ನೂತನ ದೋಶೆಟ್ಟಿ ‘ಮನೆ-ಮನ’

 ನೂತನ ದೋಶೆಟ್ಟಿ

ಆಪ್ತರನ್ನು ಮನೆಗೆ ಆಮಂತ್ರಿಸಿ ಅವರೊಂದಿಗೆ ಒಂದಿಷ್ಟು ಹೊತ್ತನ್ನು ಮಾತು, ಹರಟೆ, ನಗುವಿನೊಂದಿಗೆ ಕಳೆಯಬೇಕು ಎಂಬುದು ನನ್ನ ಬಹು ದಿನದ ಬಯಕೆಯಾಗಿತ್ತು. ಅದಕ್ಕೆ ಇದೇ ನವೆಂಬರ್ ತಿಂಗಳು ಕಾಲ ಕೂಡಿ ಬಂದಿದ್ದು ತೀರ ಆಕಸ್ಮಿಕ. ನಮ್ಮ ಮನೆ ‘ಸರ್ವಮಂಗಳ ’ ದ ಮೊದಲ ಅಂತಸ್ತನ್ನು ಕಟ್ಟಿ ಮುಗಿದ ಮೇಲೆ ಅದಕ್ಕೆ ನಿಜವಾದ ರೂಪ ಬರ ಹತ್ತಿತು.

ನಮ್ಮದು ಪರಿಸರ ಸ್ನೇಹಿ ಮನೆ. ಅದಕ್ಕೆ ತಕ್ಕದಾದ ಥೀಮ್ ಇರಬೇಡವೇ ? ಆ ನಿಟ್ಟಿನಲ್ಲಿ ಮೊದಲು ಹೊಳೆದದ್ದು ಆಮಂತ್ರಣ ಪತ್ರಿಕೆ. ಅದನ್ನು ಕರವಸ್ತ್ರದಲ್ಲಿ ಮಾಡಿದರೆ ನಮ್ಮ ಪರಿಸರ ಕಾಳಜಿಗೆ ಹೊಂದುತ್ತದಲ್ಲವೇ ಎಂದು ಅನ್ನಿಸಿದ್ದೇ ಕಲಾವಿದರಾದ, ನಮ್ಮ ಬಡಾವಣೆಯಲ್ಲಿ ಇರುವ ಆಪ್ತರಾದ ನಾಗನಾಥ ಅವರಿಗೆ ಫೋನಾಯಿಸಿದೆ.

ಉತ್ಸಾಹದಿಂದ ಕಾರ್ಯಪ್ರರ್ವತ್ತರಾದ ಅವರು ಕೈ ಬರಹದಲ್ಲಿ ನಾನು ಕೊಟ್ಟ ವಿಷಯವನ್ನು ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಬರೆದರು. ಅದನ್ನು ಕರವಸ್ತ್ರಕ್ಕೆ ಅಳವಡಿಸಿ ನಮಗೆ ಅದು ಒಪ್ಪಿಗೆಯಾದ ಮೇಲೆ ಅದನ್ನು ತಮ್ಮ ಸ್ನೇಹಿತರ ಬಳಿ ಸ್ಕ್ರೀನ್ ಪ್ರಿಂಟಿಂಗಿಗೆ ಕಳಿಸಿದರು. ಈ ಆಪ್ತ ವಿಧಾನ ಎಲ್ಲರಲ್ಲೂ ಉತ್ಸಾಹವನ್ನು ತುಂಬಿತ್ತು. ಇದರಲ್ಲಿ ಒಳಗೊಂಡ ಎಲ್ಲರೂ ಇದನ್ನು ತಮ್ಮದೇ ಕೆಲಸ ಎಂಬಷ್ಟು ಶ್ರದ್ಧೆಯಿಂದ ಮಾಡಿದ್ದು ಬಹಳ ಖುಷಿ ತಂದ ವಿಚಾರ.

ಅಂದವಾದ ಕರವಸ್ತ್ರದ ಕರೆಯೋಲೆ ಮನೆಗೆ ಬಂದ ಮೇಲೆ ಅದನ್ನು ವಿತರಿಸಲು ಅನುಕೂಲವಾಗುವಂತೆ ಮಡಚಿ ಅದಕ್ಕೆ ಬಂಗಾರದ ಬಣ್ಣದ ಝರಿಯ ದಾರವನ್ನು ಸುತ್ತಿದೆ. ಇದೀಗ ಅದು ಕೈಯಲ್ಲಿ ಹಿಡಿಯಲು ಹಾಗೂ ಕೊಡಲು ಒಪ್ಪವಾಗಿ ಅನುವಾಯಿತು. ಅದರ ವಿತರಣೆಯ ಸೊಗಸೇ ಬೇರೆ. ನೀಡಿದವರೆಲ್ಲರೂ ಅದಕ್ಕೆ ಮೋಹಿತರಾದವರೆ.

ಪ್ರತಿ ಬಾರಿಯೂ ನನ್ನ ಮನಸ್ಸು ನಲಿಯಿತು. ಒಬ್ಬ ಸ್ನೇಹಿತರು ಅದನ್ನು ನೋಡಿ ಓ, ನನಗೆ ಹೆಲ್ಮೆಟ್ ಕೆಳಗೆ ಹಾಕಿಕೊಳ್ಳಲು ಬೇಕಾಗಿತ್ತು ಎಂದು ತುಸು ವ್ಯಂಗ್ಯವಾಡಿದರು. ಆಗ ನಾನು ಅದೇ ನನ್ನ ಉದ್ದೇಶ. ಹೇಗಾದರೂ ಅದು ಉಪಯೋಗಕ್ಕೆ ಬರಬೇಕು. ಕಸಕ್ಕೆ ಸೇರಬಾರದು. ನೀವು ಅದನ್ನು ಬಳಸಿದರೆ ನನ್ನ ಉದ್ದೇಶ ಸಾರ್ಥಕ ಎಂದಾಗ ಹುಳ್ಳಗಾದರೂ ನಸುನಕ್ಕರು. ಈಗಲೂ ಕೆಲವರು ಅದನ್ನು ಜೇಬಿನಲ್ಲಿಟ್ಟುಕೊಂಡು ಮುಖ ಒರೆಸಲು ಬಳಸುವುದನ್ನು ಕಂಡೂ ಕಾಣದಂತೆ ಸಾರ್ಥಕತೆಯನ್ನು ಅನುಭವಿಸುತ್ತೇನೆ.

ನಮ್ಮ ಮನೆಯ ಮೇಲ್ಛಾವಣಿಯಲ್ಲಿ ೩ ಕಿ.ವ್ಯಾ. ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕವನ್ನು ಸ್ಥಾಪಿಸಿದ್ದೇನೆ. ಇದು ನನ್ನ ಮನೆಯ ವಿದ್ಯುತ್‌ನ್ನು ಒದಗಿಸುವುದರೊಂದಿಗೆ ಅದನ್ನು ಇತರರಿಗೂ ಹಂಚಬಲ್ಲ ಸಾಮಥ್ಯವನ್ನು ಹೊಂದಿದೆ. ಇದು ನನ್ನ ಇನ್ನೊಂದು ಕನಸು. ಲಕ್ಷ ಲಕ್ಷ ಖರ್ಚು ಮಾಡಿ ಮನೆ ಕಟ್ಟುವ ಜನ ಪುಕ್ಕಟೆಯಾಗಿ ಸಿಗುವ ವಿದ್ಯುತ್ ಪಡೆಯಲು ಸೋಲಾರ್ ಘಟಕಕ್ಕೆ ತಗುಲುವ ೨-೩ ಲಕ್ಷ ಮೊತ್ತಕ್ಕೆ ‘ವೇಸ್ಟ್’ ಎಂದು ಕಡೆಗಣಿಸುತ್ತಾರೆ.

ಆಕಾಶವಾಣಿಯಲ್ಲಿ ಕೆಲಸ ಮಾಡುವ ನಾನು ಇಂಥ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಲು ಕಾರ್ಯಕ್ರಮ ಮಾಡುವುದರ ಜೊತೆಗೆ ಅದನ್ನು ಪಾಲಿಸುವುದರ ಮೂಲಕ ಜಾಗೃತಿಯನ್ನು ಮುಂದಿನ ಸ್ತರಕ್ಕೆ ಒಯ್ಯಬೇಕು ಎಂದು ಅದನ್ನು ನನ್ನ ಮನೆಯಲ್ಲಿ ಸ್ಥಾಪಿಸಿದೆ. ಅದರ ಬಿಡುಗಡೆಗೆ ನಮ್ಮ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಕೃಷ್ಣ ಬೈರೇಗೌಡ ಅವರನ್ನು ಕೇಳಿದಾಗ ಅವರು ತಮ್ಮ ಅಂದಿನ ಗಡಿಬಿಡಿಯ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಬರುವುದಾಗಿ ಹೇಳಿದರು.

ಗ್ರಾಮೀಣ ಭಾಗಗಳಲ್ಲಿ ಹಾಗೂ ಬಹಳ ಹಿಂದುಳಿದ ಜನವಸತಿಗಳಲ್ಲಿ ಉಚಿತವಾಗಿ ವಿದ್ಯುತ್ತನ್ನು ಪೂರೈಸುವ ಕುರಿತು ಅಧಿಕಾರ ಇರುವವರು ಯೋಚಿಸಬೇಕೆನ್ನುವುದು ನನ್ನ ಉದ್ದೇಶವಾಗಿತ್ತು. ಅವರ ಬರುವಿಕೆ ಅದಕ್ಕೆ ಇಂಬು ಕೊಟ್ಟಿತು.

ಜೊತೆಗೆ ಅವರ ಪತ್ನಿ ಮೀನಾಕ್ಷಿ ಬೈರೇಗೌಡ ಅವರು ಬೆಳಿಗ್ಗೆ ಬೇಗನೇ ಬಂದು ಸಂಭ್ರಮದಿಂದ ಎಲ್ಲ ಕಡೆ ಓಡಾಡಿ, ಸಾಕಷ್ಟು ಫೋಟೊ ಕ್ಲಿಕ್ಕಿಸಿ, ತಾವೂ ತಮಗೆ ಖುಷಿ ಕೊಟ್ಟ ಕಡೆ ನಿಂತು ಫೋಟೋ ತೆಗೆಸಿಕೊಂಡು ಅದನ್ನು ಕೃಷ್ಣಬೈರೇಗೌಡ ಅವರ ವೆಬ್‌ಸೈಟಿನಲ್ಲಿ ಕೂಡಲೇ ಅಪ್‌ಲೋಡ್ ಮಾಡಿದರು. ಬಿಡುವು ಮಾಡಿಕೊಂಡು ಬಂದ ಕೃಷ್ಣಬೈರೇಗೌಡರು ಇದನ್ನು ಟ್ವೀಟ್ ಮಾಡಿ ಎಲ್ಲರೂ ಇದನ್ನು ಪಾಲಿಸಲು ಕರೆಕೊಟ್ಟಿದ್ದು ನನ್ನ ಸಾರ್ಥಕ ಭಾವವನ್ನು ಇನ್ನಷ್ಟು ಹೆಚ್ಚಿಸಿತು.

ಇದೇ ಸಂದರ್ಭದಲ್ಲಿ ನನ್ನ ಪ್ರಕಟಿತ ಲೇಖನಗಳ ಸಂಗ್ರಹ ‘ಸಾಹಿತ್ಯ ಲೋಕ- ಮರೆಯಾಯಿತೆ ಪ್ರಜಾಸತ್ತೆ?’ಯನ್ನು ಬಿಡುಗಡೆಗೊಳಿಸುವ ಕಾರ್ಯವನ್ನೂ ಹಮ್ಮಿಕೊಂಡಿದ್ದೆ. ಇದಕ್ಕಾಗಿ ಮೂರು ದಶಕಗಳ ಮೊದಲು ನನ್ನ ಅಧ್ಯಾಪಕರಾಗಿದ್ದು ನಂತರ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಆಗಿ ನಿವೃತ್ತರಾದ ಎಸ್ ಎಮ್ ಹೆಗಡೆ ಸರ್, ಅದೇ ಸಮಯದಲ್ಲಿ ನನ್ನ ಸಂಗೀತ ಶಿಕ್ಷಕರಾಗಿದ್ದ ಜಯಲಕ್ಷ್ಮಿ ಹೆಗಡೆ, ಬೆಂಗಳೂರು ವಿಶ್ವವಿದ್ಯಾಲಯದ ಡೀನ್ ಆಗಿದ್ದ ಡಾ ಎಚ್.ಎಸ್. ಈಶ್ವರ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾಗಿದ್ದ ಎ. ಮುರಿಗೆಪ್ಪ ಹಾಗೂ ಪ್ರಜಾವಾಣಿಯಲ್ಲಿ ಸಹ ಸಂಪಾದಕರಾಗಿದ್ದ ಸಿ.ಜಿ.ಮಂಜುಳಾ ಅವರನ್ನು ಆಮಂತ್ರಿಸಿದ್ದೆ.

ಇವರೆಲ್ಲ ನನ್ನ ಬದುಕಿಗೆ ಅಥವಾ ನನ್ನ ಪುಸ್ತಕಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಜೊತೆಯಾದವರು. ಸರಳವಾಗಿ ನಡೆದ ಬಿಡುಗಡೆಯ ನಂತರ ಎಲ್ಲರೂ ತಮ್ಮ ತಮ್ಮ ವೃತ್ತಿಯ ಜೀವನದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ನಮ್ಮ ಆಹ್ವಾನವನ್ನು ಗೌರವಿಸಿ ಬಂದ ಖ್ಯಾತ ಲೇಖಕರು, ಹಿರಿಯ ಉದ್ಯಮಿಗಳೂ ಆದ ಷಡಕ್ಷರಿಯವರು ತಮ್ಮ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರ ಉಂಟುಮಾಡಿದರು. ತಮ್ಮ ಹಾಸ್ಯ ಮಿಶ್ರಿತ ಮಾತಿನಿಂದ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ನಮ್ಮ ಪರಿಸರ ಸ್ನೇಹಕ್ಕೆ ಪೂರಕವಾಗಿ ಝೀರೋ ವೇಸ್ಟ್ ಕಾನ್ಸೆಪ್ಟನ್ನು ಇಟ್ಟುಕೊಂಡು ಊಟದ ತಯಾರಿ ಮಾಡಿಸಿದ್ದೆ. ಅದಕ್ಕಾಗಿ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆಯ ದುಂಡುಮೇಜಿನ ಸಹಸಂಸ್ಥಾಪಕರೂ ಹಾಗೂ ನನ್ನ ಆಪ್ತರೂ ಆದ ಎನ್.ಎಸ್. ರಮಾಕಾಂತ ಅವರನ್ನು ಆಹ್ವಾನಿಸಿ ಅವರ ಸಲಹೆಯನ್ನು ಪಾಲಿಸಿದ್ದೆ. ಈ ಸಂದರ್ಭದಲ್ಲಿ ಅವರು ತ್ಯಜ್ಯ ನಿರ್ವಹಣೆಯ ಹೊಣೆ ಕುರಿತು ಮಾತನಾಡಿ ಮಾರ್ಗದರ್ಶನ ಮಾಡಿದರು.

ಬದುಕ ಪಕ್ವತೆ – ಎಂಬ ವಿಷಯದ ಕವಿಗೋಷ್ಠಿಯನ್ನು ಆಯೋಜಿಸಿದ್ದು ಹಿರಿ ಕಿರಿಯ ಕವಿಗಳು ಕವನಗಳನ್ನು ಕಳಿಸಿದ್ದರು. ಅಂದು ಅದೇನೋ ಒಳ್ಳೆಯ ಮುಹೂರ್ತವಂತೆ ಅದಕ್ಕಾಗಿ ಸಾಕಷ್ಟು ಕಾರ್ಯಗಳು ಆಯೋಜಿತವಾಗಿದ್ದವಂತೆ. ಆದರೆ ಅವರ ಅನುಪಸ್ಥಿತಿಯಲ್ಲಿ ಅವರ ಕವನಗಳನ್ನು ಓದದೇ ನಾನು ಹಾಗೂ ಗೆಳತಿ, ಕವಿ ಡಿ.ಸಿ.ಗೀತಾ ನಮ್ಮ ಕವನಗಳನ್ನು ಓದಿದೆವು.

ಆಮಂತ್ರಿಸಿದಾಗ ಪ್ರೀತಿಯಿಂದ ಬಂದವರಿಗೆಲ್ಲ ತಾಂಬೂಲ ಕೊಡಬೇಕಲ್ಲವೇ ? ಅದಕ್ಕಾಗಿ ಜ್ಯೂಟ್ ಬ್ಯಾಗುಗಳನ್ನು ಮಾಡಿಸಿದ್ದೆ. ಜೊತೆಗೆ ಎಲ್ಲರಿಗೂ ಮಣ್ಣಿನಿಂದ ಮಾಡಿದ ಕಲಾತ್ಮಕ ದೀಪಗಳ ಉಡುಗೊರೆ. ಬಂದ ಸ್ನೇಹಿತರೆಲ್ಲ ಆನಂದಿಸಿದರು, ಒಳ್ಳೆಯ ಮಾತುಗಳನ್ನು ಆಡಿದರು. ಯಾವುದೇ ಆಡಂಬರ ಇಲ್ಲದ ಸರಳ, ಸ್ನೇಹಪೂರ್ಣ ಫಂಕ್ಷನ್ ಎಂದು ಅವರು ಬಿರುದು ಕೊಟ್ಟಾಗ ನನ್ನ ಮನದಲ್ಲಿ ಪುಳಕ. ಒಂದು ಸಾರ್ಥಕ ದಿನ ಎಂದು ಹಿರಿಯ ಗೆಳತಿ, ಖ್ಯಾತ ಲೇಖಕ ದೊಡ್ಡೇರಿ ವೆಂಕಟಗಿರಿ ರಾವ್ ಅವರ ಮಗಳು, ಅನಸೂಯಾ ಆಂಟಿ ಮಾರನೇ ದಿನ ಕರೆ ಮಾಡಿ ಹೇಳಿದಾಗ ತಂಗಾಳಿ ಬೀಸಿ ಹಾಯೆನಿಸಿತು.

ನಾನೇನು ಯಾವುದೇ ಮುಹೂರ್ತ ಇಟ್ಟಿರಲಿಲ್ಲ. ನಮಗೆ ಅನುಕೂಲವಾಗುವ ಭಾನುವಾರ ಒಂದೇ ಅದಕ್ಕೆ ಕಾರಣ. ಆದರೆ ಇಂದಿನ ವಾರ ಶುಭವಾರ, ಇಂದಿನ ಘಳಿಗೆ ಶುಭ ಘಳಿಗೆ ಆಗಿ ಆ ದಿನ ಪರಿಣಮಿಸಿದ್ದು ನಮ್ಮ ಸುಯೋಗ.

‍ಲೇಖಕರು avadhi

November 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ನೂತನ ದೋಶೆಟ್ಟಿ

    ನನ್ನ ಕಾರ್ಯದಲ್ಲಿ ಈ ಮೂಲಕ ಕೈ ಜೋಡಿಸಿದ ಮೋಹನ್ ಹಾಗೂ ಅವಧಿ ಬಳಗಕ್ಕೆ ಆತ್ಮೀಯ ಧನ್ಯವಾದಗಳು

    ಪ್ರತಿಕ್ರಿಯೆ
  2. Lalitha siddabasavayya

    ನೂತನ್ ಜೀ, ಬರದೆ ಸುಯೋಗವೊಂದನ್ನು ಕಳೆದುಕೊಂಡೆ. ನಿಮಗೀಗ ಯಾವಾವುದಕ್ಕೆ ಅಭಿನಂದಿಸುವುದು ??? ಸರ್ವಮಂಗಳೆ ಹಿರಿದಾದುದಕ್ಕೋ, ಪರಿಸರ ಪ್ರೇಮದ ನಿಜಾನುಷ್ಟಾನಕ್ಕೋ , ಮನೆ ಕಾರ್ಯವನ್ನು ಸಾಹಿತ್ಯದತ್ತ ಹೊರಳಿಸಿದ್ದಕ್ಕೋ ,, ಎಲ್ಲಕ್ಕೂ ನೀವು ಅಭಿನಂದನೆಗಳಿಗೆ ಪಾತ್ರರೇ ಹೌದು. ಅಭಿನಂದನೆಗಳು ನೂತನ್ .

    ಪ್ರತಿಕ್ರಿಯೆ
    • ನೂತನ ದೋಶೆಟ್ಟಿ

      ನಿಮ್ಮ ವಿಶ್ವಾಸಕ್ಕೆ ಶರಣು ಮೇಡಂ

      ಪ್ರತಿಕ್ರಿಯೆ
  3. T S SHRAVANA KUMARI

    ಎಲ್ಲರೂ ಅನುಸರಿಸಬಹುದಾದ ಹಲವು ವಿಷಯಗಳು ಇವೆ. ನಿಮಗೆ ಹಾರ್ದಿಕ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: