
ರಾಜಕುಮಾರ ಮಡಿವಾಳರ
ಬೇಂದ್ರೆ ಒಮ್ಮೆ ಗಂಗಜ್ಜಿ (ಗಂಗೂಬಾಯಿ ಹಾನಗಲ್) ಹಾಡು ಕೇಳಿ “ನಿನ್ನ ಕೊಳ್ಳಾಗ ಗಂಧರ್ವ ಕುಂತಾನ” ಅನ್ನುವ ಮಾತು ಹೇಳಿದ್ರು.
ನನ್ನ ಗುರುಗಳೊಬ್ಬರು ಒಮ್ಮೆ ಹೇಳಿದ ಮಾತು ಹೀಗಿದೆ,
ನೋಡ್ರಿ ರಾಜಕುಮಾರ ಈ ಸಂಗೀತ ಮತ್ತು ಸಾಹಿತ್ಯ ಇವೆರೆಡೂ ತಾಯಿ ಶಾರದೆ, ಆ ಸರಸ್ವತಿಯ ಎರಡು ಸ್ತನಗಳಿದ್ದಂತೆ, ಯಾವ ಕೂಸು ಆ ಎರಡೂ ಸ್ತನ ಕುಡಿದು ಬೆಳೆಯುತ್ತೋ ಅಂಥ ಕೂಸಿಗೆ ಸಂಗೀತ ಸಾಹಿತ್ಯ ಎರಡೂ ಒಲಿಯುತ್ತೆ, ಇಲ್ಲಿ ಒಂದ ಸ್ತನದ ಹಾಲು ಕುಡಿದು ಸುಸ್ತಾಗಿ
ಮಲಗಿದವರೇ ಹೆಚ್ಚು! ಹಿಂಗಾಗಿ ಸಂಗೀತ ಇಲ್ಲಾ ಸಾಹಿತ್ಯ, ಎರಡರಾಗ ಒಂದು ಒಲಿಯುತ್ತೆ, ಅಂದಿದ್ದರು.
ನಿಜ ಅನಿಸುತ್ತೆ, ಇಲ್ಲಿ ಚಿತ್ರದಲ್ಲಿದಾರಲ್ಲ ಅವರ ಹೆಸರು ಬಿಂದುಮಾಲಿನಿ ಅಂತ, ಸೂಫಿ ಗಾಯಕಿ, ಒಂದು ವರ್ಷದ ಹಿಂದೆ ಇವರು ನನ್ನ ಬೇಂದ್ರೆ ಅಜ್ಜನ ಹಾಡು ಸೂಫಿ ಧಾಟಿಗೆ ಅಳವಡಿಸಿ ಹಾಡಿದ್ದರು, ತಮಿಳು ಮಾತೃಭಾಷೆಯಾಗಿದ್ದರು ಅವರ ಪತಿ ಮತ್ತು ರಂಗ ಶಂಕರ ಸೂರಿ ಅವರ ಸಹಾಯದಿಂದ ಸಾಹಿತ್ಯ ಅರಿತುಕೊಂಡು ಹೌದೌದು ಅನ್ನುವ ಹಾಗೆ ಹಾಡಿದ್ದರು, ತಮ್ಮ ಕೈಯೊಳಗಿನ ಆ ವಾದ್ಯದ ಮೇಲೆ ಅವರು ಬೆರಳಾಡಿಸಿ ಏಕತಾರಿ ಹೊರಡಿಸಿದರೆ ಕೇಳುಗರ ಎದೆಯೆಲ್ಲ ತಂತಿ, ಹೃದಯ ಅವರ ಹಾಡು ಮಿಡಿದ ತಂತು.
ಇತ್ತಿಚೆಗೆ ಕುವೆಂಪು ಅವರ ಹಾಡು, ವಚನ, ದಾಸರ ಪದ, ಬೇಂದ್ರೆಯವರ ಒಟ್ಟು ಆರು ಹಾಡು ತಮ್ಮ ಸೂಫಿ ಧಾಟಿಗೆ ಅಳವಡಿಸಿದ್ದಾಗಿ ಹೇಳಿದರು.
ಒಬ್ಬ ಕವಿ, ಒಂದು ಕಾಲದ ಸಾಹಿತ್ಯವನ್ನು ಹೀಗೆ ಹೊಸದಾಗಿ, ಹೊಸಬರಿಗೆ, ಹೊಸಬಗೆಯಲ್ಲಿ ಕೊಡುತ್ತ, ಹೊಸಹೊಸದೆಂಬಂತೆ ತಾಜಾ ತಾಜಾ ಇಡುವುದಿದೆಯಲ್ಲ, ಅದು ನುಡಿಸೇವೆ, ಸಾಹಿತ್ಯ ಸೇವೆ, ಸಂಗೀತ ಸೇವೆ, ಆರಾಧನೆ, ಪೂಜೆಯೂ.
ಆದಷ್ಟು ಬೇಗ ಇವರ, ಸರಸ್ವತಿಯ ಎರಡೂ ಸ್ತನಪಾನ ಮಾಡಿದ, ಗಂಧರ್ವ ಕೊರಳ ಇವರನ್ನ ನನ್ನೂರಿಗೆ ಕರೆಸುವ ಆಸೆ, ಸಾಧ್ಯವಾದರೆ ನನ್ನ ಬೇಂದ್ರೆ ಅಜ್ಜನ ಮನೆ ಅಂಗಳದಲ್ಲೇ ಥಾನು ಥಾನು ತನನನನ! ನೀವು ಜೊತೆಗಿರ್ತಿರಲ್ಲ…? ಕೇಳಲು, ಎದೆ ಕದಡುವ ಹಾಡುಗಳಿಗೆ ಕರತಾಡನವಾಗಿ.






Sir, is there any CD of these songs which you mentioned. Bendre songs sung by Bindu Ji.
Plz share any link or address