ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ನೆನಪೇ ಸಂಗೀತ’ದೊಳಗೆ ಹೊಕ್ಕು ಬಂದಾಗ..

ಅನುಪಮಾ ಪ್ರಸಾದ್
ವಿದ್ಯಾಭೂಷಣರೆಂದರೆ ಆ ದಿನಗಳಲ್ಲಿ ಪರವಶವಾಗುವ ಸಮರ್ಪಣಾ ಭಾವ ತುಂಬಿ ಹರಿಯುವ ಗಾನ. ಕರಾವಳಿ ಭಾಗದ ಶಾಲೆಗಳಲ್ಲಂತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತೆಂದರೆ ಒಂದಿಬ್ಬರಾದರೂ ಅವರು ಹಾಡಿದ ದಾಸರ ಪದವನ್ನು ಹಾಡದಿರುತ್ತಿರಲಿಲ್ಲ.
ಬುದ್ದಿಗಿನ್ನೂ ಪ್ರಬುದ್ಧತೆ ಬಂದಿರದಿದ್ದರೂ ಅಂದು  ಸುಬ್ರಹ್ಮಣ್ಯ ಸ್ವಾಮಿಗಳು ಸನ್ಯಾಸ ತ್ಯಜಿಸುತ್ತಾರಂತೆ, ಮಠ ಬಿಡುತ್ತಾರಂತೆ ಎಂಬ ಸುದ್ದಿ ಕೇಳಿದಾಗ ಅವರ ಬಗ್ಗೆ ಇದ್ದ ಸದ್ಭಾವನೆ ಅಭಿಮಾನವೂ ಆಗಿ ಬದಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಮಠ-ಪೀಠಾಧಿಪತಿಗಳ ಅತಿ ರಾಡಿ ಸಂಗತಿಗಳಿಂದ ರೇಜಿಗೆ ಹುಟ್ಟಿದಾಗ ಮತ್ತೆ ಮತ್ತೆ ನೆನಪಾಗುತ್ತಿದ್ದುದು ವಿದ್ಯಾಭೂಷಣರ ಮಠ-ಪೀಠ ತ್ಯಾಗ.
‘ನೆನಪೇ ಸಂಗೀತ’ ಪುಸ್ತಕದ ಮುಖಪುಟದಲ್ಲೇ ಇದು ಜೀವನ ಕಥನ ಎಂದೇ ಸಾರಿದ್ದಾರೆ ಪ್ರಕಾಶಕರು. ಇನ್ನೊಬ್ಬರ ಕಡೆ ಬೆರಳು ತೋರಿಸದೆ ತನ್ನ ತಾ ನೋಡಿಕೊಳ್ಳುತ್ತ ಒಳಗಿದ್ದೂ ಹೊರಗೆ ನಿಂತು ಸಾಕ್ಷಿಪ್ರಜ್ಞೆಯಾಗಿ ತನ್ನ ಜೀವನ ಕಥನ ತಾನೇ ಹೇಳುವುದೆಂದರೆ ಕತ್ತಿ ಮೇಲಿನ ನಡಿಗೆ. ಸ್ವ ಜೀವನ ಕಥನ ಬರೆಯುವುದೆಂದರೆ ಮೊದಲಿಗೆ ಅದು ಬೇಡುವುದೇ ಪ್ರಖರ ಪ್ರಾಮಾಣಿಕತೆ.
ಓದುಗನನ್ನು ಕಂಪಿಸುವಂತೆ ಮಾಡುವ, ತನ್ನ ತಾನೇ ನೋಡಿಕೊಳ್ಳಲು ಅಂಜಿಕೆ ಹುಟ್ಟಿಸುವ ತೀವ್ರವಾದ ಪ್ರಾಮಾಣಿಕತೆ ಎದ್ದು ಕಾಣಿಸಿದರೆ ಅದು ಆ ಕೃತಿಯ ಸಾರ್ಥಕತೆ.
ಹೀಗೆ ಹೇಳುವಾಗ ನನಗೆ ನಾ ಓದಿದ ಕನ್ನಡದ್ದೇ ಆದ `ಕುದಿ ಎಸರು’, ಅರವಿಂದ ಚೊಕ್ಕಾಡಿಯವರು ತಮ್ಮ ತಂದೆಯ ಕುರಿತಾಗಿ ಸುರುಳಿ ಬಿಚ್ಚಿದ`ಇಲ್ಲದ ತೀರದಲ್ಲಿ’ ದುತ್ತನೆ ಕಣ್ಮುಂದೆ ಬರುತ್ತದೆ. `ನಾಳೀನ ಚಿಂತ್ಯಾಕ’ ಎಂಬ ಕನ್ನಡತಿ ಖ್ಯಾತ ನಟಿ ಶಾಂತಾ ಹುಬ್ಳೀಕರ ಹೇಳಿದ ಕಥನ  ನೆನಪಾಗುತ್ತದೆ.
ಇನ್ನೂ ಒಂದೆರಡು ಕೃತಿಗಳು ಒಂದಂಶ ಈ ಸಾಲಿನಲ್ಲಿ ನೆನಪಿಗೆ ಬರುತ್ತಿವೆ. ಕೆಲವು ಜೀವನ ಕಥಾನಕಗಳು ಅದು ಪ್ರತಿನಿಧಿಸುವ ವಿಶೇಷ ಕ್ಷೇತ್ರಕ್ಕಾಗಿ, ಅಲ್ಲಿ ತೊಡಗಿಕೊಂಡಾಗಿನ ಕೃತಿಕಾರರ ಒಳ ಅನುಭವಗಳ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕುತ್ತವೆ. ಬಿ.ಜಯಶ್ರಿಯವರ `ಕಣ್ಣಾಮುಚ್ಚೇ ಕಾಡೇ ಗೂಡೇ’ ಕೃತಿ ಅಂತಹ ನಿರೀಕ್ಷೆಯನ್ನು ಸಮರ್ಥವಾಗಿ ಪೂರ್ಣಗೊಳಿಸಿದೆ.
ವಿದ್ಯಾಭೂಷಣರ `ನೆನಪೇ ಸಂಗೀತ’ವೂ ತಾನು ಪ್ರತಿನಿಧಿಸಿದ ವಿಶೇಷ ಕ್ಷೇತ್ರಕ್ಕಾಗಿಯೇ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನಿರೀಕ್ಷೆಯಂತೆ ಈ ಕೃತಿ ಮಠ-ಪೀಠ, ಅದರೊಳಗಿನ ದಂದುಗಗಳ ಕುರಿತು ಮಾತಾಡುತ್ತದೆ. ಇಲ್ಲಿ ಖುಷಿ ಇದೆ. ಯಾತನೆಯಿದೆ. ವಿಷಾದವಿದೆ. ವಿದ್ಯಾಭೂಷಣರ ಸಂಗೀತದಂತೆಯೇ ಸಮರ್ಪಣೆ, ನಿವೇದನೆಯಿದೆ.
ವಿದ್ಯಾಭೂಷಣರ ಬಾಲ್ಯ, ಮಠ, ಅಲ್ಲಿಂದ ಪ್ರೇಮ ವಿವಾಹದವರೆಗಿನ ಬದುಕಿನ ಲೋಕದ ಅನುಭವ ಕಥನ. ಓದಿ ಪುಸ್ತಕ ಮಡಿಸಿಡುವಾಗ ತೀವ್ರವಾಗಿ  ಕಾಡಿದ್ದು ವಿದ್ಯಾಭೂಷಣರ ತಂದೆ. ಹಾಗೆಯೇ ಅಸ್ಪಷ್ಟ ಜಿಜ್ಞಾಸೆಗಳು.  ಮಠಾಧಿಪತಿಯಾದ ಮೇಲೆ ತಂದೆಯೊಂದಿಗಿನ ಅವರ ಕಠಿಣ ವರ್ತನೆಯನ್ನು ನೆನೆಸಿಕೊಂಡು ಈಗಲೂ ಅವರು ನೋಯುತ್ತಾರೆ.
ಮೇಲ್ನೋಟಕ್ಕೆ ಅದು ಮಠದ ನಿಯಮದಂತೆ ಕಂಡರೂ ಅದು ಅಷ್ಟೇ ಅಲ್ಲವೆನ್ನುವುದು ಅವರಿಗೂ ಗೊತ್ತಿದೆ. ಓದುಗರಿಗೂ ತಿಳಿಯುತ್ತದೆ. ಆದರೆ, ಯಾಕೆ ಹಾಗೆ ನಡೆದುಕಂಡೆ ಎಂಬ ಬಗ್ಗೆ ವಿಶ್ಲೇಷಿಸಿಕೊಳ್ಳಲು ಹೋಗುವುದಿಲ್ಲ.
ಕೃತಿಯ ಉದ್ದಕ್ಕೂ ಅಂತರಗಮನೆಯಾಗಿ ಹರಿಯುವ ಲಕ್ಮೀಶ ತೋಳ್ಪಾಡಿ ಎಂಬ ಗೆಳೆಯ. ಪುಸ್ತಕದಲ್ಲಿ ಲಕ್ಮೀಶ ತೋಳ್ಪಾಡಿಯವರ ಮಾತಿದೆ ಅಂದ ಮೇಲೆ ಅದನ್ನ ಓದಲು, ಓದಿದ್ದನ್ನ ಮೌನವಾಗಿ ಅನುಭವಿಸಲು ಒಂದಿಷ್ಟು ಏಕಾಂತದ ಸಮಯ ಇಡಲೇಬೇಕು. ಆ ಅನುಭೂತಿಯೇ ಬೇರೆ.
ತೋಳ್ಪಾಡಿಯವರ, “..ನಾನು ತಳೆದ ನಿಲುವಿಗೆ- ಸಮರ್ಥನೆಯಲ್ಲ-ಒಂದೇ ಒಂದು ಕಾರಣವಾದರೂ ಇರಬಹುದಲ್ಲವೆ? ಇರಬಹುದು. ಆದರೆ, ಆ ಕಾರಣ ನನ್ನಲ್ಲೇ ಉಳಿದುಬಿಡಲಿ.” ಈ ಸಾಲು ಓದಿದ್ದೇ ಕೆಲವು ದಿನಗಳ ಕಾಲ ಮೌನವಾಗುಳಿದೆ. ಈ ಕಥನದ ಹೊರತಾಗಿ ಒಟ್ಟಾರೆ ನಮ್ಮ ಬದುಕಿನಲ್ಲಿ ಸಮರ್ಥನೆ-ಕಾರಣಗಳ ಸುತ್ತ ನನ್ನ ಚಿಂತನೆ ಸುತ್ತಲಾರಂಭಿಸಿತ್ತು. ಮತ್ತೂ ಮುಂದುವರಿದು ತೋಳ್ಪಾಡಿಯವರು, “ಮನುಜ ಬುದ್ಧಿಯ ದ್ರೋಹದ ಸ್ವರೂಪವನ್ನು ಬಲ್ಲ ಬಸವಣ್ಣ..” ಅನ್ನುತ್ತಾರೆ.
ಕೃತಿಯಲ್ಲಿ ವಿದ್ಯಾಭೂಷಣರು ನೆನಪಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನೆನಪಾದಂತೆ ಹಾಡುತ್ತಾ ಹೋಗಿದ್ದಾರೆ. ಕಂಪನ ಹುಟ್ಟಿಸದಿದ್ದರೂ ಕೃತಿಯುದ್ದಕ್ಕು ಬೆಚ್ಚಗಿರುವ ಒಂದು ಆರೋಗ್ಯಕರ ಪ್ರಾಮಾಣಿಕತೆ ಇದೆ. ಸ್ವಾಮಿಗಳಾಗುವವರಿಗೆ ಬಾಲ್ಯದಿಂದಲೇ ಸನ್ಯಾಸಿ ಬದುಕಿಗೆ ಬೇಕಾಗುವ ಕರ್ಮಠ ತರಬೇತಿ, ಪೂರ್ವ  ತಯಾರಿಗಳೂ ನಡೆಯುತ್ತದೇನೋ ಎಂಬಂತ ಕುತೂಹಲದ ಪ್ರಶ್ನೆಗಳಿಗೆಲ್ಲ ಇಲ್ಲಿ ಉತ್ತರ ಸಿಗುತ್ತದೆ.
ದೇವಳದ ಅಂಗಳದಂಚಿನಲ್ಲೇ ಧಾರ್ಮಿಕ ವಾತಾವರಣದಲ್ಲೇ ಆದರೂ, ಬಡತನದ  ಹೊರತಾಗಿ ತಂದೆ-ತಾಯಿ ಇರುವ ಎಲ್ಲಾ ಗಂಡು ಹುಡುಗರ  ಬಾಲ್ಯದಂತೆಯೇ ಅವರವರ ಮಿತಿಯೊಳಗಿನ ಬಣ್ಣ ಬಣ್ಣದ ಅದರಲ್ಲೂ ಸ್ವಲ್ಪ ಹಸಿರು ಜಾಸ್ತಿಯೇ ಇರುವ ಸಮೃದ್ಧ ರಾಗದ ಬಾಲ್ಯವೇ ಇಲ್ಲಿದೆ. ತಂದೆ ಗೋವಿಂದಾಚಾರ್ಯರು ಸಂಗೀತ, ನಾಟಕ ಅವಕಾಶ ಸಿಕ್ಕರೆ ಸಿನೆಮಾ ತನಕದ ಪ್ರಯಾಣಕ್ಕೂ ತಯಾರಿದ್ಧ ಕಲಾಪ್ರೇಮಿ. ಆದರೆ, ಅವರು ಮಠದ ಸೇವೆಗೆ ನಿಲ್ಲುವಾಗ ಇದೆಲ್ಲದರ ರುಚಿ ನೋಡಿ ಯಾಕೋ ಅದರಿಂದ ಕಳಚಿಕೊಳ್ಳುವ ವಿರಕ್ತತೆಗೆ ತಲುಪಿದ್ದರು.
ಬಹುಶಃ ಆ ವಿರಕ್ತ ಹಂತದ ನಂತರದ ಒಂದು ರೀತಿಯಲ್ಲಿ ಲೌಕಿಕ  ಕರ್ಮಠ ಭಾವಗಳಲ್ಲೇ ಮಗನದಾಗಿರಬೇಕಾದ ಮಗನ ಬದುಕಿಗೆ ಇತಿಶ್ರೀ ಹಾಡಿದರೇನೋ. ವಿದ್ಯಾಭೂಷಣರ ವಿಧಿ ಅದಾಗಿರಲಿಲ್ಲ. ಆದರೆ, ಅವರಿಗದು ವಿಧಿಸಲ್ಪಟ್ಟಿತು. ಕೊನೆಗೂ ಅವರು ತನಗೆ ವಿದಿತವಾದ್ದನ್ನೇ ಆಯ್ದುಕೊಂಡರು. ಅವರ ದಾಕ್ಷಿಣ್ಯ ಸ್ವಭಾವ ಈ ವಿಚಾರದಲ್ಲಿ ಮಾತ್ರ ಅವರನ್ನು ಕಟ್ಟಿ ಹಾಕದೆ ಬಿಟ್ಟುಕೊಟ್ಟಿದ್ದರಿಂದಾಗಿ ಇಂದು `ನೆನಪೇ ಸಂಗೀತ’ ನಮ್ಮ ಕೈಯಲ್ಲಿದೆ.
ಮಠ-ಪೀಠ ರಾಜಕಾರಣದ ಬಗ್ಗೆ ಪುಸ್ತಕ ಮಾತಾಡುತ್ತಾದರೂ ವಿದ್ಯಾಭೂಷಣರು ತಮ್ಮ ವ್ಯಕ್ತಿತ್ವದಲ್ಲಿ ಗುರುತಿಸಿಕೊಂಡ ದಾಕ್ಷಿಣ್ಯ ಸ್ವಭಾವ ಈ ಬರವಣಿಗೆಯಲ್ಲೂ ಬಹಳಷ್ಟು ಕೆಲಸ ಮಾಡಿದೆ. ದಾಕ್ಷಿಣ್ಯ ಸ್ವಭಾವ ಕೊನೆಯಲ್ಲಿ ಉಳಿಸುವುದು ಹಳಹಳಿಕೆ ಹಾಗು ವಿಷಾದ. ದಾಕ್ಷಿಣ್ಯವೆಂಬುದು ಸ್ವತಃ ತನಗೂ ಅದಕ್ಕೆ ಸಂಬಂಧ ಪಟ್ಟಂತೆ ಇರುವ ಇತರರ ಬದುಕಿನ ಮೇಲೂ ವಿಪರೀತ ಪರಿಣಾಮವನ್ನೇ ಬೀರುತ್ತದೆ. ಆದರೆ, ನಾವು ಮತ್ತೆ ಮತ್ತೆ ಇಲ್ಲೇ ಎಡವುತ್ತೇವೆ.
ವಿದ್ಯಾಭೂಷಣರು ತನ್ನ ಈ ಸ್ವಭಾವದಿಂದಾಗಿ ತಾನೇನು ಕಳೆದುಕೊಂಡೆ ಎಂಬುದನ್ನ ಹೇಳಿಕೊಳ್ಳುತ್ತಲೇ ನಮ್ಮ ನಾವು ನೋಡಿಕೊಳ್ಳುವಂತೆ ಮಾಡುತ್ತಾರೆ.  ತಾನು ಮಠಾಧಿಪತಿಯಾಗಿದ್ದಾಗ ಸುಬ್ರಹ್ಮಣ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯದಂಗವಾಗಿ ಕಾಂಕ್ರೀಟ್ ಕಟ್ಟಡದ ಬುನಾದಿ ಹಾಕಿದ್ದರ ಬಗ್ಗೆ ಪ್ರಸ್ತಾಪ ಮಾಡುತ್ತ  ಅದರ ಬಗ್ಗೆ ತನ್ನೊಳಗೆ ಇರುವ ಪಶ್ಚಾತ್ತಾಪವನ್ನು ನಿವೇದಿಸಿಕೊಳ್ಳುತ್ತಾರೆ.
ಎಷ್ಟೋ ಸಂಗತಿಗಳು ನಮ್ಮ ಬದುಕಲ್ಲಿ ನಡೆಯುವುದೇ ಹೀಗೆ. ನಾವು ಅದಲ್ಲವೆಂದುಕೊಳ್ಳುತ್ತೇವೆ.. ಆದರೂ ಬೇರೆ ಬೇರೆ ನೆಪಗಳನ್ನಿಟ್ಟುಕೊಂಡು  ನಾವದನ್ನ ಮಾಡುತ್ತೇವೆ. ಹಾಗಾದರೆ, ನಿಜಕ್ಕೂ ನಾವದಲ್ಲವೆ. ಅಥವಾ ನಾವು ಅದಲ್ಲವೆಂಬ ಸೋಗು ಹಾಕುತ್ತೇವೆಯೆ? ಇಂತಹ ಜಿಜ್ಞಾಸೆಗಳನ್ನ ಕೃತಿ ನಮ್ಮಲ್ಲಿ ಹುಟ್ಟು  ಹಾಕುತ್ತದೆ.
ಸನ್ಯಾಸ-ಮಠವೆಂಬ ಸಂಸ್ಥೆಯ ವೃತ್ತಾಂತವನ್ನು ತೆರೆದಿಡುವುದರ ಜೊತೆಗೆ ಕೃತಿಗೆ ಇನ್ನಷ್ಟು ಸಾಧ್ಯತೆಗಳಿತ್ತು ಅನಿಸುವ ಹೊತ್ತಿಗೇ, ನಮ್ಮೊಳಗಿನ ವಿಚಾರ ಸಂಘರ್ಷವನ್ನು ಜೀವಂತವಾಗಿಸುವಲ್ಲೇ ಕೃತಿ ತನ್ನ ಅನನ್ಯತೆಯನ್ನು ಸಾಧಿಸುತ್ತದೆ.

‍ಲೇಖಕರು avadhi

24 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading