ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನೆಲಕ್ಕಂಟಿ ಬಿದ್ದ ಆಕಾಶವಾಸದ ಕನಸು' – ಎಸ್ ದಿವಾಕರ್

ಎಸ್ ದಿವಾಕರ್

ಹಲವು ಮಜಲೆಗಳ ಒಂದುಕಟ್ಟಡ. ಆ ಕಟ್ಟಡದ ಆರನೆಯ ಮಜಲೆಯಲ್ಲಿರುವ ಮೂವರು ಒಬ್ಬನನ್ನು ಕಿಟಕಿಯಿಂದಾಚೆ ಎಸೆದು ಬಿಡುತ್ತಾರೆ. ಅವನು ಕೆಳಗೆ ಬೀಳುತ್ತಾ ಬೀಳುತ್ತಾ ಒಂದೊಂದು ಮಜಲೆಯ ಕಿಟಕಿಯ ಮೂಲಕ ಒಳಗಿರುವವರನ್ನು ಗಮನಿಸುತ್ತಾ ಕೊನೆಗೆ ನೆಲಕ್ಕೆ ಬಿದ್ದು ಸಾಯುತ್ತಾನೆ. ಆ ಹೊತ್ತಿಗೆ ಅವನಲ್ಲೊಂದು ಜ್ಞಾನೋದಯವಾಗಿರುತ್ತದೆ. ಇದು ರಷ್ಯನ್ ಲೇಖಕ ಅರ್ಕಾಡಿ ಅವ್ರೆಚೆಂಕೊ ಬರೆದ ‘ಹಾರಿಕೊಂಡು ಹೋದವನು’ ಎಂಬ ಕತೆಯ ರೂಪರೇಷೆ.
ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11ರಂದು 110 ಅಂತಸ್ತಿನ ವರ್ಲ್ಡ್ ಟ್ರೇಡ್ ಸೆಂಟರ್ ಭಯೋತ್ಪಾದಕರ ದಾಳಿಗೆ ಗುರಿಯಾಯಿತಷ್ಟೆ.ಆಗ ಬೆಂಕಿ ಹತ್ತಿಕೊಂಡು ಬಹುಬೇಗ ನೆಲಸಮವಾಗಲಿದ್ದ ಆ ಕಟ್ಟಡದಿಂದಒಬ್ಬ ಮನುಷ್ಯ ಕೆಳಗೆ ಬೀಳುತ್ತಿದ್ದ. ಅವನನ್ನು ಬೀಳುತ್ತಿರುವ ಹಾಗೆಯೇ ತೋರಿಸುವ ಒಂದು ಫೋಟೊ ಈಗ ಪ್ರಸಿದ್ಧವಾಗಿದೆ. ಆ ಫೋಟೋವನ್ನು ಸೆರೆಹಿಡಿದವನು ಅಸೋಸಿಯೇಟೆಡ್ ಪ್ರೆಸ್ನ ಫೋಟೋ-ಪತ್ರಕರ್ತ ರಿಚರ್ಡ್ಡ.
ಮೇಲಿನ ಉದಾಹರಣೆಗಳಲ್ಲಿ ಒಂದುಕಲ್ಪನೆ, ಇನ್ನೊಂದು ವಾಸ್ತವ. ಎರಡೂ ಬಹುಮಹಡಿ ಕಟ್ಟಡಗಳಿಗೆ ಸಂಬಂಧಪಟ್ಟದ್ದು. ಬಹುಮಹಡಿ ಎಂದರೆ ಕೆಲವೇ ಕೆಲವು ಅಂತಸ್ತುಗಳಿರುವ ಕಟ್ಟಡಗಳಲ್ಲ; ಇಪ್ಪತ್ತು,  ಐವತ್ತು, ನೂರು ಮಜಲೆಗಳುಳ್ಳ  ಸ್ಕೈ ಸ್ಕೇಪರ್ಸ್ ಅಥವಾ ಗಗನಚುಂಬಿಗಳು. ಇವತ್ತು ಬೆಂಗಳೂರು, ಮುಂಬಯಿಗಳಂಥ ನಗರಗಳಲ್ಲಿ ಕೂಡ ಅಂಥ ಗಗನಚುಂಬಿಗಳು ಸರ್ವೇ ಸಾಮಾನ್ಯ.
ಗೋಪಾಲಕೃಷ್ಟ ಅಡಿಗರ ಒಂದು ಮುಖ್ಯ ಕವನ ‘ಶ್ರೀರಾಮನವಮಿಯ ದಿವಸ’. ಅದರಲ್ಲಿ ‘ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು’ ಎಂಬುದೊಂದು ಸಾಲು. ಆ ಸಾಲಿನ ‘ಆಕಾಶಯಾನದ ಕನಸ’ನ್ನು ‘ಆಕಾಶವಾಸದ ಕನಸು’ ಎಂದು ಪರಿವರ್ತಿಸಿಕೊಂಡರೆ ಸಾಕು, ಗಗನಚುಂಬಿಗಳ ಇಡೀ ಇತಿಹಾಸ ನಮ್ಮಕಣ್ಣೆದುರಿಗೆ ಬಂದು ನಿಲ್ಲುತ್ತದೆ.
1885ರಲ್ಲಿ ಷಿಕಾಗೋ ನಗರದಲ್ಲಿ ನಿರ್ಮಾಣಗೊಂಡ 10 ಅಂತಸ್ತಿನ ಹೋಮ್ಇನ್ಷೂರೆನ್ಸ್ ಕಟ್ಟಡವೇ ಮೊದಲ ಗಗನಚುಂಬಿ. ಅದರ ವಾಸ್ತುಶಿಲ್ಪಿ ವಿಲಿಯಂ ಲೆಬರೋನ್ಜೆನ್ನಿ (1832-1907). ಗಗನಚುಂಬಿಗಳ ಜನಕ ಎಂದು ಹೆಸರಾದ ಈತ ಅಮೆರಿಕದಲ್ಲಿ ಇಂಜಿನಿಯರಿಂಗನ್ನೂ ಪ್ಯಾರಿಸಿನಲ್ಲಿ ಕಲೆ ಮತ್ತು ವಾಸ್ತುಶಿಲ್ಪವನ್ನೂ ಅಭ್ಯಾಸ ಮಾಡಿದವನು. ಅವನು ನಿರ್ಮಿಸಬೇಕಾಗಿದ್ದದ್ದು ಸಾಕಷ್ಟು ಬೆಳಕಿರುವ ಅನೇಕಾನೇಕ ಸಣ್ಣ ಸಣ್ಣ ಆಫೀಸುಗಳುಳ್ಳ ಒಂದು ಅಗ್ನಿನಿರೋಧಕ ಕಟ್ಟಡವನ್ನು. ಅಷ್ಟು ದೊಡ್ಡ ಕಟ್ಟಡದ ನಿರ್ಮಾಣ ಹೇಗೆ? ಅದೇ ಯೋಚನೆಯಲ್ಲಿ ಒಂದು ಸಂಜೆ ಮನೆಗೆ ಹೋದಾಗ ಅವನ ಹೆಂಡತಿ ತಾನು ಓದುತ್ತಿದ್ದ ಭಾರಿ ಪುಸ್ತಕವನ್ನು ಬಳಿಯಲ್ಲೇ ಇದ್ದ ಹಕ್ಕಿಯ ಪಂಜರದ ಮೇಲಿಟ್ಟಳಂತೆ. ಜೆನ್ನಿ ಯೂರೆಕಾ ಎಂದ. ಸಣ್ಣ ಸಣ್ಣ ತಂತಿಗಳಿಂದಾದ ಒಂದು ಹಕ್ಕಿಯ ಪಂಜರ ಅಷ್ಟು ಭಾರೀ ಪುಸ್ತಕವನ್ನು ಹೊತ್ತುಕೊಳ್ಳಬಹುದಾದರೆ ಅಂಥದೇ ಲೋಹದ ಪಂಜರವೊಂದು ತುಂಬಾ ಎತ್ತರ ಕಟ್ಟಡದ ಭಾರವನ್ನು ತಡೆದುಕೊಳ್ಳಬಹುದಲ್ಲ? ತಡೆದುಕೊಂಡಿತು. ಜೆನ್ನಿ ಉಕ್ಕಿನ ಪಂಜರದಂಥ ನಿರ್ಮಾಣವನ್ನು ರೂಪಿಸುವ ಮೂಲಕ ಗಗನಚುಂಬಿಗಳ ಯುಗವನ್ನು ಪ್ರಾರಂಭಿಸಿದ.
ಅಮೆರಿಕನ್ ಕಾದಂಬರಿಕಾರ ಹೆನ್ರಿಜೇಮ್ಸ್ 1907ರಲ್ಲಿ ‘ವಾಣಿಜ್ಯದ ದೈತ್ಯಸೌಧ’ಗಳೆಂದು ಕರೆದ ಗಗನ ಚುಂಬಿಗಳು ಮುಂದೆ ಅನೇಕಾನೇಕ ಲೇಖಕರನ್ನು ಪ್ರಭಾವಿಸಲಿದ್ದುವು. ಒಂದು ಶತಮಾನದ ನಂತರ, ಅಂದರೆ 2007ರಲ್ಲಿ, ಡಾನ್ಡೆಲಿಲೊ ಬರೆದ ಕಾದಂಬರಿಯ ಹೆಸರು ‘ದಿ ಫಾಲಿಂಗ್ ಮ್ಯಾನ್’. ಆ ಕಾದಂಬರಿಯುದ್ದಕ್ಕೂಒಂದು ಪಾತ್ರ ನಗರದಲ್ಲಿ ಎಲ್ಲೆಲ್ಲಿಯೂ ಮೇಲಿಂದ ಕೆಳಗೆ ಬೀಳುತ್ತಿರುವ ಮನುಷ್ಯನೊಬ್ಬನನ್ನು ನೋಡುತ್ತಿರುತ್ತದೆ. ಕೆಳಗೆ ಬೀಳುತ್ತಿರುವ ಆ ಮನುಷ್ಯ ಒಬ್ಬ ಕಲಾವಿದ. ವಾಣಿಜ್ಯೋದ್ಯಮಿಯ ಪೋಷಾಕಿನಲ್ಲಿರುವ ಅವನು  ರಿಚರ್ಡ್ ಡ್ರ್ಯೂನ ಪ್ರಸಿದ್ಧ ಫೋಟೋದಲ್ಲಿರುವವನಂತೆ ತಲೆಕೆಳಗಾಗಿ ತೂಗುಬಿದ್ದು ರಂಜಿಸುತ್ತಿರುವವನು.

ಈ ಕಾದಂಬರಿಗೆ ವರ್ಲ್ಡ್ ಟ್ರೇಡ್ ಸೆಂಟರ್ ಧ್ವಂಸಗೊಂಡದ್ದೇ ಹಿನ್ನೆಲೆ.  ಆ ಘಟನೆ ಮನುಷ್ಯ ನಿರ್ಮಿತ ಗಗನಚುಂಬಿ ಮನುಷ್ಯನನ್ನೇ ಬಲಿ ತೆಗೆದುಕೊಳ್ಳುವ ವಿಪರ್ಯಾಸಕ್ಕೊಂದು ರೂಪಕವಾಯಿತು. ಅದಕ್ಕೂ ಮುನ್ನ ನ್ಯೂಯಾರ್ಕ್ ನಂಥ ನಗರ ತನ್ನ ಗಗನಚುಂಬಿಗಳಿಂದಾಗಿಯೇ ಸಿನಿಮಾ ತಯಾರಕರನ್ನು, ಪೇಂಟರುಗಳನ್ನು, ಫೋಟೋಗ್ರಾಫರುಗಳನ್ನು ಆಕರ್ಷಿಸುತ್ತಿದ್ದುದುಂಟು. ಆದರೆ ನ್ಯೂಯಾರ್ಕ್ ಹಾಗೆ ಆಕರ್ಷಣೀಯವಾಗಬೇಕೆಂದೇ ಗಗನಚುಂಬಿಗಳನ್ನು ಕಟ್ಟಿಕೊಳ್ಳಲಿಲ್ಲ. ವಾಣಿಜ್ಯ ವಹಿವಾಟಿನ ದೆಸೆಯಿಂದ ಅಲ್ಲಿ ಎತ್ತರದ ಕಟ್ಟಡಗಳ ನಿರ್ಮಾಣ ಅಗತ್ಯವಾಯಿತೆನ್ನಿ. 1892ರಲ್ಲಿ ನಿರ್ಮಾಣಗೊಂಡ 309 ಅಡಿ ಎತ್ತರದ ಪುಲಿಟ್ಜರ್ ಬಿಲ್ಡಿಂಗಿನ ಮುಂದೆ 284 ಅಡಿ ಎತ್ತರದ ಟ್ರಿನಿಟಿ ಚರ್ಚ್ ಸಹಜವಾಗಿಯೇ ಕುಬ್ಜವಾಯಿತು. ಆಮೇಲೆ ಎತ್ತರದ ಕಟ್ಟಡಗಳ ನಿರ್ಮಾಣ ಹೆಚ್ಚಿದಂತೆ ಬೇರೆ ಬೇರೆ ಮಜಲುಗಳನ್ನು ತಲಪಲು ಎಲಿವೇಟರುಗಳು ಬೇಕಾದವು. ಎಲಿಶಾ ಗ್ರೇವ್ಸ್ ಓಟಿಸ್ (1811-1861) ಎಂಬ ಪ್ರತಿಭಾವಂತ ಮೇಲೆತ್ತುವ ಸರಪಳಿ ಮುರಿದುಹೋದರೂ ಎಲಿವೇಟರು ಬಿದ್ದುಹೋಗದಂತೆ ಮಾಡಬಲ್ಲ ಸುರಕ್ಷಾ ವಿಧಾನವೊಂದನ್ನು ಕಂಡು ಹಿಡಿದ. ಸ್ವಲ್ಪ ಕಾಲ ‘ವರ್ಟಿಕಲ್ ರೇಲ್ವೆ’ಯೆಂದೇ ಹೆಸರಾಗಿದ್ದ ಆ ವಿಧಾನ ಮುಂದೆ ಗಗನಚುಂಬಿ ಕಟ್ಟಡಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು.
ಜಾನ್ಡಾಸ್ ಪಾಸೋಸ್ನ ‘ಮ್ಯಾನ್ಹಟನ್ಟ್ರಾನ್ಸ್ಫರ್’ (1925) ಅನೇಕ ವ್ಯಕ್ತಿಗಳ ಜೀವನದಜೊತೆಗೆ ನ್ಯೂಯಾರ್ಕ್ ನಗರ ಜೀವನವನ್ನುಆರಂಭದಿಂದ ಜಾಸ್ ಯುಗದವರೆಗೆ ಪರಿಶೋಧಿಸುವ ಕಾದಂಬರಿ. ಕೊಳ್ಳುಬಾಕ ಸಂಸ್ಕೃತಿಯನ್ನೂ ಸಮಕಾಲೀನ ನಗರ ಜೀವನದ ಸಾಮಾಜಿಕ ಔದಾಸೀನ್ಯವನ್ನೂ ಖಂಡಿಸುವ ಈ ಕಾದಂಬರಿ ಮ್ಯಾನ್ಹಟನ್ ವಿಶೇಷ ಚೈತನ್ಯದಿಂದ, ತಳಮಳದಿಂದ ತುಂಬಿ ತುಳುಕುತ್ತಿದ್ದರೂ ಎಷ್ಟು ನಿರ್ದಯಿಯಾಗಿದೆಯೆಂದು ಚಿತ್ರಿಸುತ್ತದೆ. ಡಾಸ್ ಪಾಸೋಸ್ನ ಪ್ರಯೋಗಶೀಲ ತಂತ್ರಗಳನ್ನೂ ನಿರೂಪಣಾ ಕೊಲ್ಯಾಜುಗಳನ್ನೂ ಪಡಿಮೂಡಿಸುವ ಈ ಕಾದಂಬರಿ ಜೇಮ್ಸ್ಜಾಯ್ಸ್ನ ‘ಯೂಲಿಸಿಸ್’ ಕಾದಂಬರಿಯಿಂದ, ಟಿ.ಎಸ್. ಎಲಿಯಟ್ಟನ ‘ದಿ ವೇಸ್ಟ್ ಲ್ಯಾಂಡ್’ ಕಾವ್ಯದಿಂದ, ರಷ್ಯನ್ ನಿರ್ದೇಶಕ ಸೆಗರ್ಯಿ  ಐಸೆನ್ಸ್ಟೀನನ ಫಿಲ್ಮ್ಕೊಲ್ಯಾಜ್ತಂತ್ರ ವಿಧಾನದಿಂದ ಪ್ರಭಾವಿಸಲ್ಪಟ್ಟಿದೆ. ಡಿ.ಎಚ್. ಲಾರೆನ್ಸನ ಪ್ರಕಾರ ಇದು ನ್ಯೂಯಾರ್ಕನ್ನು ಕುರಿತ ಅತ್ಯಂತ ನವ್ಯ ಕಾದಂಬರಿ.
1920ರ ಹೊತ್ತಿಗೆ ನ್ಯೂಯಾರ್ಕ್ ಅಮೆರಿಕದ ಅತ್ಯಂತ ದೊಡ್ಡ ನಗರವಾಗಿತ್ತು; ಪ್ರಪಂಚದ ಎರಡನೇ ದೊಡ್ಡ ನಗರವಾಗಿತ್ತು. ಆ ಕಾಲಾವಧಿಯನ್ನೇ ತನ್ನ ಕ್ರಿಯಾಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಈ ಕಾದಂಬರಿಯಲ್ಲಿಡಾನ್ ಪಾಸೋಸ್ ನ್ಯೂಯಾರ್ಕನ್ನು ಇತಿಹಾಸದ ಮಹಾ ನಗರಗಳಲ್ಲಿ ಒಂದಾಗಿ ಚಿತ್ರಿಸಿದ್ದಾನೆ. ಬ್ಯಾಬಿಲೋನ್ ಇಟ್ಟಿಗೆಗಳಿಂದ ನಿರ್ಮಾಣಗೊಂಡಿದ್ದರೆ, ಅಥೆನ್ಸ್ ಕಲ್ಲುಕಂಬಗಳಿದ್ದರೆ, ಕಾನ್ಸ್ಟ್ಯಾಂಟಿನೋಪಲಿನ ಮಿನಾರುಗಳು ಕ್ಯಾಂಡಲಿನ ಬೆಳಕಿನ ಕುಡಿಗಳಂತೆ ಬೆಳಗುತ್ತಿದ್ದರೆ, ನ್ಯೂಯಾರ್ಕ್ ನ ಎತ್ತರೆತ್ತರದ ಕಟ್ಟಡಗಳು ಉಕ್ಕಿನಿಂದ, ಗಾಜಿನಿಂದ, ಗಾರೆಯಿಂದ ತಯಾರಾಗಿದ್ದವು.
ಕಾದಂಬರಿ ಈ ನಗರವನ್ನುಒಂದು ಪಾತ್ರವಾಗಿ, ಬಲಶಾಲಿಗಳನ್ನು ರೂಪಿಸುವ ವಾಸ್ತುಶಿಲ್ಪವಾಗಿ, ದುರ್ಬಲರನ್ನು ಪುಡಿಗುಟ್ಟುವಯಂತ್ರ ಪಿಶಾಚಿಯಾಗಿಚಿತ್ರಿಸುತ್ತದೆ. ‘ಮೆಟ್ರೊಪಾಲಿಸ್’, ‘ಟ್ರ್ಯಾಕ್ಸ್’, ‘ಸ್ಟೀಮ್ರೋಲರ್’, ‘ಫೈರ್ಎಂಜಿನ್’, ‘ರೋಲರ್ಕೋಸ್ಟರ್’, ‘ರಿವಾಲ್ವಿಂಗ್ಡೋರ್ಸ್’, ‘ಸ್ಕೈಸ್ಕ್ರೇಪರ್’ ಮೊದಲಾದ ಹೆಸರುಗಳುಳ್ಳ ಅಧ್ಯಾಯಗಳು ಈ ನಗರದ ಉಕ್ಕಿನ ಸ್ವಭಾವವನ್ನು ವಿಶ್ಲೇಷಿಸುತ್ತವೆ. ಅಮೆರಿಕದಗ್ರಾಮೀಣ ಪ್ರದೇಶಗಳಿಂದ ಗುಳೆಹೊರಟ ಸಾವಿರಾರು ಮಂದಿ, ಅವಕಾಶಗಳ ನಾಡಿಗಾಗಿಯೂರೋಪಿನ ಹಳೆಯ ನಗರಗಳನ್ನು ಬಿಟ್ಟುಓಡಿಬಂದ ಲಕ್ಷಾಂತರ ಮಂದಿ ಈ ನಗರದ ಬೀದಿಗಳಲ್ಲಿ, ಹಡಗುಕಟ್ಟೆಯ ಬದಿಯಲ್ಲಿ, ಪುಟ್ಟ ಮನೆಗಳಲ್ಲಿ ಬೀಡುಬಿಟ್ಟವರು. ಕಾದಂಬರಿಯಲ್ಲಿ ಚಿತ್ರಗಳೋಪಾದಿಯಲ್ಲಿ ಕಾಣಿಸಿಕೊಳ್ಳುವ ಈ ಜನರುಜನಸಮುದಾಯದ ಪ್ರಾತಿನಿಧಿಕ ಮಾದರಿಗಳಷ್ಟೇ ಆಗಿರುವುದರಿಂದ ನಿರ್ದಿಷ್ಟರೂಪ, ಚಹರೆ ಇಲ್ಲದವರು.
1929ರ ಹೊತ್ತಿಗೆ ನ್ಯೂಯಾಕರ್ಿನಲ್ಲಿ 103 ಮಜಲೆಗಳ ಎಂಪೈರ್ ಸ್ಟೇಟ್ ಬಿಲ್ಡಿಂಗಿನ ನಿರ್ಮಾಣ ಪ್ರಾರಂಭಗೊಂಡಿತು. ಆಮೇಲೆ ವಿಶ್ವಸಂಸ್ಥೆಯ ಕಟ್ಟಡ, ಲೀವರ್ ಹೌಸ್, ಇನ್ಲ್ಯಾಂಡ್ ಸ್ಟೀಲ್ ಬಿಲ್ಡಿಂಗ್, ಜಾನ್ ಹಾನ್ಕಾಕ್ಟವರ್, ವರ್ಲ್ಡ್ ಟ್ರೇಡ್ ಸೆಂಟರ್ ಮೊದಲಾದ ಬೃಹತ್ ಗಗನಚುಂಬಿಗಳು ಅಮೆರಿಕದಆಕಾಶವನ್ನು ಬಗೆಯತೊಡಗಿದವು. ಈ ಗಗನಚುಂಬಿಗಳಿಂದ ದೊಡ್ಡ ನಗರಗಳ ಪ್ರಮಾಣ, ಅವುಗಳ ವಸತಿ ಸಮುಚ್ಚಯಗಳು, ಸಾಲುಮರಗಳ ರಾಜಮಾರ್ಗಗಳು ಬಹುಬೇಗ ಬದಲಾಗತೊಡಗಿದವು.
ಮೊದಮೊದಲು ತಮ್ಮ ಮೋಹಕತೆಯಿಂದ ನೋಡುಗರನ್ನು ಪರವಶಗೊಳಿಸುತ್ತಿದ್ದ ಗಗನಚುಂಬಿಗಳು ಕ್ರಮೇಣ ಅವರ ಪರಿಪ್ರೇಕ್ಷ್ಯವನ್ನು ಪಲ್ಲಟಗೊಳಿಸಿದ್ದಲ್ಲದೆ ಜಗತ್ತನ್ನುಹೊಸ ಬೆಳಕಿನಲ್ಲಿ ನೋಡುವಂತೆ ಅವರಿಗೆ ಸವಾಲು ಹಾಕಿದ್ದುಂಟು. ಅವು ನೆಲದಿಂದಕಟ್ಟಡವನ್ನುನೋಡಿದ ಮೇಲೆ 10ನೆಯ, 20ನೆಯ ಮಜಲಿನಿಂದ ನೋಡುವಂತೆ ಪ್ರೇರೇಪಿಸಿದವು.ಗಗನಚುಂಬಿಗಳ ಎತ್ತರಜನರು ತಮಗೇನು ಗೊತ್ತಿದೆಯೆಂದು ಬಗೆದಿದ್ದರೋ ಅದನ್ನುಪ್ರಶ್ನಿಸತೊಡಗಿತು.ಮೇಲಿರುವವನಿಗೆ ನೆಲದಲ್ಲಿರುವ ಮನುಷ್ಯ ಶ್ರೀಮಂತನೋ ಬಡವನೋ ಸುಂದರಾಂಗನೋ ಕುರೂಪಿಯೋ ತಿಳಿಯದಾಯಿತು.
ಅಮೆರಿಕನ್ ಸಾಹಿತ್ಯದಲ್ಲಿ 1920ರ ದಶಕದ ಕೆಲವು ಕತೆ, ಕಾದಂಬರಿಗಳಲ್ಲಿ ನಗರತಮ್ಮನ್ನು ಹೊರಗಟ್ಟುತ್ತಿದೆಯೆಂದೂ ಗಗನಚುಂಬಿ ಕಟ್ಟಡಗಳು ತಮ್ಮನ್ನು ಇರುವೆಗಳ ಮಟ್ಟಕ್ಕೆ ಇಳಿಸಿಬಿಟ್ಟಿವೆಯೆಂದೂ ಹಳಹಳಿಸುವ ಮಧ್ಯಮ ವರ್ಗದ ಶ್ರೀಮಂತ ಬಿಳಿಯರ ಕೆಲವು ಪಾತ್ರಗಳುಂಟು. ಜಾರ್ಜ್ ಅಲನ್ ಇಂಗ್ಲೆಂಡ್ ಎಂಬುವನು ಬರೆದಿರುವ ‘ದಿ ಲಾಸ್ಟ್ ನ್ಯೂಯಾರ್ಕರ್ಸ್’ ಎಂಬ ವೈಜ್ಞಾನಿಕಕತೆಯಲ್ಲಿಜನಾಂಗ ಕಲಹವೊಂದಿದ್ದು ಬಿಳಿಯ ದಂಪತಿಗಳಿಬ್ಬರು ಗಗನಚುಂಬಿಯೊಂದರ ಟೆರೇಸಿನ ಮೇಲೆ ನಿದ್ರಿಸುತ್ತಾರೆ. ಒಂದು ಸಾವಿರ ವರ್ಷಗಳ ನಂತರ ಅವರು ಎಚ್ಚರಗೊಂಡಾಗ ಕಪ್ಪು ಜನರು ಜಗತ್ತನ್ನು ವಶಪಡಿಸಿಕೊಂಡು ಬಿಟ್ಟಿರುತ್ತಾರೆ. ಹೆನ್ರಿಜೇಮ್ಸ್ ಬರೆದ ‘ಜಾಲಿ ಕಾರ್ನರ್’ ಎಂಬ ಕತೆಯಲ್ಲಿ ಅಮೆರಿಕಕ್ಕೆ ವಲಸೆ ಬಂದವನೊಬ್ಬ ಗಗನಚುಂಬಿ ಕಟ್ಟಡಗಳಲ್ಲಿ ಹಣತೊಡಗಿಸುತ್ತಿದ್ದರೂ ತನ್ನ ಹಳೆಗಾಲದ ಸಾಮಾನ್ಯ ಗೃಹ ಇಲ್ಲದಾಯಿತಲ್ಲಎಂದು ಹಳಹಳಿಸುವುದಲ್ಲದೆ ತಾನೇ ಒಂದು ದೆವ್ವವಾಗಿ ಬಿಟ್ಟಂತೆ ಕನಸು ಕಾಣುತ್ತಾನೆ.
2005ರಷ್ಟು ಈಚೆಗೆ ಜೊನಾಥನ್ ಸ್ಯಾಫ್ರನ್ ಫೋಯರ್ ಬರೆದ ‘ಎಕ್ಸ್ಟ್ರೀಮ್ಲಿ ಲೌಡ್ ಅಂಡ್ ಇನ್ಕ್ರೆಡಿಬ್ಲಿಕ್ಲೋಸ್’ ಎಂಬ ಕಾದಂಬರಿಯಲ್ಲಿ ಒಂಬತ್ತು ವರ್ಷದ ಬಾಲಕ ಆಸ್ಕರನದು ನಾಯಕ ಪಾತ್ರ. ಅವನ ತಂದೆ ಭಯೋತ್ಪಾದಕರು ಧ್ವಂಸಗೊಳಿಸಿದ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಪ್ರಾಣ ಕಳೆದುಕೊಂಡವನು.ಆಸ್ಕರನಲ್ಲಿತನ್ನತಂದೆಗೆ ಸಂಬಂಧಿಸಿದ ಒಂದು ಬೀಗದ ಕೈ ಇದ್ದು, ಅವನು ಆ ಬೀಗದ ಕೈ ತೆರೆಯಬಲ್ಲ ಬೀಗವನ್ನು ಹುಡುಕುತ್ತಿದ್ದಾನೆ. ಕಾದಂಬರಿಯಕೊನೆಯಲ್ಲಿ ಅವನು ಎಂಥ ಕನಸು ಕಾಣುತ್ತಾನೆ, ನೋಡಿ: ಗಗನಚುಂಬಿಗಳು ತಮಗೆ ಬೇಕಾದಾಗ ಪುನರ್ಜೋಡಣೆಗೊಳ್ಳುವ ಹಾಗೆ, ತಮ್ಮ ಮಧ್ಯೆ ವಿಮಾನಗಳು ತೂರಿಕೊಂಡು ಹೋಗಬಲ್ಲ ದೊಡ್ಡರಂಧ್ರಗಳಾಗುವ ಹಾಗೆ ಚಲಿಸಬಲ್ಲ ಬಿಡಿಭಾಗಗಳಿಂದಲೇ ನಿಮರ್ಾಣಗೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.
ಕೊನೆಗೊಂದು ಜೋಕು: ಗಗನಚುಂಬಿಯ ತುದಿಯಲ್ಲೊಂದು ಬಾರ್. ಆ ಬಾರಿನ ಬಾಲ್ಕನಿಯಲ್ಲಿ ಇಬ್ಬರು ಕುಳಿತಿದ್ದರು. ಒಬ್ಬ ಈ ಬಿಲ್ಡಿಂಗಿನ ಹೊರಗೆ ಗಾಳಿ ಕೆಳಗಿಂದ ಮೇಲಕ್ಕೆ ಎಷ್ಟು ಜೋರಾಗಿ ಬೀಸುತ್ತೆ ಗೊತ್ತಾ? ನೀನೇನಾದರೂ ಇಲ್ಲಿಂದ ಧುಮುಕಿದರೆ ಗಾಳಿ ನಿನ್ನನ್ನ ಹಿಡಿದುಕೊಂಡು ಮತ್ತೆ ಈ ಬಾಲ್ಕನೀಗೇ ತಂದುಹಾಕುತ್ತೆ ಎಂದ.
ಇದೇನು ನಂಬುವಂಥ ಮಾತೆ? ಎಂದಇನ್ನೊಬ್ಬ.
ಆಗ ಮೊದಲನೆಯವನು ಬಾಲ್ಕನಿಯಿಂದ ಕೆಳಗೆ ಧುಮುಕಿದ; ಕೆಳಕ್ಕೆ ಬೀಳುತ್ತಾ ಬೀಳುತ್ತಾ ಹೋದವನು ಇದ್ದಕ್ಕಿದ್ದಂತೆ ಮೇಲು ಮೇಲಕ್ಕೆ ತೇಲುತ್ತಾ ತೇಲುತ್ತಾ ಕೊನೆಗೆ ಬಾಲ್ಕನಿಗೇ ಬಂದಿಳಿದು, ಈಗಲಾದರೂ ನಂಬ್ತೀಯೋ ಇಲ್ಲವೊ?ಎಂದು ಕೇಳಿದ.
ಅದಕ್ಕೆ ಎರಡನೆಯವನು ಆಗಲಿ, ನೋಡೋಣ ಎಂದವನೇ ಬಾಲ್ಕನಿಯಿಂದ ಹೊರಗೆ ಧುಮುಕಿ ಕೆಳಗೆ ಬೀಳುತ್ತಾ ಬೀಳುತ್ತಾ ಬೀಳುತ್ತಾ ಕಡೆಗೆ ನೆಲಕ್ಕೆ ಅಪ್ಪಳಿಸಿ ಸತ್ತ.
ಆಮೇಲೆ ಮೊದಲನೆಯವನು ಇನ್ನೊಂದು ಡ್ರಿಂಕ್ತರುವಂತೆ ಮಾಣಿಗೆ ಹೇಳಿದ. ಮಾಣಿ ಅವನು ಹೇಳಿದ್ದನ್ನು ತಂದಿಡುತ್ತಾ, ಇದೇನುಹುಡುಗಾಟ ಸೂಪರ್ಮ್ಯಾನ್ ಎಂದ ಆಕ್ಷೇಪಿಸುವ ಧಾಟಿಯಲ್ಲಿ.
 

‍ಲೇಖಕರು G

19 June, 2015

1 Comment

  1. Palahalli Vishwanath

    ಲೇಖನ ಇಷ್ಟವಾಯಿತು . ಐನ್ ಸ್ಟೈನ್ ೧೯೦೭ರಲ್ಲಿ ತಮಗೆ ಒ೦ದು ಬಹಳ happy thought ಬ೦ತು ಅ೦ತ ಹೇಳಿದ್ದರು. ಅದು – ‘ ಕೆಳಗೆ ಬೀಳುತ್ತಿರುವ ಮನುಷ್ಯನಿಗೆ ಅವನ ತೂಕ ತಿಳಿಯುವುದಿಲ್ಲ “. ಇದು
    ಮು೦ದೆ ಅವರ ಸಾರ್ವತ್ರಿಕ ಸಾಪೆಕ್ಷತಾ ಸಿದ್ಧಾ೦ತ ( ಜನರ್ಲ್ ಥಿಯರಿ ಅಫ್ ರಿಲೆಟಿವಿಟಿ)ಕ್ಕೆ ಸಹಾಯವಾಯಿತು. ಇದನ್ನು ಅಮೆರಿಕದ ಪತ್ರಿಕೆಯೊ೦ದು ‘ ಮೇಲಿನಿ೦ದ ಕೆಳಕ್ಕೆ ಬೀಳುತ್ತಿದ್ದ ಪೈ೦ಟರ್ ಒಬ್ಬ ಐನ್ ಸ್ಟೈನರಿಗೆ ಈ ಮಾಹಿತಿಯನ್ನು ಕೊಟ್ತನು ‘ ಎ೦ದು ಪ್ರಕಟಿಸಿತ್ತು !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading