ನುಡಿಸಿರಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಫೇಸ್‌ಬುಕ್ ತುಂಬ ಹಬ್ಬಿದ್ದು ನೋಡಿ..

Open For Discussion

ಹುಂಬತನದ ಗರ ಬಡಿದವರ ನುಡಿಸಲಾಗದು ಕಾಣಾ!

 

ಜೋಗಿ 

ಒಂದಿಬ್ಬರು ಸಾಹಿತಿಗಳು ಈ ಸಲದ ನುಡಿಸಿರಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಫೇಸ್‌ಬುಕ್ ತುಂಬ ಹಬ್ಬಿದ್ದು ನೋಡಿದಾಗ, ಏನೋ ದೊಡ್ಡ ಅನಾಹುತ ಆಗಿರಬೇಕು ಅಂದುಕೊಂಡು ಆಳ್ವಾಸ್ ನುಡಿಸಿರಿ ಆಹ್ವಾನ ಪತ್ರಿಕೆ ತರಿಸಿಕೊಂಡು ಓದಿದರೆ, ಅಂಥದ್ದೇನೂ ಕಾಣಿಸಲಿಲ್ಲ. ಯಾರೋ ಒಂದಿಬ್ಬರು ಶಿಷ್ಯರು ಸದರಿ ಸಾಹಿತಿಗಳಿಗೆ ಬಹಿರಂಗ ಪತ್ರ ಬರೆದು ಆಳ್ವಾಸ್ ನುಡಿಸಿರಿಗೆ ಹೋಗಬಾರದೆಂದು ಸೂಚಿಸಿದ್ದರಿಂದ, ಸದರಿ ಸಾಹಿತಿಗಳು ಹೋಗದಿರಲು ನಿರ್ಧರಿಸಿದ್ದಾರೆ ಅಂತ nudisiri bannerದಕ್ಷಿಣ ಕನ್ನಡದ ಮಿತ್ರರೊಬ್ಬರು ವಿವರಿಸಿದರು. ಅದಕ್ಕೆ ಕಾರಣಗಳೇನಾದರೂ ಇದೆಯೋ ಎಂದು ಕೇಳಿದರೆ, ನುಡಿಸಿರಿ ನಡೆಸುವವರ ರಾಜಕೀಯ ನಿಲುವು, ಧಾರ್ಮಿಕ ನಿಲುವು, ಧೋರಣೆಗಳನ್ನೆಲ್ಲ ಪ್ರಶ್ನಿಸಲಾಗುತ್ತಿದೆ ಎಂಬ ಉತ್ತರ ಬಂತು. ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಹೋಗಬಾರದು ಎಂದು ಸದರಿ ಸಾಹಿತಿಗಳನ್ನು ತಡೆಯಲಾಗಿದೆಯಂತೆ.

ನುಡಿಸಿರಿಗೆ ಈಗ ಹನ್ನೊಂದೋ ಹನ್ನೆರಡೋ ವರುಷ. ನಮ್ಮ ದಕ್ಷಿಣ ಕನ್ನಡದ ಬಹುತೇಕ ವಿದ್ಯಾರ್ಥಿಗಳು ಕುಂವೀ, ಜಯಂತ ಕಾಯ್ಕಿಣಿ, ಅಬ್ದುಲ್ ರಶೀದ್, ಎಸ್ ದಿವಾಕರ್, ದೇವನೂರು ಮಹಾದೇವ, ಸಿದ್ಧಲಿಂಗಯ್ಯ- ಮುಂತಾದವರ ಬಗ್ಗೆ ತಿಳಿದುಕೊಂಡದ್ದು ನುಡಿಸಿರಿ ಕಾರ್ಯಕ್ರಮದಲ್ಲಿಯೇ. ಅಲ್ಲಿಗೆ ಬಂದು ಕಾವ್ಯ ಓದಿಯೋ, ಕತೆ ಓದಿಯೋ, ಪ್ರಬಂಧ ಮಂಡಿಸಿಯೋ, ಚರ್ಚೆಯಲ್ಲಿ ಭಾಗವಹಿಸುವ ಮೂಲಕವೋ ಕನಡದ ಬಹುತೇಕ ಲೇಖಕರು, ಕವಿಗಳು ಓದುವ ಅಭಿರುಚಿ ಮೂಡಿಸಿದ್ದಾರೆ. ಸಾಹಿತ್ಯದ ಗಂಧಗಾಳಿಯೂ ಇಲ್ಲದ ಪಿಯೂಸಿ, ಎಸ್ಸೆಸ್ಸೆಲ್ಸಿ ಮತ್ತು ಪದವಿ ಓದುವ ಮಕ್ಕಳಲ್ಲಿ ಚಿಂತನೆಯ ಬೀಜ ಬಿತ್ತಿದ್ದಾರೆ. ಹನ್ನೊಂದು ವರುಷಗಳಿಂದ ಬಹುತೇಕ ಎಲ್ಲಾ ನುಡಿಸಿರಿ ಹಬ್ಬಕ್ಕೂ ನಾವೆಲ್ಲ ಸುಮ್ಮನೆ ಹೋಗಿ ಬಂದದ್ದೂ ಇದೆ. ನಾವು ಹೋಗುತ್ತಿದ್ದದ್ದು, ಅಲ್ಲಿಗೆ ಬರುವ ಲೇಖಕರ ಜೊತೆ ಹರಟೆ ಹೊಡೆಯುವುದಕ್ಕೇ ಹೊರತು, ವೇದಿಕೆಯಲ್ಲಿ ಭಾಗವಹಿಸುವುದಕ್ಕೆ ಅಲ್ಲ.

ಈಗ ಕಳೆದೆರಡು ವರುಷಗಳಿಂದ ನುಡಿಸಿರಿ ಇದ್ದಕ್ಕಿದ್ದಂತೆ ಅಪಾಯಕಾರಿ ಆಗಿದ್ದು ಹೇಗೆಂಬುದು ಅಚ್ಚರಿ ಮೂಡಿಸುತ್ತದೆ. ಮೂರು ದಿನ ನಡೆಯುವ ನುಡಿಸಿರಿ ಎಂಬ ಕಾರ್ಯಕ್ರಮದ ರೂವಾರಿ ಅಪಾಯಕಾರಿ ಎಂದು ನೀವು ಭಾವಿಸುವುದಾದರೆ, ಐದು ವರುಷ ಅದೇ ವ್ಯಕ್ತಿ ನಡೆಸುವ ಕಾಲೇಜುಗಳಲ್ಲಿ ಓದುವುದು ಮತ್ತೂ mohan alvaಅಪಾಯಕಾರಿ ಅಲ್ಲವೇ? ಈಗ ಅದನ್ನು ವಿರೋಽಸುವವರ ಮಕ್ಕಳು ಕೂಡ ಅದೇ ಕಾಲೇಜಿನಲ್ಲಿಯೇ ಓದುತ್ತಿದ್ದಾರಲ್ಲವೇ? ಕಳೆದ ವರುಷ ನುಡಿಸಿರಿಯನ್ನು ವಿರೋಧಿಸಿದವರೇ ಈ ವರ್ಷಾರಂಭಕ್ಕೆ ಸಂಬಂಧಪಟ್ಟವರಿಗೆ ಫೋನ್ ಮಾಡಿ, ಒಂದು ಸೀಟು ಕೊಡಿಸಿ ಎಂದು ಕೇಳಿಕೊಂಡಿದ್ದು ಯಾಕೆ ಹಾಗಿದ್ದರೆ? ಇಲ್ಲಿ ನಿಜಕ್ಕೂ ಬಯಲಾಗುತ್ತಿರುವುದು ಏನು? ಸಮಾಜವನ್ನು ಒಡೆಯುತ್ತಿರುವುದು ಯಾರು? ಹನ್ನೊಂದು ವರುಷ ನಡೆದ ನುಡಿಸಿರಿಯಲ್ಲಿ ಏನೇನು ಚರ್ಚೆಯಾಗಿದೆ ಅನ್ನುವುದು ಪುಸ್ತಕ ರೂಪದಲ್ಲೇ ಪ್ರಕಟವಾಗಿದೆಯಲ್ಲ? ಅಲ್ಲಿ ಯಾರಾದರೊಬ್ಬರು ಕೋಮುವಾದವನ್ನು ಸಮರ್ಥಿಸಿಕೊಂಡು ಮಾತಾಡಿದ್ದಿದೆಯಾ?

ಈ ವರುಷದ ಕಾರ್ಯಕ್ರಮದ ಪಟ್ಟಿಯನ್ನು ನೋಡಿದರೆ ಸಾಕು, ನುಡಿಸಿರಿ ಎಷ್ಟು ಎಚ್ಚರದಿಂದ ಕಾರ್ಯಕ್ರಮಗಳನ್ನು ರೂಪಿಸಿದೆ, ಎಷ್ಟು ಸಂವೇದನೆ ಮತ್ತು ಕಳಕಳಿಯಿಂದ ಅದರ ಹಿಂದಿರುವ ಮಂದಿ ಕೆಲಸ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಸಾಮರಸ್ಯ, ಮಾಧ್ಯಮಗಳಲ್ಲಿ ಹೊಸತನದ ಹುಡುಕಾಟದಿಂದ ಹಿಡಿದು ಕೃಷಿ, ಜಾನಪದ ಮತ್ತು ಶಿಕ್ಷಣದ ತನಕ ಹೊಸತನದ ಹುಡುಕಾಟವೇ ಈ ಸಲದ ನುಡಿಸಿರಿಯ ವಸ್ತು. ಅಲ್ಲಿಗೆ ಬರುವವರು ಯಾರೂ ಕೋಮುವಾದಿಗಳಲ್ಲವೇ ಅಲ್ಲ. ನಾಗೇಶ ಹೆಗಡೆ, ಟಿ.ಯಲ್ಲಪ್ಪ, ವಿಜಯಶ್ರೀ ಸಬರದ, ಬಸವರಾಜ ಕಲ್ಗುಡಿ, ವೀಣಾ ಶಾಂತೇಶ್ವರ, ಜೆನ್ನಿ, ಚಿಂತಾಮಣಿ ಕೊಡ್ಲೆಕೆರೆ, ಹನೂರು ಕೃಷ್ಣಮೂರ್ತಿ- ಹೀಗೆ ಮಾನವತೆಯ ಪರವಾಗಿ ನಿಂತವರೇ ಅಲ್ಲಿರುವುದು.

ಇಂಥ ಕಾರ್ಯಕ್ರಮವನ್ನು ಬಹಿಷ್ಕರಿಸಿ ಅಂತ ಹೇಳುವ ಹಕ್ಕು, ಹಾಗೆ ಹೇಳುವವರಿಗೆ ಖಂಡಿತ ಇದೆ. ಆದರೆ, ಹಿರಿಯ ಲೇಖಕನಿಗೆ ತಾನು ಯಾಕೆ ಅಲ್ಲಿಗೆ ಹೋಗುತ್ತಿದ್ದೇನೆ ಅನ್ನುವುದನ್ನು ಹೇಳುವಂಥ ದಿಟ್ಟತನ ಮತ್ತು ಪ್ರಾಮಾಣಿಕತೆ ಎರಡೂ ಬೇಕಾಗುತ್ತದೆ. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗೋಪಾಲಕೃಷ್ಣ ಅಡಿಗರು ಭಾಗವಹಿಸಿದ್ದರು. ಪಿ. ಲಂಕೇಶರು ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿ ಬಂದಿದ್ದರು. ಒಬ್ಬ ಲೇಖಕ, ತನ್ನ ಮೇಲೆ ನಂಬಿಕೆ ಇರುವ ಲೇಖಕ, ಎಂಥಾ ಜಾಗಕ್ಕೆ ಹೋದರೂ ತನಗೆ ಅನ್ನಿಸಿದ್ದನ್ನೇ ಹೇಳುತ್ತಾನೆ. ತಾನು ಹೇಳಬೇಕಾದ್ದನ್ನೇ ಹೇಳುತ್ತಾನೆ. ’ಧರ್ಮಸ್ಥಳದಂಥ ಜಾಗಕ್ಕೆ ಬರುವುದಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವುದು ಸುಲಭವಿತ್ತು. ಆದರೆ ಪ್ರದೇಶದಲ್ಲಿ ದೋಷವಿರುವುದಿಲ್ಲ, ಪ್ರಭಾವದಲ್ಲಿ ದೋಷವಿರುತ್ತದೆ. ನೀತ್ಸೆ jananudiಜರ್ಮನಿಯಲ್ಲಿದ್ದೂ ಸತ್ಯ ಹೇಳಬಲ್ಲವನಾಗಿದ್ದ. ರಷ್ಯದಂಥ ಉದಾರವಾದೀ ಜಾಗದಲ್ಲಿದ್ದೂ ಸುಳ್ಳು ಹೇಳಿದ ಲೇಖಕರಿದ್ದಾರೆ’ ಎಂದು ಲಂಕೇಶರು ಬರೆದುಕೊಂಡಿದ್ದರು. ಅದು ಅವರ ನಿಲುವನ್ನೂ ದಿಟ್ಟತನವನ್ನೂ ತೋರುತ್ತದೆ.

ಹಾಗೆ ನೋಡಿದರೆ ಮೂಡಬಿದರೆಯ ಆಳ್ವಾಸ್ ನುಡಿಸಿರಿ ಸಮಾನತೆಯ ಕುರಿತು ಮಾತಾಡುವುದಕ್ಕೆ ಸರಿಯಾದ ಜಾಗ. ಅಲ್ಲಿಗೆ ಬಂದಿದ್ದ ಅನೇಕ ಲೇಖಕರು ನೇರವಾಗಿಯೇ ತಮ್ಮ ಅಸಮಾಧಾನ ಹೊರಗೆಡವಿ ಹೋಗಿದ್ದಾರೆ. ಪ್ರಶಸ್ತಿ ಬಹಿಷ್ಕರಿಸಿದ್ದಾರೆ. ವೇದಿಕೆಯ ಮೇಲೆ ಕೂಗಾಡಿದ್ದಾರೆ. ಅದು ಒಳಗಿದ್ದು ಪ್ರತಿಭಟಿಸುವ ಸರಿಯಾದ ಕ್ರಮ. ಅದನ್ನು ಬಿಟ್ಟು, ನಾನು ಪರ್ಯಾಯವಾಗಿ ಮತ್ತೇನನ್ನೋ ಮಾಡುತ್ತೇನೆ ಎನ್ನುವುದು ಪಂಕ್ತಿಭೋಜನವನ್ನು ನಿರಾಕರಿಸಿದಷ್ಟೇ ಅಮಾನವೀಯವಾಗಿ ಕಾಣಿಸುತ್ತದೆ. ನಿಮ್ಮ ಜೊತೆ ಕುಳಿತು ಊಟ ಮಾಡುವುದಕ್ಕೆ ನನಗೆ ಸಾಧ್ಯವಿಲ್ಲ. ನಿಮ್ಮ ಜೊತೆ ಕುಳಿತು ನಿಮ್ಮ ಮಾತನ್ನು ಕೇಳುವುದಕ್ಕೆ ನನಗೆ ಅಸಹನೆ ಆಗುತ್ತದೆ. ನಿಮ್ಮ ಮಾತನ್ನು ಕೇಳುವ ಕನಿಷ್ಠ ಸಹನೆಯೂ ನನ್ನಲ್ಲಿಲ್ಲ ಎನ್ನುವುದು ಸಹಿಷ್ಣುತೆಯೋ ಅಸಹಿಷ್ಣುತೆಯೋ ಗೊತ್ತಿಲ್ಲ!

***

ಆಸ್ಟ್ರೇಲಿಯಾದ ವಾಂಡಾ ಕೂಲ್‌ಮಿಟ್ರೀ ಎಂಬ ಬುಡಕಟ್ಟು ಮಹಿಳೆ ೧೯೯೪ರಲ್ಲಿ ಮೈ ಓನ್ ಸ್ವೀಟ್ ಹೋಮ್ ಎಂಬ ಆತ್ಮಕತೆ ಬರೆಯುತ್ತಾಳೆ. ಒಬ್ಬ  ಮಹಿಳೆ ಅದರಲ್ಲೂ ಒಬ್ಬಾಕೆ ಮೂಲನಿವಾಸಿ ಆತ್ಮಕತೆ ಬರೆದಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆಯೇ, ಆ ಕೃತಿಗೆ ಇನ್ನಿಲ್ಲದ ಮನ್ನಣೆ ಸಿಗುತ್ತದೆ. ಅದು ಆಸ್ಟ್ರೇಲಿಯಾದ್ಯಂತ ಪ್ರಸಿದ್ಧವಾಗುತ್ತದೆ. ಅದಕ್ಕೆ ವಿಶೇಷ ಪ್ರಶಸ್ತಿಗಳು ಲಭಿಸುತ್ತವೆ. ಅದೊಂದು ಮಹೋನ್ನತ ಕೃತಿ ಎಂದು ಎಲ್ಲೆಡೆ ಪ್ರಚಾರ ಪಡೆದು, ಅದರ ಲೇಖಕಿಯನ್ನು ಕರೆದು ಮಾತಾಡಿಸಿ, ಸಂದರ್ಶನ ಮಾಡಲು ಮಾಧ್ಯಮ ಕಾಯುತ್ತಿರುತ್ತದೆ. ಆದರೆ, ಆಕೆ ವಿದೇಶ ಪ್ರವಾಸದಲ್ಲಿದ್ದಾಳೆ ಎಂದು ನಂಬಿಸಿ, ಆಕೆಯ ಕೃತಿಯ ಪರವಾಗಿ ನಿಂತ ಮಹಿಳೆಯೊಬ್ಬಳು ಪ್ರಶಸ್ತಿ ಸ್ವೀಕಾರ ಮಾಡುತ್ತಾಳೆ. ಅದನ್ನು ಆಸ್ಟ್ರೇಲಿಯಾದ ಗಮನಾರ್ಹ ಕಾದಂಬರಿ ಎಂದು ಕರೆದು ಕೊಂಡಾಡಲಾಗುತ್ತದೆ.

spoon ladyಪಿಟ್‌ಜಾಂತ್‌ಜಾತ್‌ಜಾರ ಎಂಬ ಬುಡಕಟ್ಟಿಗೆ ಸೇರಿದ ಮಹಿಳೆಯನ್ನು ೧೯೫೦ರಲ್ಲಿ ಹೇಗೆ ಬಿಳಿಯನೊಬ್ಬ ದತ್ತು ತೆಗೆದುಕೊಂಡು ಸಾಕುತ್ತಾನೆ. ಹೇಗೆ ಆಕೆ ತನ್ನ ಬಾಲ್ಯವನ್ನೂ ಮೂಲ ಸತ್ವವನ್ನೂ ಕಳೆದುಕೊಳ್ಳುತ್ತಾನೆ ಅನ್ನುವುದನ್ನು ಹೇಳುವ ಆತ್ಮಕತೆಗೆ ಡಾಬೀ ಲಿಟರರಿ ಪ್ರಶಸ್ತಿಯೂ ದಕ್ಕುತ್ತದೆ.

೧೯೯೭ರಲ್ಲಿ ಆಕೆ ಮತ್ತೊಂದು ಕಾದಂಬರಿಯನ್ನು ಬರೆದು ಪ್ರಕಟಣೆಗೆ ನೀಡುತ್ತಾಳೆ.  ಆಕೆಯನ್ನು ಪ್ರಕಾಶಕರು ಭೇಟಿ ಮಾಡಲು ಇಚ್ಛಿಸಿದಾಗ ಆಕೆಯ ಹೆಸರು ವಾಂಡಾ ಕೂಲ್‌ಮಿಟ್ರೀ ಅಲ್ಲ, ಆಕೆಯ ನಿಜವಾದ ಹೆಸರು ಲಿಯಾನ್ ಕಾರ್ಮೆನ್. ಅವನೊಬ್ಬ ಗಂಡಸು. ಆತ ಒಬ್ಬ ಟ್ಯಾಕ್ಸಿ ಡ್ರೈವರ್ ಎಂದು ಗೊತ್ತಾಗುತ್ತದೆ. ಅದೊಂದು ರಾಷ್ಟ್ರೀಯ ವಿವಾದವೇ ಆಗುತ್ತದೆ. ಲಿಯಾನ್ ಕಾರ್ಮೆನ್ ಸಂದರ್ಶನ ಒಂದರಲ್ಲಿ ಹೇಳುತ್ತಾನೆ: ನಮ್ಮ ಸಾಹಿತ್ಯ ಜಗತ್ತು ಹೇಗಿದೆ ಅಂದರೆ, ಅದಕ್ಕೆ ಸಾಹಿತ್ಯ ಕೃತಿ ಬೇಕಾಗಿಲ್ಲ.  ಮಹಿಳೆ ಬರೆದ ಕೃತಿ, ಮೂಲ ನಿವಾಸಿ ಬರೆದ ಕೃತಿ ಎಂಬ ಟ್ಯಾಗ್ ಲೈನುಗಳು ಬೇಕು. ನಾನಾಗಿಯೇ ಆ ಆತ್ಮಕತೆಯನ್ನು ನೀಡುತ್ತಿದ್ದರೆ ಯಾರೂ ಪ್ರಕಟಿಸುತ್ತಲೇ ಇರಲಿಲ್ಲ.

ತಮಾಷೆಯೆಂದರೆ ಆಸ್ಟ್ರೇಲಿಯಾದ ಪ್ರಸಿದ್ಧ ಲೇಖಕಿ ಡೊರೋತಿ ಹೆವೆಟ್ ಮತ್ತು ವಿಮರ್ಶಕ ಫಿಲಿಪ್ ಮಾರಿಸ್ಸೆ ವಾಂಡಾ ಕೂಲ್‌ಮಿಟ್ರೀಯ ಕೃತಿಯನ್ನು ಅದ್ಬುತ ಎಂದು ಬೆನ್ನುಡಿಯಲ್ಲಿ ಹೊಗಳಿದ್ದರು. ಅದು ಟ್ಯಾಕ್ಸಿ ಡ್ರೈವರ್ ಬರೆದ ಕೃತಿ ಎಂದು ಗೊತ್ತಾಗುತ್ತಿದ್ದಂತೆ, ಅದೊಂದು ಕಳಪೆ ಕೃತಿ ಎಂದು ಅವರೇ ದೂರುತ್ತಾರೆ.

***

ಈ ಸಾಹಿತಿಗಳ ಜಗತ್ತು ಹೇಗಿದೆ ಅಂದರೆ, ಸಮಾನತೆಯ ಬಗ್ಗೆ ಮಾತಾಡುತ್ತಾರೋ ಇಲ್ಲವೋ ಅನ್ನುವುದು ಮುಖ್ಯವಲ್ಲ. ಯಾರು ಮಾತಾಡುತ್ತಾರೆ ಅನ್ನುವುದು ಮುಖ್ಯ. ಅಸಮಾನತೆಯನ್ನು ಪ್ರತಿಪಾದಿಸುವ ಬಹುಮುಖ್ಯ ವಾದ ಸಮಾನತೆಯ ಕುರಿತ ಹುಂಬ ನಿಲುವುಗಳಿಂದಲೇ ಹುಟ್ಟುತ್ತವೆ ಅನ್ನುವುದು ಇಂಥ ನಡವಳಿಕೆಗಳೇ ಸಾಕ್ಷಿ.

‍ಲೇಖಕರು admin

November 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Guruprasad

    Selective Outrage by our writers whenever it suits their agenda is a bigger problem in the society .

    ಪ್ರತಿಕ್ರಿಯೆ
  2. Dr. Prabhakar M. Nimbargi

    ಯಾರು ಮಾತಾಡುತ್ತಾರೆ ಅನ್ನುವುದು ಮುಖ್ಯ. In the same way, very often who writes it also becomes very important. Even scientific research field is not free from this notion.

    ಪ್ರತಿಕ್ರಿಯೆ
  3. KVTirumalesh

    ಪ್ರಿಯ ಜೋಗಿ
    ತುಂಬ ಸಮಚಿತ್ತದಿಂದ ಬರೆದಿದ್ದೀರಿ. ನನಗೆ ಅಂಥ ಸ್ಥಿತಿ ಸಾಧ್ಯವಿರುತ್ತಿದ್ದರೆ ಎಂದುಕೊಳ್ಳುತ್ತೇನೆ! ಡಾ. ಮೋಹನ ಆಳ್ವರ ಜನಸೇವೆಯ ಬಗ್ಗೆ ಕೇಳಿದ್ದೇನೆ: ಸಾಹಿತ್ಯ ಮತ್ತು ಶಿಕ್ಷಣದ ಮೂಲಕ. ಅದನ್ನು ಮೆಚ್ಚುವುದು ಸಂಸ್ಕೃತಿಯ ಲಕ್ಷಣ. ಬದಲು ಕಲ್ಲೆಸೆಯಲು ಮುಂದಾಗುವುದಲ್ಲ. ಜೀಸಸ್ ಹೇಳಿದ್ದು ನೆನಪಿರಲಿ! ಜೀಸಸ್ ಎಂದೊಡನೆ ನೆನಪಿಗೆ ಬಂದುದು, ಭಾರತದ ಉದ್ದಗಲಕ್ಕೆ ಕ್ರಿಶ್ಚಿಯನ್ ಮಿಶನರಿಗಳು ಮಾಡುತ್ತ ಬಂದಿರುವ ಸೇವೆ. ಇಗ್ನೇಶಿಯಸ್ ಲೊಯೊಲಾ ಒಬ್ಬ ಕಟ್ಟಾ ಪೋಪಿಸ್ಟ್ ಆಗಿದ್ದ; ಆದರೆ ಅವನಿಂದಾಗಿ ಶಿಕ್ಷಣಕ್ಕೆ ಆದ ಸೇವೆಯನ್ನು ಹೇಗೆ ಮರೆಯಲಿ? ಮೋಹನ ಆಳ್ವರಿಗೂ ಅವರದೇ ಒಲವುಗಳಿರಬಹುದು; ಯಾರಿಗಿಲ್ಲ? ಅಷ್ಟಕ್ಕೆ ಅವರನ್ನು ಸಾಮಾಜಿಕವಾಗಿ ದೂರವಿಟ್ಟರೆ ಅದು self-righteousness-ನ ರಮಾವಧಿಯಾಗುತ್ತದೆ. ಹೀಗೆ ಜನರನ್ನು ದೂರವಿಡುತ್ತ ಹೋದರೆ ಉಳಿಯುವುದೇನು?
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  4. Sandeep Kamath

    ನುಡಿಸಿರಿಯ ವಿರುದ್ಧ ಒಂದು ಕಾರ್ಯಕ್ರಮವನ್ನು ನಿರೂಪಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ.

    ಈ ಕಾರ್ಯಕ್ರಮಕ್ಕೆ ಎಲ್ಲರೂ ತನು, ಮನ, ‘ದನ’ದಿಂದ ಸಹಾಯ ಮಾಡಬೇಕು.

    ಆದರೆ ಒಂದೇ ಒಂದು ಆಕ್ಷೇಪ ಅಂದರೆ ಈ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯುತ್ತಿರುವುದು. ಕೋಮುವಾದಿಗಳ ನಗರ ಮಂಗಳೂರು ಬಿಟ್ಟು ಕೇರಳದಲ್ಲೋ, ಕೋಲ್ಕೋತಾದಲ್ಲೋ ಈ ಕಾರ್ಯಕ್ರಮ ಮಾಡಬಹುದಿತ್ತು.

    ಮಾಡುವುದೇನೋ ಮಾಡ್ತಾ ಇದ್ದೀರಾ, ದಯವಿಟ್ಟು ಕೆಲವು ವಿಷಯಗಳನ್ನು ನೆನಪಿಡಿ.

    ಕಾರ್ಯಕ್ರಮಕ್ಕೆ ಶಾಮಿಯಾನಾ ಹಾಕುವವರ ಬಳಿ ದಯವಿಟ್ಟು ಕೇಳಿಕೊಳ್ಳಿ. ಮಂಗಳೂರಿನಲ್ಲಿ ಶಾರದೆ, ಗಣೇಶೋತ್ಸವ ಮುಂತಾದ ವಿಶ್ವ ಹಿಂದು ಪರಿಷತ್, ಆರ್ ಎಸ್ ಎಸ್ ಪ್ರಾಯೋಜಿತ ಕಾರ್ಯಕ್ರಮಗಳು ಹೆಚ್ಚು. ಹೀಗಾಗಿ ಬಹುತೇಕ ಶಾಮಿಯಾನದವರು ಕೋಮುವಾದಿಗಳು. ಹಾಗಾಗಿ ದಯವಿಟ್ಟು ಅವರನ್ನು ಹತ್ತಿರಕ್ಕೂ ಸೇರಿಸಿಕೊಳ್ಳಬೇಡಿ.

    ಇನ್ನು ಮಂಗಳೂರಿನಲ್ಲಿ ಪ್ರೈವೇಟ್ ಬಸ್ ಗಳು ಜಾಸ್ತಿ. ಈ ಪ್ರೈವೇಟ್ ಬಸ್ ಗಳ ಚಾಲಕ, ಮಾಲಕ ಎಲ್ಲರೂ ಬಹುತೇಕ ಒಂದಲ್ಲ ಒಂದು ರೀತಿಯಲ್ಲಿ ಕೋಮುವಾದಿಗಳ ಜೊತ್ತೆ ಗುರುತಿಸಿಕೊಂಡವರು. ಹಾಗಾಗಿ ಬಸ್ ಕೂಡಾ ನೋಡಿ ಹತ್ತಿ!

    ಇನ್ನು ಊಟ ಉಪಹಾರ. ಈ ಕ್ಯಾಟರಿಂಗ್ ಮಾಡುವವರು ಬಹುತೇಕ ಬ್ರಾಹ್ಮಣರು, ಕೊಂಕಣಿಗಳು. ಕೊಂಕಣಿಗಳು ಬಿ.ಜೆ.ಪಿ ಆರ್ ಎಸ್ ಎಸ್ ಬಿಟ್ಟು ಏನೂ ಮಾತಾಡೋದೆ ಇಲ್ಲ. ಹಾಗಾಗಿ ಅವರೊಡನೆ ವ್ಯವಹರಿಸುವಾಗಲೂ ಜಾಗ್ರತೆ.

    ಒಟ್ಟಿನಲ್ಲಿ ಈ ಸಮ್ಮೇಳನಕ್ಕೆ ಕೋಮುವಾದಿಗಳ ಛಾಯೆ ಬೀಳದಿರಲಿ. ಆಲ್ ದಿ ಬೆಸ್ಟ್!

    ಪ್ರತಿಕ್ರಿಯೆ
  5. Veena

    Well written, Sir
    But these pragathipararu won’t change.
    I wonder whether they have lost their thinking capacity.

    ಪ್ರತಿಕ್ರಿಯೆ
  6. Tejaswini Hegde

    ಲೇಖನದೊಳಗಿನ ಕಳಕಳಿ, ಆಶಯ, ಪ್ರಸ್ತುತ ಪಡಿಸಿದ ರೀತಿ, ಕೊಟ್ಟ ಉದಾಹರಣೆಗಳು – ಎಲ್ಲವೂ ಇಷ್ಟವಾದವು. ಸಮಚಿತ್ತ ಲೇಖನ.

    ಪ್ರತಿಕ್ರಿಯೆ
  7. ಪಿ.ಎನ್. ಸದಾಸಶಿವ.

    ನುಡಿಸಿರಿ ಕನ್ನಡದ ‘ಐಸಿರಿ’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: