ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಡ್ಡಾಯಿ ಕಟ್ಟಿದ ಕಥೆ- ಉಳಿ ಪೆಟ್ಟಿಗೆ ಸಿದ್ಧಗೊಂಡ ವಜ್ರ ಪಡ್ಡಾಯಿ

ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.

ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.

ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.

 

ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-

ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

| ನಿನ್ನೆಯಿಂದ |

9

ಸಮುದ್ರದಲ್ಲಿ ಸಾಕಷ್ಟು ದೂರ ಸಾಗಿದ ಮೇಲೆ ಪರಸ್ಪರ ವಾಕಿ ಟಾಕಿ ಮೂಲಕ ಮಾತನಾಡಿ, ಜಿ.ಪಿ.ಎಸ್ ಮೂಲಕ ನಿಖರ ಸ್ಥಳವನ್ನು ತಿಳಿದುಕೊಂಡು ನಮ್ಮೆರಡೂ ದೋಣಿಗಳು ಸೇರಿದವು. ಇಡೀ ತಂಡ ಮೀನು ಹಿಡಿಯುವ ಮುಖ್ಯ ದೋಣಿಯನ್ನೇರಿದೆವು. ಅಷ್ಟರಲ್ಲಾಗಲೇ ಮೀನುಗಾರರ ತಂಡ ಕಣ್ಣುಗಳನ್ನು ಸಮುದ್ರದ ಮೈಗೆ ನೆಟ್ಟು, ಮೀನಿಗಾಗಿ ಹುಡುಕಾಟ ನಡೆಸಿದ್ದವು. ಸಮುದ್ರದೊಳಗಣ ಮೀನು, ಮೇಲಿಂದ ಕಾಣುವುದೇ ಎನ್ನುವ ಸಂಶಯ ನನಗೆ.

ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿ (ಸೋನಾರ್), ಸಮುದ್ರದ ಆಳದಲ್ಲಿರುವ ಮೀನನ್ನೂ ನೋಡಲಾಗುತ್ತದೆ. ಆದರೆ, ನಾವಿದ್ದ ದೋಣಿ, ಅಂಥಾ ಮೀನುಗಳನ್ನು ಹುಡುಕುತ್ತಿರಲಿಲ್ಲ. ಸಮುದ್ರದ ಮೇಲೆ ನೀರೇ ಕುದಿಯುವಂತೆ ಮೀನುಗಳ ಗುಂಪು ಕಾಣಿಸುತ್ತಿದ್ದವು.

ನಮ್ಮ ದೋಣಿಯ ತಂಡೇಲ ಒಂದು ದಿಕ್ಕಿಗೆ ಕೈ ತೋರಿದ. ಚಲಿಸುತ್ತಿರುವ ನಮ್ಮ ದೋಣಿಗೆ ಎಡಕ್ಕೆ ಸ್ವಲ್ಪ ದೂರದಲ್ಲಿ, ಸಮುದ್ರದ ಮೈಯ್ಯಲ್ಲಿ ನಡೆದೇ ಹೋಗುತ್ತಿವೆಯೇ ಎನ್ನುವಂತೆ ಒಂದು ದೊಡ್ಡ ಗುಂಪು ಮೀನುಗಳು ಕಾಣುತ್ತಿದ್ದವು. ‘ಮೀನಿನ ಹೆಜ್ಜೆ’ ಎನ್ನುವ ರೂಪಕ ಇದರಿಂದಲೇ ಹುಟ್ಟಿತೇನೋ ಎಂದು ಅನ್ನಿಸಿತು ನನಗೆ. ಆದರೆ ನಮ್ಮ ತಂಡೇಲನಿಗೆ ಈ ಮೀನಿನ ತಂಡ ಸಣ್ಣದೆಂದೂ, ನಮ್ಮ ದೋಣಿಯ ವೇಗಕ್ಕೆ ಅದನ್ನು ಹಿಡಿಯುವುದು ಕಷ್ಟ ಎಂದೂ ಅನ್ನಿಸಿ ಅದನ್ನು ಬಿಟ್ಟರು.

ಆದರೆ ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು, ಮೊದಲಿನದ್ದಕ್ಕಿಂತ ದೊಡ್ಡ ಮೀನಿನ ತಂಡ ಕಾಣಿಸಿತು. ನಮ್ಮ ಕ್ಯಾಮರಾ ಸಾಕಷ್ಟು ಚುರುಕಾಗಿ ಅಗತ್ಯ ದೃಶ್ಯಗಳನ್ನು ದಾಖಲಿಸಲಾರಂಭಿಸಿತ್ತು. ತಂಡೇಲ, ಆರ್ಯಾ ಎಂದೇ ಬಿಟ್ಟ. ನಮ್ಮ ದೊಡ್ಡ ದೋಣಿ ಈವರೆಗೆ ಎಳೆದು ತರುತ್ತಿದ್ದ ಪುಟಾಣಿ ದೋಣಿಗೆ ಜಿಗಿದ ಇಬ್ಬರು ಬಲೆಯ ಒಂದು ತುದಿಯನ್ನು ಹಿಡಿದುಕೊಂಡರು. ಉಳಿದಂತೆ ನಮ್ಮ ದೊಡ್ಡ ದೋಣಿ ಮೀನಿನ ತಂಡದ ಅರಿವಿಗೆ ಬಾರದಂತೆ ನಿಧಾನಕ್ಕೆ ಅದನ್ನು ಸುತ್ತುವರೆದು ಬಂತು.

ಹೀಗೆ ಸುತ್ತುವಾಗ ದೋಣಿಯ ಒಂದು ಮಗ್ಗುಲಲ್ಲಿ ಇದ್ದ ಬಲೆ ಸರಾಗವಾಗಿ ಸಾಗರಕ್ಕಿಳಿದು ಮೀನುಗಳನ್ನು ಸುತ್ತುವರೆದದ್ದಾಗಿತ್ತು. ಸಮುದ್ರಕ್ಕೆ ಇಳಿದ ಬಲೆಯನ್ನು ವೃತ್ತಾಕಾರದಲ್ಲಿ ಜೋಡಿಸಿಕೊಂಡು, ಬುಟ್ಟಿಯಂತೆ ಮಾಡಿಕೊಳ್ಳಲಾಯಿತು. ಈ ಪ್ರಕ್ರಿಯೆ ಸುಮಾರು ಹದಿನೈದು ನಿಮಿಷದಲ್ಲೇ ಪೂರ್ಣವಾಯಿತು. ಹೀಗೆ ಮೀನಿಗೆ ನಾವು ಹಾಕಿದ ಸುತ್ತು ಸುಮಾರು ಅರ್ಧ ಕಿಲೋಮೀಟರ್‌ನಷ್ಟು ದೊಡ್ಡ ವೃತ್ತ! ಆಮೇಲೆ ಆರಂಭವಾದದ್ದು, ಈ ಬಲೆಯನ್ನು ಎಳೆಯುವ ಪ್ರಕ್ರಿಯೆ.

ದೋಣಿಯಲ್ಲಿದ್ದ ಇಪ್ಪತ್ತು ಜನರು ಅಪಾರ ಶ್ರಮ ವಹಿಸಿ ಈ ಬಲೆಯನ್ನು ಎಳೆಯಲು ಆರಂಭಿಸಿದರು. ಇವರಿಗೆ ಉತ್ಸಾಹ ತುಂಬಿಸಲು, ದೋಣಿಯಲ್ಲಿ ಜೋಡಿಸಿದ್ದ ಧ್ವನಿವರ್ಧಕ ‘ಆವೋರೆ ಆವೋ ಬಾಹುಬಲಿ’ ಎಂದು ಬಾಹುಬಲಿ ಚಿತ್ರದ ಹಾಡನ್ನು ಚೀರಿಕೊಳ್ಳಲಾರಂಭಿಸಿತ್ತು. ಈ ರಣಭೇರಿಯ ಸದ್ದಿನೊಂದಿಗೆ, ಬಲೆಯ ಸುತ್ತಳತೆ ಕಡಿಮೆಯಾಗುತ್ತಿದ್ದಂತೆ, ಮೀನುಗಾರರ ಉತ್ಸಾಹ ಹೆಚ್ಚುತ್ತಿದ್ದಂತೆ, ಸಮುದ್ರದಲ್ಲಿ ಬೇರೆಯೇ ಯುದ್ಧ ನಡೆಯುತ್ತಿತ್ತು. ಬಲೆಯ ಪರಿಧಿ ಅರ್ಥವಾಗದೇ, ತಾವು ಬಲೆಯಲ್ಲಿ ಇದ್ದೇವೆಂದು ತಿಳಿದುಕೊಂಡು, ಹಾರಿ ತಪ್ಪಿಸಿಕೊಳ್ಳುತ್ತಿದ್ದೇವೆಂದು ಭಾವಿಸಿ ಕೆಲವು ಮೀನು ಬಲೆಯೊಳಗೆ ಜಿಗಿದು ಬಂದರೆ, ಇನ್ನು ಕೆಲವು ನಿಜಕ್ಕೂ ಜಿಗಿದು ಹೊರಕ್ಕೆ ಹೋಗುತ್ತಿದ್ದವು.

ಈ ಯುದ್ಧ, ಶೇಕ್ಸ್‍ಪಿಯರ್ ಕವಿಯ ವಿವರಣೆಗಳಲ್ಲಿ ಕಾಣುವ ಯಾವುದೇ ಯುದ್ಧಕ್ಕೂ ಕಡಿಮೆಯಿಲ್ಲದಂತೆ ನಡೆಯುತ್ತಿತ್ತು. ಸುತ್ತಲೂ ಆಗುತ್ತಿರುವ ಗೊಂದಲದಲ್ಲೂ, ತಮಗೇನೂ ಆಗುವುದಿಲ್ಲ ಎನ್ನುವಂತೆ ನಿರಾಳವಾಗಿದ್ದ ಕೆಲವು ಮೀನುಗಳು, ಗಾಳಿ ಸುದ್ದಿ ಕೇಳಿ ಗಾಬರಿಗೊಳ್ಳುವ ಬಲೆಯಾಚಿನ ಮೀನುಗಳು, ಬಲೆಯನ್ನೇ ತುಂಡರಿಸಿಕೊಂಡು ಹೋಗುತ್ತೇವೆ ಎಂದು ನಂಬಿದ್ದ ಹುಂಬ ಮೀನುಗಳು, ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಂಬಿ, ಬಲೆಯನ್ನು ನೂಕುತ್ತಿದ್ದ ಗುಂಪು ಮೀನುಗಳು, ಬಲೆಯಾಚಿನಿಂದ ಬಲೆಯೊಳಗಿನ ನಾಟಕ ನೋಡಿ ಮರುಕಪಡುತ್ತಿದ್ದ ಮೀನುಗಳು, ಹೀಗೆ ಯುದ್ಧ ಸಮಯದ ದೇಶವನ್ನೇ ನೆನಪಿಸುವಂತಿತ್ತು ಅಲ್ಲಿನ ಪರಿಸ್ಥಿತಿ.

ಈ ರುದ್ರ ಸೌಂದರ್ಯಕ್ಕೆ ಮರುಳಾಗಿ ಮೈಮರೆಯದಿರುವಂತೆ ನಮ್ಮ ಕರ್ತವ್ಯ ನಮ್ಮನ್ನು ಎಚ್ಚರಿಸುತ್ತಿತ್ತು. ಅಗತ್ಯ ಶಾಟ್‌ಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾ ಸಾಗಿದೆವು. ಮೋಹನ ಶೇಣಿ ಹಾಗೂ ಚಂದ್ರಹಾಸ್ ಉಳ್ಳಾಲರು ಈಗಾಗಲೇ ತಮ್ಮ ಪಾತ್ರಗಳಲ್ಲಿ ಪಳಗಿದ್ದರಿಂದ ಅವರಿಗೆ ಸನ್ನಿವೇಶಗಳನ್ನು ಹೇಳುತ್ತಿದ್ದಂತೆಯೇ, ಸರಳವಾಗಿ, ಸಹಜವಾಗಿ ಅಭಿನಯಿಸುತ್ತಾ ಸಾಗಿದರು. ಮೀನುಗಾರರೊಂದಿಗೆ ಸೇರಿ ಮೀನು ಹಿಡಿಯಲು ಸಹಾಯ ಮಾಡುತ್ತಾ, ನಡುವಿನ ಸಮಯದಲ್ಲಿ ಬುತ್ತಿಕಟ್ಟಿ ತಂದಿದ್ದ ಬ್ರೆಡ್ಡು, ಜಾಮು ನುಂಗುತ್ತಾ, ಸುಮಾರು ಮೂರು ಗಂಟೆಯ ಮೊದಲ ಬೇಟೆ ಮುಗಿಯುವಷ್ಟರಲ್ಲಿ ನಮ್ಮ ಪ್ರಮುಖ ದೃಶ್ಯಗಳ ಚಿತ್ರೀಕರಣವೂ ಮುಗಿಯಿತು.

ಹಿಡಿದ ಮೀನುಗಳನ್ನೆಲ್ಲಾ ಜೊತೆಗೆ ಬಂದ ದೋಣಿಗೆ ದಾಟಿಸಲಾಯಿತು. ನಮ್ಮ ಚಿತ್ರೀಕರಣವೂ ಮುಗಿದಿದ್ದರಿಂದ, ನಾವೂ ಮರಳಿ ಹೋಗಲಿರುವ ದೋಣಿಗೆ ದಾಟಿಕೊಂಡೆವು. ಮೀನು ತುಂಬಿದ ದೋಣಿಯಲ್ಲಿ, ಅವಿಸ್ಮರಣೀಯ ಅನುಭವ ತುಂಬಿಕೊಂಡ ನಾವು ದಡದ ಕಡೆಗೆ ಹೊರಟೆವು. ದೋಣಿಯಲ್ಲಿ ಹಿಡಿದ ತಾಜಾ ಮೀನನ್ನು ಒಬ್ಬ ಮೀನುಗಾರ ಕತ್ತರಿಸಿ, ಶುಚಿಗೊಳಿಸುತ್ತಿದ್ದ. ಬೆಳಗ್ಗೆ ಧ್ಯಾನಕ್ಕೆ ಕುಳಿತಿದ್ದ ಅಕ್ಕಿ, ಬಹುತೇಕ ಅನ್ನವಾಗುತ್ತಾ ಬಂದಿತ್ತು.

ನಾವು ದಡ ತಲುಪಿದಾಗ, ಮೀನುಗಾರರು, ನಮ್ಮ ಪ್ರಯಾಣವನ್ನು ಇನ್ನಷ್ಟು ಸವಿಯುವಂತೆ ಮಾಡಲು, ಅಷ್ಟುದ್ದದ ಕಾಂಡೈ ಮೀನನ್ನು ಮೋಹನನಿಗೂ ಚಂದ್ರಹಾಸರಿಗೂ ಉಡುಗೊರೆಯಾಗಿ ಕೊಟ್ಟರು. ಮುಂದಿನ ದಿನಗಳಲ್ಲಿ ಅವರವರ ಮನೆಯಲ್ಲಿ ಆ ಮೀನು ಕಾಣೆಯಾದದ್ದು ಇಬ್ಬರ ಬಾಯಲ್ಲೂ ಸ್ವಾರಸ್ಯಕರ ಕಥನವೇ ಆಗಿತ್ತು.

ಚಿತ್ರದ ಒಂದು ಪ್ರಮುಖ ಅಂಗ, ದೈವ ಹಾಗೂ ಭೂತಕೋಲ. ತುಳುನಾಡಿನ ನಂಬಿಕೆಯ ಈ ಅಂಶ, ಪರಿಣಾಮಕಾರಿಯಾಗಿ ಚಿತ್ರದಲ್ಲಿ ಕಾಣಿಸಲೇ ಬೇಕಿತ್ತು. ಇದಕ್ಕಾಗಿ ಸಾಕಷ್ಟು ಜನರನ್ನು ಸಂಪರ್ಕಿಸಿ, ಕೊನೆಗೆ ಒಂದು ತಂಡದವರನ್ನು ಗುರುತಿಸಿಕೊಂಡೆವು. ಅವರು, ಭೂತಕೋಲಕ್ಕೆ ಬೇಕಾದ ಎಲ್ಲಾ ವಿಷಯಗಳನ್ನೂ ಸಿದ್ಧಪಡಿಸುವುದರಿಂದ ಹಿಡಿದು, ಸಂಪೂರ್ಣ ನಿರ್ವಹಣೆಯನ್ನು ಮಾಡಲು ಸಿದ್ಧರಾದರು. ಇದರಲ್ಲಿ ಎರಡು ಭಾಗದ ಚಿತ್ರೀಕರಣ ನಡೆಯಬೇಕಿತ್ತು. ಒಂದು ದೈವ ಕಡಲ ತೀರದ ಮರಳಲ್ಲಿ ದೈವ ಏಕಾಂಗಿಯಾಗಿ ಕುಣಿಯುವ ದೃಶ್ಯ ಹಾಗೂ ಇನ್ನೊಂದು ತುಸು ದೂರದಲ್ಲಿ, ಕೋಲದ ದೃಶ್ಯ.

ದೈವ ಪಾತ್ರಧಾರಿ ಮೊದಲ ಬಾರಿಗೆ ಕ್ಯಾಮರಾದ ಎದುರು ನಟಿಸುತ್ತಿದ್ದರು. ಹೀಗಾಗಿ ಅವರು ತುಸು ಗಾಬರಿಗೊಂಡಿದ್ದರು. ಆದರೂ, ಅವರು ಆವಾಹಿಸಿಕೊಂಡು ಸಾಕಷ್ಟು ಪ್ರಯತ್ನ ಹಾಕಿ ಪಾತ್ರ ನಿರ್ವಹಿಸುತ್ತಿದ್ದರು. ಅವರ ವೇಷ ಭೂಷಣ ಬಹಳ ಸುಂದರವಾಗಿ ಮೂಡಿಬಂದಿತ್ತು.

ಸಮುದ್ರ ತೀರದಲ್ಲಿ ಚಿತ್ರೀಕರಣಕ್ಕೆ ಹೋದಾಗ, ಅಲ್ಲಿ ಆಗಸದ ತುಂಬಾ ಕಪ್ಪು ಮೋಡ ಸೇರಿಕೊಳ್ಳಲಾರಂಭಿಸಿತು. ನಮಗೆ ಬೇಕಾದ ಶಾಟ್ಸ್ ಮಳೆ ಬರುವ ಮೊದಲು ಮುಗಿಸುವ ಆತುರದಲ್ಲಿ ನಾವಿದ್ದೆವು. ಇಡೀ ತಂಡ ಓಡಾಡುತ್ತಾ, ತುರ್ತಾಗಿ ಕೆಲಸ ಮಾಡುತ್ತಿತ್ತು. ಪಾತ್ರಧಾರಿಯನ್ನು ಏಕಾಂಗಿಯಾಗಿ ತೋರಿಸಲು, ಕ್ಯಾಮರಾ ಸಾಕಷ್ಟು ದೂರದಲ್ಲಿ ಇಟ್ಟುಕೊಂಡು ಚಿತ್ರೀಕರಣ ನಡೆಯುತ್ತಿತ್ತು.

ಅಷ್ಟರಲ್ಲಿ ಅಚಾನಕ್ಕಾಗಿ ಚಿತ್ರೀಕರಣ ನೋಡಲು ನೆರೆದಿದ್ದ ಜನರ ಮಧ್ಯದಿಂದ ಒಬ್ಬರು ನುಗ್ಗಿ ಬಂದರು. ಅವರು ಹಾಗೇ ನಡೆದು ಹೋಗಿ, ದೈವದ ಪಾತ್ರ ಹಾಕಿದ್ದವರ ಬಳಿಗೆ ಹೋಗಿ, ಮಂಡಿಯೂರಿ, ಕೈಮುಗಿದು ಕುಳಿತರು. ಇಡೀ ಚಿತ್ರೀಕರಣ ತಂಡ ತಬ್ಬಿಬ್ಬಾಗಿತ್ತು. ಏನು ಮಾಡಬೇಕೆಂದು ಅರ್ಥವಾಗದ ಪರಿಸ್ಥಿತಿ. ಕೊನೆಗೂ, ಮೊದಲು ಎಚ್ಚೆತ್ತುಕೊಂಡ ಸಹಾಯಕ ನಿರ್ದೇಶಕರ ಬಳಗ ಓಡೋಡಿ ಹೋಗಿ, ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಬದಿಗೆ ಬಿಟ್ಟರು. ಮತ್ತೆ ಚಿತ್ರೀಕರಣ ಮುಂದುವರೆಯಿತು.

ಆ ದಿನ ಚಿತ್ರೀಕರಣ ಮುಗಿಸಿ ಹೋಗುವಾಗ, ಚಿತ್ರಗಳಲ್ಲಿ ನಾವು ವಾಸ್ತವ ಎಂದು ತೋರಿಸುವ ವಿಷಯ, ಜನರ ಜೀವನದಲ್ಲಿನ ವಾಸ್ತವ, ರೂಪಕಗಳು, ನಂಬಿಕೆಗಳು, ಎಲ್ಲವುಗಳ ಒಂದು ವಿಚಿತ್ರ ಸಂಯೋಜನೆ ಜೀವನ ನಿರ್ವಹಣೆಗೆ ಶಕ್ತಿ ನೀಡುತ್ತಾ ಹೋಗುವುದು ನನ್ನನ್ನು ಕಾಡುತ್ತಿತ್ತು.

ಹೊಡೆದಾಟದ ದೃಶ್ಯದಲ್ಲಿ ಆಯತಪ್ಪಿ ನಿಜವಾಗಿ ಪೆಟ್ಟು ತಿಂದ ಮೋಹನ, ಕೊಲೆಯ ದೃಶ್ಯದಲ್ಲಿ ಹಗ್ಗ ಕಾಯ್ದು ಗಂಟಲಲ್ಲಿ ಅಚ್ಚೊತ್ತಿಸಿಕೊಂಡ ಸದಾಶಿವ, ಕಿತ್ತು ಹೋಗಿದ್ದರೂ, ಚಿತ್ರೀಕರಣದ ಕೊನೆಯವರೆಗೂ ಪ್ರಾಣ ಉಳಿಸಿಕೊಂಡ ಚಂದ್ರಹಾಸರ ಚಪ್ಪಲಿ, ಕಲ್ಲಲ್ಲಿ ಹೊಡೆದರೂ, ಒಡೆಯಬೇಕಾದ ದೃಶ್ಯದಲ್ಲಿ ಒಡೆಯದ ಮಣ್ಣಿನ ಮಡಿಕೆಗಳು, ಊರಾಚಿನ ಗೂಡಂಗಡಿಯ ಅಜ್ಜನಿಂದ ಎರವಲು ಪಡೆದು ತಿಂಗಳಿಡೀ ನಮ್ಮಲ್ಲೆ ಉಳಿದ ಐತಣ್ಣನ ಸೈಕಲ್ಲು, ಚಿತ್ರೀಕರಣ ಮುಗಿಸಿ ಮರಳಿ ಹೋಟೇಲ್ ಸೇರುವಾಗ ಏರಬೇಕಿದ್ದ ಮೂರಂತಸ್ತಿನ ಮೆಟ್ಟಿಲುಗಳು, ಆಗೀಗ ಕಾಟಕೊಡುತ್ತಿದ್ದ ಮಳೆ, ನನ್ನ ಜೊತೆ ಇದ್ದ ಹದಿನೈದು ಜನರ ತಂಡದ, ಯುದ್ಧ ಗೆಲ್ಲುವ ಅದಮ್ಯ ಛಲ ಹೀಗೆ ಅದೆಷ್ಟೋ ಅವಿಸ್ಮರಣೀಯ ನೆನಪುಗಳ ಮಾಲೆ ಪಡ್ಡಾಯಿಯ ಚಿತ್ರೀಕರಣ ನನ್ನ ಪಾಲಿಗೆ.

ಒಬ್ಬೊಬ್ಬರೇ ಆಗಿ ಬಂದು ಹಲವರಾಗಿ, ನೂರಾರು ಮಂದಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿ ಸಹಕರಿಸಿ ಹೋದರು. ಮುಖ್ಯವಾಗಿ ನನ್ನ ನಿರ್ದೇಶನ ಸಹಾಯಕರ ತಂಡವನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಲೇ ಬೇಕು. ಅಗತ್ಯ ವಸ್ತುಗಳನ್ನು ಚಿತ್ರೀಕರಣದ ಸ್ಥಳದಲ್ಲೆ ಸೃಷ್ಟಿಸುತ್ತಿದ್ದಾರೇನೋ ಎನ್ನುವಂತೆ ಎಲ್ಲಿಂದಲೋ ಬೇಡಿ, ಕಾಡಿ ತಂದು ಇಡುತ್ತಿದ್ದ ಮಾಂತ್ರಿಕರು ಇವರು. ಸಿನೆಮಾ ನಿರ್ದೇಶನದ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದು, ಕೆಲಸ ಕಲಿಯುತ್ತಾ, ಕೆಲಸ ಮಾಡುತ್ತಾ, ಚಿತ್ರೀಕರಣದ ಸಂಪೂರ್ಣ ಆನಂದಕ್ಕೆ ಮಹತ್ತರ ಕಾರಣರಾದವರು ಇವರು.

ಉಳಿ ಪೆಟ್ಟಿಗೆ ಸಿದ್ಧಗೊಂಡ ವಜ್ರ ಪಡ್ಡಾಯಿ

ಎಲ್ಲಾ ನೆನಪುಗಳನ್ನೂ, ಚಿತ್ರೀಕರಿಸಿದ್ದ ಸರಕನ್ನೂ ಕಟ್ಟಿಕೊಂಡು ಬೆಂಗಳೂರಿಗೆ ಬಂದದ್ದಾಯ್ತು. ಹಿಂದೆ ಚಿತ್ರೀಕರಣ ಮುಗಿಸಿದಾಗ, ರೀಲ್‌ಗಳನ್ನು ಲ್ಯಾಬಿಗೆ ಕೊಂಡೊಯ್ದು, ಸಂಸ್ಕರಿಸಿ, ಟೆಲಿ-ಸಿನೆ ಮಾಡಿಸಿ ಮತ್ತೆ ಸಂಕಲನ ಆರಂಭವಾಗಬೇಕಿತ್ತು. ಆದರೆ, ಇಂದು ಹಾಗಲ್ಲ. ನೇರ ಚಿತ್ರೀಕರಣದಿಂದ ಸಂಕಲನಕ್ಕೆ ಹೋಗಬಹುದು.

‘ಪಡ್ಡಾಯಿ’ ಚಿತ್ರ ತಂಡ ಚಿತ್ರೀಕರಣದ ಸವಿನೆನಪುಗಳನ್ನು ಸವಿಯುತ್ತಿರುವಾಗಲೇ ಪ್ರಶಾಂತ್ ಪಂಡಿತ್ ಹಾಗೂ ನಾನು ಜೊತೆಯಾಗಿ ಸಂಕಲನ ಕೆಲಸ ಆರಂಭಿಸಿದೆವು. ಮುಂದಿನ ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಸಂಕಲನದ ಕೆಲಸ ನಡೆಯಿತು. ಈ ಸಂದರ್ಭದಲ್ಲಿ ಕಥೆ ಕಟ್ಟುವ ಕ್ರಮ, ಚಿತ್ರದ ವೇಗ ಇತ್ಯಾದಿಗಳನ್ನು ಗಮನದಲ್ಲಿರಿಸಿಕೊಂಡು ಮೊದಲಿಗೆ ಸುಮಾರು ಎರಡು ಗಂಟೆ ಹದಿನೈದು ನಿಮಿಷಕ್ಕೆ ಬಂದಿದ್ದ ಚಿತ್ರವನ್ನು ಮತ್ತೆ ತೊಂಭತ್ತೇ ನಿಮಿಷಗಳಿಗೆ ಇಳಿಸಿದೆವು.

ಈ ಸಂದರ್ಭದಲ್ಲಿ, ಚಿತ್ರವನ್ನು ಕೆಲವು ಆಪ್ತರಿಗೆ ತೋರಿಸಿ, ಅವರ ಅಭಿಪ್ರಾಯವನ್ನು ತೆಗೆದುಕೊಂಡೆವು. ಆ ಅಭಿಪ್ರಾಯಗಳನ್ನೂ ಸೇರಿಸಿಕೊಂಡು, ಮತ್ತೆ ಅಳೆದೂ ತೂಗಿ, ಅಗತ್ಯವೇಗದ ಹದವನ್ನು ಕಂಡುಕೊಂಡೆವು. ಅದಕ್ಕೆ ಸರಿಯಾಗಿ ನೂರು ನಿಮಿಷಕ್ಕೆ ನಮ್ಮ ವಿಡಿಯೋವನ್ನು ರೂಪಿಸಿಕೊಳ್ಳಬೇಕಾಯಿತು. ಸಂಕಲನದಲ್ಲಿ ಚಿತ್ರದ ಸಂವಹನವನ್ನು ಗಮನಿಸುವುದೂ ಅಗತ್ಯವಾಗಿರುತ್ತದೆ.

ಚಿತ್ರಕಥೆಯ ಸಮಯದಿಂದ ಆರಂಭವಾಗುವ ನನ್ನ ಸಿನೆಮಾ ಪ್ರಯಾಣಕ್ಕೆ ಕಾಲ ಕಾಲಕ್ಕೆ ವಿಭಿನ್ನ ತಂತ್ರಜ್ಞರು, ಕಲಾವಿದರು ಬಂದು ಸೇರುತ್ತಲೇ ಹೋದರು. ಆದರೆ ಚಿತ್ರೀಕರಣವಿಡೀ ಮುಗಿದ ಮೇಲೆ, ಬಹುತೇಕ ಮೊದಲ ಪ್ರೇಕ್ಷಕನಾಗಿ ಸಿಗುವವನೇ ಸಂಕಲನಕಾರ. ಹೀಗೆ, ಇಷ್ಟರವರೆಗೆ ನಡೆದ ಎಲ್ಲಾ ಕೆಲಸವನ್ನು ಮರೆತು, ಹೊಸತಾಗಿ ಕಥೆ ಕಟ್ಟುವ ಕೆಲಸ, ಸಂವಹನವನ್ನು ಕಟ್ಟುತ್ತಾ ಸಾಗಬೇಕಾಗುತ್ತದೆ ಸಂಕಲನದಲ್ಲಿ.

ಸಂಕಲನದಲ್ಲಿ ಚಿತ್ರದ ಓಟವನ್ನು (ಕನಿಷ್ಟ ದೃಶ್ಯದ ಮಟ್ಟಿಗೆ) ನಿರ್ಧರಿಸಿದ ಮೇಲೆ, ಧ್ವನಿ ವಿನ್ಯಾಸ ಆರಂಭವಾಯಿತು. ಜೇಮಿ ಡಿಸಿಲ್ವ ಹಾಗೂ ಶಿಶಿರ ಕೆ.ವಿ ಧ್ವನಿ ವಿನ್ಯಾಸದಲ್ಲಿ ಸಂವಹನ ನಿರ್ವಹಣೆ, ಹೊಸ ಅರ್ಥ ಸಾಧ್ಯತೆ, ಪರ್ಯಾಯ ಕಥನವನ್ನು ಕಟ್ಟುತ್ತಾ ಸಾಗಿದರು. ಅನೇಕ ದೃಶ್ಯಗಳಲ್ಲಿ, ಸಂವಹನ ದೃಶ್ಯದ ಮೂಲಕ ಕಟ್ಟಿದ್ದರೂ, ಧ್ವನಿ ಜೋಡಣೆಯಿಂದ ಒಂದು ಪರಿಸರವನ್ನು ಕಟ್ಟಲು ಸಾಧ್ಯವಾಗುತ್ತದೆ.

ಇಲ್ಲಿ, ಚಿತ್ರದ ಕಥೆಗೆ ಪೂರಕವಾಗಿ, ಅನೇಕ ಧ್ವನಿಗಳನ್ನು ಅಳವಡಿಸಿಕೊಳ್ಳಲಾಯಿತು. ಉದಾಹರಣೆಗೆ, ರಾಕೇಶನ ಪಾತ್ರಕ್ಕೆ ಹಿನ್ನೆಲೆಯಲ್ಲಿ ನಾಯಿಗಳ ಧ್ವನಿಯನ್ನು ವಿವಿಧ ಭಾವಕ್ಕೆ ತಕ್ಕಂತೆ ಅಳವಡಿಸಿಕೊಂಡೆವು. ಯಕ್ಷಗಾನ ಚೌಕಿಗೆ ನಿಜವಾದ ಚೌಕಿಯ ಪರಿಸರದಲ್ಲಿ ಮುದ್ರಿಸಿಕೊಂಡ ಧ್ವನಿಯನ್ನು ಸೇರಿಸಿಕೊಂಡೆವು. ಕೊಲೆಯ ಬಗ್ಗೆ ಮಾಧವ ಹಾಗೂ ಸುಗಂಧಿ ಪಶ್ಚಾತ್ತಾಪ ಪಡುವ ಸಂದರ್ಭಕ್ಕೆ, ತಲೆಯೊಳಗೆ ಗುಂಯ್‌ಗುಡುವಂತೆ ಮಾಡಲು, ನೊಣದ ಶಬ್ದ ಅಳವಡಿಸಿಕೊಂಡೆವು.

ಮಲ್ಪೆಯ ಪರಿಸರವನ್ನು ಚಿತ್ರಕ್ಕೆ ತರುವಂತೆ, ಅಲ್ಲಿಲ್ಲಿ, ಭಜನಾ ಮಂದಿರದ ಧ್ವನಿಗಳನ್ನೂ, ಮಸೀದಿಯ ಆಜಾನ್ ಧ್ವನಿಯನ್ನೂ, ಚರ್ಚಿನ ಗಂಟೆಯ ಧ್ವನಿಯನ್ನೂ ಅಳವಡಿಸಿಕೊಂಡೆವು. ಇನ್ನು ಸಮುದ್ರದ ಬೇರೆ-ಬೇರೆ ರೀತಿಯ ಧ್ವನಿಗಳನ್ನು ಅಳವಡಿಸಿಕೊಂಡೆವು. ಬಂಡೆಗೆ ಅಪ್ಪಳಿಸುವ ಸಮುದ್ರ, ಶಾಂತವಾಗಿ ದಡಕ್ಕೆ ಮುತ್ತಿಡುವ ಸಮುದ್ರ, ರಾತ್ರಿಯ ನೀರವ ಸಮುದ್ರ ಹೀಗೆ ವಿವಿಧ ಧ್ವನಿಗಳನ್ನು ರೆಕಾರ್ಡ್ ಮಾಡಿಕೊಂಡು ನಮ್ಮ ವಿವಿಧ ದೃಶ್ಯಗಳಲ್ಲಿ, ಅಲ್ಲಿನ ಭಾವಕ್ಕೆ ತಕ್ಕಂತೆ ಅಳವಡಿಸಿಕೊಂಡೆವು. ಈ ಧ್ವನಿ ವಿನ್ಯಾಸದ ಕೆಲಸ ಚಿತ್ರಕ್ಕೆ ಒಂದು ಪರಿಸರವನ್ನು ಸೃಷ್ಟಿಸಿಕೊಡುತ್ತದೆ.

ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆಯ ಮೂಲಕ ಸಿನೆಮಾದೊಳಗಿನ ಭಾವಗಳಿಗೆ ಒತ್ತು ನೀಡುವ, ಪ್ರೇಕ್ಷಕರ ಭಾವನೆಗಳನ್ನು ಸರಿದಿಕ್ಕಿಗೆ ಒಯ್ಯುವ ಕೆಲಸದಲ್ಲಿ ನಿರತರಾದರು. ಸಂಗೀತ ಸಂಯೋಜನೆಯಲ್ಲಿ, ನಾನು ಹಾಗೂ ಮಣಿಕಾಂತ್ ಸ್ಥಳೀಯ ಉಪಕರಣಗಳನ್ನು ಬಳಸಿದರೂ, ಗ್ಲೋಬ್ ಥ್ಯೇಟರ್ ರೀತಿಯ ಸಂಯೋಜನೆಯನ್ನು ಮಾಡಬೇಕು ಎಂದು ಅಂದುಕೊಂಡಿದ್ದೆವು. ಇದರಿಂದ ಶೇಕ್ಸ್‍ಪಿಯರ್ ರೀತಿಯ ಎಪಿಕ್ ಧ್ವನಿಯನ್ನು ಕೊಡುತ್ತಲೇ, ಸ್ಥಳೀಯ ಸೊಗಡನ್ನು ತರಬಹುದು ಎನ್ನುವುದು ನಮ್ಮ ಉದ್ದೇಶವಾಗಿತ್ತು.

ಮಣಿಕಾಂತ್, ತಮ್ಮ ಅಪಾರ ಅನುಭವದಿಂದಾಗಿ, ಇದನ್ನು ಬಹಳ ಚೆನ್ನಾಗಿ ಮಾಡಿದರು. ಅವರು ಮೊಗವೀರ ಹಾಡುಗಾರರನ್ನು ತಮ್ಮ ಸ್ಟೂಡಿಯೋಗೆ ಕರೆಸಿಕೊಂಡು, ಅಲ್ಲಿ ಸಾಂಪ್ರದಾಯಿಕ ಮೊಗವೀರ ಉದ್ಗಾರಗಳನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ತಮ್ಮ ಸಂಗೀತದೊಳಗೆ ಅಳವಡಿಸಿಕೊಂಡರು. ಜನಪದೀಯ ಎನ್ನುವಂಥಾ ಹಲವು ಆಲಾಪಗಳನ್ನೂ ಬಳಸಿಕೊಂಡರು.

ಹೀಗೆ ಇಡೀ ಚಿತ್ರದ ಸಂಗೀತ ಒಂದು ವಿಶಿಷ್ಟವಾಗಿ ರೂಪಗೊಂಡಿತು. ಬೆಂಗಳೂರಿನಲ್ಲಿ, ಕ್ಯೂಲ್ಯಾಬ್‌ನಲ್ಲಿ, ಉನ್ನಿ ನಮ್ಮ ಧ್ವನಿಗಳನ್ನು ಮಿಶ್ರಮಾಡಿ ಹದಕ್ಕೆ ತರಲಾರಂಭಿಸಿದ. ಜೆಮಿ ಹಾಗೂ ಶಿಶಿರ ಇಬ್ಬರೂ ಉನ್ನಿಯೊಂದಿಗೆ ಕುಳಿತು, ಸುಮಾರು ಹತ್ತು ದಿನ ಕೇವಲ ಧ್ವನಿ, ಸಂಗೀತ, ಸಂಭಾಷಣೆಗಳ ಮಿಶ್ರಣದಲ್ಲಿ ಕಳೆದುಹೋದರು.

ಇದೇ ಸಮಯಕ್ಕೆ ಸುಮಾರಾಗಿ, ವಿಷ್ಣು, ಅದೇ ಕ್ಯೂಲ್ಯಾಬಿನಲ್ಲಿ, ಟಾಮ್ ಜೊತೆಗೆ ಕುಳಿತು, ಚಿತ್ರಕ್ಕೆ ಬಣ್ಣ ತುಂಬಿದರು. ಕರಾವಳಿಯಲ್ಲೇ ನಾವು ಚಿತ್ರೇಕರಿಸಿದ್ದರೂ, ಇಡೀ ಕಥೆಯ ಭಾವಕ್ಕೆ ಒಂದು ಮ್ಲಾನವಾದ ವಾತಾವರಣವಿದೆ. ಮೂಲ ಕೃತಿಯಲ್ಲೂ, ಹೆಚ್ಚಿನ ಘಟನೆಗಳು, ನಸುಬೆಳಕಿನಲ್ಲಿ, ಕತ್ತಲಲ್ಲೇ ನಡೆಯುತ್ತವೆ. ಹೀಗಾಗಿ ನಾವು ಚಿತ್ರೀಕರಣವನ್ನೇ ಅಂಥಾ ಸಮಯಗಳಲ್ಲಿ ಮಾಡಿದ್ದೆವು.

ಮಳೆಗಾಲದ ಬೆಳಕೂ ನಮಗೆ ಅನುಕೂಲಕರವಾಗಿತ್ತು. ಅದಕ್ಕೆ ತಕ್ಕಂತೆ ಚಿತ್ರೀಕರಿಸಿಕೊಂಡಿದ್ದ ನಮ್ಮ ದೃಶ್ಯಗಳಿಗೆ, ವಿಷ್ಣು ಹಾಗೂ ಟಾಮ್ ಒಂದು ನಿರ್ದಿಷ್ಟ ಶಿಸ್ತನ್ನು ತಂದರು. ಹೀಗೆ ಧ್ವನಿ ಹಾಗೂ ಚಿತ್ರ ಎರಡೂ ಪರಿಷ್ಕರಣಗೊಳ್ಳಲು ಸುಮಾರು ಒಂದು ತಿಂಗಳಷ್ಟು ಸಮಯ ಬೇಕಾಯಿತು. ನವೆಂಬರ್ ಕೊನೆಯ ಹೊತ್ತಿಗೆ ನಮ್ಮ ಚಿತ್ರ ಸಿದ್ಧವಾಗಿ ೨೦೧೭ರ ಡಿಸೆಂಬರ್ ಹೊತ್ತಿಗೆ ಸೆನ್ಸಾರ್ ಕೂಡಾ ಆಗಿ ಪ್ರದರ್ಶನಕ್ಕೆ ಸಿದ್ಧವಾಯಿತು.

ಪ್ರೇಕ್ಷಕರನ್ನು ಹುಡುಕಿ ಹೊರಟ ಪಡ್ಡಾಯಿಯ ಕಥೆ

ಚಿತ್ರವೊಂದು ನಿರ್ಮಾಣವಾದ ಮೇಲೆ ಅದಕ್ಕೆ ಸರಿಯಾದ ಪ್ರೇಕ್ಷಕರನ್ನು ಹುಡುಕಬೇಕಾಗುತ್ತದೆ. ಕೆಲವು ಪ್ರಕಾರದ ಸಿನೆಮಾಗಳನ್ನೇ ಹುಡುಕುವ ಪ್ರೇಕ್ಷಕರಿರುತ್ತಾರೆ. ಕಲೆಯೂ, ಕಲೆಯನ್ನು ಕಟ್ಟಿದ ಕ್ರಮ ಎಷ್ಟೇ ಸ್ವಾರಸ್ಯಕರವಾಗಿದ್ದರೂ, ರಸಿಕರ ಮನಸ್ಸಿಗೆ ಮಾಡಿದ ಪರಿಣಾಮದಲ್ಲೇ, ಕಲೆಯು ನಿಜ ಸಾರ್ಥಕತೆ ಕಾಣಲು ಸಾಧ್ಯ.

ಪಡ್ಡಾಯಿ ಸಿನಿಮಾಕ್ಕೆ, ೨೦೧೭ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ, ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಲಭಿಸಿದೆ. ೨೦೧೭ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ.

ನಮ್ಮ ಚಿತ್ರ, ಗೋವಾದಲ್ಲಿ ನಡೆಯುವ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯೂ ಆಯಿತು. ಇವೆಲ್ಲದರ ಜೊತೆಗೆ, ಅಮೇರಿಕಾ, ಆಸ್ಟ್ರೀಯಾ, ಆಸ್ಟ್ರೇಲಿಯಾ, ದೆಹಲಿ ಹೀಗೆ ಅನೇಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವೂ ಕಂಡಿತು. ತುಳುನಾಡಿನಲ್ಲಿ ಚಿತ್ರ ಬಿಡುಗಡೆ ಕಂಡು, ಎರಡು ವಾರ ಪ್ರೇಕ್ಷಕರ ಪ್ರೀತಿಯನ್ನೂ ಗಳಿಸಿತು.

ಮೂಲ ಮ್ಯಾಕ್ಬೆತ್ ಕಥೆಯಿಂದ, ತುಳುನಾಡಿನ ಮಣ್ಣಿನ ವಾಸನೆಯನ್ನು ಪಡೆಯುವಲ್ಲಿ, ‘ಪಡ್ಡಾಯಿ’ ಚಿತ್ರದ ಚಿತ್ರಕಥೆ, ಸಾಕಷ್ಟು ಆವೃತ್ತಿಗಳನ್ನು ಕಂಡಿದೆ. ಸಂಭಾಷಣೆಯನ್ನು ಬರೆಯುವ ಸಂದರ್ಭದಲ್ಲಿಯೂ, ಚಿತ್ರೀಕರಣಕ್ಕೆ ಸ್ಥಳ ಹುಡುಕುವಾಗಲೂ, ನಟರು ಅಭ್ಯಾಸ ಮಾಡುವಾಗಲೂ, ಸಂಕಲನದ ವೇಳೆಗೂ, ಈ ಪರಿಷ್ಕರಣೆ ಮುಂದುವರೆದಿದೆ. ಹೀಗೆ ಸಿದ್ಧವಾದ, ಚಿತ್ರಕಥೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಪ್ರಕಟಿಸುತ್ತಿರುವುದರ ಉದ್ದೇಶ, ನಮ್ಮ ಚಿತ್ರಕಥೆಯ ಹಿರಿಮೆಯನ್ನು ಸಾರುವುದಲ್ಲ.

ಈ ಸಿನಿಮಾವನ್ನು ನೋಡಿ, ಚಿತ್ರಕಥೆ ಹೇಗೆ ರೂಪುಗೊಳ್ಳುತ್ತದೆ ಎಂದು ಕುತೂಹಲಪಡುವವರಿಗಾಗಿ ಇದನ್ನು ಪ್ರಕಟಿಸುತ್ತಿದ್ದೇವೆ. ಪ್ರತಿ ದೃಶ್ಯದಲ್ಲೂ, ಓದುಗರ ಅನುಕೂಲಕ್ಕಾಗಿ, ಆ ದೃಶ್ಯದ ಉದ್ದೇಶದ ಕುರಿತಾಗಿ ಸಣ್ಣ ಟಿಪ್ಪಣಿಯನ್ನೂ ಸೇರಿಸಿದ್ದೇನೆ. ಇಲ್ಲಿ ಸಂಭಾಷಣೆಗಳು ಕನ್ನಡದಲ್ಲಿವೆ. ಇದು ಓದುಗರ ಅನುಕೂಲಕ್ಕಾಗಿ ಮೂಲ ತುಳುವಿನಿಂದ ಭಾಷಾಂತರಿಸಿಕೊಂಡಿರುವುದು.

ಅನೇಕ ದೇಶಗಳಲ್ಲಿ, ಚಿತ್ರಕಥೆಗಳನ್ನು ಪ್ರಕಟಿಸುವುದು ಸಾಮಾನ್ಯ. ಆದರೆ, ಜಗತ್ತಿನ ಅತಿಹೆಚ್ಚು ಸಿನಿಮಾ ನಿರ್ಮಿಸುವ ನಮ್ಮ ದೇಶದಲ್ಲಿ, ಇನ್ನೂ ಈ ಅಭ್ಯಾಸ ಆರಂಭವಷ್ಟೇ ಆಗಿದೆ. ಈ ನಿಟ್ಟಿನಲ್ಲಿ, ಇದನ್ನು ನಮ್ಮ ಒಂದು ಸಣ್ಣ ಕಾಣಿಕೆ ಎಂದೂ ಗ್ರಹಿಸಬಹುದು.

। ಇಲ್ಲಿಗೀಕಥೆ ಮುಗಿಯಿತು.. ।

 

ಹಾಗೆಯೇ, ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.

Link to audience in UK:
https://amzn.to/2MtHFw5

Link to audience in USA:
https://amzn.to/2MtHukp

Link to audience in India:
https://bit.ly/2KLzUzB

‍ಲೇಖಕರು avadhi

13 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading