ಪ್ರಸನ್ನ ಸಂತೆಕಡೂರು
ಶಿವಮೊಗ್ಗ ವಿಮಾನ ನಿಲ್ದಾಣ…
ಅದು ಮೇ ತಿಂಗಳ ಕೊನೆಯ ದಿನಗಳು. ಆ ಹೊಲ ಅರೆಮಲೆನಾಡಿನಲ್ಲಿದ್ದರೂ ಬಯಲು ಸೀಮೆಯಂತೆಯೇ ಒಣಗಿತ್ತು. ಆಕಾಶದಲ್ಲಿ ಸೂರ್ಯ ದಗದಗಿಸುತ್ತಿದ್ದ. ನೆಲ ಅಗ್ನಿಕುಂಡವಾಗಿತ್ತು. ಬೇಸಿಗೆಯ ಉರಿ ಬಿಸಿಲಿನ ಝಳಕ್ಕೆ ಕಾದ ಮಣ್ಣು ಕಾಲುಗಳನ್ನು ಸುಡುವುದನ್ನು ಲೆಕ್ಕಿಸದೆ ಅರವತ್ತು ವರ್ಷ ದಾಟಿದ್ದ ಬಸಮ್ಮ ಗುದ್ದಲಿಯಲ್ಲಿ ನೆಲವನ್ನು ಅಗೆಯುತ್ತಿದ್ದಳು. ಆ ಚಿಕ್ಕ ಹೊಲದ ಉತ್ತರದ ಬದುವಿಗೆ ಹೊಂದಿಕೊಂಡಂತೆ ಇದ್ದ ಒಂದು ಚಿಕ್ಕ ಬಿದಿರಿನ ಮೆಳೆಯ ನೆರಳಿನಲ್ಲಿ ಅವಳ ಏಳು ವರ್ಷದ ಒಬ್ಬನೇ ಮೊಮ್ಮೊಗ “ಶಿವ ಪ್ರಕಾಶಿ” ತನ್ನಷ್ಟಕ್ಕೆ ತಾನು ಗೋಲಿಯಾಡುವುದರಲ್ಲಿ ಮಗ್ನನಾಗಿದ್ದ. ಅವನು ಸಾಕಿದ್ದ ಕರಿಯ ಬಣ್ಣದ ನಾಯಿ ಮರಿ “ರಾಜ” ಅವನನ್ನೇ ನೋಡುತಿತ್ತು. ಆ ಮೊಮ್ಮಗನೇ ಬಸಮ್ಮನ ಸರ್ವಸ್ವ. ಅವನು ಬೆಳೆದು ಏಳಿಗೆಯಾಗಿ ಅವನದು ಅಂತ ಒಂದು ಸಣ್ಣ ಸಂಸಾರವಾದರೆ ಅಷ್ಟೇ ಸಾಕು ನಾನು ನೆಮ್ಮದಿಯಿಂದ ಕಣ್ಣು ಮುಚ್ಚಬಹುದು ಎಂದು ತಾನೇ ಕಾಡು ಕಡಿದು ಮಾಡಿರುವ ಈ ಹೊಲದಲ್ಲಿ ರಾಗಿ, ಕಡ್ಲೇಕಾಯಿ ಬೆಳೆಯಲು ಬಸಮ್ಮ ಭಗೀರಥ ಪ್ರಯತ್ನ ಮಾಡುತ್ತಿದ್ದಳು.
ಭದ್ರಾ ಜಲಾಶಯದ ನೀರು ಕಾಲುವೆಯ ಮುಖಾಂತರ ಆ ಹೊಲಕ್ಕೆ ಕೆಲವು ಕೀಲೊಮೀಟರುಗಳಷ್ಟು ಹತ್ತಿರಕ್ಕೆ ಬಂದಿದ್ದರೂ ಇಲ್ಲಿಗೆ ಬಂದಿರಲಿಲ್ಲ. ಸರಿಯಾಗಿ ಸರಿಯಾದ ಸಮಯಕ್ಕೆ ಮಳೆಯಾದರೆ ಮಾತ್ರ ಬೆಳೆ. ಇಲ್ಲವಾದರೆ ಎಲ್ಲವೂ ಹರಿಯುವ ನದಿಯಲ್ಲಿ ಹುಣಸೆ ಹಣ್ಣು ಕಿವುಚಿದ ಹಾಗೆ ಆಗುತಿತ್ತು. ಮೊದಲೇ ಎಲ್ಲರೂ ಹೇಳುವ ಹಾಗೆ ಭಾರತದಲ್ಲಿ ಮಳೆಗಾಲ ಯಾವಾಗಾಲೂ ರೈತರ ಬದುಕಿನ ಜೊತೆ ಕಣ್ಣಾಮುಚ್ಚಾಲೆಯಾಡುತ್ತದೆ. ಅದರಲ್ಲೂ ಚಿಕ್ಕ ಅತೀ ಚಿಕ್ಕ ಇಳುವರಿದಾರರ ಬದುಕು ಪ್ರಕೃತಿಯ ಜೊತೆ ಕಣ್ಣಾಮುಚ್ಚಾಲೆಯೇ ಸರಿ! ಆದರೂ ಬಸಮ್ಮನಿಗೆ ಕೈಗೆ ಕಿರುಗಾಸಾದರೂ ಸಿಗಬಹುದು ಎಂಬ ಸಣ್ಣ ಆಸೆ. “ಮುಂದೆ ಈ ಹೊಲದ ವಾರಸುದಾರ ಇವನೇ ಅಲ್ಲವೇ? ಇವನಿಗೋಸ್ಕರ ನಾನು ಏನು ಆಸ್ತಿನೂ ಮಾಡಿಲ್ಲ! ಈ ಚಿಕ್ಕ ಒಣ ಭೂಮಿಯಾದರೂ ಇವನನ್ನು ಕಾಪಾಡುವಂತಾಗಲಿ. ತಂದೆ ಸಿದ್ದಲಿಂಗೇಶ್ವರ, ಗುಬ್ಬಿಯಪ್ಪ, ಪರ್ವತ ಮಲ್ಲೇಶ್ವರ, ಸೌದತ್ತಿ ಎಲ್ಲಮ್ಮ, ಬಿದಲೂರು ಗಂಗಮ್ಮ, ಅವೇರಹಳ್ಳಿ ರೇವಣಸಿದ್ದೇಶ್ವರ, ದೊಡ್ಡಕಾಯಪ್ಪ ” ಎಂದು ತನಗೆ ಬಾಲ್ಯದಿಂದಲೂ ಗೊತ್ತಿರುವ ಮತ್ತು ತಾನು ದೇವರುಗಳು ಎಂದು ನಂಬಿರುವ ಹೆಸರುಗಳನ್ನೆಲ್ಲಾ ಹೇಳಿಕೊಂಡು ತನ್ನ ಮೊಮ್ಮಗನ ಕಾಪಾಡಲು ಮನಸ್ಸಿನಲ್ಲಿಯೇ ಆ ಹೆಸರುಗಳಿಗೆ ಬೇಡಿಕೊಳ್ಳುತ್ತಿದ್ದಳು.
ಅಷ್ಟರಲ್ಲಿ ವಿನಾಯಕ ನಗರದ ಜಮೀನ್ದಾರ್ ವಸಂತಪ್ಪನವರ ಜೀತದಾಳು ಕರಿಯ ಬಂದು “ಬಸಮ್ಮ, ಸಾಹುಕಾರರು ಕರೆಯುತ್ತಿದ್ದಾರೆ. ನಿನ್ನ ಮೊಮ್ಮಗನನ್ನು ಕರೆದುಕೊಂಡು ಬರಬೇಕಂತೆ ಅಮ್ಮಾವ್ರು ಬಂದವ್ರೆ” ಎಂದು ಸ್ವಲ್ಪ ದೂರದಲ್ಲಿ ಚಿಕ್ಕ ಕೆರೆಯ ಪಕ್ಕದಲ್ಲಿದ್ದ ವಸಂತಪ್ಪನವರ ಹೊಲಕ್ಕೆ ಬರಲು ಹೇಳಿದ. ಬೆಳಿಗ್ಗೆಯಿಂದ ಹೊಲವನ್ನ ಅಗೆದು ಅಗೆದು ದಣಿದಿದ್ದ ಬಸಮ್ಮನಿಗೂ ಕುಡಿಯಲು ನೀರು ಬೇಕಿತ್ತು. ವಸಂತಪ್ಪನವರ ಜಮೀನಿನಲ್ಲಿ ಒಂದು ತೆರೆದ ಕುಡಿಯುವ ಸಿಹಿ ನೀರಿನ ಬಾವಿ ಇತ್ತು. ಬಸಮ್ಮ ತನ್ನ ಮೊಮ್ಮಗನನ್ನು ಕರೆದುಕೊಂಡು ವಸಂತಪ್ಪನವರ ಜಮೀನಿಗೆ ಹೋಗುವುದರೊಳಗೆ ವಸಂತಪ್ಪನವರು, ಅವರ ಪತ್ನಿ ಅಲುಮೇಲಮ್ಮ ಮತ್ತು ಜೀತದಾಳು ಕರಿಯ ಮಧ್ಯಾಹ್ನದ ಊಟಕ್ಕೆ ಬಾಳೆ ಎಲೆ ಹಾಸಿಕೊಂಡಿದ್ದರು. “ಏನು ಬಸಮ್ಮ ಏನಾದರೂ ಊಟಕ್ಕೆ ತಂದಿದ್ದಿಯೋ ಇಲ್ಲೋ ಕಾಲಿ ಹೊಟ್ಟೇಲಿ ಇದ್ದಿಯೋ?” ಎಂದು ವಸಂತಪ್ಪನವರು ಕೇಳಿದರು. ಬಸಮ್ಮ ತಾನು ಸಂತೇಕಡೂರಿನಿಂದ ಮನೆಯಲ್ಲಿ ಮಾಡಿಕೊಂಡು ಬಂದಿದ್ದ ತಟ್ಟೆ ಇಡ್ಲಿ ಗಂಟನ್ನು ತೋರಿಸಿ “ಇಲ್ಲಾ ಅಣ್ಣ, ಇಡ್ಲಿ ತಂದಿದೀನಿ. ನನಗಲ್ಲದಿದ್ದರೂ ಈ ಮಗಿಗಾದರೂ ಏನಾದರೂ ಇರಲೇ ಬೇಕಲ್ವಾ? ಎಂದು ನಿಟ್ಟುಸಿರುಬಿಟ್ಟು ತನ್ನ ಇಡ್ಲಿ ಗಂಟನ್ನ ಬಿಚ್ಚಿದಳು. ಆದರೆ

ಅಲಮೇಲಮ್ಮ ತಾನು ಮನೆಯಿಂದ ತಂದಿದ್ದ ಪುಳಿಯೋಗರೆ, ಅಕ್ಕಿ ರೊಟ್ಟಿಯನ್ನು ಬಸಮ್ಮನಿಗೂ, ಶಿವ ಪ್ರಕಾಶಿಗೂ ಕೊಟ್ಟು ಸ್ವಲ್ಪ ತುಪ್ಪವನ್ನು ಹಾಕಿದರು. ಎಲ್ಲರ ಊಟವಾದ ಮೇಲೆ ಅಲಮೇಲಮ್ಮ ಎಲ್ಲರಿಗೂ ಮಡಿಕೆಯಲ್ಲಿದ್ದ ತಣ್ಣನೆಯ ಮಜ್ಜಿಗೆಯನ್ನು ಕೊಟ್ಟು ತನ್ನ ಮಕ್ಕಳು, ಸೊಸೆಯರು, ಅಳಿಯಂದಿರ ವೃತ್ತಾಂತವನ್ನ ಹೇಳುತ್ತಾ ಬಸಮ್ಮನನ್ನು ಅಲ್ಲಿಯೇ ಕುರಿಸಿಕೊಂಡರು. ಶಿವ ಪ್ರಕಾಶಿ ಕೆರೆಯ ಪಕ್ಕದಲ್ಲಿದ್ದ ಮಾವಿನ ಮರದಲ್ಲಿ ಕೋಗಿಲೆಯೊಂದು ಹಾಡುವುದನ್ನ ಕೇಳಿಸಿಕೊಂಡು ಆ ಧ್ವನಿಯನ್ನು ಹುಡುಕಿಕೊಂಡು ತನ್ನ ನಾಯಿ ಮರಿಯ ಜೊತೆಗೆ ಮಾಯವಾದ. ಅವನ ಹಿಂದೆ ಕರಿಯನ ಬಿಳಿ ನಾಯಿಯು ಓಡಿತು. ಸ್ವಲ್ಪ ಸಮಯದ ನಂತರ ಶಿವ ಪ್ರಕಾಶಿ ಕಲ್ಲಲ್ಲಿ ಕೆಲವು ಮಾವಿನಕಾಯಿಗಳನ್ನು ಹೊಡೆದುಕೊಂಡು ಆ ಹುಳಿಯ ಮಾವಿನಕಾಯಿಗಳಲ್ಲಿ ಒಂದನ್ನು ತಿನ್ನುತ್ತಾ ಬಂದ. ವಸಂತಪ್ಪನವರು, ಅಲಮೇಲಮ್ಮ ಮತ್ತು ಬಸಮ್ಮ ಇನ್ನು ಅದು ಇದು ಮಾತನಾಡುತ್ತ ಹೊಂಗೆ ಮರದ ನೆರಳಿನಲ್ಲಿ ಕುಳಿತೇ ಇದ್ದರು. ಪ್ರಕಾಶಿಯ ಕಡೆ ನೋಡುತ್ತ ವಸಂತಪ್ಪನವರು “ಇವನ ಅಪ್ಪ ಎಲ್ಲಿದ್ದಾನೆ ಎಂದು ತಿಳಿಯಿತೇ ಬಸಮ್ಮ?” ಅಂದರು. “ಅಣ್ಣ ನಮ್ಮ ಕಡೆ ಹೆಬ್ಬೂರ ಹತ್ತಿರ ಸಿರಿವಾರದಲ್ಲೋ ಬಳಗೆರೆಯಲ್ಲೋ ಇದ್ದಾನೆ ಅಂತ ನನ್ನ ಅಕ್ಕನ ಮಗಳು ಹೇಳುತ್ತಾಳೆ, ಅವನು ಈಗ ಬರಬಹುದು, ಆಗ ಬರಬಹುದು ಅಂತ ನಾನು ಕಾದೆ. ಆದರೆ, ಅವನು ಬಂದ್ರು ನನ್ನ ಮಗಳಿಗೆ ನೆಮ್ಮದಿ ಇರಲ್ಲ. ಅಂತೂ ಇಂತೂ ನನ್ನ ಮಗಳ ಬಾಳು ನನ್ನ ಮುಂದೇನೆ ಹಾಳಾಯಿತು.
ದೇವರುಗಳು ಯಾಕ ಹಿಂಗ ಮಾಡುದ್ದವೋ ನನಗೂ ಗೊತ್ತಿಲ್ಲ” ಎಂದು ತನ್ನ ಕಣ್ಣಲ್ಲಿ ನೀರು ತುಂಬಿಕೊಂಡಳು. “ಈ ಮಗಿಗೆ ಆಗ ಇನ್ನು ಆರು ತಿಂಗಳಾಗಿತ್ತು. ನನ್ನ ಹೋಟೆಲಲ್ಲಿ ಒಂದು ಗೋಣಿಚೀಲದ ಮೇಲೆ ಅವನದೊಂದು ಪಂಚೆ ಹಾಸಿ ನನ್ನ ಮಗಳು ತನ್ನ ಈ ಕಂದನ್ನ ಮಲಗಿಸಿದ್ದಳು. ಏನೋ ಚಿಕ್ಕ ಗಲಾಟಿ. ಗಂಡ ಹೆಂಡತಿ ನಡುವೆ ಇದೆಲ್ಲಾ ಇದ್ದಿದ್ದೇ ಅಲ್ವಾ? ನಾನು ಸುಮ್ಮನಿದ್ದೆ. ಹೋಟೆಲಿಗೆ ಬಂದಿದ್ದ ಗಿರಾಕಿಗಳ ಮುಂದೆಯೇ ಅವಳಿಗೆ ಹೊಡೆದೆ ಬಿಟ್ಟ. ನನಗೂ ಹೊಡೆಯಲು ಬಂದ. ಅಷ್ಟರಲ್ಲಿ ಅಲ್ಲೇ ತಿಂಡಿ ತಿನ್ನುತ್ತಿದ್ದ ನಮ್ಮೂರಿನ ಪೊನ್ನಸ್ವಾಮಣ್ಣ ಅವನ ಕೊಳಪಟ್ಟಿ ಹಿಡಿದು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ “ನಿನ್ನ ಹೆಂಡತಿಗೆ ಏನು ಬೇಕಾದರೂ ಮಾಡು. ಆದ್ರೆ ವಯ್ಯಸ್ಸಾಗಿರೋ ನಿಮ್ಮ ಅತ್ತೆ ಮುಂದೆ ನಿನ್ನ ಪೌರುಷ ಏನು ತೋರುಸ ಬೇಡ” ಅಂದರು. ಅವ್ರಿಗೂ ಏನೋ ಅಂದ. ಅವರು ಒಂದು ಕಪಾಳಕ್ಕೆ ಬಾರಿಸಿದರು. ಆ ಕ್ಷಣಕ್ಕೆ ಅವನು ಕೋಪ ಮಾಡಿಕೊಂಡು ಮಲಗಿದ್ದ ತನ್ನ ಮಗುವನ್ನ ಪಕ್ಕಕ್ಕೆ ತಳ್ಳಿ ಕೆಳಗೆ ಹಾಸಿದ್ದ ಪಂಚೆಯನ್ನ ಎಳೆದುಕೊಂಡು ತನ್ನ ಬಟ್ಟೆಬರಿನ್ನೆಲ್ಲಾ ತಗೊಂಡು ಅಂದು ಹೋದವನು ಇಂದಿಗೂ ಇತ್ತ ತಲೆ ಹಾಕಿಲ್ಲ. ಆರು ವರ್ಷಗಳು ಆದವು. ಇಂದಿಗೂ ನಾನು ನನ್ನ ಮಗಳು ಭಯದಿಂದಲೇ ಕಾಲ ತಳ್ಳುತ್ತಿದ್ದೇವೆ. ಯಾವುದಾದರೂ ಹೊತ್ತಲ್ಲಿ ಮೆತ್ತಗೆ ಬಂದು ಈ ಮಗುನ ಕರೆದುಕೊಂಡು ಹೋದರೆ ನಮ್ಮ ಗತಿ ಏನು? ಎಂದು ದೊಡ್ಡ ಚಿಂತೆಯಾಗಿದೆ ನಮಗೆ” ಎಂದು ಬಸಮ್ಮ ತನ್ನ ಅಳಲನ್ನ ತೋಡಿಕೊಂಡಳು.
ವಸಂತಪ್ಪನವರು, ಅಲಮೇಲಮ್ಮ ಇಬ್ಬರೂ “ಏನು ಚಿಂತೆ ಮಾಡಬೇಡ ಬಸಮ್ಮ ಆ ಮೇಲುಕೋಟೆ ಚೆಲುವರಾಯಸ್ವಾಮಿ ನಿಮ್ಮನ್ನ ಕಾಪಾಡುತ್ತಾನೆ” ಎಂದು ಸಮಾಧಾನ ಮಾಡಿದರು. ಬಸಮ್ಮ ವಸಂತಪ್ಪನವರ ಹೊಲದಿಂದ ತನ್ನ ಹೊಲಕ್ಕೆ ಬಂದು ಸ್ವಲ್ಪ ಹೊತ್ತು ಕೆಲಸ ಮಾಡಿ ಸೂರ್ಯ ಪಶ್ಚಿಮದ ಕಡೆ ಜಾರುತ್ತಿದ್ದಂತೆ ತನ್ನ ಮೊಮ್ಮಗನನ್ನು ಕರೆದುಕೊಂಡು ನಾಯಿ ಮರಿಯನ್ನು ಎಳೆದುಕೊಂಡು ಸೋಮಿನಕೊಪ್ಪ, ಹಾರೇಗಟ್ಟೆ ಕಡೆ ನಡೆದುಕೊಂಡು ಸಂತೇಕಡೂರು ಸೇರಲು ಬೇಗ ಬೇಗ ಹೆಜ್ಜೆ ಹಾಕಿದಳು. ತನ್ನ ಮೊಮ್ಮಗ ಕೇಳುತ್ತಿದ್ದ ನೂರಾರು ಪ್ರಶ್ನೆಗಳಿಗೆಲ್ಲಾ ತನಗೆ ತಿಳಿದಷ್ಟೂ ಉತ್ತರಿಸುತ್ತ ಸಾಗುತ್ತಿದ್ದಳು. ಶಿವ ಪ್ರಕಾಶಿ ” ಅಜ್ಜಿ, ಕರಡಿಕಲ್ಲಿನಿಂದ ಈಗ ಕರಡಿಗಳು ನಮ್ಮನ್ನ ಅಟ್ಟಿಸಿಕೊಂಡು ಬಂದರೆ ಏನು ಮಾಡೋದು?” ಎಂದು ಭಯದಿಂದ ಕೇಳಿದ. ಕರಡಿಕಲ್ಲು ಬಸಮ್ಮನ ಹೊಲದ ಪೂರ್ವಕ್ಕೆ ಇರುವ ಒಂದು ಕಲ್ಲಿನ ಚಿಕ್ಕ ಗುಡ್ಡ. ಅಲ್ಲಿ ಹಿಂದೆ ಯಾವಾಗಲೋ ಕರಡಿಗಳು ವಾಸಿಸುತ್ತಿದ್ದವಂತೆ. ಅದಕ್ಕೆ ಆ ಗುಡ್ಡಕ್ಕೆ “ಕರಡಿಕಲ್ಲು” ಎಂದು ಹೆಸರು ಬಂದಿದೆ. ಅವನು ಆ ರೀತಿ ಭಯದಿಂದ ಕೇಳುವ ಹೊತ್ತಿಗೆ ಸೋಮಿನಕೊಪ್ಪ ಲಂಬಾಣಿ ತಾಂಡದ ಹನುಮನಾಯ್ಕ ತನ್ನ ಸೈಕಲಿನಲ್ಲಿ ಬಸಮ್ಮನ ಎದುರಿಗೆ ಬಂದು ವಿನಾಯಕ ನಗರಕ್ಕೆ ಹೋಗುತ್ತಿದ್ದ. “ಬಸವ್ವೋ ಕತ್ತಲಾಗತ ಬಂದಿದೆ, ಬೇಗ ಊರು ಸೇರಕೊ” ಎಂದು ಹೇಳಿ ಅವನು ವಿನಾಯಕ ನಗರದ ಕಡೆ ಸಾಗಿದ.
ಹನುಮನಾಯ್ಕ ಅತ್ತ ಸಾಗಿದ್ದರಿಂದ ಶಿವ ಪ್ರಕಾಶಿಗೆ ಸ್ವಲ್ಪ ಸಮಾಧಾನವಾಯಿತು. ಸ್ವಲ್ಪ ಮುಂದೆ ಸೋಮಿನಕೊಪ್ಪದಿಂದ ಇಬ್ಬರು ಲಂಬಾಣಿ ಹ್ಯಾಡಿಗಳು ಹಾರೇಗಟ್ಟೆ ಕಡೆ ನಡೆದುಕೊಂಡು ಹೋಗುತ್ತಿದ್ದರು. ಅವರು ಈಗ ಬಸಮ್ಮನಿಗೆ ಜೊತೆಯಾದರು. ಆ ಹ್ಯಾಡಿಗಳಿಬ್ಬರು ಹಾರಗಟ್ಟೆಯಲ್ಲಿ ಸೇಟುವಿನ ಸಾರಾಯಿ ಅಂಗಡಿಯ ಒಳಗೆ ಹೋಗಿ ಮಾಯವಾದರು. ಹಾರೇಗಟ್ಟೆ ದಾಟಿ ಮೂರನೇ ಮೈಲು ಕಲ್ಲು ದಾಟುವುದರೊಳಗಾಗಿ ಕತ್ತಲು ಆವರಿಸಿತು. ಅದು ಶಿವಮೊಗ್ಗದಿಂದ ಲಕ್ಕವಳ್ಳಿ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿಗೆ ಹೋಗುವ ಮುಖ್ಯ ರಸ್ತೆಯಾದ್ದರಿಂದ ಆಗೊಬ್ಬರು ಈಗೊಬ್ಬರು ಸೈಕಲಿನಲ್ಲೋ, ಸ್ಕ್ಕೂಟರುಗಳಲ್ಲೋ ಓಡಾಡುತ್ತಿದ್ದರು. ಇಲ್ಲವಾದರೆ ಅಪರೂಪಕ್ಕೊಮ್ಮೆ ಕೆಲವು ಬಸ್ಸುಗಳು ಬರುತ್ತಿದ್ದವು. ಶಿವ ಪ್ರಕಾಶಿಗೆ ಈಗ ಸ್ವಲ್ಪ ಸಮಾಧಾನವಾಯಿತು. ಅಲ್ಲಿಂದ ಸಂತೇಕಡೂರು ಒಂದು ಮೈಲು ಮಾತ್ರ.
ಈಗ ಇದುವರೆಗೆ ನಡೆಯುತ್ತಿದ್ದ ಚಿತ್ರಣವೇ ಕ್ಷಣಮಾತ್ರದಲ್ಲಿ ಬದಲಾಯಿತು. ಕಾಲಚಕ್ರವೇ ಅತೀ ವೇಗದಲ್ಲಿ ತಿರುಗಿದಂತಾಯಿತು. ಅದೊಂದು ದೊಡ್ಡ ವಿಮಾನ ನಿಲ್ದಾಣ. ಅದರ ಪಕ್ಕದಲ್ಲಿಯೇ “ಶಿವಮೊಗ್ಗ ಮಹಾನಗರಕ್ಕೆ ಸುಸ್ವಾಗತ”, “Welcome to Shivamogga town” ಎಂದು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲೂ ಬರೆದಿದ್ದಾರೆ. ನೂರಾರು ವಿಮಾನಗಳು ವಿಶ್ವದ ಹಲವು ಮಹಾನಗರಗಳಿಂದ ಬಂದು ಕೆಳಗೆ ಇಳಿಯುತ್ತಿವೆ, ಹಲವಾರು ವಿಮಾನಗಳು ಬೇರೆ ಬೇರೆ ರನ್ ವೇಗಳ ಮೂಲಕ ಮೇಲೆ ಮೇಲೆ ಏರುತ್ತಿವೆ. ಈಗ ಅಮೇರಿಕಾದಿಂದ ಬಹುದೊಡ್ಡ ಬೋಯಿಂಗ್ ವಿಮಾನವೊಂದು ರನ್ ವೇ ಮೇಲೆ ಕೆಳಗೆ ಇಳಿಯುತಿದೆ.

ಬಸಮ್ಮ ತನ್ನ ಗುದ್ದಲಿಯನ್ನು ಹೆಗಲಿಗೆ ನೇತಾಕಿಕೊಂಡು ಆ ರನ್ ವೇ ಮೇಲೆ ನಿಧಾನವಾಗಿ ನಡೆಯುತ್ತಿದ್ದಾಳೆ. ಈಗ ಇದ್ದಕ್ಕಿದ್ದಂತೆ ಮೈಕಿನಲ್ಲಿ ಯಾರೋ ಜೋರಾಗಿ ಘೋಷಣೆ ಕೂಗುತ್ತಿದ್ದಾರೆ. “ಇನ್ನೇನು ಕೆಲವೇ ಕ್ಷಣಗಳಲ್ಲಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಡೆಯೂರು ಸಿದ್ಧಲಿಂಗಪ್ಪನವರು ಹಾಗು ನಮ್ಮ ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ವಿನಾಯಕ ದಾಮೋದರ ಮೋದಿಯವರು ಈ ಅಂತರಾಷ್ರ್ಟ್ರೀಯ ವಿಮಾನ ನಿಲ್ದಾಣವನ್ನು ದೇಶಕ್ಕೆ ಸಮರ್ಪಣೆ ಮಾಡಲು ಆಗಮಿಸುತ್ತಿದ್ದಾರೆ. ನೀವೆಲ್ಲರೂ ಅವರಿಗೆ ಜಯಘೋಷ ಕೂಗುತ್ತ ಬರಮಾಡಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ”. ಬಸಮ್ಮನಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ. ಈಗ ಹಿಂದೆ ತಿರುಗಿ ನೋಡುತ್ತಾಳೆ. ಬಹುದೊಡ್ಡ ವಿಮಾನ ದೂರದಲ್ಲಿ ಅವಳ ಕಡೆಗೆ ಬರುತ್ತಿರುವುದು ಕಂಡು ಓಡಲಾರಂಭಿಸುತ್ತಾಳೆ. ಈಗ ಆ ವಿಮಾನದ ವೇಗ ಹೆಚ್ಚುತ್ತದೆ. ಅವಳು ಭಯದಿಂದ ಇನ್ನು ವೇಗವಾಗಿ ಓಡುತ್ತಾಳೆ. ಆ ವಿಮಾನದ ವೇಗ ಇನ್ನು ಹೆಚ್ಚುತ್ತದೆ. ಬಸಮ್ಮಆ ರನ್ ವೇ ಇಂದ ಪಕ್ಕಕ್ಕೆ ಓಡುವುದರ ಬದಲು ಆ ರನ್ ವೇ ಮೇಲೆಯೇ ನೇರವಾಗಿ ಓಡುತ್ತಿದ್ದಾಳೆ.
ಈಗ ಅವಳು ಆ ವಿಮಾನದ ಗಾಲಿಗಳಿಗೆ ಸಿಗುವ ಸಂಭವ ಹೆಚ್ಚಾಗಿದೆ. “ಯಾರೋ ನೀವು? ನನ್ನ ಹೊಲದಲ್ಲಿ ವಿಮಾನ ಬಿಡುತ್ತಿರುವವರು?” ಎಂದು ಕೂಗಿಕೊಳ್ಳುತ್ತಿದ್ದಾಳೆ. ಅವಳ ಕೂಗು ಯಾರಿಗೂ ಕೇಳುತ್ತಿಲ್ಲ. ಕೊನೆಗೆ ವಿಧಿಯಿಲ್ಲದೇ “ತಂದೆ ಎಡೆಯೂರು ಸಿದ್ದಲಿಂಗೇಶ್ವರ ಕಾಪಾಡು ನನ್ನಪ್ಪ” ಎಂದು ಆ ಮಹಾ ಶಿವಯೋಗಿಯನ್ನು ಜೋರಾಗಿ ಕರೆಯುತ್ತಿದ್ದಾಳೆ. ಅವಳ ಆರ್ತನಾದವನ್ನು ಕೇಳಿ ಮೈಸೂರಿನ ತನ್ನ ಅರಮನೆಯಂತಹ ಭವ್ಯಬಂಗಲೆಯ ಮಲಗುವ ಕೋಣೆಯ ಹಾಸಿಗೆಯ ಮೇಲಿಂದ ತಾನು ಇದುವರೆಗೂ ಕಂಡದ್ದು ದುಃಸ್ವಪ್ನವೆಂದು ಅರಿಯದೆ ಡಾ. ಶಿವ ಪ್ರಕಾಶ್ “ಯಾವನೋ ಅವನು ನನ್ನ ಅಜ್ಜಿಯ ಹೊಲವನ್ನ ಏರ್ ಪೋರ್ಟ್ ಮಾಡಿ ನನ್ನ ಅಜ್ಜಿಗೆ ತೊಂದರೆ ಕೊಡುತ್ತಿರುವುದು?” ಎಂದು ಜೋರಾಗಿ ಕೂಗುತ್ತ ಎದ್ದು ಕುಳಿತ. ತನ್ನ ಸಂಗಾತಿ ಮಧ್ಯರಾತ್ರಿ ಈ ರೀತಿ ವಿಚಿತ್ರವಾಗಿ ಕೂಗಿಕೊಂಡು ಎದ್ದದ್ದನ್ನು ನೋಡಿ ಅವನ ಹೆಂಡತಿ ಡಾ. ಪ್ರಣತಿ ಥಟ್ಟನೆ ಭಯದಿಂದ ಎದ್ದು ತನ್ನ ಗಂಡನಿಗೆ ಸಮಾಧಾನ ಮಾಡಿದಳು. ತಮ್ಮ ಅಪ್ಪ ಈ ರೀತಿ ಕೂಗಿಕೊಂಡದ್ದನ್ನ ಕಂಡ ಪಕ್ಕದಲ್ಲಿಯೇ ಮಲಗಿದ್ದ ಅವನ ಏಳು ವರ್ಷದ ಅವಳಿ ಹೆಣ್ಣು ಮಕ್ಕಳಾದ “ನಿಹಾರಿಕ” ಮತ್ತು “ಸಾಗರಿಕ” ಕೂಡ ಭಯದಿಂದ ಎಂದು ತಮ್ಮ ಅಪ್ಪನನ್ನ ನಿದ್ರೆಗಣ್ಣಿನಲ್ಲಿಯೇ ತಬ್ಬಿಕೊಂಡರು.
ಪ್ರಣತಿ “ಏನಾಯ್ತು ಪ್ರಕಾಶ್ ನಿಮಗೆ?” ಎಂದು ಸ್ವಲ್ಪ ಸಮಾಧಾನದಿಂದ ಕೇಳಿದಳು.
“ಏನು ಇಲ್ಲ. ನೆನ್ನೆ ನ್ಯೂಸ್ ಪೇಪರಲ್ಲಿ ಶಿವಮೊಗ್ಗ ಸಮೀಪ ನಮ್ಮ ಹೊಲ ಇದ್ದ ಜಾಗದಲ್ಲಿ ಈಗ ಏರ್ ಪೋರ್ಟ್ ಆಗಿರುವ ಬಗ್ಗೆ ಸುದ್ದಿ ಓದಿದ್ದೆ. ನನ್ನ ಸ್ಮೃತಿಪಟಲದ ಆಳದಿಂದ ಹಳೆಯದೆಲ್ಲಾ ಜ್ಞಾಪಕಕ್ಕೆ ಬಂತು. ನನ್ನ ಅಜ್ಜಿ ಅಷ್ಟು ದೂರ ಬರಿಗಾಲಲ್ಲಿ ನಡೆದುಕೊಂಡು ಹೋಗಿ ನನಗೋಸ್ಕರ ಕಷ್ಟ ಪಡುತ್ತಿದ್ದದ್ದೆಲ್ಲಾ ನೆನಪಾಯ್ತು. ಅದು ಈಗ ಕನಸಿನ ರೂಪದಲ್ಲಿ ಮರುಕಳಿಸಿತು ಅನಿಸುತ್ತೆ! ಈಗ ಭಯಪಡುವಂತದ್ದು ಏನು ಆಗಿಲ್ಲ, ಚೆನ್ನಾಗಿ ನಿದ್ರೆ ಮಾಡು” ಎಂದು ಹೇಳಿ ತನ್ನ ಮಕ್ಕಳನ್ನ ತಬ್ಬಿಕೊಂಡು ತಾನು ಮಲಗಿದ.






0 Comments