ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವು ಈ ಗುಡ್ಡ ನೋಡಿದಿರಾ? ಇಲ್ಲ ತಾನೆ?

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ನೀವು ಈ ಗುಡ್ಡ ನೋಡಿದಿರಾ?  ಇಲ್ಲ ತಾನೆ?  ಬನ್ನಿ ನನ್ನ ಜೊತೆ ಹೋಗೋಣ.  ಹೀಗಂತ ಇದುವರೆಗೂ ಎಲ್ಲಿಯೂ ಕಂಡರಿಯದ ಒಬ್ಬ ಸಾಧು ನನ್ನ ಕರೆದುಕೊಂಡು ಹೊರಟ.  ಗಡ್ಡದಾರಿ, ಕಟ್ಟು ಮಸ್ತಾದ ಶರೀರ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನುವಂತಿರುವ ಆಳೆತ್ತರದ ಅಜಾನುಬಾಹು.  ಅವನು ಹೆಜ್ಜೆ ಇಟ್ಟರೆ ಅಲ್ಲೊಂದು ಗುಳಿ ಬೀಳಬಹುದೊ ಅನ್ನುವಂತಿರುತ್ತದೆ ಅವನ ಒಂದೊಂದು ಹೆಜ್ಜೆ.  ಚಿಕ್ಕ ಮಕ್ಕಳು ಕಂಡರೆ ಕಿರುಚಿ ಓಡಬಹುದೇನೊ ಅವನ ರೂಪ ಕಂಡು. ಅದೇನು ತೇಜಸ್ಸು ಮುಖದಲ್ಲಿ.  ತೀಕ್ಷಣವಾದ ಕಣ್ಣು.

ಅವನೊಟ್ಟಿಗೆ ನನ್ನ ಸ್ನೇಹ ಅರಳುರಿದಂತೆ ಪುರಾಣಗಳ ಕಥೆ ಹೇಳುವ ಶೈಲಿಗೆ ಮಾರುಹೋದಂತಿತ್ತು.  ದಟ್ಟಿರುಳು ಕಾನನದ ನಡುವೆ ನಾ  ಅವನ ಹಿಂಬಾಲಿಸಿಕೊಂಡು ಹೋಗುವ ಧಾವಂತದಲ್ಲಿ ಆಡುವ ಅವನ ಮಾತು ಕಿವಿ ಕೇಳಿಸಿಕೊಳ್ಳುತ್ತಲಿತ್ತು, ಹೆಜ್ಜೆ ಓಡುತ್ತಲಿತ್ತು ದಾಪುಗಾಲು ಹಾಕಿ.  ಅದು ಬೆಳದಿಂಗಳ ಹುಣ್ಣಿಮೆಯ ರಾತ್ರಿ.  ಮರಗಳ ಸಂಧಿಯಲ್ಲಿ ಚಂದ್ರನ ಬೆಳಕು ಅಲ್ಲಲ್ಲಿ ಸೀಳಿಕೊಂಡು ಒಳಬಂದ ಜಾಗ ಕಾಡಿಗೆ ಚಂದ್ರ ಬ್ಯಾಟರಿ ಬಿಟ್ಟಂತಿತ್ತು. ಹುಣ್ಣಿಮೆಯ ಪೂರ್ಣ designಚಂದಿರ ಮುಸಿ ಮುಸಿ ನಗುವಂತಿತ್ತು ನನ್ನ ಮತ್ತು ಸಾಧೂನ ಜೊತೆ ನೋಡಿ.  ನಾನೋ ಕೃಷವಾದ ಎತ್ತರದ ಮನುಷ್ಯ.  ಮೈಯ್ಯಲ್ಲಿ ಗಟ್ಟಿತನ ಕಚ್ಚಿ ಹಿಡಿದಂತಿರುವ ಶಕ್ತಿಯ ಪ್ರದರ್ಶನ ನೋಡುಗರ ಕಣ್ಣಿಗೆ ಗೋಚರಿಸದೇ ಇದ್ದರೂ ನಾನು ಒಣಗಿದ ಮತ್ತೀ ಕಟ್ಟಿಗೆಗೆ ಹೋಲುವವನು.  ಆರೋಗ್ಯವಂತ ಗಟ್ಟಿ ವ್ಯಕ್ತಿ.  ಯಾವುದಕ್ಕೂ ಅಂಜದಿರುವ ಕುತೂಹಲದ ಗೂಡು ನನ್ನ ಎದೆ ತುಂಬ ಆ ಗುಡ್ಡದ ಒಳಹೋಗಿ ಬರುವ ಆತುರ.

ಸಾಗುವ ದಾರಿಯನ್ನು ಸಾಧೂನಂತವರು ನಡೆದೂ ನಡೆದು ಪೃಕೃತಿಯಲ್ಲಿ ಮಾನವ ನಿಮಿ೯ಸಿದ ಕಾಲುದಾರಿ.  ಅಲ್ಲಿ ರಾತ್ರಿಯ ನಿರವತೆಯಲ್ಲಿ ಜೀರುಂಡೆಗಳ ಸದ್ದು, ಅಲ್ಲೆಲ್ಲೊ ಗೂಳಿಡುವ ನರಿಯ ಕೂಗು ನನಗೆ ಹೊಸದು.  ಆದರೆ ಸಾಧೂಗೆ ಎಲ್ಲ ಮಾಮೂಲಿಯಂತಿತ್ತು.  ಎಲ್ಲಿ ಏನಿದೆ, ಹೇಗೆ ಹೋದರೆ ಎಲ್ಲೆಲ್ಲಿ ಏನೇನಿದೆ ಅನ್ನುವ ಪರಿಜ್ಞಾನ, ಸಂಪೂಣ೯ ಮಾಹಿತಿ ಅವನಿಗಿರೋದರಿಂದ ನಮ್ಮ ಪಯಣ ಆ ಕತ್ತಲ ನಿರವ ರಾತ್ರಿಯಲ್ಲಿ ಸರಾಗವಾಗಿ ಮುಂದುವರೆದಿತ್ತು.  ಗುಡ್ಡ ಹತ್ತೋದು ಇಳಿಯೋದು.  ಹೀಗೆ ಅದೆಷ್ಟು ದೂರ ಬಂದೆವೊ ಗೊತ್ತಿಲ್ಲ-  ಆದರೆ ಆ ಗುಡ್ಡದ ಸಮೀಪ ಇನ್ನೂ ತಲುಪಿಲಿಲ್ಲ.

ಅವನನ್ನು ಒಮ್ಮೆ ಕೇಳಿ ಬಿಡಲೆ ; ಅಲ್ಲಾ ಇನ್ನೂ ಎಷ್ಟು ದೂರ ನಡೀಬೇಕು?  ಕಾಲು ಬಸವಳಿತಿದೆ ಅನ್ನುವದಕ್ಕಿಂತ ಗುಡ್ಡದ ಒಳ ಹೋಗುವ  ಆತುರ ಮನಸ್ಸಿಗೆ ಅನಿಸುತ್ತದೆ ಅಯ್ಯೋ ಇನ್ನೂ ಎಷ್ಟು ದೂರ.  ಅದು ಯಾವಾಗಲೂ ಮನಸ್ಸಿನ ತುಮುಲ.  ಸಿಗುವವರೆಗೆ ಕಾತುರ, ಸಿಕ್ಕ ಮೇಲೆ ಅನಾದರ.  ಬೇಡ ಬೇಡ ಕೇಳುವ ಹುನ್ನಾರ ಬಿಟ್ಟು ಬಿಡು ಮನಸೆ!  ನಡೀ ವಾಪಾಸು, ನಾಲಾಯಕ್ ಗುಡ್ಡ ಹತ್ತಲು ಅಂದುಬಿಟ್ಟರೆ?  ನೆವರ್, ಬಾಯಿಗೆ ಬೀಗ ಜಡಿದು ಅವನು ಹೇಳುವ ಮಾತನ್ನು ಕೇಳಿಸಿಕೊಳ್ಳುತ್ತ ಬರ ಬರ ಹೆಜ್ಜೆ ಇಡೋದೆ ವಾಸಿ. ಬೆನ್ನಿಗೆ ನೇತು ಹಾಕಿದ ಚೀಲ ಈಗ ಸ್ವಲ್ಪ ಭಾರ ಅನಿಸುತ್ತಿದೆ.  ಆದರೂ ಎಲ್ಲ ಸಂಬಾಳಿಸಿಕೊಂಡು ಹೋಗಬೇಕು.  ಗುರಿ ಮುಟ್ಟಬೇಕು.

ಅರೆ, ಸಾಧೂಗೆ ಸುಸ್ತಾಯಿತಾ?  ಅದ್ಯಾಕೆ ಹಾಗೆ ಕುಳಿತಿದ್ದು?  ಅದೂ ಇಲ್ಲಿ. ಏನಿದೆ ಅಲ್ಲಿ.  ಕಾಣ್ತಿಲ್ಲ.  ಚಂದ್ರನ ಬೆಳಕೂ ಬಡೀತಿಲ್ಲ.  ಬ್ಯಾಗಲ್ಲಿರೊ ಚಿಕ್ಕ ಬ್ಯಾಟರಿ ತೆಗೆದು ಬಿಟ್ಟೆ.  ಅರೆ ಇಲ್ಲೊಂದು ದೊಡ್ಡದಲ್ಲದಿದ್ದರೂ ಪೂತಿ೯ ಚಿಕ್ಕದೂ ಅಲ್ಲ.ಗುಹೆಯ ದ್ವಾರ.  ವಾವ್! “ನೋಡು ನಾನು ಹೇಗೆ ಮಲಗಿ ತೆವಳುತ್ತೇನೊ ಹಾಗೆ ನೀನೂ ನನ್ನ ಹಿಂದೆ ತೆವಳುತ್ತ ಬಾ.”  ನನ್ನ ಉತ್ತರಕ್ಕೂ ಕಾಯದೆ ತೆವಳುವ ಕಾಯ೯ಕ್ಕೆ ಅಣಿಯಾದ.  ನಾನೂ ಬೆನ್ನಿಂದ ಬ್ಯಾಗ್ ಬಿಚ್ಚಿ ಅವನಂತೆ ಡಬ್ಬಾಕಿ ಮಲಗಿದೆ.  ಏನೊಂದೂ ಕಾಣದು.  ಶುದ್ಧ ತಂಪು ಮೈ ಮನವೆಲ್ಲ.  ಎಂದೂ ಕಂಡರಿಯದ ಸೊಗಸಾದ ಅನುಭವ.  ಮೈ ಕೈ ಕಾಲು ಸ್ವಲ್ಪ ತರಚುವ ಸಾಸಿವೆಯಷ್ಟು ನೋವು ಈ ದೊಡ್ಡ ಶರೀರಕ್ಕೆ ಯಾವ ಲೆಕ್ಕ ಮುನ್ನುಗ್ಗು ನಡೆ ಮನಸಿನ ಮಾತು.  ಎದೆಗವಚಿದ ಬ್ಯಾಗಲ್ಲಿಯ ನೀರಿನ ಬಾಟ್ಲಿ, ಬ್ಯಾಟರಿ ಒತ್ತುತ್ತಿದೆ.  ಆದರೆ ಅನಿವಾರ್ಯ, ತೆವಳುವ ಅವಣ೯ನೀಯ ಅನುಭವ ಕಗ್ಗತ್ತಲ ಗುಹೆಯೊಳಗೆ.  ಈ ಪರಿಸ್ಥಿತಿಯಲ್ಲೂ ಕಣ್ಣಿಗೆ ಸುತ್ತ ಬ್ಯಾಟರಿ ಬಿಟ್ಟು ನೋಡುವ ಆಸೆ ಹುಚ್ಚಮುಂಡೇದಕ್ಕೆ. ಆಗ್ತಿಲ್ವೆ.

ಏನೊ ಘಾಟು ವಾಸನೆ ಮೂಗಿಗೆ ಬಡೀತಿದೆ.  ಸತ್ತ ಯಾವುದೋ ಪ್ರಾಣಿಯ ಕೆಟ್ಟ ಸಹಿಸಲಾರದ ವಾಸನೆ ಅದು.  ಆದರೆ ಸಾಧೂಗೆ ಊಹೂ….ಇದಾವುದರ ಪರಿವೆಯೇ ಇಲ್ಲ.  ಇಲ್ಲೇ ಪಕ್ಕದಲ್ಲಿ ಇರುವಂತಿದೆ.  ಅಮ್ಮಾ….. ಏನು ಮಾಡಲಿ.  ವಾಂತಿ ಬರುವ ಹಾಗಾಗುತ್ತಿದೆ.  ವ್ಯಾ…ವ್ಯಾ… ಜೋರಾಗಿ ತೆವಳಿ ದಾಟಿ ಬಿಟ್ಟೆ ಆ ಸತ್ತ ಪ್ರಾಣಿ ನಿಮಿ೯ಸಿದ ಗಡಿ.  ಅಬ್ಬಾ ಸಾಕಪ್ಪಾ. ಅಲ್ಲೆ ಕ್ಷಣ ಡಬ್ಬಾಕಿದಲ್ಲೆ ಮಲಗಿದೆ.  ಸಂದಿಯಲ್ಲೆ ಕೈ ತಡಕಾಡಿ ನೀರಿನ ಬಾಟಲಿ ತೆಗೆದ ಕೈ ಬಾಯಿಗೆ ನೀರು ಕುಡಿಯುವ ಆತುರ ತಲೆ ಎತ್ತಿದರೆ ಬಂಡೆ ಬಡಿಯುತ್ತದೆ.  ಹಾಗೆ ಬಾಟಲಿ ಅಡ್ಡ ಹಿಡಿದು ಕರು ಮೊಲೆ ಚೀಪುವಂತೆ ನೀರನ್ನು ಚೀಪಿದೆ ಸ್ವಲ್ಪ ನೀರು ತಳ ಕಂಡಿತು.  ಮತ್ತೆ ಬ್ಯಾಗಲ್ಲಿ ತೂರಿಸಿ ತೆವಳುವ ವೇಗ ಹೆಚ್ಚಿಸಿದೆ.

ಮುಂದೆ ಮುಂದೆ ಹೋದಂತೆ ತೂತಿನ ಆಕಾರ ದೊಡ್ಡದಾಗುತ್ತ ಎದ್ದು ಕೂರುವಷ್ಟು ಜಾಗ ದೊಡ್ಡದಾಗಿದೆ.  ಆಶ್ಚರ್ಯ.  ಅಲ್ಲೊಂದು ನೀರಿನ ತೊರೆ.  ನೀರೆಲ್ಲ ಸ್ವಚ್ಛ ತಿಳಿಯಾಗಿದೆ.  ಇಬ್ಬರೂ ಇಳಿದು ಹೊಟ್ಟೆ ತುಂಬ ದೇವರು ಕೊಟ್ಟ ಕೈ ಭಗವಂತನ ನೆನೆದು ನಮಿಸಿ ಬೊಗಸೆಯಲ್ಲಿ ನೀರು ಕುಡಿದೆವು.  ಬಾವಲಿ ಹಕ್ಕಿಗಳ ತಟಪಟ ಸದ್ದು.  ಕಪ್ಪೆಗಳ ವಟ ವಟ ಸದ್ದು.  ಕಣ್ಣಿಗೆ ಏನೂ ಕಾಣದು.  ಕಿವಿ ಇಲ್ಲಿ ಜಾಣ ಮರಿಯಾಗಿ ಮೆರೆಯುತ್ತಿದೆ. ಕಣ್ಣು, ಕಣ್ಣಿದ್ದೂ ಕುರುಡಾಗಿ ಕಿವಿಗೆ ಸಲಾಮು ಹೊಡೆದಿವೆ.  ಆದರೆ ಈ ಸಾಧೂವಿಗೆ ಅತೀಂದ್ರ ಶಕ್ತಿ ಏನಾದರೂ ಇದೆಯಾ?  ಅಲ್ಲಾ ಈ ಕಗ್ಗತ್ತಲಲ್ಲಿ  ನನ್ನ ಎಲ್ಲಿ ಹೇಗೆ ಗುಡ್ಡದ ಹತ್ತಿರ……….ಇಷ್ಟು ಯೋಚನೆ ನನ್ನ ತಲೆಗೆ ಬಂದಿದ್ದೇ ತಡ.

04fbdc7b43fac35970f2beb4b2fe0ce7ಮಗೂ….ಹೆದರ ಬೇಡ.  ಇದೇ ಆ ಗುಡ್ಡ.  ಒಳಗಡೆ ಬಂದಾಗಿದೆ.  ಆದರೆ ನಿನಗೆ ಏನೂ ಕಾಣುತ್ತಿಲ್ಲ ಅಲ್ಲವೆ.  ಇರು  ನೀನು ನಾನು ಹೇಳಿದಂತೆ ಮಾಡಬೇಕು.  ನೀನು ಕುಳಿತಿರುವ ಜಾಗದಲ್ಲಿ ವಜ್ರಾಸನ ಭಂಗಿಯಲ್ಲಿ ಬೆನ್ನು ನೇರವಾಗಿ ಮಾಡಿ ಕುಳಿತು ಕೊ.  ಕಣ್ಣು ಮುಚ್ಚಿರಲಿ.  ಕೈ ಎರಡೂ ಕಿಪ್ಪೊಟ್ಟೆಯ ಕೆಳಕೆ ಊರ್ದ್ವ ಮುಖವಾಗಿ ಒಂದರ ಮೇಲೊಂದು ಹಸ್ತ ಬಿಚ್ಚಿರಲಿ.  ಹೆಬ್ಬೆರಳು ಒಂದನ್ನೊಂದು ಒತ್ತಿರಲಿ.  ದೀರ್ಘ ಉಸಿರು ಎಳೆದುಕೊ.  ಮನಸ್ಸು ಪ್ರಶಾಂತವಾಗಿರಲಿ.  ಮುಖದಲ್ಲಿ ನಗುವಿನ ಭಾವವಿರಲಿ.  ದೇಹವನ್ನು ಸಡಿಲವಾಗಿರಿಸಿಕೊ.  ಆದಷ್ಟು ಯೋಚನಾ ರಹಿತನಾಗಿ ತದೇಕ ಚಿತ್ತದಿಂದ ಹುಬ್ಬಿನ ಎರಡೂ ಮಧ್ಯ ಜಾಗದಲ್ಲಿ ನಿನ್ನ ಮನಸ್ಸನ್ನು ಕೇಂದ್ರೀಕರಿಸು.  ಧ್ಯಾನದಲ್ಲಿ ತಲ್ಲೀನನಾಗಿರು.  ಬಾಯಲ್ಲಿ ದೀರ್ಘವಾಗಿ ಓಂ ಕಾರ ಉಚ್ಛರಿಸು.  ಭಗವಂತನಲ್ಲಿ ಲೀನವಾಗು ಲೀನವಾಗು ಲೀನವಾಗು……

ಮನಸ್ಸು ಪ್ರಶಾಂತವಾಗಿದೆ.  ನಿಶ್ಯಬ್ಧ ಭಂಡಾರ ಮೊಗೆದೂ ಮೊಗೆದೂ ತಂದಿಟ್ಟಂತಿದೆ ಸೃಷ್ಟಿ ನಿಮಿ೯ಸಿದ ಗುಡ್ಡವೆಂಬ ಗುಹೆ.  ಅದೆಷ್ಟು ಹೊತ್ತು ಹಾಗೆ ಕುಳಿತಿದ್ದೆ ನಾನು.  ನಿದ್ದೆಯಲ್ಲಿ ಈ ಪ್ರಪಂಚವನ್ನೇ ಮರೆತ ಈ ದೇಹ ಜಡವಾದಂತಿರುವ ಹಾಗೆ ಕುಳಿತ ಭಂಗಿ ಅಲುಗಾಡಲಿಲ್ಲ.  ಇಹಲೋಕದ ಪರಿಜ್ಞಾನವಿಲ್ಲ.  ದೇಹ ಜಡ.  ಮನಸ್ಸು ಮುದ.  ಹೃದಯ ತಂಪು ತಂಪು. ಯಾವ ಆಕಾರ, ರೂಪ,ವಸ್ತು, ಇಲ್ಲವೇ ಇಲ್ಲ.  ಜಗತ್ತೇ ಮರೆಯಾಗಿಬಿಟ್ಟಿದೆ.  ಎಲ್ಲವೂ ಸ್ಥಬ್ಧ, ನಿಶ್ಯಬ್ಧ, ನಿರಾಕಾರ, ನಿರವ, ಎಲ್ಲವೂ ನಿಮಿತ್ತ.

ಎಚ್ಚರಾಯಿತು.  ಕಣ್ಣು ಬಿಟ್ಟೆ.  ಬೆಳಗಿನ ಕೋಗಿಲೆಯ ಕುಹೂ ಕುಹೂ ಗಾನ ಕಿವಿಗಿಂಪಾಗಿತ್ತು.  ನಾನಿನ್ನೂ ಮಲಗೇ ಇದ್ದೆ ಮಂಚದ ಮೇಲೆ.  ಮನಸ್ಸು ಕಂಡ ಕನಸಿನ ಗುಂಗಿನಿಂದ ಹೊರ ಬರಲು ಹಠ ಮಾಡುತ್ತಿತ್ತು.  ಸಾಕಿದ ನಾಲ್ಕು ಕಾಲಿನ ನನ್ನ ಮರಿ ಎದ್ದೇಳು ಎದ್ದೇಳು ಅಂತ ಮೂತಿಯಿಂದ ನನ್ನ ತಿವೀತಿತ್ತು. ಅಬ್ಬಾ ಎಂತ ಅದ್ಭುತ ಕನಸು.

ಇಳಿ ವಯಸ್ಸಲ್ಲಿ ಕೈಲಾಗದ ಕೆಲಸ ಕನಸು ಪೂತಿ೯ಗೊಳಿಸಿತ್ತು!

‍ಲೇಖಕರು Admin

29 May, 2016

0 Comments

Trackbacks/Pingbacks

  1. ನೀವು ಈ ಗುಡ್ಡ ನೋಡಿದಿರಾ? ಇಲ್ಲ ತಾನೆ? | | Sandhyadeepa…. - […] http://avadhimag.online/2016/05/29/%e0%b2%a8%e0%b3%80%e0%b2%b5%e0%b3%81-%e0%b2%88-%e0%b2%97%e0%b3%81%e0… […]
  2. ನೀವು ಈ ಗುಡ್ಡ ನೋಡಿದಿರಾ? ಇಲ್ಲ ತಾನೆ? | – Sandhyadeepa…. - […] http://avadhimag.online/2016/05/29/%e0%b2%a8%e0%b3%80%e0%b2%b5%e0%b3%81-%e0%b2%88-%e0%b2%97%e0%b3%81%e0… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading