ಗಿರೀಶ್ ಜಕಾಪುರೆ ಅವರ ಕಾಫಿಯಾನಾ ಗಜಲ್ ಸಂಕಲನ ‘ಸಾವಿರ ಕಣ್ಣಿನ ನವಿಲು’ ಕೃತಿಗೆ
ಖ್ಯಾತ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಬರೆದ ಮುನ್ನುಡಿ ಇಲ್ಲಿದೆ-
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
ಗಿರೀಶ ಜಕಾಪುರೆ ಅಂಚೆ ವಿಳಾಸದ ಪ್ರಕಾರ ಕರ್ನಾಟಕದ ಗಡಿಯಾಚೆಗಿನ ಮೈಂದರ್ಗಿಯಲ್ಲಿ ವಾಸಿಸುತ್ತಿದ್ದಾರೆ, ಆದರೆ ಭಾವ, ಬಾಂಧವ್ಯ ಸಂಬಂಧಗಳಲ್ಲಿ ಕ್ಷಣ ಕ್ಷಣವೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಜೀವದ್ರವ್ಯಕ್ಕೆ ಪ್ರತಿನಿಧಿಯಾಗಿ ಸ್ಪಂದಿಸುತ್ತಿದ್ದಾರೆ. ಒಡನಾಟ, ಮಾತು, ಬರವಣಿಗೆ ಎಲ್ಲದರಲ್ಲೂ ಅವರು ಕನ್ನಡದ ಭಾವನಾಮವೇ ಆಗಿದ್ದಾರೆ.
ಕನ್ನಡ ಹಾಗೂ ಹಿಂದಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಸದ್ಯ ಹಂಪಿ ಕನ್ನಡ ವಿ.ವಿ.ಯಲ್ಲಿ ಸಂಶೋಧನಾರ್ಥಿಯಾಗಿ ‘ಪ್ರೇಮಚಂದ ಮತ್ತು ಚದುರಂಗ’ರ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಅಲ್ಲದೆ, ಗಡಿಭಾಗದಲ್ಲಿ ಶಿಕ್ಷಕರಾಗಿ ಸಂತೃಪ್ತಿಯ ಕಾಯಕದಲ್ಲಿದ್ದಾರೆ.
ಗಿರೀಶ ನಮ್ಮ ಒಳನಾಡಿನ ಅಸಂಖ್ಯ, ಅನಗತ್ಯ ಸುದ್ದಿ-ಗದ್ದಲಗಳಿಂದ ದೂರವಿದ್ದು; ನಿರಾಳವಾಗಿ ಬರೆಯಲು, ಹೊಸದೆನಿಸುವ ಹೊರಗಿನದನ್ನು ಆಯ್ದು ನಮಗೆ ಕೊಡಲು ಯತ್ನಿಸುತ್ತಿದ್ದಾರೆ. ಹೀಗೆ ಹೊರಗಿನ, ದೂರದ, ಒಂದು ಅಂತರವನ್ನು ಉಳಿಸಿಕೊಂಡಾಗ ಅಕ್ಷರಗಳ ಅಂತರಂಗದ ಹೂರಣ ರುಚಿಕಟ್ಟಾಗುತ್ತದೆ ಎಂಬುದನ್ನು ಅವರ ಬರವಣಿಗೆಯಿಂದ ನಮ್ಮವರು ಅರಿತಿದ್ದಾರೆ.
ಈ ಕಾರಣದಿಂದಲೇ ಬೆಂಗಳೂರು, ಮೈಸೂರು, ಮುಂಬಯಿ, ಬೆಳಗಾವಿ, ಧಾರವಾಡ, ಬೀದರ ಮುಂತಾದ ಕಡೆಯಿಂದ ಕೈಮಾಡಿ ಕರೆದು ಬಗೆಬಗೆಯ ಪ್ರಶಸ್ತಿ ನೀಡಿ ಅವರನ್ನು ಸನ್ಮಾನಿಸಲಾಗಿದೆ.
ಕಾವ್ಯ, ಕತೆ, ಕಾದಂಬರಿ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ, ಅನುವಾದ ಹೀಗೆ ಹಲವು ದಿಕ್ಕುಗಳಲ್ಲಿ ಜೀವ ಹರಿಬಿಟ್ಟಿರುವ ಜಕಾಪುರೆಯವರ ಬರವಣಿಗೆ ಹುಡುಕಾಟದ ಹಾದಿ; ನಿಜದ ಲೇಖಕನಿಗೆ ಇದು ಪ್ರಶಸ್ತ ಅಕ್ಷರ ಮಾರ್ಗ. ಕನ್ನಡ, ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್ ಭಾಷೆಗಳ ಓದು ರೂಢಿಸಿಕೊಂಡಿದ್ದರಿಂದ ಆಯಾ ಸಾಹಿತ್ಯ, ಸಂಸ್ಕೃತಿಗಳ ಎಲ್ಲ ಕಿಟಕಿಗಳನ್ನೂ ಅವರು ತೆರೆದಿಟ್ಟುಕೊಂಡಿದ್ದಾರೆ.
ಅಲ್ಲಿಂದ ಬರುವ ಬೆಳಕನ್ನು ಸ್ವಾಗತಿಸುವ, ಆನಂದಿಸುವ ಮನಸ್ಸು ಹೊಂದಿದ್ದಾರೆ. ಹೀಗಾಗಿ ಗಿರೀಶರ ಈ ಕಾಫಿಯಾನಾ ಗಜಲ್ ಕಟ್ಟು ಇಂಥ ಬೆಳಕು ಸ್ರವಿಸುವ ಕಾವ್ಯವೇ ಆಗಿವೆ. ಕಾವ್ಯದ ಅಡಿಪಾಯ ಭದ್ರವಿದ್ದರೆ ಅದರ ಮೇಲೆ ಬೇಕಾದಾಗ ಬೇಕಾದಷ್ಟು ಮಹಡಿ, ಇಷ್ಟದ ಮನೆಗಳನ್ನು ಕಟ್ಟಬಹುದು ಎಂಬ ನಂಬಿಕೆ ಅವರಿಗಿದೆ. ಆದ್ದರಿಂದಲೇ ಅವರ ಜೀವ ಮತ್ತೆ ಮತ್ತೆ ಕವನ ಭವನದ ಸುತ್ತ ಗಿರಕಿ ಹೊಡೆಯುತ್ತದೆ. ಅದರ ಫಲವೇ ಹೊಸ ಕವಿತೆ, ಗಜಲ್ಗಳ ಈ ಗುಂಫನ.
ಫಾರಸೀ ಮೂಲದಿಂದ ಹರಿದು ಬಂದ ಗಜಲ್ ಭಾರತೀಯ ಭಾಷೆಗಳಲ್ಲಿ ಉರ್ದೂ, ಸಿಂಧೀ, ಗುಜರಾತೀ, ಪಂಜಾಬೀ, ಹಿಂದೀ, ಮರಾಠಿಗಳಲ್ಲಿಯೂ ಸಮೃದ್ಧ ಕಾವ್ಯಕೃಷಿಗೆ ಕಾರಣವಾಗಿದೆ. ಆರಂಭದ ದಿನಗಳಲ್ಲಿ ಕನ್ನಡದಲ್ಲಿ ನೆಲೆಯೂರಲು ನಿಧಾನ ಹೆಜ್ಜೆ ಹಾಕಿದ ಗಜಲ್ ಪ್ರಕಾರ ಶಾಂತರಸ, ಅಬ್ದುಲ್ ಮಜೀದ್ ಖಾನ್ ಮುಂತಾದವರ ಪ್ರಯತ್ನದಿಂದ ದಾಪುಗಾಲಿಟ್ಟು ಅನೇಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು.
ಇಂಗ್ಲಿಷ್ನ ಸುನೀತದಂತೆ ಗಜಲ್ ಸಹ ಈಗ ಶುದ್ಧ ಕನ್ನಡದ ನೀರುಣಿಸುವಲ್ಲಿ ನಿರತವಾಗಿದೆ. ಈಚೆಗೆ ಚಿದಾನಂದ ಸಾಲಿಯವರ ಸಂಪಾದಕತ್ವದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಕನ್ನಡ ಗಜಲ್ ಸಂಗ್ರಹವು ಕನ್ನಡದಲ್ಲಿ ಈ ಛಂದಸ್ಸು ಬೆಳೆದು ಬಂದ ಬಗೆ ಹಾಗೂ ನೀಡಿದ ಸಮೃದ್ಧ ಬೆಳೆಯನ್ನು ಸಂಕೇತಿಸುತ್ತದೆ. ಉರ್ದೂ, ಹಿಂದೀ, ಮರಾಠೀ ತಿಳಿದ ಕನ್ನಡ ಕವಿಗಳು ಗಜಲ್ ಮಯೂರಿಯ ಸೌಂದರ್ಯ ಹಾಗೂ ಸಂಗೀತಕ್ಕೆ ಸಹಜವಾಗಿಯೇ ಆಕರ್ಷಿತರಾಗುತ್ತಾರೆ. ಗಿರೀಶ ಜಕಾಪುರೆ ಸಹ ಇದಕ್ಕೆ ಹೊರತಾಗಿಲ್ಲ.
ನವಿಲು, ನವಿಲುಗರಿ, ನೃತ್ಯ, ನೋಟ ಮುಂತಾದುವು ಪ್ರಪಂಚದ ಎಲ್ಲ ದೇಶ, ಭಾಷೆ, ಕಾಲಗಳ ಕಲಾ ತಟಗಳ ಮೇಲೆ ನರ್ತಿಸುತ್ತ ನಿಂತಿರುವ ಕೃಷ್ಣ ಪ್ರತಿಮೆ. ಹಾಡುವ, ಬರೆಯುವ, ಚಿತ್ರಿಸುವ, ನರ್ತಿಸುವ ಸಂಗಾತಿಗಳ ಪಾಲಿಗೆ ಹೊಸ ವೇಷ, ಹರಕು ಹಚ್ಚಡ, ಅಂದದ ಕೌದಿ, ಮುದದ ಮುಖವಾಗಿದೆ ಮಯೂರ. ಅದನ್ನು ದೂರವಿಡುವುದು, ಇಲ್ಲವೆ ಸ್ವತಃ ದೂರವಿರುವುದು ಕಷ್ಟದ ವಿಷಯ. ಅದಕ್ಕೆ ಆಯಾ ಕಾಲದ ಹೆಸರು, ಬಣ್ಣ, ತೇಪೆ, ಅರ್ಥ ಪ್ರಯೋಗಿಸುವುದನ್ನು ಬಳಸುವುದನ್ನು ಕವಿ, ಕಲಾವಿದರು ತಮ್ಮ ಉಸಿರೆಂಬಂತೆ ಪಾಲಿಸಿಕೊಂಡು ಬಂದಿದ್ದಾರೆ.
ಕನ್ನಡದ ಬಹುಪಾಲು ಕಾವ್ಯಭಾಗವನ್ನು ಕಮಲ, ಕೋಗಿಲೆ ಮುಂತಾದುವುಗಳಿಗಿಂತ ಹೆಚ್ಚಾಗಿ ಆಕರ್ಷಿಸಿರುವ ನವಿಲು ನಲಿವಾಗಿ, ಅಧ್ಯಾತ್ಮವಾಗಿ, ಸಂಕೇತವಾಗಿ ಮತ್ತೆ ಮತ್ತೆ ಜೀವ ತಳೆಯುತ್ತ ಬಂದಿದೆ. ಮಧುರಚೆನ್ನರಂಥವರು ಕಳೆದು ಹೋದ ಏನನ್ನೋ ಅರಸುತ್ತ, ಅಮಾಯಕವಾಗಿ, ‘ನಿಲ್ಲು ನಿಲ್ಲೆಲೇ ನವಿಲೆ ನಿನ್ನ ಕಣ್ಣುಗಳೇಸು? ಕಣ್ಣ ಬಣ್ಣಗಳೇಸು ಎಣಿಸಲಾರೆ..!’ ಎಂದು ನಲ್ಲನನ್ನು ನಲಿಸುತ್ತ ನಲ್ಲೆಯಾಗುತ್ತಾರೆ; ‘ತಾಳಲಾರದು ಜೀವ’ ಎನ್ನುತ್ತ ಸ್ವತಃ ಎಲ್ಲೆ ಮೀರಿದ ರೂಪಕವಾಗುತ್ತಾರೆ. ಹೀಗೆ ನಡೆಯುವ, ಕುಣಿಯುವ, ಕುಕಿಲುವ, ಕುಕ್ಕುವ, ಹಾರುವ ಈ ಪಂಚಕಲಾಪ್ರವೀಣ ನವಿಲು ಜೀವ ಭಾವಕ ಮನಸ್ಸುಗಳಲ್ಲಿ ನೆಲೆಸಿರುವವರೆಗೆ ಸೃಷ್ಟಿಶೀಲರು ಅದನ್ನು ಚಿತ್ರಿಸುತ್ತಾರೆ, ಗೀತಿಸುತ್ತಾರೆ.
ಇಂಥ ಮನೋಭಾವವೇ ಈಗ ಗಿರೀಶರ ಈ ಗಜಲುಗಳಲ್ಲಿ ಪ್ರೇಮದ ಮಧುವಾಗಿದೆ. ಕೆಲವರು ಸಾಂಕೇತಿಕವಾಗಿ ನವಿಲನ್ನು ಸೂಚಿಸುತ್ತಾರೆ, ಆದರೆ ಗಿರೀಶರು ಮಾತ್ರ ನವಿಲನ್ನು ಬಿಚ್ಚುಮನಸ್ಸಿನಿಂದ ಮೆಚ್ಚಿದ್ದಾರೆ, ಅದರ ನರ್ತನ ನೋಡಿ ಮೈಮರೆತಿದ್ದಾರೆ; ಹೀಗಾಗಿ ಸಾಂಕೇತಿಕತೆಯಿಂದ ಸಿಡಿದು ನಿಂತು, ಅದರಂತೆ ಕುಣಿಯ ಹೋಗಿ ಒಮ್ಮೊಮ್ಮೆ ತಡವರಿಸಿದ್ದಾರೆ.
ಗಿರೀಶ ಜಕಾಪುರೆ ಬರೆದರೆ ಕತೆ, ನುಡಿದರೆ ನಾಟಕ, ಮಿಡಿದರೆ ಮಾರ್ದವ ಕವಿತೆ, ಮೌನವಾಗಿದ್ದರೆ ದನಿಗುಡುವ ಸಂತ. ಇಂಥ ಸರಳ ಜೀವವನ್ನು ‘ಸಾವಿರ ಕಣ್ಣಿನ ನವಿಲು’ ಮಾಯಾಮೃಗದಂತೆ ಕುಟುಕುತ್ತಿದೆ, ‘ಜೀವ’ ಹಿಂಡುತ್ತಿದೆ. ಈ ನವಿಲನ್ನು ‘ಕಾಫಿಯಾನಾ ಗಜಲ್’ಗಳ ಸೂತ್ರ ಬಳಸಿ ಪದಪಂಜರದಲ್ಲಿ ಕಟ್ಟಿ ಹಾಕುವುದೇ ಸೂಕ್ತ ಎಂದು ಅವರಿಗೆ ಅನ್ನಿಸಿದೆ. ಅದರ ಪರಿಣಾಮ ಈ ಸಂಗ್ರಹದಲ್ಲಿರುವ ಗಜಲ್ಗಳು. ಇಲ್ಲಿನ ಗಜಲ್ಗಳೆಲ್ಲವೂ ಸೀಮಿತ ಬಂಧದಲ್ಲಿಯೇ ಮೈದಾಳಲು ಯತ್ನಿಸಿವೆ.
ಉರ್ದೂ ಗಜಲಿನ ಆಕಾರ ಹೊಂದಿದ್ದರೂ ಇಂದಿನ ಬಹುಪಾಲು ಗಜಲ್ಕಾರರ ಗಜಲುಗಳಲ್ಲಿ ಮಾತ್ರಾಲಯ, ಪ್ರಾಸಬದ್ಧತೆ, ಛಂದೋಗುಣ, ಗೇಯತೆಯ ಪ್ರಯತ್ನನಿಷ್ಠತೆ ಕಂಡು ಬರುವುದಿಲ್ಲ. ಕನ್ನಡದ ಬಹುಪಾಲು ಗಜಲಿಗರಲ್ಲಿ ಮತ್ಲಾ, ರದೀಫ್, ಕಾಫಿಯಾ, ರವಿಶ್, ಮಕ್ತಾಗಳ ಅಪೇಕ್ಷಿತ ಪಾಲನೆ ನಡೆದಿಲ್ಲ ಎಂಬುದನ್ನೂ ಲಕ್ಷಿಸಬೇಕು. ಉರ್ದು ಗಜಲ್ನಲ್ಲಿ ಮುಖ್ಯವಾಗಿ ಮುರದ್ಧಫ್ ಗಜಲ್, ಗೈರ್ಮುರದ್ಧಫ್ ಗಜಲ್ ಎಂಬ ಎರಡು ಪ್ರಕಾರಗಳಿವೆ.
ಇಲ್ಲಿನವು ಗೈರ್ ಮುರದ್ಧಫ್ ಗಜಲ್ಗಳು, ಈ ಪ್ರಕಾರದಲ್ಲಿ ಬರೀ ಕಾಫಿಯಾ ಇರುತ್ತದೆ, ರದೀಫ್ನ ಹಂಗು ಈ ಗಜಲ್ಗಳಿಗೆ ಇರುವುದಿಲ್ಲ. ಇಲ್ಲಿ ಬರೀ ಕಾಫಿಯಾ ಇರುವುದರಿಂದ ಗಿರೀಶ ಈ ಗಜಲ್ಗಳಿಗೆ ‘ಕಾಫಿಯಾನಾ ಗಜಲ್’ ಎಂದಿದ್ದಾರೆ. ಬರೀ ಕಾಫಿಯಾ ಇರುವ ಗಜಲ್ಗಳನ್ನು ಹಲವು ಗಜಲ್ಕಾರರು ರಚಿಸಿದ್ದರೂ ಇಡೀ ಸಂಕಲನವೊಂದನ್ನು ‘ಕಾಫಿಯಾನಾ’ ಬಂಧದಲ್ಲಿ ಕಟ್ಟುವ ಮೊಟ್ಟಮೊದಲ ಪ್ರಯತ್ನ ಇದು. ಇಲ್ಲಿ ಕಾಫಿಯಾನಾ ಗಜಲ್ನ ಎಲ್ಲ ನಿಯಮಗಳನ್ನು ಪಾಲಿಸುವ ಯತ್ನ ಮಾಡಲಾಗಿದೆ ಹಾಗೂ ಎಲ್ಲ ರಚನೆಗಳು ಸಮಾನ ಮಾತ್ರೆಗಳಲ್ಲಿ ಇರುವದರಿಂದ ಇದು ಗೇಯತೆಗೆ ಒಲಿಯುತ್ತದೆ.
ಪ್ರೀತಿ ಸೋನೆಯಲ್ಲಿ ನೆನೆದಿರುವ ಗಿರೀಶರ ಭಾವಲೋಕದ ಈ ಕಾವ್ಯಖಂಡಗಳಿಗೆ ಆಪ್ತತೆಯಿಂದ ಕಿವಿಗೊಟ್ಟರೆ ಅವರ ಅಂತರಂಗದ ಸಂಗೀತ ಕೇಳುತ್ತದೆ. ಇಲ್ಲಿ ಕೆಲವು ಗಜಲ್ಗಳು ಮಾತ್ರ ನೇರವಾಗಿ ಸಮಾಜದ ಕುರಿತು ಭಾವಿಸಿ ಬರೆದುವು; ಉಳಿದುವು ಕವಿ ತನ್ನ ನಲಿವಿಗೆ ಹೇಳಿದ, ದೂರಿದ, ಆಕ್ಷೇಪಿಸಿದ, ಆಮಂತ್ರಿಸಿದ ವಿಪ್ರಲಂಭ ವಿಲಾಪಗಳು, ವಿರಹದ ಮಳೆಯಲ್ಲಿ ಒದ್ದೆಯಾದವರ ಮನ ಕರಗಿಸುವ ಕವಿತೆಗಳು ಇವು.
• ಹೊರಗೆ ಜಿಟಿಜಿಟಿ ಮಳೆ, ಎದೆಯೊಳಗೆ ಹಾಡಿನ ಎಳೆ
ಉಕ್ಕೇರಿ ಬರುತಿದೆ ಪ್ರೀತಿ, ಪ್ರೇಮದ ಹೊಳೆ
ಹೀಗಾಗುವುದಕ್ಕೆ ಕಾರಣ ಸ್ಪಷ್ಟವಿದೆ:
• ಸೌಂದರ್ಯ ಸಾಗರ ನೀನು, ರೂಪರಾಶಿಯ ಕಡಲು
ಚೆಲುವಿನ ಕಾಮನಬಿಲ್ಲು, ಸಾವಿರ ಕಣ್ಣಿನ ನವಿಲು
• ನಿನ್ನ ತನುವ ಸೋಕಿದ ಗಾಳಿಗೂ ಗುಂಗು ಹಿಡಿದಿದೆ
ನಿನ್ನ ಪಾದ ಸ್ಪರ್ಶದಿಂದ ಮುತ್ತಾಗಿದೆ ಮರಳು
ಈಗ ಅವಳು ಭೂತದ ಛಾಯೆ, ಅದರಾಚೆಗಿನ ಮರೆವಿನ ಮಾಯೆ. ಆದ್ದರಿಂದ ಕವಿಗೆ ಹೊಳೆದಿದೆ : ‘ಮಾಯೆಯ ಮುಗಿಲು ಯಾರ ಕೈಗೆ ಸಿಕ್ಕಿದೆ ಹೇಳು?’ ಎಂಬ ಸಾಲು. ಇದು ತನಗೂ, ಅವಳಿಗೂ, ಅವಳ ಅವನಿಗೂ ತಿಳಿಹೇಳುವ ಮಾತು. ಭಾವತೀವ್ರತೆ ಮತ್ತು ತೀಕ್ಷ್ಣತೆಯೇ ಇಂತಹ ಕವಿತೆಗಳ ಜೀವಾಳ. ‘ಇರುವೆನು ಸಖಿ ಇದ್ದೂ ಇಲ್ಲದಂತೆ / ಮೂಕಗೀತೆಯ ಮೌನ ಪಲ್ಲದಂತೆ / ಅದ್ಯಾವ ಮೋಡಿ ಮಾಡಿದೆಯೋ ಕಾಣೆ / ನಾನು ಅಲ್ಲೂ ಇಲ್ಲೂ ಸಲ್ಲದಂತೆ’ ಮತ್ತು ‘ಒಮ್ಮೆ ಎದ್ದ ಸಭೆಯಲಿ ಮತ್ತೆ ಕೂರಬಾರದು / ದೂರಾದವರೊಂದಿಗೆ ಪುನಃ ಕೂಡಬಾರದು’ ಅಲ್ಲದೇ ‘ಶಬ್ದಕ್ಕೆ ಪ್ರತಿಶಬ್ದ ಬೆಳೆಯಿತು, ವಾದವಾಯಿತು / ಸಖಿ, ಇಲ್ಲಿ ಮಾತಾಡುವುದೂ ಅಪರಾಧವಾಯಿತು’ ಎಂದು ಹೇಳುವಷ್ಟರ ಮಟ್ಟಿಗಿನ ತತ್ತರಿಸುವಿಕೆಗೆ ಉತ್ತರವಾಗುವಂಥ ಅನೇಕ ಶೇರ್ಗಳು, ಪದಪುಂಜಗಳು, ಪದ್ಯಭಾಗಗಳು ಈ ಸಂಗ್ರಹದಲ್ಲಿವೆ.
‘ಹೊರಲಾಗುತ್ತಿಲ್ಲ ಖಾಲಿ ಜೇಬಿನ ಭಾರ / ಮರಣವೇ ಮಾಡು ಇನ್ನೊಂದು ಉಪಕಾರ’ ಮತ್ತು ‘ಮರಳುಗಾಡಲ್ಲಿ ನೀರ ಸೆಲೆಯಂತೆ ದೊರೆತೆ’ ಜೀವಸತ್ಯವು ತಾನಾಗಿ ಉಣಿಸಿದ ‘ಪ್ರೀತಿ ವಿಷವನುಂಡು ಅನುಭವಿಯಾದೆ’ ಎಂದು ನೀಲಕಂಠತ್ವವನ್ನು ಆವಾಹಿಸಿಕೊಳ್ಳಬೇಕಾದ ಸ್ಥಿತಿ ಕವಿಕಂಠಕ್ಕೆ ಬಂದಿದೆ. ಪ್ರತಿಯೊಂದು ಗಾಯಕ್ಕೂ ಅಲ್ಪ ಕಾಯುವಿಕೆಯ ನಂತರ ಒಂದು ಮಾಯುವಿಕೆ ಬಂದೇ ಬರುತ್ತದೆ. ಆಗ ಎಲ್ಲವೂ ಅರ್ಥವಾಗುತ್ತದೆ.
• ಬೇಸರಿಸಿದ್ದಾನೆ ‘ಅಲ್ಲಮ’ನೂ ಕೂಡ
ಸಾಕೆನಿಸಿದೆ ಈ ನೆರಳು ಬೆಳಕಿನ ಕದನ
• ಜೊತೆಗೆ ಇರುವಾಗ ತಿಳಿಯುವುದಿಲ್ಲ ‘ಅಲ್ಲಮ’ನ ಮಹತ್ವ
ದೂರಾದಾಗಲೇ ಗೊತ್ತಾಗುವುದು ಅವನ ಕಿಮ್ಮತ್ತು
ನಿಜ, ಕಾಲಿಗೆ ನೆಲವನ್ನು, ಬಾಳಿಗೆ ನೆಲೆಯನ್ನು, ನಾವಿರದಾಗಿನ ನಾಳೆಗೆ ಅಸ್ತಿತ್ವದ ಬೆಲೆಯನ್ನು ನಿರ್ಮಿಸಿ ನಿರ್ಗಮಿಸಬೇಕು. ನಮ್ಮಂಥ ಕವಿಗಳು, ಅಕ್ಷರಸುತರು ಮಾಡಬೇಕಾದ ಕಾಯಕ ಇದು. ಇದು ವಿಧಿಯೋ, ಬದುಕಿನ ವಿಧಾನವೋ, ಅನಿವಾರ್ಯವಾಗಿ ಸಾಧಿಸಬೇಕಾದ ಸಮಾಧಾನವೋ, ಅಂತೂ ಸತ್ಯ. ‘ನಾಳಿನ ಒಳಿತಿಗಾಗಿ’ ಕಾಯುವುದೇ ಧರ್ಮ. ಇಂತಹ ಹಲವಾರು ನೋವುಗಳ ನಡುವೆಯೂ ಜಕಾಪುರೆ ತಮ್ಮ ಸುತ್ತಲಿನ ವಾತಾವರಣವನ್ನು ಮರೆತಿಲ್ಲ. ಸಮಾಜಮುಖಿ ಚಿಂತನೆ ಕವಿಯನ್ನು ಖಂಡಿತವಾಗಿಯೂ ಎತ್ತಿ ಹಿಡಿಯುತ್ತದೆ. ಅವರ ಇಂಥ ಹಲವಾರು ಸುಂದರ ಗಜಲುಗಳು ಇಲ್ಲಿವೆ :
• ಮಂದಿರ ಮಸೀದಿ ಚರ್ಚುಗಳು ಗಲ್ಲಿ ಗಲ್ಲಿಗೆಲ್ಲ
ಮಾನವನಿಗೆ ಬೇಕಿದೆ ಮನೆ, ಮಹಾದೇವನಿಗಲ್ಲ
• ಧಣಿಗಳ ಮನೆಯ ಬೆಕ್ಕು, ನಾಯಿಗೆ ಹಾಲು, ಬಿಸ್ಕತ್ತು
ಹಸಿದು ಹಲಬುವ ಬಡವರ ಮಕ್ಕಳಿಗೆ ಅನ್ನವಿಲ್ಲ
ಇನ್ನೊಂದು ಗಜಲಿನಲ್ಲಿ
• ರಸ್ತೆಗುಂಟ ಜಲ್ಲಿ ಕುಟ್ಟುವ ಹುಡುಗರ ಕೈಗಳಲಿರುವ
ಚಾಣ, ಉಳಿ, ಸುತ್ತಿಗೆ ಕಳೆದು ಪಾಟಿ ಬಳಪ ಬರಬಹುದೇ?
• ಪೂಜಾರಿಗಳೇ ಅಲ್ಲ ದೇವರುಗಳೂ ಕಾದಿರುತ್ತವೆ ಬಲಿಗಾಗಿ
ಇಲ್ಲಿ ನೂರಾರು ಗುಡಿಸಲು ನೆಲಕ್ಕುರುಳುತ್ತವೆ ಒಂದು ಮಹಲಿಗಾಗಿ
ಇಲ್ಲಿ ಸೋಲು, ನೋವು, ನಿರಾಶೆಗಳನ್ನು ಪದ, ಪದ್ಯ, ಹಾಡು ಹೇಳಿಕೆಗಳ ಮೂಲಕ ಅಭಿವ್ಯಕ್ತಿಸಿ ಹಗುರಾಗುವ ಸ್ತುತ್ಯ ಪ್ರಯತ್ನವಿದೆ. ಬಹುತೇಕ ಕವಿಗಳ ಕಾವ್ಯಕರ್ಮದ ಕಾಲುದಾರಿಯಲ್ಲಿ ಇದು ಅನಿವಾರ್ಯವಲ್ಲದ, ಆದರೆ ಮಹತ್ವದ ಮಜಲು. ಒಂದು ಕಾಲಕ್ಕೆ ನಾನೂ ಇಂಥದೇ ರೊಜ್ಜಿನಲ್ಲಿ ಸಿಲುಕಿ, ‘ನಿನ್ನ ಮರೆಯೂ ಮಾತು ಮರೆತು ಬಿಡು ನೀನು’ ಎಂದು ಕಂಗಾಲಾಗಿ ಕೂಗಿದ್ದೆ. ಆದರೆ ಕಾಲ, ಕಾಯಕಗಳು ಕೈಹಿಡಿಯುವುದನ್ನು ಕಂಡಿದ್ದೇನೆ. ಅನುಭವಗಳು ನವೀನ ಸೃಷ್ಟಿ, ವ್ಯಕ್ತಿತ್ವದ ಭಿನ್ನ ರೂಪಣೆಗಾಗಿ ತುಡಿಯುವುದನ್ನು ಕಲಿಸುತ್ತವೆ. ಇಂಥ ಶಕ್ತಿ ಗಿರೀಶರಲ್ಲಿದೆ. ಅವರೇ ಗಜûಲಿಸಿದ್ದಾರೆ:
• ಸಾವಿರ ಬಾರಿ ಹೇಳಿದರೂ ಸುಳ್ಳು ಸತ್ಯವಾಗುವುದಿಲ್ಲ
ಎಷ್ಟೇ ತಿಕ್ಕಿ ತೊಳೆದರೂ ಇದ್ದಿಲು ಬೆಳ್ಳಗಾಗುವುದಿಲ್ಲ
• ಅನ್ನದ ಅಗುಳಿನ ನಾಮ ರೂಪ ಅನಂತ ‘ಅಲ್ಲಮ’
ಎಸೆದರೆ ಎಂಜಲು ಎತ್ತಿದರೆ ಪ್ರಸಾದವಾಯಿತು
ಗಿರೀಶರಂಥ ಗಂಭೀರ ಸಾಹಿತ್ಯಜೀವ ತಮ್ಮ ನೋವಿನ ಕಾವ್ಯಕ್ಕೆ ಹೊಸ ಕನ್ನಡಿ, ಹೊಸ ಕನ್ನಡ ರೂಪ ನೀಡುವಂತಾಗಲಿ; ತಮ್ಮೊಳಗಿನ ಪ್ರಯೋಗಶೀಲ ಲೇಖಕನಿಗೆ ಪದೇ ಪದೇ ಮರುಹುಟ್ಟು ಸಿಗುವಂತೆ ಮಾಡಲಿ.





0 Comments