ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಸಾರ್ ಸರ್: ಸಾವು ಒಂದು ಲೆಕ್ಕ ಮಾತ್ರ.. 

ವಸುಂಧರಾ ಕದಲೂರು

ಕನ್ನಡ ಪಠ್ಯದಲ್ಲಿದ್ದ ‘ಅಮ್ಮ, ಆಚಾರ, ನಾನು’ ಕವನದ ಅದರ ಕಡೆಯ ಟ್ವಿಸ್ಟ್ ಓದಿ ಮನಸಾರೆ ಗೆಳತಿಯರೊಡನೆ ನಕ್ಕಿದ್ದು ಮರೆಯಲಾಗದು. ‘ಮತ್ತದೇ ಬೇಸರ.., ಅದೇ ಸಂಜೆ…’ ಹಾಡಿಗೆ ನನ್ನ ಏಕಾಂತದ ನೋವಿನ ಭಾರ ಹೇರಿದ್ದು, ತುಂಟಕಳ್ಳ ಕೃಷ್ಣ ಬೆಣ್ಣೆ ಕದ್ದುದನ್ನು ನೋಡಿ ಕಂಡವರಂತೆ ‘ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ ಕದ್ದನಮ್ಮಾ…’  ಎಂದು ಬರೆದಿರುವುದನ್ನು ಓದಿ ಬೆರಗಾದದ್ದು, ’ಮಂದೆಯಲಿ ಒಂದಾಗಿ, ಸ್ವಂತತೆಯೇ ಬಂದಾಗಿ.. ತಲೆ ತಗ್ಗಿಸಿ ನಡೆಯುವ’ ನಾವು ನೀವು ಅವರನ್ನು ಕಂಡು ನಿಸಾರ್ ಸರ್ ಸರಿಯಾಗಿ ಹೇಳಿದ್ದೀರಿ  ‘ಕುರಿಗಳು ಸಾರ್ ಕುರಿಗಳು..’ ಎಂದುಕೊಳ್ಳದ ಮನವುಂಟೇ..?;  ‘ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ…’ ಹೀಗೆ ನಾಡು ನುಡಿ ಜಲದ ಮಹತಿತು ಸಾರಿದ ನಿಸಾರರನ್ನು ಮರೆಯಲುಂಟೆ….

ಕನ್ನಡಾಭಿಮಾನ ವರ್ಷ ಕಾಲದ ಶರಾವತಿಯಂತೆ ಉಕ್ಕುಕ್ಕಿ ಬರುವಂತೆ ಮಾಡುವ ’ನಿತ್ಯೋತ್ಸವ’ ದ ಕನ್ನಡದ ಕವಿ ನಿಸಾರರನ್ನು  ಜೋಗ ನೋಡಿದಾಗ, ಸಹ್ಯಾದ್ರಿಯ ಹೆಸರು ಕಿವಿಗೆ ಬಿದ್ದಾಗ, ಗಂಧದ ಪರಿಮಳ ಆಘ್ರಾಣಿಸಿದಾಗ ನಮ್ಮ ಮನ ನಿಸಾರರನ್ನು ನೆನೆಯದಿರದೇ..?

ಕನ್ನಡದ ನಿತ್ಯೋತ್ಸವದ ಕವಿ ಶ್ರೀ ನಿಸಾರರನ್ನು ನಾನು ಮುಖತಃ ಭೇಟಿಯಾದದ್ದು ಎರಡು ಬಾರಿ. ನನ್ನ ಎರಡು ವೈಯಕ್ತಿಕ ಭೇಟಿ ಕವಿ ಶ್ರೀ ನಿಸಾರರೊಂದಿಗೆ ಆದದ್ದು ನನಗೆ ಸುವರ್ಣಾವಕಾಶ ಎಂದು ಹೆಮ್ಮೆಯಿಂದ ಹೇಳುವೆ.

ಮೊದಲ ಬಾರಿ ನಮ್ಮ ಇಲಾಖೆಯ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ. ನನ್ನ ನಿರೂಪಣೆ ಕೇಳಿ ಮೆಚ್ಚುಗೆಯ ನುಡಿಗಳನ್ನಾಡಿದ್ದರು. ನಾನೋ ನೆಚ್ಚಿನ ಜೋಗದ ಕವಿ ಕಂಡ ಖುಷಿಯಲ್ಲಿ ತೇಲುತಲಿದ್ದೆ..

ಮತ್ತೊಂದು ಸಂದರ್ಭ ಅವರಿಗೆ ೮೪ ವರ್ಷಗಳಾದ ಸಂದರ್ಭದಲ್ಲಿ ಅವರ ಸಾಹಿತ್ಯವನ್ನು ತೆಲುಗು, ಉರ್ದು ಮಲಯಾಳಂ, ಇಂಗ್ಲೀಶ್ ಭಾಷೆಗಳಿಗೆ ಅನುವಾದ ಮಾಡಿ ಕೃತಿ ಬಿಡುಗಡೆ ಮಾಡಿದ ಸಮಾರಂಭದಲ್ಲಿ.

ಅವರ ಸ್ವರಚಿತ ಕವನವನ್ನು ಅವರ ಎದುರಿನಲ್ಲೇ ವಾಚನ ಮಾಡುವ ಸದವಕಾಶ ನನ್ನದಾಗಿತ್ತು.

ಬಹಳ ಕೃಶವಾಗಿದ್ದ ಆ ಚೇತನ ಮೆಲುದನಿಯಲ್ಲಿ, ಆಪ್ತವಾಗಿ ಮಾತನಾಡಿಸಿದ್ದು ಅವರ ಮೇಲಿನ ಗೌರವವನ್ನು ನೂರ್ಮಡಿ ಮಾಡಿತು. ಇಂದು ಶವ ಪೆಟ್ಟಿಗೆಯೊಳಗೆ ಮಲಗಿದ್ದ ನಿಸಾರರು ಎಂದಿನಂತೆ ಒಲವಿನಿಂದ ಮನತುಂಬಿದ್ದರು, ಗೀತೆಗಳಲಿ ಕಿವಿ ತುಂಬಿದ್ದರು..

ಅವರ ಚೇತನ ನಿತ್ಯೋತ್ಸವ ಗೀತೆಯಂತೆ ಅಜರಾಮರ..
ಸಾವು ಒಂದು ಲೆಕ್ಕ ಮಾತ್ರ..

‍ಲೇಖಕರು avadhi

4 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading