ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಷ್ಕ್ರಿಯ ಆಡಳಿತದ ಕುಣಿಕೆಗೆ ರೈತನ ಬಲಿ

ನಾ ದಿವಾಕರ

ಅಂಕಿ ಅಂಶಗಳ ಚೌಕಟ್ಟಿನಲ್ಲಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವೆಡೆ ದಾಪುಗಾಲು ಹಾಕುತ್ತಿರುವ ಆಧುನಿಕ ಭಾರತದ ಒಂದು ವಿಶಿಷ್ಟ ಗುಣ ಎಂದರೆ ಇಲ್ಲಿ ಮಾನವ ಜೀವಕ್ಕೆ ಮೌಲ್ಯವೇ ಇಲ್ಲ. ದೇಶದ ಪ್ರಜೆಗಳ ದೇಹ ಸ್ವಾಸ್ಥ್ಯ ಕಾಪಾಡಲು, ಉತ್ತಮ ಆರೋಗ್ಯ ಕಾಪಾಡಲು ಕೋಟ್ಯಂತರ ರೂಗಳನ್ನು ಖರ್ಚು ಮಾಡುವ ಆಳುವ ವರ್ಗಗಳು ಪ್ರಭುತ್ವದ ಯೋಜನೆಗಳನ್ನು ತಮ್ಮ ರಾಜಕೀಯ ಮುನ್ನಡೆಯ ಚಿಮ್ಮುಹಲಗೆಯನ್ನಾಗಿ ಮಾಡಿಕೊಂಡು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತವೆಯೇ ಹೊರತು, ಜನಸಾಮಾನ್ಯರಿಗೆ ಒಂದು ಸುಸ್ಥಿರ ಜೀವನ ಒದಗಿಸಲಾಗುತ್ತಿಲ್ಲ. ರಸ್ತೆಯಲ್ಲಿನ ಮರ ಬಿದ್ದು ಸಾಯಲಿ, ಪ್ರವಾಹ, ಭೂಕಂಪಕ್ಕೆ ಸಿಲುಕಿ ಸಾಯಲಿ, ಸಮಾಜಘಾತುಕ ಶಕ್ತಿಗಳ ಅಟ್ಟಹಾಸಕ್ಕೆ ಸಿಲುಕಿ ಸಾಯಲಿ ಮೃತ ಜೀವಗಳಿಗೆ ಒಂದು ನಿದರ್ಿಷ್ಟ ಬೆಲೆ ನಿಗದಿಪಡಿಸಿ ಪರಿಹಾರದ ಚೆಕ್ ನೀಡಿಬಿಟ್ಟರೆ ನಮ್ಮ ಆಳ್ವಿಕರ ಹೊಣೆಗಾರಿಕೆ ಮುಗಿಯುತ್ತದೆ. ಸಾವು ಅನಿವಾರ್ಯ ನಿಜ, ಆದರೆ ಅಸಹಜ ಸಾವು ಅನಿವಾರ್ಯವಲ್ಲ, ಅತಾಕರ್ಿಕ ಸಾವೂ ಅನಿವಾರ್ಯವಲ್ಲ. ನಮ್ಮ ಸಕರ್ಾರಗಳಿಗೆ ಈ ತರ್ಕ ಬೇಕಿಲ್ಲ. ಅಸಹಜ ಸಾವು ಏಕೆ ಸಂಭವಿಸುತ್ತದೆ, ಅದನ್ನು ತಡೆಗಟ್ಟುವುದು ಹೇಗೆ ಎಂದು ಯೋಚಿಸುವ ಗೊಡವೆಗೇ ಹೋಗದೆ, ಸಪ್ಪೆ ಮುಖದ ಸಚಿವರೊಬ್ಬರು ಮೃತರ ಶವದ ಬಳಿ ಹೋಗಿ, ವಂದಿಸಿ, ರೋದಿಸುತ್ತಿರುವ ಆತ್ಮಗಳಿಗೆ ಸಾಂತ್ವನ ಹೇಳಿ ಒಂದಿಷ್ಟು ಹಣ ಕೊಟ್ಟುಬಿಟ್ಟರೆ ಅವರ ಜವಾಬ್ದಾರಿ ಮುಗಿಯುತ್ತದೆ.
ರಾಜ್ಕಪೂರ್ ಅವರ ಫಿರ್ ಸುಬಹ್ ಹೋಗಿ ಚಿತ್ರದಲ್ಲಿ ಜನಪರ ಕವಿ ಸಾಹಿರ್ ಲುಧಿಯಾನ್ವಿ ಅವರ ಹಾಡಿನ ಒಂದು ಸಾಲು ಹೀಗಿದೆ ಮಾನಾ ಕೆ ಅಗರ್ ತೇರೇ ಮೇರೆ ಅರ್ಮಾನೋಂಕಿ ಕೀಮತ್ ಕುಚ್ ಭಿ ನಹಿ, ಮಿಟ್ಟಿ ಕಾ ತೊ ಹೈ ಕುಚ್ ಮೋಲ್ ಮಗರ್ ಇನ್ಸಾನೊಂಕಿ ಕೀಮತ್ ಕುಚ್ ಭಿ ನಹಿ ,,,,. ಅಂದರೆ ನಮ್ಮ ಭಾವನೆಗಳಿಗೆ ಇಲ್ಲಿ ಕಿಂಚಿತ್ತೂ ಬೆಲೆಯಿಲ್ಲ, ಮಣ್ಣಿಗಾದರೂ ಕೊಂಚ ಬೆಲೆ ಇದೆ, ಮನುಷ್ಯರಿಗೆ ಇಲ್ಲಿ ಬೆಲೆಯೇ ಇಲ್ಲ ಎಂದರ್ಥ. ಇದು ಎಂತಹ ಸಾರ್ವತ್ರಿಕ ಸತ್ಯ ಅಲ್ಲವೇ ? ಕಳೆದ ಎರಡು ದಶಕಗಳಲ್ಲಿ ದೇಶವ್ಯಾಪಿಯಾಗಿ ಕಂಡುಬರುತ್ತಿರುವ ಲಕ್ಷಾಂತರ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಒಮ್ಮೆ ನೋಡಿದಾಗ ಸಾಹಿರ್ ಎಂತಹ ದಾರ್ಶನಿಕ ಕವಿ ಎಂದು ಅರಿವಾಗುತ್ತದೆ. ನಿಜ, ಭರತ ಭೂಮಿಯ ನೆಲದಲ್ಲಿ ತಮ್ಮ ಬೆವರು ಸುರಿಸಿ ದುಡಿಯುವ ಅನ್ನದಾತನಿಗೆ ಇಂದು ಬೆಲೆ ಏನಾದರೂ ಇದ್ದರೆ ಅದು ಪರಿಹಾರದ ಚೆಕ್ಕುಗಳಲ್ಲಿ ಮಾತ್ರ. ರೈತರ ಆತ್ಮಹತ್ಯೆ ದಿನನಿತ್ಯವೂ ಸುದ್ದಿಯಾಗುತ್ತಲೇ ಇದೆ. ಆದರೆ ದೇಶವ್ಯಾಪಿ ಚರ್ಚೆಯ ವಿಷಯವಾಗುವುದೇ ಇಲ್ಲ.

ಏಕೆಂದರೆ ಆತ್ಮಹತ್ಯೆಗೆ ಶರಣಾಗುವ ರೈತನನ್ನು ವ್ಯಕ್ತಿಗತ ನೆಲೆಯಲ್ಲಿ ಕಾಣಲಾಗುತ್ತದೆ. ರೈತನ ಸಾಮುದಾಯಿಕ ಅಸ್ತಿತ್ವ ಮತ್ತು ಸಾರ್ವತ್ರಿಕ ಮೌಲ್ಯ ಪರಿಗಣನೆಗೆ ಬರುವುದೇ ಇಲ್ಲ. ಕೆಲವು ಧಮರ್ಾಧಿಕಾರಿಗಳು , ರೈತನ ಆತ್ಮಹತ್ಯೆಯನ್ನು ನಿರಾಶೆ, ಭ್ರಮೆ ಮತ್ತು ಹತಾಶೆಯ ಚೌಕಟ್ಟಿನಲ್ಲೇ ವಿಶ್ಲೇಷಿಸಿ, ಎಲ್ಲದರಿಂದಲೂ ಮುಕ್ತಿ ಸಿಗುತ್ತದೆ ಎಂಬ ಭ್ರಮೆಯಿಂದ ರೈತ ಆತ್ಮಹತ್ಯೆಗೆ ಶರಣಾಗಬಾರದು, ಸವಾಲನ್ನು ಎದುರಿಸಬೇಕು ಎಂದು ಉಪನ್ಯಾಸ ನೀಡುತ್ತಾರೆ. ಆದರೆ ಸಾಲದ ಹೊರೆ ಹೊತ್ತ ರೈತನಿಗೆ, ತನ್ನ ಫಸಲಿಗೆ ಸೂಕ್ತ ಬೆಲೆ ಸಿಗದೆ ಪರದಾಡುವ ರೈತನಿಗೆ, ಬೆಳೆ ನಷ್ಟ ಅನುಭವಿಸುವ ರೈತನಿಗೆ ಈ ಒಣ ಉಪದೇಶಗಳು ಬೇಕಿಲ್ಲ. ಹಸಿದ ಹೊಟ್ಟೆಗೆ ಅನ್ನ ನೀಡಿ ಉಪನ್ಯಾಸ ಬೇಕಿಲ್ಲ ಎಂಬ ವಿವೇಕಾನಂದರ ವಾಣಿ ಎಷ್ಟು ದಿಟ. ಇಲ್ಲಿ ಸಮಸ್ಯೆ ಇರುವುದು ವ್ಯಕ್ತಿಗತ ನೆಲೆಯಲ್ಲಿ ಅಲ್ಲ. ರೈತನ ಆತ್ಮಹತ್ಯೆಗೂ ನಮ್ಮ ಆಳುವ ವರ್ಗಗಳು, ಮಾಧ್ಯಮಗಳು ಮತ್ತು ಆಥರ್ಿಕ ತಜ್ಞರು ವೈಭವೀಕರಿಸಿ ಜಾರಿಗೊಳಿಸುತ್ತಿರುವ ನವ ಉದಾರವಾದ ನೀತಿಗಳಿಗೂ ಅವಿನಾಭಾವ ಸಂಬಂಧ ಇರುವುದನ್ನು ಗಮನಿಸಬೇಕಿದೆ.
1995 ರಿಂದ ಇಲ್ಲಿಯವರೆಗೆ ದೇಶದ ಮೂರು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರೆಲ್ಲರೂ ಮುಕ್ತಿ ಪಡೆಯುವ ಉದ್ದೇಶದಿಂದ ಅಥವಾ ಪಲಾಯನವಾದಿಗಳಾಗಿ ಜೀವ ತೆತ್ತಿಲ್ಲ. ಆದರೆ ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಎದುರಿಸಲಾಗದೆ ಇಹಲೋಕ ತ್ಯಜಿಸಿದ್ದಾರೆ. ಕೃಷಿ ಕ್ಷೇತ್ರದ ಅಭಿವೃದ್ಧಿ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಆಳುವ ವರ್ಗಗಳು ಸ್ಮಾಟರ್್ ಸಿಟಿಗಳ ಬಗ್ಗೆ ಯೋಚಿಸುತ್ತಿವೆಯೇ ಹೊರತು, ಕೃಷಿ ಭೂಮಿಯ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಗರೀಕರಣ, ಕೈಗಾರಿಕೀಕರಣ ಮತ್ತು ಆಧುನಿಕ ಕಾಪರ್ೋರೇಟ್ ಸಾಮ್ರಾಜ್ಯದ ಮಾರ್ಗದಲ್ಲಿ ದೇಶದ ಅನ್ನದಾತರು ಹಾಸುಗಲ್ಲುಗಳಾಗಿ ಬಲಿಯಾಗುತ್ತಿದ್ದಾರೆ. ನಮ್ಮ ಸಕರ್ಾರಗಳು ಕೃಷಿ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದನ್ನು ಸಚಿವ ಸಂಪುಟದ ರಚನೆಯಲ್ಲಿ ಕಾಣಬಹುದು. ವಾಜಪೇಯಿ ಸಕರ್ಾರದಲ್ಲಿ ಕೃಷಿ ಸಚಿವರಿಗೆ ಪ್ರಾಮುಖ್ಯತೆಯೇ ಇರಲಿಲ್ಲ. ಮೋದಿ ಸಂಪುಟದಲ್ಲಿ ನಾಮಕಾವಸ್ಥೆ ಸಚಿವರಿದ್ದಾರೆ. ಒಂದು ವರದಿಯ ಪ್ರಕಾರ ರೈತರಿಗೆ ಸಾರ್ವಜನಿಕ ಬ್ಯಾಂಕುಗಳಿಂದ ದೊರೆಯುವ ಸಾಲ ಸೌಲಭ್ಯವೂ ಕ್ಷೀಣಿಸುತ್ತಿದ್ದು ಶೇ 30ರಷ್ಟು ಕೃಷಿ ಸಾಲಗಳು ಲೇವಾದೇವಿಗಾರರಿಂದ ದೊರೆಯುತ್ತಿದೆ.
ಸಾಲ ನೀಡುವ ಬ್ಯಾಂಕುಗಳೂ ಸಹ ವೈಜ್ಞಾನಿಕ ತಳಹದಿ ಇಲ್ಲದ ಸಾಲದ ಯೋಜನೆಗಳ ಮೂಲಕ ರೈತರಿಗೆ ಮಾರಕವಾದ ನೀತಿ ಅನುಸರಿಸುತ್ತಿವೆ. ಬಹುಪಾಲು ಬ್ಯಾಂಕ್ ಸಾಲಗಳು ಶ್ರೀಮಂತ ರೈತರ ಪಾಲಾಗುತ್ತಿದ್ದು, ಬ್ಯಾಂಕುಗಳಿಂದ ಅಪಾರ ಮೊತ್ತದ ಸಾಲ ಪಡೆಯುವ ಶ್ರೀಮಂತ ರೈತರು ಬಡ ರೈತರಿಗೆ ಹೆಚ್ಚಿನ ಬಡ್ಡಿ ದರ ವಿಧಿಸಿ ಸಾಲ ನೀಡುತ್ತಿರುವುದು ಸದ್ದಿಲ್ಲದೆ ನಡೆಯುತ್ತಿರುವ ದಂಧೆ. ಆದರೆ ಈ ಯಾವುದೇ ಬೆಳವಣಿಗೆಗಳೂ ನಮ್ಮ ಸಕರ್ಾರಗಳನ್ನು ಭಾಧಿಸಿಲ್ಲ. ಕಳೆದ ಎರಡು ದಶಕಗಳಲ್ಲಿ ನಿರಂತರವಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಲೇ ಇದ್ದರೂ ಈ ಸಮಸ್ಯೆಯ ಅಗಾಧತೆ, ವ್ಯಾಪ್ತಿ ಮತ್ತು ಮೂಲವನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ ಒಂದು ಆಯೋಗವನ್ನೂ ರಚಿಸಲಾಗಿಲ್ಲ. ರಾಜ್ಯ ಮಟ್ಟದಲ್ಲಿ ರಚಿಸಲಾದ ಆಯೋಗಗಳ ವರದಿಗಳು ರೈತನೊಡನೆಯೇ ನೇಣುಕುಣಿಕೆಗೆ ಬಲಿಯಾಗಿವೆ.
ಇಂತಹ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಲ್ಲಿ ರೈತ ಸಮುದಾಯ ಏನನ್ನು ನಿರೀಕ್ಷಿಸಬಹುದು ? ಮತ್ತಷ್ಟು ಪರಿಹಾರದ ಚೆಕ್ಕುಗಳು, ಸಚಿವ ಮಹಾಶಯರ ಮೊಸಳೆ ಕಣ್ಣೀರು, ರೈತ ಸಂಘಗಳ ನಿರಂತರ ಪ್ರತಿಭಟನೆ ಮತ್ತು ಸಾರ್ವಜನಿಕ ಸಾಂತ್ವನ, ಅಷ್ಟೇ ಅಲ್ಲವೇ ? ಆದರೆ ಕಳೆದು ಹೋದ ರೈತ ಜೀವಗಳ ಹಿಂದೆ ಇರುವ ಮಾನವ ಜೀವದ ಮೌಲ್ಯ ಏನು ? ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಮಾನವ ಜೀವವೂ ಸಹ ಮಾರುಕಟ್ಟೆ ಸರಕಿನಂತಾಗಿರುವ ಸಂದರ್ಭದಲ್ಲಿ ಜೀವದ ಮೌಲ್ಯವನ್ನು ನಿರ್ಧರಿಸುವುದಾದರೂ ಹೇಗೆ ? ಪ್ರಜ್ಞಾವಂತ ಸಮಾಜವನ್ನು ಕಾಡಬೇಕಾದ ಪ್ರಶ್ನೆ ಇದು.
 

‍ಲೇಖಕರು G

30 June, 2015

1 Comment

  1. ಅಕ್ಕಿಮಂಗಲ ಮಂಜುನಾಥ

    ಪ್ರಿಯ ಮಿತ್ರರೇ,
    ಈಗ ಸಂಭವಿಸುತ್ತಿರುವ ರೈತರ ಆತ್ಮ ಹತ್ಯೆಗಳ ಸರಣಿಯನ್ನು , ಅಧಿಕಾರ ಉಳ್ಳವರು ನಡೆಸುತ್ತಿರುವ ಕೊಲೆ ಎಂದರೆ ಹೆಚ್ಚು ಅರ್ಥಪೂರ್ಣವಾಗಬಹುದು.
    ಮೊನ್ನೆ ಒಂದು ಪತ್ರಿಕೆಯಲ್ಲಿ, ವಿಚಾರವಾದಿಯೊಬ್ಬ-
    “ರೈತರು ಏಕೆ ಹಿಂದುಳಿದಿದ್ದಾರೆಂದರೆ , ಏಕೆ ಮೂಲೆಗುಂಪಾಗುತ್ತಿದ್ದಾರೆಂದರೆ, ಅವರು -ಕುಡಿತ, ಜೂಜು , ಮಾದಕ ವಸ್ತುಗಳ ಚಟಗಳಿಗೆ ದಾಸರಾಗಿರುವುದೇ ಮೂಲ ಕಾರಣ” ಎಂದಿರುವರು.
    ಹಾಗೆಯೇ ಒಂದು ಸಾರಿ ರೈತರೇಕೆ ಆತ್ಮ ಹತ್ಯೆಗೆ ಶರಣಾಗುತ್ತಾರೆಂದು ಸರ್ಕಾರದ ಪರವಾಗಿ ಸಮೀಕ್ಷೆ ನಡೆಸಿದ ಸಮೀಕ್ಷಕರು “ಮುಕ್ಕಾಲು ಪಾಲು ರೈತರು ತಮ್ಮ ಸಾಂಸಾರಿಕ ಮತ್ತು ವೈಯಕ್ತಿಕ ಕಾರಣಗಳಿಂದ ಸಾವಿಗೆ ಶರಣಾಗುತ್ತಾರೆ”ಎಂದು ಹೇಳಿದ್ದರು.
    ಮತ್ತೂ ಕೆಲವು ವಿಚಾರವಂತರು ಅವರ ಮೌಡ್ಯತೆ ಮತ್ತು ತಾಳ್ಮೆ ಇಲ್ಲದ ಮನಸ್ಥಿತಿಯೇ ಆತ್ಮ ಹತ್ಯೆಗೆ ಪ್ರಮುಖ ಕಾರಣವೆಂದರು.
    ಅವರು ಏನೇ ಅನ್ನಲಿ ಯಾವ ರೀತಿಯ ಸಾವೇ ಆಗಲಿ ಸಾವು ಸಾವೇ ಎಂಬುದು ಭೀಕರ ಸತ್ಯ.
    ಲೇಖಕರ ಮಾತಿನಂತೆ ರೈತರು ಹಿಂದುಳಿಯಲು ಕಾರಣ ಮದ್ಯ, ಜೂಜುಗಳೇ
    ಕಾರಣವಾಗುವುದಾದರೆ, ಗಲ್ಲಿಗೊಂದು ಬೀದಿಗೊಂದರಂತೆ ಸಾರಾಯಿ ಅಂಗಡಿಗಳ ತೆರೆಯುತ್ತಾ , ಹತ್ತಾರು ತರದ ಲಾಟರಿಗಳ ಹುಟ್ಟು ಹಾಕುತ್ತಾ, ಪ್ರೋತ್ಸಾಹ ನೀಡುತ್ತಿರುವುದು ಯಾರು ? ಸರ್ಕಾರ ಮತ್ತು ಕಂಪನಿಗಳೇ ಅಲ್ಲವೇ ? ಮುಖ್ಯವಾಗಿ ಇಂತಹ ವ್ಯಸನಗಳಿಗೆ ಅಧಿಕವಾಗಿ ದಾಸರಾಗುವುದು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವಂತಹರೇ ವಿನಹ ಸಾಮಾನ್ಯ ಬಡ ರೈತರಂತೂ ಅಲ್ಲವೇ ಅಲ್ಲ. ಸಮೀಕ್ಷಕರು ಹೇಳಿದಂತೆ ಮುಕ್ಕಾಲು ಪಾಲು ವೈಯಕ್ತಿಕವಾದ ಸಮಸ್ಯೆಗಳಿಗೇ ಎಂದು ಭಾವಿಸಿದರೂ ಆ ಸಮಸ್ಯೆಗಳು ಉದ್ಭವವಾಗುವುದು ಅವನ ಆರ್ಥಿಕ ಮುಗ್ಗಟ್ಟಿನಿಂದಲೇ ಎಂಬುದು ಅವರಿಗೆ ಅರ್ಥವೇ ಆಗದಿದ್ದದ್ದು ಒಂದು ದುರಂತ. ಅವರಿಗೆ ಆರ್ಥಿಕ ಮುಗ್ಗಟ್ಟು ಉಂಟಾಗುವುದೂ ಸಹ ಅಧಿಕಾರಸ್ಥರ ತಪ್ಪು ನಿರ್ದಾರಗಳಿಂದಲೇ ಅಲ್ಲವೇ ?
    ಯಾರೇನೇ ಬಡಬಡಿಸಿದರೂ ಇಂದು ರೈತ ಸಾವಿಗೆ ಶರಣಾಗುತ್ತಿರುವುದು – ದೂರದೃಷ್ಟಿಯಿಲ್ಲದ, ಕರುಣೆ ಇಲ್ಲದ ಮತ್ತು ಸ್ವಾರ್ಥದ ಅಧಿಕಾರಿವರ್ಗದ ದೋರಣೆಯೇ ವಿನಹ ಮತ್ತಾವುದೂ ಅಲ್ಲ. ಪ್ರಕೃತಿಯ ಸಹಜ ನಿಯಮವೆಂಬಂತೆ -ದೊಡ್ಡ ಮೀನು ಚಿಕ್ಕ ಮೀನನ್ನು ತಿಂದು ಬದುಕುವಷ್ಟು ಸಹಜವಾಗಿ , ಬಲಿತವರು ನಿಸ್ಸಹಾಯಕರನ್ನು ಮೆಟ್ಟಿ ಮೇಲೇರುತ್ತಿರುವುದೂ ಒಂದು ದೊಡ್ಡ ಕಾರಣ.
    ನಮ್ಮ ವಿಚಾರವಂತರಲ್ಲಿ ಒಂದು ಬಣವಿದೆ.
    ಮೊನ್ನೆ ಮೊನ್ನೆ , ಕನ್ನಡ ಸಾಹಿತ್ಯದ ಶ್ರೇಷ್ಠಾತಿ ಶ್ರೇಷ್ಟ ಸಾಹಿತಿಗಳಾದ ಬೈರಪ್ಪ, ದೇಜಗೌ ಮತ್ತು ಕುಂ.ವೀ. ಬಡವರ ಬಗ್ಗೆ ಅವರು ಮನುಷ್ಯರೇ ಅಲ್ಲ.ಹೊಟ್ಟೆ ಹಸಿವೆಂಬುದೇ ಅವರಿಗಿಲ್ಲ ಎಂಬ ದೋರಣೆಯಿಂದಲೇ (ಒಂದು ರೂ ಅಕ್ಕಿಯ ವಿಚಾರಕ್ಕೆ) ಮಾತಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ವಾರಾನ್ನ ತಿಂದು ದೊಡ್ಡವರಾದ ಬೈರಪ್ಪನವರಿಗೆ , ಒಂದು ಹೊತ್ತಿನ ಕೂಳಿಗೂ ಪರದಾಡಿ ಮೇಲೆದ್ದ ದೇಜಗೌ ಗೆ , ಅಷ್ಟೇ ಕಷ್ಟ ಪಟ್ಟ ಕುಂ.ವೀ ಗೆ ಏಕೆ ತಮ್ಮ ಬಾಲ್ಯದ ಬದಕು ಮರೆತು ಹೋಯಿತು ? ತಾವಿಂದು ಬಲಿತ ಹಾಗೆಯೇ ಇಡೀ ಪ್ರಪಂಚವೇ ಬಲಿತುಬಿಟ್ಟಿದೆ ಎಂಬ ಭಾವನೆಯೇ ? ಅಧಿಕಾರ ಬಂದೊಡನೆ ಕೆಳಗಿರುವವರೆಲ್ಲಾ ತುಚ್ಛರು ಎಂಬ ಧೂರ್ತತನವೇ ? ಬರೀ ಪ್ರಚಾರಕ್ಕಾಗಿಯೇ ವಿವಾದಗಳ ಸೃಷ್ಟಿಸಿ ಜನರ ನಾಲಗೆಯ ಮೇಲೆ ನಲಿದಾಡುವ ಇರಾದೆ ಇರಬಹುದೇ? ಅಂದ ಮೇಲೆ ಇಂದಿನ ಸಮಾಜದ ಸ್ವಾಸ್ತ್ಯವನ್ನು ಕೆಡಿಸುವುದರಲ್ಲಿ ಇಂಥ ಮಹನೀಯರ ಪಾತ್ರವೂ ಅಮೋಘವಾಗಿಯೇ ಇದೆಯೆಂದು ಅರ್ಥ.
    ರೈತ ಯಾಕೆ ಸೋತು ಹೋಗಿದ್ದಾನೆಂದು ಅನೇಕರಿಗೆ ಅರ್ಥವಾಗದೇ ಹೋಗಿರುವುದೊಂದು ವಿಪರ್ಯಾಸ. ಅದಕ್ಕೆ ಪರಿಹಾರ ಕಂಡುಹಿಡಿಯಲು ಯಾರಿಂದಲೂ ಆಗುತ್ತಿಲ್ಲ .
    ಈ ದಿನ ರೈತ ಯಾವ ರೀತಿಯಲ್ಲೂ ಸ್ವತಂತ್ರನಾಗಿಲ್ಲ. ಬಿತ್ತನೆ ಬೀಜಕ್ಕೆ ಕಂಪನಿಗಳ ಕಡೆ ಕೈಯೊಡ್ಡಬೇಕು.ಉತ್ತು ಬಿತ್ತಲು ಯಂತ್ರಗಳಿಗಾಗಿ ಕಂಪನಿಗಳ ಕಡೆ ಕೈಯೊಡ್ಡಬೇಕು. ಕೀಟ ನಾಶಕ ಔಷದಿಗಳಿಗೆ ಕಂಪನಿಗಳ ಕಡೆ ಕೈಯೊಡ್ಡಬೇಕು. ಬೆಳೆದು ರಾಶಿಯಾದ ಮೇಲೆ ವ್ಯಾಪಾರಿಗಳೆಂಬ ಮದ್ಯವರ್ತಿಗಳಿಗೆ ಎಲ್ಲವನ್ನೂ ಸುರಿದು ಅವರು ಕೊಟ್ಟ ಬೆಲೆಯನ್ನಷ್ಟೇ ಪಡೆದು ವಾಪಸ್ಸಾಗಬೇಕು.
    ಇಲ್ಲಿ ನೋಡಿ , ಬಿತ್ತನೆ ಬೀಜಕ್ಕೆ , ಯಂತ್ರಗಳಿಗೆ , ಔಷಧಿಗಳಿಗೆಂದು
    ಅವರು ವಿಧಿಸಿದ ಒಂದಕ್ಕೆ ನಾಲ್ಕರಷ್ಟು ದುಡ್ಡು ಕೊಟ್ಟು ತಂದು ಬಳಸಿ , ಹಗಲಿರುಳೂ ದುಡಿದು , ಮಾಲನ್ನು ಮಾರುಕಟ್ಟೆಗೆ ಕೊಂಡೈದು ಅವರು ನಿರ್ದರಿಸಿದ ಬೆಲೆಗೆ ಕೈಯೊಡ್ಡಬೇಕು ಮತ್ತು ಅಲ್ಲಿಯೂ ಕಮೀಷನ್ ಎಂಬ ತೆರೆಗೆಯನ್ನು ಕಟ್ಟಿ , ಮನೆಗೆ ಬಂದು ಲೆಕ್ಕ ಹಾಕಿ ಸಾಲ ಸೋಲ ಅಂಥ ಕಟ್ಟಿ , ಕೊನೆಗೆ ಬರಿಗೈಯಾಗಿ ಮತ್ತೆ ಸಾಲ ನೀಡುವವರನ್ನೇ ಅಂಗಲಾಚಬೇಕು. ಅವ ಎಷ್ಟೇ ಕಷ್ಟ ಪಟ್ಟರೂ ತನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಾಗಿ ಸಾಕಲಾರ . ಅಷ್ಟಕ್ಕೇ ಅವನು ಆತ್ಮ ಹತ್ಯೆ ಮಾಡಿಕೊಳ್ಳುತ್ತಾನೆಂಬುದೂ ಸುಳ್ಳು.
    ಏಕೆಂದರೆ ಮುಂದೆ ಒಂದಲ್ಲಾ ಒಂದು ಕಾಲಕ್ಕೆ ತನಗೂ ಒಳ್ಳೇ ಟೈಂ ಬರಬಹುದೆಂದೇ ಕಾಯುತ್ತಾನೆ. ಆದರೆ ಅವನಿಗೆ ಒಳ್ಳೇ ಕಾಲ ಬರುವುದೇ ಇಲ್ಲ. ಮತ್ತೆ ಬಿದ್ದಿರುವ ಆಳ ಪ್ರಪಾತದಿಂದ ಮೇಲೇಳಲಿಕ್ಕೆ ಸಾದ್ಯವೇ ಇಲ್ಲ ಎಂಬ ಸ್ಥಿತಿ ತಲುಪಿದಾಗ ಮಾತ್ರ ಕೈ ಚೆಲ್ಲಿ ಅಂತಹ ಅನಾಹುತಕ್ಕೆ ಒಳಗಾಗಿ ಬಿಡುತ್ತಾನೆ.
    ಸಬ್ಸಿಡಿ ನೆಪದಲ್ಲಿ ಅನೇಕ ರೀತಿಯ ಸಾಲಗಳನ್ನು ಕೊಡುತ್ತಿರುವೆವೆಂದು ಹೇಳತ್ತಿರುತ್ತಾರೆ ಆದರೆ ಅವೆಲ್ಲವೂ ಉಳ್ಳವರ ಪಾಲಾಗಿ ಬಡರೈತ ಮತ್ತದೇ ಖಾಸಗಿ ಲೇವಾದೇವಿಯವನ ಬಲಿಗೇ ಬೀಳುತ್ತಿರುತ್ತಾನೆ. ಕಂದಾಯ, ಬೀಜ, ಗೊಬ್ಬರ, ಯಂತ್ರ, ತಂತ್ರಜ್ಞಾನ ಎಂದು ಬೆಳೆಗಳಿಗೆ ಬಳಸುವ ಎಲ್ಲಾ ನಾಲ್ಕಾಣೆ ವಸ್ತುಗಳಿಗೆ ಒಂದು ರೂಪಾಯಿ ಕಟ್ಟಬೇಕು .
    ಹಗಲಿರುಳೂ ಹೆಂಡತಿ ಮಕ್ಕಳ ಸಹಿತ ದುಡಿದು ಪ್ರಕೃತಿ ವಿಕೋಪಗಳನ್ನು ಹೆದರಿಸಿ ರಾಶಿ ರಾಶಿ ಪದಾರ್ಥಗಳ ಬೆಳೆದು ಮಾರುಕಟ್ಟೆಗೆ ತಂದರೆ ಅಲ್ಲಿ ಸಹಿಸಲಾಗದಷ್ಟು ತೊಂದರೆ. ಹಾಗಾದರೆ ಈಗ ರೈತ ಸ್ವಾಭಿಮಾನಿಯಾಗಿ ಬದುಕಲಿಕ್ಕೆ ಸಾಧ್ಯವಿದೆಯೇ ?
    ಅನೇಕರು ಹೇಳುತ್ತಿರುತ್ತಾರೆ , ರೈತ ತನ್ನ ತನವನ್ನು ಕಳೆದುಕೊಂಡು ಅಧಿಕಾರಿ ವರ್ಗದ ಹಂಗಿನರಮನೆಯಲ್ಲಿ ಬದುಕುತ್ತಿದ್ದಾನೆಂದು.
    ಯಾಕೆ ಅವರ ಹಂಗಿನೊಳಗೆ ಸಿಲುಕಿದ್ದಾನೆಂದು ಮಾತ್ರ ಯಾರೂ ಹೇಳರು. ದುಡಿಯದೇ ಬದಕುವ ವರ್ಗಗಳಿಗೆ ಊಟ ಹಾಕಿ ಅವರ ಹಿಡಿತದಲ್ಲಿ ನಲುಗಿಯೇ ಅಲ್ಲವೇ ಇಂದು ರೈತನಾದವನು ತನ್ನ ಸ್ವಭಿಮಾನ ಕಳೆದು ಕೊಂಡು ಇಷ್ಟು ಅಧೋಗತಿಗಿಳಿದಿರುವುದು ? ಈಗ ಹೇಳಿ , ಹಂಗಿನೊಳಗೆ ಬದುಕುತ್ತಿರುವವರು ರೈತರೋ ಅಥವ ಅವರು ಬೆಳೆವ ಅನ್ನ ಉಂಡು ಬಲಿತಿರುವ ಅಧಿಕಾರಿ ವರ್ಗವೊ ?
    ಹೌದು ರೈತ ಇಂದು ಸೋತಿದ್ದಾನೆ. ವ್ಯಾಪಾರಿಯಿಂದ ಹಿಡಿದು ಮೇಲಿನ ಅಧಿಕಾರಿಯವರೆಗೆ ಇವನ ಜುಟ್ಟು ಹಿಡಿದು ಅಲುಗಾಡಿಸುತ್ತಿದ್ದಾರೆ. ವಿಚಾರವಂಥರಂತೂ ಅಕ್ರಮಗಳ ಬಗ್ಗೆ ಹೇಳುವುದು ಬಿಟ್ಟು , ಅದನ್ನು ಮಟ್ಟ ಹಾಕುವ ಬಗ್ಗೆ ಚಿಂತಿಸುವುದನ್ನು ಬಿಟ್ಟು ಏನೇನೋ ಇಲ್ಲಸಲ್ಲದರ ಬಗ್ಗೆಯಲ್ಲಾ ಹೇಳತೊಡಗಿದ್ದಾರೆ. ಅಡಿಯಿಂದ ಮುಡಿಯವರೆಗೆ ಎಲ್ಲರೂ , ವಿಶ್ವದ ತಾಯಿ ಬೇರಿನಂತಿರುವ ದುಡಿಯುವವನ ಕರುಳಿಗೇ ಕೈ ಹಾಕಿದಂತಿದೆ.ಇಂತ ದುಷ್ಟ ಕಣ್ಣುಗಳು ಅಸಹಾಯಕನ ಕರುಳಿಗೆ ಬಿದ್ದರೆ, ದೃಷ್ಟಿ ತಾಗಿ, ಅಲ್ಪ ಶಕ್ತಿಯೂ ನಶಿಸಿ ಬಿಟ್ಟರೆ , ಆ ಮೇಲೆ ದುಡಿಯಲಿಕ್ಕೆ ಯಾರ ರಟ್ಟೆಗಳನ್ನು ಹುಡುಕಿಕೊಂಡು ಹೋಗುತ್ತಾರೋ ?
    ಇಂದು ಸಾಮಾಜಿಕ ಕನಸಿರುವ ನಾಯಕರ ಕೊರತೆಯಿಂದ, ಭ್ರಷ್ಟನಿಗ್ರರ ಕೊರತೆಯಿಂದ, ಮುಂದಾಲೋಚನೆ ಇರುವವರು ಮುಂದಾಳತ್ವ ವಹಿಸದೇ ಹಿಂದುಳಿದಿರುವ ಕಾರಣದಿಂದ, ಯೋಗ್ಯರಾದವರು ಅಧಿಕಾರದಿಂದ ದೂರ ಉಳಿದಿರುವ ಪರಿಣಾಮದಿಂದ ಏನೆಲ್ಲಾ ಅನಾಹುತಗಳಾಗುತ್ತಿವೆ !
    ಇವತ್ತು ರೈತನಿಗೆ ಸರಿಯಾದ ನೀರು ಕೊಟ್ಟರೆ , ನೀರು ಬಳಸಲು ವಿದ್ಯುತ್ ಕೊಟ್ಟರೆ , ನ್ಯಾಯವಾದ ಬೆಲೆಗೆ ಬೀಜ ಗೊಬ್ಬರ ಕೊಟ್ಟರೆ , ಬೆಳೆದದ್ದಕ್ಕೆ ನ್ಯಾಯಯುತ ಬೆಲೆ ಕೊಟ್ಟರೆ ಅವ ಎಷ್ಟು ಬೇಕಾದರೂ ಬೆಳೆದು ಹಾಕ ಬಲ್ಲನು. ಆದರೆ
    ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಪಂಚಕ್ಕೆ ರೈತನ ಅಗತ್ಯವಿಲ್ಲವೇನೋ ಎಂಬಂತೆ ನಮ್ಮ ರಾಜಕಾರಣಿಗಳು ವರ್ತಿಸತೊಡಗಿದ್ದಾರೆ.
    ಲಕ್ಷಗಟ್ಟಲೆ ರೈತರು ಆತ್ಮಹತ್ಯೆಗಳ ಮಾಡಿಕೊಂಡರೂ ಇನ್ನೂ ಅಧಿಕಾರದ ಕಣ್ಣಿಗೆ ಮಂಕು ಕವಿದಂತೆಯೇ ಇದೆಯೆಂದಮೇಲೆ ನಿಜಕ್ಕೂ ರೈತರು ತಾವಾಗಿಯೇ ಸಾಯುತ್ತಿದ್ದಾರೋ ಅಥವ ಅಧಿಕಾರದ ವಿಷ ವರ್ತುಲದೊಳಗೆ ಸಿಲುಕಿ ಕೊಲೆಯಾಗುತ್ತಿದ್ದಾರೋ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading