ಪರದೆ ಸರಿಸಿದ ಚಿತ್ರ..

ಚಿತ್ರಾ ಮಣಿಪುರದ ರಾಜಕುಮಾರಿ.

ಅವಳಿಗೆ ನಿಜಕ್ಕೂ ಆ ದಿನದವರೆಗೆ ಅವಳಲ್ಲೊಂದು ಕೊರತೆಯಿದೆ ಎಂಬುದೇ ತಿಳಿದಿರಲಿಲ್ಲ. ಎಂದಿನಂತೆ ಅ ದಿನವೂ ಅವಳು ತನ್ನ ಸಖಿಯರೆಲ್ಲರ ಜೊತೆಗೂಡಿ ಬೇಟೆಗೆ ಹೊರಟಿದ್ದಳು. ಅಲ್ಲೆಲ್ಲೋ ಪೊದೆಯಾಚೆಗಿನ ಪ್ರಾಣಿಯ ಚಲನೆಯ ಶಬ್ದವನ್ನು ಕೇಳಿ ಗುರಿಯಿಟ್ಟು ಬಾಣವನ್ನು ಹೊಡೆದಿದ್ದಳು. ಆದರೆ ಅದನ್ನು ತನ್ನ ದೇಹಕ್ಕೆ ತಾಗುವ ಮೊದಲೇ ಕೈಯಲ್ಲಿ ಹಿಡಿದು ವ್ಯಕ್ತಿಯೊಬ್ಬ ಹೊರಗೆ ಬಂದಿದ್ದ.

ಸಂನ್ಯಾಸಿಯಂತೆ ಕಾಣುತ್ತಿದ್ದ ಅವನನ್ನು ಕಂಡೊಡನೇ ಚಿತ್ರಾಳಿಗೆ ತನ್ನ ತಪ್ಪಿನ ಅರಿವಾಗಿ ತುಟಿಕಚ್ಚಿದಳು. “ಪಾರ್ಥನೊಡನೆ ಹುಡುಗಾಟವೆ? ತೊಲಗಿರಾಚೆಗೆ, ಮುರುಳು ಬಾಲೆಯರೆ” ಎಂದು ಬೈದು ಹೋದವನನ್ನು ನೋಡಿ ಕರಗಿಹೋದಳು ಚಿತ್ರಾ.

ಅವಳ ತಂದೆ ತಾಯಿಯರು ಆಗಾಗ ಮಾತನಾಡುವುದನ್ನು ಆಕೆ ಕೇಳಿದ್ದಳು. ಪಾರ್ಥನೇ ತನ್ನ ವರನಾಗುವನೆಂಬ ಹಾರೈಕೆ ಫಲಿಸುವ ಹೊತ್ತು ಬಂತೆಂದು ಹಿಗ್ಗಿದಳು. ಪಾರ್ಥನನ್ನು ಹುಡುಕಿ ಹೋಗಿ ತನ್ನ ಮನದಿಂಗಿತವನ್ನು ಹೇಳಿದಳು. ಪಾರ್ಥ ಇವಳನ್ನು ಕಡೆಗಣ್ಣಿಂದ ನೋಡಿ ತಿರಸ್ಕರಿಸಿದ. ಸಂನ್ಯಾಸಿಯಾದ ತನ್ನ ತಂಟೆಗೆ ಬರದಿರುವಂತೆ ತಾಕೀತು ಮಾಡಿದ.

ಅದು ಜೀವನದಲ್ಲಿ ಅವಳು ಅನುಭವಿಸಿದ ಮೊದಲ ಅವಮಾನವಾಗಿತ್ತು. ಸಖಿಯರಲ್ಲಿ ತನ್ನ ದುಗುಡವನ್ನು ಹಂಚಿಕೊಂಡಳು. ಅವರಲ್ಲಿ ಅನುಭವಿಯಾಗಿದ್ದವಳೊಬ್ಬಳು ಚಿತ್ರಾಳಿಗೆ ಗಂಡನ್ನು ಒಲಿಸುವ ಕಲೆಯ ಬಗ್ಗೆ ಪಾಠ ಹೇಳಿದಳು. ಹೆಣ್ಣು ಎಷ್ಟೇ ಸಮರ್ಥಳಿರಲಿ, ಅವಳ ರೂಪು ಲಾವಣ್ಯಗಳೇ ಮೊದಲ ನೋಟಕ್ಕೆ ಗಂಡನ್ನು ಸೆಳೆಯುವುದು ಎಂಬುದನ್ನು ಗುಟ್ಟಿನಲ್ಲಿ ವಿವರಿಸಿದಳು.

ಹೌದು, ಚಿತ್ರಾಳಿಗೆ ಈಗ ಎಲ್ಲವೂ ನೆನಪಾಗುತ್ತಿದೆ.

ಅವಳು ಪುಟ್ಟ ಹುಡುಗಿಯಾಗಿದ್ದಾಗ ಸ್ನಾನಕ್ಕೆ ಹೊರಟಳೆಂದರೆ ಸಾಕು, ಸಖಿಯರು ಸುಗಂಧಭರಿತವಾದ ಪನ್ನೀರನ್ನು ಹಿಡಿದು ಬರುತ್ತಿದ್ದರು. ಇವಳೋ ಅವುಗಳನ್ನೆಲ್ಲ ಸಖಿಯರ ಮೇಲೆರಚಿ ಕಿಲಕಿಲನೆ ನಗುತ್ತಿದ್ದಳು. ಸಖಿಯರು ಅಟ್ಟಿಸಿಕೊಂಡು ಬಂದರೆ ಓಡಿಹೋಗಿ ಉದ್ಯಾನವನದ ಕೊಳದಲ್ಲಿ ಜಿಗಿದು ಈಜುತ್ತಾ ತನ್ನ ಸ್ನಾನ ಮುಗಿಯಿತೆಂದು ಎದ್ದುಬರುತ್ತಿದ್ದಳು. ಇವಳನ್ನು ಸಿಂಗರಿಸಲೆಂದು ಬಣ್ಣ ಬಣ್ಣದ ಪ್ರಸಾದನಗಳನ್ನು ಹೊತ್ತು ತಂದರೆ ಅವುಗಳ ಬಟ್ಟಲನ್ನೇ ತಟ್ಟಿಹಾರಿಸಿ, ಬಣ್ಣದ ಓಕುಳಿಯನ್ನೇ ಹರಿಸುತ್ತಿದ್ದಳು. ತಲೆಗೂದಲನ್ನು ಚೆಂದವಾಗಿ ಸಿಂಗರಿಸಿ ಮಲ್ಲಿಗೆಯ ಮಾಲೆಯನ್ನು ಮುಡಿಸಿದರೆ ಕ್ಷಣಮಾತ್ರದಲ್ಲಿ ಅವುಗಳನ್ನೆಲ್ಲ ಕಿತ್ತೆಸೆದು ಗಂಟುಕಟ್ಟುತ್ತಿದ್ದಳು.

ಅವಳ ಲಕ್ಷ್ಯವೆಲ್ಲ ತಾನು ತಂದೆಯಿಂದ ಕಲಿಯಬೇಕಾದ ಬಿಲ್ಲುಗಾರಿಕೆಯ ಹೊಸ ತಂತ್ರಗಳ ಬಗೆಗೆ ಇರುತ್ತಿತ್ತು. ಬಡಪಾಯಿ ದಾಸಿಯರೇನು ಮಾಡಲು ಸಾಧ್ಯ? ಹೆಚ್ಚೆಂದರೆ ರಾಣಿಯಲ್ಲಿಗೆ ಹೋಗಿ ದೂರು ಹೇಳುತ್ತಿದ್ದರಷ್ಟೆ. ರಾಣಿ ಆಗ ಎಲ್ಲ ತಪ್ಪುಗಳನ್ನೂ ಮಹಾರಾಜರ ಮೇಲೆ ಹೊರಿಸುತ್ತಿದ್ದಳು. ಮಗಳನ್ನು ಮಗನಂತೆ ಪಾಲಿಸುತ್ತಿರುವ ಚಿತ್ರವಾಹನ ರಾಜನ ನಡೆ ಅವಳಿಗೆಂದೂ ಹಿಡಿಸುತ್ತಿರಲಿಲ್ಲ.

ಆದರೆ ಮಗನೊಬ್ಬ ಬೇಕೆಂದು ಶಿವನಲ್ಲಿ ಹರಕೆ ಹೊತ್ತಾಗ ಹುಟ್ಟಿದ ಈ ಮಗುವು ತನಗೆ ಮಗನಂತೆ ಎಂಬುದು ಮಹಾರಾಜನ ದೃಢವಾದ ನಂಬಿಕೆಯಾಗಿತ್ತು. ಜೊತೆಯಲ್ಲಿ ತನ್ನ ಮಗಳು ಮಹಾಶೂರನಾದ ಅರ್ಜುನನ್ನು ವರಿಸುವಳು ಎಂಬ ಋಷಿವಾಕ್ಯದ ಬಗೆಗೆ ಅವನಿಗೆ ಇನ್ನಿಲ್ಲದ ಭರವಸೆ. ಹಾಗಾಗಿಯೇ ಚಿತ್ರಾಳಿಗೆ ಹುಡುಗನಂತೆ ತುಂಟಾಟಗಳನ್ನು ಮಾಡಲು, ಉಡುಗೆ ತೊಡುಗೆ ತೊಡಲು ಅಪ್ಪನದೇ ಶಿಫಾರಸ್ಸು.

ಈಗೊಂದು ಕವಲುದಾರಿ ತೆರೆದುಕೊಂಡಿದೆ ಅವಳ ಮುಂದೆ. ತಾನೂ ಎಲ್ಲ ಹೆಣ್ಣುಮಕ್ಕಳಂತೆ ಬಳುಕುವ ಬಳ್ಳಿಯಂತೆ ಸುಕೋಮಲವಾಗಿಬೇಕಿತ್ತು ಎಂದು ಜೀವನದಲ್ಲಿ ಮೊದಲ ಬಾರಿಗೆ ಅನಿಸುತ್ತಿದೆ ಅವಳಿಗೆ. ಬಿಲ್ಲು ಹಿಡಿದು ತನ್ನ ಕೈಗಳಿಷ್ಟು ಒರಟಾಗಬಾರದಿತ್ತು, ಬೇಟೆಯಾಡಿ ತನ್ನ ತೋಳುಗಳಿಷ್ಟು ಬಲಿಷ್ಠವಾಗಬಾರದಿತ್ತು ಎಂದು ಅವಳು ಅಲವತ್ತುಕೊಂಡಳು.

ಅವಳೊಳಗಿನ ಹೆಣ್ಣು ಈಗ ಜಾಗ್ರತಳಾಗಿದ್ದಳು.

ಪಾರ್ಥನ ರೂಪಕ್ಕೆ, ಶೌರ್ಯಕ್ಕೆ ಅವಳು ಮನಸೋತಿದ್ದಳು. ಅವನನ್ನು ಪಡೆಯುವ ಬಗೆಗೆ ಚಿಂತಿಸತೊಡಗಿದಳು. ಎಂದೂ ಸೋತೇ ಗೊತ್ತಿಲ್ಲದ ಅವಳು ತನ್ನ ರೂಪಿನ ಕೊರೆಯಿಂದಾಗಿ ಬಂದ ಸೋಲನ್ನು ಒಪ್ಪಿಕೊಳ್ಳಲು ಖಂಡಿತ ಸಿದ್ಧಳಿರಲಿಲ್ಲ. ಹಾಗಾಗಿ ಅತಿಶಯ ರೂಪನ್ನು ಪಡೆಯಲು ಕಾಮದೇವನಿಗೇ ಮೊರೆಯಿಟ್ಟಳು. ಅವಳ ಬೇಡಿಕೆ ಎದೆಯ ಹಾಡಾಗಿ ಹರಿಯಿತು.

“ಚೆನ್ನಿಗನೆ ನನ್ನೊಲವ ಪತಿಕರಿಸು
ಫಲ್ಗುಣನು ಒಲಿವಂತೆ ಮೈಮನವನಿರಿಸು
ಮದನಾ…ಮದನಾ…. ಮದನಾ…”

ಚಿತ್ರಾಳ ಪ್ರಾರ್ಥನೆಗೆ ಒಲಿದು ಬಂದ ಮದನ, ಹೆಣ್ಣಿಗೆ ಹೆಣ್ಣಾಗುವ ಬಯಕೆಯನ್ನು ಕೇಳಿ ನಸುನಕ್ಕ. ಅವನ ಕೌಶಲತೆಗೊಂದು ಸವಾಲು ಈ ಕೆಲಸ. ಅದಕ್ಕೆಂದೇ ಅವನು ಚಿತ್ರಾಳನ್ನು ಅತಿಶಯ ರೂಪವತಿಯಾಗಿಸಿದ. ಜೊತೆಗೆ ತನ್ನ ಪ್ರಿಯಮಿತ್ರ ವಸಂತನನ್ನೂ ಕರೆತಂದು ಅಲ್ಲೊಂದು ಶೃಂಗಾರದ ಆವರಣವನ್ನೇ ಸೃಷ್ಟಿಸಿದ. ಅಂತಹ ಸುಂದರ ವನದಲ್ಲಿ ಪಾರ್ಥನನ್ನು ಭೇಟಿಯಾದ ಸ್ವಪ್ನಸುಂದರಿ ಚಿತ್ರಾ ಪ್ರೇಮನಿವೇದನೆ ಮಾಡುವ ಮೊದಲೇ ಪಾರ್ಥ ಅವಳಿಗೊಲಿದ. ಚಿತ್ರಾ ಗೆಲುವಿನ ನಗೆ ಬೀರಿ ಪಾರ್ಥನನ್ನು ಸೇರಿದಳು. ಅವರಿಬ್ಬರ ಮಿಲನ ಕಾವ್ಯಕ್ಕೆ ಮಾತ್ರವೇ ದಕ್ಕುವ ಸೌಂದರ್ಯ ಲಹರಿ.

“ಇಳೆಗೆ ಬಂತು ಶೃಂಗಾರ ಮಾಸ
ಹರಿದು ಪ್ರೇಮ ಝಲ್ಲರಿ
ಉಕ್ಕಿಹರಿವ ತೊರೆಯ ತೆರೆದಿ
ಹೊಮ್ಮಿ ಭಾವ ಲಹರಿ
ತೊರೆ ನೊರೆಲದ್ದಿದ
ಚಿಗುರೆಲೆಯ ಮೆದೆಹಾಸಿ
ಹೂವರಾಶಿಯ ಸುರಿಯೆ
ಪವಡಿಸಿದರಲ್ಲಿ
ಚಂದ್ರನಾಚಿ ನಿಂತ
ಮೋಡ ಮರೆಯಾಗೆ
ಸ್ವರ್ಗ-ಮತ್ರ್ಯ, ಕಾಲ-ದೇಶ, ಹರ್ಷ-ಖೇದ
ಜೀವ-ಸಾವೊಂದಾಗಿ ಹರ್ಷೋನ್ಮಾದ ಹರಿಯೆ”

ಇಂಥ ಅತಿಸಾಮಾನ್ಯವಾಗಬಹುದಾದ ಪುರಾಣಕಥೆಯೊಂದು ಗುರುದೇವ ರವೀಂದ್ರನಾಥರ ಮನೋಭಿತ್ತಿಯಲ್ಲಿ ಹೊಸದೊಂದು ಆಯಾಮವನ್ನು ಪಡೆದುಕೊಳ್ಳುತ್ತದೆ.

ಹೀಗೆ ಪಾರ್ಥನೊಂದಿಗೆ ಇರುಳನ್ನು ಕಳೆಯುವ ಚಿತ್ರಾ ಮುಂಜಾನೆಯೆದ್ದು ಸರೋವರದ ದಡದಲ್ಲಿ ನಿಂತು ತನ್ನ ಮುಖವನ್ನು ನೊಡಿದರೆ ಅವಳಿಗಲ್ಲಿ ಅಪರಿಚಿತವಾದ ಮುಖವೊಂದು ಗೋಚರಿಸುತ್ತದೆ. ಅವಳ ನಡೆ, ನುಡಿ ಎಲ್ಲವೂ ಅವಳಿಗೇ ಹೊಸದೆನಿಸುತ್ತದೆ.

ಪಾರ್ಥನನ್ನು ಸೇರುವುದೇ ತನ್ನ ಜೀವನದ ಪರಮೋಚ್ಛ ಗುರಿಯೆಂದು ಹೊರಟವಳಿಗೆ ಪಾರ್ಥನೊಂದಿಗಿನ ಮಿಲನವೂ ಸಂತೋಷವನ್ನು ನೀಡುವುದಿಲ್ಲ. ಪಾರ್ಥ ಮೋಹಿಸುವುದು ತನ್ನ ಮೈಮೇಲಿನ ತೊಗಲಿನ ಹೊದಿಕೆಯನ್ನು ಮಾತ್ರವೇ ಎಂಬ ಸತ್ಯ ಅವಳನ್ನು ವಿಹ್ವಲಗೊಳಿಸುತ್ತದೆ. ತನ್ನ ನಿಜರೂಪದಲ್ಲಿ ಪಡೆಯಲಾಗದ್ದನ್ನು ಈ ಕೃತಕ ಸೌಂದರ್ಯರಾಶಿಯಿಂದ ಪಡೆದೆನೆಂಬ ಪಾಪಪ್ರಜ್ಞೆ ಅವಳನ್ನು ಕಾಡುತ್ತದೆ.

ಇವಕ್ಕೆಲ್ಲ ಇಂಬು ನೀಡುವಂತೆ ಪಾರ್ಥನೂ ತಾನು ಕೇಳಿದ ವೀರೆ ಚಿತ್ರೆಯ ಕಥೆಯನ್ನು ಅವಳಿಗೆ ಹೇಳಿ ತಾನವಳನ್ನು ಒಮ್ಮೆ ನೋಡಬೇಕಿತ್ತು ಎನ್ನುವಾಗ ಅವಳಿಗೆ ನಿಜವಾದ ಸತ್ಯದ ಅರಿವಾಗುತ್ತದೆ. ಅವಳು ತನ್ನ ನೈಜತೆಯನ್ನು ಮರೆಮಾಡುವ ಕೃತಕ ಪರದೆಯನ್ನು ಸರಿಸಲು ದೃಢನಿಶ್ಚಯ ಮಾಡುತ್ತಾಳೆ. ಮತ್ತೆ ಮದನನನ್ನು ಭೇಟಿಯಾಗಿ ತನ್ನ ರೂಪರಾಶಿಯನ್ನು ಮರಳಿ ಧಕ್ಕಿಸಿಕೊಳ್ಳುತ್ತಾಳೆ. ಎಂದಿನಂತೆ ಧನುರ್ಧಾರಿಯಾಗಿ ಬೇಟೆಗೆ ಹೊರಡುತ್ತಾಳೆ.

ಮುಂದಿನ ಕಥೆಯು ಹೀಗೂ ಆಗಿರಬಹುದು.

ರಾಜಕುಮಾರಿ ಚಿತ್ರಾಳ ಸಾಹಸಕಾರ್ಯಗಳ ಬಗ್ಗೆ ಕೇಳಿದ್ದ ಪಾರ್ಥ ಅವಳೊಂದಿಗೆ ತಾನೂ ಮೋಜಿಗೆಂದು ಬೇಟೆಗೆ ಹೊರಟಿರಬಹುದು. ಇಬ್ಬರೂ ಸಹಚರರಾಗಿ ಬೇಟೆಯಲ್ಲಿ, ಬೇಟದಲ್ಲಿ ಬೆರೆತು ಒಂದಾಗಿರಬಹುದು. ಪಾರ್ಥನ ಪ್ರೀತಿಯನ್ನು ನೈಜತೆಯ ನೆಲೆಗಟ್ಟಿನಲ್ಲಿಯೇ ಪಡೆದ ಚಿತ್ರಾಳೆಂಬ ಹಠಮಾರಿ ಹೆಣ್ಣೊಬ್ಬಳ ಕಥೆಯಿದು.

ನಮ್ಮ ಯಕ್ಷಗಾನದಲ್ಲಿ ಬಬ್ರುವಾಹನ ಕಾಳಗವೆಂಬ ಕಥಾನಕದಲ್ಲಿ ಈ ಚಿತ್ರಾಂಗದೆ ಬರುತ್ತಾಳೆ. ಅವಳ ಪ್ರವೇಶವಾದೊಡನೆಯೆ ಸಖಿಯರು ಬಂದು ಪಾರ್ಥ ಅಶ್ವಮೇಧದ ಕುದುರೆಯೊಂದಿಗೆ ಅವಳ ಪಟ್ಟಣಕ್ಕೆ ಬಂದಿರುವ ವಿಷಯವನ್ನು ತಿಳಿಸುತ್ತಾರೆ. ಅಪರೂಪಕ್ಕೆ ಪತಿಯ ಆಗಮನದ ವಾರ್ತೆಯನ್ನು ಕೇಳಿದೊಡನೆಯೆ ಭಾವುಕಳಾಗುವ ಚಿತ್ರಾಂಗದೆ ಅದನ್ನೇ ಪದೇ ಪದೇ ಕೇಳುತ್ತಾ, ವಿರಹದುರಿಯಲ್ಲಿ ತಾನು ಬಳಲಿದೆನೆಂಬುದನ್ನು ವಿವರಿಸುತ್ತಾ, ಶುಭವಾರ್ತೆಯನ್ನು ತಂದ ಸಖಿಯರಿಗೆ ಉಡುಗೊರೆಯನ್ನು ನೀಡಿ, ತನ್ನ ಪತಿಯನ್ನು ಎದುರುನೋಡಲು ಶೃಂಗಾರಗೊಳ್ಳತೊಡಗುತ್ತಾಳೆ.

ತೀರ ವಿಲಂಬಿಸುವ ಈ ದೃಶ್ಯ ಯಾವಾಗ ಮುಗಿಯುವುದೋ ಎಂದು ಕಾಯುವ ನಮಗೆ ಚಿತ್ರೆಯೆಂದರೆ ತೀರ ಸಾಮಾನ್ಯ ಹೆಣ್ಣೊಬ್ಬಳಂತೆ ಕಾಣುತ್ತಿದ್ದಳು. ಅದು ಆ ಅಖ್ಯಾನದ ಅವಶ್ಯಕತೆಯೂ ಹೌದು. ಅಂತಹ ಚಿತ್ರೆಯನ್ನು ಗುರುದೇವ ಕಾಲದ ಅವಶ್ಯಕತೆಗೆ ತಕ್ಕಂತೆ ನಿರ್ವಚಿಸುವ ರೀತಿ ನಿಜಕ್ಕೂ ಅದ್ಭುತವಾಗಿದೆ.

ಹೌದಲ್ಲವೆ? ಇಂದು ನಾವೆಲ್ಲರೂ ಚಿತ್ರೆಯರೇ ಆಗಿದ್ದೇವೆ.

ಬಂಡವಾಳಶಾಹಿಯೆಂಬ ಬಿರುಗಾಳಿ ನಮ್ಮೆದುರು ಆಸೆಗಳ ಪಾಶವನ್ನು ಬೀಸಿ, ಅದರ ಈಡೇರಿಕೆಗೆ ವಿವಿಧ ಆಮಿಷಗಳನ್ನು ನಮ್ಮೆದುರು ತೆರೆದಿಡುತ್ತಿದೆ. ಅದು ಮಿಥ್ಯೆಯೆಂಬ ಅರಿವು ನಮ್ಮನ್ನು ಸೋಕದಂತೆ ಪರದೆಯನ್ನು ಕಟ್ಟಿದೆ. ನಮ್ಮ ಕೂದಲಿನ ವಿನ್ಯಾಸವನ್ನೆ ನೋಡಿ. ಗುಂಗುರು ಕೂದಲು ಮತ್ತು ಸುರುಳಿಗೂದಲಿನ ಜೀನ್‍ಗಳಲ್ಲಿ ಗುಂಗುರುಗೂದಲಿನ ಕಣದ್ದೇ ಮೇಲುಗೈ. ಹಾಗಾಗಿ ಅಪ್ಪ ಅಮ್ಮಂದಿರಲ್ಲಿ ಯಾರೊಬ್ಬರದು ಗುಂಗುರು ಕೂದಲಾದರೂ ಮಕ್ಕಳದು ಹಾಗೆಯೇ ಇರುತ್ತದೆ. ಇದರಿಂದಾಗಿಯೇ ನಮ್ಮ ದೇಶದಲ್ಲಿ ದಟ್ಟಗಪ್ಪಾದ ಗುಂಗುರುಗೂದಲು ಹೊಂದಿರುವವರೇ ಹೆಚ್ಚು. ಮತ್ತದು ನಮ್ಮಲ್ಲಿ ಸೌಂದರ್ಯದ ಲಕ್ಷಣವಾಗಿತ್ತು ಕೂಡ.

ಆದರೆ ಈಗ ಮಾಧ್ಯಮಗಳಲ್ಲಿ ಅದನ್ನೊಂದು ಕೊರೆಯೆಂಬಂತೆ ತೋರಿಸಿ, ಕೂದಲು ನೇರವಾಗಿ, ಅಲೆಅಲೆಯಾಗಿ ಚಿಮ್ಮುವಂತೆ ಕಾಣುವುದನ್ನೇ ಸೌಂದರ್ಯವೆಂಬಂತೆ ಬಿಂಬಿಸುತ್ತಾರೆ. ಇದನ್ನೇ ಕೇಳಿ, ನೋಡಿ ನಮಗೀಗ ಸೌಂದರ್ಯವೆಂದರೆ ಎಳೆಎಳೆಯಾಗಿ ಜಾರುವ ಹೊಂಬಣ್ಣದ ಕೂದಲು ಎಂಬಂತಾಗಿದೆ.

ಮೈಕೈ ತುಂಬಿಕೊಂಡು ಕಳೆಕಳೆಯಾಗಿದ್ದರೆ ಚೆಂದ ಎಂಬುದು ಹಿಂದಿನ ನಂಬಿಕೆ. ನಮ್ಮ ಪರಿಸರ, ಅಹಾರ ಕ್ರಮಕ್ಕೆ ಅದು ಉಚಿತ ಕೂಡ. ಬಿಳಿಚಿಕೊಂಡು ಹೆಂಚುಕಡ್ಡಿಯಂತಿದ್ದರೆ ‘ಬಿಳಿ ಜಿರಲೆ’ ಎಂದು ಲೇವಡಿ ಮಾಡುವುದು ಹೋಗಿ, ‘ಝೀರೋ ಸೈಜ್’ ಎಂಬ ಹೊಸ ಸೌಂದರ್ಯದ ಪರಿಕಲ್ಪನೆ ಇಂದು ಬಂದಿದೆ.

ಹೇಳಿ ಕೇಳಿ ಗೌರವರ್ಣದವರ ನಾಡು ನಮ್ಮದು. ನಮ್ಮ ಅತಿಸುಂದರಿಯರಾದ ದ್ರೌಪದಿ, ಅಹಲ್ಯಾ, ರಾಧಾ… ಎಲ್ಲರೂ ಗೌರವರ್ಣದವರೆ. ಚೆಂದದ ಗೊಂಬೆಯೆಂದು ಹೆಸರಾದ ಕೃಷ್ಣನ ಹೆಸರಿನಲ್ಲೇ ಕಪ್ಪು ಬಣ್ಣವಿದೆ. ಆದರೆ ಇಂದು ಬಿಳಿಮಾತ್ರವೇ ಸೌಂದರ್ಯ ಎನ್ನುತ್ತವೆ ಜಾಹೀರಾತುಗಳು.

ಇವೆಲ್ಲವೂ ಕೆಲವೇ ಕೆಲವು ಉದಾಹರಣೆಗಳಷ್ಟೆ. ಬೇಡಿದ ವರನೀಡುವ ಕಾಮದೇವನಂತೆ ಎಲ್ಲ ಸೌಂದರ್ಯಸಾಧನಗಳನ್ನು ಮಾರಾಟಶಾಹಿ ನಾಗರೀಕತೆ ನಮ್ಮೆದುರು ತೆರೆದಿಟ್ಟಿದೆ. ನಾವೂ ನಮ್ಮೆದುರಿಗಿರುವ ಪಾರ್ಥರನ್ನೋ, ಪಾರ್ಥ ಸೋದರಿಯರನ್ನೋ ಅಥವಾ ಇನ್ಯಾರನ್ನೋ ಮೆಚ್ಚಿಸಲು ಇವೆಲ್ಲವುಗಳ ಪರದೆಯನ್ನು ಧರಿಸುತ್ತಲೇ ಇದ್ದೇವೆ. ಸೌಂದರ್ಯ ನಮ್ಮೊಳಗಿನ ಅಭಿವ್ಯಕ್ತಿ ಎಂಬ ಸತ್ಯವನ್ನು ಇವೆಲ್ಲವೂ ಮರೆಮಾಚುತ್ತಿವೆಯೆಂಬುದನ್ನು ಮರೆತಿದ್ದೇವೆ.

ಈ ಪರದೆ ಕೇವಲ ಸೌಂದರ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇದು ನಮ್ಮ ಸುತ್ತಲೂ ಮಹಿಳೆಯರು ಎಳೆದುಕೊಳ್ಳುತ್ತಿರುವ ಮಿತಿಗಳ ಹೊದಿಕೆಯೂ ಹೌದು. ಸಮಾಜವಿಧಿತವಾದ ನಿಯಮಗಳ ಪರದೆಯೂ ಹೌದು.

ಇವೆಲ್ಲವನ್ನೂ ಸರಿಸುವುದು ಸುಲಭವೇನಲ್ಲ

ಬೇಡವೆಂದಾಗ ಮರಳಿ ಪಡೆಯುವ ಕಾಮದೇವನಷ್ಟು ಕರುಣೆಯೂ ಈ ಮಾರುಕಟ್ಟೆ ಮತ್ತು ಸಮಾಜಕ್ಕಿಲ್ಲ. ಆದರೆ ನಮ್ಮೊಳಗಿನ ನಮ್ಮನ್ನು ಕಂಡುಕೊಳ್ಳಲು, ನಮ್ಮ ನೈಜತೆಯ ತಳಪಾಯದ ಮೇಲೆ ನಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಕಷ್ಟವಾದರೂ ಸರಿಯೆ. ನಾವು ಹೊರಗಿನ ಪರದೆಯನ್ನು ಕಳಚಲೇಬೇಕು. ಸೌಂದರ್ಯದ ಎಲ್ಲ ಕೃತಕ ಪರದೆಗಳನ್ನು ಸರಿಸಿ, ನೈಜತೆಯೇ ಸೌಂದರ್ಯವೆಂಬುದನ್ನು ಸಾರಲೇಬೇಕು. ಬೇರೆಯವರ ವ್ಯಾಖ್ಯಾನ ನಮ್ಮ ಬದುಕನ್ನು ನಿರ್ಧರಿಸದಂತೆ ಪ್ರತಿರೋಧಿಸಲೇಕು. ಆಗ ಮಾತ್ರ ನಿಜವಾದ ಜೀವನಪ್ರೀತಿ ದಕ್ಕುವುದು.

ಅದನ್ನೇ ರವೀಂದ್ರರ ಚಿತ್ರಾ ಮದನನಿಗೆ ಹೀಗೆ ಹೇಳುತ್ತಾಳೆ.

“ಪ್ರೇಮವು ಸತ್ಯದ ನೆಲೆಯಲ್ಲಿಯೇ ನಿಲುಕಬೇಕಲ್ಲವೆ?
ಜೀವನ ನಿಜದ ಸೌಧದ ಮೇಲೆಯೇ ನಿಲ್ಲಬೇಕಲ್ಲವೆ?
ಈ ಕೃತಕ ರೂಪ ನನ್ನನ್ನು ಚುಚ್ಚುತ್ತಿದೆ.
ಸತ್ಯಕ್ಕೆ ದಕ್ಕದ ಪ್ರೇಮವನ್ನು ನಿರಾಕರಿಸುವ ಶಕ್ತಿಯನ್ನು ನನಗೆ ಕೊಡು.
ಬಾಹ್ಯವನ್ನು ಮೀರಿದ ಆಕರ್ಷಣೆಯನ್ನು ಮಾತ್ರವೇ ನನ್ನೆದುರು ತೆರೆದಿಡು.
ನನ್ನನ್ನು ನಾನಾಗಿಯೇ ಇರಲು ಬಿಡು.
ಈ ಕೃತಕ ಸೌದರ್ಯದ ತೆರೆಯನ್ನು ಸರಿಸಿಬಿಡು.”

‍ಲೇಖಕರು Avadhi

July 13, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: