ನೆಲೆ ಕಳೆದುಕೊಂಡವರ ನಡುವೆ..

maheshwari u2

The Hindu (April 9/ 2016) Literary review ನಲ್ಲಿ Easterine Kire ಪರಿಚಯಿಸಿದ ಒಂದು ಕೃತಿ ನಮಗೆ ಗೊತ್ತೇ ಇಲ್ಲದ ಜಗತ್ತನ್ನು ಪರಿಚಯಿಸುತ್ತದೆ. ಅಷ್ಟೇ ಅಲ್ಲ ತಳಮಳವನ್ನು ಹುಟ್ಟುಹಾಕುತ್ತದೆ.

ಅವಧಿ ಓದುಗರು ಈ ಕೃತಿಯನ್ನು ಓದಲಿ ಎಂದು ಹಂಬಲಿಸಿ ಕವಯತ್ರಿ  ಮಹೇಶ್ವರಿ.ಯು ಆ ಕೃತಿ ವಿಮರ್ಶೆಯನ್ನು ಕನ್ನಡೀಕರಿಸಿ ಕೊಟ್ಟಿದ್ದಾರೆ
For the Love of Pork –

Poems; Goirick Brahmachari,

Les Editions du Zaporogue.

 

ಎಲ್ಲಿದೆ ಮನೆ ?. ಕವಿ ಕೂಗುತ್ತಿದ್ದಾರೆ. ಆದರೆ ತನ್ನ ಬೇರುಗಳಿಗೆ ಇರುವ ಅವಕಾಶದ ಈ ನಿರಾಕರಣೆ ಅದರ ಜಾಗದಲ್ಲಿ ಮತ್ತೊಂದನ್ನು ಸೃಷ್ಟಿಸಿತು.; ಕವಿಯನ್ನು ವಿಶ್ವದ ಪ್ರಜೆಯಾಗಿಸಿತು.

ಎರಡು ರಾಜ್ಯಗಳ ಗಡಿಯಲ್ಲಿ ಪಯಣಿಸುವುದು ಹೇಗನಿಸಬಹುದು?
ಬೆಸೆಯುವುದಲ್ಲ, ವಿಭಾಗಿಸುವ ಒಂದು ರಸ್ತೆ.
ಮೇಘಾಲಯ ನನ್ನ ಬಲಗಡೆಗೆ
ಅಸ್ಸಾಂ ಇದೆ ನನ್ನ ಎಡಗಡೆಗೆ
ಮೇಘಾಲಯದಲ್ಲಿ ನಾನೊಂದು ಮನೆಕಟ್ಟಲಾರೆ.
ಅಸ್ಸಾಂ -ಅವರು ಹೇಳುತ್ತಾರೆ -ನಾನು ಅಲ್ಲಿನವನಲ್ಲವಂತೆ
ಹಾಗಿದ್ದರೆ ನನ್ನ ಮನೆಯೆಲ್ಲಿ?

for-the-love-of-porkಗೊಯಿರಿಕ್ ಬ್ರಹ್ಮಚಾರಿಯ ಕಾವ್ಯಸಂಪುಟ ‘ಫಾರ್ ದಿ ಲವ್ ಆಫ್ ಪೋರ್ಕ್’ನ ಈ ಆರಂಭದ ಸಾಲುಗಳು ಚರಿತ್ರೆಯಿಂದ ಬಹುಕಾಲ ಅವಗಣಿಸಲ್ಪಟ್ಟ ಸಮೂಹವನ್ನು ಕೇಂದ್ರಕ್ಕೆ ತಂದು ನಿಲ್ಲಿಸುತ್ತವೆ..’

ಎಲ್ಲಿಗೂ ಸಲ್ಲದ ಎಲ್ಲಿಹೋದರೂ ಅನಪೇಕ್ಷಿತರಾಗಿರುವ ಒಂದು ಸಮುದಾಯ – ನಾವು ಕಡೆಗಣಿಸಬಯಸುವ ಒಂದು ವಾಸ್ತವವಿದು.

ಎಲ್ಲಿದೆ ಮನೆ? ಕವಿ ಕೂಗುತ್ತಿದ್ದಾರೆ. ಆದರೆ ಮೂಲದ ಕುರಿತಾದ ಹಕ್ಕಿನ ಈ ನಿರಾಕರಣೆ,ಒಂದು ಚಹರೆಯನ್ನು ಹೊಂದುವ, ಒಂದು ಸೇರುವೆಯ ಹಕ್ಕಿನ ಈ ನಿರಾಕರಣೆ ಅದರ ಜಾಗದಲ್ಲಿ ಮತ್ತೊಂದನ್ನು ಸೃಷ್ಟಿಸಿತು: ಕವಿಯನ್ನು ವಿಶ್ವದಪ್ರಜೆಯಾಗಿಸಿತು. (ಯಾಕೆಂದರೆ ಅವನ ಆಯ್ಕೆಯ ಸ್ಥಳದಲ್ಲಿ ಅವನನ್ನು ಸ್ವೀಕರಿಸಬಹುದಾದ ಸಾಧ್ಯತೆ ಇಲ್ಲ.) ಅಥವಾ ಹತ್ತರೊಂದಿಗೆ ಹನ್ನೊಂದಾಗಿ ಬೆರೆಯಬಲ್ಲ, ಒಯಿಲಿನಲ್ಲಿ ಒಚ್ಚಿಕೊಂಡುಹೋಗುವ ನಗರಾವಕಾಶಗಳ ಪ್ರಜೆಯಾಗಿಸಿತು. ರಾಬಿನ್ ಗ್ನಾನ್ಗೋಮ್ ಉಲ್ಲೇಖಿಸುವ ಹಾಗೆ ಅದು ಮನೆ ಮತ್ತು ಮನೆ ಇಲ್ಲದ ಸ್ಥಿತಿಯ ಕುರಿತಾದ ಅವ್ಯಕ್ತಭಯ ಕಾಡುವ ಕಾವ್ಯ.

ಅವನ ಪ್ರದೇಶದ ಹೆಚ್ಚಿನ ಜನರಂತೆ ಕವಿ ಬ್ರಹ್ಮಚಾರಿಯ ಅಜ್ಜಿ ಅಜ್ಜಂದಿರು ಕೂಡ ಪೂರ್ವಬಂಗಾಳದಿಂದ ವಲಸೆ ಬಂದಿದ್ದರು ಮತ್ತು ಬರಾಕ್ ಕಣಿವೆ ಈಶಾನ್ಯ ರಾಜ್ಯದ ಸುತ್ತಮುತ್ತ ಹೊಸ ಬದುಕನ್ನು ಕಟ್ಟಿಕೊಳ್ಳಬಯಸುವ ವಲಸಿಗರ ಅಲೆಯಲ್ಲಿ ಬೆರೆತವರಾಗಿದ್ದರು.

ಕರೀಂಗಂಜ್ ಕವಿತೆಯಲ್ಲಿ ”ನದಿಯು ಕರೆತರುತ್ತದೆ; ನದಿಯು ಹಾಡುತ್ತದೆ- ನನ್ನ ಬೇರುಗಳು ನೆಲೆಗೊಂಡ ಆವೆಮಣ್ಣಿನ ನೆಲದ ಕತೆಗಳನ್ನುಎಂದು ಕವಿ ಕಳೆದುಕೊಂಡದ್ದರ ಕುರಿತಾಗಿ ಸೂಚಿಸುವುದು ಇದನ್ನೇ..

ಇದು ನನ್ನ ಪಾಲಿಗೆ ಒಂದು ಸಂಪೂರ್ಣಭಿನ್ನವಾದ ಅನುಭವ. ಒಳಪ್ರದೇಶದ ಮೇಲೆ ಸಾಗುವ ವಿಚಿತ್ರವಾದ ಕಾವ್ಯವಿದು. ಸಾಂಪ್ರದಾಯಿಕ ಅರ್ಥದಲ್ಲಿ ಅಕಾವ್ಯವೆಂದು ನೋಡುವ ಸಾಧ್ಯತೆ ಹೆಚ್ಚು. ನಾನು ಬೆಟ್ಟಗಳ ಮೇಲೆ -ಆ ಪೈನ್ ವೃಕ್ಷರಾಜಿಯಮೇಲೆ, ಹಾಗೇ ಮೇಘಾಲಯದ ಮೇಘಮಾಲೆಯ ಮೇಲೆ ಲೆಕ್ಕವಿಲ್ಲದಷ್ಟು ಕವಿತೆಗಳನ್ನು ಓದಿದ್ದೇನೆ. ಆದರೆ ಈ ಕವಿ ಪುಟ್ಟಗುಡ್ಡಗಳ ಮೇಲೆ ಕವಿತೆ ಬರೆಯುತ್ತಾರೆ..

ಮಾನವನ ಹತಾಶೆ ಹಾಗೂ ಮೀನಿನ ಪದಾರ್ಥದೊಂದಿಗೆ ಬೆರೆಸಿದ ಗ್ರೀಸ್ ಮತ್ತು ಪೆಟ್ರೋಲ್ ನ ಸಮ್ಮಿಶ್ರ ವಾಸನೆಯನ್ನು ನಾನದರಲ್ಲಿ ಗುರುತಿಸುತ್ತೇನೆ. ಈ ಕವಿತೆಗಳಲ್ಲಿ ಒಂದು ಹತಾಶೆಯ ಭಾವವಿದೆ. ಜನಾಂಗ ಶುದ್ಧೀಕರಣದ ನೆರಳು ತಮ್ಮನ್ನು ಹಿಂಬಾಲಿಸುತ್ತಿರುವ ಆತಂಕದಲ್ಲಿರುವ ಖಾಸಿವ್ಯಕ್ತಿಯೊಬ್ಬ ತನ್ನ ಬಂಗ್ಲಾದೇಶಿ ಮಡದಿಯೊಂದಿಗೆ ಪಲಾಯನಮಾಡುವುದನ್ನು ಸಾಮಾನ್ಯವಾಗಿ ವರ್ಣಿಸುವ ಕವಿತೆಗಳವು.

ಬ್ರಹ್ಮಚಾರಿಯ ಕವಿತೆಗಳು ರಾತ್ರಿಯಲ್ಲಿ- ಅದು ರಾತ್ರಿ ಸಂಚಾರದ ಬಸ್ಸಿನಲ್ಲೂ ಆಗಿರಬಹುದು-ವಲಸೆ ಕಾರ್ಮಿಕರು ಅಥವಾ ಭೂದಾಖಲೆಗಳಿಲ್ಲದೆ ಎಲ್ಲೆಲ್ಲಿ ಉದ್ಯೋಗ ಸಿಗುತ್ತದೋ ಅಲ್ಲಿಗೆ ರಾಜ್ಯದಿಂದ ರಾಜ್ಯಕ್ಕೆ ಅತ್ತಿಂದಿತ್ತ ಚಲಿಸುವ ಮುಖಗಳನ್ನು ಹೊತ್ತ ಮಂದಿಯಿಂದ ಕೂಡಿರುತ್ತದೆ. ಇನ್ನೇನು ನಿಮಿಷಗಳಲ್ಲಿ,ಘಂಟೆಗಳಲ್ಲಿಅಥವಾ ದಿನಗಳಲ್ಲಿ ಅವರ ಬಾಳು ತಲೆಕೆಳಗಾಗ ಬಹುದು. ಮತ್ತು ಸಾವೆನ್ನುವುದು ಗುಂಡಿನರೂಪದಲ್ಲೋ ಚೂರಿಯ ರೂಪದಲ್ಲೋ ದಾಳಿಯಿಡಬಹುದು. ಇದನ್ನು ಕವಿತೆಯಾಗಿಸಲು ಹೇಗೆ ಸಾಧ್ಯ? ಅದೇ ನನ್ನನ್ನು ಅಚ್ಚರಿಗೊಳಿಸುವುದು

ಅವರ ಪ್ರತಿಮೆಗಳು ನನ್ನನ್ನು ಬೆಚ್ಚಿಬೀಳಿಸುತ್ತವೆ. ನೆಲದಾಸರೆಯಿಲ್ಲದ, ಉದ್ಯೋಗವಿಲ್ಲದ, ಹಸಿವಿನಿಂದ ಕೂಡಿದ, ಶೂನ್ಯ ನೋಟವನ್ನು ಹೊತ್ತ ಗಂಡುಸರು ಹೆಂಗುಸರು ಮಕ್ಕಳು ಉದ್ದ ಸಾಲುಗಳಲ್ಲಿ ಸಾಗುತ್ತಿರುವುದನ್ನು ನಾನು ಕಾಣುತ್ತೇನೆ. ಚಿಮಣಿ ದೀಪಗಳಿಂದ ಬೆಳಗುವ ಪಟ್ಟಣದಲ್ಲಿ ಬದುಕು ಕಂಡುಕೊಳ್ಳಲು ಅವರು ಬಂದಿರುತ್ತಾರೆ. ರಾತ್ರಿ ಬಸ್ಸುಗಳಲ್ಲಿ ಹಾದುಹೋಗುತ್ತ ಕಂಡ ಆ ಮುಖಗಳನ್ನು ನಾವಾದರೋ ದಾಟಿಹೋದ ತಕ್ಷಣ ಮರೆಯುತ್ತೇವೆ.

ತನ್ನ ಗುರಿಯ ಅರ್ಧದಷ್ಟು ಕ್ರಮಿಸಿದಾಗ ಒಬ್ಬ ವ್ಯಕ್ತಿ ಒಂದು ಕರ್ತವ್ಯದ ಕರೆಯನ್ನು ಮಾಡುತ್ತಾನೆ. ‘ಅಮ್ಮಾ, ನಾನು ಲಾಟುಂಬಾಯ್ ತಲಪಿದೆ’ ಎಂದು ಹೆಚ್ಚು ಕಡಿಮೆ ಔಪಚಾರಿಕವೆಂಬಂತೆ ನುಡಿದ ಆ ಮಾಮೂಲು ಸಾಲಿನಲ್ಲಿ ಬರಾಕ್ ಕಣಿವೆಯಿಂದ ಇಂಡಿಯಾದ ಇತರೆಡೆಗಳಿಗೆ ಪ್ರಯಾಣಿಸುವ ಜನರ ಒಂದು ಅವ್ಯಕ್ತ ಭಯದ ಎಳೆಯು ಬೆರೆತಿರುತ್ತದೆ. ಅಪಘಾತಗಳು, ಭೂಕುಸಿತಗಳು, ಡಕಾಯತಿ, ಜನಾಂಗೀಯ ಹತ್ಯೆ ಮುಂತಾದ ನಾನಾ ಅಪಾಯಗಳನ್ನೊಡ್ಡುವ ಆ ರಸ್ತೆಯ ಕುರಿತಾದ ಭಯವದು.

ತಿರಸ್ಕಾರ ಮತ್ತು ಕಾನೂನುಬದ್ಧ ಪತ್ರಗಳಿಲ್ಲದಿರುವುದೇ ವಾಸ್ತವವಾಗಿರುವ ಒಳಪ್ರದೇಶದ ರಮ್ಯವಿವರಗಳಲ್ಲಿ ಕವಿತೆಗಳು ಶುರುವಾಗುತ್ತವೆ. ಅಥವಾ ಅದು ಬ್ರಹ್ಮಚಾರಿಯವರು ಹೇಳುವಂತೆ ‘ನ್ಯಾಯೋಲ್ಲಂಘನೆಯ ಮನೋವಿಕಲ್ಪಗಳು’ (ಇಲ್ಲೆಜಿಟಿಮೇಟ್ ಹಲ್ಯುಸಿನೇಶನ್). ಗುರಿಯ ಬಗ್ಗೆ ಒಂದು ನಿರ್ಧಿಷ್ಟತೆ ಇರದೆ ಲಾಡ್ ರಿಂಬಾಯ್, ರಟಚೋರ, ಸೋನಾಪುರ-ಹೀಗೆ ಸುಮ್ಮನೇ ಸ್ಥಳಗಳ ಹೆಸರುಗಳನ್ನು ಕವಿ ಹೇಳುತ್ತಾರೆ. ಯಾಕೆಂದರೆ ಈ ಸ್ಥಳಗಳು ನಮ್ಮ ಗಮ್ಯಸ್ಥಾನಗಳ ಮಧ್ಯೆ ಹಾದುಹೋಗುವಂಥವು. ಈಗ ಅವುಗಳ ಉಲ್ಲೇಖ ಕವಿತೆಗಳಲ್ಲಿ ಬಂದಿರುವುದರಿಂದ ಕನಿಷ್ಠ ಅವುಗಳ ನೆನಪಾದರೂ ನಮಗಿದ್ದೀತು.

golrick-brahmachariಸಿಲ್ಚಾರ್ ನ ಮೇಲೆ ಈ ಕವಿ ಬರೆದ ಕವನದಲ್ಲಿ ಕಳೆದುಕೊಂಡದ್ದರ ದು:ಖಭಾರ ಹೇಗಿದೆಯೆಂದರೆ ಅದು ಹೀಗೆ ಕೊನೆಗೊಳ್ಳುತ್ತದೆ.

ನಾವು ಮರಳಿಬರಲಾಗದಂತೆ ನಿನ್ನನ್ನು ತೊರೆದೆವು
ನಾವೀಗ ಬರಡು ಶಹರಗಳಲ್ಲಿ ದ್ವೇಷಿಸುತ್ತ ಬದುಕುತ್ತಿದ್ದೇವೆ.
ಒಂದು ದಿನ ನಿನ್ನಬಳಿಗೆ ಮರಳುವ ಆಸೆಇದೆ.
ಯಾವಯಾವಾಗ ನಾವು ನಿನ್ನ ಕಡೆಗೆ ನೋಡುತ್ತೇವೋ
ಹಿಂದೆ ಇದ್ದದ್ದು ಈಗ ಇಲ್ಲವಾಗಿದೆ.
ನೀನು ನೀನಾಗಿರುವ ಯಾವುದೂ ಅಲ್ಲಿಲ್ಲ.
ನಾವು ದಣಿದಾಗ ಹಾಗಾದರೆ
ನಾವೆಲ್ಲಿ ಹೋಗಬೇಕು?
ನಾವೆಲ್ಲಿಗೆ ಮತ್ತೆ ಹಿಂತಿರುಗಬೇಕು?

ಇದು, ಪ್ರಿಯವಾದ ಒಂದು ಜಾಗದ ಪರಿಚಿತ ಗುರುತುಗಳು ಮರೆಯಾದ ನಷ್ಟಭಾವದ ಕುರಿತಾದದ್ದಲ್ಲ. ಬದಲಾಗಿ ಒಳಗೊಂದು ಹೊರಗೊಂದು ಎಂಬಂತಿರುವ ನೀರಸ ಸ್ಥಿತಿಯನ್ನೆ ನೆಚ್ಚಿಕೊಂಡು ಹುಸಿ ಆಧುನಿಕತೆಗೆ ಒಲೆಯುತ್ತ ಪತನಮುಖಿಯಾಗುವ ಎಲ್ಲ ಸಣ್ಣ ಪಟ್ಟಣಗಳ ಕುರಿತಾಗಿ ಹುಟ್ಟುವ ಪರಕೀಯ ಭಾವದ ಕುರಿತಾಗಿ ಇದೆ.

‘ಹೋಮ್’ ಎಂಬ ಸಂಪುಟದ ಮೊದಲ ಭಾಗದಲ್ಲಿ, ಅನಪೇಕ್ಷಿತತೆ ಮತ್ತು ನೆಲೆಯಿಲ್ಲದಿರುವಿಕೆಯ ಒಂದು ಬಿಂದುವಿನಿಂದ ಕವಿ ತನ್ನ ಪಯಣವನ್ನು ಆರಂಭಿಸುತ್ತಾರೆ. ಅವರು ಪರದೇಶಿತನವನ್ನು ಸ್ಥಾಪಿಸುತ್ತಾರೆ. -ಅದು ವಿಭಜನೆಯಿಂದ ಚೂರಾದ ವಲಸಿಗನ ಮೊಮ್ಮಗನ ಅನುಭವದ ಭಾಗವೇ. ಅವರು ತಮ್ಮ ಎಳವೆಯಲ್ಲಿಯೇ ಮನೆ,ಚಹರೆ, ಒಳಗಿನವ, ಹೊರಗಿನವ -ಇಂತಹ ಶಬ್ದಗಳ ಇಂಗಿತದ ಬಗ್ಗೆ ಪ್ರಶ್ನಿಸುತ್ತಾರೆ.

ಕೃತಿಯ ಎರಡನೇ ಭಾಗ ‘ಅವೇ’ಯಲ್ಲಿ ಕವಿ ನಗರಪರಕೀಯತೆಯ ಹಾಗೂ ಅಸ್ವಸ್ಥತೆಯ ಕಹಿಸತ್ಯಗಳನ್ನು ತೆರೆದಿಡುತ್ತಾರೆ. ಒಂದು ಜಡತ್ವ, ಮನೋವಿಕಲ್ಪ ಮಾತ್ರವಲ್ಲ ವಿಚಿತ್ರ ತೆವಲುಗಳು ಹಾಗೂ ಭೌತಿಕವಾಗಿ ಒಂದು ಸೂರಿಲ್ಲದ ಅತಂತ್ರಸ್ಥಿತಿ-ಇವುಗಳನ್ನೆಲ್ಲ ಈ ಭಾಗದ ಕವಿತೆಗಳು ತಬ್ಬಿಕೊಂಡಿವೆ.

ಕವಿ ದೆಹಲಿಯ ಅಕ್ಕಪಕ್ಕದ ಹಳ್ಳಿಗಳ ಕುರಿತು ಕವಿತೆ ಬರೆಯುತ್ತಾರೆ. ಹುಮಾಯುನ್ಪುರ, ಷಾಪುರ್ಜಾಟ್, ಕಿರ್ಕ್ ಮುಂತಾದ ಜಾಗಗಳು- ಜಗತ್ತಿನ ಬೇರೆಭೇರೆ ಭಾಗಗಳ ಜನರೊಂದಿಗೆ ಈಶಾನ್ಯಭಾಗದ ವಲಸಿಗರು ವಾಸಿಸುವ ನೆಲೆಗಳವು. ತಮ್ಮದೇ ಈಶಾನ್ಯ ನೆಲದಲ್ಲಿರುವಾಗ ಬಡವರಿಗೆ ಹೆಚ್ಚು ಅವಕಾಶಗಳು ತೆರೆದಿದ್ದವು..ಈಗ ಅವರು ಷಹರದ ಹಳ್ಳಿಗಳ ಇಕ್ಕಟ್ಟಿನ ಇರುಸುಮುರುಸಿಗೆ ಸೀಮಿತಗೊಳ್ಳಬೇಕಾಗಿದೆ.

ಈ ಭಾಗದಲ್ಲಿ ಬ್ರಹ್ಮಚಾರಿಯವರ ಕವಿತೆಗಳು ಕೆಳವರ್ಗದ ಮೇಲೆ ಮತ್ತು ದಾರಿದ್ರ್ಯ ಹುಟ್ಟುಹಾಕುವ ಸಂಘರ್ಷ,ನಗರದ ಪ್ರತಿಸಂಸ್ಕೃತಿ ಹಾಗೂ ದೆಹಲಿಯ ನೆರೆಹೊರೆಯ ಸಂಪ್ರದಾಯಜಡ ಭೂಮಾಲಕರ ಮೇಲೆ ಕೇಂದ್ರೀಕರಿಸಿವೆ.

ಮನೆಯೆಂಬ ಭಾವವನ್ನು ಮೂಡಿಸುವ ಒಂದು ಜಾಗವನ್ನು ಕವಿ ಅಲ್ಲಗಳೆದರೂ ದೆಹಲಿಯ ಕುರಿತಾದ ಅವರ ಕವಿತೆಗಳನ್ನು ಓದುತ್ತಿದ್ದಂತೆ ಮೊದಲಿಗೆ ಅನಿಸುವುದೇನೆಂದರೆ ಈ ನಗರದೊಂದಿಗೆ ಕವಿಯ ಸಂಬಂಧವು ಪ್ರೀತಿ-ದ್ವೇಷದ್ದು. ಶ್ರೀಮಂತ ಮತ್ತು ಮಧ್ಯಮ ವರ್ಗಗಳಿಗಾಗಿ ಸೃಷ್ಟಿಯಾದ ವಸಂತವಿಹಾರ, ಹೌಝ್ ಖಾಸ್, ಸಿಲೆಕ್ಟ್ ಸಿಟಿ ವಾಕ್, ದಿ ಇಂಡಿಯನ್ ಕೋಫಿ ಹೌಸ್, ಪಾಲಿಕಾ ಬಜಾರ್- ಮುಂತಾದ ದೆಹಲಿಯ ಸುತ್ತಮಿತ್ತಣ ಎಡೆಗಳಲ್ಲಿ ಕವಿ ನಮ್ಮನ್ನು ಪರಿಚಿತ ಸದರದಲ್ಲಿ ಸುತ್ತಾಡಿಸುತ್ತಾರೆ.

ದೆಹಲಿಯ ಮುಖ್ಯವಾಹಿನಿಯೆಂದು ಬಹುಮಂದಿ ಕಲ್ಪಿಸುವ ಒಂದು ಚಿತ್ರದ ಕುರಿತು ಕವಿಯ ದ್ವೇಷದ ಒಂದು ತೆಳುಪರದೆ ಕವಿತೆಯಲ್ಲಿ ಕಾಣಿಸುತ್ತದೆ. ಈ ದ್ವೇಷ ಇನ್ನೂ ಎದ್ದು ತೋರುವುದು ‘ಫ್ರೀ ರೈಡರ್’ ಕವಿತೆಯಲ್ಲಿ. ವಲಸಿಗರು ನೆಲಸಿರುವ ಕೊಳೆಗೇರಿಗಳು ಹಾಗೂ ಹಳ್ಳಿಗಳನ್ನು ಮಾತ್ರ ಕವಿ ರಮ್ಯವೆಂಬಂತೆ ಚಿತ್ರಿಸುತ್ತಾರೆ.. ಅವುಗಳಲ್ಲಿ ನೈಜ ಹಾಗೂ ಬೆಚ್ಚನೆಯ ಭಾವವನ್ನು ಕಾಣುತ್ತಾರೆ..

ದೆಹಲಿಯು ನಿಜವಾಗಿ ಮನೆಯಲ್ಲ. ತನ್ನನ್ನು ತಾನು ಕಳೆದುಕೊಳ್ಳಲು ಹಾಗೂ ಸಾಧ್ಯವಾದರೆ ಹಿಂತಿರುಗಲು ಮನೆಯೆಂಬ ಜಾಗವಿಲ್ಲ ಎಂಬ ಯಾತನೆಯ ಎಳೆಯನ್ನು ಮರೆಯಲು ಬೇಕಾಗಿ ನಗರದ ಹುಚ್ಚುತನಕ್ಕೆ ಧುಮುಕುವ ತಾಣವದು..ಅದು ಈ ಕನಿಷ್ಠಕ್ಕೆ ಇಳಿದಿದೆ: ದೆಹಲಿಯೆನ್ನುವುದು ಕಾಂಕ್ರೀಟ್ ಹೃದಯಗಳ ಹಾಗೂ ವರ್ಣರಹಿತ ಫ್ಲೈಓವರ್ ಗಳ ಒಂದು ಅರಣ್ಯ. ಅಷ್ಟೇ..

homeದೆಹಲಿಯೆನ್ನುವುದು ಒಂಟಿತನ. ಅದು ಪೊಳ್ಳುತನವನ್ನು ಮತ್ತು ಭೋಗವನ್ನು ಹುಟ್ಟುಹಾಕುತ್ತದೆ. ಆದರೂ ಕವಿ ದೆಹಲಿಯಲ್ಲಿ ಮನೆಯೊಂದನ್ನು ಹುಡುಕುತ್ತಾರೆ. ಅಲ್ಲಿ ಯೋಗೇಂದರ್ ಮಧ್ಯಾಹ್ನಕ್ಕೆ ಅಸ್ಸಾಮೀಸ್ ಊಟವನ್ನು ಸಿದ್ಧ ಪಡಿಸುತ್ತಾನೆ ಅಥವಾ ಸಫ್ದರ್ ಜಂಗ್ ಎನ್ಕ್ಲೇವ್ ನ ನಾಗಾ ಥಾಲಿಯ ನಿಗೂಢಗಳ ಬಗ್ಗೆ ಕವಿ ಬರೆಯುವಲ್ಲೂ ಇದನ್ನು ನೋಡಬಹುದು.

ದೆಹಲಿಯ ನಗರಾರಣ್ಯದಲ್ಲಿಯೇ ಕವಿ ‘ ನಾನು ನನ್ನೊಳಗಿಂದ ರಾತ್ರಿಯನ್ನು ಉಗುಳುತ್ತೇನೆ, ಮತ್ತು ‘ನಾಯಿಗಳು ಶುಭೋದಯವನ್ನು ಊಳಿಡುತ್ತವೆ -ಒಂದು ಲಹರಿಯಲ್ಲಿರುವ ಅಪ್ಪಟ ಯುವ ಪ್ರತಿಭೆಗೆ ತಕ್ಷಣ ಹೊಳೆದು ಬಿಡುವಂತೆ’ ಎಂಬಂತಹ ಶ್ರೇಷ್ಠ ಸಾಲುಗಳನ್ನು ಕವಿ ಸೃಷ್ಟಿಸಿದ್ದು.

ಯಾವಾಗಲೂ ಒಂದು ಮಧ್ಯಸ್ಥಿತಿಯಲ್ಲಿರುವ ಕವಿಯಾಗಿ ಬ್ರಹ್ಮಚಾರಿ ಓದುಗರಿಗೆ ಕಾಣಿಸಿಕೊಳ್ಳುತ್ತಾರೆ.ಅತ್ತ ಮನೆ ಅಥವಾ ಮನೆಗಳೆಂಬ ನೆನಪುಗಳನ್ನು ಹೊತ್ತು ಹಪಹಪಿಸದೆ ಇರಲಾರದ ಸ್ಥಿತಿ ಆತನದು. ಆದರೂ ಆತನ ಅನ್ವೇಷಣೆ ನಿರಾಶೆಯಲ್ಲಿಯೇ ನಿಶ್ಚಿತವಾಗಿ ಮುಗಿತಾಯ ಹೊಂದುವಂಥದ್ದು.

ನೀವು ಕವಿತೆಗಳನ್ನು ನಿಧಾನವಾಗಿ ಓದಿ. ಪ್ರತಿಮೆಗಳ ಬಾಹುಳ್ಯವು ಅದನ್ನು ಬೇಡುತ್ತದೆ. ಒಂದು ಭಿನ್ನವಾದ ಸಾಹಿತ್ಯಕ ಅನುಭವವನ್ನು ನೀವು ನಿರೀಕ್ಷಿಸಿ .ಇದು ‘ಇಕೋ ಇಲ್ಲಿ’ ಮತ್ತು ಈಗ’ ಅಂಗಡಿಯಾತ ತರಕಾರಿಗಳನ್ನು ಹಳೆ ಪತ್ರಿಕೆಯ ತುಂಡುಗಳಲ್ಲಿ ಸುತ್ತುತ್ತಾನಲ್ಲ-ಹಾಗೆ. ಅದು ಕವಿ ಸೆರೆಹಿಡಿಯುವ ತಾಜಾತನದ ಯೋಗ್ಯತೆ.’ಇಶಿತಾಳಿಗಾಗಿ- ಎಲ್ಲೆಲ್ಲಿ ನನಗೆ ಅವಳು ಕಾಣಸಿಗುತ್ತಾಳೋ ಅಲ್ಲಿ’ ಎಂಬ ಶೀರ್ಷಿಕೆಯ ಈ ಕವಿತೆಯೊಂದಿಗೆ ಸಂಗ್ರಹ ಮುಗಿಯಬೇಕಾಗಿತ್ತು ಎಂದು ನನಗನಿಸುತ್ತದೆ.

ಇಲ್ಲಿ ಪ್ರತಿಮೆಗಳು ಅಷ್ಟೊಂದು ಕೋಮಲ, ಹಿಮಕ್ಕೂ ಅಲ್ಲಿ ಬೇರೆಯೇ ಒಂದು ಪರಿಮಳ-ನಿಜಾಮುದ್ದೀನನ ವಸಂತಕಾಲದ ಸಂಜೆಯ ಹಾಗೆ. ಅದು ಗತವನ್ನು ಮರಳಿ ಪಡೆಯಲಾಗದು ಎನ್ನುವುದು ಒಪ್ಪಿತವಾದ ಕುರುಹು. ಅದು ನಮ್ಮಲ್ಲಿ ಅನೇಕರಿಗೆ ಅಂತೆಯೇ ಕವಿಗೂ ಕೂಡ ಒಂದು ವಾಸ್ತವತೆ.

ಆದರೆ ಅದರ ಬದಲು ನಮ್ಮ ಆತ್ಮಸಾಕ್ಷಿಗೇ ಮೊಳೆಹೊಡೆದಂತೆ ‘ಕುಡಿದ’ಎಂಬ ಶಬ್ದದೊಂದಿಗೆ ಬಂಡುಕೋರ ಅಥವಾ ತರಲೆಯ ತಲೆಮಾರಿಗೆ ಕೊಡುಗೆಯ ರೂಪದ ಕವಿತೆಯೊಂದಿಗೆ ಪುಸ್ತಕವನ್ನು ಕವಿ ಮುಕ್ತಾಯ ಮಾಡುತ್ತಾರೆ.ಅದೊಂದು ಒಪ್ಪಿತ ಪಲಾಯನವಾದವೇ. ಆದರೆ ಅದರಾಚೆಗೆ ಮುಂದುವರಿದ ನಾಸಿಯಾ ಮತ್ತು ಅಮಲು ಆತ್ಮಘಾತಕವಾಗಿ ಕೊನೆಗೊಳ್ಳಬಹುದು..

ಅದು ಬಿಗಿದ ಮುಷ್ಠಿಯೊಂದಿಗೆ ಹಸಿಹಸಿಯಾದ ಅಕಾವ್ಯವೆನ್ನಬಹುದಾದ ಕೋಪವನ್ನು ಝಳಪಿಸುತ್ತಿರುತ್ತದೆ. ಆದರೆ ಕವಿಯ ವಾಸ್ತವದ ಭಾಗವೆಂದರೆ ಭೌಗೋಳಿಕವಾದ ಅವಕಾಶದೊಳಗಿನ ಅವಕಾಶ, ಕೊಂಡಾಟ ಅಥವಾ ಮುದ್ದು ಬೆರೆತ ಧ್ವನಿಯಲ್ಲಿ ಅವರು ಉಚ್ಚರಿಸುವ ಕೆಲವು ಹೆಸರುಗಳು,ಅವರ ಧ್ವನಿಯಲ್ಲಿನ ಧಾಟಿ ಆ ಸ್ಥಳಗಳಲ್ಲಿ ಕನಿಷ್ಠ ಅವುಗಳ ಪ್ರತಿಮೆಗಳಲ್ಲಿ ಕಾವ್ಯವನ್ನು ಕಾಣಬಹುದೇ ಎಂದು ಪ್ರಶ್ನಿಸುವಂತೆ ಮಾಡುತ್ತದೆ.

ಕವಿ ಬರೆಯುವ ಆ ವೈಶಾಲ್ಯವನ್ನೂ ವೈವಿಧ್ಯವನ್ನೂ, ಆ ಸ್ಥಳಗಳು ಮತ್ತು ಆ ಜನಗಳು-ಇವುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾನು ನನ್ನ ಮನದಲ್ಲಿ ಕೂತಿರುವ ಸಿದ್ಧ ಮಾದರಿಗಳನ್ನು ಹೊರದೂಡಬೇಕಾಗುತ್ತದೆ.
ಮನೆಯೆಂಬ ಮೂಲಕಲ್ಪನೆಯನ್ನು ಕವಿಗೆ ಒದಗಿಸಿದ ಸ್ಥಳಗಳು ಮುಖ್ಯವಾಹಿನಿಯಿಂದ ಬೇರ್ಪಟ್ಟವರಿಂದ ಎಷ್ಟು ತುಂಬಿದೆಯೆಂದರೆ ಈ ಎರಡು ಪರಿಕಲ್ಪನೆಗಳ ಬಗ್ಗೆ ಒಂದೇ ಸಾಲಿನಲ್ಲಿ ಮಾತಾಡುವುದು ಅಪ್ರಾಮಾಣಿಕವಾಗುತ್ತದೆ.

ಕವಿ ಬ್ರಹ್ಮಚಾರಿಯವರು ಅನುದ್ದೇಶಿತವಾಗಿಯಾದರೂ ಸ್ವಂತ ಅನುಭವಗಳನ್ನು ಸೆರೆಹಿಡಿದಿರುವುದು ಒಬ್ಬ ಹೊರಗಿನವನ ಅಸ್ತಿತ್ವದ ವಿರೋಧಾಭಾಸವಾಗಿರಬಹುದೇ? ಈ ಪ್ರಶ್ನೆ ವ್ಯಕ್ತಿನಿಷ್ಠ ಮತ್ತು ವೈಯಕ್ತಿಕ ಉತ್ತರಗಳನ್ನು ಮಾತ್ರ ಕಂಡುಕೊಳ್ಳಬಲ್ಲುದು. ಅದು ಹಾಗಿರಲಿ.ಕವಿತೆಗಳನ್ನು ಓದಿ ಆನಂದಿಸಿ. ಅವು ನಿಮ್ಮ ಆತ್ಮಗಳು ಅಳುವಂತೆ ಮಾಡಲಿ. ನಿಮ್ಮ ಕಣ್ಣುಗಳು ಉರಿಯುವ ಕುಲುಮೆಯಲ್ಲಿ ರೂಕ್ಷ ರೂಪಕಗಳನ್ನು ಕಾಣಲಿ.

‍ಲೇಖಕರು Admin

September 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: