ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಪ್ರೀತಿಸುತ್ತಿದ್ದಳು..

-ವಿನಯಾ ಒಕ್ಕುಂದ

ನಂದಬಟ್ಟಲ ಹೂ ನಗೆಯವನೇ,
ಮೂರು ಮೊಳದ ಮುದುಕಿಯೊಬ್ಬಳು
ನಿನ್ನ ಪ್ರೀತಿಸುತ್ತಿದ್ದಳು
ಪ್ರೀತಿಯ ಎಲ್ಲ ಆಘಾತಗಳನುಂಡೂ
ತಲೆಯೆತ್ತಿದ ಎಲ್ಲಮ್ಮನಂಥವಳು
ಹೂಬಿಟ್ಟ ಮಾವಿನ ಗಮಲಂಥ
ಗರುವನಿಗೆ ಮಾರುಹೋದಳು
ಮೂರು ಮೊಳದ ಮುದುಕಿಯೊಬ್ಬಳು
ನಿನ್ನ ಪ್ರೀತಿಸುತ್ತಿದ್ದಳು

ಬಲು ನಿಸ್ಸಾರ ಬಾಳ ಬಂಡಿಯನ್ನಿಳುಹೆ
ಬಿಗಿದ ತೋಳುಗಳಲಿ, ‘ಅಪ್ಪಿದರೆ ಅಸ್ಥಿಗಳು
ನುಗ್ಗು ನುಸಿಯಾಗಲೆಂದು’ ಬಯಸುತ್ತ
ಜೋಲು ಬಾಳನ್ನೆತ್ತಿ, ತಲೆತಗ್ಗಿಸಿದ ಗರತಿ
ಮೂರು ಮೊಳದ ಮದುಕಿಯೊಬ್ಬಳು
ನಿನ್ನ ಪ್ರೀತಿಸುತ್ತಿದ್ದಳು

ಕುಂಟಾಬಿಲ್ಲೆಯ ಜಿಗಿವ ಲಂಗದ ಹುಡುಗಿ
ಒಂದು ಬೊಗಸೆ ಪ್ರೀತಿಗಾಗಿ ಬಾಯಾರಿದ್ದಳು
ಇರವಿನಿರವ ಅರಸುತ್ತ ಅರಸುತ್ತ
ಬಾಳ ದಂಡಿಗೆಯಲಿ, ಒಂದು ಹುಂಡು ಪ್ರೀತಿಗೆ ಕಾದು
ನಂದಬಟ್ಟಲ ಹೂ ನಗೆಯವನೇ
ಮೂರು ಮೊಳದ ಮುದುಕಿಯೊಬ್ಬಳು
ನಿನ್ನ ಪ್ರೀತಿಸುತ್ತಿದ್ದಳು

ನೀನು ಪ್ರೀತಿಸಲಾರೆಯೆಂಬ ಸತ್ಯವುಂಡೂ
ಕನಸಿಲ್ಲದ ದಾರಿಯಲಿ ನಡೆಯಲಾರದವಳು
ಆತ್ಮಕ್ಕೆ ರೆಕ್ಕೆ ಮೂಡಿಸಿದ ನಿತ್ಯ ವಿರಹಿಣಿ
ಉಸಿರನಾದದಲಿ ನೋವಿನ
ಏಕತಾರಿಯ ನುಡಿಸಿ
ಮೂರು ಮೊಳದ ಮುದುಕಿಯೊಬ್ಬಳು
ನಿನ್ನ ಪ್ರೀತಿಸುತ್ತಿದ್ದಳು

ನಿನ್ನ ಅಂಗೈ ಅವಳ ಶವದ ಹಣೆ ಮುಟ್ಟಿದ ಕ್ಷಣ
ಮೋಕ್ಷ, ಈ ಭಾವದಾಲಿಂಗನಕೆ, ಅನೂಹ್ಯ ತೃಪ್ತಿ
ಓ ನಂದಬಟ್ಟಲ ನಗೆಯವನೆ,
ಎಂದಿಗಾದರೂ ನಿನ್ನ ನಡೆಮಡಿಯ ಹಾದಿಯಲಿ
ಗುಲ್‌ಮೊಹರ್‌ನ ದಳ ನೆತ್ತಿ ಸವರಿ ಮನಸು ತಳಮಳಿಸಿದರೆ
ನೆನೆ, ಮೂರು ಮೊಳದ ಮುದುಕಿಯೊಬ್ಬಳು
ನಿನ್ನ ಪ್ರೀತಿಸುತ್ತಿದ್ದಳು

‍ಲೇಖಕರು Admin

7 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading