ನೆರುದಾ ಎನ್ನುವ ಕನಸು ಮತ್ತು ಕವಿತೆ..

ನೆರುದಾ ಎನ್ನುವ ಚಿಲಿಯ ಕನಸು ಮತ್ತು ಕವಿತೆ

‘If nothing saves us from death, may love at least save us from life’
‘I loved her
And sometimes she loved me too’

– Pablo Neruda

ಲ್ಯಾಟಿನ್ ಅಮೇರಿಕಾ ಕವಿಗಳ ಪ್ರೇಮ, ಕಾಮ, ನೋವು, ನಿರಾಸೆ, ದುಗುಡ ಎಲ್ಲಕ್ಕೂ ಸಾವಿನ ಹೊಸ್ತಿಲಿನಲ್ಲಿ ಇರುವ ತೀವ್ರತೆ ಇರುತ್ತದೆ.  ಸರ್ವಾಧಿಕಾರಿಗಳು ಕ್ರೌರ್ಯದ ಹಾದಿ ಹಿಡಿದಾಗೆಲ್ಲಾ ಅಲ್ಲಿ ಕಾವ್ಯ ಪ್ರತಿಭಟನೆಯ ಕತ್ತಿ ಹಿಡಿದಿದೆ. ಹಾಗಾಗಿಯೇ ಅವರ ಬರಹಗಳು ನಮ್ಮನ್ನು ಆಳದಲ್ಲಿ ಗಾಯಮಾಡಿದರೂ ಮನಸ್ಸು ಮತ್ತೆಮತ್ತೆ ಆ ಕಡೆಗೇ ಹೊರಳುತ್ತದೆ.  ಪಾಬ್ಲಾ ನೆರೂದಾಚಿಲಿ ದೇಶದ ಕನಸು, ಆ ದೇಶದ ಹೆಮ್ಮೆ.  ಗೇಬ್ರಿಯಲ್ ಮಾರ್ ಕೆಸ್ ನೆರೂದಾನನ್ನು ಇಪ್ಪತ್ತನೆಯ ಶತಮಾನದ ಅತ್ಯುತ್ತಮ ಕವಿ ಎಂದು ಕರೆಯುತ್ತಾನೆ. 1971 ರಲ್ಲಿ ನೆರೂದಾನಿಗೆ ಸಾಹಿತ್ಯಕ್ಕಾಗಿ ನೋಬೆಲ್ ಪಾರಿತೋಷಕ ಸಿಗುತ್ತದೆ.
2016 ರಲ್ಲಿ ಈತನ ಬಗ್ಗೆ ಒಂದು ಜೀವನಚಿತ್ರ ಬಂದು, ಈ ಸಲದ ಬೆಂಗಳೂರು ಚಲನ ಚಿತ್ರೋತ್ಸವದಲ್ಲಿ ಅದು ಪ್ರದರ್ಶನಗೊಂಡಿತು.

ಈತನ ವ್ಯಕ್ತಿತ್ವವನ್ನು ಕಪ್ಪು ಬಿಳುಪಿನಲ್ಲಿ ಹಿಡಿದಿಡಲಾಗುವುದಿಲ್ಲ.  ನೆರೂದ ಪ್ರಖಾಂಡ ಬುದ್ದಿಜೀವಿ, ತೀವ್ರ ಸಂವೇದನೆಗಳ ಕವಿ, ಬರಹಗಾರ, ದುಡಿವ ಜನರ ನೋವುಗಳಿಗೆ ಮಾತು ಕೊಟ್ಟವ, ಪ್ರೀತಿ ಕೊಟ್ಟವ, ಕುಡುಕ, ಹೆಣ್ಣುಬಾಕ, ಎಲ್ಲರೂ ಅವಹೇಳನ ಮಾಡುವ transgender ಒಬ್ಬನನ್ನು ಅಪ್ಪಟ ಮನುಷ್ಯನನ್ನಾಗಿ ಕಂಡು ಅವನಲ್ಲಿ ಕಣ್ಣೀರುಕ್ಕಿಸಬಲ್ಲವ, ನೀನು ಈ ಕ್ಷಣ ಸಾಯಿ, ಇನ್ನು ಇಪ್ಪತ್ತು ವರ್ಷಗಳು ನಿನ್ನ ಮೇಲೆ ಕವಿತೆ ಬರೆಯುತ್ತೇನೆ ಎಂದು ಹೆಂಡತಿಗೆ ಚುಚ್ಚಬಲ್ಲವ, ’ಅವನು ನನ್ನ ಬಿಟ್ಟಿದ್ದಾನೆ, ಆದರೂ ಅವನು ದುಷ್ಟನಲ್ಲ, ಒಳ್ಳೆ ಮನುಷ್ಯ’ ಎಂದು ಮೊದಲನೆ ಹೆಂಡತಿ ಹೇಳುವಂತೆ ಅವಳಲ್ಲಿ ತನ್ನ ಪ್ರೀತಿಯ ನೆನಪುಗಳನ್ನು ಬಿಟ್ಟವ..

ಕತ್ತಲ ಕ್ಷಣಗಳ ಇಳಿಸಂಜೆ ರಾತ್ರಿಗಳನ್ನು ಅಲ್ಲಿನ ಮಧುಶಾಲೆ, ನಾಟ್ಯಶಾಲೆಗಳ ಆಮೋದ ಪ್ರಮೋದಗಳಲ್ಲಿ ಕಳೆಯುವವ……. ಒಂದೇ ಮಾತಿನಲ್ಲಿ ಹೇಳಬಹುದಾದರೆ ಕಲಾವಿದನಿಗೆ ಇರಬಹುದಾದ ಎಲ್ಲಾ ಎಕ್ಸೆಂಟ್ರಿಸಿಟಿಗಳನ್ನೂ ವ್ಯಕ್ತಿತ್ವದಲ್ಲಿ ಉಳಿಸಿಕೊಂಡವ.  ಇಂತಹ ನೆರೂದನ ಬಗ್ಗೆ ಚಿತ್ರ ಮಾಡುವುದೆಂದರೆ ಸುಲಭವಲ್ಲ.  ಅದನ್ನು ಸುಲಭವಾಗಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡದೆ ಅವನ ಎಲ್ಲಾ ಸಂಕೀರ್ಣತೆಗಳನ್ನೂ ನಿರ್ದೇಶಕ Larrainಹಾಗೇ ನಮ್ಮೆದುರಲ್ಲಿ ಇಡುತ್ತಾರೆ ಎನ್ನುವುದರಲ್ಲಿ ಅವರ ಗೆಲುವಿದೆ.

ಚಿತ್ರ ಶುರುವಾಗುವಾಗುವುದು ಎರಡನೆಯ ಮಹಾಯುದ್ಧದ ನಂತರದ ಕಾಲಘಟ್ಟದಲ್ಲಿ.  ಕಮ್ಯುನಿಸ್ಟ್ ಪಕ್ಷದ ಬೆಂಬಲಿಗ ನೆರೂದ ಸಂಗಾತಿಗಳೊಂದಿಗೆ ಸೇರಿ ಪ್ರಚಾರ ಮಾಡಿ ಗೆಲ್ಲಿಸಿದ ಒಡನಾಡಿ ಈಗ ಅಧ್ಯಕ್ಷನಾಗಿದ್ದಾನೆ.  ಸ್ವಲ್ಪ ಸಮಯದಲ್ಲೇ ಆತ ತನ್ನ ಅಂಗಿ ಬದಲಿಸಿದ್ದಾನೆ.  ಆ ಅಧ್ಯಕ್ಷನಿಗೀಗ ಅಮೇರಿಕಾದ ಅಧ್ಯಕ್ಷ ಅಧ್ಯಕ್ಷನಾಗಿದ್ದಾನೆ. ಅವನಿಗೀಗ ತನ್ನ ಸಂಗಾತಿಗಳಾಗಿದ್ದ ಕಮ್ಯುನಿಸ್ಟರೆಲ್ಲಾ ರಾಷ್ಟ್ರದ್ರೋಹಿಗಳಾಗಿ ಕಾಣುತ್ತಿದ್ದಾರೆ.  ಇಡೀ ಚಿತ್ರದಲ್ಲಿ ಅಸಂಗತತೆಯನ್ನು ನಿರ್ದೇಶಕ ಅದ್ಭುತವಾಗಿ ಬಳಸಿಕೊಳ್ಳುತ್ತಾನೆ.

ಮೊದಲಿಗೆ ಪರದೆಯ ಮೇಲೆ ಚಿತ್ರದ ಹೆಸರು ಇತ್ಯಾದಿ ವಿವರಗಳನ್ನು ತೋರಿಸುವಾಗ ಹಿನ್ನಲೆ ಸಂಗೀತವಿಲ್ಲ, ಹಿನ್ನಲೆಯಲ್ಲಿ ಕಪ್ಪುಬಣ್ಣ.  ಮೊದಲ ದೃಶ್ಯದಲ್ಲೇ ಸೆನೆಟರ್ ಆಗಿದ್ದ ನೆರೂದ ಸೆನೆಟ್ ಗೆ ಬರುತ್ತಾನೆ.  ಸೆನೆಟ್ ನ ಗಡಿಬಿಡಿ. ಅದು ಸೃಷ್ಟಿಸುವ ವಿರೋಧಾಭಾಸದ ಪರಿಣಾಮ ತೀವ್ರವಾಗಿರುತ್ತದೆ.  ಅಲ್ಲದೆ ಮುಂದೆ ಸಹ ಚಿತ್ರ ಆಗಾಗ ಅಸಂಗತದ ಹಾದಿ ತುಳಿಯುತ್ತದೆ, ಕೆಲವು ಸಲ ಕ್ಯಾಮೆರಾದ ಫಿಲಂ ನ ನಸುಹಳದಿ ಬಣ್ಣ ಹಳೆಯ ಕಥೆಯನ್ನು ಹೇಳುತ್ತಿದೆ ಅನ್ನಿಸುತ್ತದೆ.ಕವಿತೆಯ ಕ್ಷಣಭಂಗುರತೆಯನ್ನು ಚಿತ್ರ ಕಟ್ ಶಾಟ್ ಗಳ ಮೂಲಕ, ನೆರಳು ಬೆಳಕಿನ ಮೂಲಕ, ವೇಗದಲ್ಲಿ ಚಲಿಸುವ ಫ್ರೇಂ ಗಳ ಮೂಲಕ ಕಟ್ಟಿಕೊಡುತ್ತದೆ.

’ನೆರೂದಾನ ಕವಿತೆಗಳನ್ನು ಕನ್ನಡಿಯ ಹಾಗೆ ಉಪಯೋಗಿಸಿಕೊಂಡು ನಾನು ಈ ಚಿತ್ರ ಕಟ್ಟಿದೆ’ ಎಂದು ನಿರ್ದೇಶಕ ಹೇಳಿಕೊಂಡಿದ್ದರೂ ಸಹ ಇಲ್ಲಿ ಕವಿಯ ಕವನಗಳಿಗಿಂತಾ ಹೆಚ್ಚಾಗಿ ಆತನ ರಾಜಕೀಯ ಒಲವು ಮತ್ತು ಹೋರಾಟಗಳಿಗೆ ಹೆಚ್ಚಿನ ಒತ್ತು ಸಿಕ್ಕಿದೆ.  ಮೊದಲ ದೃಶ್ಯದಿಂದ ಹಿಡಿದು ನೆರೂದ ಆಂಡೀಸ್ ಪರ್ವತಗಳನ್ನು ದಾಟಿ ಅರ್ಜೆಂಟೈನಾಕ್ಕೆ ಹೋಗುವವರೆಗೂ ಚಿತ್ರ ನಡೆಯುತ್ತದೆ.  ಆ ಒಂದು ವರ್ಷದಲ್ಲಿ ಅವನೇ ಹೇಳುವಹಾಗೆ ’ರಾಜಕುಮಾರ’ನಂತಿದ್ದ ನೆರೂದಾ ತಲೆಮರೆಸಿಕೊಂಡಿರಬೇಕಾದಾಗ ಬದಲಾಗುವ ರೀತಿಗೆ ಒಂದು ಚಲನೆ ಇದೆ, ಆ ಪ್ರಯಾಣದಲ್ಲಿ ನೆರೂದಾ ಹೆಚ್ಚುಹೆಚ್ಚು ಮಾನವೀಯಗೊಳ್ಳುತ್ತಾ ಹೋಗುತ್ತಾನೆ.

ಚಿತ್ರದಲ್ಲಿ ನೆರೂದಾನ ಎರಡನೆಯ ಹೆಂಡತಿ ಡೇಲಿಯಾ ಪಾತ್ರ ಸಹ ಅದ್ಭುತವಾಗಿ ಮೂಡಿಬಂದಿದೆ.  ಆಕೆ ಸ್ವತಃ ಕಲಾವಿದೆ. ನೆರೂದಾನ ಮನಸ್ಥಿತಿ ಎಷ್ಟು ಸೂಕ್ಷ್ಮ ಎಂದರೆ, ಸಣ್ಣ ಬದಲಾವಣೆ ಸಹ ಅವನ ಮೂಡ್ ಅನ್ನು ಹಾಳು ಮಾಡಬಹುದು. ಎಲ್ಲರಿಗೂ ಮೊದಲು ಆಕೆಗೆ ಅವನ ಮನಸ್ಸಿನ ಏರುಪೇರು ಅರ್ಥವಾಗುತ್ತದೆ, ಅವನೊಂದಿಗೆ ಮಾತನಾಡುವಾಗ ಅವಳು ಸದಾ ಅವನ ಪ್ರತಿಕ್ರಿಯೆ ಏನಿರಬಹುದೆಂದು ಚಿಂತಿಸುತ್ತಲೇ ಇರುತ್ತಾಳೆ, ಅವನನ್ನು ಗಮನಿಸುತ್ತಲೇ ಇರುತ್ತಾಳೆ.  ಅವನಂತಹ ಕಲಾವಿದನ ಜೊತೆಗಿರುವಾಗಲೂ ಆಕೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುತ್ತಾಳೆ.  ಆಕೆ ಅವನಿಗೆ ನಿಜಾರ್ಥದಲ್ಲಿ ಸಂಗಾತಿ.

ಮೊದಲ ದೃಶ್ಯದಲ್ಲಿ ಸೆನೆಟ್ ನ ವಿಶಾಲವಾದ ರೆಸ್ಟ್ ರೂಮಿನಲ್ಲಿ ವಾದವಿವಾದಗಳಾಗುತ್ತವೆ.  ಈಗ ರಾಜಕೀಯ ಬದಲಾಗಿದೆ, ಶಕ್ತಿ ಕೇಂದ್ರ ಬದಲಾಗಿದೆ, ಅಲ್ಲಿ ಸೂಕ್ಷ್ಮವಾಗಿ ನೆರೂದಾನನ್ನು ಅವಮಾನಿಸಲಾಗುತ್ತಿದೆ, ಈ ದೃಶ್ಯದಲ್ಲಿಯೇ ನೆರೂದನ ವ್ಯಕ್ತಿತ್ವ ಮತ್ತು ಚಿಲಿಯಲ್ಲಿನ ಸಂಘರ್ಷ ಎರಡೂ ನಮ್ಮ ಅನುಭವಕ್ಕೆ ಬರುತ್ತದೆ. ಚಿಲಿಯಲ್ಲಿ ಈಗ ಟ್ರೇಡ್ ಯೂನಿಯನ್ ನಾಯಕರನ್ನು ಬಂಧಿಸಲಾಗುತ್ತಿದೆ, ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರನ್ನು ಬೇಟೆಯಾಡಲಾಗುತ್ತಿದೆ, ಇದನ್ನು ನೆರುದಾ ನೇರವಾಗಿ ಸೆನೆಟ್ ನಲ್ಲೆ ಹೇಳುತ್ತಾನೆ.

ನೆರೂದಾನ ಪಾತ್ರ ವಹಿಸಿರುವ Luis Gnecco ಮತ್ತು ನೆರೂದಾನನ್ನು ಪ್ರತ್ಯೇಕಿಸಿ ನೋಡುವುದೇ ಅಸಾಧ್ಯ ಎನ್ನುವ ಹಾಗೆ ಆತ ಆ ಪಾತ್ರವನ್ನು ತನ್ನದಾಗಿಸಿಕೊಂಡಿದ್ದಾನೆ.  ನೆರೂದ ನಡುವಯಸ್ಸಿನವ, ಧಡೂತಿ ಎನ್ನಬಹುದಾದ ಶರೀರ, ಬೊಕ್ಕತಲೆ, ಆದರೂ ಜನ ಅವನೆಂದರೆ ಯಾಕೆ ಅಷ್ಟು ಹುಚ್ಚರಾಗುತ್ತಿದ್ದರು?

’ಆಗ ಚುನಾವಣೆಯ ಸಮಯ, ಸುಮಾರು ಹತ್ತುಸಾವಿರ ಜನ ಸೇರಿದ್ದರು, ನೆರೂದ ತನ್ನ ಜೇಬಿನಿಂದ ಕವನಗಳ ಹಾಳೆ ತೆಗೆದ, ಒಂದೇ ಕ್ಷಣದಲ್ಲಿ ಅಲ್ಲಿ ಮೌನ…..ಆ ಕವಿ ಅಪಾಯಕಾರಿ, ಶಬ್ಧಗಳಿಗೆ ಅರ್ಥ ಕೊಡುತ್ತಾನೆ’ ಅವನ ಬಗ್ಗೆ ಪೋಲೀಸರಿಗೆ ಹೇಳುತ್ತಾ ಚಿಲಿಯ ಅಧ್ಯಕ್ಷ ಆಡುವ ಮಾತಿದು.  ಕವನ ಓದುವಾಗ, ಕಣ್ಣುಗಳಲ್ಲಿ ದಿಟ್ಟಿ ನೆಟ್ಟಾಗ ಕವಿಯ ಮಾಂತ್ರಿಕತೆಯ ಮೋಡಿಗೆ ಮನಸ್ಸು ಸೋಲದಿರಲು ಸಾಧ್ಯವೇ ಇಲ್ಲ.

ಚಿತ್ರದಲ್ಲಿ ಯಾವಾಗೆಲ್ಲಾ ಅಧಿಕಾರ ತನ್ನ ಹಸ್ತವನ್ನು ಚಾಚಿ ಭಯವನ್ನು ಸೃಷ್ಟಿಸುತ್ತದೆಯೋ ಆಗೆಲ್ಲಾ ನಿರ್ದೇಶಕ ಕಾವಲು ನಾಯಿಯನ್ನು ತರುತ್ತಾನೆ.  ಮೊದಲು ಬೀದಿನಾಯಿಯಂತೆ ಬೊಗಳುವ ಅದು ನಂತರದ ದೃಶ್ಯಗಳಲ್ಲಿ ಬೇಟೆನಾಯಿಯಾಗಿ ಬದಲಾಗುತ್ತಾ ಹೋಗುತ್ತದೆ.  ಸುತ್ತಮುತ್ತಲೂ ಭಯಹುಟ್ಟಿಸುವ ರಾಜಕೀಯ ವಾತಾವರಣದಲ್ಲಿ ಪಾರ್ಟಿ ನೆರೂದನಿಗೆ ಭೂಗತನಾಗಲು ಸೂಚನೆ ಕೊಡುತ್ತದೆ.  ಓಡುವುದೋ, ಶರಣಾಗತನಾಗುವುದೋ, ದೇಶಬಿಟ್ಟು ಹೋಗುವುದೋ, ಭೂಗತನಾಗುವುದೋ, ರೆಕ್ಕೆಗಳಿಂದ ಆಗಸವನ್ನು ಅಳೆಯುತ್ತಿದ್ದ ಕವಿಗೆ ಎಷ್ಟೊಂದು ಅಡ್ಡಿಗಳು. ಆದರೆ ಹಾಸಿಗೆಯ ಕೆಳಗಿನ ತಿಗಣೆಯಂತೆ ಅಡಗಿಕೊಳ್ಳುವುದು ಅವನಿಗೆ ಸಲ್ಲ, ಅವರು ಹುಡುಕಲಿ, ನಾನು ತಪ್ಪಿಸಿಕೊಳ್ಳುತ್ತೇನೆ, ಅದೊಂದು ರೋಮಾಂಚಕಾರಿ ಓಟವಾಗಿರಬೇಕು ಎಂದು ಆತ ಬಯಸುತ್ತಾನೆ.

ಅಲ್ಲಿಂದ ಶುರುವಾಗುತ್ತದೆ ಇಲಿ, ಬೆಕ್ಕಿನಾಟ.  ಆದರೆ ಇಲ್ಲಿ ಇಲಿ ಯಾರು, ಬೆಕ್ಕು ಯಾರು?  ಈ ಪ್ರಶ್ನೆ ಹುಟ್ಟುವುದಕ್ಕೆ ಒಂದು ಕಾರಣ ಇದೆ.  ಅವನನ್ನು ಬೇಟೆಯಾಡಲೆಂದೇ ನಿಯೋಜಿಸಲ್ಪಟ್ಟ ಪೋಲೀಸ್ ಅಧಿಕಾರಿ ಆಸ್ಕರ್.  ಖಾಲಿಪುಟದಿಂದ ಪಾತ್ರವೊಂದು ಕಪ್ಪುಶಾಯಿಯನ್ನು ಹುಡುಕುತ್ತಾ ಬಂದಂತೆ ಅವನು ಬರುತ್ತಾನೆ,  ಅವನೊಬ್ಬ ವೇಶ್ಯೆಯ ಮಗ.  ಆದರೆ ಅವನ ಮನಸ್ಸಿನಲ್ಲಿ ಅವನು ಚಿಲಿಯ ಪೋಲೀಸ್ ಇಲಾಖಾ ಪಿತಾಮಹ Pelochonneau ನ ಉತ್ತರಾಧಿಕಾರಿ.  ಆತನ ಹೆಸರನ್ನೇ ತನ್ನ ಹೆಸರಿಗೆ ಜೋಡಿಸಿಕೊಂಡಿರುತ್ತಾನೆ.  ಅವನೂ ನೆರೂದಾನ ಕವನಗಳ ಮೋಡಿಗೆ ಸಿಕ್ಕಿಹಾಕಿಕೊಂಡವನೇ.  ಆ ಪೋಲೀಸ್ ಕಮಿಶನರ್ ಹೇಳುವ ಕಥೆಯಲ್ಲಿ ನೆರೂದಾ ಪಾತ್ರವೋ ಅಥವಾ ನೆರೂದನ ಕಥೆಯಲ್ಲಿ ಆ ಅಧಿಕಾರಿ ಒಂದು ಪಾತ್ರವೋ?  ಏಕೆಂದರೆ ಹಿನ್ನಲೆಯಲ್ಲಿ ನಿರೂಪಕನ ಮಾತು ಒಮ್ಮೆ ಕವಿಯದು, ಒಮ್ಮೆ ಈ ಪೋಲೀಸ್ ಅಧಿಕಾರಿಯದ್ದು.
ನೆರೂದಾ ಹೆಂಡತಿಯೊಡನೆ ಮನೆ ಬಿಡುತ್ತಾನೆ.  ಆ ಪೋಲೀಸ್ ಅಧಿಕಾರಿ ತನ್ನ ಬೆನ್ನ ಹಿಂದೆ ಇದ್ದಾನೆ ಎಂದು ನೆರೂದಾನಿಗೆ ಗೊತ್ತು.  ಪತ್ತೇದಾರಿ ಪುಸ್ತಕಗಳನ್ನು ಇಷ್ಟಪಟ್ಟು ಓದುವ ನೆರೂದ ತಾನು ತಂಗುವ ಎಡೆಯಿಂದ ಇನ್ನೊಂದು ಜಾಗಕ್ಕೆ ವಾಸ್ತವ್ಯ ಬದಲಾಯಿಸಿದಾಗೆಲ್ಲಾ ಆಸ್ಕರ್ ಗಾಗಿ ಒಂದೊಂದು ಪತ್ತೆದಾರಿ ಪುಸ್ತಕ ಬಿಟ್ಟು ಹೋಗುತ್ತಾನೆ.  ಆ ಪುಸ್ತಕಗಳ ಮೂಲಕ ನೆರೂದ ಅವನಲ್ಲಿ ಬೆಳೆಯುತ್ತಾ ಹೋಗುತ್ತಾನೆ.

ಅಧಿಕಾರ ಶಾಹಿ ಒಬ್ಬ ಚಳುವಳಿಗಾರನನ್ನು, ಸಾಮಾಜಿಕ ಹೋರಾಟಗಾರನನ್ನು ನಿಯಂತ್ರಿಸಬೇಕೆಂದರೆ ಏನೇನು ಮಾಡಬಹುದೋ, ಚಿಲಿಯ ಸರ್ಕಾರ ಅದೆಲ್ಲವನ್ನೂ ಮಾದುತ್ತಿದೆ. ೩೦೦ ಪೋಲೀಸರು ಪಾಬ್ಲೋನ ಹುಡುಕಾಟದಲ್ಲಿದ್ದಾರೆ.  ಊರಿನ ಗೋಡೆಗಳ ತುಂಬಾ ’ನೆರುಡಾ ದೇಶದ್ರೋಹಿ’ ಎಂದು ಬರೆಯಲಾಗುತ್ತಿದೆ.  ಆದರೆ ಕವಿಯ ಕವನವನ್ನು ತಡೆಯುವುದು ಹೇಗೆ? ‘You can cut all the flowers but you cannot keep spring from coming’ ಇದು ನೆರೂದನದೇ ಕವನದ ಒಂದು ಸಾಲು.  ಅವನ ಕವನಗಳು ಜನರನ್ನು ತಲುಪುತ್ತಲೇ ಇದೆ, ಕಾರ್ಮಿಕರು ಅದನ್ನು ಬಾಯಿಪಾಠ ಮಾಡಿಕೊಂಡು ಹೋದಲ್ಲಿ ಬಂದಲ್ಲಿ ಹಾಡುತ್ತಲೇ ಇದ್ದಾರೆ.

ಅದನ್ನು ಸರ್ಕಾರ ಸಹಿಸೀತು ಹೇಗೆ?  ಪಾಬ್ಲೋ ನೆರೂದಾನ ಮೊದಲ ಹೆಂಡತಿಯನ್ನು ಹುಡುಕಿ ತೆಗೆಯಲಾಗುತ್ತದೆ.  ಅವಳನ್ನು ಕರೆಸಿ, ಆಕೆಗೆ ಆ ಪೋಲೀಸ್ ಅಧಿಕಾರಿಯಿಂದ ತರಬೇತಿ ಕೊಡಿಸಲಾಗುತ್ತದೆ.  ನೆರೂದಾ ಎಂತಹ ದುಷ್ಟ ಎಂದು ಅವಳಿಂದ ಹೇಳಿಸಿಯೇ ಸಿದ್ಧ ಎಂದು ಅವಳನ್ನು ಲೈವ್ ರೇಡಿಯೊ ಮುಂದೆ ಕೂರಿಸುತ್ತಾರೆ.  ಎಲ್ಲೆಲ್ಲೂ ಆ ಬಗ್ಗೆ ಜಾಹೀರು ಮಾಡಲಾಗಿದೆ.  ಪಾಬ್ಲೋ ಎರಡನೆಯ ಹೆಂಡತಿಯ ಜೊತೆಯಲ್ಲಿ ಕುಳಿತು ರೇಡಿಯೋ ಕೇಳುತ್ತಿರುತ್ತಾನೆ. ಆ ಪೋಲೀಸ್ ಅವಳ ಬೆನ್ನಿಗೆ ನಿಂತು, ಹೆಗಲ ಮೇಲೆ ಕೈ ಇಟ್ಟಿರುತ್ತಾನೆ.  ಆಗ ಆ ಹೆಂಡತಿ ಮಾತನಾಡುತ್ತಾಳೆ,’ಪಾಬ್ಲೋ ನನಗೆ ಸ್ವಲ್ಪ ಹಣ ಕೊಡಲಿ ಎನ್ನುವುದು ನನ್ನ ಮನಸ್ಸಿನಲ್ಲಿದೆ ಎನ್ನುವುದೇನೋ ನಿಜ, ಆದರೆ ಆತ ದೇಶದ್ರೋಹಿ ಅಲ್ಲ’  ರೇಡಿಯೋ ಮೈಕಿನ ಹತ್ತಿರ ಹೋಗಿ ಆಕೆ ಮತ್ತೊಮ್ಮೆ ಹೇಳುತ್ತಾಳೆ, ’ನಾನು ಅವನನ್ನು ಪ್ರೀತಿಸುತ್ತೇನೆ, ಅವನು ದ್ರೋಹಿ ಅಲ್ಲ, ಅವನೊಬ್ಬ ದೊಡ್ಡ ಮನುಷ್ಯ’.

ಆ ಪೋಲೀಸ್ ಅಧಿಕಾರಿ ಈಗ ನಿದ್ದೆಗೆಟ್ಟಿದ್ದಾನೆ.  ನೆರೂದಾನನ್ನು ಹುಡುಕಿಕೊಂಡು ಅಲೆಯುತ್ತಿದ್ದಾನೆ.  ನೆರೂದನಾದರೂ ಒಂದು ದಿನ ಒಂದು ನಾಟ್ಯಶಾಲೆಯಲ್ಲಿ, ಇನ್ನೊಂದು ದಿನ ವೇಶ್ಯಾಗೃಹದಲ್ಲಿ, ಮತ್ತೊಮ್ಮೆ ಒಂದು ಪಾರ್ಕಿನಲ್ಲಿ, ಮಗದೊಮ್ಮೆ ರಸ್ತೆ ಬದಿಯ ಸ್ಟುಡಿಯೋದಲ್ಲಿ….ಆಸ್ಕರ್ ನ ಆತ್ಮಕ್ಕೆ ನೆರೂದಾನ ಇರುವಿಕೆ ಗೊತ್ತಾಗುತ್ತಿರುತ್ತದೆ, ಆದರೆ ಆತ ಕೈಗೆ ಸಿಕ್ಕುವುದಿಲ್ಲ.
ಚಿತ್ರದಲ್ಲಿ ಎರಡು ದೃಶ್ಯಗಳು ತಮ್ಮ ನೇರವಂತಿಕೆಯಿಂದ ನನಗೆ ಇಷ್ಟವಾದವು.  ನೆರೂದಾ ಒಂದು ಭೋಜನ ಕೂಟದಲ್ಲಿದ್ದಾನೆ, ಸುತ್ತಲೂ ಸ್ನೇಹಿತರು, ಅಭಿಮಾನಿಗಳು.  ಸಿಲ್ವಿಯಾ ಎನ್ನುವ ಕಾರ್ಯಕರ್ತೆ ಅಲ್ಲಿಗೆ ಬರುತ್ತಾಳೆ.  ಒಂದೊಮ್ಮೆ ಕ್ರಾಂತಿ ಆಗಿಯೇ ಹೋಗಿ, ಸಮಸಮಾಜ ಸ್ಥಾಪನೆ ಆದರೆ ನಾವೆಲ್ಲರೂ ನಿನ್ನಂತೆ ಶ್ರೀಮಂತ ಜೀವನವನ್ನು ಪಡೆಯುವೆವೋ ಅಥವಾ ನೀನು ನಮ್ಮಂತೆ ಸಾಮಾನ್ಯನಾಗುವೆಯೋ ಎಂದು ಆತನನ್ನು ಕೇಳಿಬಿಡುತ್ತಾಳೆ.

ಸಾವಿರಾರು ಜನರನ್ನು ಮನೆಗಳಿಂದ, ಕಾರ್ಖಾನೆಗಳಿಂದ ಎಳೆದುಕೊಂಡು ಹೋಗಿ ಸೆರೆಮನೆಗೆ ಹಾಕುತ್ತಿದ್ದಾರೆ.  ಆದರೆ ನೆರೂದಾನನ್ನು ಕಾಯಲು ಅವನ ಸುತ್ತ ಒಂದು ಪಡೆಯೇ ಇದೆ.  ನೆರೂದಾ ಅವಳ ಪ್ರಶ್ನೆಗೆ ದೃಷ್ಟಿ ಕೆಳಗಿಳಿಸುತ್ತಾನೆ.  ಆ ಮಟ್ಟಿಗಿನ ಪ್ರಾಮಾಣಿಕತೆ ಅವನಿಗಿದೆ.

ಅಂತಹದೇ ಇನ್ನೊಂದು ಸಂದರ್ಭ, ಒಬ್ಬ ಕಾರ್ಯಕರ್ತ ನೆರೂದಾನ ಜೊತೆಗೇ ಇದ್ದು ಅವನನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಬದಲಾಯಿಸುತ್ತಿರುತ್ತಾನೆ.  ಅವನ ಮುಂದೆ ಒಮ್ಮೆ ನೆರೂದಾ, ನಾನು ಸದ್ದಿಲ್ಲದೆ ದೇಶಬಿಟ್ಟು ಹೋಗಲಾರೆ.  ನನ್ನ ನಿರ್ಗಮನ ಅವರ ಮುಖಕ್ಕೆ ಕೊಟ್ಟ ಏಟಿನಂತಿರಬೇಕು ಎನ್ನುತ್ತಾನೆ.  ಆಗ ಆ ಕಾರ್ಯಕರ್ತ, ’ನಿಮಗೆ ಇದೊಂದು ಅಹಂ ನ ಪ್ರಯಾಣ ಆಗಿರಬಹುದು, ಆದರೆ ನಿಮ್ಮ ಅಹಂ ತಣಿಸಲು ಎಷ್ಟು ಕಾರ್ಯಕರ್ತರು ಅಪಾಯಕ್ಕೆ ಸಿಲುಕಬಹುದು ಎನ್ನುವುದನ್ನು ನೀವು ಗಮನಿಸಬೇಕು’ ಎನ್ನುತ್ತಾನೆ.  ನೆರೂದಾನ ದಿಟ್ಟಿ ಮತ್ತೆ ತಗ್ಗುತ್ತದೆ, ಅವನು ಮತ್ತಷ್ಟು ಮಾನವೀಯವಾಗುತ್ತಾನೆ.

ಆಂಡಿಸ್ ಪರ್ವತಗಳನ್ನು ದಾಟಿ ನೆರೂದಾ ಚಿಲಿಯನ್ನು ಬಿಡಬೇಕು ಎಂದು ನಿರ್ಧಾರವಾಗುತ್ತದೆ.  ಹೆಂದತಿಯನ್ನು ಬಿಟ್ಟು ಅವನು ಹೊರಡುತ್ತಾನೆ.  ಪೋಲೀಸ್ ಅಧಿಕಾರಿ ಆಕೆಯ ಬಳಿ ಬಂದು ’ಎಲ್ಲಿ ನೆರೂದಾ’ ಎಂದು ಕೇಳುತ್ತಾನೆ.  ಆಕೆ ’ಅವನೊಬ್ಬ ಕವಿ.  ಅವನ ಮಟ್ಟಿಗೆ ನೀನು ಒಂದು ಪಾತ್ರ, ನಾನೂ ಅಷ್ಟೆ.  ಅವನು ಪಾತ್ರಗಳನ್ನು ಸೃಷ್ಟಿಸುತ್ತಾನೆ, ನಡೆಸುತ್ತಾನೆ, ಬೇಕೆಂದರೆ ಪುಟಗಳಿಂದ ಜಾರಿಸಿಬಿಡುತ್ತಾನೆ’ ಎಂದು ವಿಷಾದದಿಂದ ಹೇಳುತ್ತಾಳೆ.  ಆದರೆ ಅದೇ ಸಮಯದಲ್ಲಿ ಬಿಕ್ಷೆ ಕೇಳಿದ ಹುಡುಗಿಯೊಬ್ಬಳಿಗೆ ಕೊಡಲು ಕೈಯಲ್ಲಿ ಕಾಸಿಲ್ಲವೆಂದು ಅವಳನ್ನು ಅತ್ಯಂತ ಮಮತೆಯಿಂದ ಆಲಂಗಿಸಿಕೊಳ್ಳುವ ನೆರೂದ, ಅವಳಿಗೆ ತನ್ನ ಕೋಟ್ ಬಿಚ್ಚಿ ಕೊಡುತ್ತಾನೆ.  ಅವನನ್ನು ಪ್ರೀತಿಸಬೇಕೋ, ಪ್ರಶ್ನಿಸಬೇಕೋ ನಮಗೆ ಸ್ಪಷ್ಟವಾಗುವುದೇ ಇಲ್ಲ.

ಆಂಡೀಸ್ ಪರ್ವತ.  ನೆರೂದಾನನ್ನು ಹುಡುಕಿ ಅಲ್ಲಿಗೆ ಆಸ್ಕರ್ ಬರುತ್ತಾನೆ.  ಈಗ ಅವನ ಒಳಗೆ ನೆರೂದಾ ಎಷ್ಟು ಆಳವಾಗಿ ಬೇರು ಬಿಟ್ಟಿದ್ದಾನೆಂದರೆ, ತಾನು ಪೋಲೀಸನ ಉತ್ತರಾಧಿಕಾರಿ ಎಂದುಕೊಂಡಿದ್ದ ಆಸ್ಕರ್ ಈಗ ತಾನು ನೆರೂದಾನ ಉತ್ತರಾಧಿಕಾರಿ ಎಂದುಕೊಳ್ಳುತ್ತಿದ್ದಾನೆ.  ಇನ್ನೆನು ಕೈಗೆ ಸಿಕ್ಕ ಎನ್ನುವಷ್ಟರಲ್ಲಿ ಆತ ಮಂಜಿನಲ್ಲಿ ಬಿದ್ದು ಸಾಯುತ್ತಾನೆ.  ನೆರೂದಾ ತನ್ನ ಪಾತ್ರವನ್ನು ಹುಡುಕಿಕೊಂಡು ಹಿಂದಿರುಗಿ ಬರುತ್ತಾನೆ, ಅವನಿಗೆ ಒಂದು ಘನತೆಯ ಸಂಸ್ಕಾರವಾದರೂ ಆಗಬೇಕು ಎಂದು ಕುದುರೆಯ ಬೆನ್ನಿನ ಮೇಲೆ ಅವನ ಶರೀರವನ್ನು ಹಾಕಿ, ಊರಿಗೆ ಕಳಿಸಿಕೊಡುತ್ತಾನೆ.

ಮುಂದಿನ ದೃಶ್ಯದಲ್ಲಿ ನೆರೂದಾ ಅರ್ಜೆಂಟೈನಾದಲ್ಲಿದ್ದಾನೆ.  ತನ್ನ ಪರಾರಿಯ ಕತೆಯನ್ನು ಹೇಳುತ್ತಿದ್ದಾನೆ.  ಮಧ್ಯಮಧ್ಯದ ಶಾಟ್ ಗಳಲ್ಲಿ ಆಸ್ಕರ್ ನನ್ನು ಶವಪೆಟ್ಟಿಗೆಯಲ್ಲಿಟ್ಟು ಮಣ್ಣುಮುಚ್ಚಿದ ಚಿತ್ರಗಳು ಬರುತ್ತವೆ.  ಕಡೆಗೆ ಅಲ್ಲಿದ್ದ ಒಬ್ಬಾಕೆ ಆ ಪೋಲೀಸ್ ಅಧಿಕಾರಿಯ ಹೆಸರೇನು ಎಂದು ಕೇಳುತ್ತಾಳೆ.  ಒಂದು ಕ್ಷಣ ನೆರೂದ ನಿಧಾನಿಸುತ್ತಾನೆ, ಆ ಪೋಲೀಸ್ ಅಧಿಕಾರಿಯ ಆತ್ಮ ಸಹ ಅವನ ಉತ್ತರಕ್ಕಾಗಿ ಕಾಯುತ್ತದೆ, Oscar Pelochonneau ಎಂದು ನೆರೂದ ನಿಧಾನಕ್ಕೆ ಹೇಳುತ್ತಾನೆ.  ಅದೇ ಘಳಿಗೆಯಲ್ಲಿ ಆ ಶವಪೆಟ್ಟಿಗೆಯ ಹಲಗೆ ಸರಿದು ಆಸ್ಕರ್ ಕಣ್ಣುಬಿಡುತ್ತಾನೆ.  ಕವಿ ತನ್ನ ಅಕ್ಷರಗಳಿಂದ ಹೇಗೆ ವ್ಯಕ್ತಿಗಳಿಗೆ ಜೀವ ತುಂಬಬಲ್ಲ ಎಂದು ಈ ದೃಶ್ಯ ಕವನದಂತೆ ಹೇಳುತ್ತದೆ!

ಒಂದು ಜೀವನವನ್ನು ಚಲನಚಿತ್ರವಾಗಿಸುವಾಗ ವಾಸ್ತವ ಎಷ್ಟು, ಕಲ್ಪನೆ ಎಷ್ಟು, ನಾಟಕೀಯತೆ ಎಷ್ಟು ಗೊತ್ತಿಲ್ಲ, ಆದರೆ ಈ ಚಿತ್ರ ನೋಡುಗರ ಗಮನವನ್ನು ಅತ್ತಿತ್ತ ಅಲುಗದಂತೆ ಹಿಡಿದುಕೊಂಡಿರುತ್ತದೆ.  ಚಿತ್ರಕಥೆ, ನಿರ್ದೇಶನ, ಅಭಿನಯ, ಛಾಯಾಗ್ರಹಣ ಎಲ್ಲವೂ ಒಂದಕ್ಕೊಂದು ಕೂಡಿಕೊಂಡಿದೆ.  ನೆರೂದಾನ ಮತ್ತೊಂದು ಸಾಲಿನೊಂದಿಗೆ ಈ ಬರಹವನ್ನು ಮುಗಿಸುತ್ತೇನೆ,
’But from each crime are born bullets that will one day seek out in you where the heart lie’ – ಬದುಕ ಮನ್ನಿಸು ಪ್ರಭುವೇ…
***

 

ಸುಮಾರು ಇಪ್ಪತ್ತು ವಾರಗಳಿಂದ ಸಿನಿಮಾಗಳ ಬಗ್ಗೆ ಈ ‘ಮಾಯಾ ಬಜಾರ್’ ನಲ್ಲಿ ಬರೆಯುತ್ತಿದ್ದೇನೆ.  ಈ ಅಂಕಣ ನನಗೆ ಕೊಟ್ಟ ಸಂತಸ ಅತ್ಯಂತ ದೊಡ್ಡದು.  ಏಕೆಂದರೆ ಸಿನಿಮಾ ನನ್ನ ಜೀವನದ ಅವಿಭಾಜ್ಯ ಅಂಗ.  ಕ್ಲಾಸಿಕ್, ಹಾಸ್ಯ, ಮಸಾಲೆ ಎಲ್ಲವೂ ನನಗೆ ಇಷ್ಟವೇ. ನೋಡಬೇಕಾದ ಚಿತ್ರಗಳು ಇನ್ನೂ ಎಷ್ಟೋ ಇವೆ, ಬರೆಯಬೇಕಾದ ಚಿತ್ರಗಳು ಸಹ.  ಆದರೂ ಸಧ್ಯಕ್ಕೆ ಒಂದು ಸಣ್ಣ ವಿರಾಮ.  ಕೆಲವು ದಿನಗಳ ನಂತರ ಮತ್ತೆ ಈ ಮಾಯಾಬಜಾರಿನ ರಸ್ತೆಗಳಲ್ಲಿ ಮತ್ತೆ ಸಿಗೋಣ, ಅಲ್ಲಿಯವರೆಗೂ ಇದು ಅಲ್ಪವಿರಾಮ..

‍ಲೇಖಕರು avadhi

August 5, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

15 ಪ್ರತಿಕ್ರಿಯೆಗಳು

  1. Shruthi

    ಮನ ಮುಟ್ಟುವ ವಿಮರ್ಶೆ.. ಆ ಸಿನಿಮಾದಷ್ಟೆ ಆಕರ್ಷಕ

    ಪ್ರತಿಕ್ರಿಯೆ
  2. Gladson Jathanna

    ಒಂದು ಸಿನೆಮಾವನ್ನು ಇಷ್ಟೊಂದು ಮನೋಜ್ಞವಾಗಿ ವಿಶ್ಲೇಷಿಸಬಹುದೇ! ಸಿನೆಮಾನ್ನು ಇನ್ನೂ ನೋಡಬೇಕಷ್ಟೆ. ಆದರೆ ತಮ್ಮ ಬರಹ ಓದುತ್ತಾ ಪಾಬ್ಲೋ Larrain ನನಗೆ ತಿಯೋ ಅಂಗೆಲೋಪೋಲಸ್ ನನ್ನು ಮತ್ತು ಅಂದ್ರೆಯ್ Tarkavsky ಯನ್ನು ನೆನಪಿಸಿದ. ತುಂಬು ಧನ್ಯವಾದಗಳು!

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ದೊಡ್ಡ ಮಾತು! ನಿಮ್ಮ ವಿಶ್ವಾಸದ ಮಾತುಗಳು ಬರವಣಿಗೆಯನ್ನು ಸಾರ್ಥಕಗೊಳಿಸುತ್ತದೆ. Thank You.

      ಪ್ರತಿಕ್ರಿಯೆ
  3. Sasashiv soratur

    ಪ್ರತಿವಾರ ತಪ್ಪದೇ ಓದ್ತಿದ್ದೆ. ನಿಮ್ಮ ಬರಹ ಗೈರು ಇನ್ನು ಕಾಡುತ್ತದೆ.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಓದಿ ಖುಷಿ ಆಯ್ತು 🙂 ಮತ್ತೆ ಬೇಗ ಬರೆಯಲು ಪ್ರಾರಂಭಿಸುತ್ತೇನೆ ಸರ್…

      ಪ್ರತಿಕ್ರಿಯೆ
  4. ಭಾರತಿ ಬಿ ವಿ

    ಎಂಥ ಗಾಢವಾದ ಬರಹ ಇದು!
    ಸಿನೆಮಾದ ಪ್ರತಿ ಫ್ರೇಮ್ ಕಣ್ಣೆದುರು ಮತ್ತೆ ಹಾದುಹೋಯಿತು …
    ಅಂದಹಾಗೆ, ಶನಿವಾರಗಳು ಇನ್ನು ಮುಂದೆ ತುಸು ಮಂಕಾಗುತ್ತವೆ ….
    ಮತ್ತೆ ಬೇಗ ಎದುರಾಗೋಣ ಮಾಯಾಬಜ಼ಾರಿನ ಬೀದಿಗಳಲ್ಲಿ …

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಮತ್ತೆ ಮತ್ತೆ ಭೇಟಿಯಾಗುತ್ತಿರೋಣ 🙂 ಥ್ಯಾಂಕ್ಸ್!

      ಪ್ರತಿಕ್ರಿಯೆ
    • ಸಂಧ್ಯಾರಾಣಿ

      Read some scattered poems of Neruda, now I want to read more and more of Neruda…

      ಪ್ರತಿಕ್ರಿಯೆ
  5. chi na hally kirana

    nanna netchina Kavi Neruda na bagge mattastu tilidukonde hagu Preeti enda odekonde, lekhakarige Dhanyavadagalu.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನಿಮ್ಮ ಪ್ರೀತಿಗೆ ಧನ್ಯವಾದಗಳು, ಈಗ ನಾನೂ ನೆರೂದಾನ ಅಭಿಮಾನಿ!

      ಪ್ರತಿಕ್ರಿಯೆ
  6. Beeru Devaramani

    ನೆರುಡಾ ಒಬ್ಬ ಮಹಾನ್ ಬರಹಗಾರ, ಕವಿ ಯುವಕರಿಗೆ ಒಂದು ರೀತಿಯ ಉಸಿರು, ಪ್ರೀತಿ ಮತ್ತು ಮಾದರಿ. ನಿಮ್ಮ ಈ ಲೇಖನ ಓದಿ ತುಂಬಾ ಖುಷಿ ಆಯ್ತು. ನೆರುಡಾ ನ ಬಗ್ಗೆ ಇನ್ನು ಹೆಚ್ಚು ಹೆಚ್ಚು ತಿಳಿಯಬೇಕೆಂಬ ಹಂಬಲ ಮೂಡಿದೆ. ಧನ್ಯವಾದಗಳು ಸಂಧ್ಯಾ ಮೇಡಂ.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      Thank You. ನಾನೂ ಸಹ ಈಗ ನೆರೂದಾನ ಕವನಗಳ ನಡುವೆಯೇ ಇದ್ದೇನೆ 🙂

      ಪ್ರತಿಕ್ರಿಯೆ
  7. marakini narayana moorthy

    ವೈ ಯನ್ ಕೆ ಹೇಳಿದ್ದು.
    ಪಾಬ್ಲೊ ನೆರೂಡ
    ಸಾಹಿತ್ಯ ಲೋಕದ ಗರುಡ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: