ಪ. ಗೋ ಪ್ರಪಂಚ
ಪತ್ರಕರ್ತನೊಬ್ಬ ಹೇಗಿರಬೇಕು

ಡಾ ಚಂದ್ರಶೇಖರ ದಾಮ್ಲೆ
ಸ್ವತಂತ್ರ ಭಾರತದ ಜಾತ್ಯಾತೀತ ನಿಲುವನ್ನು ಬದುಕಿನಲ್ಲಿ ಆವಾಹಿಸಿಕೊಂಡ ಒಬ್ಬ ಪತ್ರಕರ್ತನ ಉದಾಹರಣೆ ಬೇಕೆಂದರೆ ಈ ಕೃತಿಯನ್ನು ಓದಬೇಕು ಜಾತ್ಯಾತೀತತೆಯ ಸರಳ ಸುಲಭ ಪ್ರಾಯೋಗಿಕ ಮಾದರಿ ಇಲ್ಲಿದೆ ಈ ಕೃತಿಯ ಲೇಖಕ ಚಿದಂಬರ ಬೈಕಂಪಾಡಿಯವರು ತಾನು ಆಯ್ದುಕೊಂಡ ಪತ್ರಕರ್ತ ವೃತ್ತಿಯ ಕಾರಣದಿಂದಾಗಿ ಸಂಧಿಸಿದ ಪದ್ಯಾಣ ಗೋಪಾಲಕೃಷ್ಣರು ಶಕ್ತ ಚಿಂತಕರಾಗಿ ಮುಕ್ತ ಮನಸ್ಸಿನವರಾಗಿ ರಿಕ್ತ ಸ್ವಭಾವದವರಾಗಿ ಹೇಗೆ ಪ್ರಭಾವಿಸಿದರು ಎಂಬುದು ಇಲ್ಲಿ ಹೃದ್ಯವಾಗಿ ದಾಖಲಾಗಿದೆ.
ಪತ್ರಕರ್ತನೊಬ್ಬ ಹೇಗಿರಬೇಕೆಂಬುದಕ್ಕೆ ಪ.ಗೋರವರ ಬದುಕೇ ಒಂದು ಪಾಠವಾಗಿದೆ ರೆಕ್ಕೆ ಬಲಿತ ಮೇಲೆ ಗೂಡಿನಿಂದ ಹೊರಗೆ ಹಾರಿ ಸ್ವಂತ ಗೂಡು ಕಟ್ಟಿಕೊಂಡು ಸಂಸಾರ ಮಾಡಿ ಮರಿಗಳನ್ನು ಮತ್ತೆ ಹಾರಲು ಬಿಟ್ಟ ಹಕ್ಕಿಯ ಬದುಕಿನ ನಿಸರ್ಗ ನಿಯಮದಂತೆ ಬದುಕಿದರು ಅವರ ಪ್ರಕಾರ ಪತ್ರಕರ್ತರು ಹಿನ್ನೆಲೆಯಲ್ಲಿರಬೇಕು ಆಮಿಶಗಳಿಗೆ ಬಲಿಯಾಗಬಾರದು ಜನರಿಗೆ ಸತ್ಯವಾದ ವಾರ್ತೆ ಸಿಗುವಂತೆ ಬರೆಯಬೇಕು ವ್ಯಾಖ್ಯಾನಿಸಬಾರದು ಸುದ್ದಿಯನ್ನು ಕ್ರಿಏಟ್ ಮಾಡಬಾರದು ಹಾಗೆಯೇ ಮುಚ್ಚಿಯೂ ಹಾಕಬಾರದು
ಭಾಷೆ ಸರಳವಾಗಿ ನೇರ ಇರಬೇಕು ಉದಾಹರಣೆಗೆ ಕನ್ನಡ ಪತ್ರಿಕೆಗಳಲ್ಲಿ ಅಮೇಧ್ಯ ಪ್ರಾಶನ ಮಾಡಿಸಿದರು ಎಂತ ಪ್ರಕಟವಾಗಿದ್ದನ್ನು ಟೀಕಿಸಿ ಅದನ್ನು ನೇರವಾಗಿ ಮಲ ತಿನ್ನಿಸಿದರು ಎಂತ ಬರೆಯುವುದಕ್ಕೇನಾಗಿತ್ತು ಎಂತ ಪ್ರಶ್ನಿಸಿದ್ದರು ಇಂತಹ ಪ.ಗೋ ರವರ ಅನೇಕ ಚಿಂತನೆಗಳನ್ನು ಲೇಖಕರು ಸಂದರ್ಭ ಸಹಿತ ವಿವರಿಸಿದ್ದಾರೆ.
ಭಟ್ಟ ಎಂಬ ಜಾತಿ ವಾಚಕವನ್ನು ಬಿಟ್ಟು ತನ್ನ ಗುರುತನ್ನು ಛಾಪಿಸಿದ ಪ.ಗೋ ರವರು ಪೆನ್ನು ನೋಟ್ಸ್ ಬುಕ್ ಹಿಡಿದುಕೊಂಡು ಸ್ವಾಮಿಗಳಿಗೂ ಸಲಾಂ ಹಾಕಿದವರಲ್ಲ ಹಾಗೆ ಮಾಡಿದರೆ ವೃತ್ತಿ ಯೂ ಅಡ್ಡ ಬೀಳುತ್ತದೆ ಎಂಬುದು ಅವರ ತರ್ಕ ಅಹಂಕಾರವಲ್ಲದ ಸ್ವಾಭಿಮಾನ ಸತ್ಯ ನ್ಯಾಯಗಳಿಗಾಗಿ ಸಿಟ್ಟು ಹಾಗೂ ಕದಲಿಸಲಾಗದ ವೃತ್ತಿ ನಿಷ್ಟೆ ಇದ್ದುದರಿಂದ ರಾಜಕಾರಣಿಗಳೂ ಅಧಿಕಾರಿಗಳೂ ಇವರೆಂದರೆ ಹೆದರುವಂತೆ ಇದ್ದರು ಅವರಿಗೆ ಪ್ರಭಾವ ಇದ್ದರೂ ಎಲ್ಲಿಯೂ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ ಪಕ್ಷ ಜಾತಿ ಧರ್ಮಗಳ ಸಂಕೀರ್ಣ ಸಂಕೋಲೆಗೆ ಸಿಲುಕದೆ ಸಮಾನತೆ ಮತ್ತು ಸ್ವಾವಲಂಬನೆಯ ಗೀಳಿನಲ್ಲಿ ಪೆನ್ಶನ್ ಗಾಗಿ ಅರ್ಜಿಯನ್ನೂ ಹಾಕದ ಪ.ಗೋ ರವರ ಸ್ವಂತ ಪತ್ರಿಕೆ ಸಿನೆಮಾ ನಟನೆ ತುಳು ಚಿತ್ರ ನಿರ್ಮಾಣ ಮುಂತಾದ ವಿಫಲ ಸಾಧನೆಗಳನ್ನೂ ಲೇಖಕರು ಗುರುತಿಸಿದ್ದಾರೆ
ವರದಿಗಾರಿಕೆಯೆಂದರೆ ಗುಮಾಸ್ತಗಿರಿ ಅಲ್ಲ ಎನ್ನುತ್ತಿದ್ದ ಅವರು ಸೃಜನಶೀಲ ಲೇಖಕರೂ ಚಿತ್ರಕಾರರೂ ಆಗಿದ್ದು ಯಕ್ಷಗಾನವನ್ನು ಸೀಮೋಲ್ಲಂಘನ ಮಾಡಿಸಿದ ಸಂಘಟಕ ಎಂಬ ವಿವರಗಳು ಮುಖ್ಯವೆನಿಸುತ್ತವೆ ಮನೆಯಲ್ಲಿ ಇಚ್ಛೆಯನರಿತು ಸಹಕರಿಸುವ ಸತಿ ಸಾವಿತ್ರಿಯಮ್ಮ ಇದ್ದುದು ಪ.ಗೋ ರವರ ಸಾಧನೆಯ ರಹಸ್ಯವೆಂಬುದನ್ನು ಲೇಖಕರು ಹೇಳದೇ ಶ್ರುತಪಡಿಸಿದ್ದಾರೆ ಆದರೆ ತನ್ನ ಮಕ್ಕಳಿಗಾಗಿ ಏನಾದರೂ ಮಾಡಿದ್ದಾರೆಯೇ ಎಂಬ ಇಲ್ಲದ ಸಂಗತಿಯನ್ನು ಅವರು ಹೇಳಲೇ ಇಲ್ಲ
ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬದುಕನ್ನು ಇಷ್ಟೊಂದು ಗಾಢವಾಗಿ ಚಿತ್ರಿಸಲು ಸಾಧ್ಯವಾದುದಕ್ಕೆ ಪ.ಗೋರವರು ಚಿದಂಬರರ ಜಾತಿ ನೋಡದೆ ಭೇದ ಮಾಡದೆ ಮನೆಯೊಳಗೂ ಬೆಳೆಯಲು ಅವಕಾಶ ನೀಡಿದ್ದೇ ಆಗಿದೆ ಇಲ್ಲವಾದರೆ ಇಂತಹ ಒಂದು ಕೃತಿ ರೂಪುಗೊಳ್ಳುವುದು ಅಸಾಧ್ಯವಿತ್ತು ಅಂದರೆ ಕೃತಿಯ ಉತ್ಪನ್ನದ ಹಿಂದೆ ಬದುಕಿದ ಪರಿಯೂ ಇತ್ತೆನ್ನುವುದಕ್ಕೆ ಇದು ಸಾಕ್ಷಿ
ಹೀಗೆ ಇದೊಂದು ಜೀವನ ಚರಿತ್ರೆ ಅಲ್ಲವೆಂದರೂ ಇದರಲ್ಲಿ ಚರಿತ್ರೆ ಇದೆ ನಿಷ್ಪಕ್ಷಪಾತಿಕ ವಿಮರ್ಶೆ ಎಂದರೂ ಭಾವುಕತೆ ಇದೆ ಪತ್ರಿಕಾವಲಯಕ್ಕೆ ಸೀಮಿತವೆಂದರೂ ಜಗತ್ತಿನ ಚಿತ್ರಣದ ವಿಸ್ತಾರವಿದೆ ಖಾಸಗಿ ಸಂಬಂಧಗಳ ಆಖ್ಯಾನವೆಂದರೂ ಸಾಮಾಜಿಕ ಚಿಂತನೆಯ ವಿವರಗಳಿವೆ ಇದಕ್ಕೆ ಕಾರಣ ಪ.ಗೋರವರ ವ್ಯಕ್ತಿತ್ವ ಅವರು ಕಣ್ಣಿಗೆ ಕಾಣುವ ಬಿಂಬಕ್ಕಿಂತ ಹೆಚ್ಚಿನ ಪ್ರಭಾವಳಿ ಹೊಂದಿದ್ದರು ಚಿದಂಬರರು ಅದನ್ನು ತನ್ನ ಸರಳ ಶೈಲಿಯಲ್ಲಿ ನೇರಾನೇರ ಹೇಳಿದ್ದರಿಂದ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ
ಈ ಕೃತಿಗೆ ಅರ್ಥಪೂರ್ಣವಾದ ಮುನ್ನುಡಿಯನ್ನು ತೆರೆದ ಮನಸ್ಸಿನಿಂದ ಪ್ರೊ ಸುಧೀಂದ್ರ ಹಾಲ್ದೊಡ್ಡೇರಿಯವರು ಬರೆದಿದ್ದಾರೆ ಚಿತ್ರಕಲಾವಿದ ಹರಿಶ್ಚಂದ್ರ ಶೆಟ್ಟಿಯವರ ಸುಂದರವಾದ ರೇಖಾ ಚಿತ್ರಗಳು ಹಾಗೂ ಫೋಟೋಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ ಸಂಗ್ರಹ ಯೋಗ್ಯವಾದ ಈ ಕೃತಿ ಸ್ವಾತಂತ್ರ್ಯೋತ್ತರ ಕಾಲದ ಒಂದು ಚಿತ್ರಣವಾಗಿಯೂ ಉಪಯುಕ್ತವಾಗಿದೆ




0 Comments