ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಸಿನೆಮಾ ಮಾಲ್ ಗಳಲ್ಲಿ ಹೀಗೇಕೆ?- ಅತ್ರಿ ಆಕ್ರೋಶ

ಥಿಯೇಟರ್ ಮತ್ತು ವ್ಯಕ್ತಿ ಸ್ವಾತಂತ್ರ್ಯ

ಅತ್ರಿ ಅಶೋಕ ವರ್ಧನ


ನಾನು ಸಿನೆಪೊಲಿಸ್ ಮಲ್ಟಿಪ್ಲೆಕ್ಸಿನಲ್ಲಿ Life Of Pi ನೋಡಲು ದುಬಾರಿ ಟಿಕೆಟ್ ಖರೀದಿಸಿದೆ. ಅಲ್ಲಿನ ಐದೂ ಚಿತ್ರಪರದೆಗಳ ಬಾಗಿಲು ಮತ್ತು ಕೆಲವು ತಿನಿಸುಗಳ ಮಳಿಗೆ ಸೇರಿದ ಆವರಣ ಪ್ರವೇಶದಲ್ಲೇ ಕ್ರಮದಂತೆ ನನ್ನನ್ನು ಭದ್ರತಾ ಪರೀಕ್ಷೆಗೆ ಒಳಪಡಿಸಿದರು. ಆಗ ನನ್ನ ಜೇಬಿನಲ್ಲಿದ್ದ ಸಣ್ಣ ಹುರಿಗಡ್ಲೆ ಪೊಟ್ಟಣ ಕಂಡು, ಭದ್ರತೆಯವನು “ಚಿತ್ರಮಂದಿರದೊಳಗೆ ಹೊರಗಿನ ಯಾವುದೇ ಆಹಾರವನ್ನು ನಿಷೇಧಿಸಲಾಗಿದೆ” ಎಂದ. ಅಂದರೆ ಥಿಯೇಟರಿನ ಒಳಗೆ ನನಗೆ ಕನಿಷ್ಠ ನೀರಡಿಕೆಯಾದರೂ ಅಲ್ಲಿದ್ದ ಮಳಿಗೆಗಳಲ್ಲಿ ಲಭ್ಯವಾದ್ದನ್ನು ಖರೀದಿಸಿಯೇ ತಣಿಯಬೇಕು ಎನ್ನುವುದು ಅವರ ಆಶಯ.
ಇದಕ್ಕೆ ನನ್ನ ವಿರೋಧವನ್ನು ಸ್ಥಳದಲ್ಲಿದ್ದ ಚಿತ್ರಮಂದಿರದ ಮ್ಯಾನೇಜರ್ ಕೂಡಾ ಮನ್ನಿಸಲಿಲ್ಲ. ಅಂದಿಗೆ ನಾನು ಪೊಟ್ಟಣವನ್ನು ಹೊರಗೇ ಬಿಟ್ಟು ಪ್ರದರ್ಶನ ಮುಗಿಸಿ ಬಂದೆ. ಅನಂತರ ನನ್ನ ಆಕ್ಷೇಪವನ್ನು (ಕೆಳಗೆ ಕಾಣಿಸಿದ ವಿವರಗಳೊಡನೆ) ಬರವಣಿಗೆಗೆ ಇಳಿಸಿ, ಸಿನೆಪೊಲಿಸ್ ಕಂಪೆನಿಗೆ ಮಿಂಚಂಚೆಯಲ್ಲೂ ಯಥಾಪ್ರತಿಯೊಂದನ್ನು ಸ್ಥಳೀಯರಿಗೆ ಕೈಯಲ್ಲೂ ಕೊಟ್ಟಿದ್ದೇನೆ. ಅದಾಗಿ ಇಂದಿಗೆ ಹದಿನೆರಡು ದಿನಗಳ ಮೇಲಾದರೂ ಎಲ್ಲಿಂದಲೂ ಪ್ರತಿಕ್ರಿಯೆ ಬಂದಿಲ್ಲ.
1. ಸಾರ್ವಜನಿಕ ಭದ್ರತೆ ಅಥವಾ ಶಾಂತಿಗೆ ಏನೂ ಭಂಗ ತರದ ನಮ್ಮ ಖಾಸಾ ವಸ್ತುಗಳ ವಿಮಶರ್ೆ ಅಥವಾ ನಿಷೇಧ ಹೇರಲು ಸಿಬ್ಬಂದಿಗೆ ಅಧಿಕಾರ ಕೊಟ್ಟವರು ಯಾರು?
2. ಚಲನಚಿತ್ರದ ಪ್ರದರ್ಶನ ಮತ್ತು ವೀಕ್ಷಣೆಗೆ ಮಾತ್ರ ಸೀಮಿತವಾಗುವ `ಟಿಕೆಟ್’ ಎಂಬ ಒಪ್ಪಂದವನ್ನು ಯಾವುದೇ ಪ್ರೇಕ್ಷಕನ ತಿನಿಸಿನ ಮೇಲೆ ಹೇಗೆ ಹೇರುತ್ತಾರೆ?
3. `ಚಿತ್ರ ಮಂದಿರದ ಶುಚಿತ್ವ’ ಇತ್ಯಾದಿ ಕಾರಣಗಳಿಗೆ ಒಟ್ಟು ತಿನಿಸು, ಪಾನೀಯಗಳನ್ನೇ ನಿಷೇಧಿಸಿದ್ದರೆ ವಿಚಾರ ಬೇರೆಯಾಗುತ್ತಿತ್ತು. ಆದರೆ ಥಿಯೇಟರಿನ ಆವರಣದ ಮಳಿಗೆಗಳಲ್ಲಿನ ಯಾವುದೇ ತಿನಿಸು, ಪಾನೀಯವನ್ನು ಪ್ರೇಕ್ಷಕ ಖರೀದಿಸಿದ್ದೇ ಆದರೆ ಅದಕ್ಕೆ ಮಂದಿರದ ಒಳಗೂ ಪ್ರವೇಶವಿದೆ. ಹೆಚ್ಚೇಕೆ ಅದನ್ನು ಬಳಸಿ ಬಿಟ್ಟದ್ದೆಲ್ಲವನ್ನೂ (ತೊಟ್ಟೆ, ಬಾಟಲು, ತಿನ್ನುವಾಗ ಚೆಲ್ಲಿದ್ದನ್ನು ಶುಚಿ ಮಾಡುವುದೂ) ಥಿಯೇಟರ್ ವಹಿಸಿಕೊಳ್ಳುತ್ತದೆ. ಇದು ಮೊದಲನೆಯದಾಗಿ ಥಿಯೇಟರಿಗೆ ನಿಗದಿಯಾಗಿರುವ ಸಿನಿಮಾ ಪ್ರದರ್ಶನ ಸೇವೆಯಲ್ಲಿ ಪಕ್ಷಪಾತವಾಗುತ್ತದೆ. ಎರಡನೆಯದಾಗಿ, ಸಿನಿಮಾ ಒಪ್ಪಂದ ಮೀರಿದ, ಮುಕ್ತ ಗ್ರಾಹಕ ಸ್ವಾತಂತ್ರ್ಯವನ್ನೂ ಅಡ್ಡಿಪಡಿಸುತ್ತದೆ. ಚಿತ್ರಮಂದಿರದೊಳಗೆ ಯಾರೋ ಜೋಳದರಳು ತಿಂದು, ಕೋಕಾಕೋಲ ಕುಡಿಯುವುದು ಸಿಂಧುವಾದರೆ ನಾನು ಹುರಿಗಡಲೇ ತಿಂದು, ನೀರು ಕುಡಿಯಬಾರದು ಏಕೆ?
4. ಸಿನಿಮಾ ಪ್ರೇಕ್ಷಕರು ಥಿಯೇಟರಿನವರ ಒಳ ಒಪ್ಪಂದಗಳಿಗೆ ಯಾಕೆ ಬಾಧ್ಯರಾಗಬೇಕು?
ಈ ವಿಶ್ಲೇಷಣೆಯನ್ನು ಎಲ್ಲಾ ಥಿಯೇಟರ್ಗಳಿಗೂ ಅನ್ವಯಿಸಿ (ಬಿಗ್ ಸಿನೆಮಾಸಿನಲ್ಲೂ ಇದೇ ಅಕ್ರಮ ಜಾರಿಯಿದೆ ಎಂದು ಕೇಳಿದ್ದೇನೆ) ಪರವಾನಗಿ ಕೊಟ್ಟ ವಾಣಿಜ್ಯ ಕರ ಇಲಾಖೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ.

‍ಲೇಖಕರು G

3 January, 2013

21 Comments

  1. ಎಚ್. ಸುಂದರ ರಾವ್

    ಹೆಚ್ಚಿನ ಭಾರತೀಯರು ಇಂತಹ ಸಂದರ್ಭದಲ್ಲಿ, ಶಾಪ ಹಾಕಿಯೋ, ತಮ್ಮೊಳಗೇ ಗೊಣಗಿಕೊಂಡೋ ಸುಮ್ಮನಾಗುತ್ತಾರೆ. ಹೀಗೆ “ಯಾವ ದಿಕ್ಕಿಗೋ ಯಾರೊ ಏನೊ ಗುರಿ ಇಡದೆ ಬಿಟ್ಟ ಬಾಣ” ಪ್ರಯೋಗಿಸುವುದು ನಮ್ಮ ರಾಷ್ಟ್ರೀಯ ಗುಣ. ಸೊಸೈಟಿಯವರು “ಗೋಧಿ ತೆಗೆದುಕೊಂಡರೆ ಮಾತ್ರ ಅಕ್ಕಿ ಕೊಡುತ್ತೇವೆ” ಎಂದು ಹೇಳುವುದನ್ನಾಗಲಿ, ಕ್ಷೌರಿಕ “ಮೀಸೆ ತೆಗೆಸುವುದಾದರೆ ಮಾತ್ರ ಗಡ್ಡ ಬೋಳಿಸುತ್ತೇನೆ” ಎನ್ನುವುದನ್ನಾಗಲಿ ಕಾನೂನು ಒಪ್ಪುವುದಿಲ್ಲ ಎಂದು ಕೇಳಿದ್ದೇನೆ. ಇದೂ ಅದೇ ವರ್ಗದ ಸಮಸ್ಯೆ. ಬಸ್ಸಿನೊಳಗೆ ಪ್ರಯಾಣ ಮಾಡಬೇಕಾದರೆ ಅದರೊಳಗೆ ಕಿರಿಚುವ ಸಿನಿಮಾ ಹಾಡುಗಳನ್ನು ಕೇಳತಕ್ಕದ್ದೆಂದು ಯಾವ ಬಸ್ ಮಾಲಿಕನೂ ವಿಧಿಸುವಂತಿಲ್ಲ. ಆದರೆ ಇವೆಲ್ಲ ಜಾರಿಗೆ ಬರಬೇಕಾದರೆ ನಾವು ಪ್ರಯತ್ನ ಮಾಡಬೇಕಾಗುತ್ತದೆ, ಈಗ ನೀವು ಮಾಡಿರುವ ಹಾಗೆ. ಪತ್ರಿಕೆಗಳಲ್ಲಿ ಬರೆದು, ಬೊಬ್ಬೆ ಹಾಕಿ, ಪ್ರಯೋಜನವಿಲ್ಲ. ನಿಮ್ಮ ಪ್ರಯತ್ನ ಮುಂದುವರಿಸಿ. ಅದು ಖಂಡಿತ ಫಲ ಕೊಡುತ್ತದೆ ಎಂದು ನನಗೆ ನಂಬಿಕೆ ಇದೆ. -ಎಚ್. ಸುಂದರ ರಾವ್

    • ಎಚ್. ಸುಂದರ ರಾವ್

      ಇಲ್ಲಿ “ಭದ್ರತಾ ಪರೀಕ್ಷೆ” ಮುಖ್ಯ. ಸಿನಿಮಾ ಟಾಕೀಸಿನಲ್ಲಿ ಗ್ರಾಹಕನ ಟಿಕೆಟ್ ಪರೀಕ್ಷಿಸಲು ಅಧಿಕಾರ ಇದೆ ಎಂದು ಒಪ್ಪಿಕೊಳ್ಳೋಣ. ಆದರೆ ವ್ಯಕ್ತಿಗಳನ್ನು (ಎಂದರೆ ಒಬ್ಬ ಖಾಸಗಿ ವ್ಯಕ್ತಿಯನ್ನು ಇನ್ನೊಬ್ಬ ಖಾಸಗಿ ವ್ಯಕ್ತಿ/ಸಂಸ್ಥೆ) “ಭದ್ರತಾ ಪರೀಕ್ಷೆ”ಗೆ ಒಳಪಡಿಸಬಹುದೇ? ಯಾವ ಕಾನೂನಿನ ಅಡಿಯಲ್ಲಿ? ಯಾವ ಸಂದರ್ಭದಲ್ಲಿ? ಬೆಂಗಳೂರು ಬಸ್ ಸ್ಟ್ಯಾಂಡಿನಲ್ಲಿ ಒಂದು ಬಗೆಯ “ಭದ್ರತಾ ಪರೀಕ್ಷೆ” ಇದೆಯಷ್ಟೆ. ಈ ಭದ್ರತಾ ಪರೀಕ್ಷೆಯನ್ನು ಮಾಡಲು ಅವರು ಯಾರಿಂದ ಅನುಮತಿ ಪಡೆದಿದ್ದಾರೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಉತ್ತರ ಸಿಗುವ ಸಾಧ್ಯತೆ ಇದೆ. ವಿಮಾನ ನಿಲ್ದಾಣದ ಉನ್ನತ ಅಧಿಕಾರಿಗಳಿಗೂ ಈ ಮಾಹಿತಿ ಇರಬಹುದು. ಮಂಗಳೂರಿನ ಉನ್ನತ ಪೋಲಿಸ್ ಅಧಿಕಾರಿಗಳಲ್ಲಿ ಸ್ವತಃ ಹೋಗಿ ಮಾತಾಡಿದರೂ ಈ ಮಾಹಿತಿ ಸಿಗಬಹುದು. ಇಬ್ಬರು ಅಥವಾ ಮೂವರು ಒಟ್ಟಾಗಿ ಹೋಗುವುದು ಒಳ್ಳೆಯದು.
      ನೋಡೋಣ. ಕೆ ಎಸ್ ಆರ್ ಟಿ ಸಿಯಿಂದ ಮಾಹಿತಿ ಪಡೆಯಲು ನಾನು ಅರ್ಜಿ ಸಲ್ಲಿಸುತ್ತೇನೆ.

  2. Radhika

    This is true for every other mall. Would like to know how we can file a PIL for this. Popcorn worth 5 rupees is sold for 60-70 rupees and everyone buys without any complaint. There must be a way out. Even the ticket prices are exorbitant. Heard in Chennai the rates aren’t that high. How can we make that happen in Karnataka?

    • ಅಭಯ ಸಿಂಹ

      ರಾಧಿಕಾ ಅವರೇ, ಹೌದು ಚೆನ್ನೈನಲ್ಲಿ ದರಗಳ ಕುರಿತಾಗಿ ನಿಯಂತ್ರಣ ಇದೆ. ಅದಕ್ಕೆ ಅಲ್ಲಿನ ಸರಕಾರವೇ ಒಂದು ಕಾನೂನನ್ನು ಜಾರಿಗೆ ತಂದಿದೆ. ಕಾನೂನಿನ ವಿವರಗಳನ್ನು ಪಡೆಯಲು ಯತ್ನಿಸುತ್ತಿದ್ದೇನೆ. ನಮ್ಮಲ್ಲಿ ಇಂಥಾ ಒಂದು ಕಾನೂನನ್ನೇ ಮಾಡಿಸುವುದು ಅಗತ್ಯ.

  3. Pramod

    ಹೌದು ನಮಗೊ೦ದು ಇ೦ತಹ ವ್ಯಕ್ತಿ ಸ್ವಾತ೦ತ್ರ್ಯದ ಕಾಯಿದೆ ಅರ್ಜೆ೦ಟಾಗಿ ಬೇಕಾಗಿದೆ.
    ನನಗೂ 40 ರೂಪಾಯಿ ಸಮೋಸನೋ, 100 ರೂಪಾಯಿ ಪಾಪ್ ಕಾರ್ನ್ ತಿನ್ನುವ ಬದಲು 10 ರೂ ಶೇ೦ಗಾ ತಿನ್ನುತ್ತಾ ಪಿವಿಆರ್ ನಲ್ಲಿ ಸಿನೆಮಾ ನೋಡುವ ಆಸೆ ಇದೆ.

  4. ಅಶೋಕವರ್ಧನ ಜಿ.ಎನ್

    ಈಗಷ್ಟೇ ವಾಣಿಜ್ಯ ಕರ ಇಲಾಖೆಯಿಂದ ತಿಳಿದು ಬಂದಂತೆ: ಇದು ಅವರ ಪರಿಮಿತಿಯಿಂದ ಹೊರಗಿನದಂತೆ. ಅವರು ಕೇವಲ ಮನರಂಜನಾ ಕರ ಮತ್ತಲ್ಲಿನ ಮಳಿಗೆಗಳಲ್ಲಿ ಮಾರಾಟ ಕರ ಅಥವಾ ಸೇವಾ ಕರ ಸಂಗ್ರಹದಲ್ಲಿ ವ್ಯತ್ಯಯವಾಗದಂತೆ ಮಾತ್ರ ನಿಗಾವಹಿಸಬಲ್ಲರಂತೆ. ಜಿಲ್ಲಾಧಿಕಾರಿಯವರೇ ಇದಕ್ಕೆ ಜವಾಬ್ದಾರರು ಎಂದು ತಿಳಿದು ಬಂದದ್ದರಿಂದ, ಅವರಿಗೇ ಸವಿವರ ದೂರು ಕೊಡುವುದರೊಂದಿಗೆ “ತಾವು ಈ ವಿಶ್ಲೇಷಣೆಯನ್ನು ಎಲ್ಲಾ ಥಿಯೇಟರ್ ಗಳಿಗೂ ಅನ್ವಯಿಸಿ ತಮ್ಮ ಪರವಾನಗಿಯನ್ನು ಮರುಪರಿಶೀಲಿಸಿ, ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ” ಎಂದು ಮುಗಿಸಿದ್ದೇನೆ. ಜಿಲ್ಲಾಧಿಕಾರಿ ಕಛೇರಿಯಿಂದ ಸ್ವೀಕೃತಿ ಪತ್ರವನ್ನೂ ಪಡೆದಿದ್ದೇನೆ. ರಾಧಿಕಾ ಮತ್ತು ಪ್ರಮೋದ್ ನಿಮ್ಮ ನಿಮ್ಮೂರಿನಲ್ಲಿ ನನ್ನದೇ ಮಾದರಿಯಲ್ಲಿ ಮುಂದುವರಿಯಬಹುದೆಂದು ನನಗನ್ನಿಸುತ್ತದೆ. ನಿನ್ನೆ ಬಳಕೆದಾರರ ನ್ಯಾಯಲಯದ ಕ್ರಮಗಳ ಬಗ್ಗೆ ವಿಚಾರಿಸಿದೆ. ಅದೂ ಅಥವಾ PIL ತುಂಬ ಬಳಸುದಾರಿ ಅನ್ನಿಸಿತು – ಅನಿವಾರ್ಯವಾದರೆ ಅಂತಿಮ ಸುತ್ತಿಗಿಟ್ಟುಕೊಳ್ಳಬಹುದು.

  5. Kumara Raitha

    ಮಾಲ್‌ ಗಳಲ್ಲಿ ಇರುವ ಎಲ್ಲ ಸಿನಿಮಾ ಮಂದಿರಗಳಲ್ಲಿಯೂ ನೀವು ವಿವರಿಸಿದಂಥ ಕೆಟ್ಟ ಪರಿಪಾಠವಿದೆ. ನಾನೂ ಪ್ರತಿಭಟಿಸಿದ್ದೇನೆ. ಅಲ್ಲಿ ಸಿನಿಮಾ ವೀಕ್ಷಣೆ ಅನುಭವ ಚೆನ್ನಾಗಿತ್ತದೆ. ಆದರೆ ಇದೇ ಮಾತನ್ನು ಅಲ್ಲಿ ಮಾರಾಟ ಮಾಡುವ ತಿನಿಸು- ಪಾನೀಯಗಳಿಗೂ ಹೇಳಲು ಆಗುವುದಿಲ್ಲ. ಮಾಮೂಲಿ ದರದ ಮೂರು ಪಟ್ಟು, ಕೆಲವೊಮ್ಮೆ ನಾಲ್ಕು ಪಟ್ಟು ಹೆಚ್ಚು ಹಣ ತೆತ್ತು ಖರೀದಿಸಬೇಕು. ಇದಕ್ಕೆ ಕಾನೂನಿನ ಚಾಟಿ ಏಟು ಬೇಕು. ಹೊಡೆಯುವವರಾರು ಎಂಬುದು ಪ್ರಶ್ನೆ. ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಇಂಥ ವಿಚಾರದ ಬಗ್ಗೆ ಗಮನಹರಿಸುವಷ್ಟು ವ್ಯವಧಾನ ಇದೆಯೇ… ?
    ಪಟ್ಟುಬಿಡದೆ ಕಾನೂನಿನ ಹೋರಾಟಕ್ಕೆ ಮುಂದಾದ ಅಶೋಕವರ್ಧನ ಅವರಿಗೆ ಅಭಿನಂದನೆ

  6. ನರೇಂದ್ರ

    ನಿಜವಾದ ಕಾಳಜಿಯುಳ್ಳ ಎಲ್ಲರೂ ಸಿನೆಪೊಲಿಸ್ ಗೆ ಈ ಕುರಿತು ಒಂದು ಈ ಮೇಲ್ ಕಳುಹಿಸಿ. ಮಾಲ್‌ಗಳಲ್ಲಿ ವ್ಯವಹಾರಕ್ಕಿಳಿದಿರುವ ಮಂದಿ ಸಾರ್ವಜನಿಕ ಅಭಿಪ್ರಾಯಕ್ಕೆ ಬೆಲೆಕೊಡುತ್ತಾರೆ. ಇಂಥ ಕಾನೂನು ಬಾಹಿರವಾದ ಕಟ್ಟಳೆಯನ್ನು ತಮ್ಮ ಗ್ರಾಹಕರ ಮೇಲೆ ಹೇರುವುದು ತಪ್ಪೆಂಬ ಅರಿವು ಅವರಲ್ಲಿ ಮೂಡಿಸಬೇಕು. ನಾವು ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದಕ್ಕೇ ಆಲಸ್ಯ ತೋರುವುದರಿಂದ ಇವೆಲ್ಲ ಸ್ವೀಕೃತವಾದ ಪದ್ಧತಿಗಳಂತೆ ಚಾಲ್ತಿಯಲ್ಲಿ ನಿಲ್ಲುತ್ತವೆ. ಸಭ್ಯ ರೀತಿಯ ಪ್ರತಿರೋಧಕ್ಕಿರುವ ಶಕ್ತಿ ಯಾವುದಕ್ಕೂ ಇಲ್ಲ. ಪ್ರಯತ್ನಿಸಿ ನೋಡಿ, ಅಶೋಕರಿಗೆ ಪ್ರತ್ಯುತ್ತರವೂ ಬರುತ್ತದೆ, ಈ ಕ್ರಮದ ಸಡಿಲಿಕೆಯೂ ಆಗುತ್ತದೆ. ಸಿಸೆ ಪೊಲಿಸ್ ಈಮೇಲ್ ವಿಳಾಸ ಹೀಗಿದೆ: cc@cinepolis.com

  7. Santhoshkumar LM

    ನನ್ನ ಪುಟ್ಟ ಮಗು ಕಾರ್ನ್ (ಬೇಯಿಸಿದ ಜೋಳ) ಬೇಕೇ ಬೇಕು ಎಂದು ಹಠ ಹಿಡಿದಳು.
    ಅವಳಿಗೆ ಕೊಡಿಸಿ ಸಿನೆಮಾ ಥೀಯೇಟರ್ ಒಳಗೆ ಹೋಗುವಾಗ, ಅಲ್ಲಿಯವರು ಅದನ್ನು ಎಸೆದು ಒಳಬರಬೇಕೆಂದು ಪಟ್ಟು ಹಿಡಿದರು.
    ಬಹಳ ಬೇಸರವಾಯಿತು.
    ಬಿಸಾಕಿ ಒಳ ಬಂದೆವು, ಮತ್ತೆ ಮಗಳ ಗಲಾಟೆ.
    ಈಗ ಚಿತ್ರಮಂದಿರದೊಳಗೆ ಅದು ಇಲ್ಲ. ಏನು ಮಾಡಲಿ.
    ಇಲ್ಲಿ ಪ್ರಶ್ನೆಯೆಂದರೆ ನಮ್ಮ ತಿನಿಸುಗಳನ್ನು ಒಳ ಬಿಡಬಾರದೆಂದು ಯಾವ ಆಧಾರದ ಮೇಲೆ ನಿಷೇಧ ಹೇರಿದ್ದಾರೆ?
    ನಿಮ್ಮ ಖಾಳಜಿ ನನಗೆ ಬಹಳ ಇಷ್ಟವಾಯಿತು. ಈಗಲೇ ನಾನು ಇಮೇಲ್ ಕಳುಹಿಸುತ್ತಿದ್ದೇನೆ.

  8. Swarna

    ಹೌದು, ಇದು ನಮ್ಮಲ್ಲಿ ಬಹುತೇಕರ ಅನುಭವ ಆದರೆ
    ನಾವದನ್ನು ಅಲ್ಲಿಂದ ಹೊರ ಬಂದ ಕೂಡಲೇ ಮರೆತು ಬಿಡುತ್ತೇವೆ.
    ನಿಮ್ಮ ಕಾಳಜಿಗೆ ವಂದನೆಗಳು.
    ಮೇಲ್ ಐಡಿ ಇಲ್ಲಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
    ಹೆಚ್ಚು ಪತ್ರ ಅವರನ್ನ ತಲುಪಿದರೆ ಪರಿಸ್ಥಿತಿ ಬದಲಾಗಬಹುದು

  9. Suvarnini Rao Konale

    even i have experienced same thing. but last time when i went to Rockline cinemas to watch Talaash, i has some chocolates in my bag which the security tried to take out. i said ‘i need them’. she asked ‘why?’ i said ‘i have health problems suddenly i go hypoglycemic at that time i need them. so put them back’ . she looked at me as if i am carrying bomb!!
    and moreover whatever they take from us..they dont give it back when we go back!
    this is good move.

  10. Suvarnini Rao Konale

    correction
    * I had some chocolates

  11. ಪಂಡಿತಾರಾಧ್ಯ ಮೈಸೂರು

    ಚಿತ್ರಮಂದಿರದ ಒಳಗೆ ಯಾವುದೇ ತಿಂಡಿ ತಿನಿಸು ತರುವಂ ತಿಲ್ಲ ಎಂದರೆ ಅದಕ್ಕೊಂದು ತಾತ್ವಿಕತೆ ಇದೆ ಎನ್ನಬಹುದು. ತಮ್ಮ ಮಳಿಗೆಯಲ್ಲಿ ಕೊಳ್ಳುವ ವಸ್ತುಗಳನ್ನು ಮಾತ್ರ ಒಳಗೆ ಒಯ್ಯಬಹುದು ಎನ್ನುವುದಕ್ಕೆ ಸುಲಿಗೆ, ದುರಾಸೆ ಬಿಟ್ಟರೆ ಯಾವ ತರ್ಕವೂ ವಿವರಣೆಯೂ ಇಲ್ಲ. ಇದು ಆದಾಯ ಕರ ಇಲಾಖೆಯವರಿಗೆ ಸಂಬಂಧಿಸಿದ್ದಲ್ಲದಿದ್ದರೆ ಸಾರ್ವಜನಿಕ ಆರೋಗ್ಯದ ಹೊಣೆಯಿರುವ (ಹೊಟೆಲ್ ಗಳ ಗುಣಮಟ್ಟದ ಬಗ್ಗೆ ಹೊಣೆಯುಳ್ಳ ನಗರಪಾಲಿಕೆ ಅಥವಾ ಜಿಲ್ಲಾಧಿಕಾರಿಯವರು ಅಗತ್ಯ ಆದೇಶವನ್ನು ಹೊರಡಿಸಿ ವೀಕ್ಷಕರ ಸುಲಿಗೆಯನ್ನು ಅವರ ಸ್ವಾತಂತ್ರ್ಯದ ಮೇಲಿನ ಆಕ್ರಮಣವನ್ನು ನಿಲ್ಲಿಸಬೇಕು. ಎಲಲ್ವನ್ನೂ ವೀಕ್ಷಕರೇ ಬೀದಿಯಲ್ಲಿ ನಿಂತು ಒತ್ತಾಯಮಾಡಿಸುವ ಻ನಿವಾರ್ಯತೆ ಇಲ್ಲ; ಇರಕೂಡದು. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ.

  12. Athmarama

    Uttama prayatna, Naanoo neevu tiLisida viLaasakke minche kaListini.

  13. B.Radheshyam

    It is also common in the so called “food courts” in the shopping malls. All the shop owners/management are kind enough to display a board mentioning “Outside foods are not allowed”! This has continued since there are less people who question them in order to contain their(shop owners/management) verbal abuses. Hats off to GNA for initiation in this direction.
    Regards,
    -Radheshyam

  14. ಆದರ್ಶ ಹೆಗಡೆ

    ಸಿನೆಮಾ ಮಾಲ್ಗಳ ಹಣ ಮಾಡುವ ವಿದಾನ ಇದು! ಬೇರೆ ಆಹಾರ ಒಳಗೆ ತಾರದೆ ಇದ್ರೆ ಅಲ್ಲೇ ಇರುವ ಆಹಾರ ತಿನಲ್ಲೇ ಬೆಕು…… ಅದೇ ಇವರ ತಂತ್ರ!

  15. Manorama B.N

    Hmmm:( Tindi bidi.. Neeru kooda tagondu hogoke bidolla.. Aa daridra coacacola kudisuva hata…
    abhinandanegalu.. nammellarallu iruva prashne, besarakke neevu barahada roopa kottiddiri. adare nimma mail,letter avra kasada buttige hogirabahudashte..
    aadare idakke karyaroopada yavdadru pariharavideye..? Adannu modalu karyagatagolisona..

  16. ಅಶೋಕವರ್ಧನ ಜಿ.ಎನ್

    ಈಗಾಗಲೇ ಬಂದಿರುವ ಮಿಂಚಂಚೆ ವಿಳಾಸಗಳ ಆಧಾರದಲ್ಲಿ ಮಾಲಿಕರಿಗೆ ಬರೆಯುವುದು ಸರಿಯೇ. ಅದಕ್ಕೂ ಮುಖ್ಯವಾಗಿ unfair trade practice act ಪ್ರಕಾರ ಆಯಾ ಊರಿನ ಚಿತ್ರಮಂದಿರಗಳಿಗೆ ಪರವಾನಗಿ ಕೊಟ್ಟ ಮತ್ತು ಅವುಗಳ ನಿರ್ವಹಣೆಯ ಕುರಿತಂತೆ ಪರಮಾಧಿಕಾರವಿರುವ ಜಿಲ್ಲಾಧಿಕಾರಿಗೆ ನಿಮ್ಮ ಪತ್ರ ಬಾಣಗಳು ಹೋಗಲಿ. ನಾನು ಕೊಟ್ಟು, ಸ್ವೀಕೃತಿ ತಂದಿದ್ದೇನೆ, ವಾರ- ಹತ್ತು ದಿನ ತಡೆದು ಬೆಂಬತ್ತುತ್ತೇನೆ ಖಂಡಿತ. ನೀವು?
    ಅಶೋಕವರ್ಧನ

  17. T.R.Bhat

    ಶ್ರೀ ಅಶೋಕವರ್ಧನ,
    ನೀವು ಬರೆದ ವಿಷಯ ತುಂಬ ಪ್ರಸ್ತುತವಾದುದು. ಅದೇ ಅನುಭವ ಮಲ್ಟಿಪ್ಲೆಕ್ಸ್ ಗೆ ಹೋದವರಿಗೆಲ್ಲ ಆಗಿದೆ ಎಂದು ಇಲ್ಲಿ ಬಂದ ಪ್ರತಿಕ್ರಿಯೆಗಳಿಂದ ವೇದ್ಯ.
    ಸಿನೆಪೊಲಿಸ್ ಬಗ್ಗೆ ಆತಂಕ ಉಂಟುಮಾಡಬಹುದಾದ ಇನ್ನೊಂದು ವಿಷಯದ ಬಗ್ಗೆ ಉಲ್ಲೇಖಿಸಬಯಸುತ್ತೇನೆ.ನಾಗರಿಕರಲ್ಲಿ ಕೆಲವರಿಗಾದರೂ ತಿಳಿದಿರಬಹುದಾದಂತೆ ಸಿಟಿ ಸೆಂಟರ್ ಕಟ್ಟಡಕ್ಕೆ ಕರ್ನಾಟಕದ ಅಗ್ನಿಶಾಮಕ ಮತ್ತು ತರ್ತು ಸೇವಾ ಇಲಾಖೆ ನಿರಾಕ್ಷೇಪಣಾ ಪತ್ರ್ವನ್ನು ನೀಡಿರಲಿಲ್ಲ;ಕಾರಣ ಅಗ್ನಿಶಾಮಕಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಕಟ್ಟಡ ಕಟ್ಟುವಾಗ ಅನುಸರಿಸಿರಲಿಲ್ಲ. ಈ ಕಾರಣಕ್ಕೆ ಮುಲ್ಟಿಪ್ಲೆಕ್ಸ್ ಗೂ ಆರಂಭದಲ್ಲಿ ಪರವಾನಗಿ ನೀಡಿರಲಿಲ್ಲ.ಈಗ ಪರವಾನಿಗೆ ಹೇಗೆ ಬಂತು? ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಕಟ್ಟುಪಾಡುಗಳನ್ನು ಹೇಗೆ ಜಾರಿಗೊಳಿಸಲಾಗಿದೆ? ದ.ಕ ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಸಿಟಿಝನ್ಸ್ ಫೋರಂ ಫೋರ್ ಮೇಂಗಳೂರ್ ಡೆವೆಲಪ್ ಮೆಂಟ್ ಎರಡು ಸಂಸ್ಥೆಗಳ ನಡೆಸಿದ ಪತ್ರವ್ಯವಹಾರ, ವೈಯಕ್ತಿಕ ಮನವಿ, ಭೇಟಿ ಇತ್ಯಾದಿಗಳಿಗ ತೃಪ್ತಿಕರವಾದ ಉತ್ತರ ಸಿಕ್ಕಿಲ್ಲ. ಪರವಾನಿಗೆ ಬಂದಿದೆ. ದೆಹಲಿಯ ಉಪಹಾರ ಸಿನೆಮದಲ್ಲಾದ ಬೆಂಕಿ ದುರ್ಘಟನೆ ನಮ್ಮಲ್ಲಿ ನಡೆಯಬಾರದೆಂದು ನಮ್ಮ ಆಶಯ.
    ಟಿ ಆರ್ ಭಟ್

  18. bmbasheer

    50 ರು ಟಿಕೆಟ್ಗೆ ಮಾಮೂಲಿ ಥಿಯೇಟರ್ನಲ್ಲಿ ನೋಡಬಹುದಾದ ಸಿನಿಮಾವನ್ನು 500 ರು. ಕೊಟ್ಟು ಸಿನೆ ಪೊಲಿಸ್ ನಲ್ಲಿ ನೋಡಲು ಹೋದದ್ದೇ ಮೊದಲ ತಪ್ಪು. ಆ ತಪ್ಪಿಗೆ ಕೆಲವು ಶಿಕ್ಷೆಗಳು ಇವು ಎಂದು ತಿಳಿದುಕೊಂಡರೆ ಒಳ್ಳೆಯದು. ಹುರಿಗಡಲೆ, ಶೇಂಗ ತಿನ್ನುವವರಿಗೆ ಮಾಡಿರೋ ಥಿಯೇಟರ್ ಅಲ್ಲ ಅದು. ಹಾಗೆಯೇ 15 ರು. ಜೋಳ ತಿನ್ನುವವರಿಗೂ ಮಾಡಿದ್ದಲ್ಲ. 500 ರು. ಟಿಕೆಟ್ ಕೊಂಡವರು 70 ರು. ಜೋಳ ಪುರಿ ಸೋರಿ, ಪಾಪ್ಕಾರ್ನ್ ಕೊಂಡ್ರೆನೆ ಆ ಥಿಯೇಟರ್ಗೆ ಗೌರವ….ನಿಮ್ಮಂತಹ ವರ್ಗಕ್ಕೆ ಮಾಡಿರೋ ಥಿಯೇಟರ್ ಅಲ್ಲ…ಅದು. ಅದರಲ್ಲಿ ಸಿನಿಮ ನೋಡಬೇಕಾದ್ರೆ ಅದಕ್ಕೊಂದು ಅಂತಸ್ತಿದೆ. ಮಾರ್ಯಾದೆ ಇದೆ. ನಿಮ್ಮಂತೋರ ಕಾಟ ಇರಬಾರದು ಅಂತಾನೆ ಟಿಕೆಟ್ ಗೆ 500 ರು. ಇಟ್ಟಿರೋದು. ಹ್ಯೆ ಕ್ಲಾಸ್ನ ಉಳಿದೊರಿಗೆ ಮುಜುಗರವಾಗಬಾರದು ಅಂತ.ನಾಳೆ ನೀವು ಹುರಿಗಡಲೆ ತಿಂದು ಆರೋಗ್ಯ ಕೆಟ್ಟು ಆ ಥಿಯೇಟರ್ ಅಂಗಡಿಯೋರ ಮೇಲೆ ಕಂಪ್ಲೇಂಟ್ ಕೊಟ್ರೆ ಅವರ ಥಿಯೇಟರ್ ಮರ್ಯಾದೆ ಏನಾಗಬೇಕು…ಮೊದಲು ಮಲ್ತಿಪ್ಲೆಕ್ಷ್ ಮರ್ಯಾದೆ…ಅವರ ಅಂತಸ್ತು…ಶೈಲಿಯನ್ನು ಕಲಿಯಿರಿ. ಬಳಿಕ 500 ರು. ಟಿಕೆಟ್ ತೆಗೆದು ಒಳ ಹೋಗಿ. ಇಲ್ಲಾ ಅಂದ್ರೆ.. ಸಿನೆ ಪೊಲಿಸ್ ಎದುರುಗಡೆ ಸುಚಿತ್ರ ಟಾಕಿಸ್ ಇದೆ. ಅದರಲ್ಲಿ 50 ರು. ಟಿಕೆಟ್ ತೆಗೆದು, ಉರಿಗಡಲೇ, ಶೇಂಗ ಏನ್ ಬೇಕಾದ್ರೂ ತಗಂಡು ತಿನ್ನುತ್ತ ಎಂಜಾಯ್ ಮಾಡಿ. ನವಿಲು ಕುಣೀತು ಎಂದು ಕಾಗೆ ಕುಣಿಯಲು ಹೋದ್ರೆ ಹೀಗೆ ಹಾಗುದು.

Trackbacks/Pingbacks

  1. 10 ರೂ ಶೇ೦ಗಾ ತಿನ್ನುತ್ತಾ ಪಿವಿಆರ್ ನಲ್ಲಿ ಸಿನೆಮಾ ನೋಡುವ ಆಸೆ.. « ಅವಧಿ / avadhi - [...] 10 ರೂ ಶೇ೦ಗಾ ತಿನ್ನುತ್ತಾ ಪಿವಿಆರ್ ನಲ್ಲಿ ಸಿನೆಮಾ ನೋಡುವ ಆಸೆ.. January 4, 2013 by G ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚುತ್ತಿರುವ ಚಿತ್ರ ವಿಚಿತ್ರ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading