ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆರಳೆ ಮರ ಕೊಟ್ಟ ಕಲ್ಲಿನೇಟು…

ಸಂಗಮೇಶ ಎ ಹಂಚಿಗಿ

ಮೊನ್ನೆ ತಾನೇ ಸ್ಟಡೀ ಕ್ಲಾಸುಗಳು ಮುಗಿದು ಪರೀಕ್ಷೆಗೆಂದು ಕೆಲವು ದಿನಗಳ ರಜೆ. ಕ್ಯಾಂಪಸ್ನಲ್ಲಿನ ಎಲ್ಲ ವಿಧ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಎಕ್ಸಾಂ ಇನ್ನು ಮುಂದಿರುವ ಕಾರಣ ಒಂದೆರಡು ದಿನ ಊರಲ್ಲಿಯೇ ಅಭ್ಯಾಸ ಮಾಡಿದರಾಯ್ತು ಅಂತ ಹಾಸ್ಟೇಲ್, ಪಿ.ಜಿ, ರೂಮುಗಳಿಂದ ಗಂಟು ಮೂಟೆ ಕಟ್ಟಿದ್ದಾಗಿದೆ. ರಜೆ ದಿನಗಳನ್ನು ಕುಟುಂಬದ ಜೊತೆ ಬಾಲ್ಯದ ಗೆಳೆಯರ ಜೊತೆ ಕಳೆಯುವ ಈ ಸಮಯ ತುಂಬಾ ಸಂತಸ ತರುವುದರಲ್ಲಿ ಎರಡು ಮಾತಿಲ್ಲ. ನಮ್ಮದು ಹಳ್ಳಿಯ ಬೆಳವಲದ ನಾಡು. ರಜೆ ದಿನಗಳನ್ನು ಹಳ್ಳಿಗಳಲ್ಲಿ ಕಳೆಯುವುದೆಂದರೆ ತುಂಬಾ ರೋಮಾಂಚನವಾಗಿರುತ್ತದೆ. ಆ ಪ್ರಕೃತಿಯ ಸೊಬಗು, ಹಸಿರು ಬೆಟ್ಟ, ಗುಡ್ಡ, ಹಣ್ಣು ಹಂಪಲಿನ ತೋಟಗಳು, ಕೆರೆ, ಹಳ್ಳ-ಕೊಳ್ಳಗಳು, ಝರಿಗಳು ಹೀಗೆ ಹಲವಾರು ಪ್ರಕೃತಿಯ ಬಿಂಬಕಗಳು ಮನ ಸೂರೆಗೊಳಿಸುತ್ತವೆ.
ಸಧ್ಯ ಬೇಸಿಗೆ ಮುಗಿದು ಮುಂಗಾರು ಪ್ರಾರಂಭವಾಗುವ ಮಳೆಗಾಲದ ಸಮಯವಿದು. ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ಹದಗೊಳಿಸುವ ಕಾರ್ಯವಂತೂ ಬಲು ಜೋರಾಗಿಯೇ ನಡೆಯುತ್ತಿದೆ. ನಾವು ರೈತನ ಮಕ್ಕಳಲ್ವಾ ಆಗಾಗ ಹೊಲಗಳ ಕಡೆ ಹೋಗುತ್ತಿರುತ್ತೆವೆ. ಕಳೆದ ದಿನಗಳ ಹಿಂದೆ ಸುರಿದ ದಾರಾಕಾರ ಮಳೆಗೆ ಭೂತಾಯಿ ತಂಪುಂಡು ತಣಿದಿದ್ದಾಳೆ. ಸುಡು ಬಿಸಿಲಿನಿಂದ ತತ್ತರಿಸಿ ಕಾಯ್ದು ಕೆಂಡವಾದ ಭೂಮಿಗೆ ಸುರಿದ ಮಳೆಯಿಂದ ಮರುಜನ್ಮ ಸಿಕ್ಕಂತಾಗಿದೆ. ಮನೆಯಲ್ಲಿಯೇ ಕುಳಿತು ಬೇಜಾರಾಗಿತ್ತು. ಹೊಲದ ಕಡೆ ಹೋಗಿ ಬಹಳ ದಿನವಾದ್ದರಿಂದ ಹೋಗಿ ಬಂದರಾಯ್ತು ಅಂತ ನಿರ್ಧರಿಸಿ ಹೊರಟೆ. ಅಂತೂ ಹೊಲ ತಲುಪಿದೆ ಕಪ್ಪು ಮಣ್ಣಿನ ಎರಿ ಹೊಲ ನಮ್ಮದು. ತುಂಬಾ ಒಳ್ಳೆಯದು ಅದೆಷ್ಟೂ ವರ್ಷಗಳಿಂದ ನಮಗೆ ಅನ್ನ ಕೊಟ್ಟ ಭೂತಾಯಿಗೆ ಹಣೆ ಹಚ್ಚಿ ನಮಸ್ಕರಿಸಿದೆ. ನನ್ನ ಇಲ್ಲಿಯ ತನಕ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟು ಸಹಾಯ ಮಾಡಿದ ಈ ತಾಯಿಗೆ ನಾನೆಂದೂ ಚಿರಋಣಿ.

ಹೊಲ ನೋಡಿ ಸಂತಸವಾಯಿತು. ಗಿಡದ ನೆರಳಿಗೆ ಕುಳಿತು ವಿಶ್ರಮಿಸಿದೆ. ‘ಬ್ಯಾಸಗೀ ದಿವಸಕ್ಕ ಬೆವಿನ ಮರ ತಂಪ’ ಎಂಬ ಜಾನಪದ ಹಾಡು ಎಷ್ಟು ಸತ್ಯ ಅಲ್ವಾ? ಮದ್ಯಾಹ್ನದ ಹೊತ್ತಲ್ಲಿ ಬೆವಿನ ಮರದಡಿ ಕುಳಿತು ಬೇಸರ ಕಳೆದುಕೊಂಡ್ರ ಮನಸ್ಸು ಆಕಾಶದಲ್ಲಿ ತೆಲಾಡಿದಂಗಾಗಿತ್ತು. ದೇಹದ ಆಸರಕಿ, ಬ್ಯಾಸರಕಿ ಕಳೆದೋಗಿ ಅರಾಮ ಅನಿಸುತ್ತೆ. ಮರದ ಕೆಳಗೆ ಕುಳಿತು ಸುತ್ತಲು ಅವಲೋಕಿಸಿದಾಗ ನೆದರಿಗೆ ಬಿದ್ದದ್ದು ಪಕ್ಕದ ಹೊಲದವರ ಹಳ್ಳದ ದಂಡೆ ಮೇಲಿರುವ ನೆರಳೆ ಮರಗಳು. ಸುಡು ಬಿಸಿಲಲ್ಲಿ ಕಪ್ಪು ತೀಳಿ ನೀಲಿಯ ಜಂಬೂ ನೆರಳೆ ಹಣ್ಣುಗಳನ್ನು ಬಾಯಲ್ಲಿಟ್ಟು ಚಪ್ಪರಿಸಿದರಾಯ್ತು ಅಂತ ಮರದ ಕಡೆ ನಡದೆ. ಕರಿ ಮುತ್ತುಗಳನ್ನು ಪೊಣಿಸಿ ಹೊತ್ತ ಸರಮಾಲೆಯಂತೆ ನೆರಳೆ ಹಣ್ಣುಗಳನ್ನು ತುಂಬಿಕೊಂಡು ಮರ ಕಂಗೋಳಿಸುತ್ತಿತ್ತು. ನೋಡಿ ತುಂಬಾ ಖುಷಿಯಾಯ್ತು. ಹಣ್ಣು ಕಿತ್ತು ತಿಂದೆ. ಆಹಾ..! ಏನೂ ಸ್ವಾದಿಷ್ಟಕರ. ಎಂಥ ರುಚಿ ಬಾಯಲ್ಲಿ ನೀರು ಬರದೆ ಇದ್ದೀತೆ. ಹಣ್ಣು ತಿನ್ನುತ್ತಾ ತಲೆ ಯೋಚನೆಗೆ ಬಿದ್ದಾಗ ನೆನಪಾಗಿದ್ದೆ ಈ ಸನ್ನಿವೇಶ.
ಅದು ಪಿಯುಸಿ ಓದುತ್ತಿದ್ದ ಸಮಯ. ಆಗ ತಾನೇ ಕಾಲೇಜಿನ ಮೆಟ್ಟಿಲೇರಿದ್ದೆ. ಚಿಗುರು ಮೀಸೆಯ ಪಡ್ಡೆ ಹುಡುಗರ ತಂಡ ನಮ್ಮದು. ನಮ್ಮೂರಲ್ಲಿಯೇ ಕಾಲೇಜು ಇದ್ದದ್ದರಿಂದ ಪಟ್ಟಣಕ್ಕೆ ಹೋಗುವ ಅನಿವಾರ್ಯತೆ ಬರಲಿಲ್ಲ. ಪಿಯುಸಿ ಅಂದರೆ ಪಕ್ಕಾ ಊಡಾಳ ಕಂಪನಿ ಅಂತಾರಲ್ಲ ಅದು ನಿಜ ಇರಬೇಕು. ಆ ವಯಸ್ಸಿಗೆ ಇಂಗು ತಿಂದ ಮಂಗನಂತೆ ಕುಣಿದಾಡುವುದು ಬಹಳ. ಊರು ಕೇರಿ, ಹೊಲ ಗದ್ದೆ, ಜಾತ್ರೆ ದಿಬ್ಬಣ ಅಂತ ಎಲ್ಲೆಂದರಲ್ಲಿ ಗೆಳೆಯರ ಜೊತೆ ಹರಟೆ ಹೊಡೆಯುವುದೇ ಜಾಸ್ತಿ. ನಾನು ಈಶ್ವರ, ಮಲ್ಲಿಕಾಜರ್ುನ, ಈರಣ್ಣ ಮತ್ತು ಪ್ರಶಾಂತ ಇದು ನಮ್ಮದೊಂದು ಗುಂಪು. ಭಾನುವಾರ ಶನಿವಾರ ಬಂದರೆ ನಮಗೆ ಕಡಿವಾಣವೇ ಇತರ್ಿರಲಿಲ್ಲ. ‘ಮಾಸದ ಹೋರಿಗೆ ಮೂಗುದಾರ ಹಾಕದಿದ್ದರೆ ಮುಸುಗುಡುವ ಹಾಗೇ’ ನಮ್ಮ ತರ್ಲೇ ತುಂಟಾಟಗಳಿಗೆ ಕಮ್ಮಿ ಇರುತ್ತಿರಲಿಲ್ಲ. ಇಷ್ಟೆಲ್ಲ ಮಾಡಿದರೂ ಸ್ಕೂಲಲ್ಲಿ ನಮ್ಮಂಥ ಹುಡುಗರೆ ಇರುತ್ತಿರಲಿಲ್ಲ. ಏಕೆಂದರೆ, ಓದೋದು ಬರಿಯೋದು, ಆಟದಲ್ಲಿ, ಪರೀಕ್ಷೆಯಲ್ಲಿ ಒಂದು ಕೈ ನಮ್ಮದೇ ಹೆಚ್ಚು ಅಂದ್ರೆ ತಪ್ಪೆನಿಲ್ಲ.
ಅಂದು ಭಾನುವಾರ ನಮ್ಮ ಹೊಲದ ಪಕ್ಕದಲ್ಲಿರೋ ನೆರಳೆ ಮರಕ್ಕೆ ಬೇಟಿ ಕೊಡುವ ಪ್ಲ್ಯಾನ್ ಆಗಿತ್ತು. ಅಂದು ಕೊಂಡಂತೆ ಪಂಚ ಪಾಂಡವರಂತೆ ಯುದ್ದಕ್ಕೆ ಸಿದ್ದವಾಗಿ ಹೊರಟ್ವಿ. ಆ ವರ್ಷ ತುಂಬ ಮಳೆಯಾದ್ದರಿಂದ ನೆರಳೆ ಮರದಲ್ಲಿ ಹಣ್ಣು ಬಹಳ ಬಿಟ್ಟತ್ತು. ಮದುವಣಗಿತ್ತಿಯಂತೆ ಮೈ ತುಂಬಿ ಮರ ನೆರಳೆ ಹಣ್ಣುಗಳನ್ನು ಹೊತ್ತು ಆಕಷರ್ಿಸುತ್ತಿತ್ತು. ನೋಡಿದ ನಮಗೆಲ್ಲ ಹಬ್ಬದ ಸಂಭ್ರಮ. ಬಾಯಲ್ಲಂತೂ ನೀರು ಬರದೆ ಇದ್ದೀತೆ? ಕಿಸೆಯಲ್ಲಿದ್ದ ಪ್ಲಾಸ್ಟೀಕ್ ಚೀಲಗಳನ್ನು ಹೊರತೆಗೆದು ಮರ ಏರಲು ತಡವಾಗಲಿಲ್ಲ. ಕಾಲು ನೋವಿನಿಂದ ನನ್ನದು ಕೆಳಗೆ ಹಣ್ಣು ಆರಿಸುವ ಸರದಿ. ನಮ್ಮದೇ ರಾಜ್ಯ ಭಾರವೆಂಬಂತೆ ಯಾರ ಹಂಗಿಲ್ಲದೇ ಹಣ್ಣು ಕಿಳುವ ತುಡಿತದ್ದಲ್ಲಿದ್ದ ನಮಗೆ ಸುತ್ತ ಮುತ್ತ ಯಾರು ಕಾಣಲಿಲ್ಲ. ಒಬ್ಬರಿಗೊಬ್ಬರು ಜಿದ್ದಾ ಜಿದ್ದಿನಲ್ಲಿ ಮರವೇರಿ ಹಣ್ಣು ಕೀಳುವ ಕೆಲಸ ನಡದಿತ್ತು.
ಅದೆ ಸರ ಹೊತ್ತಿನಲ್ಲಿ ಯಾರ ಕೂಗು ಕೇಳಿಸಿರಲಿಲ್ಲ. ಆದರೆ ದೂರದಿಂದ ಕೂಗಿ ಕೂಗಿ ಕಂಗಾಲಾಗಿ ಗಿಡದ ಹತ್ತಿರ ಬಂದು ಸಿಟ್ಟಾಗಿ ಜಮದಗ್ನಿಯಂತೆ ಕೋಪದ ಕೆಂಡವನ್ನು ಹೊತ್ತು ತಂದಿದ್ದಳು ಗಿಡದ ಒಡತಿ. ಎಲ್ಲಿತ್ತೋ ಸಿಟ್ಟು, ಕೈಯಲ್ಲಿಡಿದ ಕಲ್ಲಿನಿಂದ ಬರ್ರ್… ಅಂಥ ನನ್ನತ್ತ ಬಿಸಿದಾಗ ಮೇಲಿದ್ದ ನನ್ನ ಚಿತ್ತ ಸತ್ತು ಹೇಳದೆ ಕೇಳದೆ ಅಯ್ಯೋ… ಅನ್ನುತ್ತಾ ಓಡಿದ್ದು ಶರವೇಗದಲ್ಲಿತ್ತು. ಒಂದರ ಮೇಲೋಂದರಂತೆ ಕಲ್ಲು, ಹೆಂಟೆಗಳ ಮರವೇರಿದ ಗೆಳೆಯರ ಮೇಲೆ ಬಿಳತೊಡಗಿದವು. ಅವರಿಗೆಲ್ಲ ಕಲ್ಲು ಹೆಂಟೆಗಳ ದರ್ಶನವಂತೂ ಪಕ್ಕಾ ಆಗಿತ್ತು. ಅದೇ ಸಮಯಕ್ಕೆ ಈರ್ಯಾ ತುತ್ತ ತುದಿಯಿಂದ ಕಣ್ಣು ಮುಚ್ಚಿ ಕೈ ಬಿಟ್ಟು ಜಿಗಿದಿದ್ದ. ನೆರಳೆ ಹಣ್ಣುಗಳ ರುಚಿಯ ಜೊತೆಗೆ ಕಲ್ಲಿನ ರುಚಿ ಕೂಡಾ ಸಕತ್ ಸ್ವಾದಿಷ್ಟಕರವಾಗಿತ್ತು. ಇದ್ದ ಬದ್ದ ಚಪ್ಪಲಿಗಳನ್ನು ಬುಡದಲ್ಲಿ ಬಿಟ್ಟು ದೂರ ಬಂದು ನಿಂತೆವು.
ಸರಿಯಾಗಿ ಆ ಸಮಯಕ್ಕೆ ಮಳೆ ರಾಯನ ಆರ್ಭಟ ಶುರುವಾಯಿತು. ಅವಳಿಂದ ಚಪ್ಪಲಿಗಳನ್ನು ಬಿಡಿಸಿಕೊಂಡು ಬರುವುದು ಸವಾಲಾಗಿತ್ತು. ಮಳೆಯಲ್ಲಿ ತೊಯಿಸಿಕೊಂಡು ಚಪ್ಪಲಿಗಳನ್ನು ಬಿಟ್ಟು, ನೆರಳೆ ಹಣ್ಣುಗಳನ್ನು ಕದ್ದು ತಿಂದಿರುವ ರುಚಿನೆ ಬಲು ಮಜವಾಗಿತ್ತು. ಇಷ್ಟೆಲ್ಲ ತರ್ಲೇ ತುಂಟಾಟಗಳನ್ನು ಮಾಡಿ ನಲಿದಾಡಿದ ನನ್ನ ಗೆಳೆಯರೆಲ್ಲ ಅದೇ ನೆರಳೆ ಮರದ ಕೊಂಬೆಗಳಂತೆ ಹರಿದು ಹಂಚಿ ಹೋಗಿದ್ದಾರೆ. ಒಬ್ಬ ದೇಶ ಕಾಯೋ ಸೈನಿಕನಾಗಿದ್ದಾನೆ. ಇನ್ನೊಬ್ಬ ಪಾಠ ಹೇಳೊ ಶಿಕ್ಷಕನಾಗಿದ್ದಾನೆ. ಮತ್ತೊಬ್ಬ ಅನ್ನದಾತ ರೈತನಾಗಿದ್ದಾನೆ. ಪ್ರತಿಷ್ಠಿತ ಕಂಪನಿಯಲ್ಲಿ ಇನ್ನೊಬ್ಬ ಕೆಲಸ ಮಾಡುತ್ತಿದ್ದಾನೆ. ನಾನು ಪತ್ರಿಕೋದ್ಯಮ ಅಭ್ಯಾಸ ಮಾಡುತ್ತಿದ್ದೇನೆ. ಊರ ಜಾತ್ರೆಗೂ, ಹಬ್ಬ ಹರಿದಿನಕ್ಕೂ, ಗೆಳೆಯರ ಮದುವೆಗೂ ಕೂಡಿದಾಗ ಹಿಂದಿನ ನೆನಪುಗಳನ್ನು ಮೆಲಕು ಹಾಕಿ ಗುಲ್ಲೆಂದು ನಗುತ್ತಿರುತ್ತೇವೆ.
 

‍ಲೇಖಕರು G

29 June, 2015

2 Comments

  1. Bandenawaz Myageri

    nice article

  2. sanjeevkunnur

    ತುಂಬಾ ಸೋಗಸಾದ ಲೇಖನ. ಹೀಗೆಯೇ ಮುಂದುವರೆಸು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading