ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನಗೆಲ್ಲಿ ತಿಳಿದೀತು..

S_P_Vijayalakshmiಎಸ್. ಪಿ. ವಿಜಯಲಕ್ಷ್ಮಿ

ಹೇ ಕೂಪಮಂಡೂಕವೇ,

ನೀನಾರ ಬಳಿ ಕುಳಿತಿರುವೆ ಗೊತ್ತೇ…?

ಅವನು ಲೋಕದ ಕಣ್ಣು, ಜ್ಞಾನದ ಜ್ಞಾನ, ಬೆಳಕಿನ ಬೆಳಕು

ಬೋಧಿವೃಕ್ಷದಡಿಯಲ್ಲಿ ಕಣ್ಮುಚ್ಚಿ ಕುಳಿತವನು

ಲೋಕದ ಕಣ್ಣ ತೆರೆಸಿರುವವನು

ಅವನರಿಯದ್ದೇನಿದೆ ಈ ಜಗದಲ್ಲಿ

ಭೂಗಗನ ವಿಸ್ತಾರಿಗೆ ನೀ ಗಳಹುವ ಸತ್ಯವಾದರೂ ಏನಿದೆfrog

ಕೂಪಮಂಡೂಕ ನೀನು,

ನೀರಹನಿಗೆ ಬಾಯ್ಬಿಡುವವ ನೀನು…..

ಎಲ್ಲ ಸ್ವಾರ್ಥವ ಕಿರುಬೆರಳಿನಲಿ ಝಾಢಿಸಿ ನಡೆದವಗೆ

ಅದೇನು ಕಿವಿಕಚ್ಚುತ್ತಿರುವೆ…?

ಬಿಡು, ಅವನೇನೂ ನಿನ್ನ ಕೂಪಮಂಡೂಕ ಎಂದು

ಜರೆಯುವುದಿಲ್ಲ. ನಿನ್ನನ್ನೂ ಸಮ್ಮಾನಿಸುವ ಮಹಾತ್ಮ, ನಮ್ಮಂಥಲ್ಲ

ಆದರೂ, ನನಗೊಂದು ಸಂದೇಹ,

ನೀ ನುಡಿಯುವ ಸತ್ಯವೂ ಒಂದಿರಬಹುದು ಎಂಬ ಗುಮಾನಿ

‘ನಕ್ಷತ್ರವರಳಿದ ರಾತ್ರಿಯಲೂ , ಹುಣ್ಣಿಮೆಯ ಸೊಗದಲ್ಲೂ

ಪಲ್ಲಂಗದಲಿ ರೇಷಿಮೆಯದಿಂಬು ತೋಯಿಸುತ್ತಿದ್ದ

‘ಯಶೋಧರೆ’ಯ ಕಂಡೆಯಾ…?

ಬೆಳಕ ಕಂಡುಂಡ ಲೋಕ ‘ಧನ್ಯೋಸ್ಮಿ’ ಎಂದು ಅರಳುತ್ತಿರುವಾಗ

ಆ ನೀಲಸರಕ್ಕೇ ‘ನೀರೂಡಿ’ಸುತ್ತ ಮುದುಡುತ್ತಿದ್ದ ‘ಕಮಲೆಯ’

ಯಾತನೆಯ ಕಂಡೆಯಾ…?

‘ನಿನಗೆ ಜಗವಿದೆ, ನನ್ನ ಜಗವೆಲ್ಲಿ’ ಎಂದಳಲುವ ಆ ಸಾಮಾನ್ಯಳ

ಎದೆಯಗ್ನಿಯ ಕಂಡುಬಿಟ್ಟೆಯಾ…?

‘ತಂದೆ ಬೇಕಮ್ಮಾ…’ ಎಂದಳಲುವ ಪುತ್ರನನ್ನಪ್ಪಿ

ಸಂತೈಸಿ ಹೈರಾಣಾದ ಮುಗುದೆಯ

ಕಂಡುಬಿಟ್ಟೆಯಾ…?

ಬಿಡು, ಬಿಡು, ಕಾಲ ಮಿಂಚಿದೆ, ಹೊಳೆದಿದೆ, ಬೆಳಕೂ ತುಂಬಿದೆ

ಈಗ ಈ ಕ್ವಚಿತ್ ಅಳಲ ಅವನ ಕಿವಿಯಲರುಹಿ

ಧ್ಯಾನಭಂಗಗೊಳಿಸಬೇಡ.

ಆ ಮೌನವನು ಕದಡಬೇಡ.

ಲೋಕದೊಳಿತಿನ ಮುಂದೆ ಬೇರೆಲ್ಲ ನಗಣ್ಯ

ನಿನಗೆಲ್ಲಿ ತಿಳಿದೀತು,

ನೀನೊಂದು ಕೂಪಮಂಡೂಕ

ವಟವಟನ ಬಾಯಿಬಡುಕ

ಇಳೀ ಕೆಳಗೆ

ಬಾ ಇಳೆಗೆ

ಕಾದು ವಟವಟಿಸು ಮಳೆಗೆ.

(ಭಗವಾನ್ ಬುದ್ಧ ಹಾಗೂ ಕಪ್ಪ್ಪೆಯ ಕ್ಷಮೆ ಯಾಚಿಸುತ್ತ)

‍ಲೇಖಕರು Admin

3 October, 2016

1 Comment

  1. s.p.vijayalakshmi

    ಕವಿತೆ ಬರೆಯುವ ಸಂಭ್ರಮವನ್ನು ನನ್ನಲ್ಲಿ ಜೀವಂತವಾಗಿರಿಸಲು ನಿಮ್ಮ ಸ್ಪರ್ಧೆ ಕಾರಣವಾಗಿದೆ . ಹಾಗೇ ಉಳಿದ ಕವಿತೆ, ಬರಹ , ಕಥೆ ಇವುಗಳನ್ನೂ ಪ್ರಕಟಿಸಿ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಅವಧಿಯ ಸಂಪಾದಕರಾದ ಮೋಹನ್ ಅವರೇ ನಿಮಗೆ ಮನದಾಳದ ವಂದನೆಗಳು . ಜೊತೆಗೆ ಉತ್ತಮರ ಸಾಹಿತ್ಯವನ್ನೂ ಉಣಬಡಿಸುತ್ತಿರುವಿರಿ . ಥ್ಯಾಂಕ್ಸ್ ….ಥ್ಯಾಂಕ್ಸ್ …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading