ಸುಮಿತ್ರಾ ಎಲ್ ಸಿ. ತೀರ್ಥಹಳ್ಳಿ
ಇದೆಂತಹ ಲಂಗದ ಕಥೆ ಅನ್ನಬೇಡಿ, ನಾಲ್ಕೈದು ದಶಕಗಳ ಹಿಂದೆ ಟಿ.ವಿ, ಮೊಬೈಲ್, ಇಂಟರ್ನೆಟ್‍ಗಳು ಇರಲಿಲ್ಲ. ನಾನಿದ್ದದ್ದು ಮಲೆನಾಡಿನ ಮೂಲೆಯ ಮೂರು ಮನೆಗಳ ಹಳ್ಳಿ. ಪುಸ್ತಕಗಳೆ ನಮಗೆ ಹೊರಜಗತ್ತಿನ ಬೆಳಕಿಂಡಿಗಳು. ಆಗ ನಿಸರ್ಗದ ಬಣ್ಣಗಳನ್ನು ಬಿಟ್ಟರೆ ಪುಸ್ತಕದ ಚಿತ್ರಗಳು ಮತ್ತು ಬಟ್ಟೆಯ ಮೇಲಿನ ಮುದ್ರಿತ ಚಿತ್ರಗಳೆ ನಮಗೆ ದೊಡ್ಡ ಮನರಂಜನೆಯ ಸಾಧನಗಳು.
ಹಾಗಾಗಿ ನಮ್ಮ ಬಟ್ಟೆಯ ಮೇಲಿನ ವಿನ್ಯಾಸಗಳಿಂದ ಅವುಗಳನ್ನು ಗುರುತಿಸಲು ಸುಲಭವಾಗುವಂತೆ ಅವುಗಳಿಗೆ ಹೆಸರಿಡುತ್ತಿದ್ದೆವು. ಆಗ ಮಕ್ಕಳು ಮಾತ್ರ ಲಂಗ ಹಾಕುತ್ತಿದ್ದೆವು. ಕಾಲೇಜ್ ಮುಗಿಯುವವರೆಗೂ. ಈಗಿನಂತೆ ನಿವೃತ್ತರೂ ಲಂಗ ಹಾಕುವ ಕಾಲ ಅದಲ್ಲ. ಈಗ ನನ್ನ ವಯಸ್ಸಿನವರೂ ಲಂಗ ಆರಾಮದಾಯಕ ಎಂದು ಹಾಕಿಕೊಳ್ಳುವುದು ನೋಡಿ ನಾನೂ, ಲಂಗದ ಹೊಸ ಅವತಾರ ನೋಡಿ ಎರಡು ವರ್ಷಗಳ ಹಿಂದೆ ಎರಡು ಲಂಗಗಳನ್ನು ತಂದೂ ಆಯಿತು.
ಮತ್ತೆ ಕಳೆದ ವರ್ಷ ಬಾಂದಿನಿ ಪ್ರಿಂಟ್ಸ್ ಇರುವ ಚೆಂದದ ಲಂಗ ಟ್ರೈಬ್ಸ್ ಇಂಡಿಯಾದಲ್ಲಿ ತಂದೆ. ಆದರೆ ಹಾಕಿಕೊಂಡಾಗ, ಚಿಕ್ಕವಯಸ್ಸಿನ ಹೊಸಲಂಗದ ಖುಷಿ ಇರಲಿಲ್ಲ. ಹುಡುಗಿಯಾಗಿದ್ದಾಗ ಹೊಸಲಂಗ ಹಾಕಿದಾಗ ಅದೆಷ್ಟು ಖುಷಿ. ಆವಾಗ ಅಂದರೆ ಪ್ರೈಮರಿ ಶಾಲಾದಿನಗಳಲ್ಲಿ ನಮಗೆ ಉದ್ದಲಂಗ, ಬ್ಲೌಸ್ ಮತ್ತು ಸ್ಕರ್ಟ್ [ಮಂಡಿಯವರೆಗಿರುವುದು ] ಎರಡು ಬಿಟ್ಟರೆ ಬೇರೆ ಉಡುಗೆಯ ಬಗ್ಗೆ ಗೊತ್ತಿರಲಿಲ್ಲ. ಸ್ವಲ್ಪ ಚಿಕ್ಕಮಕ್ಕಳು ಫ್ರಾಕ್ ಹಾಕುತ್ತಿದ್ದರೂ ನನಗೆ ನಾನು ಹಾಕಿದ ನೆನಪಿಲ್ಲ.

ಹೊಸ ಲಂಗಗಳು ನೆಂಟರ ಮನೆಗೆ ಹೋಗುವಾಗ ಅಥವಾ ಸ್ಕೂಲ್‍ನಲ್ಲಿ ಏನಾದರೂ ಸಮಾರಂಭ ಇದ್ದಾಗ ಮಾತ್ರ. ದಿನನಿತ್ಯ ಶಾಲೆಗೆ ಹಾಕಲು ನಾಲ್ಕಾರು ಜತೆ ಲಂಗಗಳಿರುತ್ತಿದ್ದವು. ಈ ಲಂಗಗಳನ್ನು ಗುರುತಿಸಲು ನಾವು ಅವುಗಳ ಬಣ್ಣ ಮತ್ತು ಡಿಸೈನ್‍ಗಳಿಗೆ ಅನ್ವಯಿಸಿ ಹೆಸರಿಡುತ್ತಿದ್ದೆವು.
ಕೆಂಪು ಲಂಗ, ನೀಲಿ ರೇಷ್ಮೆ ಲಂಗ, ಕೋಲು ಗೆರಟದ ಡಿಸೈನ್ ಲಂಗ, ಹಸಿರೆಲೆ ಲಂಗ, ಗ್ಲೋಬ್ ಲಂಗ ಹೀಗೆ. ನಾನು ಒಬ್ಬಳೆ ಮಗಳು ಇದ್ದುದರಿಂದ ನಮ್ಮ ತಂದೆ ತರಹೆವಾರಿ ಲಂಗಗಳನ್ನು ತರುತ್ತಿದ್ದರು. ಅಂದರೆ ಶಿವಮೊಗ್ಗದ ಖಂಡೆರಾವ್ ಅಂಡ್ ಸನ್ಸ್ ಅಂಗಡಿಯಿಂದ ಲಂಗದ ಬಟ್ಟೆ ತರುವುದು , ತೀರ್ಥಹಳ್ಳಿಯ ಟೈಲರ್ ಹತ್ತಿರ ಅಳತೆ ಕೊಟ್ಟು ಹೊಲಿಸುವುದು.
ಎರಡನೇ ಕ್ಲಾಸ್ನಲ್ಲಿದ್ದಾಗ ಮೊದಲನೇ ಸಲ ನೈಲಾನ್ ಲಂಗ ಬಂತು. ಅಂಚಿನಲ್ಲಿ ಸಣ್ಣ ಹೂಗಳಿದ್ದ ಒಡಲು ಈರುಳ್ಳಿ ಬಣ್ಣವಿದ್ದ ಚೆಂದದ ಲಂಗ. ಅದರ್ ಬ್ಲೌಸ್ ತೆಳ್ಳಗಿತ್ತು ಅಂತ ಎರಡು ಬ್ಲೌಸ್ ಒಂದರ ಮೇಲೆ ಒಂದು ಹಾಕಿಕೊಳ್ಳುವಂತೆ ಹೊಲಿದುಕೊಟ್ಟಿದ್ದ ನಮ್ಮ ಟೈಲರ್, ನನ್ಗೆ ಏಳು ವರುಷ ಆಗ. ಒಳಗಿನ ಲಂಗಕ್ಕೆ ಕಾಟನ್ ಬಟ್ಟೆಯ ಬಾಡಿ ಬೇರೆ ಇತ್ತು.
ಆಗಸ್ಟ್ ಹದಿನೈದಕ್ಕೆ ನಾವು ನಮ್ಮ ಶಾಲೆಯಿಂದ ನಾಲ್ಕು ಕಿ.ಮೀ. ನಡೆದು ಮೆರವಣಿಗೆಯಲ್ಲಿ ಮಿಡ್ಲಸ್ಕೂಲ್ ಇದ್ದ ಬಸವಾನಿಗೆ ಹೋಗಬೇಕಿತ್ತು. ಆಗ ನಾನು ಈ ಹೊಸ ನೈಲಾನ್ ಲಂಗ ಹಾಕಿಕೊಂಡಿದ್ದೆ. ನಮ್ಮಪ್ಪನ ಪರಿಚಿತರೊಬ್ಬ ಮಹಿಳೆ ನನ್ನ ಡ್ರೆಸ್ ನೋಡಿ ನೀನು ಯಾರ ಮಗಳು ಅಂತ ಕೇಳಿದ್ದರು.
ಈ ಲಂಗದಲ್ಲಿ ನಮ್ಮ ಬಂಧುಗಳ ಮದುವೆಯಲ್ಲಿ ಡ್ಯಾನ್ಸ್ ಮಾಡಿದ್ದೂ ಆಯಿತು. ಅದೊಂದು ಅವಿಸ್ಮರಣೀಯ ಮದುವೆ. ಹತ್ತಾರು ಎತ್ತಿನಗಾಡಿಗಳಲ್ಲಿ ಮದುವೆ ದಿಬ್ಬಣ ಹೆಣ್ಣಿನ ಮನೆಗೆ ಹೋಯಿತು.
ಊಟದ ನಂತರ ಚಪ್ಪರದ ಕೆಳಗೆ ಮಾತನಾಡುತ್ತಾ ಕುಳಿತಾಗ ನಮ್ಮ ಬಳಿ ಡ್ಯಾನ್ಸ್ ಮಾಡಲು ಹೇಳಿದರು ನಮಗೆ ಬರುತ್ತಿದ್ದುದು ಕೃಷ್ಣಾ ನೀ ಬೇಗನೆ ಬಾರೊ. ಮತ್ತು ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ಅನ್ನುವ ಸಿನೆಮಾ ಹಾಡು ಎರಡನ್ನೂ ಹೇಳಿಕೊಂಡು ಒಂದಾದ ಮೇಲೊಂದು ನೃತ್ಯ ಮಾಡುವುದು. [ಅಂದರೆ ಹಾಡಿಗೆ ತಕ್ಕಂತೆ ಭಾವಾಭಿನಯ ಮಾಡುತ್ತಾ ಕೈ ಕಾಲಿನ ಚಲನೆ ]ಅದನ್ನೇ ಮಾಡಿದೆವು.
ಐದು ದಶಕದ ಹಿಂದೆ ಆ ಊರಿಗೆ ಬಸ್ ಇರಲಿಲ್ಲ. ಕಾರ್ ಅಂತೂ ಯಾರ ಬಳಿಯೂ ಇರಲಿಲ್ಲ. ನಮ್ಮೂರಿಗಾದರೂ ದಿನಕ್ಕೆರಡು ಸಲ ಶಂಕರ್ ಕಂಪನಿ ಬಸ್ ಬರುತ್ತಿತ್ತು. ಹಾಗಾಗಿ ಎತ್ತಿನ ಗಾಡಿಯಲ್ಲಿ ದಿಬ್ಬಣ ಹೋಗಿದ್ದು. ಇದೆ ಸಮಯದಲ್ಲಿ ನನ್ನ ತಂದೆ ಕೆಂಪು ಅಂಚಿನ ಹಸಿರು ರೇಷ್ಮೆ ಲಂಗವೊಂದನ್ನು ಹೊಲಿಸಿದರು. ನೆರಿಗೆ ನೆರಿಗೆಯ ಲಂಗದ ಕಾಲ ಬಳಿ ಕೆಂಪು ರೇಷ್ಮೆಯ ಮೇಲೆ ಜರಿ ಅಂಚು ಇತ್ತು.
ಅದನ್ನು ಹಾಕಿಕೊಂಡು ಹೊಸಬಟ್ಟೆಯ ಆಹ್ಲಾದಕರ ಪರಿಮಳ ಅನುಭವಿಸುತ್ತಾ, ಬಂಧುಗಳೊಬ್ಬರ ಮದುವೆಗೆ ಹೋದಾಗ ನೆಹರೂ ತೀರಿಕೊಂಡು ಮೂರು ದಿನದ ಶೋಕಾಚರಣೆ ಇತ್ತು. ಮದುವೆ ದಿಬ್ಬಣದ ಬಸ್ ತೀರ್ಥಹಳ್ಳಿಯನ್ನು ಹಾದು ಹೋಗುವಾಗ ಬ್ಯಾಂಡ್ ಬಾರಿಸಬಾರದು ಎಂದು ಹೇಳಿದ್ದ ನೆನಪು. ನನ್ನ ಬಾಲ್ಯದ ನೆನಪುಗಳು ಈ ಲಂಗಗಳ ಜತೆಗೆ ನೆನಪಾಗುತ್ತವೆ.
ಮೂರನೇ ಕ್ಲಾಸ್‍ಗೆ ಬಂದಾಗ ಬಿಳಿ ಹೂವಿನ ಚಿತ್ರಗಳಿದ್ದ ನೀಲಿ ಬಣ್ಣದ ಲಂಗವೊಂದನ್ನು ನಮ್ಮಪ್ಪ ತಂದರು. ಅದನ್ನೂ ನಮ್ಮ ಊರಿನ ಒಂದು ಮದುವೆಗೆ ಹಾಕಿದ ನೆನಪಿದೆ. ಆದರೆ ಈ ಲಂಗ ಹಾಕಿಕೊಂಡು ಸ್ಕೂಲಿಗೆ ಹೋದಾಗ ಒಂದು ಅನಾಹುತ ನಡೆಯಿತು. ಆಗ ನಮ್ಮ ಶಾಲೆ ಮನೆಯಿಂದ ಒಂದು ಕಿ.ಮೀ ದೂರದಲ್ಲಿ ನಾವು ಮಠ ಎಂದು ಕರೆಯುತ್ತಿದ್ದ ಒಬ್ಬರ ಮನೆಯ ಒಂದು ಕೊಠಡಿಯಲ್ಲಿ ನಡೆಯುತ್ತಿತ್ತು. ಮಕ್ಕಳಿಗೆ ಆಟವಾಡಲು ಬೇಕಾದಷ್ಟು ಜಾಗವಿತ್ತು.
ಮಧ್ಯಾಹ್ನದ ತರಗತಿಗಳು ಮುಗಿದ ಮೇಲೆ ಆಟಕ್ಕೆ ಬಿಟ್ಟಾಗ ಮರಕೋತಿ ಆಡುತ್ತಿದ್ದೆವು. ಕೆಳಗೆ ರೆಂಬೆಗಳನ್ನು ಹರಡಿಕೊಂಡಿದ್ದ ಕತ್ತಿಕಾಯಿ ಮರ[ಮೇ ಫ್ಲವರ್] ಶಾಲೆಯ ಬಳಿಯಿತ್ತು. ನಾವು ಮರದ ಮೇಲಿದ್ದಾಗ ಕೆಳಗೆ ಒಂದನೇ ಕ್ಲಾಸ್ ಹುಡುಗಿಯೊಬ್ಬಳು ಚಪ್ಪಡಿ ಕಲ್ಲಿನ ಕೆಳಗೆ ಕೈ ಸಿಕ್ಕಿಸಿಕೊಂಡು ಬೊಬ್ಬೆ ಹೊಡೆಯಳು ಶುರುಮಾಡಿದಾಗ ಎಲ್ಲರೂ ಮರವಿಳಿದು ಅಲ್ಲಿಗೆ ಹೋದರು. ನಾನೂ ಗಡಿಬಿಡಿಯಲ್ಲಿ ಇಳಿಯಲು ಹೋದಾಗ ಲಂಗ ಮರದ ಗೆಲ್ಲಿಗೆ ಸಿಕ್ಕಿಕೊಂಡು ನಾನು ತಲೆಕೆಳಗಾಗಿ ನೇತಾಡಲು ಶುರು ಮಾಡಿದೆ. ಕೂಗಿದರೂ ಯಾರಿಗೂ ನನ್ನ ಕಡೆ ಗಮನವಿಲ್ಲ.
ಹೊಸ ಲಂಗವಾದುದರಿಂದ ಅದು ಹರಿದು ಹೋಗಲೂ ಇಲ್ಲ. ರಸ್ತೆಯಲ್ಲಿ ಹೋಗುತ್ತಿದ್ದವರೊಬ್ಬರು ಓಡಿಬಂದು ನನ್ನನ್ನು ತಲೆ ಕೆಳಗಾದ ಭಂಗಿಯಿಂದ ವಿಮೋಚನೆಗೊಳಿಸಿದರು. ಸುಮಾರು ಸಮಯ ತಳೆಕೆಳಗಾಗಿ ಇದ್ದುದರಿಂದ ಕೈಗಳೆರಡೂ ಮನೆಗೆ ಹೋಗುವ ವೇಳೆಗೆ ಊದಿಕೊಂಡು ಬಳೆಗಳು ಬಿಗಿಯಾದವು. ರಬ್ಬರ್ ಬಳೆಗಳನ್ನು ಅಜ್ಜಿ ಕತ್ತರಿಸಿ ತೆಗೆದರು. ಎರದು ದಿನ ಸ್ಕೂಲ್ಗೆ ಹೋಗದೆ ಅಜ್ಜಿ ಹುರಿದುಕೊಟ್ಟ ಕಡಲೆ ತಿಂದುಕೊಂಡು ಮನೆಯಲ್ಲೆ ಇದ್ದೆ. ಕೈ ಊತ ಮೊದಲ ದಿನವೆ ಇಳಿದಿತ್ತು.
ಎರಡನೇ ದಿನ ಮನೆಯಲ್ಲಿ ಅಜ್ಜಿ ಮಜ್ಜಿಗೆ ಕಡೆಯುತ್ತಿದ್ದಾಗ ನಾನು ಅಲ್ಲೆ ಕುಳಿತು ಸೊರ್ ಬರ್ ಅಂತ ಕಡೆಗೋಲಿನ ಸದ್ದನ್ನು ಅನುಕರಿಸುತ್ತಾ ಕುಳಿತಿದ್ದೆ. ಆಗಲೇ ಹೊಸ ವಿಪತ್ತೊಂದು ಬಂತು. ಆರೋಗ್ಯ ಇಲಾಖೆಯ ಇಬ್ಬರು ವ್ಯಾಕ್ಸಿನೇಷನ್ ಹಾಕಲು ಬಂದಿದ್ದರು. ಅಜ್ಜಿ ನಮ್ಮ ಮನೆಯ ಮಕ್ಕಳು ಶಾಲೆಗೆ ಹೋಗಿದ್ದಾರೆ ಯಾರೂ ಇಲ್ಲ ಅಂತ ಹೇಳಿ ನನ್ನನ್ನು ಬಚಾವ್ ಮಾಡಿದರು. ಆದರೆ ಅವರು ಹೊರಟು ಹೋಗಿದ್ದಾರೆ ಅಂದುಕೊಂಡು ನಾನು ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದಾಗ ಪಕ್ಕದ ಮನೆಯಿಂದ ಹೊರಬರುತ್ತಿದ್ದ ಅವರು ನನ್ನನ್ನು ಹಿಡಿದುಕೊಂಡರು. ಚುಚ್ಚಿಯೇ ಬಿಟ್ಟರು.
ನನ್ನ ತಮ್ಮನಿಗೆ ತಲೆಯ ಮೇಲೊಂದು ಕುರು ಆಗಿತ್ತು ಅವನಿಗೆ ಐದು ವರ್ಷ. ತೀರ್ಥಹಳ್ಳಿ ಆಸ್ಪತ್ರೆಗೆ ಅವನನ್ನು ಕರೆದುಕೊಂಡು ಹೋಗಿದ್ದರು. ಬರುವಾಗ ನನಗೆ, ಮೊದಲೇ ಹೊಲಿಯಲು ಕೊಟ್ಟಿದ್ದ ತಿಳಿನೀಲಿ ಬಣ್ಣದ ಸಿಲ್ಕಿನ ಲಂಗ ತಂದಿದ್ದರು. ಅಂಚಿನಲ್ಲಿ ಪಿಂಕ್ ಹೂಗಳಿದ್ದ ಮೆತ್ತಗಿದ್ದ ಈ ಲಂಗ ನನಗೆ ಬಹಳ ಪ್ರಿಯವಾಗಿತ್ತು. ಅದೇ ವರ್ಷ ಅಜ್ಜಿಯ ಸಂಬಂಧಿಕರ ಮನೆಗೆ ಬೇಸಿಗೆ ರಜೆಗೆ ಹೋಗಿದ್ದಾಗ ನನಗೆ ನಿಂಬೆ ಹಳದಿ ಬಣ್ಣದ ರೇಷ್ಮೆ ಲಂಗವೊಂದು ಉಡುಗೊರೆಯಾಗಿ ಸಿಕ್ಕಿತು. ಅದು ಮೆತ್ತಗೆ ಮುಟ್ಟಿದರೆ ಹಿತವಾಗಿತ್ತು. ಸ್ವಲ್ಪ ಹಳತಾದಾಗ ನಾನು ಅದನ್ನು ಕಚ್ಚಿ ಕಚ್ಚಿ ತೂತು ಮಾಡಿದ್ದೆ ಯಾಕೆ ಅಂತ ಗೊತ್ತಿಲ್ಲ.

ಚೈಲ್ಡ್ ಸೈಕಾಲಜಿ ಯಲ್ಲಿ ಉತ್ತರವಿರಬಹುದು. ಮತ್ತೊಂದು ಬಿಳಿ ರೇಷ್ಮೆದಾರದ ಅಂಚಿದ್ದ ಆಕಾಶವರ್ಣದ ಲಂಗ. ಅದನ್ನು ನನ್ನ ಅಜ್ಜಿಯ ಊರಿನವರೊಬ್ಬರ ಮನೆಯ ಮದುವೆ ದಿನ ಮೊದಲು ಹಾಕಿಕೊಂಡಿದ್ದೆ [ಅದು ಬಂಗಾಳದ ಕೈಮಗ್ಗದ ಬಟ್ಟೆಯಿಂದ ಹೊಲಿದದ್ದು ಅಂತ ಆಮೇಲೆ ತಿಳಿಯಿತು].
ನನ್ನ ಅಮ್ಮನ ಕಸಿನ್ ಒಬ್ಬರ ಮಗಳು ನನಗಿಂತ ದೊಡ್ಡವಳು ಕಾಲೇಜು ಓದುತ್ತಿದ್ದವಳು. ನಾಲ್ಕನೇ ಕ್ಲಾಸ್‍ನಲ್ಲಿದ್ದ ನನಗೆ ಎರಡು ಜಡೆ ಹೆಣೆದು ಹೊಸ ಲಂಗ ಹಾಕಿ ತಯಾರು ಮಾಡಿದಳು.
ಅಮ್ಮ-ತಮ್ಮಂದಿರ ವೇಷಭೂಷಣ, ತಮ್ಮ ಅಲಂಕಾರದಲ್ಲಿ ಮಗ್ನರಾಗಿದ್ದರು. ಅಂತೂ ಎಲ್ಲರೂ ರೆಡಿಯಾಗಿ ಹೋಗುವ ಹೊತ್ತಿಗೆ ಮೈಕ್‍ನಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೆ ಹಾಡು ಬರುತ್ತಿತ್ತು. ನಾವು ಒಳಗೆ ಹೋಗಿ ಜಮಖಾನದ ಮೇಲೆ ಕೂರುವಷ್ಟರಲ್ಲಿ ದಿಬ್ಬಣ ಬಂತು ಎಂಬ ಗಡಿಬಿಡಿಯಾಗಿ ಎಲ್ಲರೂ ಎದುರುಗೊಳ್ಳಲು ಹೊರಗೆ ಅಂಗಳಕ್ಕೆ ಬಂದರು. ಮದುಮಗ ಬಂದ ಹೊಸಿಲಲಿ ನಿಂದ ಹಾಡು ಶುರುವಾಯಿತು.
ಆಗ ತೀರ್ಥಹಳ್ಳಿಯಲ್ಲಿ ಮುಂಬಯಿಯಲ್ಲಿದ್ದು ಊರಿಗೆ ಮರಳಿದ ಒಬ್ಬರು ಟೈಲರ್ ಸ್ಟೈಲಾಗಿ ಹೊಲಿಯುತ್ತಿದ್ದರು. ಅಪ್ಪ ಅವರ ಬಳಿ ನನಗೆ ಹಾಫ್ ಸ್ಕರ್ಟ್ ಹೊಲಿಸಿದರು. ಹೂ ಹೂವಿನ ಗಿಡ್ಡ ಲಂಗ ಮತ್ತು ಅದಕ್ಕೆ ಮ್ಯಾಚ್ ಆಗುವ ತೆಳುನೀಲಿ ಬ್ಲೌಸ್.
ನಮ್ಮ ಭಾಷೆಯಲ್ಲಿ ಲಂಗ ಅಂದರೆ ಉದ್ದ ಲಂಗ. ಸ್ಕರ್ಟ್ ಅಂದರೆ ಹಾಫ್ ಸ್ಕರ್ಟ್. ನಾಲ್ಕನೆ ಕ್ಲಾಸ್‍ನ ರಜೆಯಲ್ಲಿ ಅಜ್ಜಿಯ ಮನೆಗೆ ಹೋದಾಗ ಇನ್ನೊಂದು ಗಿಡ್ಡಲಂಗ ಉಡುಗೊರೆ ಸಿಕ್ಕಿತು. ಐದನೇ ತರಗತಿಗೆ ಅದನ್ನು ತೊಟ್ಟುಕೊಂಡು ಹೋದಾಗ ನಮ್ಮ ಹೆಡ್ಮಾಸ್ಟ್ರು ಸನಾತನವಾದಿಗಳು ನೀನು ಕಿರಿಸ್ತಾನಾ ಅಂದಿದ್ದರು.
ಕೋಲು ಗೆರಟ ಡಿಸೈನಿನ ಲಂಗ ನಾನು ಆರನೇ ಕ್ಲಾಸ್‍ನಲ್ಲಿರುವಾಗ ಬಂತು. ಹೈಸ್ಕೂಲ್‍ಗೆ ಹೊಸ ಕಟ್ಟಡ ಆಗಿ ಉದ್ಘಾಟನೆಗೆ ನ್ಯಾಯಧೀಶರಾಗಿದ್ದ ಹೊಂಬೇಗೌಡರು ಬಂದಿದ್ದರು. ಆಗ ಊರಿನವರೆಲ್ಲ ಆ ಸಮಾರಂಭಕ್ಕೆ ಹೋಗಿದ್ದೆವು. ಉಪ್ಪಿಟ್ಟು ಕೇಸರಿಬಾತ್ ಕೊಟ್ಟಿದ್ದರು ನಾನು ಈ ಹೊಸ ಲಂಗ ಹಾಕಿದ್ದೆ. ನನ್ನ ಕಸಿನ್ ಒಬ್ಬಳು ಆ ಡಿಸೈನ್‍ಗೆ ಕೋಲು ಗೆರಟ ಅಂತ ಹೆಸರಿಟ್ಟಳು. ಅದು ಒಂಥರ ವೀಣೆಯ ಚಿತ್ರಗಳ ತರಹ ಇದ್ದ ಡಿಸೈನ್. ಆದರೆ ಅವಳು ವೀಣೆ ನೋಡಿರಲಿಲ್ಲ. ಅಂದರೆ ಈ ಬಟ್ಟೆಯ ಮೇಲಿನ ಚಿತ್ರಗಳೇ ನಮ್ಮ ಕಲ್ಪನೆಯನ್ನು ಬೆಳೆಸುವ ಹೊತ್ತು ಕಳೆಯುವ ಮನರಂಜನೆಯ ಸಾಧನಗಳಾಗಿದ್ದವು.
ಏನಾದರೂ ಸಮಾರಂಭಗಳಿದ್ದಾಗ ಮಾತ್ರ ಹೊಸ ಲಂಗ. ಉಳಿದಂತೆ ನಾಲ್ಕಾರು ಸಾಧಾರಣ ಲಂಗಗಳು ದಿನನಿತ್ಯ ಸ್ಕೂಲ್ಗೆ. ಮನೆಯಲ್ಲಿ ಇನ್ನೂ ಸ್ವಲ್ಪ ಹಳೆಯದಾದ ಅಡಿಕೆ ಚೊಗರು, ಗೇರುಹಣ್ಣಿನ ಸೊನೆಯ ಕಲೆಗಳಿಂದ ಶೋಭಿಸುತ್ತಿದ್ದ ಹಳೆಯ ಅಂಗಿಗಳು [ಲಂಗಗಳು]. ಲಂಗಗಳ ಮೇಲೆ ಸ್ವಲ್ಪ ಉದ್ದ ಬ್ಲೌಸ್. ಇದು ಕೆಲವೊಮ್ಮೆ ಬ್ಯಾಕ್ ಬಟನ್ . ಕೆಲವೊಮ್ಮೆಫ್ರಂಟ್ ಬಟನ್ ಕೆಲವೊಮ್ಮೆ ಸೈಡ್ ಬಟನ್.
ಲಂಗ ಮೇಲ್ಭಾಗದಲ್ಲಿ ಬಿಳಿ ಬಟ್ಟೆಯಿಂದ ಹೊಲಿದ ಬಾಡಿ ಇರುತ್ತಿತ್ತು. ಅದರಿಂದ ಕೆಳಗೆ ನೆರಿಗೆ ಇಟ್ಟು ಹೊಲಿದಿರುತ್ತಿದ್ದರು. ಮೂರು ಮೀಟರ್ ಬಟ್ಟೆ ಬೇಕಾಗುತ್ತಿತ್ತು. ಮಳೆಗಾಲದಲ್ಲಿ ಮನೆಯೊಳಗೆ ಇದ್ದು ಬೇಸರವಾದಾಗ ಜಗಲಿಯಲ್ಲಿ ಗಿರಿ ಗಿರಿ ತಿರುಗಿ ಲಂಗದೊಳಗೆ ಗಾಳಿ ತುಂಬಿ ಬಲೂನಿನಂತಾದಾಗ ಕುಳಿತುಕೊಳ್ಳುತ್ತಿದ್ದೆವು. ಒಳ್ಳೆಯ ಮಣಿಪುರಿ ನೃತ್ಯದ ದೃಶ್ಯದಂತೆ ನಾಲ್ಕಾರು ಮಕ್ಕಳು ಒಟ್ಟಿಗೆ ಹೀಗೆ ಮಾಡಿದಾಗ ಕಾಣಿಸುತ್ತಿತ್ತು.
ನಮಗೆ ಹೈಸ್ಕೂಲ್‍ಗೆ ಬರುವವರೆಗೂ ಯೂನಿಫಾರ್ಮ್ ಇರಲಿಲ್ಲ. ಹೈಸ್ಕೂಲ್‍ನಲ್ಲಿ ಎರಡು ದಿನ ಹಸಿರು ಲಂಗ ಬಿಳಿ ಕುಪ್ಪಸ. ಬೇರೆ ದಿನ ನಮ್ಮಿಷ್ಟ. ಹೈಸ್ಕೂಲ್‍ಗೆ ಬರುವ ವೇಳೆಗೆ ಲಂಗಗಳ ಸಂಖ್ಯೆ ಜಾಸ್ತಿಯಾಗಿತ್ತು. ಅದೂ ಡಾರ್ಕ್ ಕಲರ್ ಲಂಗಗಳು. ತಿಂಗಳ ದಿನಗಳಲ್ಲಿ ಏನಾದರೂ ಕಲೆಯಾದರೆ ಕಾಣಬಾರದು ಅಂತ ಅಮ್ಮನ ನೈಲೆಕ್ಸ್ ಸೀರೆಗಳು ಕೆಲವು ಲಂಗದ ರೂಪ ತಾಳಿದವು.
ಒಳ್ಳೆ ಈರುಳ್ಳಿ ಬಣ್ಣದ ಒಡಲಿನಲ್ಲಿ ಮೇಪಲ್ ಎಲೆಗಳ ಡಿಸೈನ್ ಇದ್ದ ಲಂಗ ಒಂದು. ಮತ್ತೊಂದು ಆಗ ನಾವು ಟೆರಿಕಾಟ್ ಎಂದು ಕರೆಯುತ್ತಿದ್ದ ಬಟ್ಟೆಯದು ಅದೂ ಸುಂದರವಾದ ಮೆರೂನ್ ಕಲರ್ ಹೂಗಳು ಗಂಧದ ಬಣ್ಣದ ಹಿನ್ನೆಲೆಯ ಚೆಂದದ ಲಂಗ. ವರ್ಷಕ್ಕೊಮ್ಮೆ ಮೆಡಿಕಲ್ ಚೆಕ್ ಅಪ್‍ಗೆ ಲೇಡಿ ಡಾಕ್ಟರ್ ಒಬ್ಬರು ಬರುತ್ತಿದ್ದರು . ಅವರು ನಮ್ಮ ಫಾರಮ್‍ನಲ್ಲಿ ಎತ್ತರ ತೂಕ, ಅಲ್ಲದೆ ಹಲ್ಲು ಉಗುರು ಶುಚಿತ್ವ ಎಲ್ಲ ಕಾಲಮ್‍ಗಳಲ್ಲು ತಮ್ಮ ಅಭಿಪ್ರಾಯ ಬರೆದು ಕ್ಲೋಥ್ಸ್ ಅನ್ನುವ ಕಾಲಮ್ ನಲ್ಲಿ ಇಂಡಿಯನ್ ಗುಡ್ ಎಂದು ಬರೆಯುತ್ತಿದ್ದರು.
ನನಗೆ ಖುಷಿ. ಹೈಸ್ಕೂಲ್ ನಲ್ಲಿದ್ದಾಗಲೇ ಬಂಧುವೊಬ್ಬರ ಮದುವೆಗೆ ರೇಷ್ಮೆ ಲಂಗವೊಂದು ಬಂದಿತು. ಆಕಾಶನೀಲಿ ಬಣ್ಣದ ಮೈ, ಕಡು ನೀಲಿ ಅಂಚು ಇದ್ದ ಲಂಗ. ಆಗ ರೇಷ್ಮೆ ಲಂಗಕ್ಕೆ ಗೆಳತಿಯರ ನಡುವೆ ಬಹಳ ಗೌರವ. ಕ್ರೀಮ್ ಕಲರ್ಗೆ ಹಸಿರು ಅಂಚು ಇದ್ದ ಇನ್ನೊಂದು ಲಂಗ. ಕಾಲೇಜ್‍ಗೆ ಬಂದ ಮೇಲೆ ಇನ್ನೂ ಒಳ್ಳೆಯ ಲಂಗಗಳು ಬಂದವು. ಕಡುಗೆಂಪು ಬಣ್ಣದ ಲಂಗದ ಜತೆಗೆ ನೀಲಿ ನೈಲೆಕ್ಸ್ ಲಂಗವೊಂದು ಬಂತು. ಕಾಲೇಜ್ನಲ್ಲಿ ಕೆಲವರು ಪಂಜಾಬಿ ಡ್ರೆಸ್ಸ್, ಪ್ಯಾಂಟ್ ಇತ್ಯಾದಿ ಹಾಕುತ್ತಿದ್ದರೂ ನಾವು ಹಾಕುತ್ತಿರಲಿಲ್ಲ.
ದಾವಣಿ ಆಗ ಫ್ಯಾಷನ್ ಆಗಿರಲಿಲ್ಲ ಅದಾಗಲೇ ಹಳೆಯ ಕಾಲದ್ದು ಅನಿಸಿಕೊಂಡಿತ್ತು. ಆಗ ನನ್ನ ಸಹಪಾಠಿಯೊಬ್ಬಳಿಗೆ ಒಂದು ದಿನ ಪತ್ರವೊಂದು ಬಂತು. ಒಬ್ಬ ಸಹಪಾಠಿಯ ಹೆಸರಿನಲ್ಲಿ.. ನೀನು ನನ್ನನ್ನು ಪ್ರೀತಿಸುವುದಾದರೆ ಸೋಮವಾರ ನಿನ್ನ ಪಿಂಕ್ ಕಲರ್ ಲಂಗ ಬ್ಲೌಸ್ ಹಾಕಿ ಬಾ ಅಂತ. ಕಿತಾಪತಿಗೆ ಹೆಸರಾದ ಇನ್ನೊಬ್ಬ ಹುಡುಗಿ ಆ ಕಾಗದ ಬರೆದಿದ್ದಳು ಅಂತ ಆಮೇಲೆ ತಿಳಿಯಿತು. ಕಾಲೇಜ್‍ನಲ್ಲಿ ಏನಾದರೂ ಸಮಾರಂಭ ಇದ್ದರೆ ಮಾತ್ರ ಕಷ್ಟಪಟ್ಟು ಸೀರೆ ಉಡುತ್ತಿದ್ದೆವು, ಉಳಿದಂತೆ ಪ್ರತಿದಿನ ಲಂಗ. ನನ್ನ ಬಾಲ್ಯ ಮತ್ತು ಹದಿಹರೆಯದ ದಿನಗಳ ಜತೆಗೆ ಈ ಲಂಗಗಳು ಹಾಸುಹೊಕ್ಕಾಗಿವೆ.
ಈ ನೆನಪುಗಳ ಜತೆಗೆ ನಮ್ಮ ಅಪ್ಪನ ನೆನಪು ಬರದೇ ಇರಲು ಸಾಧ್ಯವಿಲ್ಲ. ಈ ಲಂಗಗಳನ್ನು ಪ್ರೀತಿಯಿಂದ ಹೊಲಿಸಿಕೊಡುತ್ತಿದ್ದವರು ಅವರೇ ತಾನೆ.






ನಿಮ್ಮ ಭಾಗ್ಯ, ಸುಮಿತ್ರಾ! ನನಗೋ 8th Std ನ ಕೊನೆಯರ್ಧದಲ್ಲೇ ಹಾಫ್ ಸಾರಿ ಬಂದು, 9th ನಲ್ಲಿ ಸೀರೆಯೂ ಬಂದಾಗಿತ್ತು. ತೋರ ಇದ್ದೆನೆಂಬ ಕಾರಣಕ್ಕೆ. S.S.C.ಯಲ್ಲೂ ನಮ್ಮ ಕ್ಲಾಸ್ನಲ್ಲಿ ನಾನೊಬ್ಬಳೇ ಸೇರೆ ಉಡುತ್ತಿದ್ದವಳು. ಚಿಕ್ಕವರಿದ್ದಾಗ ಮುಂಬೈಯ ಜಾಸ್ಮಿನ್ ಮಿಲ್ಸ್ ನಿಂದ ನಮ್ಮಜ್ಜ ಕಳುಹಿದ ಚೆಲುವಾದ ನೈಲಾನ್, ವೆಲ್ವೆಟ್ ಬಟ್ಟೆಗಳಿಂದ ತಂಗಿಗೆ ಫ್ರಾಕ್, ನನಗೆ ಲಂಗ. . ಬರೇಯುತ್ತಾ ಹೋದರೆ ಪ್ರತಿಕ್ರಿಯೆ ಬದಲಿಗೆ ಲೇಖನವೇ ಆದೀತು.
Thank you Shamala
ನಾನೂ ಬಾಲ್ಯದಲ್ಲೊಮ್ಮೆ ಓಡಾಡಿ ಬಂದೆ.