ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಜೀರಿಯಾ ಕಥೆಯೊಳಗಿನ ಭಾರತದ ವಾಸ್ತವಗಳು!

ಸಹ್ಯಾದ್ರಿ ನಾಗರಾಜ್

ಚಂದಿರನೂರಿನಲ್ಲಿ..


ಕೆನ್ ಸರೊ ವಿವಾ

“ಸಭ್ಯತೆಯ ಸೋಗು ಧರಿಸಿದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪ್ರತಿನಿತ್ಯ, ಪ್ರತಿಕ್ಷಣ ಕಾನೂನನ್ನು ಹೇಗೆ ಉಲ್ಲಂಘಿಸುವುದು, ಜನರ ಹಣವನ್ನು ಹೇಗೆ ದಕ್ಕಿಸಿಕೊಳ್ಳುವುದು ಎಂಬ ಬಗ್ಗೆಯೇ ಯಾವಾಗಲೂ ಚಿಂತಿಸುತ್ತಿರುತ್ತಾರೆ. ಹೀನ ಮನರಂಜನೆ ಮೂಲಕ ಜನರಲ್ಲಿನ ಪ್ರಶ್ನಿಸುವ, ಪ್ರತಿಭಟಿಸುವ ಶಕ್ತಿಯನ್ನು ನಾಶ ಮಾಡುವುದೇ ಸರ್ಕಾರದ ಸಾಮಾನ್ಯ ಉದ್ದೇಶವಾಗಿರುತ್ತದೆ”
-ಇದು ಭಾರತದ ರಾಜಕೀಯ ವಿಶ್ಲೇಷಕರು ಆಡಿದ ಮಾತಲ್ಲ. ಮಾಧ್ಯಮಗಳು ಬರೆದ ಕಿಡಿನುಡಿಯಲ್ಲ. ಹಾಗೇನೇ ಪ್ರಜಾಪ್ರಭುತ್ವ ಅಂದ್ರೆ ಸಾಮಾಜಿಕ ಸಮಾನತೆಯ ಉತೃಷ್ಟ ಸ್ಥಿತಿ ಎಂದು ಭಾವಿಸಿ ಈಗ ಭ್ರಮನಿರಸನಗೊಂಡಿರುವ ಮಂದಿ ಮಾಡಿರೋ ಟೀಕೆ-ಟಿಪ್ಪಣಿಯೂ ಅಲ್ಲ. ಇನ್ನು ವಿರೋಧ ಪಕ್ಷದವರು ಮಾಡಿದ ಆರೋಪವಂತೂ ಅಲ್ಲವೇ ಅಲ್ಲ. ಇದು ಕೆನ್-ಸರೊ-ವಿವಾ ಎಂಬ ನೈಜೀರಿಯಾದ ಬರಹಗಾರನೊಬ್ಬ ತನ್ನ ಕಥೆಯೊಳಗೆ ಹಿಡಿದಿಟ್ಟಿರೋ ಸಾಲುಗಳು, ಆ ಕಥೆಯ ಹೆಸರು ‘ಆಫ್ರಿಕಾ ಕಿಲ್ಸ್ ಹರ್ ಸನ್’.
ಆತ ಈ ಕಥೆಯೊಳಗೆ ಬರೆದಿರುವ ಇಂಥ ಹಲವು ಸಾಲುಗಳು ಸದ್ಯದ ಭಾರತಕ್ಕೆ ಸಂಪೂರ್ಣವಾಗಿ ಅನ್ವಯಿಸುವಂತಿವೆ. ಕೆನ್ ಸರೊ ವಿವಾ ಬಹುಮುಖಿ ಪ್ರತಿಭಾವಂತ. ತನ್ನ 54 ವರ್ಷಗಳ ಬದುಕಿನಲ್ಲಿ ಅಧ್ಯಾಪಕ, ಲೇಖಕ, ಪರಿಸರವಾದಿ ಆಗಿದ್ದಾತ. ಕೆಲಕಾಲ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಕಾರ್ಯದರ್ಶಿಯೂ ಆಗಿ ಕೆಲಸ ಮಾಡಿದ್ದವ. ಆಂತರಿಕ ಕಲಹದಲ್ಲಿ ಮುಳುಗಿದ್ದ ನೈಜೀರಿಯಾದ ಬದುಕನ್ನು, ಆ ಕಾಲದ ಅಲಿಖಿತ ಚರಿತ್ರೆಯನ್ನು ತನ್ನ ಬರವಣಿಗೆಯಲ್ಲಿ ಯಥಾವತ್ತಾಗಿ ಹಿಡಿದಿಟ್ಟಾತ.
* * * * *

ಆಫ್ರಿಕಾದಲ್ಲಿ ನೈಜೀರಿಯಾ

ಇನ್ನು ಆಫ್ರಿಕಾದ ಬಹುತೇಕ ದೇಶಗಳಂತೆಯೇ ನೈಜೀರಿಯಾ ಕೂಡಾ ಸಂಕಷ್ಟಗಳಲ್ಲಿ ಮುಳುಗಿದ್ದ ದೇಶ. (ಈಗಲೂ ಅದರ ಪರಿಸ್ಥಿತಿ ತೀರಾ ಭಿನ್ನವಾಗೇನೂ ಇಲ್ಲ.) 19 ಮತ್ತು 20ನೇ ಶತಮಾನಗಳಲ್ಲಿ ಆಫ್ರಿಕಾದ ಇತರ ದೇಶಗಳಿಗಾದ ಪರಿಸ್ಥಿತಿಯೇ ನೈಜೀರಿಯಾಕ್ಕೂ ಒದಗಿಬಂದಿತ್ತು. 1906ರಿಂದ 1960ರವರೆಗೂ ಆಂಗ್ಲರ ಹಿಡಿತದಲ್ಲಿದ್ದ ನೈಜೀರಿಯಾ ನಂತರ ಸ್ವಾತಂತ್ರವನ್ನೇನೋ ಪಡೆದುಕೊಂಡಿತು. ಆದರೆ ನೈಜೀರಿಯನ್ನರ ಬದುಕಿನಲ್ಲಿ ಹೊಸ ಬೆಳಕಾಗಬೇಕಿದ್ದ ಸ್ವಾತಂತ್ರದ ಕಿಡಿ, ಕಲಹದ ಜ್ವಾಲೆ ಹಬ್ಬಲು ಕಾರಣವಾಯ್ತು. ನೈಜೀರಿಯಾ ಅನ್ನೋದು ಹೇಳುವವರು-ಕೇಳುವವರಿಲ್ಲದ ನಾಡಾಯಿತು. ಅಪಾರ ತೈಲ ಸಂಪತ್ತಿನ ಆಗರವಾಗಿದ್ದ ನೈಜೀರಿಯಾ ಹೊತ್ತಿ ಉರಿಯಲು ಬಹಳ ಕಾಲ ಬೇಕಾಗಲಿಲ್ಲ. ಈ ಸಂದರ್ಭದ ಘಟನೆಗಳನ್ನೆಲ್ಲಾ ಕಂಡು ಕೇಳಿದ ಕೆನ್ ಸರೊ ವಿವಾ ಅದೆಲ್ಲವನ್ನೂ ತನ್ನ ಬರಹಗಳಲ್ಲಿ ಬಿಡಿಸಿಟ್ಟ. ಸಾಹಿತ್ಯದ ರೂಪದಲ್ಲಿ ಮನಮುಟ್ಟುವಂತೆ ಚಿತ್ರಿಸಿದ. ಹೀಗೆ ರೂಪುತಾಳಿದ ನೈಜೀರಿಯಾದ ಅಲಿಖಿತ ಚರಿತ್ರೆಯಲ್ಲಿನ ಒಂದು ಇಣುಕುನೋಟವೇ ‘ಆಫ್ರಿಕಾ ಕಿಲ್ಸ್ ಹರ್ ಸನ್’ ಕಥೆ.
* * * * *
ಸರ್ಕಾರಿ ಸಂಸ್ಥೆಯೊಂದರಲ್ಲಿ ನೌಕರಿ ಮಾಡುತ್ತಿದ್ದ ನಿರೂಪಕ, ಪರಿಸ್ಥಿತಿಯ ಅವಕೃಪೆಗೆ ಸಿಲುಕಿ ಡಕಾಯತನ ಪಟ್ಟ ಕಟ್ಟಿಸಿಕೊಳ್ಳುತ್ತಾನೆ. ಆತನಂತೆಯೇ ವ್ಯವಸ್ಥೆಯ ಕಾಕದೃಷ್ಟಿಗೆ ಸಿಕ್ಕಿದ ಪೊಲೀಸ್ ಹಾಗೂ ಮಿಲಿಟರಿ ಅಧಿಕಾರಿಗಳಿಬ್ಬರು ಆತನ ಜೊತೆ ಸೇರಿಕೊಳ್ಳುತ್ತಾರೆ. ಕಡೆಯಲ್ಲಿ ಮೂವರೂ ಸಿಕ್ಕುಬಿದ್ದು ಮರಣದಂಡನೆ(ಫೈರಿಂಗ್) ಆದೇಶಕ್ಕೂ ಗುರಿಯಾಗುತ್ತಾರೆ. ಇನ್ನೇನು ನಾಳೆ ಮರಣದಂಡನೆ ಅನ್ನುವಾಗ ಜೈಲಿನ ನೀರವ ರಾತ್ರಿಯಲ್ಲಿ ಕೂತು ನಿರೂಪಕ ತನ್ನ ಪ್ರೀತಿಯ ಗೆಳತಿಗೆ ಪತ್ರ ಬರೆಯಲು ಶುರುಮಾಡುತ್ತಾನೆ. ಅದರಲ್ಲಿ ತನ್ನ ಕಥೆ ಹೇಳುತ್ತಾನೆ. ತಾನು ಹೀಗಾಗಲು ಕಾರಣಗಳೇನು ಎಂಬುದನ್ನು ವಿವರಿಸುತ್ತಾನೆ. ವ್ಯವಸ್ಥೆಯೊಂದರ ಎಲ್ಲ ಭ್ರಷ್ಟ ಮಗ್ಗಲುಗಳನ್ನೂ ಅಕ್ಷರಗಳ ಗಾಳದಲ್ಲಿ ಹಿಡಿದು ತೋರಿಸುತ್ತಾನೆ. ಆತನ ಮಾತುಗಳಲ್ಲಿ ಜೈಲು, ಕೋರ್ಟು, ಮಿಲಿಟರಿ, ಸರ್ಕಾರ, ಮಾಧ್ಯಮ, ಧರ್ಮ ಎಲ್ಲವೂ ಬಂದುಹೋಗುತ್ತವೆ.

ಮರುಭೂಮಿಯಾಗಿದೆ ಚಾಲಾಕಿಲ್ಲದವರ ಬದುಕು

“ಜೈಲಿನ ಗಾರ್ಡ್’ಗೆ ಲಂಚ ನೀಡಿರುವುದರಿಂದ ಆತ ಖಂಡಿತ ಈ ಪತ್ರ ನಿನಗೆ ತಲುಪಿಸುತ್ತಾನೆ ಎಂಬ ಖಾತ್ರಿಯಿದೆ” ಎನ್ನುತ್ತಾನೆ ನಿರೂಪಕ. ಆತ ಮತ್ತು ಆತನ ಗೆಳೆಯರು ಸೆರೆಸಿಕ್ಕಿ ಕೋರ್ಟಿಗೆ ಕರೆದುಕೊಂಡು ಹೋದಾಗ ತಮಗೆ ಆದಷ್ಟು ಬೇಗ ಮರಣದಂಡನೆ ವಿಧಿಸಬೇಕೆಂದು ಕೋರಿ ನ್ಯಾಯಾಧೀಶರನ್ನೇ ಕಕ್ಕಾಬಿಕ್ಕಿ ಮಾಡುತ್ತಾರೆ. ಇದಕ್ಕೆ ನಿರೂಪಕ ಕೊಡುವ ಸಮಜಾಯಿಷಿ ಇದು, “ಕಾನೂನು ಎಂದಿನಂತೆ ಕತ್ತೆಯಾಗಲು ಬಿಡಬಾರದು. ನಾವು ನಮ್ಮ ಅಂತಃಪ್ರೇರಣೆಗೆ, ದೇಶಕ್ಕೆ, ಮನುಕುಲಕ್ಕೆ ಮೋಸ ಮಾಡಬಾರದು ಎಂದು ನಿಶ್ಚಯಿಸಿದ್ದೆವು. ಇದೊಂದು ದೀರ್ಘ ವಿಚಾರಣೆ ಎಂಬ ಪ್ರಹಸನವಾಗಲು ಬಿಡಬಾರದೆಂದು ನಮ್ಮ ತೀರ್ಮಾನವಾಗಿತ್ತು.” ಈ ಮಾತುಗಳನ್ನು ಆಡುವಾಗ ಹೀಗೆ ವಿಚಾರಣೆ ದೀರ್ಘಕಾಲವಾಗಲು ವಕೀಲರು ಹೇಗೆ ಸಹಕರಿಸುತ್ತಾರೆ ಎಂಬುದನ್ನೂ ವ್ಯಂಗ್ಯವಾಗಿ ವಿವರಿಸುತ್ತಾನೆ.
ತಾನು ರಕ್ಷಣಾ ಇಲಾಖೆಯಲ್ಲಿ ಗುಮಾಸ್ತನಾಗಿ ಸೇರಿದ್ದಾಗಿನ ಅನುಭವವನ್ನು “ಮೇಲಿನಿಂದ ಕೆಳಗಿನವರೆಗೆ ಪ್ರತಿಯೊಬ್ಬರೂ ರಾಷ್ಟ್ರದ ಬೊಕ್ಕಸವನ್ನು ಹೇಗೆ ಕೊಳ್ಳೆ ಹೊಡೆಯುತ್ತಾರೆ ಎಂಬುದನ್ನು ಕಣ್ಣಾರೆ ಕಂಡೆ. ಪ್ರತಿಯೊಬ್ಬರೂ ಈ ದಂದೆಯಲ್ಲಿ ಮುಳುಗಿದ್ದರಿಂದ ಯಾರಿಗೆ ದೂರು ನೀಡಬೇಕೆಂಬುದೇ ತಿಳಿಯಲಿಲ್ಲ” ಎಂಬ ಸಾಲುಗಳಲ್ಲಿ ಕಟ್ಟಿಕೊಡುತ್ತಾನೆ. “ರಾಜಕಾರಣ, ವ್ಯಾಪಾರ, ವಿದ್ಯೆ…ಎಲ್ಲೆಡೆ ದರೋಡೆಯೇ ಮೂಲಮಂತ್ರವಾಗಿದೆ” ಎಂದು ಉಲ್ಲೇಖಿಸುತ್ತಾನೆ.

ಹೂತುಹೋಗಿದೆ ನ್ಯಾಯದ ಬಂಡಿ

ನಾಳೆ ಮರಣದಂಡನೆ ವಿಧಿಸುವ ಮುನ್ನ ತಮಗಾಗಿ ಪ್ರಾರ್ಥಿಸಲು ಬರುವ “ಪಾದ್ರಿ ನಾವು ಆತ್ಮಸದ್ಗತಿ ಪಡೆಯುವಂತೆ ಪ್ರಾರ್ಥನೆ ಸಲ್ಲಿಸುತ್ತಾನೆ. ಆದರೆ ಅವನು ಪ್ರಾರ್ಥಿಸುವುದು ನಮಗಾಗಿ ಅಲ್ಲ, ಅವನ ಹೊಟ್ಟೆಪಾಡಿಗಾಗಿ” ಎಂದು ವಿಶ್ಲೇಷಿಸುತ್ತಾನೆ.
ಮಾಧ್ಯಮಗಳ ಮನಸ್ಥಿತಿ ಬಗ್ಗೆ ಆತ ಸರಿಸುಮಾರು 40 ವರ್ಷಗಳ ಹಿಂದೆ ಬರೆದಿರುವ ಸಾಲುಗಳು ಇಂದಿಗೂ ಅಕ್ಷರಶಃ ಅಸ್ತಿತ್ವದಲ್ಲಿವೆ! “ಪತ್ರಿಕೆಗಳಲ್ಲಿ ಸ್ಥಳವಿದ್ದರೆ ಈ ಸುದ್ದಿ ಪ್ರಕಟಿಸುತ್ತಾರೆ, ಜೊತೆಗೆ ಮತ್ತಷ್ಟು ಸ್ಥಳವಿದ್ದರೆ ಫೊಟೋ ಕೂಡಾ. ಬೆಳಗಿನ ಉಪಾಹಾರಕ್ಕೆ ನೆಂಚಿಕೊಳ್ಳಲು ಒಳ್ಳೇ ಸುದ್ದಿ” ಎಂದು ಕುಟುಕುತ್ತಾನೆ.
* * * * *
ಸುಮ್ಮನೆ ಹಾಗೇ ತಡಕಿನೋಡಿ. ಆತ ಯಾವತ್ತೋ ತನ್ನ ಕಥೆಯಲ್ಲಿ ಹೇಳಿರೋ ಎಲ್ಲ ಪರಿಸ್ಥಿತಿಯನ್ನು ನಾವು ಇಲ್ಲಿ, ಭಾರತದಲ್ಲಿ ಅನುಭವಿಸುತ್ತಿದ್ದೇವೆ. ನಮ್ಮ ಮಾಧ್ಯಮಗಳಲ್ಲಿ ಅಪರಾಧ ಸುದ್ದಿಗಳು ಈಗಲೂ ವಿಜೃಂಭಿಸುತ್ತಿವೆ. ವಿದ್ಯೆ ಅನ್ನೋದು ಹಣ ಹೂಡುವ ಮತ್ತು ಹೂಡಿದ್ದನ್ನು ಹಲವು ಪಟ್ಟಾಗಿಸಿ ತಿರುಗಿ ಪಡೆಯುವ ವಾಣಿಜ್ಯ ಕ್ಷೇತ್ರವಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಪೈಪೋಟಿಯಿಂದೆಂಬಂತೆ ಏರುತ್ತಲೆ ಇದೆ. ರಾಜಕಾರಣಿಗಳು ಅಪರಾಧ ಮಾಡಿರುವುದು ಮೇಲ್ನೋಟಕ್ಕೇ ನಿಜವಾಗಿದ್ದರೂ, ಕೇವಲ ತನಿಖೆ ಎದುರಿಸಿ ಸಾಯುವತನಕ ಆರೋಪಿಗಳಾಗಿಯೇ ಇದ್ದು ಹೋಗುತ್ತಾರೆ. ಈಗಲೂ ಜೈಲುಗಳಲ್ಲಿ ಅಪರಾಧಿಗಳು ಮೊಬೈಲ್ ಬಳಸುವ, ಆಯುಧಗಳನ್ನು ಹೊಂದುವ ಸುಲಭ ದಾರಿಗಳನ್ನು ಹೊಂದಿದ್ದಾರೆ. ದುರಂತವೆಂದರೆ, ನ್ಯಾಯಾಧೀಶರೂ ಲಂಚದ ಆಮಿಷಕ್ಕೆ ಒಳಗಾಗಿದ್ದಾರೆ ಎನ್ನಲಾದ ವಿಚಿತ್ರ ಪ್ರಕರಣಗಳಿಗೆ ನಾವು ಜೀವಂತ ಸಾಕ್ಷಿಯಾಗಿದ್ದೇವೆ. ಆದರ್ಶ ಹಗರಣ, ಟೆಟ್ರಾ ಟ್ರಕ್ ಪ್ರಕರಣಗಳಲ್ಲಿ ಮಿಲಿಟರಿ ಅಧಿಕಾರಿಗಳೇ ಆರೋಪಿಗಳ ಸ್ಥಾನದಲ್ಲಿ ತಲೆತಗ್ಗಿಸಿ ನಿಂತಿದ್ದಾರೆ.
ಇನ್ನು ಕೋಟಿಗಟ್ಟಲೆ ಅಕ್ರಮ ಹಣ ಕೂಡಿಟ್ಟು ಲೋಕಾಯುಕ್ತದ ಬಲೆಗೆ ಬಿದ್ದ ಅಧಿಕಾರಿಗಳ ದೊಡ್ಡ ದಂಡೇ ನಮ್ಮೆದುರಿದೆ. ನಾವು ನಂಬಿ ಆರಿಸಿ ಕಳಿಸಿದ ಚಾಣಾಕ್ಷ ಸರ್ಕಾರ ಸದ್ಯ ಆ ಲೋಕಾಯುಕ್ತವನ್ನೂ ಕತ್ತಲಲ್ಲಿ ದೂಡಿ ಜಾಣ ಕುರುಡು ಮತ್ತು ಜಾಣ ಕಿವುಡನ್ನು ನಟಿಸುತ್ತಿದೆ. ಸರ್ಕಾರದಲ್ಲಿರುವ, ಈ ಹಿಂದೆ ಇದ್ದ ಮಂದಿ ಸಾಕಪ್ಪಾ ಅನ್ನುವಷ್ಟು ಹಗರಣಗಳ ಹೆಣಭಾರ ಹೊತ್ತು ಅಂಡಲೆಯುತ್ತಿದ್ದಾರೆ. ಸರ್ಕಾರ ಯಾವುದಾದರೂ ಗಂಭೀರ ಆರೋಪಕ್ಕೆ ತುತ್ತಾಯಿತು ಅಂದಾಗ, ಆ ಸಂಗತಿಯಿಂದ ವಿಷಯಾಂತರ ಮಾಡಿಸಲು ಸರ್ಕಾರದ ದೊಡ್ಡ ಮಂದಿಯೇ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಲು ಮುಂದಾಗುತ್ತಾರೆ. ಸದನದಲ್ಲಿ ಬರ ಪರಿಹಾರ ಸಂಬಂಧ ಚರ್ಚೆ ನಡೆಯುತ್ತಿದ್ದರೆ ಇತ್ತ ನೀಲಿಚಿತ್ರ ನೋಡುತ್ತಾರೆ. ಸರ್ಕಾರದ ಲೋಪದೋಷಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡುತ್ತಿದೆ ಅಂತ ಖಾತ್ರಿಯಾದರೆ, ಉತ್ತರ ಕರ್ನಾಟಕದಲ್ಲಿ ಪಾಕಿಸ್ತಾನದ ಧ್ವಜ ಹಾರಸಲು ವ್ಯವಸ್ಥೆ ಮಾಡಿ ಎಲ್ಲರ ಗಮನ ಬೇರೆಡೆ ಹೋಗುವಂತೆ ಮಾಡಿ ಬೀಗುತ್ತಾರೆ. ಇಲ್ಲವೇ ಭಾರೀ ವಿವಾದವಾಗುವಂಥ ಹೇಳಿಕೆಗಳನ್ನು ಗೊತ್ತೇ ಇಲ್ಲವೇನೋ ಎಂಬಂತೆ ಕೊಟ್ಟುಬಿಡುತ್ತಾರೆ. ಕ್ವಿಜ್ ನಡೆಸುವ ಮೇಸ್ಟ್ರುಗಳಿಗೂ ಗೊಂದಲ ಮೂಡುವಷ್ಟು ಬಾರಿ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಮಂತ್ರಿಗಳೂ ಬದಲಾಗುತ್ತಾರೆ. ತಮಗೆ ಇವತ್ತು ಕೊಟ್ಟ ಖಾತೆ ಯಾಕೋ ಸರಿಯಿಲ್ಲ ಅನ್ನಿಸಿದರೆ ನಾಳೆಯೇ ಬದಲಾಯಿಸಿಕೊಳಱಳುವ ದೊಡ್ಡ ಮನಸ್ಸು ಮಾಡುತ್ತಾರೆ. ತಾವು ಬೇಡಿಕೆ ಇಟ್ಟದ್ದು ಆಗದಿದ್ದರೆ ಬೀದಿರಂಪ ಮಾಡುತ್ತಾರೆ. ಹೀಗೆ ಭರಪೂರ ಮನರಂಜನೆ ನೀಡುವ ಜನರ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಸಾಮರ್ಥ್ಯವನ್ನೇ ಕಡಿಮೆ ಮಾಡಿಬಿಡುತ್ತಾರೆ.
* * * * *
ಇದೆಲ್ಲವನ್ನೂ ನೈಜೀರಿಯಾದ ಕಥೆಯೊಂದು ನಮ್ಮೆದುರು ತೆರೆದಿಟ್ಟಿದೆ. ತನ್ನ ಪದಗಳಲ್ಲಿ ಇಷ್ಟೆಲ್ಲಾ ನಿಜಗಳನ್ನು ಹಿಡಿದಿಟ್ಟ ಕೆನ್ ಸರೊ ವಿವಾ ಕಡೆಗೆ ಗಲ್ಲು ಶಿಕ್ಷೆಗೆ ಗುರಿಯಾಗುತ್ತಾನೆ. ಆದರೆ ಆತ ಕಟ್ಟಿಕೊಟ್ಟಿರುವ ಅಲಿಖಿತ ಚರಿತ್ರೆ ಈಗ ಕೇವಲ ನೈಜೀರಿಯಾದ್ದಾಗಿ ಅಥವಾ ಆಫ್ರಿಕಾದ್ದಾಗಿ ಮಾತ್ರವೇ ಉಳಿದಿಲ್ಲ. ಹಾಗಾಗಿಯೇ 70ರ ದಶಕದ ನೈಜೀರಿಯಾದ ಕಥಾನಕವೊಂದು 2012ರ ಭಾರತದ ಗುಟ್ಟುಗಳನ್ನು ಪಿಸುಗುಡುವಂತಾಗಿದೆ.

‍ಲೇಖಕರು G

17 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading