ನಿನ್ನ ಜೊತೆ ಮಾತಾಡಲ್ಲ ಟೂ. ಟೂ.. ಟೂ…

ಕವಿತಾ ಭಟ್

ನಿನ್ನ ಜೊತೆ ಮಾತಾಡಲ್ಲ ಟೂ. ಟೂ.. ಟೂ…

ಯಾಕೋ ಹೀಗ್ ಮಾಡ್ತಿಯಾ? ನಿನ್ನೆ ಸಂಜೆ ಒಂದ್ ಕಪ್ ಕಾಫಿ ಹಿಡಿದು ಈಗ ಬರ್ತಿಯೇನೋ, ಆಗ ಬರ್ತಿಯೇನೊ ಅಂತ ಕಾಯ್ತಾನೇ ಇದ್ದೆ. ಕೊನೆಗೂ ಬರಲಿಲ್ಲ.

ಹೋಗ್ಲಿ ಬಿಡು, ನಿನಗಾಗಿ ಕಾಯೋದು ನಾನೊಬ್ಬಳೇ ಏನ್ ಅಲ್ವಲ್ಲ. ಪಾಪ.. ಆ ಶ್ರೀಕೃಷ್ಣನೇ ಎಷ್ಟೊ ವಾಸಿ ಅಬ್ಬಬ್ಬಾ ಅಂದ್ರೆ ಹದಿನಾರು ಸಾವಿರ ಪ್ಲಸ್ಸು. ನೀನೇನೋ ಮಾರಾಯ, ಇರೊ ಬರೋರೆಲ್ಲಾ ನಂಗೆ ಬೇಕು ಅಂತಿಯಾ? ಮಕ್ಕಳ ತಲೆ ಸವರೋದು, ಹುಡುಗಿಯರ ಮುಂಗುರುಳಲ್ಲಿ ಉಯ್ಯಾಲೆ ಆಡೋದು, ಹೆಂಗಸರಿಗೆ ಕೆಲಸ ಕೂಡ ಮಾಡೋಕೆ ಕೊಡದೇ ಕಾಡೋದು ನಂಗೇನು ಗೊತ್ತಿಲ್ಲ ಅನ್ಕೊಂಡಿದ್ದೀಯಾ?

ನನ್ನ ಫ್ರೆಂಡ್ ಕಾಲ್ ಮಾಡಿದ್ಲು. ನಿನ್ನೆ ಅವರ ಮನೆ ಹತ್ರ ಜೋರ್ ಆರ್ಭಟ ಅಂತೆ ನಿಂದು? ಹೊರಗೂ ಬರೋಕೆ ಕೊಡಲಿಲ್ಲ ಗೊತ್ತಾ …ಅಂಥ ಅವಳು ನಾಚಿಕೆಯಿಂದ ನುಲಿನುಲಿದು ಹೇಳುವಾಗ ನನ್ನ ಹೊಟ್ಟೆ ಉರ್ದೊಯ್ತು. ನಾನೇನ್ ಹೋಗೊಕ್ ಬೇಡ ಅಂದ್ನಾ? ಇಷ್ಟು ಹತ್ರ ಬಂದವನು ಇಲ್ಲಿ ಬರ್ದೆ ಇದ್ರೆ ಬೇಜಾರಾಗಲ್ವ?

ಅದೆಷ್ಟು ಬಾರಿ ಒಂದ್ ಸಲ ಬಾರೊ ಅಂತ ಆಕಾಶ ನೋಡ್ತಾ ಅಕ್ಷರಶಃ ಅಂಗಲಾಚಿದ್ದೀನಿ, ಕರ್ದಾಗ ಒಮ್ಮೆಯಾದ್ರೂ ಬಂದ್ಯಾ? ನೀನು ಬರುವ ಶಬ್ಧ ಕೇಳಿದಾಗ ಇವತ್ತು ಬೇಡ ಕಣೋ, ಹೊರಗೋಗೊಕಿದೆ ಅಂತ ಗೋಗರೆದಾಗ ಹೊದ್ಯಾ? ಊಹೂಂ….ಇಲ್ವೇ ಇಲ್ಲ. ರಾತ್ರಿ ಹಗಲು ಬಿಡದೇ ಒಳಗೇ ಕೂಡಿ ಹಾಕ್ದೆ. ಅಲ್ಲಾ ಮಾರಾಯ, ನೀನು ನನ್ನ ಮಾತು ಯಾವತ್ತಾದ್ರೂ ಕೇಳಿದ್ದಿಯಾ? ಹೀಗೆ ಹೊತ್ತು ಗೊತ್ತು ಇಲ್ದೆ ನೀನು ಬಂದ್ರೆ, ಕೆಲಸ ಅಷ್ಟಕ್ಕೆ ಬಿಟ್ಟು ನಿನ್ನೇ ನೋಡ್ತಾ ಕೂಡ್ಬೇಕು ಅನ್ಸುತ್ತೆ. ನಿನ್ನ ತಣ್ಣನೇ ಉಸಿರಿಗೆ ಮೈಮರೆಯಬೇಕು ಅನ್ಸುತ್ತೆ. ಬಿಂಕದಿಂದ ನಿನ್ನೆದುರು ಯಾಕಾದ್ರೂ ಬಂದ್ಯೊ ಅಂತ ರೇಗ್ತಾನೇ ಒಳಗೊಳಗೆ ನಿನ್ನ ಜೊತೆ ಕುಣಿಬೇಕು ಅನ್ನೊ ಆಸೆ ಆಗುತ್ತೆ.

ಹೌದು ಮಾರಾಯ, ಹಗಲು ಇಷ್ಟು ಚಂದ ಕಾಣೋ ನೀನು ರಾತ್ರಿಯಾದ್ರೆ ಅದ್ಯಾಕೆ ಕುಡಿದವರ ತರ ಜೋರಾಗಿ ಗುಡುಗ್ತಾ ಕಣ್ಣಲ್ಲಿ ಮಿಂಚು ಹರಿಸ್ತಿ? ಭಯ ಆಗಲ್ವಾ ನಂಗೆ?

ಕತ್ತಲೆಯಲ್ಲಿ  ಬೊರ್ಗರೆದು ಮಾಡುವ ಅವಾಂತರಕ್ಕಿಂತ ಹಗಲಿನ ಸಿಂಚನ ನನಗಿಷ್ಟ. ಇರು ಮಾರಾಯ ಇನ್ನು ಒಂದ್ರಾಶಿ ಮಾತಾಡೋಕಿದೆ ನಿನ್ನ ಜೊತೆ. ಬಿಸಿ ಬಿಸಿ ಒಂದ್ ಕಪ್ ಕಾಫಿ ಮಾಡ್ಕೊಂಡು ಬರ್ತಿನಿ…

ಮಳೆಯೊಂದಿಗಿನ ಇಂಥಹ  ಸಂಭಾಷಣೆ, ಕೋಪ, ಹುಸಿಮುನಿಸು, ಪ್ರೀತಿ ಎಲ್ಲರೊಳಗೂ ಇರಬಹುದು. ಮಳೆ ಅಂದರೆ ಬರೀ ಉದುರುವ ಹನಿಗಳಲ್ಲ. ಭಾವನೆಗಳನ್ನು ಮೀಟುವ ತಂತು…

ಮನುಷ್ಯನಿಗೆ ಪ್ರಕೃತಿಯ ಅದ್ಭುತ ಕೊಡುಗೆ.

‍ಲೇಖಕರು avadhi

June 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Dr. Prabhakar Nimbargi

    ಮಳೆಯ ಜತೆ ನಿಮ್ಮ ಸಂಭಾಷಣೆ (ಸ್ವಗತವಲ್ಲವೇ?) ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಟಾರು ರಸ್ತೆಯಲ್ಲೂ ನಡುವೆ ಗೆರೆ ಎಳೆದಂತೆ ಆ ಬದಿಯಲ್ಲಿ ಮಳೆ, ಗೆರೆಯ ಈ ಬದಿಯಲ್ಲಿ ಸಂಪೂರ್ಣ ಒಣ ಪ್ರದೇಶ ಕಂಡಿದ್ದೀರಾ? ನೋಡಲು ಅನುಭವಿಸಲು ತಂಬ ಚೆನ್ನಾಗಿರುತ್ತದೆ.

    ಪ್ರತಿಕ್ರಿಯೆ
    • ಕವಿತಾ ಭಟ್

      ನಿಜ ಸರ್, ಅದೊಂದು ಅದ್ಭುತ ಅನುಭವ.

      ಪ್ರತಿಕ್ರಿಯೆ
  2. Dr. Prabhakar Nimbargi

    ಮಳೆಯ ನಿಮ್ಮ ಸಂಭಾಷಣೆ (ಸ್ವಗತವಲ್ಲವೇ?) ತುಂಬ ಚೆನ್ನಾಗಿ ಮೂಡಿ ಬಂದಿದೆ. ಟಾರು ರಸ್ತೆಯಲ್ಲಿ ಅಡ್ಡ ಗೆರೆ ಕೊರೆದಂತೆ ಆ ಬದಿಯಲ್ಲಿ ಮಳೆ, ಈ ಬದಿಯಲ್ಲಿ ಕೇವಲ ಒಣ ಪ್ರದೇಶ ಕಂಡಿದ್ದೀರಾ? ಇಂಥದನ್ನು ನೋಡುವುದು, ಅನುಭವಿಸುವುದು ಬಲು ರೋಚಕ.

    ಪ್ರತಿಕ್ರಿಯೆ
  3. Sarojini Padasalgi

    ಅಲ್ವಾ ಮತ್ತೆ !!?ಹೀಗ ಮಾಡಬಹುದಾ ಆತ? ಆತ ತುಂಬಾ ಕಿಲಾಡಿ ಕಣ್ರೀ.ನನಗೂ ಆತ ಅಂದರೆ ಹುಚ್ಚು.ಆತನ ದಾರಿ ಕಾಯ್ದು ಸಾಕು ಸಾಕಾಗುತ್ತೆ ನನಗೂ ಒಂದೊಂದ್ಸಲ.ಬರತಾನೆ ನಾಲ್ಕು ಹನಿ ಸುರಿಸ್ತಾನೆ , ಮನ ಹುಚ್ಚಾ ಗಿ ಹಾರಾಡಿ ಒಂದು ನಾಲ್ಕು ಹೆಜ್ಜೆ ಹಾಕೋಣ ಅನೋಷ್ಟ್ರಲ್ಲಿ ಸರಿದು ಹೋಗೇಬಿಡೋದಾ??ಮುಖ ಚಿಕ್ಕದು ಮಾಡ್ಕೊಂಡು ಕುಳಿತ್ರೆ ಒಮ್ಮೊಮ್ಮೆ ಮತ್ತೆ ಬಂದ ಬಿಡ್ತಾನೆ ,ಅಬ್ಬರಿಸಿ ,ರಭಸದಿಂದ ಸುರಿದು ಛಂದ ತೋರಿದ್ದೂ ಇದೆ, ರಮಿಸಿ ಮುದ್ದು ಮಾಡುವಂತೆ.ಹಗಲಿನಲ್ಲೇ ಒಂದೊಂದು ಸಾರಿ ಕಾವಳದ ನೆರಳು ಹಾಸಿ ಇದು ಹಗಲಾ ,ರಾತ್ರಿನಾ ಅನ್ನೋದನ್ನೇ ಮರೆಸಿ ಬಿಡ್ತಾನ್ರೀ.ಥೂ!ನಾಚಿಕೆ ಆಗುತ್ತೆ!!ಕಿಟ್ಟಪ್ಪನಿಗಿಂತಲೂ ತುಂಟ ಆತ! ನಾಲ್ಕು ಹನಿ ಉದುರಿಸಿ ಬಟ್ಟೆನೆಲ್ಲಾ ನೆನೆಸಿ!!!ಒಂದು ಮಾತು ಹೇಳಲಾ?ನನಗೂ ಇದೆಲ್ಲ ತುಂಬಾ ಇಷ್ಟ.ಆತನ ಸಿಂಚನ ನನಗೆ ಅಮೃತ ಸಿಂಚನ.
    ಹಗಲಿನ ಸೌಂದರ್ಯ ಇದಾದರೆ ಆತ ರಾತ್ರಿ ಬಂದರೆ ಆ ಆವಾಂತರವೇ ಬೇರೆ.ಕಗ್ಗತ್ತಲೆಯಲ್ಲಿ ಬಾನಿನೆದೆ ಸೀಳಿ ಕೋಲ್ಮಿಂಚು, ಸುಳಿಮಿಂಚು ಹರಿದಾಡಿ ಸಿ, ಗುಡುಗುಡಿಸಿ ,ಆರ್ಭಟಿಸಿ ,ಮನ ,ಮನೆ ನಡುಗಿಸಿದ ಬಿಡೋದೇ? ಹೆದರಿ ಅಮ್ಮನ ಸೆರಗಲ್ಲಿ ಅವಿತು ಕಿವಿಮುಚ್ಚಿಕೊಂಡರೂ ಆ ಸೊಬಗು ಸವಿಯೋದನ ತಪ್ಪಿಲ್ಲ,ಈಗಲೂ ತಪ್ಸೊಲ್ಲಪಾ!ಮತ್ತೆ ಆತ ಮುನಿಸಿಕೊಂಡು ಗಡಗಡಿಸಿದ್ರೆ?ಹೋಗಿಬಿಟ್ರೆ ?ನನ್ನ ಹುಚ್ಚು ನೋಡಿ ನಗ್ತೀರಾ?ಎಲ್ಲರೂ ನನ್ನ ‘ ಮಯೂರಿ’ ಅಂತ ಛೇಡಿಸಿದ್ರೂ ನಾ ಕೇರ್ ಮಾಡೋದೇ ಇಲ್ಲ. ಅಯ್ಯೋ ಆತನ ಬಗ್ಗೆ ಮಾತಿಗೆ ತೊಡಗಿದರೆ ನಾನು ನಾನಾಗಿರೋದೇ ಇಲ್ಲ.ತುಂಬಾ ಮಾತಾಡಿದ್ದೆ.ಅಲ್ವಾ?ಬೋರಾಯ್ತಾ? ನೋಡಿ ನನ್ನ ಕಾಫಿ ನೂ ತಣ್ಣಗಾಯ್ತು.ಬರಲಾ?
    ಈ ಮಳೆಗಾಲದ ಸಮಯ ತುಂಬ ಛಂದ.ಮನದಲ್ಲಿ ಆಸೆ, ಕಂಗಳಲ್ಲಿ ಕನಸಾಗಿ ತುಂಬಿ ಸುಂದರ ಹಾಡು ಮೂಡಿಸುವ ಈ ಋತು ಸೃಷ್ಟಿಯ ಸುಂದರ ದೇಣಿಗೆ.

    ಪ್ರತಿಕ್ರಿಯೆ
    • ಕವಿತಾ ಭಟ್

      ಅಯ್ಯೋ ನೋಡಿ.. ನಿಮ್ಮ ಬರಹ ಓದಿ ನಸುನಗುತಿದ್ದಂತೆ, ನಮ್ಮ ದೂರುಗಳಿಂದ ಮುನಿಸಿಕೊಂಡು, ಕಿಟಿಕಿಯೊಳಗೆ ಇಣುಕಿ ಮುಖಕ್ಕೆ ರಾಚುತಿದ್ದಾನೆ.!!!

      ಪ್ರತಿಕ್ರಿಯೆ
  4. g narayana

    ಮಳೆ ಅಂದರೆ ಬರೀ ಉದುರುವ ಹನಿಗಳಲ್ಲ. ಭಾವನೆಗಳನ್ನು ಮೀಟುವ ತಂತು…Wonderful. The memories awakened by beautiful rain make life worth living. Enjoyed the soliloquy.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: