ಡಾ. ಜಿ. ಕೆ. ಸುಲ್ತಾನಪುರ ಗದಗ
ಅಂಬಿಗ ಎಂಬುವನು ನಂಬಿ ಲೋಲಾಡುವನು, ಅವನನ್ನು ನಂಬಿದರೆ ದಡ ಸೇರಿಸುವನು. ಅದಕ್ಕಾಗಿ ದಾಸರು ಅಂಬಿಗ ನಾ ನಿನ್ನ ನಂಬಿದೆ… ಎಂದು ಹಾಡಿ ಹೋಗಳಿದ್ದಾರೆ. ದೋಣಿ ಅಥವಾ ತೆಪ್ಪದಲ್ಲಿ ನದಿ ಹೊಳೆ ದಾಟುವಾಗ ಅಂಬಿಗನ ಮೇಲೆ ನಂಬಿಕೆ ಇಡಬೇಕು ಎಂಬುದು ದಾಸರ ಪದದ ತಾತ್ಪರ್ಯ. ಅಂಬಿಗ ವೃತ್ತಿಯ ಚೌಡಯ್ಯ ಎಂಬ ವ್ಯಕ್ತಿ 11 ರಿಂದ 12 ನೇ ಶತಮಾನದ ಕಾಲಕ್ಕೆ ಹೋರ ಹೋಮ್ಮಿದ ವಚನ ಚಳುವಳಿಯ ಪ್ರಮುಖ ವಚನಕಾರನಾಗಿದ್ದಾನೆ. ಅತ್ಯಂತ ನೇರ ನಿಷ್ಠುರ ವೈಚಾರಿಕ ವಚನಗಳ ಮೂಲಕ ಮೂಡನಂಭಿಕೆ, ಡಾಂಬಿಕತನ, ಕಂದಾಚಾರ, ಮುಂತಾದವುಗಳನ್ನು ತೀವೃವಾಗಿ ವೀರೋಧಿಸಿದ ಕಟುವಾದ ಶಬ್ಧಗಳಲ್ಲಿ ಖಂಡಿಸಿ ನಿಜಶರಣ ಎಂಬ ಪ್ರಸಿದ್ಧಿ ಪಡೆದವನೇ ಅಂಬಿಗರ ಚೌಡಯ್ಯ. ಸಾಮಾನ್ಯವಾಗಿ ವಚನಕಾರರು ತಮ್ಮ ಆರಾಧ್ಯ ಕುಲದೇವರುಗಳ ಅಂಕಿತನಾಮದ ವಚನ ರಚಿಸಿದ್ದರೇ ಅಂಬಿಗರ ಚೌಡಯ್ಯ ತನ್ನ ಹೆಸರನ್ನೇ ತನ್ನ ಅಂಕಿತನಾಮ ಮಾಡಿಕೊಂಡು ವಿಶಿಷ್ಠ ವಚನಕಾರನಾಗಿದ್ದಾನಲ್ಲದೇ ವಚನ ಅಂಕಿತನಾಮದ ಮೂಲಕವೇ ತನ್ನ ವೈಚಾರಿಕ ಪ್ರಙ್ಞೆಯನ್ನು ಅಭಿವ್ಯಕ್ತಿಗೊಳಿಸಿದ್ದಾನೆ.
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು
ತುಂಬಿದ ಸಾಗರದೊಳಗೆ ನೋಡಯ್ಯ
ನಂದ ದೋಣಿಯನೇರಿದಂದಿನ ಹುಟ್ಟ
ಕಂಡವರಂದವ ನರಿದಾತ ತೋರಿಸುತ್ತಿದ್ದನು.
ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೋಂದೆ ಠಾವಿಗೊಯ್ದಿಳುಹುವೆನೆಂದನಂಬಿಗರ ಚೌಡಯ್ಯ.
ಎಂದು ಅಂತಹ ಅಂಬಿಗ ನಾನಲ್ಲ ಕೇವಲ ನದಿಯನ್ನು ಅಷ್ಟೇ ಅಲ್ಲ ಈ ಅಂಬಿಗನನ್ನು ಶಿವನಂಬಿದರೆ ಸಂಸಾರವೆಂಬ ಭವಸಾಗರವನ್ನೇ ದಾಟಿಸಿ ಜೀವನಕ್ಕೆ ಮುಕ್ತಿ ದೊರಕಿಸಿಕೋಡಬಲ್ಲೆ ಎಂಬ ಆತ್ಮವಿಶ್ವಾಸದ ಸ್ವಾಭಿಮಾನದ ಕಿಡಿ ತನ್ನ ವಚನದಲ್ಲಿ ಹೊತ್ತಿಸಿದ್ದಾನೆ. ಅಂಬಿಗರ ಚೌಡಯ್ಯನ್ನು ಬಸವಾದಿ ಶಿವ ಶರಣರಲ್ಲಿ ಅತ್ಯಂತ ಪ್ರಭಾವಿತನಾದ ನೇರ ನಡೆ ನುಡಿಯ ನಿಷ್ಠುರವಾದಿ ನಿಜ ಶರಣ ಆದವನು. ಅಂಬಿಗರ ಚೌಡಯ್ಯ ತನ್ನ ಕುಲ ಕಸುಬಾದ ದೋಣಿ ನಡೆಸುವ ಕಾಯಕವನ್ನು ಕೈಗೊಂಡಿದ್ದಾನೆ. ಶ್ರೇಷ್ಠ ಅನುಭಾವಿ ಸಾಮಾಜಿಕ ಬದಲಾವಣೆಯ ಬಗೆಗೆ ತೀವ್ರ ಕಳಕಳಿಯುಳ್ಳ ಧ್ಯೇಯವಾದಿ. ಅಸತ್ಯ ಅನ್ಯಾಯ ಮೂಢನಂಬಿಕೆ, ಅಂಧ, ವಿಚಾರ ಆಚಾರಗಳನ್ನು ಖಂಡಿಸುವ ನಿಷ್ಠುರವಾದಿ. ಇವಯ ಈತನ ವ್ಯಕ್ತಿತ್ವದ ಮುಖ್ಯಾಂಶಗಳು. ಕೆಳವರ್ಗದ ಶೋಶಣೆಗೆ ಒಳಗಾದ ತನ್ನವರ ಶೋಷಿತ ನೋವಿನ ಪರಿಚಯ ಅವನಿಗೆ ಚೆನ್ನಾಗಿತ್ತು.
ಕಟ್ಟಿದ ಲಿಂಗವನು ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ,
ಹೊಟ್ಟಿಡಿ ಬೀಳುವ ಖೊಟ್ಟಿ ಮೂಳರ ಕಂಡಡೆ,
ಮೆಟ್ಟಿದ ಎಡ ಪಾದರಷ್ಟೆಯ ತಗೊಂಡು
ಲಟಲಟನೆ ಹೊಡೆಯೆಂದಾತ ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯನ ಮತ್ತೊಂದು ವಚನದಲ್ಲಿ ಅಂಗದ ಮೇಲಿರುವಂತಹ ಕಟ್ಟಿಕೊಂಡಿರುವ ಲಿಂಗವನ್ನು ಬಿಟ್ಟು ಗುಡ್ಡ ಬೆಟ್ಟದ ಮೆಲೊಂದು ಕಟ್ಟಿಸಿದಂತಹ ಗುಟಿಯೊಳಗಿನ ಲಿಂಗಕ್ಕೆ ಹೊಟ್ಟೆ ಅಡಿಯಾಳಾಗಿ ಉದ್ದಕ್ಕೆ ಬಿದ್ದು ನಮಸ್ಕಾರ ಮಾಡುವವರನ್ನು ಮೂರ್ಖರು ಕಂಡರೆ ಮುಟ್ಠಾಳರೆಂದು ಟೀಕೆ ಮಾಡಿ ಅಂತಹವರನ್ನು ಎಡಗಾಲಿನ ಪದರಕ್ಷೆಯಿಂದ ಹೊಡೆಯಂದಾತ ಅಂಬಿಗರ ಚೌಡಯ್ಯ. ಈ ರೀತಿಯಾಗಿ ತನ್ನ ಹರಿತವಾದ ವಚನಗಳೊಂದಿಗೆ ಅತ್ಯಂತ ಕಟುವಾದ ಟೀಕೆಗಳನ್ನು ಮಾಡಿ ಸಮಾಜದಲ್ಲಿ ವೈಚಾರಿಕ ಕ್ರಾಂತಿ ತರಬೇಕೆಂದು ಅತ್ಯಂತ ಪ್ರಯತ್ನವಾದಿಯಾಗಿ ಶಿವಶರಣರ ಕಾಲದಲ್ಲಿ ಅಂಬಿಗರ ಚೌಡಯ್ಯ ಗೋಚರಿಸುತ್ತಾನೆ.
ಕುಲ ಹೀನ ಶಿಷ್ಯಂಗೆ ಅನುಗ್ರಹ ಮಾಡಿ,
ತಿರುಗಿ ಅವನ ಮನೆಯಲ್ಲಿ ಉಣಬಾರದೆಂದು –
ಅಕ್ಕಿ-ಕಣಕವ ತಕ್ಕೊಂಡು ಹೋಗುವ ಗುರುವಿನ ಕಂಡರೆ
ಕೆಡಹಿ ಹಾಕಿ ಮೂಗನೆ ಕೊಯ್ದು ಇಟ್ಟಂಗಿಯ ಕಲ್ಲಿಲೆತಿಕ್ಕಿ
ಸಾಸಿವೆ ಹಿಟ್ಟಿನ ತಳಿದು ಮೇಲೆ ಲಿಂಬೆಯ ಹುಳಿ ಹಿಂಡಿ
ಪಡುವಣಗಾಳಿಗೆ ಹಿಡಿ ಎಂದಾತ
ನಮ್ಮ ಸಂಬಿಗರ ಚೌಡಯ್ಯ.
ಕುಲಹೀನ ಶಿಷ್ಯನಿಗೆ ಅನುಗ್ರಹಿಸಿ ಅವನ ಮನೆಯಲ್ಲಿಯೇ ಊಡ ಮಾಡಲು ಇಚ್ಛಿಸದೇ, ಅಕ್ಕಿ ಕಣಕ ಮುಂತಾದವುಗಳನ್ನು ತೆಗೆದುಕೊಂಡು ಹೋಗುವ ಗುರುಗಳನ್ನು ಕಂಡರೆ ನೆಲಕ್ಕೆ ಕಡವಿ ಮೂಗು ಕೊಯ್ದು ಆ ಗಾಯದ ಮೇಲೆ ಇಟ್ಟಗೆಯಿಂದ ಬಲವಾಗಿ ಉಜ್ಜಿ ಅದರ ಮೇಲೆ ಸಾಸಿವೆ ಹಿಟ್ಟು ಉದುರಿಸಿ ನಿಂಬೆಹಣ್ಣಿನ ಹುಳಿಯನ್ನು ಹಿಂಡಿ ಪಡುವಣ ಗಾಳಿಗೆ ಹಿಡಿದು ಶಿಕ್ಷಿಸಬೇಕೆಂದು ಈ ವಚನದಲ್ಲಿ ಉಗ್ರವಾಗಿ ಆಗ್ರಹಿಸಿದ್ದಾನೆ.
ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ,
ಉಡಲಾರದೆ ಇಡುವ ಚಿಂತೆ, ಇಡಲಾರದೆ ಹೆಂಡಿರ ಚಿಂತೆ,
ಹೆಂಡರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕುವ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ ಇಪ್ಪವರನ್ನು ಕಂಡೆನು,
ಶಿವಚಿಂತೆ ಇದ್ದವರನೊಬ್ಬರನೂ, ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ…
ಯಾರಿಗೆ ಅತಿಯಾದ ಬಡತನವಿರುವುದೋ ಅವನಿಗೆ ಯಾವಾಗಲೂ ಊಟದ ಚಿಂತೆಯು ಬೆನ್ನು ಹತ್ತಿರುತ್ತದೆ. ಎರಡು ಹೊತ್ತು ಊಟಕ್ಕೆ ಯಾವನಿಗೆ ಸರಿಯಾಗಿ ಸಿಗುವುದೋ ಅವನಿಗೆ ತೊಟ್ಟುಕೊಳ್ಳುವ ಬಟ್ಟೆಯ ಚಿಂತೆಯು ಬೆನ್ನು ಹತ್ತಿರುತ್ತದೆ. ಊಟ ಹಾಗೂ ಉಡಿಗೆಗಳು ಅಬಾಧಿತವಾಗಿ ದೊರೆತರೆ ಹಣವನ್ನು ಶೇಖರಿಸುವ ಚಿಂತೆಯು ಬೆನ್ನು ಹತ್ತುವುದು ಶೇಖರಿಸಿದ ಹಣವು ಸಿನಗಳೆದಂತೆ ಹೆಚ್ಚಾದರೆ ಅಂಥವರಿಗೆ ಹೆಂಡತಿಯನ್ನು ಮಾಡಿಕೊಳ್ಳಬೇಎಂಬ ಚಿಂತೆಯು ಕಾಡತೊಡಗುವುದು. ಮದುವೆ ಮಡಿಕೊಂಡು ಹೆಂಡತಿಯು ಬಂದಳೆಂದರೆ ಮಕ್ಕಳ ಚಿಂತೆಯು ಪೀಡಿಸತೊಡಗುವುದು. ನಾಲ್ಕಾರು ಮಕ್ಕಳುಗಳಾದರೆ ಬದುಕಿನ ಬಾಳ್ವೆಯ ಹೊಸ ಚಿಂತೆಯು ಹತ್ತುವುದು. ಅಲ್ಲಿಂದ ಮುಂದೆ ಕೆಡಕಿನ ಹಾಗೂ ಮರಣದ ಚಿಂತೆಗಳು ಬೆಂಬತ್ತುವವು. ಈ ರೀತಿಯಾಗಿ ಮನಷ್ಯನು ಒಂದಿಲ್ಲೊಂದು ಬಗೆಯ ಚಿಂತೆಯಲ್ಲಿ ಮಗ್ನನಾಗಿರಿವುದು ಕಂಡುಬರುವುದು. ಅಂದರೆ ಮನುಷ್ಯನಿಗೆ ತನಗೆ ಯಾವುದರ ಕೊರತೆಯಿದೆಯೋ ಅಂಥದು ಬೇಕೆಂದು ಚಿಂತಿಸುವನು ಜಗತ್ತಿನೊಳಗೆ ಎಲ್ಲಿಬೇಕಲ್ಲಿ ಸಿಗುತ್ತಾನೆ. ಆದರೆ ಯಾವಾಗಲೂ ಸದಾಕಾಲವೂ ಶಿವನ ಚಿಂತೆಯಲ್ಲಿಯೇ ಕಾಲ ಕಳೆಯುತ್ತಿರುವಂಥ ಓರ್ವ ಮಹಾನುಭಾವನೂ ಕೂಡಾ ನನಗೆ ದೊರೆತಿಲ್ಲ. ಅದು ನಿಜವೇ ಸರಿ. ಏಕೆಂದರೆ ಮನುಷ್ಯನಿಗೆ ತನ್ನ ಕೊರತೆ ತುಂಬಿಕೊಳ್ಳುವ ಚಿಂತೆಯೇ ಪರಿಹಾರವಾಗದಿರುವಾಗ ಶಿವಚಿಂತನೆಯನ್ನೇನು ಮಾಡಬಲ್ಲ? ಎಂಬುದು ಈ ವಚನದ ಸಾರ. ಈ ಮೂಲಕ ಶಿವನ ನಾಮಸ್ಮರಣೆ ಶಿವನ ಆರಾಧನೆಗೆ ಒತ್ತು ನೀಡಿರುವ ಅಂಬಿಗರ ಚೌಡಯ್ಯ ಈ ವಚನವನ್ನು ರಚಿಸಿದ್ದಾನೆ.
ಅಂಬಿಗರ ಸಮುದಾಯಗಳ ಹಿನ್ನೆಲೆ
ಸಂಸ್ಕೃತಿ ಎಂಬ ಪರಿಕಲ್ಪನೆಯ ಅರ್ಥ ಬದಲಾವಣೆ ಆದಂತೆಯೆ ಸಮುದಾಯಗಳ ಸಂಸ್ಕೃತಿ ಶೋಧ ಮತ್ತು ಚಿಂತನೆಯ ಕೇಂದ್ರಗಳು ಬದಲಾಗುತ್ತಾ ಬಂದಿವೆ. ಧರ್ಮ, ಜಾತಿ, ರಾಷ್ಟ್ರ, ವ್ಯಕ್ತಿ, ಪ್ರವೇಶ, ರಾಜ, ಸಾಹಿತ್ಯ, ಚರಿತ್ರೆ, ಜನಾಂಗ, ಸಮಾಜ, ರಾಜಕೀಯ ಮತ್ತು ಆರ್ಥಿಕತೆ ಸದ್ಯದ ಅಂಬಿಗರ ಸಮುದಾಯಗಳ ಸಂಸ್ಕೃತಿಯ ಚಿಂತನೆಯ ಹಲವು ಮುಖ್ಯ ಕೇಂದ್ರಗಳಾಗಿವೆ.
ಗಂಗೆ ಅರಾಧಕರಾಗಿ ಅಂಬಿಗರು
ನದಿ, ಸಮುದ್ರ, ಹಳ್ಳ ಕೊಳ್ಳಗಳ, ಜಲದ ಮೂಲವಾಗಿ ಬೆಳೆದು ಬಂದ ಅತ್ಯಂತ ಪುರಾತನ ಬುಟಕಟ್ಟು ಜನಾಂಗ ಅಂಬಿಗರ ಸಮುದಾಯದ್ದು. ದೋಣಿ ಸಡೆಸುವುದು, ಮೀನುಗಾರಿಕೆ, ಜಾಲಗಾರ ವೃತ್ತಿ, ಸುಣಗಾರ ವೃತ್ತಿ ಮುಂತಾದವುಗಳ ಮೂಲಕ ಬಂದ ಅಂಬಿಗರ ಸಮುದಾಯವು ಗಂಗೆಯನ್ನು ಆರಾಧ್ಯದೇವತೆಯನ್ನಾಗಿ ಆರಾಧಿಸುತ್ತಾರೆ. ಗಂಗಾ ಮತಸ್ಥ ಸಮಾಜವೆಂದು ಗುರುತಿಸಿಕೊಂಡಿರುವ ಅಂಬಿಗರ ಸಮುದಾಯವು ಒಟ್ಟು 39 ವಿವಿಧ ಜಾತಿಯಿಂದ ಕರೆಯುವುದುಂಟು. ಕಬ್ಬಲಿಗ, ಓಲೆಕಾರ, ಕೋಲಕಾರ, ಅಂಬಿಗ, ಗಂಗಾಮತ, ಬೆಸ್ತ, ಪೋಲಿ, ಪರಿವಾರ, ತಳವಾರ, ಟೋಕರೆ ಕೋಳಿ, ಕೋಲಿಡೋರ, ಸುಣಗಾರ ಮುಂತಾದ ಪರ್ಯಾಯ ಪದಗಳಿಂದ ಗುರುತಿಸಲ್ಪಟ್ಟಿವೆ.
ಸಂವಿಧಾನದ ಕಾಲಂ 342ರ ಕ್ರಮಸಂಖ್ಯೆ 22ರಲ್ಲಿ ಸ್ಥಾನ ಪಡೆದಿವೆ. ಕರ್ನಾಟಕ ಸರ್ಕಾರ ಕೆಂದ್ರದ 1950ರ ಆದೇಶದ ಪ್ರಕಾರ ಕೆಲ ಗುಂಪುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿವೆ.ಅಂಬಿಗರ ಸಮುದಾಯ ಕುರಿತು ಹಂಪಿ ವಿಶ್ವವಿದ್ಯಾಲಯ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಆ ವರದಿಯನ್ನು ಯಥಾವತ್ತಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು, ಅದರಂತೆ ಎಲ್ಲಾ ಪರ್ಯಾಯ ಪದಗಳ ಅಂಬಿಗರ ಸಮುದಾಯವನ್ನು ಪರಿಶಿಷ್ಟ ಪಂಗಡ ಎದು ಗುರುತಿಸಿಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಅಂಬಿಗರ ಚೌಡಯ್ಯನ ಜಯಂತಿಯ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ಅಂಬಿಗರ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ, ರಾಜಕೀಯವಾಗಿ ಮುಖ್ಯ ವಾಹಿನಿಗೆ ಸೇರಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕಾಗಿದೆ.







0 Comments