ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀಲಿ ಮೂಗಿನ ನತ್ತು ಎಂಬ ನೆನಪಿನ ದಾಖಲೆ

ಸುಜಾತ ಅವರ “ನೀಲಿ ಮೂಗಿನ ನತ್ತು” – ಒಂದು ಪ್ರತಿಕ್ರಿಯೆ

ಎನ್ ವಿದ್ಯಾಶಂಕರ್ 

ಕನ್ನಡ ಭಾಷೆಯ ಉಳಿವಿನ ಬಗ್ಗೆ ಆತಂಕವಿರುವವರೆಲ್ಲಾ ಶ್ರೀಮತಿ ಸುಜಾತ ಅವರ ನೆನಪಿನ ದಾಖಲೆ ‘ನೀಲಿ ಮೂಗಿನ ನತ್ತು’ ಗಂಭೀರವಾಗಿ ಓದಬಹುದಾದ ಪುಸ್ತಕ.

ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಮಾಡಿಬಿಟ್ಟರೆ, ಸರ್ಕಾರದ ಕೃಪಾಪೋಷಣೆಯಲ್ಲಿ ಲಿಖಿತ ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮಗಳ ಮೂಲಕ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ ಅನ್ನುವುದು ನಮ್ಮಲ್ಲಿರುವ ಸಾಮಾನ್ಯವಾದ ನಂಬಿಕೆ. ಹೀಗೆ ಅಧಿಕಾರದ, ಕೀರ್ತಿಯ, ಅಭಿಮಾನದ ನೆಲೆಯಲ್ಲಿ ಭಾಷೆಯನ್ನು ಉಳಿಸಲಿಕ್ಕೆ ಹೊರಟರೆ ಅದು ಹೇಗೆ ಅಪೂರ್ಣವಾಗುತ್ತದೆ ಅನ್ನುವುದಕ್ಕೆ ಪುರಾವೆಯಾಗಿ ಈ ದಾಖಲೆಯನ್ನು ಗಮನಿಸಬೇಕು. ಎಲ್ಲೆಲ್ಲಿ ಮತ್ತು ಹೇಗೆ ಭಾಷೆಯ ವೈವಿಧ್ಯತೆಯನ್ನು ಮತ್ತು ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕು ಅನ್ನುವ ಯೋಚನೆಗೆ ಹಚ್ಚುವಲ್ಲಿ ಈ ಪುಸ್ತಕ ಸಹಕಾರಿಯಾಗುತ್ತದೆ.

ಭಾಷೆಯನ್ನು, ಅದೂ ವಸಾಹತುಶಾಹಿ ಆಳ್ವಿಕೆಗೆ ಸಿಲುಕಿದ ಮೇಲೆ, ಕೇವಲ ಸಂವಹನ ಸಾಧನವನ್ನಾಗಿ ನೋಡುವ ಪರಿಪಾಠ ಬೆಳೆದು ಬಂದಿದೆ. ಅದಕ್ಕೆ ಕಾರಣ, ಪಾಶ್ಚಾತ್ಯ ಆಳುವ ವರ್ಗದೊಡನೆ ನಮ್ಮ ಸಂಬಂಧ ಇದ್ದದ್ದೆ ಅಸಮಾನತೆಯ ನೆಲೆಯಲ್ಲಿ. ಸಂವಾದದ ಅಗತ್ಯವಿದ್ದದ್ದು ಕೇವಲ ಹೊರಬದುಕಿನ ರಾಜಕೀಯ ಮತ್ತು ಆರ್ಥಿಕ ಕೊಡುಕೊಳ್ಳುವಿಕೆಗೆ ಮಾತ್ರ. ಹಾಗಾಗಿ ನಮ್ಮ ಪರಂಪರೆಯ ಆಂತರಿಕ ಬದುಕಿನ ಶ್ರೀಮಂತಿಕೆಯನ್ನು, ಸಾಮಾಜಿಕ ಮೌಲ್ಯಗಳನ್ನು ಸಮಾನ ಮನಸ್ಕರಾಗಿ ಹೊರಜಗತ್ತಿನೊಡನೆ ಹಂಚಿಕೊಂಡ ಅವಕಾಶಗಳು ಬಹಳ ಕಡಿಮೆ.

ಹಾಗೆ ನೋಡಿದರೆ ಮುಘಲರು ಕೂಡ ದಾಳಿಕೋರರೆ. ಆದರೂ ಕಲೆ, ಭಾಷೆ, ಪರಂಪರೆ ಮತ್ತು ಸಾಂಸ್ಕøತಿಕ ವಿಚಾರಗಳಲ್ಲಿ ಅವರು ದೇಶೀಯರೆ ಆಗಿ ಪರಿವರ್ತನೆಗೊಂಡದ್ದು ವಿಶೇಷ ಬೆಳವಣಿಗೆ. ಭಾಷೆ ಏನೋ ಒಂದು ವಿಷಯ ಹೇಳಲಿಕ್ಕೆ ಇರುವ ಸಾಧನ ಮಾತ್ರವಲ್ಲ. ಅದೇ ಸ್ವಾಯತ್ತ ಜೀವನಕ್ರಮದ ವೈಚಾರಿಕತೆ, ಜ್ಞಾನ ಮತ್ತು ತಿಳುವಳಿಕೆಯ ಪ್ರತಿಬಿಂಬ ಅನ್ನುವ ನಂಬಿಕೆಯ ಅಭಿವ್ಯಕ್ತಿಯಾಗಿ ಕೂಡ ಶ್ರೀಮತಿ ಸುಜಾತ ಅವರ ದಾಖಲೆ ಕಾಣಿಸುತ್ತದೆ.

ಕನ್ನಡ ಭಾಷೆಯನ್ನು ಉಳಿಸುವುದೆಂದರೆ, ಅದರ ವೈವಿಧ್ಯತೆಯನ್ನು ಉಳಿಸುವುದು. ಶಿಕ್ಷಣದಲ್ಲಿ ಏಕರೂಪ ಭಾಷೆಯನ್ನು ಕಡ್ಡಾಯವಾಗಿ ಕಲಿಸಿದರೆ ಇಂದಿನ ಆಧುನಿಕ ಜಾಗತಿಕ ವಾತಾವರಣದಲ್ಲಿ ಅದು ಬರೀ ಸಂಹವನ ಭಾಷೆಯಾಗಿ ಮಾತ್ರ ಉಳಿಯಲು ಸಾಧ್ಯ. ಆಧುನಿಕ ವಿಜ್ಞಾನ, ತಂತ್ರಜ್ಞಾನವಲ್ಲದೆ ಪಾರಂಪರಿಕ ಜ್ಞಾನ ಶಾಖೆಗಳಲ್ಲೂ ಕೂಡ ಪ್ರೌಢ ವಿದ್ಯಾಭ್ಯಾಸ ಜಾಗತಿಕ ಸಂವಹನದ (ಸಾಂಸ್ಕೃತಿಕವಲ್ಲದ) ಇಂಗ್ಲೀಷ್ ಭಾಷೆಯಲ್ಲಿ ನಡೆಯುವುದರಿಂದ ನಾವು ಉಳಿಸಿಕೊಳ್ಳಬೇಕಾದದ್ದು ಸಮುದಾಯದ ಮಧ್ಯೆ ಇನ್ನು ಜೀವಂತವಾಗಿರುವ, ದೇಶೀ ಜ್ಞಾನ ಪರಂಪರೆಗಳು ಮೌಖಿಕ ರೂಪದಲ್ಲಿ ಶ್ರೀಮಂತವಾಗಿರುವ ಪ್ರಾದೇಶಿಕ ನುಡಿಕಟ್ಟುಗಳನ್ನು. ಇತ್ತೀಚೆಗೆ ನಾನು ಸ್ಕಾಟಲೆಂಡ್‍ನಲ್ಲಿ ಕೆಲಸಮಯ ಕಳೆದಾಗ ಅಲ್ಲಿಯ ಸ್ಥಳೀಯರು ಇಂತಹ ಒಂದು ಚಿಂತನೆಯನ್ನು ರೂಪಿಸಿಕೊಳ್ಳುತ್ತಿರುವುದನ್ನು ಗಮನಿಸಿದೆ. ಫ್ರಾನ್ಸ್, ಜರ್ಮನಿ, ಚೀನಾ, ಮುಂತಾದ ಪ್ರಭಾವಯುಕ್ತ ದೇಶಭಾಷೆಗಳ ಸಾಂಸ್ಕøತಿಕ ವಲಯಗಳಲ್ಲೂ ಸಹ ಈ ಬಗ್ಗೆ ಚಿಂತನೆಗಳಾಗುತ್ತಿವೆಂಬುದನ್ನು ಕೇಳಿದ್ದೇನೆ. ಭಾಷೆಯನ್ನು ಸ್ವಾಯತ್ತ ಸಾಂಸ್ಕøತಿಕ ಭಿತ್ತಿಯಾಗಿ ನೋಡಲು ಸುಜಾತ ಅವರ ಪುಸ್ತಕದಿಂದ ಕೆಲವು ವಿವರಣೆಗಳನ್ನು ಉಲ್ಲೇಖಿಸಬಹುದು.

1. “ಎಳೇ ಮಕ್ಕಳೂ ಅಂತಂದ್ರೆ ಮಲ್ಲಿಗೆ ಹೂವನಂಗೆ ಮುಟ್ಟಬೇಡಿ ಅಂತಲೆ ಮುಟ್ಟುತ್ತಾ, ಜೋಗುಳದ ದನಿಯಲ್ಲಿ ತೊಟ್ಟಿಲನ್ನಲ್ಲದೇ ತನ್ನ ಊರನ್ನೂ ತೂಗುತ್ತಾ ಮಂಪರು ಬರಿಸುವ ಅಜ್ಜಮ್ಮನ ……… ಜೋಗುಳದ ಹಾಡಿಗೆ, ಮೊಸರು ಕಡೆವ ಸದ್ದಿಗೂ ಮಂಪರಿನ ಒಂದು ಲಯ ಬಂದು, ಮಜ್ಜಿಗೆ ಮಡಿಕೆಯಲ್ಲಿ ಸೂರ್ರ್-ಬರ್ರ್ ಅನ್ನೋ ಸದ್ದು ಎದ್ದೂ ಬಿದ್ದೂ ಅದೇ ಸದ್ದನ್ನು ಕಡೆಯುತ್ತಾ, ಅವ್ವನ ಕೈಯೆಳೆವ ಹಗ್ಗದ ಸುರುಳಿಯೊಳಗೆ ಮಂತು ತನ್ನ ಕಂಬದ ಸುತ್ತಾ ತಾನೆ ಸುತ್ತುತ್ತಾ, ಮಜ್ಜಿಗೆಯ ನೊರೆ ಸುರುಳಿ ತಿರುತಿರುಗಿ ಹಗುರಾಗಿ ಆಳದಿಂದ ಮೇಲೆದ್ದು ತೇಲುತ್ತಾ ಬಿಳಿ ಮೋಡದ ತಿರುಳಾಗಿ ಬೆಣ್ಣೆಯಾಗದಳಿ ಹಂಗೆ ಉಂಡುಗಂಟಕೊಳತ್ತಿತ್ತು” (ಪುಟ. 61).

ಹೀಗೆ ವೈಯಕ್ತಿಕ ನೆಲೆಯ ದೈನಂದಿನ ಚಟುವಟಿಕೆಯ ವಿವರವೊಂದು ಕುಟುಂಬ ಮತ್ತು ಸಮುದಾಯಕ್ಕೆ ವಿಸ್ತರಣೆಗೊಂಡು ನಿಸರ್ಗವನ್ನು ಒಳಗೊಳ್ಳುತ್ತ ಆಕಾಶಕ್ಕೆ ಜಿಗಿಯುವ ಸಮಗ್ರ ನೋಟವಾಗಿ ಭಾಷೆಯಲ್ಲಿ ಚಿತ್ರಿತವಾಗಬಹುದೆಂಬುದನ್ನು ಇಲ್ಲಿ ಗಮನಿಸಬಹುದು. ಇದು ಆ ಭಾಷೆಯಲ್ಲಿ ಮಾತ್ರವೇ ಸಾಧ್ಯವೇನೋ ಎನ್ನುವಷ್ಟರ ಮಟ್ಟಿಗೆ ಸ್ವಾಯತ್ತವಾಗಿದೆ.

2. ಮನುಷ್ಯನ ಹೊರ ಬದುಕಿಗೆ, ವ್ಯಾವಹಾರಿಕ ಸಂಬಂಧಗಳಿಗೆ ತರ್ಕ ಸಾಕಾಗಬಹುದು. ಆದರೆ, ಅಂತರಂಗದ ಕ್ಲೈಭ್ಯಕ್ಕೆ, ಅರ್ಥವ್ಯಾಪ್ತಿಗೆ ಮೀರಿ ನಡೆಯುವಂತಹ ಘಟನೆಗಳಿಗೆ ಅದನ್ನು ಎದುರಿಸಲು ಬೇಕಾಗುವ ಮಾನಸಿಕ ಸ್ಥೈರ್ಯಕ್ಕೆ ಪಾರಂಪರಿಕ ನಂಬಿಕೆಗಳು, ಚಿಂತನೆಗಳು, ಚರಿತ್ರೆ, ಪುರಾಣಗಳು, ಒಪ್ಪಿಸುವ ಪಾಠಗಳು ಅಗತ್ಯವಾಗಿ ಬೇಕಾಗುತ್ತವೆ. ಸುಜಾತ ಅವರು ದಾಖಲಿಸುತ್ತಿರುವ ಮೌಖಿಕ ಭಾಷೆ ಹೇಗೆ ಅವುಗಳನ್ನು ನಿಭಾಯಿಸುತ್ತವೆ ಎನ್ನುವುದನ್ನು ಈ ಉಲ್ಲೇಖದಲ್ಲಿ ಗುರುತಿಸಬಹುದು.

“ನೋಡ್ದಾ ? ತಾಯೀರು ಸತ್ತರೆ ಮಕ್ಳು ಸಾಯದಿಲ್ಲ. ತಮ್ಮ ಮುಂದಲೆ ಮಕ್ಳು ಸತ್ತರೂವೆ ತಾಯೀರು ಸಾಯದಿಲ್ಲ – ಅಂತ ಆ ಗಳಿಗೇಲಿ ಅನುಕಂದ ಕೃಷ್ಣ………. ಏನು ಮಾಡದ ? ಶಾಪ ಕೊಟ್ಬುಟ್ಟ – ಮಕ್ಳು ಮುಂದೆ ತಾಯಂದಿರು ಸಾಯ್ಬೇಕು. ತಾಯಂದಿರ ಮುಂದಲೆ ಮಕ್ಳೂ ಸಾಯಬೇಕು. ಇದು ಜಗತ್ತು ಇರೂವರ್ಗವೆ……. ನಡೀತಲೆ ಇರಲಿ…. ಅಂಥನ” (ಪುಟ. 211).

ಮಹಾಭಾರತದ ಕೃಷ್ಣ-ಯಶೋಧೆಯರ, ಅಮ್ಮ-ಮಗನ ಮಕ್ಕಳಾಟದ ನಡುವಿನ ಘಟನೆಯಂತೆ ನಿರೂಪಿಸಿ ಕಡೆಯಲ್ಲಿ ಆಡಿರುವ ಈ ಮಾರ್ಮಿಕ ಮಾತುಗಳು – ಪುರಾಣಗಳನ್ನು, ಅದರ ತಾತ್ವಿಕ ನೆಲೆಗಳನ್ನು ಮೌಖಿಕ ಪರಂಪರೆಗಳು ಹೇಗೆ ನಿರ್ವಹಿಸುತ್ತವೆ, ನವೀಕರಿಸುತ್ತವೆ ಎನ್ನುವುದಕ್ಕೆ ಉದಾಹರಣೆಯಂತಿದೆ.

3. ‘ಕಾಲ’ನ ಲಯಕ್ಕೆ ಸಿಕ್ಕಿ ಹಾಕಿಕೊಂಡ ಪರಿಸರ, ವ್ಯಕ್ತಿ, ಸಮುದಾಯ ಎಲ್ಲವೂ ಹೇಗೆ ಬದಲಾವಣೆಯ ಅನಿವಾರ್ಯತೆಗೆ ಸಿಲುಕತ್ತವೆ ಅನ್ನುವುದನ್ನು ತೋರಿಸುತ್ತಲೇ ಸುಜಾತ ಅವರ ಬರವಣಿಗೆ ಭಾಷೆಗಳಲ್ಲಿ ಏಕ ಕಾಲಕ್ಕೆ ಸೂಚಿತವಾಗುವ ಸ್ಥಾಯಿ ಮತ್ತು ಚಲನಶೀಲ ಶಕ್ತಿಗಳಿಗೆ ಉದಾಹರಣೆಯಾಗಿ ಕಾಣಿಸುತ್ತದೆ. ಅವರ ಈ ಮಾತುಗಳನ್ನು ಗಮನಿಸಿ :

“ಹಿಂಗೆ—– ವರುಶ ಅನ್ನವು ಗಾಡಿ ಚಕ್ರದಂತೆ ಉರುಳಿ ಉರುಳಿ, ನಮ್ಮೂರಿನ ಕಲ್ಲುಗುಡ್ಡ ಅನ್ನದು ಕರಗಿ, ನೀರಾಗಿ, ಕೆರೆಯಾಗಿ ಕಲ್ಲ ಚಪ್ಪಡಿಲಿ ಮುಖ ಕಾಣ ಹಂಗೆ ಕನ್ನಡಿಯಂಥ ತಿಳಿನೀರ ಕೊಳವಾಗಿ ಉಳಿದು ಹೋಗಿದೆ. ಅದು ನಮ್ಮೂರ ಭಾರೆ ಮೇಲೆ ಇದದ್ರಿಂದ ಯಾವ ಗಲೀಜು ಗೊಸ್ರು ಅದಕ್ಕೆ ಸೇರದಿಲ್ಲ. ನಮ್ಮೂರ ಒನಕೆ ಓಬವ್ವ ಸತ್ತು ಸ್ವರ್ಗ ಸೇರಿ ಕಣ್ಮರೆಯಾದ್ರುವೆ, ಸಿನಿಮಾದಲ್ಲಿ ಜಯಂತಿ ಪಾತ್ರ ಉಳ್ಹಿಂದಂಗೆ ನನ್ನ ಮನಸ್ಸಿನ ಮುಂದೆ ಆಗಾಗ ಸುತ್ತಿಗೆ ಹೊತ್ತ ಅವಳ ಎತ್ತರದ ಛಾಯೆ, ಆಗ ಇದ್ದ ಗುಡ್ಡದ ಕಡೆ ನಡ್ಕೊಂಡು ಹೋಗ್ತಾ ಇರತ್ತೆ” (ಪುಟ. 192).

ಒಟ್ಟಿನಲ್ಲಿ ಹೇಳುವುದಾದರೆ ಸುಜಾತ ಅವರ ದಾಖಲೆ ಮೌಖಿಕತೆಯ ಶಕ್ತಿ ಮತ್ತು ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ಹತ್ತೊಂಬತ್ತನೆಯ ಶತಮಾನದ ಡೇನಿಷ್ ತತ್ವಜ್ಞಾನಿ ಕೀರ್ಕ್‍ಗಾರ್ಡ್, ಭೂತ ಮತ್ತು ಭವಿಷ್ಯ ಕಾಲದ ಬಗ್ಗೆ ಹೇಳಿದ ಸಾಂದರ್ಭಿಕ ಮಾತು”Life can only be understood backwards; but it must be lived forwards.” ಎನ್ನುವುದಕ್ಕೂ ಪೂರಕವಾಗಿದೆ ಈ ದಾಖಲೆ. ವೈಯಕ್ತಿಕ ಮತ್ತು ಸಾಮುದಾಯಿಕ, ಈ ಎರಡೂ ಚರಿತ್ರೆಗಳಿಗೆ ಬೇಕಾದ ಮೂಲ ಸಾಮಗ್ರಿ ಭಾಷೆಯ ವಿಶಿಷ್ಟತೆಗಳಲ್ಲಿರುತ್ತವೆಂಬುದನ್ನು ಈ ನೆನಪಿನ ಬರವಣಿಗೆ ತೋರಿಸುತ್ತದೆ.

ಚಾರಿತ್ರಿಕ ಪ್ರಜ್ಞೆಯ ಕೊರತೆಯೇ ಆಧ್ಯಾತ್ಮಿಕ ಚಿಂತನೆಗಳಲ್ಲಿ, ಸಾಮುದಾಯಿಕ ಸಾಮರಸ್ಯದಲ್ಲಿ ಶ್ರೀಮಂತವಾಗಿದ್ದ ಪೌರ್ವಾತ್ಯ ನಾಗರೀಕತೆಗಳು ಪಾಶ್ಚಾತ್ಯ ರಾಜಕೀಯ ಮತ್ತು ಸಾಂಸ್ಕøತಿಕ ವಸಾಹತುಗಳಾಗುವುದಕ್ಕೆ ಮುಖ್ಯ ಕಾರಣ ಎನ್ನುವ ಹಿನ್ನೆಲೆಯಲ್ಲಿ ಇಂತಹ ದಾಖಲೆಗಳ ಮಹತ್ವವನ್ನು ಗಮನಿಸಬೇಕು.

‍ಲೇಖಕರು avadhi

2 July, 2017

2 Comments

  1. H.R.sujatha

    Sir, tnku, nimma vimarsheya dikku binna ritiyalli
    Yochisuvantide. Tamage nanna pritiya vandanegalu.

  2. Ravi Kulkarni

    ನೀಲಿ ಮೂಗಿನ ನತ್ತು,
    ಕನ್ನಡ ಭಾಷೆಯ ಗತ್ತು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading