ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಮೊಗಸಾಲೆ ಹೊಸ ಕವಿತೆ- ಇಷ್ಟಾನಿಷ್ಟ…

ಡಾ ನಾ ಮೊಗಸಾಲೆ

ಇಷ್ಟವೆನ್ನುವುದು ಇಷ್ಟವೇ ಅಥವಾ ಅಲ್ಲವೇ?
ಎನ್ನುವುದು ಮುಖ್ಯವಲ್ಲ
ಅದು ಸಹಜವೂ ಹೌದು ಅಸಹಜವೂ ಹೌದು
ಆದರೆ ಅದು ನಾವೇ ಆಗಬಾರದು ಎಂಬಂತಿರಬೇಕು
ಅಥವಾ ಚೆಂಡಿನೊಳಗಿನ ಗಾಳಿಯ ಹಾಗೆ ಇದ್ದು
ಗುದ್ದುವವರ, ಕಾಲ್ತುಳಿತಕ್ಕೆ ಸಿಕ್ಕದೆ
‘ಆಹಾ’ ಎಂಬಂತೆ ಚೆಂಡನ್ನು ನೆಗೆಸಿ ಸುಮ್ಮನಿರುವಂತೆ

ನನಗೆ ಜಿಲೇಬಿ ಇಷ್ಟ. ನನ್ನವಳಿಗೆ ಮೈಸೂರು ಪಾಕು
ಆದರೂ ಇಬ್ಬರೂ ಮೆಲ್ಲುತ್ತೇವೆ ಎರಡನ್ನೂ ಬಾಯಿ ಚಪ್ಪರಿಸಿ
ನಮಗೆ ಇಷ್ಟವಿಲ್ಲದಿದ್ದರೂ, ಇಷ್ಟವಾಗಲಿ ಎಂಬಂತೆ
ಕೊಡುಕೊಳ್ಳುವುದು ಎನ್ನುವುದು ಇರುವುದೂ
ಹೀಗಿದ್ದರೆ ಎಷ್ಟು ಚಂದ! ಆದರೆ ಯೋಚಿಸುವುದಿಲ್ಲ ನಾವು
ಕಸವರಂ ನೆರೆಸೈರಿಸಲಾರ್ಪಡೆ ಎಂದ
ಕವಿರಾಜ ಮಾರ್ಗಕಾರನೂ ಹೇಳಿದ್ದು ಇದನ್ನೇ
ಇರಬೇಕಲ್ಲ? ಎಂದರೆ ನಾವು ಇದನ್ನು ಮರೆತಂತಿದ್ದು
ಇಸೀಚಯರಿನಲ್ಲಿ ಕುಳಿತು ಕಾಲಬುಡಕ್ಕೇ
ತಂದುಕೊಡಲಿ ನನಗಿಷ್ಟವಾದದ್ದನ್ನು
ಎಂಬಂತೆ ಹೆಂಡತಿಗೆ ಖುದ್ದಾಗಿ.

ನೀರಿಗೆ ಇಷ್ಟ ಎಂಬುದು ಇಲ್ಲ. ಗಾಳಿಗೆ ಇಲ್ಲ
ಆಕಾಶಕ್ಕೆ ಮಣ್ಣಿಗೆ ಯಾಕೆ ಬೆಂಕಿಗೂ ಕೂಡಾ!
ಆದ್ದರಿಂದಲೇ ಅವುಗಳಲ್ಲಿ ಸಹಜ ಅಸಹಜ
ಎಂಬೆರಡೂ ಒಂದೇ. ನಾವು ಹಾಗಲ್ಲ
ನಮ್ಮಲ್ಲಿ ಪಂಚಭೂತಗಳಿದ್ದರೂ ಅವು ಒಂದೊಂದಾಗಿ
ಅಲುಗಿಸುವುವು ನಮ್ಮ. ಎಲ್ಲವೂ ನಮ್ಮಿಷ್ಟದಂತೆ ಇಲ್ಲದಿದ್ದರೂ
ಅವು ಇರುವ ಹಾಗಿರುತ್ತವೆ ಇದ್ದು – ಕಣ್ಣು ಕಿವಿ ಮೂಗಿನಲ್ಲಿ
ಹಸಿವು ಬಾಯಾರಿಕೆ ಮೈಥುನದಲ್ಲಿ.
ಆಶ್ಚರ್ಯ ಎನಿಸದೇ ಇವು ನಮ್ಮೊಳಗಿದ್ದು
ತಮ್ಮದೆಲ್ಲವನ್ನೂ ನಮಗೆ ಕೊಟ್ಟು
ನಿರ್ಲಿಪ್ತವಾಗಿರುವುದು?

ಇದಕ್ಕೇ ಹೇಳುವುದು ನಮ್ಮ ಇಷ್ಟಾನಿಷ್ಟವನ್ನೆಲ್ಲ
ಬದಿಗಿಟ್ಟು ಮಣ್ಣಿನ ಹಾಗೆ ನೀರಿನ ಹಾಗೆ ಅಥವಾ
ಬೆಂಕಿ ಆಕಾಶ ಗಾಳಿಯ ಹಾಗೆ ಸಹಜವಾಗಿ
ಬದುಕಬಲ್ಲೆವಾದರೆ, ನಾವು ಆದೇವಲ್ಲ ಪಂಚಭೂತಗಳ ಹಾಗೆ
ಬಿಡಿಬಿಡಿಯಾಗಿ ಇಷ್ಟಾನಿಷ್ಟ ಇಲ್ಲದೆ!

‍ಲೇಖಕರು Admin

13 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading