ನನಗೆ ನಿರಂಜನರನ್ನು ನೋಡುವ ಮತ್ತು ಮಾತನಾಡುವ ಭಾಗ್ಯ ಸಿಕ್ಕಿತು

ನೆನಪು 52

ಮೊದಲಿನಿಂದಲೂ ಅಣ್ಣನಿಗೆ ನಿರಂಜನ ಅವರೆಂದರೆ ಪಂಚಪ್ರಾಣ. ಅವರ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಯನ್ನು ಅವೆಷ್ಟು ಜನಕ್ಕೆ ಕಳುಹಿಸಿದ್ದಾನೋ ಗೊತ್ತಿಲ್ಲ. ಆತ ತಂದು ಹಂಚಿದ ಚಿರಸ್ಮರಣೆ ಕೃತಿ ನೂರಾರು ಜನರ ಗ್ರಂಥಾಲಯದಲ್ಲಿ ಇರಬಹುದೇನೊ.

ಇದು ನಾನು ಓದಿದ ಮೊದಲ ಕಾದಂಬರಿಯೂ ಹೌದು. ನಿರಂಜನ ಅವರು ಕಮ್ಯುನಿಷ್ಟ್ ಪಕ್ಷದಲ್ಲಿ ಸದಸ್ಯರಾಗಿದ್ದುದು, ಪಕ್ಷದ ಮುಖವಾಣಿಯಾದ ಜನಶಕ್ತಿ ಪತ್ರಿಕೆಯ ಸಂಪಾದಕರಾಗಿದ್ದುದು ಮತ್ತು ಭೂಗತ ಜೀವನ ನಡೆಸುವಾಗ ಅವರು ಉತ್ತರ ಕನ್ನಡದ ಕಾರವಾರದಲ್ಲಿಯೇ ಇದ್ದುದನ್ನು ಅಣ್ಣ ಹಲವು ಬಾರಿ ನಮಗೆ ಹೇಳಿದ್ದ.

ಎಸ್.ಎಫ್.ಐ. ವಿದ್ಯಾರ್ಥಿಗಳಿಗಾಗಿ ಮತ್ತು ಡಿ.ವೈ.ಎಫ್.ಐ.ಸದಸ್ಯರಿಗಾಗಿ ನಡೆಸಿದ ಅಧ್ಯಯನ ಶಿಬಿರದಲ್ಲಿ ನಿರಂಜನ ಅವರ ಕಾದಂಬರಿಗಳನ್ನು ಓದಲು ತಾಕೀತು ಮಾಡುತ್ತಿದ್ದ.

ಮೃತ್ಯುಂಜಯ ಕಾದಂಬರಿಯಲ್ಲಿ ಹೇಳುವ “ಕತ್ತಲಾದ ಮೇಲೆ ಬೆಳಕು ಹರೀತದೆ. ಇದು ಸಾಮಾನ್ಯ ಅಂತಾ ತೋರುವ ಅಸಾಮಾನ್ಯ ವಿಷಯ ನೆನಪಿಡಿ” ಎನ್ನುವ ಆತನ ಪ್ರಿಯವಾದ ವಾಕ್ಯವನ್ನು ಆತ ತನ್ನ ಬದುಕಿನ ಭಾಗವಾಗಿಸಿಕೊಂಡಿದ್ದ. ಕೊನೆಗೆ ಆತ ತನ್ನ ಪಿಎಚ್.ಡಿ.ಗಾಗಿ ‘ನಿರಂಜನ ಕಾದಂಬರಿಯಲ್ಲಿ ಸಾಮಾಜಿಕ ಪ್ರಜ್ಞೆ’ಯನ್ನೆ ಎತ್ತಿಕೊಂಡಿದ್ದ. ಅವರ ಹಲವು ಪುಸ್ತಕಗಳನ್ನು ಸೇರಿಸಲು ಅವನು ಹರಸಾಹಸವನ್ನೆ ಮಾಡಬೇಕಾಯಿತು.

ಆಗ ನಿರಂಜನರ ಜೊತೆ ಹಲವು ಪತ್ರ ವ್ಯವಹಾರ ನಡೆಸಿದ. ಅವರಲ್ಲಿಯೂ ಅವರದೇ ಕೃತಿಗಳಿರಲಿಲ್ಲ. ತನ್ನ ಸಂಶೋಧನೆಯ ಕುರಿತು ಅಣ್ಣ ಪತ್ರ ಬರೆದಾಗ “ನಿರಂಜನ ಕಾದಂಬರಿಯಲ್ಲಿ ಸಾಮಾಜಿಕ ಪ್ರಜ್ಞೆ ಎಂಬುದು ನಿಮ್ಮ ವಿಷಯವಾದ್ದರಿಂದ ಒಟ್ಟು ೨೫ ಕಾದಂಬರಿಗಳನ್ನು ಸಂಗ್ರಹಿಸಿದರಾಯಿತು. ಈಗ ಸಿಗುವಂತಹುದು ನಾಲ್ಕೊ-ಐದೋ. ನನ್ನಲ್ಲಿ ಕೆಲ ಕೃತಿಗಳ ಒಂದು ಪ್ರತಿಯೂ ಇಲ್ಲ. ನಾವು ಅಸಹಾಯಕರು ಬೇರೆ ಬೇರೆ ಮಿತ್ರರಿಂದ ನೀವು ಸಂಗ್ರಹಿಸ ಬೇಕಾಗುತ್ತದೆ. ಇದರಲ್ಲಿ ನಿಮಗೆ ಯಶ ಸಿಗಲಿ ಎಂದಷ್ಟೇ ನಾನು ಹಾರೈಸಬಲ್ಲೆ.

ನನ್ನ ಕೆಲ ಪುಸ್ತಕಗಳು ಈಗ ಬೇರೆ ಬೇರೆ ಭಾಷೆಯಲ್ಲಿ ಸಿಗುತ್ತದೆ. ಕನ್ನಡದಲ್ಲಿ ಅಲಭ್ಯ. ಎಂಥ ವಿಪರ್ಯಾಸ: (ದಿ. ೨೦-೦೮-೮೩) ಎಂದು ಬರೆದಿದ್ದರು. ೧೯೮೦ ರಿಂದಲೂ ಅವರೊಂದಿಗೆ ಅಣ್ಣನ ಪತ್ರ ವ್ಯವಹಾರ ಇತ್ತು. ತಿಂಗಳಿಗೊಂದು ಪತ್ರ ಅಣ್ಣನಿಂದ ಬರದಿದ್ದರೆ ಅವರು ಬೇಸರ ಮಾಡಿಕೊಳ್ಳುತ್ತಿದ್ದರು. “ನಿಮ್ಮ ಪತ್ರ ಬರದಿದ್ದುದ್ದು ನೋಡಿ ಆತಂಕವಾಯಿತು ಆರ್.ವಿ. ಯಾವುದಾದರೂ ಅನಾರೋಗ್ಯಕ್ಕೆ ಗುರಿಯಾಗಿರುವುದು ಸಾಧ್ಯವೇ ಎಂಬ ಚಿಂತೆ ಕಾಡಿತು” ಎಂದು ಬರೆಯುತ್ತಿದ್ದರು.

ಪ್ರತಿ ಪತ್ರವೂ “ಪ್ರಿಯ ಬಂಧು ಆರ್.ವಿ ಅಥವಾ ಕೆಲವೊಮ್ಮೆ ಪ್ರಿಯ ರೋಹಿ” ಎಂದೇ ಪ್ರಾರಂಭವಾಗುತ್ತಿತ್ತು. ಮತ್ತು ಮಗಳು ಸೀಮಂತಿನಿ, ತೇಜಸ್ವಿನಿಯವರ ಕುರಿತು, ಅವರ ಪ್ರಯಾಣ, ವಿದೇಶದಲ್ಲಿ ಅವರ ಓದು, ವೃತ್ತಿಯ ಬಗ್ಗೆ ಎರಡು ಮೂರು ವಾಕ್ಯ. ಮಧ್ಯದಲ್ಲಿ ಅನುಪಮಾ ಅವರ ಕುರಿತು (ಬಹುವಚನದ ಸಂಬೋಧನೆಯೊಂದಿಗೆ) ಒಂದು ಪ್ಯಾರಾ. ಇದು ಇನ್‌ಲ್ಯಾಂಡ್ ಪತ್ರದ ವಿವರ. ಉಳಿದಂತೆ ಪುಸ್ತಕ ಮತ್ತು ಇನ್ನಿತರ ಸೈದ್ಧಾಂತಿಕ ಸಂಗತಿಗಳು, ಪೋಸ್ಟ್ ಕಾರ್ಡ್ ಆದರೆ ಇವರೆಲ್ಲರ ಬಗ್ಗೆ ಒಂದೊಂದು ವಾಕ್ಯ.

ಆರ್.ವಿ. ಅವರಿಗೆ ನಿರಂಜನರು ಬರೆಯುತ್ತಿದ್ದ ಪತ್ರಗಳು

ಅವರ ಪತ್ರ ಬಂದ ದಿನ ಅಣ್ಣನಿಗೆ ಸಂಭ್ರಮ. ಪತ್ರ ಓದಿದ ಮೇಲೆ ಅಲ್ಲಿ ನಿರಂಜನರ ಮತ್ತು ಅನುಪಮಾ ಅವರ ಅನಾರೋಗ್ಯದ ಸಂಗತಿ ಓದಿ ಬೇಸರಮಾಡಿಕೊಳ್ಳುತ್ತಿದ್ದ. ನಿರಂಜನರು ತೀರಾತೀರಾ ಖಾಸಗಿ ಎನ್ನಬಹುದಾದ ಸಂಗತಿಯನ್ನು ಅಣ್ಣನಿಗೆ ಬರೆಯುತ್ತಿದ್ದರು. ಅವರ ಮುಂದಿನ ಬರವಣಿಗೆಯ ಬಗ್ಗೆ ಬರೆಯುತ್ತಾ “ಒಂದು ತಿಂಗಳಿನಿಂದ ‘ತಲೆಸುತ್ತು’ ಬಾಧೆ ನನ್ನನ್ನು ಕಾಡುತ್ತಿದೆ. ಇದು ಐದನೇ ವಾರ. ಸ್ವಲ್ಪ ಕಡಿಮೆಯಾಗಿದೆ. ನಿವಾರಣೆಯಾದೀತು.

ಪರಿಷ್ಕರಣ ಕಾರ್ಯ ೧೯೮೮ರ ಮಳೆಗಾಲದವರೆಗೂ ಇದ್ದಿತು. ಅನಂತರ ‘ಹೆಜ್ಜೆ’, ಆದಾದ ಮೇಲೆ ನೆನಪುಗಳ ಒಂದು ಸಂಪುಟ ‘ಹೆದ್ದಾರಿ’, ಅದೋ ಮೂವತ್ತನೆಯದು. ಸಂಪುಟ ಸರಣಿಯಲ್ಲೂ ಕೊನೆಯದು” (ದಿ.೧೪-೧೨-೧೯೮೭). ಹೀಗೆ ಅವರು ಬರೆಯಲುದ್ದೇಶಿಸಿದ ಹೆಜ್ಜೆ ಕಾದಂಬರಿಯ ಕುರಿತು ಅವರು ಸಿದ್ಧಪಡಿಸಿಕೊಂಡ ಟಿಪ್ಪಣಿ ಆಕರಗಳೇ ಸಾವಿರಾರು ಪುಟಗಳಿದ್ದವಂತೆ.

ಆದರೆ ಅವರ ಅನಾರೋಗ್ಯದ ಕಾರಣದಿಂದ ಇವೆರಡನ್ನು ಬರೆಯಲಾಗಲೇ ಇಲ್ಲ. ನಿರಂಜನ ಅವರಿಂದ ಇದು ಆಗದಿದ್ದರೂ ತಾವಾದರೂ ಅದನ್ನು ಬರೆದು ಮುಗಿಸಿ ಎಂದು ಅಣ್ಣ ಅನುಪಮಾ ಅವರಿಗೆ ಪತ್ರ ಬರೆದಿದ್ದ. ಆದರೆ ಅದು ನಿರಂಜನ ಅವರಿಂದ ಮಾತ್ರ ಸಾಧ್ಯ. ಮೃತ್ಯುಂಜಯಕ್ಕಿಂತ ಮಹತ್ವದ ಕಾದಂಬರಿ ಆಗುತ್ತಿತ್ತು. ಇಡೀ ಮನುಕುಲದ ಉಗಮ ಬೆಳವಣಿಗೆಯ ಕುರಿತಾದ ವಸ್ತುವುಳ್ಳದೆಂದು ಅವರು ಹಲವು ಬಾರಿ ಹೇಳಿದ್ದರು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಅವರ ‘ಮೃತ್ಯುಂಜಯ’ ಕೃತಿ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಯ ನಿರ್ಲಕ್ಷ್ಯದ ಬಗ್ಗೆ ಅಣ್ಣನಿಗೆ ಬೇಸರವಿತ್ತು. ನಿರಂಜನರಿಗೆ ಈ ಪ್ರಶಸ್ತಿ ಬರದಿರುವುದಕ್ಕೆ ನವ್ಯ ಲೇಖಕರ ಸಾಂಸ್ಕೃತಿಕ ರಾಜಕಾರಣವನ್ನು ಉದಾಹರಣೆಯೊಂದಿಗೆ ಬಿಡಿಸಿಡುತ್ತಿದ್ದ.
ಆತನ ಮೊದಲ ಪಿಎಚ್.ಡಿ ಅಧ್ಯಯನದ ಫಲವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಆತ ಮುರಳೀಧರ ಉಪಾಧ್ಯಾಯ ಅವರ ಮನವಿಯ ಮೇರೆಗೆ ಭಾರತೀಯ ಸಾಹಿತ್ಯ ನಿರ್ಮಾತ್ರರ ಮಾಲಿಕೆಗಾಗಿ “ನಿರಂಜನ” ಎನ್ನುವ ಪುಸ್ತಕವನ್ನೂ ಕೂಡ ಬರೆದು ಕೊಟ್ಟ. ಎರಡನೆ ಪಿಎಚ್.ಡಿಯ ಫಲವಾಗಿ ರಾಘವೇಂದ್ರ ಪ್ರಕಾಶನಕ್ಕೆ ‘ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ’ ಎನ್ನುವ ಪುಸ್ತಕ ಬರೆದುಕೊಟ್ಟ.

ಅವರದೊಂದು ಪತ್ರ ಇದು.

“ ಜನವರಿ ೩೦ರ ನಿಮ್ಮ ಕಾಗದ ನಿನ್ನೆ ಬಂತು.
‘ಒಂದು ಬುಕ್ ಪ್ಯಾಕೆಟ್ ಮೂರು ದಿನಗಳ ಹಿಂದೆ ಬಂದಿತ್ತು. ಅಂಚೆಯವನನ್ನು ಗೇಟಿನ ಬಳಿ ಭೇಟಿಯಾದ ಅನುಪಮಾ ಒಂದು ರೂ. ಡ್ಯೂ ಇದ್ದುದನ್ನು ನೋಡಿ ‘ರಿಂದ’ ವಿಳಾಸ ಕಾಣದೆ, ಏನು ಮಾಡಬೇಕೆಂದು ತೋಚದೆ ಒಳಗೆ ನನ್ನ ಬಳಿ ಬಂದು ಕೇಳಿದರು. ಹಿಂತಿರುಗಿಸೋಣ ಎಂಬ ಅವರ ಅಭಿಪ್ರಾಯಕ್ಕೆ ಸಮ್ಮತಿಸಿದೆ. ಬುಕ್ ಪೋಸ್ಟ್ / ಪ್ರಿಂಟೆಡ್ ಬುಕ್ ಎಂದು ಬರೆದಿದ್ದರೆ ೧೫ ಪೈಸೆಗಳಲ್ಲಿ ಬರಬಹುದಾಗಿದ್ದ ಪ್ಯಾಕೆಟ್. ಇಲ್ಲಿನ ಅಂಚೆಯವರ ಉದ್ಧಟತನದಿಂದ ಒಂದು ರೂ. ಡ್ಯೂ ಆಯಿತು. ಜೀವನುದುದ್ದಕ್ಕೂ ಅಂಚೆಯವರ ಸಖ್ಯ ಎಷ್ಟೋ ಸಲ ಅವರಿಂದ ತಿವಿತ ‘ಬಳಲಿದ್ದೆ.’

ಅಂಚೆಯವನು ಹೋದಾಗಿಂದಲೇ ಯಾತನೆ ಪಟ್ಟಿದ್ದೆ; ಯಾರದೋ ಏನೋ ಎಷ್ಟೋ ಆಶೆಯಿಂದ ಕಳಿಸಿರಬಹುದು. ನೂರಾರು ಸಾರೆ ಡ್ಯೂ ತೆತ್ತು ಕವರು ಪ್ಯಾಕೆಟುಗಳನ್ನು ಪಡೆದಿದ್ದೇನೆ. ‘ಸಂಜೆ’ಯ ಹೊತ್ತು ಹೀಗೆ ಮಾಡಿದೆನಲ್ಲಾ ಈಗಂತೂ ಕಡುವೇದನೆ. ಪುಸ್ತಕಗಳನ್ನು ದಯವಿಟ್ಟು ಕಳಿಸಿಕೊಡಿ. ಬೆಲೆ-ಆದ ನಷ್ಟ ಇತ್ಯಾದಿ ಕೊಡುತ್ತೇನೆ ಎಂದರೆ ನಿಮಗೆ ಬೇಸರವಾಗುತ್ತದೆ. ಆದ ಪ್ರಮಾದಕ್ಕಾಗಿ ಕ್ಷಮೆ ಕೋರುವೆ.

ಉ.ಕ. ಜಿಲ್ಲಾ ಬಂಡಾಯ ಸಮ್ಮೇಳನದ ಆಮಂತ್ರಣ ಬಂದಿತ್ತು. ನಿಮ್ಮ ಸಂಘಟನಾ ಸಾಮರ್ಥ್ಯ ಕಂಡು ಸಂತೋಷಪಟ್ಟೆ.

ಸಾರಾ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣಕನ್ನಡ ಬಂಡಾಯ ಸಂಘಟನೆ ಪರವಾಗಿ ಬಿಳಿಮಲೆ ಹೊರಡಿಸಿದ ಸುತ್ತೋಲೆ ಬಂದಿತ್ತು. ಭಾಷೆ ಇಂಥ ಉತ್ತಮ ಕೆಲಸಕ್ಕೆ ನೆರವಾಯಿತೆಂದು ಸಮಾಧಾನವಾಯಿತು. ಕರ್ನಾಟಕದಲ್ಲಿ ಪ್ರಗತಿಪರ-ದಲಿತ ಪ್ರಜ್ಞೆಗಳನ್ನೂ ಒಳಗೊಂಡಿರುವ ಬಂಡಾಯ ಸಾಹಿತ್ಯ ಜೀವಂತವಾಗಿದೆ. ಅದರಲ್ಲಿ ನಿಮ್ಮ ಪಾಲು ಮಹತ್ವದ್ದು.

ಆರೋಗ್ಯದ ಬಗ್ಗೆ ಏನನ್ನೂ ಹೇಳುವುದಿಲ್ಲ. ಬಲಗೈ ಬೇಸತ್ತಿದೆ. ೧೯೭೧ರಿಂದ ಎರಡೂ ಕೈಗಳ ಕೆಲಸ ಅದು ಮಾಡುತ್ತಿಲ್ಲವೇ? ಬಲಗಾಲೂ ಅಷ್ಟೇ. ಆದರೂ ಕನಸು ಒಡೆದಿಲ್ಲ ಬರೆಯುತ್ತಿದ್ದೇನೆ.

ನಿಮ್ಮ ವಿಳಾಸ ಬದಲಾಗಿದೆ. ಯಾಕೆ?
೬ ಫೆಬ್ರವರಿ ೮೫

ಇದು “ಅವರ ಮುಗ್ಧತೆ ಮತ್ತು ಪ್ರೀತಿ ತುಂಬಿದ ವ್ಯಕ್ತಿತ್ವವನ್ನು” ದರ್ಶಿಸುತ್ತದೆ.

ಇನ್ನೊಮ್ಮೆ ಅವರು ಬರೆದ ಪತ್ರ ಇದು. “ಪ್ರಜಾವಾಣಿಯಲ್ಲಿ ಅನುಪಮಾರ ಕವಿತೆ ಓದಿದೆ. ಎರಡು ಅಕ್ಷರ ದೋಷಗಳಿವೆ. ಒಂದಂತೂ ಮಹಿಷಾಸುರ ಮರ್ಧಿನಿ. ಇದು ತಪ್ಪು. ಮರ್ದಿನಿ ಎಂಬುದೇ ಸರಿ. ತಿಳಿಸಿದೆ. ನಿಘಂಟನ್ನೂ ತೋರಿಸಿದೆ.” ಇಲ್ಲಿಯ ಒಂದು ಅಕ್ಷರ ದೋಷದ ಬಗ್ಗೆ ಕೂಡ ಅವರು ಕಾಳಜಿ ವಹಿಸುತ್ತಿದ್ದುದನ್ನು ಗಮನಿಸಬಹುದು.

ಅಣ್ಣನ ಮಹಿಷಾಸುರ ಮರ್ದಿನಿ ನಾಟಕವನ್ನು ನೋಡಿ ಅವರು ಮೆಚ್ಚಿದ್ದರು. ನಿಮ್ಮದು ನಾಟಕದಲ್ಲಿ ಪಳಗಿದ ಕೈ, ಎಷ್ಟೊಂದು ಸುಂದರವಾಗಿ ದೇಶಿ ನುಡಿಗಳನ್ನು ಬಳಸುತ್ತೀರಿ ಎಂದು ಬರೆದ ನೆನಪಿದೆ.

“ ……ನನ್ನ ಮನಸ್ಸು ಜಡವಾಗಿದೆ. ಓಡುತ್ತಿಲ್ಲ.
ಕುಮಟೆ ಅಂಕೋಲೆಗಳಿಗೆ ನಾನು ಬರಬಹುದಿತ್ತು. ಎಡಪಾದ ಪೂರ್ತಿ ಹೋಗಿದೆ. ಅದನ್ನು ನೆಲಕ್ಕೆ ಊರುವಂತಿಲ್ಲ. ಬರೆಯುವ ಆಸೆ ಪೂರ್ತಿ ಹೋಗಿಲ್ಲ. ಮುಂದಿನ ವರ್ಷವಾದರೂ ಬರೆದೇನು. ತೇಜಸ್ವಿನಿ ಹೈದರಾಬಾದಿನ ವಿವಿಯಲ್ಲಿ ತೃಪ್ತಿಕರವಾಗಿ ದುಡಿಯುತ್ತಿದ್ದಾಳೆ. ವಿವೇಕ ಸೆಪ್ಟೆಂಬರ್ ನಲ್ಲಿ ಬರುತ್ತಾನಂತೆ.. ಬರಲಿ, ಇಬ್ಬರೂ ಆರೋಗ್ಯದಿಂದಿರಲಿ ಎಂದು ನನ್ನ ಹಾರೈಕೆ. ಅನುಪಮಾ ಕ್ಯಾನ್ಸರ್ ಅಪಾಯದಿಂದ ಪಾರಾಗಿ ಸಣ್ಣಪುಟ್ಟ ಚಟುವಟಿಕೆಯಲ್ಲಿದ್ದಾಳೆ. (ಚಟುವಟಿಕೆ ಮುಖ್ಯವಾಗಿ ಬರವಣಿಗೆಗೆ ಸಂಬಂಧಿಸಿದ್ದು.) ಮುಂದೆ ಯಾವಾಗ ಕ್ಯಾನ್ಸರ್ ಕಾಡುತ್ತದೋ ತಿಳಿಯದು.

ಮಹಿಷಾಸುರ ಹೊಲೆಯ ಎಂಬುದನ್ನು ತಿಳಿದು ಅನುಪಮಾಗೆ ವಿಸ್ಮಯ. ‘ನಾನು ಸ್ವಲ್ಪ ಅಧ್ಯಯನ ಮಾಡಬೇಕಿತ್ತು’ ಎಂದರು.
ನಿಮ್ಮನ್ನು ನೋಡುವ ಆಸೆ ಬಿಟ್ಟಿಲ್ಲ. ನಾನಂತೂ ಬರುವ ಸ್ಥಿತಿಯಲ್ಲಿ ಇಲ್ಲ. ಕಡೆಯ ದಿನಗಳಲ್ಲಿ ಯಾವುದು ಸಾಧ್ಯವೋ ಯಾವುದು ಅಸಾಧ್ಯವೋ ನೋಡಬೇಕು. ನೆಮ್ಮದಿ ಇಲ್ಲವೆಂದು ದುಃಖಿ. ದೊಡ್ಡದಲ್ಲ.

ತಿಂಗಳಿಗೆ ಒಮ್ಮೆಯಾದರೂ ಪತ್ರ ಬರೆಯಿರಿ. ಸ್ವತಃ ಬರೆಯಲು ಅಶಕ್ತನಾದರೆ ನಾನು ಮತ್ತೇನನ್ನೂ ಬರೆಯುವುದಿಲ್ಲ. ಬೇರೆಯವರಿಂದ ಬರೆಸುವುದಿಲ್ಲ.
ಪ್ರೀತಿಯಿಂದ
ನಿರಂಜನ

ನಿರಂಜನರು ಸಂಪೂರ್ಣ ಅಸಹಾಯಕರಾದ ಮೇಲೆ ಅವರು ಅನುಪಮಾ ಅವರಿಗೆ ಹೇಳಿ ಅಣ್ಣನಿಗೆ ಪತ್ರ ಬರೆಸುತ್ತಿದ್ದರು. ಆಮೇಲೆ ಸ್ವತ: ಅನುಪಮಾ ಅವರೇ ನಿರಂಜನರ ಆರೋಗ್ಯದ ಕುರಿತು ಬರೆಯುತ್ತಿದ್ದರು.
ಸ್ವತಃ ಅನುಪಮಾ ಅವರೂ ಅಣ್ಣನೊಂದಿಗೆ ಪತ್ರ ಸಂವಾದ ನಡೆಸುತ್ತಿದ್ದರು.

ಶ್ರೀ ಆರ್.ವಿ ಭಂಡಾರಿಯವರಿಗೆ,
ವಂದನೆಗಳು.
ಅಭಿನಂದನಾ ಗ್ರಂಥದಲ್ಲಿ ನಿಮ್ಮ ಲೇಖನ ‘ಘೋಷ ಹಾಗೂ ಮಾಧವಿ’ಯ ಬಗ್ಗೆ ಬರೆದದ್ದು ಹಿಂದೆಯೇ ಓದಿದ್ದೆ. ಆದರೆ ಈ ಬಾರಿ ಓದಿದಾಗ ಅದರ ‘ಒಳನೋಟ’ ಕಂಡವು. ತುಂಬ ವಸ್ತುನಿಷ್ಟವಾಗಿ ವಿಶ್ಲೇಷಿಸಿದ್ದೀರಿ. ‘ಘೋಷ’ ದ ಬಗ್ಗೆ ನೀವು ಹೇಳಿರುವ ಮಾತು ನಿಜ. ಸುಜಿ ದ್ವೀಪದ ಜ್ವಾಲಾಮುಖಿಯ ಸಂಕೇತವನ್ನು ನಾನು ಇನ್ನಷ್ಟು ಅರ್ಥಪೂರ್ಣವಾಗಿ ದುಡಿಸಿಕೊಳ್ಳಬಹುದಿತ್ತು.
ನೀವು ಬರೆದ ವಿಮರ್ಶೆಗಾಗಿ ಧನ್ಯವಾದ ಸೂಚಿಸುವುದು ನನ್ನ ಕರ್ತವ್ಯ. ಒಬ್ಬ ಲೇಖಕಿಯನ್ನು ಇಷ್ಟೊಂದು ಜನ ವಿಧ್ವಾಂಸರು ಗಂಭೀರವಾಗಿ ಪರಿಗಣಿಸಿರುವುದು ನನಗೆ ಅತ್ಯಂತ ಆನಂದವನ್ನು ನೀಡಿದೆ. ನಿರಂಜನ ನಿಮಗೆ ವಂದನೆ ತಿಳಿಸ ಹೇಳಿದ್ದಾರೆ.
ವಿಶ್ವಾಸಿ,

ಅನುಪಮಾ ನಿರಂಜನ

ಆರ್.ವಿ.ಭಂಡಾರಿಯವರಿಗೆ ಅನುಪಮಾ ನಿರಂಜನ ಅವರು ಬರೆದ ಪತ್ರ

ನಿರಂಜನ ಅವರು ತೀರಿಕೊಂಡಾಗ ಅಣ್ಣ ತಿಂಗಳುಗಳ ಕಾಲ ಮಾನಸಿಕ ವೇದನೆಗೆ ಒಳಗಾಗಿದ್ದ.

ಅಣ್ಣ ಅವರನ್ನು ಮತ್ತೆ ಮತ್ತೆ ಭೇಟಿ ಆಗಿದ್ದು ಆತ ಅಕಾಡೆಮಿಯ ಸದಸ್ಯನಾಗಿದ್ದಾಗ. ಹಲವು ಬಾರಿ ನಿರಂಜನ ಅವರನ್ನು ಭೇಟಿ ಆಗಲು ಬಯಸಿದ್ದರೂ ಹಣಕಾಸಿನ ತೊಂದರೆಯಿಂದ ನನಗೆ ಬೆಂಗಳೂರಿಗೆ ಹೋಗಲು ಆಗುತ್ತಿರಲಿಲ್ಲ. ಅಷ್ಟೊಂದು ಹಣ ನನ್ನಲ್ಲಿ ಇರಲಿಲ್ಲ. ಅಕಾಡೆಮಿಯ ಸದಸ್ಯನಾಗಿರುವುದರಿಂದ ಬೇರೆ ಏನು ಲಾಭವಾಯ್ತೋ ಗೊತಿಲ್ಲ. ಆದರೆ ನನಗೆ ನಿರಂಜನರನ್ನು ನೋಡುವ ಮತ್ತು ಮಾತನಾಡುವ ಭಾಗ್ಯ ಸಿಕ್ಕಿತು ಎಂದು ಅಣ್ಣ ಹೇಳುವಾಗ ಅವನ ಕಣ್ಣಲ್ಲಿ ನೀರು ಜಿನುಗಿದ್ದು ನಮ್ಮ ಗಮನಕ್ಕೂ ಬಂದಿತ್ತು.

‍ಲೇಖಕರು avadhi

September 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ಆತ್ಮೀಯವಾದ ಲೇಖನ. ಮನಮುಟ್ಟುತ್ತದೆ.

    ಪ್ರತಿಕ್ರಿಯೆ
  2. Parameshwara K

    ಬಹಳ ಆಪ್ತವಾದ ಬರಹ. ಸಾಹಿತ್ಯ ಸೃಜನಶೀಲತೆಯ ಅಂದಿನ ಕಾಲದ ವ್ಯಕ್ತಿತ್ವಗಳನ್ನು ನೆನಪಿಸಿಕೊಳ್ಳುವುದೆಂದರೆ ಬಹಳ ದೊಡ್ಡ ಅನುಭವ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: