತು ಕಮಲಿಯ ಕಥೆಯೂ ಜೊತೆಗೆ ಬೆಸೆದುಕೊಂಡಿದೆ.  ಈ ಮೂವರು ಸ್ತ್ರೀ ಪಾತ್ರಗಳು ಒಬ್ಬರಿಗೊಬ್ಬರು ಆಸರೆಯಾಗುವ ರೀತಿ , ಅರ್ಥ ಮಾಡಿಕೊಳ್ಳುವ ಪರಿ ಕಾದಂಬರಿಯ ಬಹು ಮುಖ್ಯ ಅಂಗ.  ಬದುಕಿನ ಬಗೆಗಿನ ಅವರೆಲ್ಲರ  ದೃಷ್ಟಿ ಎಲ್ಲವೂ ಯಾವುದೋ ಬಿಂದುವಿನಲ್ಲಿ ಒಂದಾಗುತ್ತದೆ . ನನ್ನನ್ನು ಅತೀ ಹೆಚ್ಚು ಕಾಡಿದ್ದು  ಕೆಮ್ಮಾಡಿ ಮನೆಯ ತಳಪಾಯವೆನ್ನಬಹುದಾದ  ಲಕ್ಷ್ಮಿದೇವಿ. ಗಂಡನೊಂದಿಗೆ ತೃಪ್ತ ಜೀವನ ನಡೆಸುತ್ತಿದ್ದ ಅವಳಿಗೆ ಭರದ ಸಿಡಿಲಾಗುವುದು ಮಗ ಮಾಧವ.  ಎಲ್ಲ ಆಘಾತಗಳ ನಡುವೆ , ತೀರದ ನೋವಿನ ನಡುವೆ ಲಕ್ಷ್ಮೀದೇವಿ ಅದೆಷ್ಟು ಸಂಯಮದಿಂದ ವರ್ತಿಸುತ್ತಾಳೆಂದರೆ ಓದುತ್ತಾ ಹೋದಂತೆ ಅವಳುಟ್ಟ ಒಂಭತ್ತು ಮೊಳದ ಕಚ್ಚೆ ಸೀರೆ , ಬೆಳ್ಳಿಯ ಡಾಬು , ಅವಳಮೊಗದ ಶಾಂತತೆ ಎಲ್ಲವೂ ಕಣ್ಣ ಪರದೆಯ ಮೇಲೆ ಮೂಡಲಾರಂಭಿಸುತ್ತವೆ . ಇದೆಲ್ಲದರ ಜೊತೆಗೆ  ತನ್ನಂತೆ ನೋವಿನಲ್ಲಿರುವ ಪಾರಳನ್ನು  ಅವಳು ಇನ್ನಿಲ್ಲದ ಮುಚ್ಚಟೆಯಿಂದ ಕಾಣುವಲ್ಲಿ ಅವಳ ಮನಸಿನ ವೈಶಾಲ್ಯ ಮತ್ತಷ್ಟು ಹೆಚ್ಚುತ್ತದೆ . ಹಸೆಮಣೆಯವರೆಗೂ ಕರೆತಂದು ಮಗ ಮಾಧವ ಕೈ ಬಿಟ್ಟ ಹೆಣ್ಣು , ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು,  ಬಂದು ಬೀಳುವುದು ಲಕ್ಷ್ಮಿದೇವಿಯ ಮಡಿಲಿಗೆ. ಎರಡು  ನೋವುಗಳು ಒಂದಕ್ಕೊಂದು ಆಧಾರವಾಗಿ ನಿಲ್ಲುವಬಗೆಯ ಚಂದದ ಚಿತ್ರಣವನ್ನು ಓದಿಯೇ ತಿಳಿಯಬೇಕು.  ಇವರಿಗೆ ಜೊತೆಯಾಗುವುದು ಮತ್ತೊಬ್ಬ ಸೊಸೆ ಕಮಲಿ.ಇವರೆಲ್ಲರಗಿಂತ ತುಸು ಭಿನ್ನವಾದ ಪಾತ್ರ ಲಕ್ಷ್ಮೀದೇವಿಯ ಹಿರಿಮಗಳು ಶಂಕರಿಯದ್ದು ,ತನ್ನೆಲ್ಲ ನೋವನ್ನೂ  ನಗುವಿನ ಶಾಖದಲ್ಲಿ ಕರಗಿಸಿ ಕೊನೆಗೊಮ್ಮೆ ಕರಗಿ ಕಂಬನಿ ತರಿಸುವ ಹೆಣ್ಣು. ಈ ಪಾತ್ರ ನೆನಪಾದಾಗಲೆಲ್ಲ ಇಂದಿಗೂ ಮೌನ ಕಂಬನಿಯಾಗುತ್ತದೆ.

ಪಾತ್ರ ಪರಿಸರಗಳ ರಚನೆಯಲ್ಲಿ ಎದ್ದು ಕಾಣುವ ಸೂಕ್ಷ್ಮತೆ ಇದು ಮಹತ್ವಾಕಾಂಕ್ಷಿ ಕಾದಂಬರಿ ಎಂಬ ಮಾತಿಗೆ ಪುರಾವೆಯಾಗಿ ನಿಲ್ಲುತ್ತದೆ. ಇಷ್ಟವಾದ ಮತ್ತೊಂದು22 ಅಂಶ ದಕ್ಷಿಣ ಕನ್ನಡ ಭಾಷೆ.   ಪುಸ್ತಕವೊಂದು ನಮ್ಮಲ್ಲಿ ವಿಚಾರ ತರಂಗಗಳನೆಬ್ಬಿಸಿ , ಮಾನವ ಬದುಕಿನ ಹಾದಿಯಲ್ಲಿ ಒಂದಷ್ಟು ದೂರಕ್ಕೆ ಕರೆದೊಯ್ದರೆ ಆ ಓದು ಸಾರ್ಥಕವೆಂಬ ನಂಬಿಕೆ ನನ್ನದು . ಈ ಓದು ಎಲ್ಲ ರೀತಿಯಲ್ಲೂ ಕಲಿಸಿದೆ . ಹಾಗಾಗಿ ಕಾದಂಬರಿಯ ಉಳಿದ ಪಾತ್ರಗಳ ಬಗ್ಗೆ , ಕಥೆ ಅಥವಾ ಶಿಲ್ಪದ ಬಗ್ಗೆ ನಾನು ಹೆಚ್ಚು ಬರೆದಿಲ್ಲ.

ರಕ್ಷಣೆಗೆಂದು ತನ್ನ ಸುತ್ತಲೂ ಕಟ್ಟಿಕೊಂಡ ಗೋಡೆ ಪಾಚಿಗಟ್ಟಿದ್ದರೂ ಅದನ್ನು ಒಪ್ಪಮಾಡಿಕೊಳ್ಳದ ಮಾಧವನ ಮನಸ್ಥಿತಿಯ, ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕೆಮ್ಮಾಡಿ ಮನೆಯ ಅವನತಿಯ, ವಿವಿಧ ಪಾತ್ರಗಳಲ್ಲಿ ಕುಸಿಯುತ್ತಿರುವ ಬದುಕಿನ ಮೌಲ್ಯಗಳ, ಕುಟುಂಬಗಳಲ್ಲಾಗುತ್ತಿರುವ ಬದಲಾವಣೆಗಳಿಂದ ಮೂಲೆಗೆ ಸರಿದು ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಬದುಕಿನ ಪಾಗಾರದ, ಪ್ರಾಚೀನತೆಯ  ಸಂಕೇತವೇ  ‘ಪಾಚಿ ಗಟ್ಟಿದ ಪಾಗಾರ ‘ ವಾಗಿರುಬಹುದೆಂದು ನನ್ನ ಗ್ರಹಿಕೆ . ಲೇಖಕಿಯ ಉಳಿದ ಕೃತಿಗಳನ್ನು ಇನ್ನಷ್ಟೇ ಓದಬೇಕೆಂಬ ಮಿತಿಯೊಂದಿಗೆ ಇದು ನನ್ನ ಓದಿನ ಅನುಭವ .

 

ಟಿಸಿಲೊಡೆದು ಹೂವಾಗಬೇಕೆಂದಿದ್ದೆ

ಒಳಸರಿದು ‘ಬೇರಾ’ದೆ

ಕೋಮಲ ಪಾರಿಜಾತವಾಗಬೇಕೆಂದಿದ್ದೆ

ಬಿರಿದು ಸೇವಂತಿಯಾದೆ

ನುಡಿದು ಕೊಳಲಾಗಬೇಕೆಂದಿದ್ದೆ

ಬೆಳೆದು ಬಿದಿರಾದೆ

ಮನೆಯ ಕದವಾಗಬೇಕೆಂದಿದ್ದೆ

ಕಾದು ಹೊಸ್ತಿಲಾದೆ

ಸದಾ ಮಡಿಲಾಗಬೇಕೆಂದಿದ್ದೆ

ಅಗಲಿ ಹಾರೈಕೆಯಾದೆ

ಬೇಕೆಂದವುಗಳೆಲ್ಲ ಕನಸುಗಳಲ್ಲ,

ಜರುಗಿದ ಸತ್ಯ ಸಾಕ್ಷಾತ್ಕಾರವೂ

ಸುಂದರವೆಂದು ಅರಿವಿಗೆ ಬರಲು

ಮಡಿಲು ತೆರೆದು  ತಾಯಾದೆ

ಅದನ್ನೂ  ಮೀರಿ ಸ್ತ್ರೀಯಾದೆ !

 

‍ಲೇಖಕರು admin

15 October, 2015

1 Comment

  1. Mallappa

    ವಿಶ್ಲೇಷಣೆ ವಿಶಿಷ್ಟವಾಗಿದೆ.ಹೌದು ಹೆಂಗಸರಿಗೆ ಹಿರಿಯರು ಸುಮ್ಮನೇ ಭೂತಾಯಿ ಅನ್ನಲಿಲ್ಲ.ಅವಳ ಸಹನೆಗೆ, ಮೌನಕ್ಕೆ ಅದರದೇ ಆದ ಮೌಲ್ಯವಿದೆ.ಭೌತಿಕ ಅಲ್ಲದಿದ್ದರೂ ಬೌದ್ಧಿಕ ವಾಗಿ ಅವರು ಎತ್ತರದಲ್ಲಿ ಇರುವವರು. ಈ ಜನವೇ ಜಾನಪದವಾದವರು.ಇವರಿಗೆ ” ಸ್ತ್ರೀ ಅಂದರೆ ಅಷ್ಟೇ ಸಾಕೇ? “.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading