ಪ್ರಶಸ್ತಿ ಪಡೆಯುವುದು ನನಗೆ ಕಸಿವಿಸಿಯಾಗುತ್ತದೆ…

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಹತ್ವದ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ದೇವನೂರು ಮಹಾದೇವ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿತು.

ಕನ್ನಡದ ಜುಟ್ಟಿಗೆ ಎಲ್ಲಾ ಸರ್ಕಾರಗಳೂ ಮಲ್ಲಿಗೆ ಹೂವನ್ನು ಮುಡಿಸುವ ಮಾತನ್ನೇ ಆಡಿಕೊಂಡು ಬರುತ್ತಿವೆ. ಆದರೆ ವಾಸ್ತವದಲ್ಲಿ ಏನೂ ಆಗಿಲ್ಲ ಎಂದು ವಿಷಾದಿಸುತ್ತಾ ಪ್ರಶಸ್ತಿ ಪಡೆಯುವುದು ನನಗೆ ಕಸಿವಿಸಿ ಎನ್ನುವುದುನ್ನು ದೇವನೂರು ಸ್ಪಷ್ಟವಾಗಿ ಹೇಳಿದ್ದಾರೆ.

ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇವರಿಗೆ.

ಮಾನ್ಯರೇ

ವಿಷಯ: ನೃಪತುಂಗ ಪ್ರಶಸ್ತಿ ಪಡೆಯಲೋಸುಗ

ಉಲ್ಲೇಖ: ಕಸಾಪ/ದತ್ತಿ/ಬಿ.ಎಂ.ಟಿ.ಸಿ/2010-11/ 8-54 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಾ ಈ ಸಂದರ್ಭದಲ್ಲಿ- ಒಂದು ವಿನಂತಿಯನ್ನು ತಮ್ಮ ಮುಂದಿಡುವೆ:

ಉನ್ನತ ಶಿಕ್ಷಣದವರೆಗೂ ಕನ್ನಡ ಮಾಧ್ಯಮವಾಗುವುದನ್ನೇ ಹಂಬಲಿಸುತ್ತಾ, ಅದನ್ನು ಕಾಣದೆ ಕಣ್ಮುಚ್ಚಿದ ಮಹಾಕವಿ ಕುವೆಂಪು ಅವರನ್ನು ನೆನೆಸಿಕೊಳ್ಳುತ್ತಾ, ಹಾಗೇ ‘ಕನ್ನಡ ಶಿಕ್ಷಣ ಮಾಧ್ಯಮಕ್ಕಾಗಿ ಚಿಕ್ಕ ಹುಡುಗನಾಗಿದ್ದಾಗ ಪ್ಲೆಕಾರ್ಡ್ ಹಿಡಿದುಕೊಂಡು ಕೂಗಾಡುತ್ತಿದ್ದೆ. ಈಗ ವಯಸ್ಸಾದ ಮೇಲೆ ಕೋಲು ಹಿಡಿದುಕೊಂಡು ಅದೇ ಬೇಡಿಕೆ ಕೇಳುತ್ತಿದ್ದೇನೆ, ಪರಿಸ್ಥಿತಿಯಲ್ಲಿ ಏನೂ ವ್ಯತ್ಯಾಸವಾಗಲಿಲ್ಲ, ನನಗೆ ವಯಸ್ಸಾದದ್ದೊಂದನ್ನು ಬಿಟ್ಟು’ ಎನ್ನುತ್ತಿದ್ದ ಡಾ|| ಹಾ.ಮಾ. ನಾಯಕರ ಮಾತುಗಳೂ ಅವರೊಡನೇ ಕಾಲವಶವಾಗಿವೆ.

ಈಗಿನ ಕನ್ನಡದ ಪರಿಸ್ಥಿತಿ ನೋಡಿದರಂತೂ ಕನ್ನಡವು ಶಿಕ್ಷಣ ಮಾಧ್ಯಮವಾಗದೆ ಕನ್ನಡದ ಪಾದಗಳು ಶಕ್ತಿಹೀನವಾಗಿ, ನಡೆಯಲು ಕಷ್ಟಪಡುತ್ತ ಕಂಕುಳುಕೋಲು ಹಿಡಿದುಕೊಂಡು ಯಾತನಾಮಯವಾಗಿ ನಡೆಯುತ್ತಿರುವಂತೆ ಕಾಣುತ್ತದೆ. ಇಲ್ಲಿಯವರೆಗಿನ ಎಲ್ಲಾ ಸರ್ಕಾರಗಳೂ ಕನ್ನಡದ ಬಗ್ಗೆ ಜುಟ್ಟಿಗೆ ಮಲ್ಲಿಗೆ ಹೂ ಮಾತಾಡಿಕೊಂಡೇ ಬಂದಿವೆ.

ಹೀಗಿರುವಾಗ- ಕನ್ನಡ ಸಂಘವೋ ಅಥವಾ ಕನ್ನಡ ಸಾಹಿತ್ಯ ಪರಿಷತ್ತೋ ಕೊಡಮಾಡುವ ಯಾವುದೇ ಪ್ರಶಸ್ತಿ ಪಡೆಯುವುದು ಅಥವಾ ಅವು ನಡೆಸುವ ಯಾವುದೇ ಸಮ್ಮೇಳನಗಳಲ್ಲಿ ಭಾಗವಹಿಸುವುದು ನನಗೆ ಕಸಿವಿಸಿಯಾಗುತ್ತದೆ. ಇಂದಿನ ವ್ಯಾವಹಾರಿಕ ಕಾರಣಕ್ಕಾಗಿ ಒಂದು ಭಾಷೆಯಾಗಿ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಮಾಧ್ಯಮವನ್ನು ಮಾತೃಭಾಷೆಯನ್ನಾಗಿಸುವ ವಿಚಾರ ವಿವೇಕವಾಗದೆ ನಗೆಪಾಟಲಾಗಿರುವ ದುರಂತಕ್ಕೆ ಕಾರಣರು ಯಾರು?

ಆದ್ದರಿಂದ ನನ್ನ ಬೇಡಿಕೆ- ಈಗಲಾದರೂ ನಮ್ಮ ಸರ್ಕಾರ ಹೃತ್ಪೂರ್ವಕತೆ ಮತ್ತು ಇಚ್ಛಾಶಕ್ತಿ ಪಡೆದು- ‘ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ರಾಜ್ಯ ಭಾಷೆ ಅಥವಾ ಮಾತೃಭಾಷೆಯ ಶಿಕ್ಷಣ ಮಾಧ್ಯಮ ಜಾರಿಗೆ ತರುತ್ತೇನೆ’ ಎಂದು ಘೋಷಿಸಿದರೆ ಅಥವಾ ಕನ್ನಡ ಸಾಹಿತ್ಯ ಪರಿಷತ್ ‘ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ರಾಜ್ಯ ಭಾಷೆ ಅಥವಾ ಮಾತೃಭಾಷೆಯ ಶಿಕ್ಷಣಮಾಧ್ಯಮವನ್ನು ಜಾರಿಗೆ ತರುವವರೆಗೂ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸದೆ, ರಾಜ್ಯಭಾಷೆ ಅಥವಾ ಮಾತೃಭಾಷೆ ಎಂದರೆ ಕನ್ನಡ ಶಿಕ್ಷಣಮಾಧ್ಯಮಕ್ಕಾಗಿ ಹೋರಾಡುತ್ತದೆ’ ಎಂದು ಘೋಷಿಸಿದ ನಾಳೆಗೇ ಕನ್ನಡ ಸಾಹಿತ್ಯ ಪರಿಷತ್ ಕಛೇರಿಗೆ ಬಂದು ನಾನು ಈ ಪ್ರಶಸ್ತಿ ಪಡೆಯುತ್ತೇನೆ, ಜೊತೆಗೇ ಈ ಕನ್ನಡ ಶಿಕ್ಷಣಮಾಧ್ಯಮದ ಹೋರಾಟದಲ್ಲಿ ನಾನೂ ನಿಮ್ಮೊಂದಿಗೆ ಜೊತೆಗೂಡುತ್ತೇನೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ವಿನಂತಿಸುತ್ತೇನೆ. ಅಲ್ಲಿಯವರೆಗೂ ಕ್ಷಮೆ ಇರಲಿ.

 

ಇತಿ, ವಂದನೆಗಳೊಂದಿಗೆ,

ದೇವನೂರ ಮಹಾದೇವ

ಗಮನ:

ತಾವು ಪ್ರಕಟಣೆಗಾಗಿ ಕೇಳಿರುವ ನನ್ನ ಒಂದು ಕೃತಿಯನ್ನು ಈ ಮನವಿ ಪತ್ರದೊಂದಿಗೆ ಕಳುಹಿಸುತ್ತಿದ್ದೇನೆ.

 

‍ಲೇಖಕರು G

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

2 ಪ್ರತಿಕ್ರಿಯೆಗಳು

  1. ಉಷಾಕಟ್ಟೆಮನೆ

    ಕೇಂದ್ರ ಸರಕಾರ ಕೊಡುವ [ಪದ್ಮಶ್ರೀ ಆಗಿರಬೇಕು, ನನಗೆ ನೆನಪಿರುವಂತೆ] ಪ್ರಶಸ್ತಿ ತಮಗೆ ಅನೌನ್ಸ್ ಆಗುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ತಮ್ಮ ದೂರವಾಣಿಯನ್ನು ಸ್ಥಗಿತಗೊಳಿಸಿ, ಯಾರಿಗೂ ಸಿಗದಂತೆ ಕಾಣೆಯಾಗಿ,ಪ್ರಶಸ್ತಿಯನ್ನು ತಿರಸ್ಕರಿಸಿದ ಮಹಾನ್ ಮುಜುಗರದ ಸ್ವಾಭಿಮಾನಿ ಮನುಷ್ಯ ಅವರು. ದೇವನೂರಿಗೆ ದೇವನೂರೇ ಸಾಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: