ಬಲ್ಲವರೇ ಬಲ್ಲರು ಈ ಪಾಯಸದ ಸವಿಯ..!
ಮಮತಾ ದೇವ
ಪದವಿ ಶಿಕ್ಷಣಕ್ಕಾಗಿ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿಗೆ ಸೇರಿದ ಆರಂಭದ ದಿನಗಳು. ಮನೆಯಿಂದ ಹೊರಗೆ ನಿಲ್ಲಬೇಕಾದ ಪರಿಸ್ಥಿತಿ. ಹಾಸ್ಟೆಲ್ “ಪದ್ಮ ವಿಹಾರ ” ನಿಜವಾಗಿ “A Home away ……..from home ” ಹೊಸ ಅನುಭವ ನೀಡಿತು. ಸುಮಾರು 180-200 ವಿದ್ಯಾರ್ಥಿನಿಯರಿದ್ದೆವು. ಕಾಲೇಜಿಗೆ ಪ್ರಥಮ ದಿನ ಸಡಗರದಿಂದ ಹೊರಟೆವು. ಉಪಾಹಾರಕ್ಕೆ ಹೋದಾಗ ದಿನವೂ ಬೆಳಿಗ್ಗೆ ಗಂಜಿ ಊಟವೆಂದು ತಿಳಿಯಿತು. ಹುಟ್ಟಿದ ಮೇಲೆ ಕುಚ್ಚಿಲು ಅಕ್ಕಿ ಗಂಜಿ ಊಟ ಮಾಡದ ನನ್ನ ಕೊಡಗಿನ ಗೆಳತಿಯರು ಮತ್ತು ನಾನು ಬೆಳಗಿನ ಕಾಫಿ ಮಾತ್ರ ಸೇವಿಸಿ ಕಾಲೇಜಿಗೆ ಹೋದೆವು. ಇದೇ ಕ್ರಮ ಮುಂದುವರಿಯಿತು. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಬೆಳ್ತಿಗೆ/ಕುಚ್ಚಿಲು ಅನ್ನದ ಆಯ್ಕೆ ಇತ್ತು.
ಹೊಟ್ಟೆ ತಳಮಳವಾದಾಗ ತರಗತಿಯಲ್ಲಿ ಪಾಠ ಕೇಳಲು ಸಾಧ್ಯವಾಗದೆ, ಹಣ್ಣು, ಬ್ರೆಡ್ ತಂದು ತಿನ್ನತೊಡಗಿದೆವು. ಮನೆಯಲ್ಲಿ ಅಮ್ಮ ಮಾಡಿಕೊಡುತ್ತಿದ್ದ ಅಕ್ಕಿ ರೊಟ್ಟಿ, ದೋಸೆ, ಇಡ್ಲಿ, ಚಪಾತಿ, ಕಡುಬುಗಳು ಇಲ್ಲಿ ಎಂದೂ ಸಿಗಲಾರವು ಎಂದು ಖಚಿತವಾದಾಗ ಮುಖ ಬಾಡಿತು. ಆದರೂ ಅಲ್ಲೇ ಹುಟ್ಟಿ ಬೆಳೆದವರಿಗೆ ಗಂಜಿ ಊಟ ಅಚ್ಚು ಮೆಚ್ಚಿನದ್ದಾದ ಕಾರಣ ನಾವು ಬೆರಳೆಣಿಕೆಯಷ್ಟಿದ್ದ ಪರವೂರಿನವರು ತೆಪ್ಪಗಾದೆವು. ನೀವೆಲ್ಲ ಹೇಗಿದ್ದೀರಿ? ನಿಮ್ಮ ಹಾಸ್ಟೆಲ್ ಹೇಗಿದೆ.. ಎಂದು ಒಂದು ವರ್ಷದವರೆಗೆ ಯಾರೂ ಕೇಳಲಿಲ್ಲ. ನಾವೂ ಹೇಳಲಿಲ್ಲ.
ಮಹಿಳಾ ಕಾಲೇಜು, ನೋಡಿದೆಲ್ಲೆಡೆ ಹುಡುಗಿಯರೆ. ಸಿಬ್ಬಂದಿ ಕೂಡಾ ಮಹಿಳೆಯರಾಗಿದ್ದರೂ ಎಲ್ಲೆಲ್ಲೂ ಬಹಳ ಶಿಸ್ತು. ಪ್ರಾಂಶುಪಾಲರನ್ನು ಕಂಡೊಡನೆ ಎಲ್ಲ ವಿದ್ಯಾರ್ಥಿನಿಯರು ಗೌರವ ಸೂಚಿಸುತ್ತಿದ್ದರು. ಏನೂ ತಪ್ಪು ಮಾಡದವರಿಗೂ ಅವರ ಬಳಿ ಹೋಗಲು. ಭಯ. ಅವರಲ್ಲಿ ಮಾತನಾಡುವುದೆಂದರೆ ಕೋರ್ಟಿನಲ್ಲಿ ಮಾತನಾಡುವ ಹಾಗೆ ಬಹಳ ಎಚ್ಚರ ವಹಿಸಿ ಮಾತನಾಡಬೇಕಾಗುತ್ತಿತ್ತು. ಸುಳ್ಳು ಕಾರಣ ಹೇಳಿದವರನ್ನು ಸರಿಯಾಗಿ ಪತ್ತೆಮಾಡುವ ಶಕ್ತಿ,ಯುಕ್ತಿ ಎರಡೂ ಅವರಿಗಿತ್ತು. ಮನೆಗೆ ಹೋಗಬೇಕೆನಿಸಿದರೂ ಬಹಳ ಕಷ್ಟ. ಸರಿಯಾದ ಕಾರಣ ಬೇಕಿತ್ತು. ಪ್ರಿನ್ಸಿಪಾಲರ ಅನುಮತಿ ಬೇಕಿತ್ತು. ಮನೆಯವರು ತಿಳಿಸಬೇಕಿತ್ತು. ಹೀಗಿರುವಾಗ ಮನೆಯಿಂದ ದೂರವಾಗಿದ್ದು ಹಾಸ್ಟೆಲ್ನಲ್ಲಿದ್ದ ನಮಗೆಲ್ಲಿಯ ಧೈರ್ಯ? ಹೋಮ್ ಸಿಕ್ ಆದರೂ ಹೇಗೋ ಸಹಿಸಿಕೊಂಡೆವು. ಒಂದೆರಡು ಸಲ ಮನೆಯಿಂದ ಪೋಷಕರ ಪತ್ರ ನೋಡಿ ಮನೆಗೆ ಹೋಗಲು ಅನುಮತಿಸಿದ್ದರು.
ನಾನು ದ್ವಿತೀಯ ಪದವಿ ತರಗತಿಯಲ್ಲಿದ್ದಾಗ ಪ್ರಿನ್ಸಿಪಾಲರೇ ಹಾಸ್ಟೆಲ್ ಸೂಪರ್ವೈಸರ್ ಆಗಿದ್ದರು. ಆಗ ಹಾಸ್ಟಲ್ನ ಹಿಂದಿನ ವರ್ಷದ ಅಡುಗೆಯವರು ಬದಲಾಗಿ ಹೊಸಬರು ಬಂದಿದ್ದರು. ಹಾಗಾಗಿ ಪ್ರಿನ್ಸಿಪಾಲ್ ಒಂದು ಸಭೆ ಕರೆದು ನಮ್ಮನ್ನೆಲ್ಲ ವಿಚಾರಿಸಿದರು. ಏನಾದರೂ ಬದಲಾವಣೆ ಬೇಕಿದೆಯೇ ಎಂದು ಕೇಳಿದರು. ಎಲ್ಲರೂ ಏನೂ ಮಾತನಾಡದೇ ಕುಳಿತಿದ್ದೆವು. ನಿಮಗೆ ಬದಲಾವಣೆ ಬೇಕಿಲ್ಲವೆಂದು ತೋರುತ್ತದೆ. ನಿಮಗೆ ಮೊದಲಿನಂತೆ ಎಲ್ಲ ವ್ಯವಸ್ಥೆ ಇರುತ್ತದೆ ಎಂದರು. ಸರಿ ಇನ್ನು ಸಭೆಯನ್ನು ಮುಕ್ತಾಯಗೊಳಿಸುವ ಎನ್ನುತ್ತಿದ್ದಂತೆ..ಹಿಂದಿನ ಸಾಲಿನಲ್ಲಿ ಏನೋ ಗುಸುಗುಸು ..ಕೇಳಿಸಿತು.
ಪ್ರಿನ್ಸಿಪಾಲರು ಯಾರಾದರೂ ಒಬ್ಬರು ಎದ್ದು ನಿಂತು ನಿಮ್ಮ ಸಮಸ್ಯೆ ತಿಳಿಸಿ ಎಂದಾಗ ಯಾರೂ ಮಾತನಾಡಲು ಸಿಧ್ಧರಿಲ್ಲ. ನನ್ನ ಗೆಳತಿಯರು ನನ್ನ ಕಡೆ ನೋಡಿದರು. ಆಗ ಪ್ರಿನ್ಸಿಪಾಲರೂ ನನ್ನ ಕಡೆ ತಿರುಗಿ.. “Yes, Are you happy girls? Whats your problem?”ಎಂದಾಗ ನಾನು ಹೇಗೋ ಎದ್ದು ನಿಂತೆ. ಅವರು ನಮಗೆ ಇಂಗ್ಲೀಷ್ ಪೋಯೆಟ್ರಿ ಪಾಠ ಮಾಡುತ್ತಿದ್ದರು. ಅವರ ತರಗತಿಯೆಂದರೆ ಪಿನ್ ಡ್ರಾಪ್ ಸೈಲೆನ್ಸ್. ಪ್ರಶ್ನೆ ಕೇಳಿದಾಗ ಎಷ್ಟು ಬೇಕೋ ಅಷ್ಟು ಮಾತ್ರ ಉತ್ತರಿಸಿ ಗೊತ್ತು. ಆದರೆ ಯಾಕೋ ಸಭೆಯಲ್ಲಿ ಹೇಗೆ ವೈಯಕ್ತಿಕವಾಗಿ, ಎಲ್ಲರ ಪರ ಮಾತನಾಡಲಿ..ಎನಿಸಿತು. ಆದರೂ ಮನಸ್ಸಿನಲ್ಲಿ ಬೆಳಗಿನ ಬ್ರೇಕ್ ಫಾಸ್ಟ್ ಸರಿ ಹೋದೀತೇನೋ ಅನ್ನುವ ಭಾವನೆ.
ಸರಿ, ಧೈರ್ಯವೆಲ್ಲ ಒಗ್ಗೂಡಿಸಿ “ಮ್ಯಾಮ್’, ನಮಗೆ ಬೆಳಗಿನ ಗಂಜಿ ಊಟ ಅಭ್ಯಾಸವಿಲ್ಲ. ಒಂದು ವರ್ಷ ಬ್ರೇಕ್ ಫಾಸ್ಟ್ ಇಲ್ಲದೆ ಕಷ್ಟವಾಯಿತು. ನಮಗೆ ಬೆಳಿಗ್ಗೆ ತಿಂಡಿ ಮಾಡಲು ಹೊಸ ಕುಕ್ ಒಪ್ಪಿದರೆ ಮಾಡಿಸಿಕೊಡಿ .ನಾವು ತರಗತಿಯಲ್ಲಿ ಪಾಠ ಕೇಳಲು ಅನುಕೂಲವಾಗುತ್ತದೆ ಎಂದೆ. ಆದರೆ ಹೆಚ್ಚಿನವರು ಬಹಳ ವರ್ಷದಿಂದ ಗಂಜಿ ಪ್ರಿಯರಾಗಿದ್ದರೇನೋ.. ನನ್ನನ್ನೂ, ನನ್ನ ಗೆಳತಿಯರನ್ನೂ ದುರುಗುಟ್ಟಿ ನೋಡುತ್ತಾ.. ನಮಗೆ ಹೀಗೆ ಇರಲಿ ಎನ್ನಬೇಕೇ..!!!
ಆದರೆ ಪ್ರಿನ್ಸಿ ತುಂಬ ನೊಂದವರಂತೆ ಕಂಡರು. ನೀವು ಮೊದಲೇ ಯಾಕೆ ತಿಳಿಸಲಿಲ್ಲ. ನಾನು ಮೊದಲ ಬಾರಿ ಹಾಸ್ಟಲ್ ನಿರ್ವಹಣೆಯನ್ನೂ ಒಪ್ಪಿದ್ದೇನೆ. ನನಗೆ ನಿಮ್ಮ ಕಷ್ಟ ಅರಿವಾಗಿದೆ.. ನಿಮಗೆ ಬೆಳಗಿನ ತಿಂಡಿ ಕೊಡಲು ಏರ್ಪಾಡು ಮಾಡೋಣ . ನಾಳೆಯಿಂದಲೇ ಚಪಾತಿ, ಪೂರಿ, ದೋಸೆ, ಇಡ್ಲಿ ಹೀಗೆ ಮಾಡಿಸೋಣ ಎಂದರು. ವ್ಯವಸ್ಥೆಯೂ ಆಯಿತು. ನನ್ನನ್ನು ಅದಕ್ಕಾಗಿ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸಲು ನೇಮಕ ಮಾಡಿದರು. ನಾನು ಮನೆಯಲ್ಲಿ ಕೇಳಬೇಕೆಂದರೂ ಬಿಡಲಿಲ್ಲ. ಏನೇ ತೊಂದರೆಯಾದರೂ ತಮಗೆ ತಿಳಿಸಬೇಕೆಂದು ಹೇಳಿದರು. ಆದರೆ ಮರುದಿನ ಇಡ್ಲಿ, ಚಟ್ನಿ, ಸಾಂಬಾರ್ ಪರಿಮಳವೇನೋ ಇತ್ತು.
ಆದರೆ ಅಡುಗೆಯವರ ಕೈರುಚಿ ಹೇಗಿತ್ತೆಂದರೆ ಎಲ್ಲರ ತಟ್ಟೆಯಲ್ಲಿ ಬಡಿಸಿದ ಇಡ್ಲಿಗಳು ವಾಶ್ ಬೇಸಿನ್ ತುಂಬಾ ತೇಲತೊಡಗಿದವು.! ಎಲ್ಲರೂ ಇಡ್ಲಿ ತಿನ್ನದೇ ನನ್ನನ್ನೇ ದುರುಗುಟ್ಟಿ ನೋಡಿದರು. ನಿಮ್ಮಿಂದಾಗಿ ಇದ್ದ ಒಳ್ಳೆ ಗಂಜಿಯೂಟವೂ ಇಲ್ಲದಾಯಿತು…ಎಂದು ಹಿಡಿ ಶಾಪ ಹಾಕತೊಡಗಿದರು. ನಾನೇ ಸೀದಾ ಅಡುಗೆಯವರಲ್ಲಿ ಕೇಳಿದೆ..ನಿಮಗೆ ಯಾವ ತಿಂಡಿ ಚೆನ್ನಾಗಿ ಮಾಡಲು ಬರುತ್ತದೋ ಅದನ್ನು ಮಾತ್ರ ಮಾಡಿಕೊಡಿ ಅಂತ. ಮರುದಿನದಿಂದ ಮೆನು ಬದಲಾಯಿತು. ದೋಸೆ, ಚಪಾತಿ, ಉಪಿಟ್ಟು, ಪುಲಾವ್ , ಪೂರಿ ಮೊದಲಾದ ತಿಂಡಿಗಳನ್ನು ಅಚ್ಚುಕಟ್ಟಾಗಿ ಮಾಡತೊಡಗಿದರು. ನಮಗೂ ಕಾಲೇಜಿನಲ್ಲಿ ಪಾಠ ಕೇಳಲು ಸಾಧ್ಯವಾಗುತ್ತಿತ್ತು.
ನಂತರ ಹೇಗೋ ಎಲ್ಲ ವ್ಯವಸ್ಥೆ ಸರಿಯಾಗತೊಡಗಿತು. ಕೆಲವೊಂದು ಸಣ್ಣ ಸಮಸ್ಯೆಯಿದ್ದರೂ ವಿಚಾರಿಸಿಕೊಳ್ಳುತ್ತಿದ್ದರು. ನಂತರದ ವರ್ಷದಲ್ಲಿ ಪ್ರಿನ್ಸಿಪಾಲರು ಒಂದು ದಿನ ಸಭೆ ಕರೆದು ನಮ್ಮ ಹಾಸ್ಟೆಲ್ ಜೀವನದ ಅನುಭವ ಮಧುರವಾಗಿರಲಿ.. ಹಾಸ್ಟೆಲ್ ಡೇ ಆಚರಿಸೋಣ ಎಂದರು. ನಮಗೆಲ್ಲರಿಗೂ ಮನರಂಜನೆ ಕಾರ್ಯಕ್ರಮ ಕೊಡಲು ಹೇಳಿದರು. ಹಲವು ಸ್ಪರ್ಧೆಗಳನ್ನೂ ಆಯೋಜಿಸಲಾಯಿತು. ನನಗೂ ಒಂದಿಷ್ಟು ಜವಾಬ್ದಾರಿ ಬಿತ್ತು. ವಾರ್ಡನ್ ಜೊತೆಯಲ್ಲಿ, ಕೆಲವೊಮ್ಮೆ ಪ್ರಿನ್ಸಿಪಾಲರೊಡನೆ ತಿರುಗಾಡುವ ಕೆಲಸ. ಮುಖ್ಯ ಅತಿಥಿ ಕಲ್ಯಾಣಿ ಡಿ.ಶೆಟ್ಟಿಯವರನ್ನು ಹಾಗೂ ಕೆಲವು ಇತರ ಮಹಿಳಾ ತೀರ್ಪುಗಾರರನ್ನು, ಉಪನ್ಯಾಸಕರನ್ನು ಭೇಟಿಯಾಗಿ ಆಮಂತ್ರಿಸುವುದು, ಮಾತ್ರವಲ್ಲ.. ಒಳ್ಳೆಯ ಅಡುಗೆಯವರನ್ನು (ಬೇರೆ ಹೆಸರಾಂತ ಹಾಸ್ಟೆಲಿನ ) ಆ ದಿನದ ಔತಣ ಸಿದ್ಧಪಡಿಸಲು ಆಮಂತ್ರಿಸಿ, ಅವರಿಂದ ಆಹಾರದ ಸಾಮಗ್ರಿಗಳ ಪಟ್ಟಿಯನ್ನೂ,ವಿಧಾನವನ್ನೂ ಬರೆಸಿ ತರಬೇಕಾಗಿತ್ತು.
ವಿಶೇಷ ಅಡುಗೆಗೆ ಬಾಣಸಿಗರು ಬೇರೆ.! ನಿತ್ಯದ ಅಡುಗೆಗೆ ಮಾಮೂಲಿ ಕುಕ್. ಮೆನು ಬಹುಮತ ನಮ್ಮದೂ ಹಾಗೂ ಪ್ರಿನ್ಸಿಪಾಲರ ಸಲಹೆಯಾಗಿತ್ತು. ನನಗೆ ನಿಜವಾದ ಲೀಡರ್ ಶಿಪ್ ನ ಅನುಭವವಾಗತೊಡಗಿತ್ತು. ಪ್ರಿನ್ಸಿಪಾಲರ ಮನಸ್ಸು ಅರಿವಾಗಿ , ಅವರ ಮಾರ್ಗದರ್ಶನ ಅಪ್ಯಾಯಮಾನವಾಗಿತ್ತು.
ಸಂಭ್ರಮದ ಆಚರಣೆ ಬಹಳ ಲವಲವಿಕೆಯನ್ನು ಮೂಡಿಸಿ ಹಾಸ್ಟೆಲ್ ಜೀವನ ಹಿತವಾಗತೊಡಗಿತು.
ನನಗೆ ಸ್ವಾಗತ ಭಾಷಣಕ್ಕೆ ತಯಾರಾಗಲು ತಿಳಿಸಿದ್ದರು. ಹೂಗುಚ್ಚ, ಬಹುಮಾನ, ಪ್ರಮಾಣ ಪತ್ರ, ಸ್ಮರಣಿಕೆ ವ್ಯವಸ್ಥೆಯನ್ನು ಎಲ್ಲ ಪದಾಧಿಕಾರಿಗಳೂ ಹಂಚಿಕೊಂಡು ಮಾಡಿದೆವು. ಇತರ ಎಲ್ಲ ವಿದ್ಯಾರ್ಥಿಗಳ ಸಹಾಯದಿಂದ ಮನರಂಜನೆ, ನಿರ್ವಹಣೆ ಎಲ್ಲವೂ ಚೆನ್ನಾಗಿ ನಡೆಯಿತು. ನಂತರ ನಮಗಾಗಿ ಅತಿಥಿಗಳೊಂದಿಗೆ ಒಳ್ಳೆಯ ಔತಣ ಏರ್ಪಾಡಾಗಿತ್ತು. ಹಾಸ್ಟೆಲ್ ಡೇಯಿಂದಾಗಿ ಜೀವನ ಮೊದಲಬಾರಿಗೆ ಅಲ್ಲಿ ಅದ್ಭುತವಾಗಿ ಕಾಣತೊಡಗಿತು. ನನಗೆ ಗಣ್ಯರನ್ನು ಪ್ರಾಂಶುಪಾಲರೊಡನೆ ಹೂಗುಚ್ಚ, ಸ್ಮರಣಿಕೆ ನೀಡಿ ಬೀಳ್ಕೊಡುವವರೆಗೂ ಸಂತಸದ ಜವಾಬ್ದಾರಿ. ಬಂದ ಅತಿಥಿಗಳೂ, ಆಡಳಿತ ಮಂಡಳಿಯವರೂ ಸಂತಸಪಟ್ಟರು. ಪ್ರಾಂಶುಪಾಲರು ಮನೆಯಿಂದ ಕರೆ ಬಂದ ಕಾರಣ ಅತಿಥಿಗಳಿದ್ದಾರೆಂದು ನಮ್ಮೊಡನೆ ಊಟ ಮಾಡಲಿಲ್ಲ.
ಎಲ್ಲ ಬಗೆಯನ್ನೂ ಸವಿಯುತ್ತಾ, ಅಂತೂ ಒಂದು ಒಳ್ಳೆಯ ಔತಣ ಎಂದು ಅಂದುಕೊಂಡರು ಎಲ್ಲರೂ. ಆದರೆ ಪಾಯಸ ಮಾತ್ರ ನಮ್ಮ ಮಾಮೂಲಿ ಕುಕ್ ನ ಕೈಚಳಕದಿಂದ ಅಡುಗೆಯ ಅಂದಗೆಡಿಸಿತ್ತು. ಶ್ಯಾವಿಗೆ ಪಾಯಸ ಮುದ್ದೆ ಮುದ್ದೆಯಾಗಿ ಎಲ್ಲರೂ ಚೆಲ್ಲುವಂತಾಯಿತು. ವಿಶೇಷ ಬಾಣಸಿಗರ ವೆಜ್ ಪುಲಾವ್ ಹಾಗೂ ಇತರ ಖಾದ್ಯಗಳು. ಬಹಳ ರುಚಿಕರವಾಗಿದ್ದವು.ಆದರೆ ಹಸಿ ಹಸಿಯಾಗಿದ್ದ ವಿಚಿತ್ರ ಬಿಳಿ ಪಾಯಸ ಮತ್ತೆ ಔತಣಕ್ಕೆ ಕಪ್ಪು ಚುಕ್ಕೆಯೆನಿಸಿತು. ಎಲ್ಲ ಪಾಯಸದ ಕಪ್ ಗಳೂ ಖಾಲಿಯಾಗಲೇ ಇಲ್ಲ.ನನಗೂ ಇದನ್ನು ನೋಡಿ ಇನ್ನೆಂದಿಗೂ ಪಾಯಸ ಬೇಡವೆನಿಸಿದ್ದಂತೂ ನಿಜ ! ಕಾರ್ಯಕ್ರಮದ ಮರುದಿನ ಸಂಜೆ ನಾವು ಅಂದರೆ ಕೊಡಗಿನ ಗೆಳತಿಯರು ,ಅಂತಿಮ ಪದವಿ ತರಗತಿಯ ಕೆಲವು ವಿದ್ಯಾರ್ಥಿನಿಯರು ಕಾಲೇಜಿನ ಸಮೀಪವಿದ್ದ ಪ್ರಿನ್ಸಿಪಾಲರ ಮನೆಯ ಎದುರೇ ನಡೆದು ಹೋಗುವಾಗ ಮನೆಯಿಂದ ಹೊರಗೆ ಬಂದವರು ನಮ್ಮನ್ನು “ ಹೇಗನಿಸಿತು ನಿಮಗೆ ಹಾಸ್ಟೆಲ್ ಡೇ? ಊಟ ಹೇಗಿತ್ತು ? ನಿಮಗೆ ಇಷ್ಡವಾಯಿತೇ?” ಎಂದು ಕೇಳಿದರು.
ನಾವು ಚೆನ್ನಾಗಿತ್ತೆಂದು ತಲೆಯಾಡಿಸಿದೆವು. ಅವರು ನನ್ನನು ಪುನ: ಪ್ರಶ್ನಿಸಿದರು. ನನಗೆ ಪ್ರಾಮಾಣಿಕ ಅನಿಸಿಕೆ ಬೇಕು. “ನೀನು ಹೇಳು..ಹೇಗಿತ್ತು..ಅಂತ..?” ನನಗೆ ಒಂದು ನಿಮಿಷ ಗೊಂದಲವಾಯಿತು. ಸತ್ಯ ಹೇಳುವುದೋ ಬೇಡವೋ ಅಂತ…ಆದರೂ , “ಎಲ್ಲವೂ ತುಂಬಾ ಚೆನ್ನಾಗಿತ್ತು ಮ್ಯಾಮ್.. ಪಾಯಸವೊಂದನ್ನು ಹೊರತುಪಡಿಸಿ , ತುಂಬ ವೇಸ್ಟ್ ಆಯ್ತು “ ಎಂದೆ. “ ಓಹ್..ಯೆಸ್. ಯೂ ಆರ್ ರೈಟ್. ನನಗೂ ಹಾಗನ್ನಿಸಿತು .ಆದರೆ ಸಭಾ ಮತ್ತು ಮನರಂಜನೆ ಕಾರ್ಯಕ್ರಮ ಚೆನ್ನಾಗಿತ್ತು “ ಎಂದರು. ನನಗೂ ಮನೆಗೆ ಊಟ ಕಳಿಸಿದ್ದರು ಎಂದರು. ನಾನು ಬಹುಶ:ಶ್ಯಾವಿಗೆಯನ್ನು ಹುರಿಯಲು ನಮ್ಮ ಅಡುಗೆಯವರು ಮರೆತಿರಬೇಕು ಎಂದೆ. ಎಕ್ಸಾಕ್ಟ್ಲಿ..ಎಂದರು. ನಾವೆಲ್ಲ ನಗಾಡಿದೆವು.
ಆಗ ಪ್ರಿನ್ಸಿಪಾಲರು, ಪಾಯಸ ಮಾಡುವ ವಿಧಾನ ಹಾಗಲ್ಲ.. ನಾನು ಮಾಡುವ ಪಾಯಸವನ್ನು ನೀವು ಸವಿಯಲೇಬೇಕು. ನೀವೆಲ್ಲರೂ ಕಾಲೇಜು ಬಿಟ್ಟು ಹೋಗುವ ಮುನ್ನ ನನ್ನ ಮನೆಗೆ ಬರಬೇಕು. ಉತ್ತಮವಾದ ಶ್ಯಾವಿಗೆ ಪಾಯಸ ನಾನು ನಿಮಗಾಗಿ ತಯಾರಿಸುತ್ತೇನೆ ಎಂದರು.ನಾವೆಲ್ಲ ಬೇಡವೆಂದೆವು. ಇಲ್ಲ…ನನಗೆ ನೀವೆಲ್ಲ ಬರಲೇಬೇಕು. ನಾನು ನೆನಪಿಸುತ್ತೇನೆ. ನೀವ್ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಅಂತಿಮ ವರ್ಷದ ಎಲ್ಲ ವಿದ್ಯಾರ್ಥಿನಿಯರೂ ಎಂದರು. ನಾನು ಯಾಕಾದರೂ ಸತ್ಯ ಹೇಳಿದೆ. ಇನ್ನೇನು ಕೆಲವು ತಿಂಗಳಲ್ಲಿ ನಿವೃತ್ತಿಯಾಗಲಿರುವ ಮ್ಯಾಮ್ ನಮಗೆ ಪಾಯಸ ಮಾಡಿಕೊಡುವ ಕೆಲಸ ಬೇರೆ ಮಾಡಬೇಕಲ್ಲ… ತೊಂದರೆ ಮಾಡಿದೆ ಎಂದುಕೊಂಡೆ. ಇತ್ತೀಚೆಗೆ ನಮ್ಮಲ್ಲಿ ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದರು.
ಪರೀಕ್ಷೆಗೆ ತೊಂದರೆಯಾಗಬಾರದೆಂದು ಹಾಸ್ಟೆಲ್ ಡೇ ಬೇಗ ಮುಗಿಸಿದ್ದರು. ಅಂತಿಮ ಪರೀಕ್ಷೆಗೆ ಇನ್ನೂ ಕೆಲವು ತಿಂಗಳಿತ್ತು. “ಪ್ರಿನ್ಸಿ ಇವತ್ತು ಒಳ್ಳೆ ಮೂಡ್ನಲ್ಲಿ ಇದ್ದಿರಬೇಕು. ಅದಕ್ಕೇ ಹೀಗೆ. ಎಲ್ಲಾದರೂ ನಾವು 9-12 ಮಂದಿ ಅವರ ಮನೆಗೆ ಪಾಯಸ ತಿನ್ನಲು ಹೋಗುವುದು ನಿಜವೇ? ಸುಮ್ಮನೆ ಹೇಳಿದ್ದಾರೆ ಅಷ್ಟೆ “ಎಂದು ಎಲ್ಲರೂ ಮಾತನಾಡಿಕೊಂಡರು. ನಾನೂ ಸುಮ್ಮನಾದೆ.
ನಂತರ ಸುಮಾರು 3 ತಿಂಗಳು ಕಳೆಯಿತು. ಒಂದು ದಿನ ನನಗೆ ಪ್ರಿನ್ಸಿಪಾಲರ ಕೊಠಡಿಗೆ ಹೋಗಲು ಕರೆ ಬಂತು. ನಾನು ಆಳುಕುತ್ತಲೇ ಹೋದೆ. “ನಾಡಿದ್ದಿನಿಂದ ನಿಮಗೆ ಓದಲು ರಜಾ. ನೀವೆಲ್ಲ ನಾಳೆ ಸರಿಯಾಗಿ ನನ್ನ ಮನೆಗೆ ಬರಬೇಕು. ಪಾಯಸ ತಯಾರಿಸುತ್ತೇನೆ. ಎಲ್ಲ ಅಂತಿಮ ಪದವಿಯಲ್ಲಿರುವ ಹಾಸ್ಟೆಲ್ ಮಕ್ಕಳನ್ನು ಸರಿಯಾಗಿ ಬೆಳಿಗ್ಗೆ 11 ಗಂಟೆಗೆ ಕರೆದುಕೊಂಡು ಬರುವುದು ನಿನ್ನ ಜವಾಬ್ದಾರಿ “ಎಂದರು. ನಾನು ದಂಗಾದೆ. ಅವರಿಷ್ಟು ನೆನಪಿರಿಸಿ ಕರೆಯಬಹುದೆಂದು ನಾನೂ ಅಂದುಕೊಂಡಿರಲಿಲ್ಲ. ಆಗಲಿ ಮ್ಯಾಮ್..ಆದರೆ ಬೇಡ..ಸುಮ್ಮನೆ ನಿಮಗ್ಯಾಕೆ ತೊಂದರೆ ಎಂದೆ. ಯು ಕೆನ್ ಗೋಟು ದ ಕ್ಲಾಸ್ ನೌ. . ಆಲ್ ಆಫ್ ಯು ಶುಡ್ ಕಂ ಎಟ್ ಶಾರ್ಪ್ ಲೆವೆನ್ ಇನ್ಫಾರ್ಮ್ ದೆಮ್. ಎಂದರು.
ಪಾಯಸದ ಸವಿಯಲು ಪ್ರಿನ್ಸಿಪಾಲರ ಮನೆಗೆ ಹೋಗಬೇಕಂತೆ. ಎಲ್ಲರನ್ನೂ ಪ್ರೀತಿಯಿಂದ ಆಮಂತರಿಸಿದ್ದಾರೆ ಎಂದೆ. ಆದರೆ ಎಲ್ಲ ಗೆಳತಿಯರೂ ನಂಬಲೇ ಇಲ್ಲ. ನಂತರ ಪುನ: ನಾನು ಆ ದಿನ ಕಾಲೇಜಿನ ಬ್ರೇಕ್ನಲ್ಲಿ ಎಲ್ಲರಿಗೂ ನೆನಪಿಸಿದೆ. ಎಲ್ಲರೂ ಅವರ ನಿವಾಸಕ್ಕೆ ತೆರಳಿದೆವು. ಅವರ ಎದುರು ನಿಲ್ಲಲು ಹೆದರುತ್ತಿದ್ದ ವಿದ್ಯಾರ್ಥಿನಿಯರು ಅವರ ಮನೆಯ ಡೈನಿಂಗ್ ಹಾಲ್ನಲ್ಲಿ ಅವರೆದುರು ಕುಳಿತು ಅವರಿಂದ ಪಾಯಸ ಸ್ವೀಕರಿಸುವುದೆಂದರೆ..! ಆ ಕ್ಷಣ ಮೈನವಿರೇಳಿಸಿತು.
ತುಂಬ ಅಚ್ಚುಕಟ್ಟಾಗಿ ಅಲಂಕರಿಸಿದ ಅವರ ಊಟದ ಮೇಜಿನ ಮೇಲೆ ಟ್ರೇಗಳಲ್ಲಿ ಪಾಯಸದ ಬಟ್ಟಲುಗಳನ್ನಿಡಲು ,ಅದಕ್ಕೆ ಸ್ಪೂನ್ ಹಾಕಿ ಕೊಡಲು,ನನ್ನನ್ನು ಕರೆದರು. ಅವರ ಹಿಂದೆ ಕಿಚನ್ ಗೆ ಹೋದೆ. ಅಲ್ಲಿ ಗಮಗಮಿಸುವ ಕೇಸರಿ,ಏಲಕ್ಕಿ ಹಾಕಿದ ವರ್ಮಿಸೆಲ್ಲಿ (ಶ್ಯಾವಿಗೆ) ಪಾಯಸ ಸಿದ್ಧವಾಗಿತ್ತು. ಸೀ..ದಿಸ್ ಯು ಹ್ಯಾವ್ ಟು ಸರ್ವ್ ಲೈಕ್ ದಿಸ್ ಎನ್ನುತ್ತಾ ಪಾಯಸವನ್ನು ಕಪ್ ಗಳಿಗೆ ಹಾಕಿ ತೋರಿಸಿದರು. ನಾನು ಕೆಲವು ಕಪ್ ಗಳಿಗೆ ಹಾಕಿದೆ. ನಂತರ ಟ್ರೇಯಲ್ಲಿ ಪಾಯಸವನ್ನು ನಾನೂ,ನನ್ನ ಇನ್ನಿಬ್ಬರು ಗೆಳತಿಯರು ತಂದಿಟ್ಟೆವು. ನನಗೆ ಪ್ರಿನ್ಸಿಪಾಲರೇ ನನ್ನ ಕೈಗೆ ತಂದುಕೊಟ್ಟರು. ಎಲ್ಲರೂ ಒಟ್ಟಿಗೆ ಪಾಯಸ ಸವಿಯತೊಡಗಿದೆವು. ಆ ದಿನ ಅವರು ನನಗೆ ಅಮ್ಮನಂತೆ ಕಾಣಿಸಿದರು. ನಿಜವಾಗಿಯೂ ಅಪ್ರತಿಮವಾಗಿ ರುಚಿಯಾಗಿತ್ತು. ಅವರೂ ನಮ್ಮೊಂದಿಗೆ ಕುಳಿತು ಪಾಯಸ ಸವಿದರು. ನಂತರ ನಮಗೆಲ್ಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಎಂದು ಶುಭ ಹಾರೈಸಿದರು. ನನಗೆ ಕಣ್ಣು ತುಂಬಿ ಬಂತು. ತೋರಿಸದೆ..ಅವರೊಡನೆ ಈ ಪಾಯಸದ ಸವಿಯನ್ನು ನಾನೆಂದೂ ಮರೆಯಲಾರೆ ಮ್ಯಾಮ್ ಎಂದೆ. ನನ್ನ ಬೆನ್ನು ತಟ್ಟಿ ಮುಂದಿನ ವರ್ಷ ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳುವೆ ಎಂದರು. ಅವರ ಕಣ್ಣೂ ತುಂಬಿ ಬಂದಿತ್ತು.
ಕೆಲವೊಂದು ಕ್ಷಣಗಳು ಛಾಯಾಚಿತ್ರವಿಲ್ಲದಿದ್ದರೂ ಸ್ಮೃತಿಪಟಲದಲ್ಲಿ ಸ್ಪಷ್ಟವಾದ ಚಿತ್ರವನ್ನೇ ಮೂಡಿಸಬಲ್ಲವು.
ಜೀವನದಲ್ಲಿ ಅದೆಷ್ಟೋ ಬಾರಿ ವಿವಿಧ ಬಗೆಯ ಪಾಯಸ ಸವಿದಿದ್ದರೂ ಪ್ರೀತಿಯಿಂದ ಗೋಮತಿ ಮ್ಯಾಮ್ ಅಂದು ಕೈಯಾರೆ ಮಾಡಿ ತಿನ್ನಿಸಿದ ಪಾಯಸದ ಸವಿಗೆ ಇಂದಿನವರೆಗೂ ಸಮಾನವಾದದ್ದು ಯಾವೂದೂ ಸಿಕ್ಕಿಲ್ಲ. ನಿಜಕ್ಕೂ ಅದೊಂದು ಅದ್ಭುತ ಅನುಭವ, ಮರೆಯಲಾಗದ ಸವಿ ನೆನಪು !







chennagide baraha_smitha Amrithraj, sampaje.
Thumba sarlavagi nirupisiddiri…..gomathi mamge nanadondu prithiya salaam.
Thank you. My dear Gomathi Madam passed away yesterday. .. My heartfelt thanks to Avadhi Magazine and their team for publishing this article written in May 2013.
ನಿಮ್ಮ ಅನುಭವ ನಿರೂಪಣೆ ಆತ್ಮೀಯವಾಗಿದೆ. ಸಂವೇದನಾತ್ಮಕವಾಗಿದೆ.
ಅಚ್ಚಳಿಯದ ನೆನಪುಗಳಿವೆಲ್ಲ.. ಚಿತ್ರಗಳಿರದಿದ್ದರೂ ಮನಪಟಲದಲಿ ಉಳಿಯುವಂತಾದ್ದು!
savi dsavi nenapu sasvira nenapu tumba chennagithu.
ಚೆನ್ನಾಗಿದೆ