ಜಲಾಂತರ್ಗತ ಸಹಚರ…
– ರಘುನಂದನ ಕೆ. ಹೆಗಡೆ
ಮಲೆನಾಡ ಮಣ್ಣಲ್ಲಿ ಹುಟ್ಟಿ ಬೆಳೆದ ನಮಗೆ ನೀರು ಹೊಸತಲ್ಲ. ನಿರಂತರ ಸುರಿವ ಜಿಟಿ ಜಿಟಿ ಮಳೆ, ಪ್ರವಾಹದ ಅಬ್ಬರ, ಗದ್ದೆಯ ಅಂಚಿನಲ್ಲಿ ಹರಿವ ಹಳ್ಳ, ತೋಟದೊಳಗಿನ ಕೆರೆ, ಹೆಜ್ಜೆಗೊಂದು ಜಲಪಾತ – ಇವುಗಳಲ್ಲೆ ಬೆಳೆದವರು ನಾವು. ನೀರಾಟ ಮಲೆನಾಡ ಮಂದಿಗೆ ನಿಸರ್ಗದೊಂದಿಗಿನ ಒಡನಾಟ ಕೂಡ. ಮನುಷ್ಯ ನಾಗರಿಕನಾಗುವ ಹಂತದಲ್ಲಿ ನಿಸರ್ಗ ನೀಡಿದ ಕೌಶಲ್ಯಗಳನ್ನೆಷ್ಟೊ ಕಳೆದುಕೊಳ್ಳುತ್ತ ಹೋದನಂತೆ. ನಾಗರಿಕನಾಗುವ ಹಂತದಲ್ಲಿ ಎನ್ನುವುದಕ್ಕಿಂತ ಆಧುನಿಕನಾಗುವ ಭರದಲ್ಲಿ ಎನ್ನಬಹುದೇನೋ. ಸರಸರನೆ ಮರವೇರುವುದು, ಕಾಡ ಮರಗಿಡಗಳೊಂದಿಗಿನ ಬಾಂಧವ್ಯ, ನೀರಿನಲ್ಲಿ ಮೀನಿನಂತೆ ಈಜುವುದು, ಗುಬ್ಬಚ್ಚಿ ಗೂಡಿಗೆ ಮನೆಯಲ್ಲೊಂದು ಪುಟ್ಟ ಜಾಗ…
ಸಂಸಾರ ‘ಸರಸ’ ವಾಗಿದ್ದ ಕಾಲದಿಂದ ‘ಸಸಾರ’ವಾಗುವ ಹಂತಕ್ಕೆ ತಲುಪುತ್ತಿದ್ದೇವಾ? ಬದುಕೂ ಒಂದು ವ್ಯವಹಾರವಾಗುತ್ತ, ಸಂಬಂಧಗಳ ಬಂಧ ಸಡಿಲವಾಗುತ್ತ, ಹಣ ಬದುಕಿನ ಮಾಪನವಾಗಿ ಆಧುನಿಕರೆನಿಸಿಕೊಳ್ಳಲು ಹೆಣಗುತ್ತಿದ್ದಾನೆ ಮನುಷ್ಯ. ನಗರ ಜೀವನದ ಧಾವಂತದಲ್ಲಿ ನೀರು ನಿತ್ಯಕರ್ಮಗಳ ಅಗತ್ಯ ಮಾತ್ರ ಎನ್ನುವಷ್ಟು ಬದಲಾಗಿದೆ ಕಾಲ. ಹಳ್ಳಿಗಳಲ್ಲೂ ಹಳ್ಳದ ನೀರಲ್ಲಿ ಈಜು ಕಲಿಸಲು ಯಾರಿಗೂ ಆಸಕ್ತಿಯಿಲ್ಲ. ಒಂದು ಕಾಲವಿತ್ತು, ಬೆಸಗೆಯ ರಜಾ ದಿನಗಳಲ್ಲಿ ಮಲೆನಾಡ ಮಕ್ಕಳೆಲ್ಲ ಜಲಚರ ಜೀವಿಗಳಾಗುತ್ತಿದ್ದ ಕಾಲ, ಎಮ್ಮೆಗುಂಡಿಯಲ್ಲಿ ಕೆಸರು ನೀರಲ್ಲಿ ಬಿರು ಬಿಸಲಿನಲ್ಲಿ ಹೊರಳಾಡುತ್ತಿದ್ದ ಸುಖದ ಕಾಲ… ಆ ಕಾಲದಲ್ಲಿ ಈಜುವುದು ಬದುಕಿನ ಅನಿವಾರ್ಯ ಕಲಿಕೆ…
ಯಾಕೋ ಮನಸ್ಸು ಕಾಡುತ್ತಿದೆ. ನಗರ ಜೀವನದ ಅನಿವಾರ್ಯತೆಗಳೆಲ್ಲದರ ನಡುವೆಯೂ, ಮಲೆನಾಡ ಹುಡುಗನಾಗಿ ಕಲಿಯದ ಕೌಶಲ್ಯವನ್ನ ಕಲಿಯಬೇಕೆಂದುಕೊಳ್ಳುತ್ತ ನೀರಿಗಿಳಿದಿದ್ದೇನೆ. ನಿಸರ್ಗ ಸಹಜವಾಗಿ ನೀಡುವ ಜೀವ ರಕ್ಷಣಾ ಕಲೆಯನ್ನ ಅಸಹಜವಾಗಿ ಕಲಿಯುವಾಗಲೂ ಮನಸ್ಸು ಆನಂದ ಸಾಗರವಾಗುತ್ತದಲ್ಲ – ಸಾರ್ಥಕದ ಕ್ಷಣ ಅದು. ಪ್ರಕೃತಿಯೇ ಹಾಗೆ ಅದರೊಂದಿಗಿನ ಎಲ್ಲ ಒಳಗೊಳ್ಳುವಿಕೆಯೂ ಆನಂದವೇ. ಹರಿವ ನೀರು, ಬೀಸುವ ಗಾಳಿ, ಹಸಿರು ಎಲೆ, ಮೊದಲ ಮಳೆಯ ಮಣ್ಣ ಬಿಸಿಯುಸಿರ ಪರಿಮಳ, ಕೆಸರು ಗದ್ದೆ, ಗೋಧೂಳಿಯ ಹೊನ್ನ ಕಿರಣ, ಮುಂಜಾನೆಯ ಮಂಜಿನ ತಂಪು, ಅರಳುವ ಹೂವಿನ ಕಂಪು, ಪಕ್ಷಿ ಲೋಕದ ಇಂಚರ, ಪಾತರಗಿತ್ತಿಯ ರೆಕ್ಕೆಯ ಬಣ್ಣ, ಸೂರ್ಯೋದಯ ಸೂರ್ಯಾಸ್ತಗಳ ಸಂಭ್ರಮ, ಅಸಂಖ್ಯ ನಕ್ಷತ್ರಗಳ ಮಿಣುಕು, ವಿಶಾಲ ಗಗನ, ವಿಸ್ತಾರ ಸಾಗರ ಮತ್ತು ಹರಡಿಬಿದ್ದ ಮರಳ ತೀರ…
ಮನುಷ್ಯ ಆಧುನಿಕನಾದರೂ ಮನಸ್ಸು ಪ್ರಾಚೀನವೆ ಇರಬಹುದಾ? ನಿಸರ್ಗದ ಮಡಿಲಲ್ಲಿ ಕುಳಿತು ಮನಸ್ಸಿಗೆ ಸಮಯ ಕೊಟ್ಟರೆ ಆಧುನಿಕತೆಯ ಮೀರಿದ ಭಾವ.. ಏನೋ ಆಹ್ಲಾದ… ಹಗಲುಗನಸುಗಳ ಮೆರವಣಿಗೆ… ಬಾಲ್ಯ ಜೀವನದ ಕನವರಿಕೆ… ಆದರೆ ನಗರ ಪ್ರಪಂಚ ಕೇಳುವುದು ಮನಸ್ಸಿನ ಭಾವ ತರಂಗಗಳನ್ನಲ್ಲ, ಬುದ್ಧಿವಂತಿಕೆಯ ರಭಸಗಳನ್ನ..!!
ಹೊಸತನ್ನ ಕಲಿಯುವ ಹಂಬಲದಲ್ಲಿ ಬದುಕಿನ ಈಜುಕೊಳಕ್ಕೆ ಧುಮಕುತ್ತೇವೆ ನಾವು. ಕೈ ಕಾಲು ಬಡಿದು ಆಟವಾಡತೊಡಗುತ್ತೇವೆ. ಹೊಸತನ್ನ ಕಲಿಯುವ ಸಂಭ್ರಮ ನಮಗೆ. ಬದುಕೀಗ ನವನವೀನ. ಪ್ರಕೃತಿ, ಬದುಕು ಗೆಲ್ಲಿಸುತ್ತದೆ, ಮುಳುಗಿಸುವುದಿಲ್ಲವೆಂಬ ನಂಬಿಕೆ ಮುನ್ನಡೆಸುತ್ತದೆ.ಎಷ್ಟೋ ಬಾರಿ ಬಾಲ್ಯ ಕಲಿಸದ ಕೌಶಲ್ಯವ ಯೌವನದ ಉತ್ಸಾಹ, ಆಧುನಿಕತೆ, ಹಣ ಕಲಿಸುತ್ತದೆ. ಕಲಿಕೆ ಹೇಗೇ ಆದರೂ ಕಲಿಕೆಯೇ ತಾನೆ.
ಓದಿನೊಳಗಣ ಗುಡಿಯಿಂದ ಮೂಡಿಬಂದ ವಿಚಾರಗಳ ಸಂಭ್ರಮದಿಂದ ನಿಮ್ಮೆದುರು ಹರಡಿದ್ದೇನೆ. ಮೊದಲೆಲ್ಲ ಭಾವನೆಗಳನ್ನು ಹರಡಿಕೊಳ್ಳಲು ಡೈರಿಯಿತ್ತು. ನಗರ ಸೇರಿ ಆಧುನಿಕವಾಗುವ ಭರದಲ್ಲಿ ಮರೆತಿದ್ದೆ. ಡೈರಿ ಆತ್ಮ ಸಾಂಗತ್ಯಕ್ಕಿದ್ದರೆ ಈಗ ಅಂತರ್ಜಾಲದ ಅಂತರಂಗವಿದೆ – ಅಕ್ಷರ ಸಾಂಗತ್ಯಕ್ಕೆ. ಮತ್ತೆ ಬರವಣಿಗೆ ಮೂಡುತ್ತಿದೆ. ಭಾವಗಳೆಲ್ಲ ಏಕಾಂತದ ಪುಟಗಳಿಂದ ಸಾರ್ವತ್ರಿಕವಾಗುವ ತುಡಿತದಲ್ಲಿವೆ. ನಿಮ್ಮೆದುರಿಗೆ ನಾನು ಈಗ ತೆರೆದ ಅಕ್ಷರ ಗುಚ್ಛ…








ನಿಮ್ಮ ಮಲೆನಾಡಿನ ಸೌಂದರ್ಯದ ಬಗ್ಗೆ ಹೇಳಿ ನನ್ನ ಹೊಟ್ಟೆ ಉರಿಸೋದಲ್ಲದೆ ನಗರ ಜೀವನದ ನೀರಸ ಬದುಕಿನ ಚಿತ್ರಣ ಮಾಡಿ ಉರಿಗೆ ತುಪ್ಪ ಸುರಿದಿದ್ದೀರಿ. ರಘು.. ಸೆಳೆಯುವ ಬರಹ
ಲಹರಿ ಚೆನ್ನಾಗಿದೆ, ರಘುನಂದನಾ..ಮುಂದುವರಿಯಲಿ…
seleyuva…kaaduva bhava nimma barahakkide….liked it! all the best…..
matte gatakalakke kredukondu hoda ninage thanks.