ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀ ಕೃಷ್ಣ, ನಾ ರಾಧೆಯೆನ್ನಲಾರೆ..

ಮುರಳೀಧರ ಉಪಾಧ್ಯ ಹಿರಿಯಡ್ಕ 

 ‘ನಾ ರಾಧೆಯಲ್ಲ’  ಕೃತಿಯ ಮುನ್ನುಡಿಯಿಂದ  

ಚಂದ್ರಿಕಾ ನಾಗರಾಜ್ ಅವರ “ನಾ ರಾಧೆಯಲ್ಲ ” ಕವನದ ನಿರೂಪಕಿ “ನೀ ಕೃಷ್ಣ , ನಾ ರಾಧೆಯೆನ್ನಲಾರೆ” ಎನ್ನುತ್ತಾಳೆ. ಇವಳು ಪುರಾಣಲೋಕದ ರಾಧೆಯನ್ನು ಆವಾಹಿಸಿಕೊಳ್ಳುವುದಿಲ್ಲ. ಆಧರೆ ಭಾಗವತದ ರಾಧಾ ಮಾಧವನಿಂದ ಆಕರ್ಷಿತಳಾಗಿದ್ದಾಳೆ . ” ಯಾರ ಬಳಿ ದೂರಲಿ ಕೃಷ್ಣ ? ” ಕವನದಲ್ಲಿ” ನಿನಗಾಗಿ ಕಾಯುತ್ತಿರುವ ಪುಟ್ಟ ರಾಧೆ ನಾನು ” ಎನ್ನುತ್ತಾಳೆ . ಕೃಷ್ನನ್ನು ಕುರಿತ ಈ ಕವಯತ್ರಿಯ ಕವನಗಳಲ್ಲಿ ಪ್ರೇಮ , ವಿರಹ ಮಾತ್ರವಲ್ಲ , ಸಂಶಯ , ಪ್ರಶ್ನೆ , ಸ್ವವಿಮರ್ಶೆಯೂ ಇದೆ ..-

 

” ಯಾರನ್ನು ಹುಡುಕುತ್ತೇನೆ ನಾನು
ನುಣ್ಣಗೆ ಕಾಣುವ
ದೂರದ ಬೆಟ್ಟದಲ್ಲಿ
ನನ್ನವನೆಂದುಕೊಂಡಿರೋ
ಕೃಷ್ಣನನ್ನೇ ?
ಅಥವಾ ನನ್ನನ್ನೇ ?
ಗೊತ್ತಿಲ್ಲ .
ಕೆಲವು ಪ್ರಶ್ನೆಗಳೇ ಹಾಗೆ
ಉತ್ತರವಿಲ್ಲದೆ ಹಾಗೆ ಉಳಿಯುವ
ಹಂಬಲ ಅವಕೆ.

ಕೃಷ್ನನನ್ನು ಕುರಿತ ಈ ಕವಯತ್ರಿಯ ಹುಡುಕಾಟ , ಪುರಾಣ ಲೋಕದಿಂದ ವರ್ತಮಾನದತ್ತ ಸಾಗುತ್ತದೆ . ” ಹಳಸುತ್ತಿವೆ ಸಂಬಂಧಗಳು ಕಾರಣವೇ ಇರದೆ ” ಎಂಬ ವಾಸ್ತವದ ಎಚ್ಚರ ಕವಯಿತ್ರಿಯಲ್ಲಿ ಮೂಡುತ್ತದೆ . ಸಂಬಂಧಗಳು ಹಳಸಿದಾಗ ” ಜಗದ ಮಾತುಗಳ ನಡುವೆ ನನ್ನ ಮೌನ ನನಗಿಷ್ಟ ” ಎನ್ನುತ್ತಾಳೆ ಕವಯಿತ್ರಿ..
ಚಂದ್ರಿಕಾ ಅವರ ” ನನ್ನ ಕವಿತೆಗಳು ” ಕವನ ಹೀಗೆ ಆರಂಭವಾಗುತ್ತದೆ.

 

” ಅದೆಷ್ಟೋ ಕವಿತೆಗಳಿವೆ
ಅರ್ಧಕ್ಕೆ ನಿಂತವು
ಖಾಲಿ ಜೇಬಿನ ಹುಡುಗನ
ಮೊದಲ ಹುಡುಗಿಯ ನೆನಪಿನಂತೆ ”

ಕವಿ ಬರೆಯುತ್ತಿರುವ ಕವನ ಅರ್ಧಕ್ಕೆ ನಿಂತರೆ ಮತ್ತೊಂದು ದಿನ ಮುಂದುವರಿಸಬಹುದು . ಆದರೆ ಹೀಗನ್ನಿಸಿದರೆ ?-
” ಎಷ್ಟು ಬೇಗ ಇದೆಲ್ಲ ಹಳತೆನಿಸುತಿದೆ.

ಬರೆಯುವ ಮೊದಲೇ ಬೇಡವೆನಿಸುವ ಕವಿತೆಯ ಹಾಗೆ ’ { ಕೆ. ವಿ. ತಿರುಮಲೇಶ್ }

ತಂತ್ರಜ್ಞಾನ ಅತಿ ವೇಗದಿಂದ ಬದಲಾಗುತ್ತಿರುವ ನಮ್ಮ ಕಾಲದಲ್ಲಿ ” ಇದೆಲ್ಲ ಎಷ್ಟೊಂದು ಬೇಗ ಹಳತೆನಿಸಿತುತಿದೆ ” ಅನ್ನಿಸಬಹುದು. ಆದರೆ ಕವಿಗೆ ತನ್ನ ಕವಿತೆ ಬರೆಯುವ ಮೊದಲೇ ಬೇಡವೆನ್ನಿಸಿದರೆ ಹೇಗೆ ? ಹೀಗಾದರೆ ” ಶಬ್ದದ ಅರ್ಥದ ಸಂಧಿಯ ಸದ್ಭಾವದ ಹೆರಿಗೆಯಾಗುವುದು ಹೇಗೆ ? ಕವಿ ತನ್ನ ಕವಿತೆ ಬರೆಯುವ ಮೊದಲೇ ಬೇದವೆನ್ನಿಸುವ ಸ್ವವಿಮರ್ಶೆ ಸೃಜನಶೀಲತೆಗೆ ಪೂರಕವಲ್ಲ . ಉದಯೋನ್ಮುಖ ಕವಿಗೆ ಅವನ ಕವಿತೆ ಅವನಿಗೆ ಬರೆಯುವ ಮೊದಲೇ ಬೇಡವೆನ್ನಿಸುವಂತೆ ಮಾಡುವ ವಿಮರ್ಶೆ ಮಾರಕ ವಾಗುತ್ತದೆ .

ಚಂದ್ರಿಕಾ , ಹದಿಹರೆಯದ ಸೆಳೆತ ಚಪಲಗಳನ್ನು ಮೀರಿ ಬೆಳೆದಿದ್ದಾರೆ. ಹೊಸತನ್ನು ಕಾಣುವ , ಹೊಳೆದದ್ದನ್ನು ಹೊಸ ಕಾಲದ ಉಪಮೆ , ರೂಪಕಗಳಲ್ಲಿ ಹಿಡಿದಿಡಬಲ್ಲ ಪ್ರತಿಭೆ ಇವರಲ್ಲಿದೆ . ಚೊಚ್ಚಲ ಕವನ ಸಂಕಲನದಲ್ಲಿ ಈ ಕವಯಿತ್ರಿ ಪಡೆದಿರುವ ಯಶಸ್ಸು ಖುಷಿ ಕೊಡುತ್ತದೆ .

 

‍ಲೇಖಕರು admin

21 March, 2017

2 Comments

  1. kusuma patel

    nangu kavana sankalana odabekenisuttide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading