ಜನಪರ ಚಿಂತಕ ಕೆ.ದೊರೈರಾಜ್ ಅವರ ‘ನಮ್ಮ ಹಟ್ಟಿ‘ ಒಂದು ಹಟ್ಟಿಯ ಆತ್ಮಕಥಾನಕ ಕೃತಿ
ಜಿ ವಿ ಆನಂದಮೂರ್ತಿ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ
‘ಪ್ರತಿಪದ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ.
೧೮
ಮಸಿಯಮ್ಮ: ನನ್ನ ಹೆಸರು ಮಸಿಯಮ್ಮ. ನಾನೂ ಇದೇ ದೊಡ್ಡಹಟ್ಟಿಯಲ್ಲಿ ಹುಟ್ಟಿ ಬೆಳೆದವಳು. ನಮ್ಮ ಅಪ್ಪ ನಿಂಗಣ್ಣ. ಗಾರೆ ಕೆಲಸ ಮಾಡುತ್ತಿದ್ದರು. ತಾಯಿ ಗಂಗಮ್ಮ. ಹಾಸ್ಟೆಲ್‌ಗಳಿಗೆ ಹೋಗಿ ಅಕ್ಕಿ-ರಾಗಿ ಮಾಡಿಕೊಡುತ್ತಿದ್ದರು. ನಮಗೆ ಹಟ್ಟಿಯಲ್ಲಿ ಸ್ವಂತ ಮನೆ ಇರಲಿಲ್ಲವಾದ್ದರಿಂದ ಒಂದು ಬಾಡಿಗೆ ಮನೆಯಲ್ಲಿ ಇದ್ದೆವು. ಎಳೆತನದಲ್ಲಿ ನಮ್ಮ ಹಟ್ಟಿ ಬಹಳ ಬಿಕ್ಕಟ್ಟಿನಲ್ಲಿತ್ತು. ಹೆಣ್ಣುಮಕ್ಕಳನ್ನು ಯಾರೂ ಕತ್ತೆತ್ತಿ ನೋಡುವ ಹಾಗಿರಲಿಲ್ಲ. ಗಂಡುಹುಡುಗರು ಹೆಣ್ಣುಮಕ್ಕಳನ್ನು ಮಾತನಾಡಿಸುವ ಹಾಗಿರಲಿಲ್ಲ. ಒಂದು ವೇಳೆ ಹಾಗೆ ಏನಾದರೂ ಮಾತನಾಡಿಸಿದರೆ, ಅವತ್ತೇ ನ್ಯಾಯ ಸೇರಿಸಿ, ತಪ್ಪು ಮಾಡಿದವರಿಗೆ ಹಿರಿಯ ಯಜಮಾನರು ದಂಡ ಹಾಕುತ್ತಿದ್ದರು. ಹೆಂಡ ಕುಡಿಯುವವರ ಸಂಖ್ಯೆ ಕಡಿಮೆ ಇತ್ತು. ಹಟ್ಟಿಯಲ್ಲಿ ಬಡತನವಿದ್ದರೂ ನೆಮ್ಮದಿ ಇತ್ತು. ಹೆಣ್ಣುಮಕ್ಕಳಿಗೆ ಗೌರವವಿತ್ತು. ನಮ್ಮ ದೊಡ್ಡಹಟ್ಟಿ ಅಂದು ಬಹಳ ನ್ಯಾಯ ನೀತಿಯಿಂದ ಕೂಡಿತ್ತು.
ನಮ್ಮ ಅಪ್ಪ ಅಮ್ಮನಿಗೆ ಐದು ಜನ ಮಕ್ಕಳು. ಇದರಲ್ಲಿ ನಾನೇ ಕೊನೆಯವಳು. ಅಪ್ಪ ಅಮ್ಮ ಇವರಿಬ್ಬರ ದುಡಿಮೆಯಿಂದ ಬರುತ್ತಿದ್ದ ಕಾಸು ನಮ್ಮ ಮನೆಗೆ ಯಾವುದಕ್ಕೂ ಎಟಕುತ್ತಿರಲಿಲ್ಲ. ಬಡತನ ಅಂದರೆ ಹೇಳಕ್ಕಾಗದಷ್ಟು ಬಡತನ ನಮಗಿತ್ತು. ನಮ್ಮ ಅಪ್ಪನ ದುಡಿಮೆಯಿಂದ ಬಂದ ಹಣ ಹೆಂಡದ೦ಗಡಿಗೆ ಹೋಗುತ್ತಿತ್ತು. ಇದರಿಂದಾಗಿ ನಮ್ಮ ಅವ್ವನ ದುಡಿಮೆಯೊಂದೇ ನಮ್ಮ ಕುಟುಂಬಕ್ಕೆ ಆಸರೆಯಾಗಿತ್ತು. ಜೊತೆಗೆ ಅಪ್ಪ ನಮ್ಮ ಅಮ್ಮನಿಗೆ ಜೋರು ಮಾಡೋನು, ಕೆಲವು ಸಲ ಅವ್ವನ ಮೈಮೇಲೆ ಕೈ ಮಾಡುತ್ತಿದ್ದ. ಆದರೂ ಅವ್ವ ಯಾವತ್ತೂ ಅಪ್ಪನಿಗೆ ಎದುರಾಡದೆ ಮೌನವಾಗಿ ಇದ್ದುಬಿಡುತ್ತಿದ್ದಳು. ಇದನ್ನೆಲ್ಲಾ ನೋಡುತ್ತಿದ್ದ ನನಗೆ ಜೀವನ ಅಂದರೆ ಇರೋದೆ ಹೀಗೆ ಅಂದುಕೊ೦ಡು ಸುಮ್ಮನಾಗುತ್ತಿದ್ದೆ.
ಬಡತನದಿಂದಾಗಿ ನಮ್ಮ ಮನೆಯಲ್ಲಿ ದಿನಾ ಒಲೆ ಹಚ್ಚುತ್ತಿದ್ದುದು ರಾತ್ರಿಹೊತ್ತು ಮಾತ್ರ. ಅದೂ ನುಚ್ಚಕ್ಕಿ ಹಾಕಿದ ಮುದ್ದೆ, ಅದಕ್ಕೆ ಗೊಜ್ಜು ಮಾತ್ರ ಇರೋದು. ಇನ್ನು ‘ಅನ್ನ’ ಅನ್ನೋದನ್ನು ಹಬ್ಬದಲ್ಲಿ ಮಾತ್ರ ನೋಡುತ್ತಿದ್ದೆವು. ಹೊಸಬಟ್ಟೆ ಅನ್ನೋದನ್ನೆ ನಾವು ಕಾಣೆವು! ನಮ್ಮವ್ವ ತನ್ನ ಹದಿನಾರು ಮೊಳದ ಸೀರೆಯನ್ನೇ ನಾಲ್ಕು ಮೊಳಕ್ಕೆ ಹರಿದು, ಅದನ್ನೇ ಹೊಲೆದು ಕೊಡುತ್ತಿದ್ದಳು. ನಮ್ಮ ಅವ್ವ ಬಹಳ ಉದಾರಿ. ತಾನು ರಾತ್ರಿಹೊತ್ತು ಬೇಯಿಸಿದ ನುಚ್ಚಕ್ಕೆ ಮುದ್ದೆಯನ್ನು ನಮಗೆ ಕೊಟ್ಟು, ಹಸುವಿನಿಂದ ಇದ್ದ ನಮ್ಮ ನೆರೆಹೊರೆಯಲ್ಲಿದ್ದವರಿಗೂ ಕರೆದು ಕೊಡುತ್ತಿದ್ದಳು. ಇದು ನಮ್ಮ ಅವ್ವನ ಗುಣ. ಇನ್ನು ಅವರಿವರ ಮನೆಯ ಸೀರೆ, ಕುಪ್ಪಸಗಳನ್ನೇ ನಮ್ಮ ಅಳತೆಗೆ ತಕ್ಕಂತೆ ಹೊಲೆದುಕೊಂಡು ತೊಡುತ್ತಿದ್ದೆವು. ಇದೆಲ್ಲಾ ಅವಮಾನ ಎಂದು ನಮಗೆ ಅನ್ನಿಸುತ್ತಿರಲಿಲ್ಲ! ನನಗೆ ನೆನಪಿರುವಂತೆ ಹಬ್ಬದಲ್ಲೂ ನಾವು ಕೂಲಿಗೆ ಹೋದ ದಿನಗಳಿವೆ. ಒಂದು ದಿನವೂ ಅವ್ವ ಸುಖಪಟ್ಟವಳಲ್ಲ! ಹಾಗೆಯೇ ಅಪ್ಪನೂ ಸುಖಪಟ್ಟವನಲ್ಲ! ಇವರನ್ನು ನೆನೆದರೆ ನನಗೆ ದುಃಖ ಒತ್ತರಿಸಿಕೊಂಡು ಬರುತ್ತದೆ. ನಾವು ಯಾರೂ ನೂರು ರೂಪಾಯಿಯ ನೋಟನ್ನೇ ನೋಡಿದವರಲ್ಲ! ನಮ್ಮ ಅಪ್ಪನಿಗೆ ಮೈ ಹುಷಾರಿರಲಿಲ್ಲ. ಅವನನ್ನು ನೆಲಮಂಗಲದ ಬಳಿಯಿದ್ದ ಒಂದು ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿ ಅಪ್ಪ ಬಹಳ ದಿನವಿದ್ದು ಹುಷಾರಾದ. ಆದರೆ ಅಲ್ಲಿಂದ ಅವನು ಮರಳಿ ಮನೆಗೆ ಬರಲೇ ಇಲ್ಲ. ಎತ್ತ ಹೋದನೋ ದೇವರಿಗೇ ಗೊತ್ತು! ಇಂದಿಗೂ ಅವನ ಸುಳಿವಿಲ್ಲ. ಈ ನೋವು ನಮ್ಮ ಮನೆಯವರಿಗೆಲ್ಲಾ ಇತ್ತು. ಈಗ ನನ್ನ ಕುಟುಂಬದಲ್ಲಿ ಯಾರೂ ಇಲ್ಲ. ಉಳಿದಿರೋಳು ನಾನೊಬ್ಬಳೆ. ನನ್ನ ಅಕ್ಕ ಮೂರು ಜನ ಹೆಣ್ಣುಮಕ್ಕಳನ್ನು ಬಿಟ್ಟು ತೀರಿಕೊಂಡಳು. ಅವಳ ಮಕ್ಕಳನ್ನು ಈಗ ನಾನೇ ಸಾಕುತ್ತಿದ್ದೇನೆ. ನಾನು ಪಟ್ಟಿರೋ ಕಷ್ಟನ್ನೆಲ್ಲಾ ಒಂದು ಕಲ್ಲಿನ ಮುಂದೆ ಹೇಳಿದರೆ, ಆ ಕಲ್ಲೂ ಕರಗಿಹೋಗುತ್ತದೆ. ಅಂಥ ಕಷ್ಟ ನಮ್ಮದು. ಇದನ್ನೆಲ್ಲಾ ಯಾರ ಮುಂದೆನಾದರೂ ಹೇಳಿಕೊಳ್ಳಬೇಕೆನಿಸುತ್ತದೆ! ಆದರೆ ಈಗಿನವರು ಯಾರೂ ನಮ್ಮ ಮಾತುಗಳನ್ನೇ ಕೇಳಿಸಿಕೊಳ್ಳಲು ತಯಾರಿಲ್ಲ.

ನಾನು ನಾಲ್ಕನೇ ಕ್ಲಾಸ್ ಓದುತ್ತಿದ್ದೆ. ಬಡತನದಿಂದಾಗಿ ಓದು ಬಿಟ್ಟು ದುಡಿಮೆಗೆ ಹೋದೆ. ಆಗ ದುಡಿಮೆ ಅಂದರೆ ದೇವರಾಯನದುರ್ಗದ ಬೆಟ್ಟಕ್ಕೆ ಹೋಗಿ ಸೌದೆ ತಂದು ಅದನ್ನು ಕಂತೆಗಳನ್ನಾಗಿ ಕಟ್ಟಿ ಹಟ್ಟಿಯಲ್ಲಿ ಮಾರೋದೇ ಆಗಿತ್ತು. ಅದರಿಂದ ಬರೋ ನಾಲ್ಕೆöÊದು ರೂಪಾಯಿಗಳು ಮನೆ ಖರ್ಚಿಗೆ ಹೋಗುತ್ತಿತ್ತು. ಇದು ಕೇವಲ ನಮ್ಮೊಬ್ಬರ ಮನೆಯ ಕಥೆಯಲ್ಲ! ಹಟ್ಟಿಯ ಎಲ್ಲರ ಮನೆಯ ಕಥೆಯೂ ಹೀಗೆಯೇ ಇತ್ತು. ಬೆಳಗಿನ ಹೊತ್ತು ಹಟ್ಟಿಯ ಮನೆಗಳವರು ತಮ್ಮ ಪಾತ್ರೆ ಪಗಡಿಗಳನ್ನು ಬೆಳಗಲೆಂದು ಹೊರಗಡೆ ಇಡುತ್ತಿದ್ದರು. ನಮ್ಮ ಕಣ್ಣುಗಳು ಮಾತ್ರ ಹಿಟ್ಟಿನ ಮಡಕೆಗಳನ್ನೇ ಹುಡುಕುತ್ತಿದ್ದವು. ಏಕೆಂದರೆ ಅದರ ತಳದಲ್ಲಿರುವ ಸೀಕಾದರೂ ನಮಗೆ ಸಿಗುತ್ತದೆ ಎಂಬ ಆಸೆಯಿಂದ. ಪಾತ್ರೆಗಳನ್ನು ಬೆಳಗಲು ಅವರು ಕರೆಯದಿದ್ದರೂ ನಾವೇ ಅವುಗಳನ್ನೆಲ್ಲಾ ತೊಳೆದು ಬೆಳಗಿ, ಅದರಲ್ಲಿರುವ ಸೀಕನ್ನು ಎಬ್ಬಿಕೊಂಡು ತಿನ್ನುತ್ತಿದ್ದೆವು. ಇದರ ಜೊತೆಗೆ ನಮ್ಮ ಹಟ್ಟಿಯವರು ಗೆಣಸು ತರಲು ನಮ್ಮ ಪಕ್ಕದ ತಿಗಳರ ತೋಟಗಳಿಗೆ ಹೋದಾಗ, ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರೊಡನೆ ನಾವೂ ಹೋಗಿ ಮಂಕರಿಗಳನ್ನು ಹೊತ್ತು ಅವರ ಮನೆಗೆ ಕೊಡುತ್ತಿದ್ದೆವು. ಅವರು ಕತ್ತರಿಸಿ ಎಸೆದ ಗೆಣಸನ್ನು ಹಾಗೂ ಮಂಕರಿಯಲ್ಲಿ ಅಳಿದುಳಿದ ಗೆಣಸಿನ ಚೂರುಗಳನ್ನು ನಮಗೆ ಕೊಡುತ್ತಿದ್ದರು. ಅದನ್ನು ಹಸಿ ಹಸಿಯಾಗಿಯೇ ತಿಂದು ನೀರುಕುಡಿದು ನಾಷ್ಟಾ ಮುಗಿಸುತ್ತಿದ್ದೆವು. ಎಷ್ಟೋ ಸಲ ಕಡ್ಲೆಪುರಿ ತಿಂದು ಮಲಗಿರೋ ದಿನಗಳೂ ಉಂಟು! ಯಾರಾದರೂ ಹಣ್ಣು ತಿಂದು ಸಿಪ್ಪೆ ಬಿಸಾಕಿದ್ದರೆ, ಎಷ್ಟೋ ಸಲ ಆ ಸಿಪ್ಪೆಯನ್ನೂ ತಿಂದಿದ್ದೇನೆ. ಇವೆಲ್ಲ ನಮ್ಮ ಬದುಕಿನ ಒಂದು ಭಾಗವೇ ಆಗಿದ್ದವು. ಈಗ ಯಾರಾದರೂ ಅನ್ನವನ್ನು ಬೀದಿಯಲ್ಲಿ ಚೆಲ್ಲಿರೋದನ್ನ ನೋಡಿದರೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ. ರಾತ್ರಿಹೊತ್ತು ಹಸಿವೆಯಿಂದ ನಮಗೆ ನಿದ್ದೆ ಬರುತ್ತಿರಲಿಲ್ಲ! ಎಷ್ಟೊತ್ತಿಗೆ ಬೆಳಕು ಹರಿಯುತ್ತದೋ ಎಂದು ಕಾಯುತ್ತಿದ್ದೆವು. ಹೊತ್ಲಂಟೆ ಎದ್ದು ಕೂಲಿಗೆ ಹೋಗಲು ನಮ್ಮ ಮನಸ್ಸು ಹಾತೊರೆಯುತ್ತಿತ್ತು.
ನಾವು ಸೌದೆಗೆ ದೇವರಾಯನದುರ್ಗದ ಕಾಡಿಗೆ ಹೋಗುತ್ತಿದ್ದೆವು. ಹೀಗೆ ಹೋಗುವಾಗ ನಮ್ಮಲ್ಲಿ ಸೌದೆ ಕೊಳ್ಳುತ್ತಿದ್ದವರ ಮನೆಗೆ ಹೋಗಿ, ಅವರ ಮನೆಯಲ್ಲಿ ಹಿಂದಿನ ರಾತ್ರಿ ಉಳಿದ ಹಿಟ್ಟನ್ನೋ ಅಥವಾ ಸೀಕನ್ನೋ ಕೇಳಿ ತಗೆದುಕೊಳ್ಳುತ್ತಿದ್ದೆವು. ಅದನ್ನೇ ಬುತ್ತಿಯಂತೆ ಒಂದು ಬಟ್ಟೆಯಲ್ಲಿ ಗಂಟುಕಟ್ಟಿಕೊAಡು ಕಾಡಿಗೆ ತಗೆದುಕೊಂಡು ಹೋಗುತ್ತಿದ್ದೆವು. ಸೌದೆ ಹೊರೆ ಕಟ್ಟಿಕೊಂಡಮೇಲೆ ನಾವೆಲ್ಲಾ ಗುಂಪಾಗಿ ಕುಳಿತು ನಾವು ತಂದಿದ್ದ ಸೀಕು, ಹಿಟ್ಟನ್ನು ಎಲ್ಲರೂ ಹಂಚಿಕೊ೦ಡು ತಿನ್ನುತ್ತಿದ್ದೆವು. ಕುಡಿಯಲು ನೀರು ತಗೆದುಕೊಂಡುಹೋಗಲು ನಮ್ಮಲ್ಲಿ ಟಿಫನ್ ಕ್ಯಾರಿಯರ್ ಇರುತ್ತಿರಲಿಲ್ಲವಾದ್ದರಿಂದ, ಅಲ್ಲೇ ಬಂಡೆ ಮೇಲೆ ನಿಂತಿದ್ದ ನೀರನ್ನು ಬಗ್ಗಿ ಬಾಯಿಂದ ಸೀಪಿಕೊಂಡು ಕುಡಿಯುತ್ತಿದ್ದೆವು. ಆ ನೀರೋ ಹಸುವಿನ ಗಂಜಲ, ಸಗಣಿ ಬಿದ್ದು ರಾಡಿಯಾಗಿ ಅದರಲ್ಲಿ ಹುಳುಗಳೆಲ್ಲಾ ಪಿತ ಪಿತ ಅನ್ನುತ್ತಿದ್ದವು. ಆದರೆ ಬೇರೆ ಯತ್ನವಿಲ್ಲದೆ ಅದನ್ನೇ ಬಗೆ ಮಾಡಿಕೊಂಡು ಕಣ್ಣುಮುಚ್ಚಿ ಕುಡಿಯುತ್ತಿದ್ದೆವು. ನಮ್ಮ ಯಮ ಯಾತನೆಯಂಥ ಕಷ್ಟದ ದಿನಗಳಲ್ಲಿ ಸಂಬAಧಿಕರು ಯಾರೂ ನಮ್ಮ ನೆರವಿಗೆ ಬರಲಿಲ್ಲವಲ್ಲಾ ಎನ್ನುವ ನೋವು ಈಗಲೂ ನನಗಿದೆ. ಆದರೂ ನಾನು ಎಂದೂ ನಿರಾಸೆಯಿಂದ ಇದ್ದವಳಲ್ಲ! ಈ ಬದುಕು ಸಾಕು ಅಂಥ ನನಗೆ ಯಾವತ್ತೂ ಅನಿಸಿಲ್ಲ. ನಮ್ಮ ಗಿಡದಾಗೆ ಯಾವತ್ತಿದ್ದರೂ ಹೂ ಬಿಡುತ್ತೆöದೆ ಅನ್ನೋದು ಗೊತ್ತು.
ನಾನು ಸತ ಒರಟಳು. ಯಾವುದಕ್ಕೂ ಬಗ್ಗುತ್ತಿರಲಿಲ್ಲ. ಎಲ್ಲವನ್ನೂ ನಿಬಾಯಿಸೋ ಸಕ್ತಿ ನನ್ನಲ್ಲಿತ್ತು. ನನ್ನಂಥ ಒರಟಳನ್ನೂ ಮನುಸನನ್ನಾಗಿ ಮಾಡಿದ್ದು ನಮ್ಮ ದಲಿತ ಸಂಘ. ಆಗ ನಮ್ಮ ಹಟ್ಟಿಯಲ್ಲಿ ದಲಿತ ಸಂಘ ಸುರುವಾದಾಗ ನನಗೆ ಹದಿನೆಂಟು ವರ್ಸ. ಬಡವರ ಪರವಾಗಿ ಹೋರಾಡೋದನ್ನು ದಲಿತ ಸಂಘದೋರು ಮಾಡುತ್ತಿದ್ದರು. ನನಗೂ ದಲಿತ ಸಂಘದೋರು ಮಾಡೋದು ಸರಿ ಅನ್ನಿಸುತ್ತಿತ್ತು. ಅರಿವಿಲ್ಲದಂತೆ ನಾನೂ ಸಂಘದಲ್ಲಿ ಸೇರಿಕೊಂಡೆ. ಆಗ ದೊರೈರಾಜು ಅವರ ಹೆಂಡತಿ ಆಂಜಿನಮ್ಮ ನಮ್ಮ ಹಟ್ಟಿಯಲ್ಲಿ ದಲಿತ ಹೆಣ್ಣುಮಕ್ಕಳ ಸಂಘವನ್ನು ಕಟ್ಟಿ ನಮ್ಮನ್ನೆಲ್ಲಾ ಹೋರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹಟ್ಟಿಯಲ್ಲಿ ಮನೆ ಮನೆಗೆ ಹೋಗಿ ಹೆಣ್ಣುಮಕ್ಕಳನ್ನು ನಾನೇ ಕರೆದುಕೊಂಡು ಬರುತ್ತಿದ್ದೆ. ನಾನು ಕರೆದರೆ ಸಾಕು ಎಲ್ಲಾ ಹೆಣ್ಣುಮಕ್ಕಳು ನಮ್ಮ ಹಿಂದೆ ಬರೋರು. ಎಷ್ಟೋ ಜನ ಬಸರೀರು, ಬಾಣಂತಿಯರೂ ನಮ್ಮೊಡನೆ ಬರುತ್ತಿದ್ದರು. ಹೀಗೆ ಸುಮಾರು ೪೦-೫೦ ಜನ ಸೇರಿಕೊಂಡು ‘ದಿಕ್ಕಾರ’ ‘ದಿಕ್ಕಾರ’ ‘ನಮಗೆ ನ್ಯಾಯ ಬೇಕು’ ಎಂದು ಕೂಗ್ತಾ ತುಮಕೂರು ಡಿಸಿ ಆಫೀಸು, ತುಮಕೂರು ಮುನ್ಸಿಪಾಲಿಟಿ ಆಫೀಸು ಮುಂಭಾಗದಲ್ಲಿ ಧರಣಿ ಮಾಡುತ್ತಿದ್ದಿವ್ವಿ. ನಾವು ಚಳವಳಿಗೆ ಹೋದ ದಿವಸ ಕೂಲಿ ಇರುತ್ತಿರಲಿಲ್ಲ! ಆದರೂ ಅದನ್ನೆಲ್ಲಾ ನಾವು ಎಂದೂ ಯೋಚಿಸುತ್ತಿರಲಿಲ್ಲ. ತುಮಕೂರಿನಲ್ಲಿ ನಡೆಯೋ ಹೋರಾಟಗಳಿಗೆ ನಮಗೆ ಊಟ ಯಾರೂ ಕೊಡಿಸುತ್ತಿರಲಿಲ್ಲ. ಯಾರಾದರೂ ಪುಣಾತ್ಮರು ಕಡ್ಲೆಕಾಯಿನೋ ಅಥವಾ ಕಡ್ಲೆಪುರಿನೋ ತರಿಸಿಕೊಟ್ಟರೆ ಅದನ್ನೇ ತಿಂದು ನೀರು ಕುಡಿತಿದ್ವಿ. ಆಗ ನಮಗೆ ಊಟ, ತಿಂಡಿ ಮುಖ್ಯ ಅಂಥ ಯಾವತ್ತೂ ಅನಿಸುತ್ತಿರಲಿಲ್ಲ. ಹೋರಾಟಕ್ಕೆ ಬಂದ ಬಾಣಂತಿಯರ ಸಣ್ಣ ಮಕ್ಕಳುನ್ನು ನಾನು ನೋಡಿಕೊಳ್ಳುತ್ತಿದ್ದೆ. ನನ್ನ ಜೊತೆಯಲ್ಲಿ ನಮ್ಮ ಹಟ್ಟಿಯವರಾದ ಪಾಪಮ್ಮ, ರುಕ್ಕಮ್ಮ, ಹುಚ್ಚಹನುಮಕ್ಕ, ನಾಗಮ್ಮ, ಚಿಗನರಸಮ್ಮ, ಕಮಲಿ, ಗಂಗಮ್ಮ, ಇಂದಿರಮ್ಮ ಇವರೆಲ್ಲಾ ಬರೋರು. ನಾವೆಲ್ಲಾ ಸಂಘಕ್ಕಾಗಿ ಪ್ರತಿ ತಿಂಗಳೂ ಕೂಲಿ ಮಾಡಿದ್ದರಲ್ಲಿ ಉಳಿಸಿ ಹಣ ಕೊಡುತ್ತಿದ್ದೆವು. ನಾವು ಕೊಟ್ಟ ಹಣದ ಲೆಕ್ಕನ್ನೆಲ್ಲಾ ಆಂಜಿನಮ್ಮ ಬರೆದು ಮಡಗುತ್ತಿತ್ತು. ಈಗಲೂ ಆಂಜಿನಮ್ಮನ ಹತ್ತಿರ ಲೆಕ್ಕದ ಪುಸ್ತಕ ಇದೆ. ಆಗ ನಾವು ಕೂಗುತ್ತಿದ್ದ ಒಂದು ಕೂಗು ಈಗಲೂ ನನಗೆ ನೆನಪಲ್ಲಿದೆ ‘ಎಲ್ಲಿವರೆಗೆ ಹೋರಾಟ; ಗೆಲ್ಲೋವರೆಗೆ ಹೋರಾಟ’ ಎಂಥ ಮಾತು ಅದು! ನನಗೆ ಈಗಲೂ ಅದನ್ನೆಲ್ಲಾ ನೆನಸಿಕೊಂಡರೆ, ಹೋರಾಟಕ್ಕೆ ಹೋಗಬೇಕು ಅನ್ನಿಸುತ್ತದೆ. ಆದರೆ ಈಗ ಹೋರಾಟ ಮಾಡೋರೆ ಇಲ್ಲದಂಗಾಗೈತೆ. ಅದನ್ನೆಲ್ಲಾ ನೆನಸಿಕೊಂಡರೆ ಮನಸ್ಸು ಒಡೆದುಹೋಗುತ್ತದೆ. ದಲಿತ ಸಂಘ ಅನ್ನೋದು ಒಡೆದು ಚಿಪ್ಪನ್ನ್ ಚೂರು ಆಗೈತೆ. ಹೆಂಗೆ ಭೂಮಿ ಮೇಲೆ ಒಂದೇ ಸೂರ್ಯ, ಒಂದೇ ಚಂದ್ರ ಐತೊ, ಹಂಗೆ ಒಂದೇ ಸಂಘ ಇರಬೇಕು ಅಲ್ವೆ!
ನಾನು ಬಿ ಕೃಷ್ಣಪ್ಪನೋರ ಜೊತೆಗೆ ಚಂದ್ರಗುತ್ತಿಗೆ ಹೋಗಿ ಬೆತ್ತಲೆ ಸೇವೆ ವಿರುದ್ಧದ ಚಳವಳಿಯಲ್ಲೂ ಭಾಗವಹಿಸಿದ್ದೆ. ನನ್ನ ಹಟ್ಟಿಯವರಾದ ಗಂಗಾಧರ, ನರಸೀಯಪ್ಪ, ಗಿರಿಜಮ್ಮ, ಗಂಗಮ್ಮ ಭಾಗವಹಿಸಿದ್ದೆವು. ನಮ್ಮ ಹೆಣ್ಣುಮಕ್ಕಳನ್ನೆಲ್ಲಾ ಬೆತ್ತಲೆ ಮಾಡಿದ್ದನ್ನು ಕಣ್ಣಾಗೆ ನೋಡಕ್ಕೆ ಆಗಲಿಲ್ಲ. ಊರು ತುಂಬಾ ಪೋಲೀಸರೇ ತುಂಬಿದ್ದರು. ಬಿ ಕೃಷ್ಣಪ್ಪನೋರು ನಮಗೆಲ್ಲಾ ಧೈರ್ಯ ಹೇಳಿ ತಮ್ಮ ಜೊತೆಯಲ್ಲಿಯೇ ನಮ್ಮನ್ನು ಕರೆದುಕೊಂಡು ಹೋದರು. ನನ್ನ ಜೀವನದಲ್ಲಿ ಮರೆಯಬಾರದ ಹೋರಾಟ ಅದು. ಅದಕ್ಕೆ ಈಗಲೂ ನನಗೆ ದಲಿತ ಸಂಘ ಅಂದರೆ ನಮ್ಮ ಅವ್ವನ ನೆನದಂಗೆ ಆಗುತ್ತದೆ. ಇದೇ ರೀತಿ ಹೊನ್ನವಳ್ಳಿ ಭೂ ಹೋರಾಟ, ಅಂತರಸನಹಳ್ಳಿ ಬೋವಿ ಹೆಣ್ಣುಮಗಳು ವಿಶಾಲಾಕ್ಷಿ ಅತ್ಯಾಚಾರ ವಿರುದ್ಧದ ಹೋರಾಟ, ಹುಣುಸೂರು ದಲಿತ ಹೆಣ್ಣುಮಕ್ಕಳ ಅತ್ಯಾಚಾರ ವಿರುದ್ಧದ ಹೋರಾಟ ಹೀಗೆ ಅನೇಕ ಹೋರಾಟಗಳಲ್ಲಿ ನಾನು ಮತ್ತು ನನ್ನ ಹಟ್ಟಿಯ ಸಂಗಡಿಗರು ಭಾಗವಹಿಸಿದ್ದೇವೆ.
ಈಗ ನಾನು ವಾಸವಿರುವುದು ನಮ್ಮ ಹಟ್ಟಿಯ ಪೂರ್ವಭಾಗಕ್ಕಿರುವ ‘ಅಂಬೇಡ್ಕರ್ ನಗರದಲ್ಲಿ’ ಮೊದಲು ಇದೊಂದು ಸರ್ಕಾರಿ ಖರಾಬ್ ಭೂಮಿಯಾಗಿತ್ತು. ಅದನ್ನು ಅಲ್ಲಿದ್ದ ಕೆಲವು ಬಲ್ಲಿದರು ಹಾಗೂ ದಲ್ಲಾಳಿಗಳು ಸೈಟ್ ಮಾಡಿ ಮಾರಾಟಮಾಡಲು ಯೋಜಿಸಿದ್ದರು. ಈ ಜಾಗವನ್ನು ನಮ್ಮ ಹಟ್ಟಿಯ ಮನೆಯಿಲ್ಲದವರಿಗೆ ಭೂ ಹಂಚಿಕೆ ಮಾಡಿಕೊಡಬೇಕೆಂದು ದಲಿತ ಸಂಘದವರು ಹೋರಾಟ ಆರಂಭಿಸಿದರು. ನಾನೂ ಕೂಡ ಈ ಹೋರಾಟದಲ್ಲಿ ಬಿದ್ದೆ. ಆ ಸರ್ಕಾರಿ ಜಾಗವನ್ನು ಅಲ್ಲಿದ್ದ ದಲ್ಲಾಳಿಗಳು ಸುಳ್ಳು ದಾಖಲೆ ಸೃಷ್ಟಿಸಿ ಲಪಟಾಯಿಸಲು ಹಿಕ್ಮತ್ ಮಾಡಿದ್ದ ಕೆಲವರು ನಮ್ಮನ್ನೆಲ್ಲಾ ಹೆದರಿಸಿದ್ದರು. ಒಂದು ದಿನ ಮನೆಯಿಲ್ಲದ ನಮ್ಮ ದೊಡ್ಡಹಟ್ಟಿಯವರೆಲ್ಲಾ ಒಂದುಗೂಡಿ ಆ ಸರ್ಕಾರಿ ಜಾಗದಲ್ಲಿ ಸುಮಾರು ೩೫ ಜನ ನಮ್ಮ ಹಟ್ಟಿಯ ದಲಿತ ಸಂಘದವರ ಸಹಾಯದಿಂದ ಗುಡಿಸಲು ಹಾಕಿಕೊಂಡೆವು. ನಾವು ಹಾಕಿಕೊಂಡ ಗುಡಿಸಿಲಿಗೆ ಬಾಗಿಲಿಲ್ಲ! ಕಿಟಕಿಯಿಲ್ಲ! ಲೈಟಿಲ್ಲ, ರಸ್ತೆಯಂತೂ ಮೊದಲೇ ಇರಲಿಲ್ಲ! ಆದರೆ ಧೈರ್ಯವಿತ್ತು. ನಾವು ಅಲ್ಲೇ ತಳವೂರಿದೆವು. ನಮ್ಮ ಗುಡಿಸಿಲಿನಲ್ಲಿ ನಮ್ಮದೆನ್ನುವುದು ಇದ್ದದ್ದು ಹಸಿದ ಹೊಟ್ಟೆ, ಹರಿದ ಬಟ್ಟೆಗಳು, ಒಂದೆರೆಡು ಮಡಕೆ ಕುಡಿಕೆಗಳು ಮಾತ್ರ! ಭೂಮಿ ಲಪಟಾಯಿಸುವ ಪುಂಡರು ನಮ್ಮ ಮೇಲೆ ಯಾವಾಗಬೇಕಾದರೂ ದಾಳಿ ಮಾಡಬಹುದಾಗಿತ್ತು. ಅಂದು ಅಂತಹ ಭಯದ ವಾತಾವರಣವಿತ್ತು! ಇದರ ನಡುವೆ ಭೂಮಿಯಿಲ್ಲದವರ ಪರವಾಗಿ ದಲಿತ ಸಂಘದ ಹೋರಾಟವೂ ಕೂಡ ನಿರಂತರವಾಗಿ ಸಾಗಿತ್ತು. ಒಂದು ದಿನ ಯಾವ ಕಾರಣವೋ ಗೊತ್ತಿಲ್ಲ! ನಮ್ಮ ಗುಡಿಸಲುಗಳಿಗೆಲ್ಲಾ ಬೆಂಕಿ ಬಿದ್ದಿತು. ನಮ್ಮ ೩೫ ಗುಡಿಸಲುಗಳೆಲ್ಲಾ ಒಂದೇ ಸಲ ಉರಿದು ಬೂದಿಯಾದವು. ನಾವು ಉಟ್ಟಿದ್ದ ಬಟ್ಟೆಯನ್ನುಳಿದು ಗುಡಿಸಲಿನಲ್ಲಿದ್ದ ಎಲ್ಲವೂ ಬೂದಿಯಾಗಿತ್ತು. ಆಗ ಎಷ್ಟೋ ದಿನ ಬೀದಿಯಲ್ಲೇ ಮಲಗಿ, ಆಕಾಶವನ್ನೇ ಹೊದಿಕೆಯನ್ನಾಗಿ ಮಾಡಕೊಂಡೆವು. ನಮ್ಮ ದಲಿತ ಸಂಘದವರು ಅಲ್ಲಿ ಇಲ್ಲಿ ಬೇಡಿ ಊಟ ತಂದು ಎಲ್ಲರಿಗೂ ಕೊಡುತ್ತಿದ್ದರು. ನಾವೆಲ್ಲ ಒಂದೇ ಕಡೆ ಕುಳಿತು ಊಟ ಮಾಡುತ್ತಿದ್ದೆವು. ಅಂತಹ ಸಮಯದಲ್ಲೂ ನಾವೇನೂ ಅಧೀರರಾಗಲಿಲ್ಲ. ಏಕೆಂದರೆ ನಾವು ಕಳೆದುಕೊಂಡದ್ದು ಒಂದೆರೆಡು ಗರಿ ಹೊದಿಸಿದ್ದ ಗುಡಿಸಲನ್ನೇ ಹೊರತು ನಮ್ಮ ಹೋರಾಟದ ಕೆಚ್ಚನ್ನಲ್ಲ ಎಂದು ನಾವೆ ಸಮಾಧಾನಪಟ್ಟುಕೊಂಡೆವು. ಅಂದಿನಿ೦ದಲೇ ನಮ್ಮ ಹೋರಾಟವನ್ನು ಇನ್ನೂ ಹೆಚ್ಚು ವೇಗಗೊಳಿಸಿದೆವು.
ನಮ್ಮ ಸಂಘದ ಹೋರಾಟದ ಫಲವಾಗಿ ಒಂದು ದಿನ ನಾವುಗಳು ಗುಡಿಸಲುಗಳನ್ನು ಹಾಕಿಕೊಂಡಿದ್ದ ಭೂಮಿಯನ್ನು ಸರ್ಕಾರ ನಮಗೆ ವಹಿಸಿಕೊಟ್ಟಿತು. ಅದನ್ನೇ ‘ಅಂಬೇಡ್ಕರ್ ನಗರ’ ಎಂದು ಸಂಘದವರೆಲ್ಲಾ ಕೂಡಿ ನಾಮಕರಣ ಮಾಡಿದೆವು. ಭೂಮಿಯ ಮೇಲೆ ನನ್ನದೆನ್ನುವ ಒಂದು ಜಾಗವನ್ನು ದಲಿತ ಸಂಘದ ಹೋರಾಟದ ಮೂಲಕ ನಾನು ಪಡೆದುಕೊಂಡೆ. ಸರ್ಕಾರ ನನಗೆ ಹಕ್ಕುಪತ್ರ ಕೊಟ್ಟಿದೆ. ಆ ಹಕ್ಕುಪತ್ರ ನನ್ನ ಕೈಗೆ ಬಂದಾಗ ಕಣ್ಣೀರು ಸುರಿಯಿತು. ಕಣ್ಣೀರನ್ನು ಸೆರಗಿನಲ್ಲಿ ಒರೆಸಿಕೊಂಡು ಹಕ್ಕುಪತ್ರವನ್ನು ಪಡೆದುಕೊಂಡೆ. ಆಗ ನನಗೆ ಬಿ ಕೃಷ್ಣಪ್ಪನವರು ಆಗಾಗ್ಗೆ ಹೇಳುತ್ತಿದ್ದ ‘ದಲಿತರಿಗೆ ಹೋರಾಟವಿಲ್ಲದೆ ಯಾವುದೂ ಸಿಕ್ಕುವುದಿಲ್ಲ!’ ಎನ್ನುವ ಮಾತು ನೆನಪಾಯಿತು. ಈಗ ನನ್ನ ಅಕ್ಕನ ಮೂರು ಮಕ್ಕಳೊಂದಿಗೆ ‘ಅಂಬೇಡ್ಕರ್ ನಗರ’ದಲ್ಲಿ ವಾಸವಾಗಿದ್ದೇನೆ. ‘ಅಂಬೇಡ್ಕರ್ ನಗರ’ದಲ್ಲಿ ಮಕ್ಕಳಿಗಾಗಿ ಶಿಶುವಿಹಾರವೊಂದನ್ನು ಸ್ಥಾಪಿಸಲು ನಾವೆಲ್ಲಾ ಸೇರಿ ಒಂದು ಕೊಠಡಿಯನ್ನು ಕಟ್ಟಿದೆವು. ಅದಕ್ಕೆ ನಾವೇ ಮಣ್ಣುಹೊತ್ತು, ನಾವೆ ಗಾರೆ ಕೆಲಸ ಮಾಡಿ, ನಾವೆ ಹೆಂಚುಹೊದಿಸಿ ಕಟ್ಟಿದೆವು. ಆಂಜಿನಮ್ಮ ನಮಗೆ ತಮ್ಮ ಮನೆಯಿಂದಲೇ ಊಟ ಮಾಡಿಕೊಂಡು ತರುತ್ತಿದ್ದರು. ಈ ಶಾಲೆಗೆ ನಮ್ಮ ಹಟ್ಟಿಯ ಮರಿಯಪ್ಪ ಅವರನ್ನು ಶಿಕ್ಷಕರನ್ನಾಗಿ ನೇಮಿಸಿದೆವು.
ನಾನು ದಲಿತ ಸಂಘ ಸೇರಿದ ಮೇಲೆ ನನ್ನ ಒರಟು ರೂಪವೇ ಬದಲಾಯಿತು. ಸಂಘ ನಮ್ಮ ತಿಳುವಳಿಕೆಯನ್ನೇ ಬದಲಿಸಿತು. ನಮಗಿಂತ ಬಡವರಿಗೆ ಸಹಾಯ ಮಾಡಬೇಕು, ಅವರ ಪರವಾಗಿ ಹೋರಾಟಮಾಡಬೇಕು ಎಂಬ ತಿಳುವಳಿಕೆ ಮೂಡಿಸಿತು. ನಮ್ಮ ಹಟ್ಟಿಯ ಮುಂದೆ ಇನ್ನೊಂದು ಕಿರು ಹಟ್ಟಿಯಿತ್ತು. ಅದನ್ನು ನಾವು ‘ಕೀಮ್ಲಿ ಸೆಟ್’ ಎಂದು ಕರೆಯುತ್ತಿದ್ದೆವು. ಅಲ್ಲಿದ್ದವರೆಲ್ಲಾ ನಮಗಿಂತ ಕಡುಬಡವರಾಗಿದ್ದರು ಜೊತೆಗೆ ಸ್ವಚ್ಛತೆಯಿರಲಿಲ್ಲ. ಮುಖ್ಯವಾಗಿ ನಾವೂ ಎಲ್ಲರಂತೆ ಬದಲಾಗಬೇಕೆಂಬ ಆಸೆ ಅವರಲ್ಲಿರಲಿಲ್ಲ. ಆದ್ದರಿಂದ ಅವರು ನಮ್ಮ ಮಾದಿಗರೇ ಆಗಿದ್ದರೂ ಅವರಿಗೂ ನಮಗೂ ಕೊಟ್ಟು ತರೋದು ಇರಲಿಲ್ಲ! ಆದರೆ ಈಗ ಎಲ್ಲವೂ ಬದಲಾಗಿದೆ. ಅವರೆಲ್ಲಾ ಉತ್ತಮವಾದ ಮನೆಗಳನ್ನು ಕಟ್ಟಿಸಿಕೊಂಡು ಚೆನ್ನಾಗಿದ್ದಾರೆ. ಅವರ ಮಕ್ಕಳೆಲ್ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನನ್ನನ್ನು ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಸಿದ್ದು ತುಮಕೂರಿನ ಉಪ್ಪಾರಹಳ್ಳಿಯಲ್ಲಿದ್ದ ರುದ್ರಪ್ಪ ಎನ್ನುವವರು. ಆಗ ನನಗೆ ತಿಂಗಳಿಗೆ ನೂರು ರೂಪಾಯಿ ಸಂಬಳ ಕೊಡುತ್ತಿದ್ದರು. ಅನೇಕ ವರ್ಷ ನೂರು ರೂಪಾಯಿಗೇ ಕೆಲಸ ಮಾಡಿದೆ. ನಂತರ ಸಿರಾದಲ್ಲಿ ತಿಂಗಳಿಗೆ ಮೂನ್ನೂರು ರೂಪಾಯಿ ಕೊಡುತ್ತಾರೆಂದು ಸಿರಾಗೆ ಹೋದೆ. ಈಗ ಮತ್ತೆ ತುಮಕೂರಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಇವನ್ನೆಲ್ಲಾ ನೋಡಿದರೆ, ದಲಿತ ಸಂಘ ಸೇರದಿದ್ದರೆ ನಮ್ಮ ಬಾಳು ಹಾಳು ಕೊಂಪೆಯ೦ತಾಗುತ್ತಿತ್ತು. ಆದರೆ ಅದ್ಯಾವ ಗಳಿಗೆಯಲ್ಲಿ ಸಂಘಕ್ಕೆ ಸೇರಿದೆವೋ ಈಗ ನಮ್ಮ ಬಾಳಿನ ದೀಪ ನೆಮ್ಮದಿಯಾಗಿ ಉರಿಯುತ್ತಿದೆ.
ಆದ್ದರಿಂದ ನನ್ನ ಪಾಲಿಗೆ ಈಗಲೂ ದಲಿತ ಸಂಘವೆ೦ದರೆ ನನ್ನ ತಾಯಿಯ ನೆನಪಾಗುತ್ತದೆ. ಅವಳು ಬದುಕಿದ್ದರೆ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಆದರೆ ಈಗ ಅವಳಿಲ್ಲ.






0 Comments